ರಾಕೆಟ್ ಸೆನ್ಸರ್ ಗಳನ್ನು ತಯಾರಿಸುವ ಭಾರತವು ಕಾರ್ ಸೆನ್ಸರ್ ಗಳನ್ನೂ ತಯಾರಿಸಬಲ್ಲದು : ಇಸ್ರೊ ಮುಖ್ಯಸ್ಥ
ಬೆಂಗಳೂರು: ಕಾರು ಸೆನ್ಸರ್ ಗಳಿಗೆ ಆಮದಿನ ಮೇಲೆ ಅವಲಂಬಿತವಾಗುವ ಬದಲು ದೇಶೀಯವಾಗಿಯೇ ಉತ್ಪಾದಿಸುವ ಅಗತ್ಯವಿದೆ ಎಂದು ಬುಧವಾರ ಇಸ್ರೊ ಮುಖ್ಯಸ್ಥ ಎಸ್.ಸೋಮನಾಥ್ ಒತ್ತಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಆಯೋಜಿಸಲಾಗಿರುವ ಟೆಕ್ ಸಮಿಟ್ ನಲ್ಲಿ ಬಾಹ್ಯಾಕಾಶ ತಂತ್ರಜ್ಞಾನ ಮತ್ತು ರಕ್ಷಣೆ ಕುರಿತ ಅವಧಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೈಗೆಟುಕುವ ದರದ ಉತ್ಪಾದನೆಯ ಪ್ರಾಮುಖ್ಯರತೆಯನ್ನೂ ಪ್ರತಿಪಾದಿಸಿದರು. ಇದೇ ಸಂದರ್ಭದಲ್ಲಿ ಕರ್ನಾಟಕ ಬಾಹ್ಯಾಕಾಶ ತಾಂತ್ರಿಕ ನೀತಿಯ ಕರಡನ್ನು ಬಿಡುಗಡೆಗೊಳಿಸಲಾಯಿತು.
ಭಾರತವು ರಾಕೆಟ್ ಸೆನ್ಸರ್ ಉತ್ಪಾದನೆಯಲ್ಲಿ ಗಮನಾರ್ಹ ಪ್ರಮಾಣದ ಹೂಡಿಕೆಯನ್ನು ಮಾಡುತ್ತಿರುವಾಗ, ದೊಡ್ಡ ಪ್ರಮಾಣದ ಕಾರ್ ಸೆನ್ಸರ್ ಗಳ ದೇಶೀಯ ಉತ್ಪಾದನೆಯು ಅವುಗಳ ದರವನ್ನು ಹೆಚ್ಚು ಅಗ್ಗವನ್ನಾಗಿಸುತ್ತದೆ ಎಂಬುದರತ್ತ ಅವರು ಬೊಟ್ಟು ಮಾಡಿದರು.
“ಉತ್ಪಾದನಾ ವೆಚ್ಚವು ಕಡಿಮೆ ಇದ್ದು, ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಳ ಮಾಡಿದರೆ ಮಾತ್ರ, ಕಾರ್ ಸೆನ್ಸರ್ ಗಳು ಕೈಗೆಟುಕುವಂತಾಗಬಹುದು” ಎಂದು ಅವರು ಹೇಳಿದರು.
ಈ ಸವಾಲುಗಳನ್ನು ಎದುರಿಸಲು ದೊಡ್ಡ ಪ್ರಮಾಣದ ಉದ್ಯಮಗಳ ಸಹಭಾಗಿತ್ವ ಅಗತ್ಯವಿದ್ದು, ಈ ಶೃಂಗಸಭೆಯಲ್ಲಿ ಬಿಡುಗಡೆಯಾಗಿರುವ ನೀತಿಯ ಮಧ್ಯಪ್ರವೇಶವು ಪರಿಹಾರ ಒದಗಿಸಬಲ್ಲದು ಎಂದು ಅವರು ಅಭಿಪ್ರಾಯ ಪಟ್ಟರು.
ಇದೇ ವೇಳೆ ಖಾಸಗಿ ವಲಯದ ಬೆಳವಣಿಗೆಗೆ ಪೂರಕವಾಗಿರುವ ಪರಿಸರವನ್ನು ನಿರ್ಮಿಸಿರುವ 2020ರ ಬಾಹ್ಯಾಕಾಶ ವಲಯ ಸುಧಾರಣೆಗಳು ಹಾಗೂ ಬಾಹ್ಯಾಕಾಶ ನೀತಿ 2023 ಅನ್ನು ಅವರು ಶ್ಲಾಘಿಸಿದರು.