ಪ್ರಧಾನಿಯ ಸಿದ್ಧಾಂತವು ಮಣಿಪುರವನ್ನು ಸುಡುತ್ತಿದೆ: ರಾಹುಲ್ ಗಾಂಧಿ

Update: 2023-07-27 17:12 GMT

ರಾಹುಲ್ ಗಾಂಧಿ

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯ ಸಿದ್ಧಾಂತವು ಮಣಿಪುರವನ್ನು ಸುಡುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಆರೋಪಿಸಿದ್ದಾರೆ.

ರಾಜ್ಯಸಭೆಯಲ್ಲಿ ಬುಧವಾರ ಸಚಿವೆ ಸ್ಮೃತಿ ಇರಾನಿ ತನ್ನ ವಿರುದ್ಧ ಮಾಡಿರುವ ಆರೋಪಗಳಿಗೆ ರಾಹುಲ್ ಗಾಂಧಿ ಸಾಮಾಜಿಕ ಮಾಧ್ಯಮದಲ್ಲಿ ಹಾಕಿದ ವೀಡಿಯೊ ಮೂಲಕ ಪ್ರತಿಕ್ರಿಯಿಸುತ್ತಿದ್ದರು.

ರಾಹುಲ್ ಗಾಂಧಿ ‘‘ಮಣಿಪುರಕ್ಕೆ ಬೆಂಕಿ ಹಚ್ಚಿದ್ದಾರೆ’’ ಎಂದು ಸ್ಮೃತಿ ಇರಾನಿ ಆರೋಪಿಸಿದ್ದರು.

‘‘ಮಣಿಪುರಕ್ಕೆ ಪ್ರಧಾನಿ ನರೇಂದ್ರ ಮೋದಿ ಏನು ಮಾಡಿದ್ದಾರೆ? ಅವರು ಮಣಿಪುರದ ಬಗ್ಗೆ ಯಾಕೆ ಏನೂ ಹೇಳುತ್ತಿಲ್ಲ? ಯಾಕೆಂದರೆ, ಮೋದಿಗೂ ಮಣಿಪುರಕ್ಕೂ ಯಾವುದೇ ಸಂಬಂಧವಿಲ್ಲ. ತಮ್ಮ ಸಿದ್ಧಾಂತವೇ ಮಣಿಪುರವನ್ನು ಸುಟ್ಟಿದೆ ಎನ್ನುವುದು ಅವರಿಗೆ ಗೊತ್ತಿದೆ’’ ಎಂದು ರಾಹುಲ್ ಹೇಳಿದ್ದಾರೆ.

ಬಿಜೆಪಿ ಮತ್ತು ಅದರ ಮಾತೃ ಸಂಸ್ಥೆ ಆರೆಸ್ಸೆಸ್ ನತ್ತ ಬೆಟ್ಟು ಮಾಡಿದ ರಾಹುಲ್, ‘‘ಬಿಜೆಪಿ ಮತ್ತು ಆರೆಸ್ಸೆಸ್ ಬಯಸುವುದು ಅಧಿಕಾರವನ್ನು. ಅಧಿಕಾರಕ್ಕಾಗಿ ಅವರು ಏನು ಬೇಕಾದರೂ ಮಾಡುತ್ತಾರೆ. ಅಧಿಕಾರಕ್ಕಾಗಿ ಅವರು ಮಣಿಪುರವನ್ನೂ ಸುಡುತ್ತಾರೆ, ಇಡೀ ದೇಶವನ್ನೇ ಬೇಕಾದರೂ ಸುಡುತ್ತಾರೆ’’ ಎಂದು ರಾಹುಲ್ ಹೇಳಿದರು.

‘‘ಬಿಜೆಪಿ- ಆರೆಸ್ಸೆಸ್ ಮಂದಿ ದೇಶದ ಜನರ ದುಃಖ ಮತ್ತು ನೋವಿಗೆ ಸ್ಪಂದಿಸುವುದಿಲ್ಲ’’ ಎಂದರು.

‘‘ಹರ್ಯಾಣ ಆಗಲಿ, ಪಂಜಾಬ್ ಆಗಲಿ, ಉತ್ತರ ಪ್ರದೇಶವೇ ಆಗಲಿ, ಅವರು ಇಡೀ ದೇಶವನ್ನೇ ಮಾರಲು ಹೊರಟಿದ್ದಾರೆ; ಅವರಿಗೆ ಅಧಿಕಾರ ಮಾತ್ರ ಬೇಕು. ಇದರ ವಿರುದ್ಧ ಕಾಂಗ್ರೆಸ್ ಹೋರಾಟ ಮಾಡುತ್ತಿದೆ’’ ಎಂದು ಅವರು ತಿಳಿಸಿದರು.

‘‘ಒಂದು ಕಡೆ ದೇಶವನ್ನು ಪ್ರೀತಿಸುವ ಜನರಿದ್ದಾರೆ. ದೇಶಕ್ಕೆ ಮತ್ತು ಪ್ರಜೆಗಳಿಗೆ ಹಾನಿಯಾದಾಗ ಅವರಿಗೂ ನೋವಾಗುತ್ತದೆ. ಆದರೆ ಆರ್ಎಸ್ಎಸ್-ಬಿಜೆಪಿಯವರಿಗೆ ಇಂಥ ಭಾವನೆಗಳಿಲ್ಲ. ಅವರಿಗೆ ಯಾವ ನೋವೂ ಆಗುವುದಿಲ್ಲ. ಯಾಕೆಂದರೆ ಅವರು ದೇವನ್ನು ವಿಭಜಿಸುವ ಕೆಲಸವನ್ನು ಮಾಡುತ್ತಾರೆ’’ ಎಂದರು.

ಬುಧವಾರ ರಾಜ್ಯಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿದ ಸಚಿವೆ ಸ್ಮೃತಿ ಇರಾನಿ, ಬಿಜೆಪಿಯೇತರ ಪಕ್ಷಗಳ ಆಡಳಿತವಿರುವ ರಾಜ್ಯಗಳಲ್ಲಿ ಮಹಿಳೆಯರ ವಿರುದ್ಧ ನಡೆಯುತ್ತಿರುವ ಅಪರಾಧಗಳ ಬಗ್ಗೆ ವಿರೋಧ ಪಕ್ಷಗಳು ಧ್ವನಿ ಎತ್ತುವುದಿಲ್ಲ ಎಂದು ಆರೋಪಿಸಿದ್ದರು.

‘‘ಕಾಂಗ್ರೆಸ್ ಆಳ್ವಿಕೆಯ ರಾಜ್ಯಗಳಲ್ಲಿ ಎಷ್ಟು ಮಹಿಳೆಯರ ಮೇಲೆ ಅತ್ಯಾಚಾರ ನಡೆಸಲಾಗಿದೆ ಎಂದು ಹೇಳುವ ಧೈರ್ಯವನ್ನು ನೀವು ಯಾವಾಗ ತೋರಿಸುತ್ತೀರಿ? ರಾಹುಲ್ ಗಾಂಧಿ ಮಣಿಪುರಕ್ಕೆ ಹೇಗೆ ಬೆಂಕಿ ಹಚ್ಚಿದರು ಎಂದು ಹೇಳುವ ಧೈರ್ಯವನ್ನು ನೀವು ಯಾವಾಗ ತೋರಿಸುತ್ತೀರಿ? ಈ ಸಂಪುಟದಲ್ಲಿರುವ ಮಹಿಳಾ ಸಚಿವರ ಮೇಲೆ ಕಳಂಕ ಹೊರಿಸಬೇಡಿ’’ ಎಂದು ಪಕ್ಷದ ಸಂಸದರ ಕರತಾಡನದ ನಡುವೆ ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News