ಕೆಲಸದ ಒತ್ತಡ: ತನಗೆ ತಾನೇ ವಿದ್ಯುತ್ ಶಾಕ್ ನೀಡಿ ಸಾಫ್ಟ್ ವೇರ್ ಇಂಜಿನಿಯರ್ ಆತ್ಮಹತ್ಯೆ

Update: 2024-09-21 11:15 GMT

   ಸಾಂದರ್ಭಿಕ ಚಿತ್ರ

ಚೆನ್ನೈ: ಕೆಲಸದ ಒತ್ತಡ ತಾಳಲಾರದೆ ಸಾಫ್ಟ್ ವೇರ್ ಇಂಜಿನಿಯರ್ ಒಬ್ಬರು ಮನೆಯಲ್ಲಿ ಒಬ್ಬಂಟಿಯಾಗಿದ್ದಾಗ ತಮ್ಮ ಕುತ್ತಿಗೆ ಸುತ್ತ ತಾವೇ ವಿದ್ಯುತ್ ತಂತಿಯನ್ನು ಬಿಗಿದುಕೊಂಡು ವಿದ್ಯುದಾಘಾತಕ್ಕೆ ಬಲಿಯಾಗಿರುವ ಘಟನೆ ಗುರುವಾರ ರಾತ್ರಿ ಮಹಾಬಲಿಪುರಂ ಹೊರ ರಸ್ತೆಯ ತಾಝಂಬುರ್ ನಲ್ಲಿ ನಡೆದಿದೆ ಎಂದು ವರದಿಯಾಗಿದೆ.

ದೇವಾಲಯಕ್ಕೆ ತೆರಳಿದ್ದ ಮೃತ ಸಾಫ್ಟ್ ವೇರ್ ಇಂಜಿನಿಯರ್ ಪತ್ನಿ, ಮನೆಗೆ ಮರಳಿದಾಗ ಕುತ್ತಿಗೆ ಸುತ್ತ ವಿದ್ಯುತ್ ತಂತಿ ಬಿಗಿದುಕೊಂಡು ಪತಿ ಪ್ರಜ್ಞಾಹೀನ ಸ್ಥಿತಿಯಲ್ಲಿ ನೆಲದ ಮೇಲೆ ಬಿದ್ದಿರುವುದನ್ನು ಕಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ವ್ಯಕ್ತಿಯನ್ನು ಥೇನಿ ಗ್ರಾಮದ ಕಾರ್ತಿಕೇಯನ್ (38) ಎಂದು ಗುರುತಿಸಲಾಗಿದ್ದು, ಅವರು ಕಳೆದ 15 ವರ್ಷಗಳಿಂದ ಪಲ್ಲವರಂನಲ್ಲಿರುವ ಸಾಫ್ಟ್ ವೇರ್ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಅವರು ತಮ್ಮ ಪತ್ನಿ ಕೆ.ಜಯರಾಣಿ ಹಾಗೂ ಕ್ರಮವಾಗಿ 10 ಮತ್ತು 8 ವರ್ಷದ ತಮ್ಮ ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದರು.

ಕೆಲಸದ ಒತ್ತಡ ತಾಳಲಾರದೆ ಖಿನ್ನತೆಗೊಳಗಾಗಿದ್ದ ಮೃತ ಕಾರ್ತಿಕೇಯನ್, ಕಳೆದೆರಡು ತಿಂಗಳಿನಿಂದ ಮೇಡವಕ್ಕಂನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿರುವ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News