ಉಚಿತವಾಗಿ ಪಾನಿಪೂರಿ ನೀಡಿಲ್ಲವೆಂದು ಗೂಂಡಾಗಳಿಂದ ಹಲ್ಲೆ: ವ್ಯಾಪಾರಿ ಮೃತ್ಯು

Update: 2024-01-17 03:17 GMT

ಕಾನ್ಪುರ: ಉಚಿತವಾಗಿ ಪಾನಿ ಪೂರಿ ನೀಡಿಲ್ಲ ಎಂಬ ಕಾರಣಕ್ಕೆ ಜಗಳ ತೆಗೆದ ಸ್ಥಳೀಯ ಗೂಂಡಾ, ಪಾನಿಪೂರಿ ವ್ಯಾಪಾರಿಯ ಮೇಲೆ ಹಲ್ಲೆ ಮಾಡಿ ಆತನ ಸಾವಿಗೆ ಕಾರಣವಾದ ಘಟನೆ ನಡೆದಿದೆ. ಈ ಘಟನೆ ಕಾನ್ಪುರದ ಛಕೇರಿ ಪ್ರದೇಶದಲ್ಲಿ ಭಾನುವಾರ ಸಂಜೆ ನಡೆದಿದ್ದು, ಪ್ರಕರಣದ ಬಗ್ಗೆ ಇನ್ನೂ ಎಫ್ಐಆರ್ ದಾಖಲಾಗಿಲ್ಲ.

ಕಾನ್ಪುರ ದೆಹತ್ನ ನಿವಾಸಿ ಪ್ರೇಮ್ಚಂದ್ರ (40) ಎಂಬ ವ್ಯಕ್ತಿ ತನ್ನ ಪತ್ನಿ ಹಾಗೂ ಮಕ್ಕಳ ಜತೆ ಚಕೇರಿಯಲ್ಲಿ ವಾಸವಿದ್ದರು. ಭಾನುವಾರ ಸಂಜೆ ಮನೆಗೆ ಬರುತ್ತಿದ್ದಾಗ ಸ್ಥಳೀಯ ಗೂಂಡಾ ಧೀರಜ್ ಹಾಗೂ ಸಹಚರರು ಆತನನ್ನು ತಡೆದು ಉಚಿತವಾಗಿ ಪಾನಿಪೂರಿ ನೀಡುವಂತೆ ಕೇಳಿದರು. ಇದಕ್ಕೆ ಒಪ್ಪದಿದ್ದಾಗ ಗೂಂಡಾಗಳು ಬೈದು ಅಮಾನುಷವಾಗಿ ಥಳಿಸುತ್ತಿರುವುದನ್ನು ಗಮನಿಸಿದ ಸ್ಥಳೀಯರು ಮಧ್ಯಪ್ರವೇಶಿಸಿ ಪ್ರೇಮ್ಚಂದ್ರ ಅವರನ್ನು ಪಾರು ಮಾಡಿದರು.

ಆದರೆ ರಾತ್ರಿ ಪ್ರೇಮ್ಚಂದ್ರ ಅವರ ದೇಹಸ್ಥಿತಿ ಗಂಭೀರಗೊಂಡ ಹಿನ್ನೆಲೆಯಲ್ಲಿ ಕುಟುಂಬದವರು ಆಸ್ಪತ್ರೆಗೆ ಕರೆದೊಯ್ದಿದ್ದು, ಆ ವೇಳೆಗಾಗಲೇ ಆತ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಛಕೇರಿ ಠಾಣೆಯ ಇನ್ಸ್ಪೆಕ್ಟರ್ ಅಶೋಕ್ ಕುಮಾರ್ ದುಬೆ ಹೇಳಿದ್ದಾರೆ.

"ದೇಹದ ಮೇಲೆ ಯಾವುದೇ ಗಾಯಗಳು ಕಾಣಿಸುತ್ತಿಲ್ಲ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಅಟಾಪ್ಸಿ ವರದಿ ಆಧಾರದಲ್ಲಿ ಮತ್ತು ಅಗತ್ಯ ದಾಖಲೆಗಳ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ" ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News