ಬಜೆಟ್ ನಲ್ಲಿ ಮುಸ್ಲಿಮರಿಗೆ ಹಣಕಾಸು ಹಂಚಿಕೆಯ ಪ್ರಧಾನಿ ಮೋದಿ ಆರೋಪ ಮೂರ್ಖತನದ್ದು: ಶರದ್ ಪವಾರ್
ನಾಸಿಕ್(ಮಹಾರಾಷ್ಟ್ರ: ಬಜೆಟ್ ನಲ್ಲಿ ಶೇ.15ರಷ್ಟನ್ನು ಮುಸ್ಲಿಮರಿಗೆ ಮೀಸಲಿಡಲು ಕಾಂಗ್ರೆಸ್ ಬಯಸಿತ್ತು ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆ ಮೂರ್ಖತನವಾಗಿದೆ ಎಂದು ಗುರುವಾರ ಇಲ್ಲಿ ಹೇಳಿದ ಎನ್ ಸಿಪಿ (SP) ಮುಖ್ಯಸ್ಥ ಶರದ್ ಪವಾರ್ ಅವರು, ಜಾತಿ ಮತ್ತು ಧರ್ಮದ ಆಧಾರದಲ್ಲಿ ಬಜೆಟ್ ಹಂಚಿಕೆ ಎಂದೂ ಸಾಧ್ಯವಿಲ್ಲ ಎಂದು ಒತ್ತಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಪವಾರ್, ಕೇಂದ್ರ ಸರಕಾರದ ಬಜೆಟ್ ಇಡೀ ದೇಶಕ್ಕೆ ಸಂಬಂಧಿಸಿದೆಯೇ ಹೊರತು ಯಾವುದೇ ಜಾತಿ ಅಥವಾ ಧರ್ಮಕ್ಕಲ್ಲ ಎಂದು ಹೇಳಿದರು.
ನಾಸಿಕ್ ಜಿಲ್ಲೆಯಲ್ಲಿ ಬುಧವಾರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಸಂದರ್ಭ ಮೋದಿ, ಹಿಂದಿನ ಕಾಂಗ್ರೆಸ್ ಆಡಳಿತವು ಕೇಂದ್ರ ಸರಕಾರದ ಬಜೆಟ್ನಲ್ಲಿ ಶೇ.15ರಷ್ಟನ್ನು ಮುಸ್ಲಿಮರಿಗೆ ಮೀಸಲಿಡಲು ಬಯಸಿತ್ತು ಎಂದು ಆರೋಪಿಸಿದ್ದರು. ಧರ್ಮದ ಆಧಾರದಲ್ಲಿ ಬಜೆಟ್ ವಿಭಜನೆಗೆ ಅಥವಾ ಉದ್ಯೋಗಗಳು ಮತ್ತು ಶಿಕ್ಷಣದಲ್ಲಿ ಮೀಸಲಾತಿಗೆ ತಾನು ಅವಕಾಶ ನೀಡುವುದಿಲ್ಲ ಎಂದು ಘೋಷಿಸಿದ್ದರು.
ಮೋದಿಯವರ ‘ವೋಟ್ ಜಿಹಾದ್’ ಹೇಳಿಕೆ ಕುರಿತು ಪ್ರಶ್ನೆಗೆ ಶರದ್ ಪವಾರ್, ಇತ್ತೀಚಿನ ದಿನಗಳಲ್ಲಿ ಮೋದಿಯವರ ಮಾತುಗಳಲ್ಲಿ ಶೇ.1ರಷ್ಟೂ ಸತ್ಯವಿರುವುದಿಲ್ಲ. ಅವರು ಚುನಾವಣೆಗಳಲ್ಲಿ ಗೆಲ್ಲುವ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ ಎಂದು ಉತ್ತರಿಸಿದರು.
ಮೋದಿ ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಕೃಷಿ ಅಭಿವೃದ್ಧಿಯಲ್ಲಿ ಆಸಕ್ತಿ ಹೊಂದಿದ್ದರು,ಆದರೆ ಈಗ ಅವರು ರಾಜಕೀಯವನ್ನು ಮಾತ್ರ ಮಾತನಾಡುತ್ತಿದ್ದಾರೆ ಎಂದರು.
ಭವಿಷ್ಯದಲ್ಲಿ ಹಲವಾರು ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್ನೊಂದಿಗೆ ವಿಲೀನಗೊಳ್ಳಬಹುದು ಎಂಬ ತನ್ನ ಇತ್ತೀಚಿನ ಹೇಳಿಕೆಯ ಕುರಿತು ಪ್ರಶ್ನೆಗೂ ಉತ್ತರಿಸಿದ ಪವಾರ್,‘ಸಿದ್ಧಾಂತ ಒಂದೇ ಆಗಿದ್ದರೆ ಪಕ್ಷಗಳು ವಿಲೀನಗೊಳ್ಳಬೇಕು. ನನ್ನ ಹೇಳಿಕೆಯಿಂದ ಮೋದಿಯವರಿಗೆ ಏನು ತೊಂದರೆ? ನಾನು ಉದ್ಧವ್ ಠಾಕ್ರೆಯವರ ಪಕ್ಷದ ಕುರಿತು ಮಾತನಾಡಿರಲಿಲ್ಲ. ಅದು ಸಣ್ಣ ಪಕ್ಷವೇ? ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅದು ನಮಗಿಂತಲೂ ಹೆಚ್ಚು ಸ್ಥಾನಗಳನ್ನು ಗಳಿಸಿತ್ತು’ ಎಂದರು.
ಬುಧವಾರ ಮುಂಬೈನಲ್ಲಿ ಮೋದಿಯವರ ಕಾರ್ಯಕ್ರಮಗಳನ್ನು ಉಲ್ಲೇಖಿಸಿದ ಪವಾರ್,ಮುಂಬೈನಂತಹ ನಗರಗಳಲ್ಲಿ ರೋಡ್ ಶೋಗಳನ್ನು ನಡೆಸುವುದು ಒಳ್ಳೆಯದಲ್ಲ. ಮೋದಿ ನಿನ್ನೆ ಭೇಟಿ ನೀಡಿದ್ದ ಸ್ಥಳವು ಗುಜರಾತಿ ಪ್ರಾಬಲ್ಯದ ಪ್ರದೇಶವಾಗಿದ್ದು,ಅವರು ನಿರ್ದಿಷ್ಟ ಸಮುದಾಯವನ್ನು ಕೇಂದ್ರೀಕರಿಸಿದ್ದರು ಎಂದು ಹೇಳಿದರು.
ಮುಂಬೈನ ಆರು ಮತ್ತು ಮಹಾರಾಷ್ಟ್ರದ ಇತರ ಏಳು ಲೋಕಸಭಾ ಕ್ಷೇತ್ರಗಳಲ್ಲಿ ಮೇ 20ರಂದು ಮತದಾನ ನಡೆಯಲಿದ್ದು, ಮೋದಿ ಬುಧವಾರ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳಾದ ಶಿವಸೇನೆ ಮತ್ತು ಎನ್ಸಿಪಿ ಅಭ್ಯರ್ಥಿಗಳ ಪರ ಪ್ರಚಾರಕ್ಕಾಗಿ ಘಾಟಕೋಪರ್ ಪ್ರದೇಶದಲ್ಲಿ ಮೆಗಾ ರೋಡ್ ಶೋ ನಡೆಸಿದ್ದರು.
ಲೋಕಸಭಾ ಚುನಾವಣಾ ಸಂಭಾವ್ಯ ಫಲಿತಾಂಶದ ಕುರಿತು ಕೇಳಿದಾಗ ಪವಾರ್, ಜನರು ಬದಲಾವಣೆಯನ್ನು ಬಯಸುತ್ತಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ. ಆದರೆ ಯಾರು ಎಷ್ಟು ಸ್ಥಾನಗಳನ್ನು ಗೆಲ್ಲುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ ಎಂದರು.