ಮಣಿಪುರದಲ್ಲಿ ನಿಲ್ಲದ ಹಿಂಸಾಚಾರ; ಐವರು ಬಲಿ
ಇಂಫಾಲ: ಮಣಿಪುರದ ಬಿಷ್ಣುಪುರ ಹಾಗೂ ಚುರಾಚಂದ್ಪುರ ಜಿಲ್ಲೆಗಳಲ್ಲಿ ಶನಿವಾರ ಬೆಳಗ್ಗೆ ಭುಗಿಲೆದ್ದ ಹಿಂಸಾಚಾರದಲ್ಲಿ ಐವರು ಮೃತಪಟ್ಟಿದ್ದಾರೆ. ಸಾವನ್ನಪ್ಪಿದವರಲ್ಲಿ ಮೂವರು ಮೈತೈಗಳಾಗಿದ್ದು, ಇನ್ನಿಬ್ಬರು ಕುಕಿ ರೆ ಸಮುದಾಯದವರೆಂದು ತಿಳಿದುಬಂದಿದೆ.
ಬಿಷ್ಣುಪುರದಲ್ಲಿ ಕುಕಿ ರೆ ಸಮುದಾಯದ ಗುಂಪೊಂದು ಮೈತೈಗಳ ಮನೆಗಳ ಮೇಲೆ ನಡೆಸಿದ ದಾಳಿಗಳಲ್ಲಿ ಮೂವರು ಸಾವನ್ನಪ್ಪಿದ್ದಾರೆಂದು ಬಿಷ್ಣುಪುರದ ಜಿಲ್ಲಾಧಿಕಾರಿ ಲೂರೆಂಬಾಮ್ ವಿಕ್ರಮ್ ತಿಳಿಸಿದ್ದಾರೆ. ತರುವಾಯ ಚುರಾಚಂದ್ಪುರ ಜಿಲ್ಲೆಯಲ್ಲಿ ದುಷ್ಕರ್ಮಿಗಳ ಗುಂಪೊಂದು ಇಬ್ಬರು ಕುಕಿಗಳನ್ನು ಹತ್ಯೆಗೈದಿದೆಯೆಂದು ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.
ಮೈತೈ ಪ್ರಾಬಲ್ಯದ ಬಿಷ್ಣುಪುರ ಜಿಲ್ಲೆ ಹಾಗೂ ಕುಕಿಗಳು ಅಧಿಕ ಸಂಖ್ಯೆಯಲ್ಲಿರುವ ಚುರಾಚಂದ್ಪುರ ಜಿಲ್ಲೆಯ ಫೊಲ್ಜಾಂಗ್ ಗ್ರಾಮದ ಸುತ್ತಮುತ್ತಲಿನ ಪ್ರದೇಶದ ಆಸುಪಾಸಿನ ಸ್ಶಳಗಳಲ್ಲಿ ಶನಿವಾರ ಮುಂಜಾನೆ 4:00 ಗಂಟೆಯ ವೇಳೆಗೆ ಹಿಂಸಾಚಾರ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಬಿಷ್ಣುಪುರ ಜಿಲ್ಲೆಯ ಕ್ವಾಕ್ತಾದಲ್ಲಿ ನಿದ್ರಿಸುತ್ತಿದ್ದ ಮೂವರ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, ತಂದೆ, ಮಗ ಸೇರಿದಂತೆ ಮೂವರನ್ನು ಹತ್ಯೆಗೈದಿದ್ದಾರೆ. ಹಂತಕರು ಚುರಾಚಂದ್ಪುರ ಜಿಲ್ಲೆಯಿಂದ ಬಂದವರೆಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಬಳಿಕ ಕ್ವಾಕ್ತಾದಲ್ಲಿ ಭಾರೀ ಸಂಖ್ಯೆಯಲ್ಲಿ ಜನರ ಗುಂಪು ಜಮಾಯಿಸಿದ್ದು, ಚುರಾಚಂದ್ಪುರ ಜಿಲ್ಲೆಗೆ ತೆರಳುವ ಉದ್ದೇಶ ಹೊಂದಿತ್ತು. ಆದರೆ ಭದ್ರತಾಪಡೆಗಳು ಅವರನ್ನು ತಡೆದವು ಎಂದು ಮೂಲಗಳು ಹೇಳಿವೆ.
ಕ್ವಾಕ್ತಾದ ಆಸುಪಾಸಿನಲ್ಲಿ ಹಾಗೂ ಪೌಗಾಕ್ಚಾವೊ ಸಮೀಪ ಭದ್ರತಾಪಡೆಗಳು ಹಾಗೂ ಉಗ್ರಗಾಮಿಗಳ ನಡುವೆ ನಡೆದ ಗುಂಡಿನ ಚಕಮಕಿ ನಡೆದಿರುವುದಾಗಿ ಮೂಲಗಳು ತಿಳಿಸಿವೆ.
ಓರ್ವ ಪೊಲೀಸ್ ಸೇರಿದಂತೆ ಮೂರು ಮಂದಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಇಂಫಾಲಾದ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದ್ದು, ಅವರೆಲ್ಲರೂ ಅಪಾಯದಿಂದ ಪಾರಾಗಿದ್ದಾರೆಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹಿಂಸಾಚಾರ ಭುಗಿಲೆದ್ದ ಬಳಿಕ ಜಿಲ್ಲಾಡಳಿತವು ಇಂಫಾಲ ಪಶ್ಚಿಮ ಹಾಗೂ ಪೂರ್ವ ಜಿಲ್ಲೆಗಳಲ್ಲಿ ಕರ್ಫ್ಯೂ ಸಡಿಲಿಕೆಯ ಅವಧಿಯನ್ನು ಮುಂಜಾನೆ 5:00ರಿಂದ ಬೆಳಗ್ಗೆ 10:30ರವರೆಗೆ ಕಡಿತಗೊಳಿಸಲಾಗಿದೆ. ಇದಕ್ಕೂ ಮುನ್ನ ಮುಂಜಾನೆ 5:00ರಿಂದ ಸಂಜೆ 6 ಗಂಟೆಯವರೆಗೂ ಕರ್ಫ್ಯೂ ಸಡಿಲಿಕೆಯಿತ್ತು.
ಈ ಮಧ್ಯೆ ಮಣಿಪುರದ 27 ವಿಧಾನಸಭಾ ಕ್ಷೇತ್ರಗ ಹೋರಾಟ ಸಮಿತಿಯೊಂದು ಆಯೋಜಿಸಿದ 24 ತಾಸುಗಳ ಸಾರ್ವತ್ರಿಕ ಮುಷ್ಕರದಿಂದಾಗಿ ಇಂಫಾಲ ಕಣಿವೆ ಪ್ರದೇಶದಲ್ಲಿ ಜನಜೀವನ ಸ್ತಬ್ಧಗೊಂಡಿತು. ಹೆಚ್ಚಿನ ಕಡೆಗಳಲ್ಲಿ ಮಾರುಕಟ್ಚೆಗಳು ಹಾಗೂ ಅಂಗಡಿಮುಂಗಟ್ಚೆಗಳು ಮುಚ್ಚಿದದವು.
ಆಗಸ್ಟ್ 4ರಂದು ಕೌಟುರ್ಕ್ ಬೆಟ್ಟ ಪ್ರದೇಶಗಳಲ್ಲಿ ಸ್ಥಾಪಿಸಲಾದ ಅಕ್ರಮ ಬಂಕರುಗಳನ್ನು ಭದ್ರತಾಪಡೆಗಳು ನಾಶಪಡಿಸಿವೆ. ಬಿಷ್ಣುಪುರ ಜಿಲ್ಲೆಯ ನರನ್ಸೇನಾದ್ಲಿರುವ ಭಾರರತೀಯ ಮೀಸಲು ಪಡೆಯ ಬೆಟಾಲಿಯನ್ನ ನೆಲೆಯಿಂದ ಗುಂಪೊಂದು ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡಿದ ಘಟನೆಯ ಮರುದಿನವೇ ಸಶಸ್ತ್ರಪಡೆಗಳು ಈ ಕಾರ್ಯಾಚರಣೆ ನಡೆಸಿವೆ.