ಬಿಟ್ ಕಾಯಿನ್ ಪ್ರಕರಣ | ಗೌರವ್ ಮೆಹ್ತಾಗೆ ಸೇರಿದ ಸ್ಥಳಗಳ ಮೇಲೆ ಈ.ಡಿ. ದಾಳಿ
ಮುಂಬೈ: ಬಿಟ್ ಕಾಯಿನ್ ಹಗರಣದ ಪ್ರಕರಣಕ್ಕೆ ಸಂಬಂಧಿಸಿ ಲೆಕ್ಕ ಪರಿಶೋಧನಾ ಸಂಸ್ಥೆ ‘ಸಾರಥಿ ಅಸೋಸಿಯೇಟ್ಸ್’ನ ಉದ್ಯೋಗಿಯಾಗಿರುವ ಗೌರವ್ ಮೆಹ್ತಾಗೆ ಸೇರಿದ ವಿವಿಧ ಸ್ಥಳಗಳ ಮೇಲೆ ಈ.ಡಿ. ಬುಧವಾರ ದಾಳಿ ನಡೆಸಿದೆ. ಛತ್ತೀಸ್‌ಗಢದ ರಾಜಧಾನಿಯಾಗಿರುವ ರಾಯಪುರದಲ್ಲಿ ಈ ದಾಳಿ ನಡೆದಿದೆ.
ಮಹಾರಾಷ್ಟ್ರ ವಿಧಾನ ಸಭೆ ಚುನಾವಣೆಗೆ ವೆಚ್ಚ ಮಾಡಲು ಬಿಟ್ ಕಾಯಿನ್ ಬಳಕೆ ಮಾಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಎನ್‌ಸಿಪಿ (ಶರದ್‌ಚಂದ್ರ ಪವಾರ್ ಬಣ) ಸಂಸದೆ ಸುಪ್ರಿಯಾ ಸುಳೆ ಅವರು ಭಾರತದ ಚುನಾವಣಾ ಆಯೋಗಕ್ಕೆ ಸೈಬರ್ ಅಪರಾಧದ ದೂರು ನೀಡಿದ ಬಳಿಕ ಈ ಬೆಳವಣಿಗೆ ನಡೆದಿದೆ.
ಈ ದೂರು ಗೌರವ್ ಮೆಹ್ತಾ ಹಾಗೂ ಪುಣೆಯ ಮಾಜಿ ಐಪಿಎಸ್ ಅಧಿಕಾರಿ ರವೀಂದ್ರನಾಥ ಪಾಟೀಲ್ ಅವರನ್ನು ಗುರಿಯಾಗಿ ಇರಿಸಿಕೊಂಡಿದೆ.
ಮಹಾರಾಷ್ಟ್ರ ಚುನಾವಣೆಗೆ ಒಂದು ದಿನ ಮುನ್ನ ಪುಣೆಯ ಮಾಜಿ ಐಪಿಎಸ್ ಅಧಿಕಾರಿ ರವೀಂದ್ರ ನಾಥ್ ಪಾಟೀಲ್ ಅವರು ಎನ್‌ಸಿಪಿ-ಎಸ್‌ಪಿ ನಾಯಕಿ ಹಾಗೂ ಬಾರಾಮತಿ ಸಂಸದೆ ಸುಪ್ರಿಯಾ ಸುಳೆ ಹಾಗೂ ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷೆ ನಾನಾ ಪಾಟೋಳೆ ಅವರ ವಿರುದ್ಧ ಈ ಆರೋಪ ಮಾಡಿದ್ದರು.
ಈ ಇಬ್ಬರು ನಾಯಕರು 2018ರ ಕ್ರಿಪ್ಟೋಕರೆನ್ಸಿ ವಂಚನೆ ಪ್ರಕರಣದಿಂದ ದೊರಕಿದ ಬಿಟ್ ಕಾಯಿನ್‌ಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಇದೇ ಹಣವನ್ನು ಮಹಾರಾಷ್ಟ್ರ ವಿಧಾನ ಸಭೆ ಚುನಾವಣೆಗೆ ಖರ್ಚು ಮಾಡುತ್ತಿದ್ದಾರೆ ಎಂದು ಹೇಳಿದ್ದರು.
ಈ ನಡುವೆ ಈ ಬಿಟ್ ಕಾಯಿನ್ ವರ್ಗಾವಣೆ ಪ್ರಕರಣದೊಂದಿಗೆ ಗೌರವ್ ಮೆಹ್ತಾ ನಂಟು ಹೊಂದಿದ್ದಾನೆ ಎಂದು ಹೇಳಲಾಗಿತ್ತು.