ಚುನಾವಣೆಗಳ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳ ನಾಯಕರ ವಿರುದ್ಧ ರಾಜಕೀಯ ಪಿತೂರಿ: ಆಮ್ ಆದ್ಮಿ ಪಕ್ಷ ಆರೋಪ
Update: 2023-11-02 16:45 GMT
ಹೊಸದಿಲ್ಲಿ: ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ಗೆ ಅನುಷ್ಠಾನ ನಿರ್ದೇಶನಾಲಯ ನೀಡಿರುವ ಸಮನ್ಸ್‌ನ ಹಿಂದೆ ‘‘ರಾಜಕೀಯ ಪಿತೂರಿ’’ಯಿದೆ ಎಂದು ಆಮ್ ಆದ್ಮಿ ಪಕ್ಷ ಗುರುವಾರ ಆರೋಪಿಸಿದೆ ಹಾಗೂ ಪ್ರತಿಪಕ್ಷ ನಾಯಕರ ಮೇಲೆ ಉದ್ದೇಶಪೂರ್ವಕವಾಗಿ ದಾಳಿ ನಡೆಸಲಾಗುತ್ತಿದೆ ಎಂದು ಹೇಳಿದೆ.
‘‘ಕೇಜ್ರಿವಾಲ್‌ರನ್ನು ಬಂಧಿಸಲಾಗುತ್ತದೆ ಎಂದು ಬಿಜೆಪಿ ಸಂಸದ ಮನೋಜ್ ತಿವಾರಿ ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನಗಳಲ್ಲಿ ಹೇಳಿದ್ದಾರೆ. ಅದು ಅವರಿಗೆ ಹೇಗೆ ಗೊತ್ತು? ಅಂದರೆ ಇದರ ಅರ್ಥ ಇದು ರಾಜಕೀಯ ಪಿತೂರಿಯಾಗಿದೆ. ಐದು ರಾಜ್ಯಗಳಲ್ಲಿ ಚುನಾವಣೆಗಳು ನಡೆಯಲಿವೆ. ಅದಕ್ಕಾಗಿಯೇ ಪ್ರತಿಪಕ್ಷಗಳ ನಾಯಕರ ಮೇಲೆ ಅವರು ದಾಳಿ ಮಾಡುತ್ತಿದ್ದಾರೆ’’ ಎಂದು ಆಪ್ ನಾಯಕ ಸೌರಭ್ ಭಾರದ್ವಾಜ್ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.