ಲಕ್ನೋ: ವಿಧಾನ ಭವನದ ಎದುರು ಕುಟುಂಬದೊಂದಿಗೆ ಆತ್ಮಾಹುತಿಗೆ ವ್ಯಕ್ತಿಯ ಪ್ರಯತ್ನ, ಪೋಲಿಸರಿಂದ ರಕ್ಷಣೆ

Update: 2025-01-10 16:07 GMT

ಸಾಂದರ್ಭಿಕ ಚಿತ್ರ | PC : PTI 

ಲಕ್ನೋ : ತನ್ನ ವಿರುದ್ಧ ಸುಳ್ಳು ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಆರೋಪಿಸಿ ವ್ಯಕ್ತಿಯೋರ್ವ ತನ್ನ ಕುಟುಂಬ ಸದಸ್ಯರೊಂದಿಗೆ ವಿಧಾನ ಭವನದ ಮುಂದೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ಶುಕ್ರವಾರ ನಡೆದಿದ್ದು, ಪೋಲಿಸರು ಅವರನ್ನು ರಕ್ಷಿಸಿದ್ದಾರೆ.

ಲಕ್ನೋ ಜಿಲ್ಲೆಯ ನಿಗೋಹಾನ್ ಬ್ಲಾಕ್‌ನ ಕಾಂತಾ ಗ್ರಾಮದ ನಿವಾಸಿ ರಾಜಕಮಲ್ ರಾವತ್ ತನ್ನ ಪತ್ನಿ ಮತ್ತು ಮಕ್ಕಳೊಂದಿಗೆ ಸ್ವಯಂ ದಹನಕ್ಕೆ ಪ್ರಯತ್ನಿಸಿದ್ದು,ಪೋಲಿಸರು ಅವರನ್ನು ತಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.

ರಾವತ್ ಮತ್ತು ಗ್ರಾಮದ ನಿವಾಸಿ ಶಹೆನ್‌ಶಾ ನಡುವೆ ಭೂ ವಿವಾದವಿದ್ದು, 2024, ಸೆಪ್ಟಂಬರ್‌ಲ್ಲಿ ರಾತ್ರಿವೇಳೆ ಶಹೆನ್‌ಶಾಗೆ ಆತನ ನಿವಾಸದ ಹೊರಗೆ ಗುಂಡಿಕ್ಕಲಾಗಿತ್ತು. ರಾವತ್ ತನ್ನ ಮೇಲೆ ಗುಂಡು ಹಾರಿಸಿದ್ದ ಮತ್ತು ಆತನ ಪತ್ನಿ ಜೊತೆಯಲ್ಲಿದ್ದಳು ಎಂದು ಶಹೆನ್‌ಶಾ ಹೇಳಿಕೆಯಲ್ಲಿ ತಿಳಿಸಿದ್ದ.

ರಾವತ್‌ನನ್ನು ಬಂಧಿಸಿ ಜೈಲಿಗೆ ಅಟ್ಟಲಾಗಿತ್ತು ಮತ್ತು ಆತನ ಬಳಿಯಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿತ್ತು ಎಂದು ಪೋಲಿಸರು ತಿಳಿಸಿದರು.

ನಾಲ್ಕು ದಿನಗಳ ಹಿಂದೆ ಜೈಲಿನಿಂದ ಹೊರಬಂದಿದ್ದ ರಾವತ್ ಶಹೆನ್‌ ಶಾ ಮತ್ತು ಇತರರು ತನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಜೈಲಿನಿಂದ ಹೊರಬಂದ ನಂತರವೂ ಶತ್ರುಗಳು ತನಗೆ ಮತ್ತು ತನ್ನ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದ ಎಂದು ಪೋಲಿಸರು ತಿಳಿಸಿದರು.

ರಾವತ್ ಆತ್ಮಹತ್ಯೆಗೆ ಯತ್ನಿಸಿದ್ದಕ್ಕಾಗಿ ಆತನ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದರು. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News