ರಾಜಸ್ಥಾನದ ಕದನ ಕುತೂಹಲ: ವಸುಂಧರ ರಾಜೇ ಕಣಕ್ಕೆ

Update: 2023-11-05 04:39 GMT

Photo: twitter.com/VasundharaBJP

ಜೈಪುರ: ಬಿಜೆಪಿ ನಾಯಕಿ ಮತ್ತು ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರರಾಜೇ ಝಲ್ರಾಪಟನ್ ಕ್ಷೇತ್ರದಿಂದ ಶನಿವಾರ ನಾಮಪತ್ರ ಸಲ್ಲಿಸಿರುವುದು ರಾಜಸ್ಥಾನ ವಿಧಾನಸಭಾ ಚುನಾವಣೆಯ ರಂಗೇರಲು ಕಾರಣವಾಗಿದೆ. ನಾಮಪತ್ರ ಸಲ್ಲಿಕೆ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ರಾಜಕಾರಣದಿಂದ ನಿವೃತ್ತಿ ಹೊಂದುವ ಯಾವುದೇ ಯೋಚನೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಶುಕ್ರವಾರವಷ್ಟೇ ನಿವೃತ್ತಿಯ ಸುಳಿವು ನೀಡಿದ್ದ ರಾಜೇ ಅವರ ಈ ನಡೆ ರಾಜಕೀಯ ವಲಯದಲ್ಲಿ ಅಚ್ಚರಿಗೆ ಕಾರಣವಾಗಿದೆ. ಶುಕ್ರವಾರ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ರಾಜೇ ಅವರ ಪುತ್ರ ದುಷ್ಯಂತ್ ಸಿಂಗ್ ಮಾಡಿದ ಭಾಷಣದ ಬಳಿಕ ವ್ಯಕ್ತಪಡಿಸಿದ ಅಭಿಪ್ರಾಯಗಳು ತಾಯಿಯಾಗಿಯೇ ವಿನಃ ಯಾವುದೇ ರಾಜಕೀಯ ಸಂಬಂಧ ಹೊಂದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದಾರೆ.

"ದುಷ್ಯಂತ್ ಜನರ ಜತೆಗೆ ಉತ್ತಮ ಸಂಬಂಧ ಹೊಂದಿದ್ದಾರೆ ಎನ್ನುವುದು ಸಂತಸದ ವಿಷಯ. ನಿವೃತ್ತಿಯ ವಿಚಾರಕ್ಕೆ ಬಂದರೆ ರಾಜಸ್ಥಾನ ತೊರೆಯುವ ಯಾವುದೇ ಉದ್ದೇಶ ನನಗಿಲ್ಲ. ಝಾಲ್ವಾರ್ ಜತೆಗೆ ನನ್ನ ಕುಟುಂಬಕ್ಕೆ ಗಾಢ ಸಂಬಂಧ ಇದೆ" ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ ಅವರು, ಜನರಿಗೆ ಕೊಡುಗೆಗಳನ್ನು ನೀಡುವ ಮೂಲಕ ಓಲೈಸಲು ಕಾಂಗ್ರೆಸ್ ಮುಂದಾಗಿದೆ. ಆದರೆ ಸದ್ಯದಲ್ಲೇ ಬಿಜೆಪಿ ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಹಿಡಿಯಲಿದೆ ಎಂದು ಅಭಿಪ್ರಾಯಪಟ್ಟರು.

ಶುಕ್ರವಾರದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ದುಷ್ಯಂತ್ ಮಾತನಾಡಿದ ಬಳಿಕ ಭಾಷಣ ಮಾಡುವ ವೇಳೆ ವಸುಂಧರರಾಜೇ, "ನನ್ನ ಮಗ ದುಷ್ಯಂತ್ನ ಭಾಷಣ ಕೇಳಿದಾಗ, ನನಗೆ ನಾನು ನಿವೃತ್ತಿಯಾಬೇಕು ಎಂಬ ಭಾವನೆ ಬರುತ್ತದೆ. ನಿಮ್ಮ ಪ್ರೀತಿ ಹಾಗೂ ಒಲವು ಆರನನ್ನು ಪ್ರೌಢನನ್ನಾಗಿಸಿದೆ. ನಾನು ಈಗ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ" ಎಂದು ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News