ಮಹಿಳೆಯರ ವಿರುದ್ಧದ ಅಪರಾಧಗಳಿಗೆ ಕಠಿಣ ಶಿಕ್ಷೆ | ಸ್ಟಾಲಿನ್ ಸರಕಾರದಿಂದ ವಿಧೇಯಕಗಳ ಮಂಡನೆ

Update: 2025-01-10 16:12 GMT

ಎಂ.ಕೆ.ಸ್ಟಾಲಿನ್ | PC : PTI 

ಚೆನ್ನೈ: ತಮಿಳುನಾಡು ಸರಕಾರದ ಮಹಿಳಾ ಕಿರುಕುಳ ನಿಷೇಧ ಮಸೂದೆ 1999ರ ತಿದ್ದುಪಡಿ ವಿಧೇಯಕ ಹಾಗೂ 2023ರ ಭಾರತೀಯ ನ್ಯಾಯ ಸಂಹಿತೆ ಮತ್ತು 2023ರ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ತಿದ್ದುಪಡಿ ವಿಧೇಯಕಗಳನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಶುಕ್ರವಾರ ವಿಧಾನಸಭೆಯಲ್ಲಿ ಮಂಡಿಸಿದರು.

ನೂತನ ವಿಧೇಯಕಗಳ ಪ್ರಕಾರ ಡಿಜಿಟಲ್ ಹಾಗೂ ಇಲೆಕ್ಟ್ರಾನಿಕ್ ಸೇರಿದಂತೆ ಮಹಿಳೆಯರಿಗೆ ವಿವಿಧ ರೀತಿಗಳಲ್ಲಿ ಮಹಿಳೆಯರಿಗೆ ಕಿರುಕುಳ ನೀಡುವವರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ.ವರೆಗೆ ದಂಡ ವಿಧಿಸಬಹುದಾಗಿದೆ.

ಒಂದು ವೇಳೆ ತಿದ್ದುಪಡಿ ಮಸೂದೆಯು ಜಾರಿಗೆ ಬಂದಲ್ಲಿ ದೋಷಿಗೆ ಮೊದಲ ಸಲದ ಅಪರಾಧಕ್ಕೆ 5 ವರ್ಷ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ.ವರೆಗೆ ದಂಡವಿಧಿಸಲಾಗುತ್ತದೆ. ಮತ್ತೊಮ್ಮೆ ಇದೇ ರೀತಿಯ ಅಪರಾಧವನ್ನು ಎಸಗಿದಲ್ಲಿ ಆತನ ಜೈಲು ಶಿಕ್ಷೆಯನ್ನು 10 ವರ್ಷಗಳಿಗೆ ಹಾಗೂ ದಂಡದ ಮೊತ್ತವನ್ನು 10 ಲಕ್ಷ ರೂ.ಗೆ ವಿಸ್ತರಿಸಲಾಗುತ್ತದೆ.

ಪ್ರಸಕ್ತ ಕಿರುಕುಳದಿಂದಾಗಿ ಮಹಿಳೆಯು ಸಾವನ್ನಪ್ಪಿದಲ್ಲಿ, ಈ ಅಪರಾಧವನ್ನು ಉದ್ದೇಶಪೂರ್ವಕವಾಗಿ ಎಸಗಿದ್ದಲ್ಲಿ ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ರೂ. ದಂಡವನ್ನು ವಿಧಿಸಲಾಗುತ್ತದೆ. ಒಂದು ವೇಳೆ ಸಾವಿಗೀಡಾಗುವಂತೆ ಮಾಡುವ ಉದ್ದೇಶವಿಲ್ಲದೆ ಕಿರುಕುಳ ನೀಡಿದ್ದಲ್ಲಿ 10 ವರ್ಷಗಳ ಜೈಲು ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ನಿರ್ಲಕ್ಷ್ಯಕ್ಕಾಗಿ 10 ವರ್ಷಗಳ ಜೈಲು ಮತ್ತು 5 ಸಾವಿರ ರೂ. ದಂಡವಿಧಿಸಲಾಗುತ್ತದೆ.

ಆದರೆ ಈಗ ಈ ಶಿಕ್ಷೆಗಳನ್ನು ಇನ್ನೂ ಹೆಚ್ಚು ಕಠಿಣಗೊಳಿಸಲಾಗಿದೆ. ಕಿರುಕುಳದಿಂದಾಗಿ ಮಹಿಳೆಯ ಸಾವಿಗೆ ಕಾರಣನಾದಲ್ಲಿ ತಪ್ಪಿತಸ್ಥನಿಗೆ ಜೀವಾವಧಿ ಶಿಕ್ಷೆ ಹಾಗೂ 2 ಲಕ್ಷ ರೂ.ವರೆಗೆ ದಂಡವನ್ನು ವಿಧಿಸಲಾಗುತ್ತದೆ. ಉದ್ದೇಶರಹಿತವಾಗಿ ಮಹಿಳೆಯ ಸಾವಿಗೆ ಕಾರಣನಾದಲ್ಲಿ 15 ವರ್ಷ ಜೈಲು ಹಾಗೂ 2 ಲಕ್ಷ ದಂಡವಿಧಿಸಲಾಗುವುದು. ನಿರ್ಲಕ್ಷ್ಯಕ್ಕಾಗಿ 15 ವರ್ಷ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ. ದಂಡವನ್ನು ವಿಧಿಸಲಾಗುವುದು.

ವಿಧೇಯಕವನ್ನು ಸದನದಲ್ಲಿ ಮಂಡಿಸಿ ಮಾತನಾಡಿದ ಮುಖ್ಯಮಂತ್ರಿ ಸ್ಟಾಲಿನ್ ಅವರು ಹೇಯ ಅಪರಾಧಗಳಲ್ಲಿ ತೊಡಗಿರುವ ಕ್ರಿಮಿನಲ್‌ಗಳಿಗೆ ನೀಡುವ ಶಿಕ್ಷೆಯು ಭವಿಷ್ಯದಲ್ಲಿ ಇಂತಹ ಅಪರಾಧಗಳನ್ನು ಎಸಗುವವರನ್ನು ಹಿಮ್ಮೆಟ್ಟಿಸುವಂತಿರಬೇಕು. ಭಾರತೀಯ ನ್ಯಾಯ ಸಂಹಿತೆ ಹಾಗೂ 1996ರ ತಮಿಳುನಾಡು ಮಹಿಳಾ ಕಿರುಕುಳ ನಿಷೇಧ ಕಾಯ್ದೆಯು ಮಹಿಳೆಯರ ವಿರುದ್ಧದ ಅಪರಾಧಗಳನ್ನು ಪ್ರತಿಬಂಧಿಸುತ್ತವೆಯಾದರೂ, ಇಂತಹ ಅಪರಾಧಗಳಿಗೆ ನೀಡುವ ಶಿಕ್ಷೆಯು ಇನ್ನೂ ಕಠಿಣವಾಗಿರಬೇಕೆಂದು ಈ ಸರಕಾರ ಬಯಸುತ್ತಿದೆ. ಎಲ್ಲಾ ಸದಸ್ಯರು ಈ ವಿಧೇಯಕವನ್ನು ಅನುಮೋದಿಸಬೇಕೆಂದು ಅವರು ಸದನವನ್ನು ಕೋರಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News