‘ವೈಯಕ್ತಿಕ ಆಕಾಂಕ್ಷೆಗಳಿದ್ದವರು ರಾಜಕೀಯದಲ್ಲಿ ಯಶಸ್ಸು ಸಾಧಿಸಲಾರರು’ : ಪ್ರಧಾನಿ ಮೋದಿ
ಹೊಸದಿಲ್ಲಿ: ರಾಜಕೀಯ ಕ್ಷೇತ್ರದಲ್ಲಿ ಧ್ಯೇಯವನ್ನು ಹೊಂದಿರುವ ವ್ಯಕ್ತಿಗಳು ಯಶಸ್ಸನ್ನು ಕಾಣುತ್ತಾರೆ. ಆದರೆ ವೈಯಕ್ತಿಕ ಮಹತ್ವಾಕಾಂಕ್ಷೆಗಳಿಂದ ಪ್ರೇರಿತರಾದವರು ರಾಜಕೀಯ ರಂಗದಲ್ಲಿ ವೈಫಲ್ಯವನ್ನು ಕಾಣುತ್ತಾರೆ ಎಂದು ಮೋದಿ ತನ್ನ ಪಾಡ್‌ಕಾಸ್ಟ್ ಸಂದರ್ಶನದಲ್ಲಿ ಹೇಳಿದ್ದಾರೆ.
ರಾಜಕೀಯ ಪ್ರವೇಶಿಸುವುದು ಸುಲಭವಲ್ಲ. ಆದರೆ ಯಶಸ್ಸನ್ನು ಸಾಧಿಸುವುದು, ಸಂಪೂರ್ಣವಾಗಿ ವಿಭಿನ್ನವಾದ ಸವಾಲಾಗಿದೆ ಎಂದು ಮೋದಿ ಅಭಿಪ್ರಾಯಿಸಿದರು.
‘‘ ರಾಜಕೀಯದಲ್ಲಿ ಯಶಸ್ಸು ಗಳಿಕೆಯು ಅಸಾಧಾರಣವಾದ ಸಮರ್ಪಣಾ ಮನೋಭಾವವನ್ನು ಬಯಸುತ್ತದೆ. ಒಳಿತು ಕೆಡುಕಿನ ಸಮಯಗಳೆರಡರಲ್ಲೂ ಜನತೆಯ ಜೊತೆ ನಿರಂತರ ಸಂಪರ್ಕವನ್ನು ಇರಿಸಿಕೊಳ್ಳಬೇಕಾಗುತ್ತದೆ. ಒಂದು ವೇಳೆ ಪ್ರತಿಯೊಬ್ಬರು ತಮ್ಮ ಮಾತಿಗೆ ಕಿವಿಗೊಡುತ್ತಾರೆ ಹಾಗೂ ತಮ್ಮ ಕಾರ್ಯನಿರ್ವಹಣೆಯನ್ನು ಅನುಸರಿಸುತ್ತಾರೆ ಎಂದು ಯಾರಾದರೂ ನಂಬಿದ್ದರೆ, ಅದು ಅವರ ತಪ್ಪು ತಿಳುವಳಿಕೆಯಾಗಿದೆ. ಅಂತಹವರು ಕೆಲವು ಚುನಾವಣೆಗಳನ್ನು ಗೆಲ್ಲಬಹುದಾಗಿದೆ. ಆದರೆ ಅವರು ಯಶಸ್ವಿ ನಾಯಕರಾಗುವರೆಂಬುದಕ್ಕೆ ಯಾವುದೇ ಖಾತರಿಯಿರುವುದಿಲ್ಲ” ಎಂದು ಮೋದಿ ಪಾಡ್‌ಕಾಸ್ಟ್‌ನಲ್ಲಿ ಹೇಳಿದರು.