ಕಲಾಪದ ವೇಳೆ ಅಶಿಸ್ತು: ಜಿಲ್ಲಾ ನ್ಯಾಯಾಧೀಶರನ್ನು ಕರ್ತವ್ಯದಿಂದ ಹಿಂದಕ್ಕೆ ಕರೆಸಿಕೊಂಡ ದಿಲ್ಲಿ ಹೈಕೋರ್ಟ್
ಹೊಸದಿಲ್ಲಿ: ನೈರುತ್ಯ ದ್ವಾರಕಾದಲ್ಲಿ ಜಿಲ್ಲಾ ನ್ಯಾಯಾಧೀಶರಾಗಿದ್ದ ಅಮನ್ ಪ್ರತಾಪ್ ಸಿಂಗ್ ಅವರನ್ನು ದಿಲ್ಲಿ ಹೈಕೋರ್ಟ್ ನ್ಯಾಯಾಂಗ ಕರ್ತವ್ಯದಿಂದ ಹಿಂದಕ್ಕೆ ಕರೆಸಿಕೊಂಡಿದೆ.
ನ್ಯಾಯಾಧೀಶರ ಅಶಿಸ್ತು, ಪ್ರಕರಣಗಳ ವಿಲೇವಾರಿಯಲ್ಲಿ ಇಳಿಕೆ ಮತ್ತು ನ್ಯಾಯಾಲಯದ ವೇಳಾಪಟ್ಟಿಯನ್ನು ಅನುಸರಿಸಲು ವಿಫಲರಾದ ಕಾರಣ ಕಳೆದ ವಾರ ನಡೆದ ನ್ಯಾಯಾಲಯಕ್ಕೆ ಸಂಬಂಧಿಸಿದ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗಿದೆ.
ಸೆ. 19ರಂದು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಹೊರಡಿಸಿದ ಅಧಿಕೃತ ಆದೇಶದಲ್ಲಿ ತಕ್ಷಣಕ್ಕೆ ಜಾರಿಗೆ ಬರುವಂತೆ ಸಿಂಗ್ ಅವರನ್ನು ನ್ಯಾಯಾಂಗ ಕರ್ತವ್ಯದಿಂದ ಹಿಂದಕ್ಕೆ ಕರೆಸಿಕೊಳ್ಳುವುದಾಗಿ ಹೇಳಲಾಗಿದೆ.
ನ್ಯಾಯಾಲಯದ ಕೊಠಡಿಯಲ್ಲಿ ನ್ಯಾಯಾಧೀಶರು ಅನುಚಿತವಾಗಿ ವರ್ತಿಸಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬೆನ್ನಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಮೂಲಗಳು ತಿಳಿಸಿದೆ.
ನ್ಯಾಯಾಧೀಶರು ನ್ಯಾಯಾಲಯದ ಕಲಾಪದ ವೇಳೆ ತಮ್ಮ ಕುರ್ಚಿಯಿಂದ ಎದ್ದುನಿಂತು ನ್ಯಾಯಾಲಯದ ಸಿಬ್ಬಂದಿ ಮತ್ತು ಆರೋಪಿ ಪರ ವಕೀಲರನ್ನು ಉದ್ದೇಶಿಸಿ ಕೂಗಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.