ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ಪ್ರಧಾನಿ ಮೋದಿ ಭೇಟಿ | ‘ಅಗ್ನಿಪಥ’ ವಿರೋಧಿಸುವ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ
ಹೊಸದಿಲ್ಲಿ : ಕಾರ್ಗಿಲ್ ವಿಜಯ ದಿವಸದ 25ನೇ ವಾರ್ಷಿಕ ದಿನದ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಲಡಾಖ್‌ನ ಕಾರ್ಗಿಲ್ ಜಿಲ್ಲೆಯ ದ್ರಾಸ್‌ನಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಹಿಮಾಚಲಪ್ರದೇಶ ಮತ್ತು ಲಡಾಖ್ ನಡುವೆ ಸರ್ವಋತು ಸಂರ್ಪಕ ಕಲ್ಪಿಸುವ ಶಿಂಕುನ್ ಲಾ ಸುರಂಗದ ಮೊದಲ ಸ್ಫೋಟವನ್ನು ಆನ್‌ಲೈನ್ ಮೂಲಕ ನಡೆಸಿದರು.
ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಪ್ರಾಣಾರ್ಪಣೆ ಮಾಡಿರುವ ಧೀರ ಸೈನಿಕರಿಗೆ ಪ್ರಧಾನಿ ಶ್ರದ್ಧಾಂಜಲಿ ಸಲ್ಲಿಸಿದರು.
ದ್ರಾಸ್‌ನಲ್ಲಿ ಸಾರ್ವಜನಿಕ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಅಗ್ನಿಪಥ ಯೋಜನೆಯನ್ನು ವಿರೋಧಿಸುತ್ತಿರುವ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು. ಪ್ರತಿಪಕ್ಷಗಳು ಸೇನೆಯನ್ನು ದುರ್ಬಲಗೊಳಿಸಲು ಯತ್ನಿಸುತ್ತಿವೆ ಎಂದು ಅವರು ಆರೋಪಿಸಿದರು.
‘‘ಇಂದು ಲಡಾಖ್‌ನ ಈ ಶ್ರೇಷ್ಠ ನೆಲವು ಕಾರ್ಗಿಲ್ ವಿಜಯ ದಿವಸದ 25ನೇ ವಾರ್ಷಿಕ ದಿನಕ್ಕೆ ಸಾಕ್ಷಿಯಾಗಿದೆ. ದೇಶಕ್ಕಾಗಿ ಮಾಡುವ ತ್ಯಾಗಗಳು ಅಮರವಾಗುತ್ತವೆ ಎನ್ನುವುದನ್ನು ಕಾರ್ಗಿಲ್ ವಿಜಯ ದಿವಸವು ನಮಗೆ ಹೇಳುತ್ತದೆ’’ ಎಂದು ಪ್ರಧಾನಿ ಮೋದಿ ಹೇಳಿದರು.
ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಪಾಕಿಸ್ತಾನವು ಇತಿಹಾಸದಿಂದ ಏನನ್ನೂ ಕಲಿತಿಲ್ಲ ಎಂದು ಹೇಳಿದರು. ‘‘ಪಾಕಿಸ್ತಾನವು ಹಿಂದಿನ ತನ್ನ ಎಲ್ಲಾ ದುಷ್ಟ ಪ್ರಯತ್ನಗಳಲ್ಲಿ ವಿಫಲವಾಗಿದೆ. ಆದರೆ ಅದು ಇತಿಹಾಸದಿಂದ ಏನನ್ನೂ ಕಲಿತಿಲ್ಲ. ಭಯೋತ್ಪಾದನೆ ಮತ್ತು ಪರೋಕ್ಷ ಯುದ್ಧದ ನೆರವಿನಿಂದ ಅದು ತನ್ನನ್ನು ಪ್ರಸ್ತುತವಾಗಿರಿಸಲು ಪ್ರಯತ್ನಿಸುತ್ತಿದೆ’’ ಎಂದು ಅವರು ಹೇಳಿದರು.
ಅದೇ ವೇಳೆ, ಅಗ್ನಿಪಥ ಕಾರ್ಯಕ್ರಮವನ್ನು ಟೀಕಿಸುತ್ತಿರುವ ಪ್ರತಿಪಕ್ಷಗಳ ವಿರುದ್ಧವೂ ಮೋದಿ ವಾಗ್ದಾಳಿ ನಡೆಸಿದರು. ಅವರು ದೇಶದ ಯುವಜನತೆಯ ದಾರಿತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ‘‘ಅವರಿಗೆ ಸೈನಿಕರ ಬಗ್ಗೆಯೂ ಕಾಳಜಿಯಿಲ್ಲ ಎನ್ನುವುದನ್ನು ಇದು ತೋರಿಸುತ್ತದೆ’’ ಎಂದರು.
‘‘ಇವರು ‘ಒಂದು ಹುದ್ದೆ ಒಂದು ಪಿಂಚಣಿ’ ಬಗ್ಗೆ ಸುಳ್ಳು ಹೇಳಿದ ಅದೇ ಜನರು. ಒಂದು ಹುದ್ದೆ ಒಂದು ಪಿಂಚಣಿ ಯೋಜನೆಯನ್ನು ಜಾರಿಗೊಳಿಸಿದ್ದು ನಮ್ಮ ಸರಕಾರ. ನಮ್ಮ ಸರಕಾರ ಈ ಮೂಲಕ 1.25 ಲಕ್ಷ ರೂಪಾಯಿಗೂ ಅಧಿಕ ಮೊತ್ತವನ್ನು ಮಾಜಿ ಸೈನಿಕರಿಗೆ ನೀಡಿದೆ. ಗಡಿಯಲ್ಲಿ ನಿಯೋಜಿಸಲ್ಪಟ್ಟ ನಮ್ಮ ಸೈನಿಕರಿಗೆ ಗುಂಡುನಿರೋಧಕ ಜಾಕೆಟ್‌ಗಳನ್ನೂ ಕೊಡದ ಅದೇ ಜನರು ಇವರು. ನಮ್ಮ ಸೇನೆಯನ್ನು ದುರ್ಬಲಗೊಳಿಸಲು ಯತ್ನಿಸಿದ ಜನರಿವರು’’ ಎಂದು ಮೋದಿ ಹೇಳಿದರು.
‘‘ಅಗ್ನಿಪಥ ಯೋಜನೆಯು ದೇಶದ ಶಕ್ತಿಯನ್ನು ಹೆಚ್ಚಿಸುತ್ತದೆ. ಅದು ತಾಯ್ನೆಲಕ್ಕೆ ಸೇವೆ ಸಲ್ಲಿಸಲು ಸಮರ್ಥ ಯುವಕರಿಗೆ ಅವಕಾಶವನ್ನೂ ನೀಡುತ್ತದೆ. ಖಾಸಗಿ ಕ್ಷೇತ್ರದಲ್ಲಿ ಮತ್ತು ಅರೆಸೈನಿಕ ಪಡೆಗಳಲ್ಲಿ ಅಗ್ನಿವೀರರಿಗೆ ಆದ್ಯತೆ ನೀಡುವಂತೆ ಪ್ರಕಟನೆಗಳನ್ನು ನೀಡಲಾಗಿದೆ’’ ಎಂದು ಅವರು ಹೇಳಿದರು.
► ಪ್ರಧಾನಿಯಿಂದ ‘‘ಕ್ಷುಲ್ಲಕ ರಾಜಕೀಯ’’: ಖರ್ಗೆ
ಕಾರ್ಗಿಲ್ ವಿಜಯ ದಿವಸದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ‘‘ಕ್ಷುಲ್ಲಕ ರಾಜಕೀಯ’’ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶುಕ್ರವಾರ ಆರೋಪಿಸಿದ್ದಾರೆ.
ಶುಕ್ರವಾರ ದ್ರಾಸ್‌ನಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕದಲ್ಲಿ ಸಾರ್ವಜನಿಕ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ ವೇಳೆ, ಪ್ರಧಾನಿ ನರೇಂದ್ರ ಮೋದಿ ಅಗ್ನಿಪಥ ಯೋಜನೆಗೆ ಸಂಬಂಧಿಸಿ ವಿರೋಧಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅದಾದ ಗಂಟೆಗಳ ಬಳಿಕ, ಖರ್ಗೆ ಈ ಪ್ರತಿಕ್ರಿಯೆ ನೀಡಿದ್ದಾರೆ.
‘‘ಕಾರ್ಗಿಲ್ ವಿಜಯ ದಿವಸದ ಸಂದರ್ಭದಲ್ಲಿ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಂದರ್ಭದಲ್ಲೂ ಪ್ರಧಾನಿ ನರೇಂದ್ರ ಮೋದೀಜಿ ಕ್ಷುಲ್ಲಕ ರಾಜಕೀಯ ಮಾಡುತ್ತಿರುವುದು ಅತ್ಯಂತ ದುರದೃಷ್ಟಕರ ಮತ್ತು ವಿಷಾದನೀಯ’’ ಎಂಬುದಾಗಿ ಖರ್ಗೆ ‘ಎಕ್ಸ್’ನಲ್ಲಿ ಬರೆದಿದ್ದಾರೆ. ‘‘ಬೇರೆ ಯಾವುದೇ ಪ್ರಧಾನಿ ಯಾವತ್ತೂ ಹೀಗೆ ಮಾಡಿರಲಿಲ್ಲ’’ ಎಂದು ಅವರು ಹೇಳಿದರು.
ಸೇನೆಯ ಸೂಚನೆಯಂತೆ ತನ್ನ ಸರಕಾರ ಅಗ್ನಿಪಥ ಯೋಜನೆಯನ್ನು ಜಾರಿಗೊಳಿಸಿದೆ ಎಂಬ ಪ್ರಧಾನಿಯ ಹೇಳಿಕೆ ಸಾರಾಸಗಟು ಸುಳ್ಳು ಎಂದು ಖರ್ಗೆ ಹೇಳಿದರು. ‘‘ಇದು ನಮ್ಮ ಶೂರ ಸಶಸ್ತ್ರ ಪಡೆಗಳಿಗೆ ಮಾಡಿದ ಮರೆಯಲಾಗದ ಅವಮಾನವಾಗಿದೆ’’ ಎಂದು ಅವರು ಬಣ್ಣಿಸಿದ