ಮುಂದಿನ ಎರಡು ವರ್ಷಗಳಲ್ಲಿ ಐಸಿಎಫ್‌ನಲ್ಲಿ 50 ಅಮೃತ ಭಾರತ ರೈಲುಗಳ ತಯಾರಿಕೆ : ರೇಲ್ವೆ ಸಚಿವ ಅಶ್ವಿನಿ ವೈಷ್ಣವ್
ಚೆನ್ನೈ : ರೈಲ್ವೆ ಸಚಿವಾಲಯವು ಅಮೃತ ಭಾರತ ಆವೃತ್ತಿ 2.0 ರೈಲುಗಳಲ್ಲಿ 12 ಪ್ರಮುಖ ಸುಧಾರಣೆಗಳನ್ನು ಸೇರ್ಪಡೆಗೊಳಿಸಿದೆ ಮತ್ತು ಮುಂದಿನ ಎರಡು ವರ್ಷಗಳಲ್ಲಿ ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ(ಐಸಿಎಫ್)ಯಲ್ಲಿ ಇಂತಹ 50 ರೈಲುಗಳು ತಯಾರಾಗಲಿವೆ ಎಂದು ರೇಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಶುಕ್ರವಾರ ಇಲ್ಲಿ ತಿಳಿಸಿದರು.
ಐಸಿಎಫ್‌ನ ಜನರಲ್ ಮ್ಯಾನೇಜರ್ ಯು.ಸುಬ್ಬರಾವ್ ಅವರೊಂದಿಗೆ ಫ್ಯಾಕ್ಟರಿಯನ್ನು ಪರಿಶೀಲಿಸಿದ ವೈಷ್ಣವ್, ರಾಜ್ಯ ಸರಕಾರವು ರಾಜಕೀಯಕ್ಕಿಂತ ಜನರಿಗೆ ಸೇವೆ ಒದಗಿಸುವುದಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು ಮತ್ತು ಕೇಂದ್ರ ಹಾಗೂ ತನ್ನ ಸಚಿವಾಲಯ ಜನರ ಕಲ್ಯಾಣಕ್ಕಾಗಿ ಕ್ರಮಗಳನ್ನು ತೆಗೆದುಕೊಳ್ಳಲು ಬದ್ಧವಾಗಿವೆ ಎಂದು ತಿಳಿಸಿದರು.
ಸೆಮಿ-ಆಟೊಮ್ಯಾಟಿಕ್ ಕಪ್ಲೆಟ್‌ಗಳು,ಮಾಡ್ಯುಲರ್ ಶೌಚಾಲಯಗಳು ತುರ್ತು ಟಾಕ್ ಬ್ಯಾಕ್ ಸೌಲಭ್ಯ,ತುರ್ತು ಬ್ರೇಕ್ ವ್ಯವಸ್ಥೆ,ವಂದೇಭಾರತ ರೈಲುಗಳಲ್ಲಿ ಇರುವಂತೆ ನಿರಂತರ ಬೆಳಕಿನ ವ್ಯವಸ್ಥೆ ಸೇರಿದಂತೆ 12 ಪ್ರಮುಖ ಸುಧಾರಣೆಗಳನ್ನು ಅಮೃತ ಭಾರತಿ ರೈಲುಗಳಲ್ಲಿ ತರಲಾಗಿದೆ ಎಂದು ವೈಷ್ಣವ ಸುದ್ದಿಗಾರರಿಗೆ ವಿವರಿಸಿದರು.
ಮುಂದಿನೆರಡು ವರ್ಷಗಳಲ್ಲಿ ಐಸಿಎಫ್‌ನಲ್ಲಿ 50 ಅಮೃತ ಭಾರತಿ ಆವೃತ್ತಿ 2.0 ರೈಲುಗಳು ತಯಾರಾಗಲಿವೆ. ಇವು ದೂರ ಪ್ರಯಾಣವನ್ನು ಕೈಗೊಳ್ಳುವ ಕಡುಬಡವರಿಗೂ ಕೈಗಟಕುವ ದರಗಳಲ್ಲಿ ಸೇವೆಯನ್ನು ಮತ್ತು ಅತ್ಯುತ್ತಮ ಗುಣಮಟ್ಟದ ಪ್ರಯಾಣ ಅನುಭವವನ್ನು ಒದಗಿಸಲಿವೆ ಎಂದರು.