ಪೂರೈಕೆಯಲ್ಲಿ ವಿಳಂಬ ಸರಿದೂಗಿಸಲು ನಾಶಿಕ್ ನಲ್ಲಿ ನಾಲ್ಕನೆ ತೇಜಸ್ ಜೆಟ್ ಜೋಡಣಾ ಘಟಕ ಸ್ಥಾಪನೆಗೆ ಎಚ್ ಎಎಲ್ ಚಿಂತನೆ
ಹೊಸದಿಲ್ಲಿ: ಜನರಲ್ ಎಲೆಕ್ಟ್ರಿಕ್ ಎಂಜಿನ್ ಗಳನ್ನು ಪೂರೈಸುವ ವೇಳೆಗೆ ವ್ಯರ್ಥವಾಗಿರುವ ಸಮಯವನ್ನು ಸರಿದೂಗಿಸಲು ಸ್ವದೇಶಿ ನಿರ್ಮಾಣದ ತೇಜಸ್ ಲಘು ವಿಮಾನದ ಜೋಡಣೆಗೆ ವೇಗ ನೀಡಲು ಮುಂದಾಗಿರುವ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್, ನಾಶಿಕ್ ನಲ್ಲಿ ನಾಲ್ಕನೆ ಜೋಡಣಾ ಘಟಕ ಸ್ಥಾಪಿಸುವ ಕುರಿತು ಚಿಂತನೆ ನಡೆಸುತ್ತಿದೆ ಎಂದು ವರದಿಯಾಗಿದೆ.
ತೇಜಸ್ ಎಂಕೆ-1 ಜೆಟ್ ವಿಮಾನಕ್ಕೆ ಎಫ್-404 ಎಂಜಿನ್ ಗಳನ್ನು ಪೂರೈಸಲು ಅಮೆರಿಕ ವಿಫಲವಾಗಿರುವುದರಿಂದ, ಸ್ಕ್ವಾಡ್ರನ್ ಸಂಖ್ಯೆಯ ಕೊರತೆಯನ್ನು ಎದುರಿಸುತ್ತಿರುವ ಭಾರತೀಯ ವಾಯು ಪಡೆಗೆ ಯುದ್ಧ ವಿಮಾನ ಪೂರೈಕೆ ಮಾಡಲು ಸಂಕಷ್ಟ ಎದುರಿಸುತ್ತಿರುವ ಎಚ್ ಎಎಲ್, ಇದುವರೆಗೆ ತೇಜಸ್ ಲಘು ವಿಮಾನದ ಉತ್ಪಾದನೆಗೆ ಚಾಲನೆ ನೀಡಲು ಸಾಧ್ಯವಾಗಿಲ್ಲ.
“ಜನರಲ್ ಎಲೆಕ್ಟ್ರಿಕ್ ಇನ್ನೂ 26 ಎಂಜಿನ್ ಗಳನ್ನು ಪೂರೈಸಬೇಕಿದ್ದು, ಮಾರ್ಚ್ ವೇಳೆಗೆ ಮೊದಲ ಎಂಜಿನ್ ಅನ್ನು ಪೂರೈಸುವುದಾಗಿ ಭರವಸೆ ನೀಡಿದೆ. ತದನಂತರ, ಉಳಿದ ಎಂಜಿನ್ ಗಳ ಉತ್ಪಾದನೆಗೆ ವೇಗ ನೀಡಲಾಗುವುದು ಎಂದು ತಿಳಿಸಿದೆ” ಎಂದು ಮೂಲಗಳು ತಿಳಿಸಿವೆ.
ಎಚ್ ಎಎಲ್ ಬೆಂಗಳೂರಿನಲ್ಲಿ ಎರಡು ಲಘು ಯುದ್ಧ ವಿಮಾನ ಜೋಡಣಾ ಘಟಕಗಳನ್ನು ಹೊಂದಿದ್ದು, ಪ್ರತಿ ಘಟಕವು 8 ಯುದ್ಧ ವಿಮಾನಗಳನ್ನು ಜೋಡಣೆ ಮಾಡುವ ಸಾಮರ್ಥ್ಯ ಹೊಂದಿವೆ. ನಾಶಿಕ್ ನಲ್ಲೂ ಕೂಡಾ ಒಂದು ಘಟಕವನ್ನು ಹೊಂದಿದ್ದು, ಅದೂ ಕೂಡಾ ವರ್ಷಕ್ಕೆ 8 ವಿಮಾನಗಳನ್ನು ಜೋಡಿಸುವ ಸಾಮರ್ಥ್ಯ ಹೊಂದಿದೆ. ಮೊದಲ ಲಘ ಯುದ್ಧ ವಿಮಾನವು ನಾಶಿಕ್ ಘಟಕದಿಂದ ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಈಗ ವಿಮಾನ ವಲಯದ ಪ್ರಮುಖ ಸಂಸ್ಥೆಯಾದ ಎಚ್ಎಎಲ್, ನಾಶಿಕ್ ನಲ್ಲಿ ಎರಡನೆ ಜೋಡಣಾ ಘಟಕ ಸ್ಥಾಪಿಸುವ ಚಿಂತನೆ ನಡೆಸುತ್ತಿದೆ. ಆದರೆ, ಜನರಲ್ ಎಲೆಕ್ಟ್ರಿಕ್ ನಿಯಮಿತವಾಗಿ ಎಂಜಿನ್ ಪೂರೈಕೆ ಮಾಡಲು ಪ್ರಾರಂಭಿಸಿದ ಬಳಿಕವಷ್ಟೇ ಈ ಘಟಕ ಸ್ಥಾಪನೆಯಾಗಲಿದೆ. ಎರಡನೆ ಘಟಕವನ್ನು ಸ್ಥಾಪಿಸಲು ಎಚ್ಎಎಲ್ ಗೆ ಒಂದೂವರೆ ವರ್ಷ ಗಳ ಕಾಲಾವಧಿ ಬೇಕಾಗಿದೆ ಎಂದು ಹೇಳಲಾಗಿದೆ.