ಮಹಿಳಾ ಪ್ರಾತಿನಿಧ್ಯ ಕಟ್ಟಕಡೆಯ ಆದ್ಯತೆಯೇ ಆಗಿರುತ್ತದೆ ಏಕೆ?
ನಾವು ಕಟ್ಟಿಕೊಂಡಿರುವ ಎಡಪಂಥೀಯ, ಪ್ರಜಾಸತ್ತಾತ್ಮಕ, ಪ್ರಗತಿಪರ, ವೈಚಾರಿಕ ಹೋರಾಟಗಳ ಮಧ್ಯದಿಂದಲೇ ಲಿಂಗಸೂಕ್ಷ್ಮತೆ ಮತ್ತು ಮಹಿಳಾ ಸಂವೇದನೆಯನ್ನು ಮತ್ತಷ್ಟು ಗಟ್ಟಿಗೊಳಿಸುವ ಪ್ರಯತ್ನಗಳನ್ನು ಮಾಡಬೇಕಿದೆ. ಪ್ರತಿಯೊಂದು ಹೆಜ್ಜೆಯಲ್ಲೂ ಒಳಗೊಳ್ಳುವಿಕೆಯ ತಾತ್ವಿಕತೆಯನ್ನು ನಿರ್ಲಕ್ಷಿಸದೆ, ಮಹಿಳಾ ಪ್ರಾತಿನಿಧ್ಯದ ಬಗ್ಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಸಾಹಿತ್ಯಕ, ಬೌದ್ಧಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ವೇದಿಕೆಗಳಲ್ಲಿ ಕಾಣಬಹುದಾದ ಪ್ರಾತಿನಿಧ್ಯವನ್ನೂ ಮೀರಿ, ಸಮಾಜದಲ್ಲಿ ಲಿಂಗ ಸೂಕ್ಷ್ಮತೆಯನ್ನೊಳಗೊಂಡ ಒಳಗೊಳ್ಳುವಿಕೆಯತ್ತ ನಮ್ಮ ಆಲೋಚನೆಗಳು ಹರಿಯಬೇಕಿದೆ. ಆಗ ಮಾತ್ರ ನಾವು ಎತ್ತರದ ದನಿಯಲ್ಲಿ ಮಾತನಾಡುವ ಮಹಿಳಾ ಸಮಾನತೆ ಅಥವಾ ಸಬಲೀಕರಣ ಎಂಬ ಪದಗಳ ಔದಾತ್ಯವೂ ಸಾರ್ಥಕವಾಗುತ್ತದೆ.
ನಮ್ಮ ಸಾಮಾಜಿಕ ಅರಿವು ಹಾಗೂ ಸಾರ್ವಜನಿಕ ಪ್ರಜ್ಞೆ ಮೊನಚಾಗುತ್ತಿರುವಂತೆಲ್ಲಾ ನಮ್ಮೊಳಗಿನ ಪೂರ್ವಾಗ್ರಹಗಳೂ ಮರೆಯಾಗುತ್ತಾ ಹೋಗಬೇಕು ಎನ್ನುವುದು ನಾಗರಿಕತೆಯನ್ನು ಬಯಸುವ ಯಾವುದೇ ಸಮಾಜದ ಗುರಿಯಾಗಬೇಕು. ಭಾರತದಂತಹ ಶ್ರೇಣೀಕೃತ-ಸಾಂಪ್ರದಾಯಿಕ ಸಮಾಜದಲ್ಲಿ, ಪ್ರಾಚೀನ ನಡವಳಿಕೆಗಳು ಇಂದಿಗೂ ಜೀವಂತವಾಗಿರುವುದರಿಂದ, ಸಮಾಜವು ಪ್ರಬುದ್ಧತೆಯನ್ನು ಪಡೆದುಕೊಳ್ಳಲು ಈ ಗುರಿ ಸಾಧನೆ ನಮ್ಮ ಪ್ರಥಮ ಆದ್ಯತೆಯೂ ಆಗಬೇಕು. ಈ ಮಾರ್ಗದಲ್ಲಿ ಸಾಗುತ್ತಲೇ ನಾವು ಬೆಳೆದುಬಂದಿರುವ ವಿಶಾಲ ಸಮಾಜದ ಸಂಕುಚಿತ ವಾತಾವರಣಗಳಲ್ಲಿ ರೂಢಿಸಿಕೊಂಡಿರಬಹುದಾದ ಕೆಲವು ಪ್ರಾಚೀನ/ಹಳೆಯ ಮೌಲ್ಯಗಳನ್ನು ದಾಟಿ ಹೋಗುವ ವ್ಯವಧಾನವನ್ನು ಬೆಳೆಸಿಕೊಳ್ಳುವುದೂ ಅಷ್ಟೇ ಅಪೇಕ್ಷಿತವಾದದ್ದು.
ಭಾರತ ಎಷ್ಟೇ ಆಧುನಿಕತೆಗೆ ತೆರೆದುಕೊಂಡು, ಡಿಜಿಟಲ್ ತಂತ್ರಜ್ಞಾನ ಯುಗದಲ್ಲಿ ಶಿಖರಪ್ರಾಯ ಹಂತವನ್ನು ತಲುಪಿದ್ದರೂ ಇಲ್ಲಿ ತಳಮಟ್ಟದ ಸಾರ್ವಜನಿಕ ಜೀವನವನ್ನು ನಿರ್ದೇಶಿಸುವ ಮತ್ತು ನಿಯಂತ್ರಿಸುವ ಹಿತಾಸಕ್ತಿಗಳು ತಮ್ಮ ಪ್ರಾಚೀನ, ಕೆಲವೊಮ್ಮೆ ಪ್ರತಿಗಾಮಿ ಲಕ್ಷಣಗಳನ್ನು ಉಳಿಸಿಕೊಂಡೇ ಬಂದಿದೆ. ಇಂತಹ ಲಕ್ಷಣಗಳಲ್ಲಿ ಪ್ರಧಾನವಾಗಿ ಕಾಣಬಹುದಾದದ್ದು ಪಿತೃಪ್ರಧಾನತೆ ಮತ್ತು ಪುರುಷಾಧಿಪತ್ಯ. ಹಾಗಾಗಿಯೇ ಕಳೆದ ಹತ್ತು ಹದಿನೈದು ವರ್ಷಗಳ ಸಾರ್ವಜನಿಕ ಸಂಕಥನಗಳಲ್ಲಿ, ಸಾಮಾಜಿಕ-ಸಾಂಸ್ಕೃತಿಕ ಆವರಣಗಳಲ್ಲಿ ಲಿಂಗ ಸೂಕ್ಷ್ಮತೆ, ಮಹಿಳಾ ಪ್ರಾತಿನಿಧ್ಯ ಮೊದಲಾದ ವಿಚಾರಗಳು ಪದೇ ಪದೇ ಚರ್ಚೆಗೆ ಒಳಪಡುತ್ತಿವೆ. ಅಧಿಕಾರ ರಾಜಕಾರಣದಲ್ಲಿ, ಆಳ್ವಿಕೆಯ ಕೇಂದ್ರಗಳಲ್ಲಿ ಲಿಂಗತ್ವ ಪ್ರಾತಿನಿಧ್ಯವು ಕಾಣಲಾಗುತ್ತಿದ್ದರೂ, ಅಲ್ಲೂ ಸಹ ಲಿಂಗ ಸೂಕ್ಷ್ಮತೆಯ ಕೊರತೆ ಇರುವುದು ಢಾಳಾಗಿ ಗೋಚರಿಸುತ್ತದೆ.
‘ಪ್ರಾತಿನಿಧ್ಯ’ದ ವಿಶಾಲ ನೆಲೆಯಲ್ಲಿ
ಮಹಿಳಾ ಪ್ರಾತಿನಿಧ್ಯ ಎಂಬ ವಿಶಾಲ ಕ್ಯಾನ್ವಾಸಿನಲ್ಲಿ ನೋಡಿದಾಗ ಪಿತೃಪ್ರಧಾನ ಮೌಲ್ಯಗಳಿಂದಲೇ ನಿರ್ದೇಶಿಸಲ್ಪಡುವ ಒಂದು ಸಮಾಜದಲ್ಲಿ ‘ಪ್ರಾತಿನಿಧ್ಯ’ ಎನ್ನುವುದು ಕೊಡುವಂತಹ ಪ್ರಕ್ರಿಯೆಯಾಗಿಯೇ ಪರಿಗಣಿಸಲ್ಪಡುತ್ತದೆ ಅಥವಾ ಮಹಿಳಾ ಸಂಕುಲ ಪಡೆದುಕೊಳ್ಳಬೇಕಾದ ಸವಲತ್ತು/ಅವಕಾಶದಂತೆ ತೋರುತ್ತದೆ. ಮೂಲತಃ ಈ ‘ಕೊಡುವ’ ಅಥವಾ ‘ಅವಕಾಶ ಕಲ್ಪಿಸುವ’ ಧೋರಣೆಯೇ ಪುರುಷ ಪ್ರಧಾನ ಸಮಾಜದಲ್ಲಿ ಯಜಮಾನಿಕೆಯ ಲಕ್ಷಣಗಳು ಜೀವಂತವಾಗಿರುವುದನ್ನು ಸೂಚಿಸುತ್ತದೆ. ಸಾಹಿತ್ಯ ಸಮ್ಮೇಳನಗಳಿಂದ ಹಿಡಿದು ವಿಚಾರ ಮಂಥನದ ಬೌದ್ಧಿಕ ಸಭೆಗಳವರೆಗೆ ವೇದಿಕೆಯನ್ನಲಂಕರಿಸುವ ವ್ಯಕ್ತಿಗಳತ್ತ ಗಮನಹರಿಸಿದಾಗೆಲ್ಲಾ, ಇಲ್ಲೇಕೆ ಮಹಿಳೆಯರೇ ಇಲ್ಲ ಎಂಬ ಪ್ರಶ್ನೆ ಮೂಡಿದರೆ ಅದನ್ನು ಅಸಹಜವೆಂದೇನೂ ಭಾವಿಸಬೇಕಿಲ್ಲ. ಏಕೆಂದರೆ ಆಯೋಜಕರೆನಿಸಿಕೊಂಡವರಲ್ಲಿಯೂ ಈ ಪಿತೃಪ್ರಧಾನತೆಯ ಲಕ್ಷಣಗಳು ಇರಲಿಕ್ಕೆ ಸಾಧ್ಯ.
ಹಿಂದಿರುಗಿ ನೋಡಿದಾಗ ಮೂರು ದಶಕಗಳ ಮುನ್ನವೂ ಈ ಪ್ರಶ್ನೆ ಅಷ್ಟೊಂದು ಗಂಭೀರವಾಗಿ ಮುನ್ನೆಲೆಗೆ ಬರುತ್ತಿರಲಿಲ್ಲ. ಮಹಿಳಾ ಸಮುದಾಯದ ಪ್ರಾತಿನಿಧ್ಯದ ಹಕ್ಕೊತ್ತಾಯಗಳು ಗಟ್ಟಿಯಾಗಿ ಕೇಳಿಬರುತ್ತಿದ್ದರೂ, ಅದಕ್ಕೆ ಸಮಾಜದ ಸ್ಪಂದನೆ ಅಪೇಕ್ಷಿತ ಮಟ್ಟದಲ್ಲಿರುತ್ತಿರಲಿಲ್ಲ. ಕಳೆದ ಹಲವು ದಶಕಗಳಲ್ಲಿ ತೀವ್ರವಾಗುತ್ತಿರುವ ಮಹಿಳಾ ದೌರ್ಜನ್ಯ ಪ್ರಕರಣಗಳು ಹಾಗೂ ಇವುಗಳ ವಿರುದ್ಧ ವಿಶಾಲ ಸಮಾಜದ ಎಲ್ಲ ಸ್ತರಗಳಲ್ಲಿ ಮೂಡುತ್ತಿರುವ ಪ್ರತಿರೋಧದ ದನಿಗಳು ಸಮಾಜದ ಒಂದು ಸ್ತರದಲ್ಲಾದರೂ ಪಿತೃಪ್ರಧಾನ ಮೌಲ್ಯಗಳನ್ನು ಭೇದಿಸುವಲ್ಲಿ ಸಫಲವಾಗಿವೆ ಎನಿಸುತ್ತದೆ. ಈ ನಿಟ್ಟಿನಲ್ಲೇ ಪ್ರಗತಿಪರ ಅಥವಾ ಪ್ರಜಾಸತ್ತಾತ್ಮಕ ಹೋರಾಟಗಳ ನೆಲೆಯಲ್ಲಿ ಮಹಿಳಾ ಪ್ರಾತಿನಿಧ್ಯಕ್ಕೆ ಹೆಚ್ಚು ಒತ್ತು ನೀಡುವ ಒಂದು ಪ್ರಜ್ಞಾವಂತಿಕೆ ಬೆಳೆದುಬಂದಿರುವುದನ್ನು ಗಮನಿಸಬಹುದು. ಮಹಿಳಾ ಸಂಕುಲವು ಸಾಂಪ್ರದಾಯಿಕ ಸಮಾಜದ ಎಲ್ಲ ಅಡೆತಡೆಗಳನ್ನೂ ಧಿಕ್ಕರಿಸುತ್ತಲೇ ದಾಟಿ ಬರುತ್ತಿರುವ ಸಂದರ್ಭದಲ್ಲಿ ‘ಮಹಿಳಾ ಪ್ರಾತಿನಿಧ್ಯ’ ಎನ್ನುವುದು ಸಾಂಘಿಕ ವೇದಿಕೆಗಳಿಗೆ/ಸಾಂಸ್ಥಿಕ ಸ್ಥಾನಗಳಿಗೆ ಸೀಮಿತವಾಗದೆ ಆಳ್ವಿಕೆಯ ಕೇಂದ್ರಗಳವರೆಗೂ ವಿಸ್ತರಿಸಿರುವುದೂ ವಾಸ್ತವ.
ಆದರೆ ಇದೇ ವೇಗದಲ್ಲಿ ಸಮಾಜದ ಲಿಂಗ ಸೂಕ್ಷ್ಮತೆಯೂ ತೀಕ್ಷ್ಣವಾಗಿದೆಯೇ ಎಂದು ನೋಡಿದಾಗ ನಿರಾಸೆಯಾಗುತ್ತದೆ. ಇದಕ್ಕೆ ಕಾರಣಗಳೂ ಇಲ್ಲದಿಲ್ಲ. ಮಹಿಳಾ ಸಮುದಾಯದ ದೃಷ್ಟಿಯಿಂದ ನೋಡಿದಾಗ ಸಾಮಾನ್ಯವಾಗಿ ಕೇವಲ ಉಪಸ್ಥಿತಿಯನ್ನೇ ಪ್ರಾತಿನಿಧ್ಯ ಎಂದು ಪರಿಭಾವಿಸುವ ಮನಸ್ಥಿತಿ ಎಲ್ಲ ಸ್ತರಗಳಲ್ಲೂ ಕಾಣುತ್ತದೆ. ಸಾಂಸ್ಥಿಕ ಹುದ್ದೆಗಳು ಅಥವಾ ಸಾಂಘಿಕ ಸ್ಥಾನಮಾನಗಳು ಈ ಪ್ರಾತಿನಿಧ್ಯವನ್ನು ಸಂಕೇತಿಸುವುದರಿಂದ ಇದನ್ನೂ ಮೀರಿದ ಆಲೋಚನೆಗೆ ತೆರೆದುಕೊಳ್ಳದ ಒಂದು ಮನಸ್ಥಿತಿಯನ್ನೂ ಗುರುತಿಸಬಹುದು. ಇಲ್ಲಿ ಲಿಂಗ ಸೂಕ್ಷ್ಮತೆಯ ಕೊರತೆಯನ್ನು ಸ್ಪಷ್ಟವಾಗಿ ಗುರುತಿಸಲು ಸಾಧ್ಯ. ಪ್ರತಿಯೊಂದು ವೇದಿಕೆಯಲ್ಲೂ ಇಂತಿಷ್ಟು ಮಹಿಳೆಯರು ಇರಬೇಕು ಎಂಬ ನಿಯಮವನ್ನು ವಿಧಿಸಿಕೊಳ್ಳುವುದು ಒಂದು ರೀತಿಯಲ್ಲಿ ಅಪೇಕ್ಷಣೀಯ ಎನಿಸಿದರೂ ಇದನ್ನೂ ಮೀರಿ ಯೋಚಿಸುವ ವ್ಯವಧಾನವನ್ನು ಸಮಾಜ ಬೆಳೆಸಿಕೊಳ್ಳಬೇಕಿದೆ.
ಲಿಂಗ ಸೂಕ್ಷ್ಮತೆ ಮತ್ತು ಪ್ರಾತಿನಿಧ್ಯ
ಏಕೆಂದರೆ ಸಮಾಜದ ಆಗುಹೋಗುಗಳಲ್ಲಿ, ಸಾಮಾಜಿಕ ಪಲ್ಲಟಗಳಲ್ಲಿ, ಸಾಂಸ್ಕೃತಿಕ ವಾಹಿನಿಯಲ್ಲಿ ಮಹಿಳಾ ಸಮೂಹ ತನ್ನದೇ ಆದ ಜವಾಬ್ದಾರಿಯುತ ಸ್ಥಾನವನ್ನು ಗಳಿಸಿಕೊಂಡಿದೆ/ಉಳಿಸಿಕೊಂಡು ಬಂದಿದೆ. ಹಾಗಾಗಿ ಇಂದಿಗೂ ಪಿತೃಪ್ರಧಾನ ಮೌಲ್ಯಗಳಿಂದಲೇ ನಿರ್ದೇಶಿಸಲ್ಪಡುವ ಸಮಾಜವು ‘ಅವಕಾಶ ಕಲ್ಪಿಸುವ’ ಸೀಮಿತ ಯಜಮಾನಿಕೆಯ ಧೋರಣೆಯಿಂದ ಹೊರಬಂದು ಪಾಲ್ಗೊಳ್ಳುವಿಕೆ ಅಥವಾ ಒಳಗೊಳ್ಳುವಿಕೆಯತ್ತ ಯೋಚಿಸುವುದು ಪ್ರಬುದ್ಧತೆಯ ಲಕ್ಷಣವಾಗಿ ಕಾಣುತ್ತದೆ. ಸಮಕಾಲೀನ ಸಂದರ್ಭದ ಸಾಮಾಜಿಕ ಚಳುವಳಿಗಳಲ್ಲಿ, ಸಾಹಿತ್ಯಕ ಚಟುವಟಿಕೆಗಳಲ್ಲಿ, ಸಾಂಸ್ಕೃತಿಕ ಸಮಾರಂಭಗಳಲ್ಲಿ ಮತ್ತು ರಾಜಕೀಯ ಹೋರಾಟಗಳಲ್ಲೂ ಈ ಒಳಗೊಳ್ಳುವಿಕೆಗೆ ಹೆಚ್ಚು ಒತ್ತು ನೀಡಬೇಕಿದೆ. ಮಹಿಳಾ ಪ್ರಾತಿನಿಧ್ಯ ಎನ್ನುವುದು ಒಂದು ಸಹಜ ಪ್ರಕ್ರಿಯೆಯಾಗಿ ಸಾಮಾಜಿಕ-ಸಾಂಸ್ಕೃತಿಕ ಬದುಕಿನಲ್ಲಿ ವ್ಯಕ್ತವಾಗಬೇಕೇ ಹೊರತು, ಮತ್ತೊಂದು ಸಮಾಜ ಕಲ್ಪಿಸುವ sಠಿಚಿಛಿe ಆಗಿ ಕಾಣಕೂಡದು.
ಈ ಬೌದ್ಧಿಕ ನೆಲೆಯಲ್ಲಿ ನಾವು ಲಿಂಗಸೂಕ್ಷ್ಮತೆಯ ಕೊರತೆ ಅಥವಾ ಅಭಾವವನ್ನು ಗುರುತಿಸಿ, ಸರಿಪಡಿಸಬೇಕಿದೆ. ಈ ಸರಿಪಡಿಸುವಿಕೆಯ ಪ್ರಕ್ರಿಯೆ ಸಮಾಜದ ಒಳಗಿನಿಂದ ಹೊರಮೂಡುವ ಸಹಜಾಭಿವ್ಯಕ್ತಿಯಾಗಿರಬೇಕೇ ಹೊರತು, ಮಹಿಳಾ ಸಮೂಹದ ಆಗ್ರಹಕ್ಕೆ ಸ್ಪಂದಿಸುವ ಪ್ರಕ್ರಿಯೆಯಾಗಿ ಇರಕೂಡದು. ಒಳಗೊಳ್ಳುವಿಕೆಯನ್ನು ಬಯಸುವ ಯಾವುದೇ ಪ್ರಜ್ಞಾವಂತ ಸಮಾಜ ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸಬೇಕಿದೆ. ಪ್ರಸ್ತುತ ಸಾಂಸ್ಕೃತಿಕ ವಾತಾವರಣದಲ್ಲಿ ಲಿಂಗ ಸೂಕ್ಷ್ಮತೆಯನ್ನೂ ಪುನರ್ನಿರ್ವಚಿಸುವ ಅಗತ್ಯತೆ ಇದೆ. ಹಾಸನದಲ್ಲಿ ನಡೆದಿರುವ ಭೀಕರ ಅಮಾನುಷ ಘಟನೆಗಳ ಹಿನ್ನೆಲೆಯಲ್ಲಿ ನೋಡಿದಾಗ, ಹೆಣ್ತನದ ಘನತೆಗೆ ಎಂತಹ ಆಘಾತಕಾರಿ ಧಕ್ಕೆ ಉಂಟಾಗುತ್ತಿದೆ ಎನ್ನುವುದು ಅರಿವಾಗುತ್ತದೆ. ಈ ಪಾಶವೀ ದೌರ್ಜನ್ಯಗಳಿಗೆ ಸ್ಪಂದಿಸುವ ಸಮಾಜವು, ನೊಂದ ಮಹಿಳೆಯರಿಗೆ ಅನುಕಂಪ, ಪಶ್ಚಾತ್ತಾಪ ಮತ್ತು ಸಹಾನುಭೂತಿ ತೋರುವುದನ್ನೂ ಮೀರಿ, ಸಮಸ್ತ ಮಹಿಳಾ ಸಂಕುಲ ಎದುರಿಸುತ್ತಿರುವ ಪುರುಷಾಧಿಪತ್ಯದ ಮೂಲ ಬೇರುಗಳನ್ನೇ ಕಿತ್ತೊಗೆಯುವ ನಿಟ್ಟಿನಲ್ಲಿ ಕ್ರಿಯಾಶೀಲವಾಗಬೇಕಿದೆ.
ಈ ಹಂತದಲ್ಲಿ ಲಿಂಗ ಸೂಕ್ಷ್ಮತೆಯ ಅರಿವು ಸಮಾಜದ ಎಲ್ಲ ವಲಯಗಳಲ್ಲೂ, ಎಲ್ಲ ಸ್ತರಗಳಲ್ಲೂ, ಎಲ್ಲ ಆಯಾಮಗಳಲ್ಲೂ ಮೂಡಬೇಕಾದ ತುರ್ತು ನಮಗೆ ಕಾಣುತ್ತಿದೆ. ಮಹಿಳಾ ಸಂಘಟನೆಗಳು ಸಂಘಟಿತವಾಗಿ ನಡೆಸುತ್ತಿರುವ ‘ಅರಿವಿನ ಪಯಣ’ ಎಂಬ ಜಾಗೃತಿಯ ಹೆಜ್ಜೆಗಳು ಯುವ ಸಮುದಾಯದ ನಡುವೆ ಲಿಂಗ ಸೂಕ್ಷ್ಮತೆಯ ಪ್ರಜ್ಞೆಯನ್ನು ಗಟ್ಟಿಗೊಳಿಸುವ ಕ್ರಾಂತಿಕಾರಿ ಕಾರ್ಯಕ್ರಮಗಳಾಗಿ ಕಾಣುತ್ತವೆ. ಆದರೆ ಈ ‘ಅರಿವಿನ ಪಯಣ’ದಲ್ಲಿ ಅರಿವು ಮೂಡಿಸಿಕೊಳ್ಳಬೇಕಾದ ಪುರುಷ ಸಮಾಜವೂ ತನ್ನ ಜವಾಬ್ದಾರಿಯನ್ನರಿತು ಹೆಗಲು ನೀಡುವ ಅನಿವಾರ್ಯತೆ ಇಂದು ಎದುರಾಗಿದೆ. ಸಂಪ್ರದಾಯ, ಪ್ರಾಚೀನ ಪರಂಪರೆ ಹಾಗೂ ಧಾರ್ಮಿಕ ಚೌಕಟ್ಟುಗಳಲ್ಲಿ ಬಂಧಿತವಾಗಿರುವ ಪುರುಷ ಸಮಾಜದ ಒಂದು ವರ್ಗಕ್ಕೆ ಇದು ಸಹಜವಾಗಿಯೇ ಅಪಥ್ಯವಾಗೇ ಕಾಣುತ್ತದೆ. ಆದರೆ ಈ ಸಮಾಜದೊಳಗೂ ಒಂದು ಪ್ರಜ್ಞಾವಂತ ವಲಯ ಇರುವುದರಿಂದ, ಈ ಹಿತವಲಯದ ಪ್ರಜ್ಞಾವಂತರು ತಮ್ಮ ಭದ್ರಕೋಶಗಳನ್ನು ಕಳಚಿಕೊಂಡು ಹೊರಬರಬೇಕಿದೆ.
ಅಂತರ್ಜಾತಿ ಸಂಬಂಧದಲ್ಲಿ ಮಹಿಳೆ
ತನ್ನ ಜಾತಿ-ಮತದ ಭದ್ರಕೋಟೆಗಳನ್ನು ಭೇದಿಸಿ ಮತ್ತೊಂದು ಸಮಾಜವನ್ನು ಪ್ರವೇಶಿಸುವ ಹೆಣ್ಣು ತನ್ನ ಸಂಗಾತಿಯಲ್ಲಿ ಪುರುಷಾಧಿಪತ್ಯದ ಛಾಯೆಯನ್ನು ಕಂಡರೂ ಅರಗಿಸಿಕೊಳ್ಳುವುದು ಕಷ್ಟವಾಗುತ್ತದೆ. ತಮ್ಮ ಜಾತಿ ಕಟ್ಟಳೆಗಳನ್ನು ಮೀರಿ ವಿವಾಹವಾಗುವ ಪುರುಷರು ಜಾತಿ ಅಸ್ಮಿತೆಯೊಂದಿಗೇ ಪಿತೃಪ್ರಧಾನ ಮೌಲ್ಯಗಳನ್ನೂ ಕಳಚಿಕೊಂಡು ಮುಂದುವರಿಯುವುದು ಅತ್ಯವಶ್ಯ. ಇಲ್ಲವಾದರೆ ಜಾತಿಯಷ್ಟೇ ಕ್ರೂರವಾದ ಪುರುಷಾಧಿಪತ್ಯವು ವಿವಾಹಿತ ಮಹಿಳೆಯನ್ನು ಜೀವನವಿಡೀ ಬಾಧಿಸತೊಡಗುತ್ತದೆ. ಪಿತೃಪ್ರಧಾನತೆ ಮತ್ತು ಜಾತಿ ಅಹಮಿಕೆ ಇವೆರಡೂ ಒಟ್ಟೊಟ್ಟಿಗೇ ಸಾಗುವ ವಿದ್ಯಮಾನಗಳಾಗಿರುವುದರಿಂದ, ಒಂದನ್ನು ತ್ಯಜಿಸಿ ಮತ್ತೊಂದನ್ನು ಅನುಸರಿಸುವುದು ಅಂತರ್ಜಾತಿ ವಿವಾಹದ ಮೂಲ ಆಶಯವನ್ನೇ ಮಣ್ಣುಗೂಡಿಸುತ್ತದೆ. ಹಾಗಾಗಿ ಅಂತರ್ಜಾತಿ/ಅಂತರ್ಧರ್ಮೀಯ ವಿವಾಹ ಸಂಬಂಧಗಳಲ್ಲಿ ಲಿಂಗ ಸೂಕ್ಷ್ಮತೆಯನ್ನು ಬೆಳೆಸಿಕೊಂಡು, ಪಿತೃಪ್ರಧಾನತೆಯ ಮೌಲ್ಯಗಳನ್ನು ಸಂಪೂರ್ಣವಾಗಿ ಧಿಕ್ಕರಿಸುವುದು ಪುರುಷ ಸಮಾಜದ ಪ್ರಥಮ ಆದ್ಯತೆಯಾಗಬೇಕಾಗುತ್ತದೆ.
ಈ ನಿಟ್ಟಿನಲ್ಲೇ ಜಾತಿ ವಿನಾಶ ವೇದಿಕೆಗಳು, ಅಂತರ್ಜಾತಿ ವಿವಾಹಗಳನ್ನು ಏರ್ಪಡಿಸುವ ಸಂಘಟನೆಗಳು ತಮ್ಮ ಪ್ರತಿಯೊಂದು ಕ್ರಿಯೆಯಲ್ಲೂ ಲಿಂಗ ಸೂಕ್ಷ್ಮತೆಯ ಕೊರತೆ ಕಾಣದಂತೆ ಎಚ್ಚರವಹಿಸಬೇಕಾಗುತ್ತದೆ. ‘ಪ್ರಾತಿನಿಧ್ಯ’ ಎಂಬ ಸಂಕುಚಿತ ಮನೋಭಾವದಿಂದ ‘ಒಳಗೊಳ್ಳುವಿಕೆ’ಯ ವಿಶಾಲ ಧೋರಣೆಯತ್ತ ಈ ಸಂಘಟನೆಗಳು ಹೆಚ್ಚು ಹೊರಳುವ ಅವಶ್ಯಕತೆ ಇಂದಿದೆ. ಅಂತರ್ಜಾತಿ-ಅಂತರ್ಧರ್ಮೀಯ ವಿವಾಹಗಳಲ್ಲಿ ಅತ್ಯಂತ ಕ್ಲಿಷ್ಟ, ಸಂಕೀರ್ಣ ಸವಾಲುಗಳನ್ನು ಮಹಿಳೆಯೇ ಎದುರಿಸುವುದರಿಂದ, ಈ ವೇದಿಕೆಗಳಲ್ಲಿ ‘ಮಹಿಳಾ ಪ್ರಾತಿನಿಧ್ಯ’ಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕಾಗುತ್ತದೆ. ಇತ್ತೀಚೆಗೆ ಮೈಸೂರಿನಲ್ಲಿ ಜನಸ್ಪಂದನ ಟ್ರಸ್ಟ್-ಮಾನವ ಮಂಟಪ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಅಂತರ್ಜಾತಿ ವಿವಾಹಿತರ ಸಭೆ, ಅಂತರ್ಜಾತಿ ದಂಪತಿಗಳ ನೋಂದಣಿ ಮಾಡಿಸುವ ವೆಬ್‌ಸೈಟ್ ಉದ್ಘಾಟನೆಯ ಸಮಾರಂಭದಲ್ಲಿ ಈ ಪ್ರಾತಿನಿಧ್ಯ ಅಥವಾ ಒಳಗೊಳ್ಳುವಿಕೆಯ ಕೊರತೆ ನೇರವಾಗಿಯೇ ಕಾಣುವಂತಿದ್ದುದು ವಿಪರ್ಯಾಸ.
ಮಹಿಳೆಯೇ ಅವರ ಸುತ್ತಲಿನ ನಿತ್ಯ ಬದುಕಿನಲ್ಲಿರಬಹುದಾದ ಇದರ ಜಟಿಲತೆಯನ್ನೂ, ಸಂಕೀರ್ಣತೆಗಳನ್ನೂ ಗ್ರಹಿಸಲು ಸಾಧ್ಯ. ಹಾಗೆಯೇ ಸ್ವ-ಅನುಭವದ ಹಿನ್ನೆಲೆಯಲ್ಲಿ ಅಂತರ್ಜಾತಿ/ಅಂತರ್ಧರ್ಮೀಯ ವಿವಾಹವಾಗುವ ಹೆಣ್ಣಿನ ತೊಳಲಾಟಗಳನ್ನು, ಆಕೆ ಕೌಟುಂಬಿಕ ಬದುಕಿನಲ್ಲಿ ಸಹಜವಾಗಿಯೇ ಎದುರಿಸುವ ಪುರುಷಾಧಿಪತ್ಯದ ಸವಾಲುಗಳನ್ನು, ಹೆಣ್ಣು ಮಾತ್ರ ಸಮರ್ಪಕವಾಗಿ ವ್ಯಾಖ್ಯಾನಿಸಲು ಸಾಧ್ಯ. ಜಾತಿ ವಿನಾಶ ವೇದಿಕೆಗಳು ಇಂತಹ ಮಹಿಳೆಯರಿಗೆ ಹೆಚ್ಚಿನ ಅವಕಾಶ ಕಲ್ಪಿಸುವ ಮೂಲಕ, ಗಂಡಾಳ್ವಿಕೆಯ ಸಮಾಜದ ಅರಿವಿಗೆ ಬಾರದಿರುವ ಒಳಸತ್ಯಗಳನ್ನು ಚರ್ಚೆಗೊಳಪಡಿಸಬೇಕು. ಮೇಲೆ ಉಲ್ಲೇಖಿಸಿದ ಕಾರ್ಯಕ್ರಮ ಅಂತಹ ಒಂದು ಅತ್ಯುತ್ತಮ ಅವಕಾಶವಾಗಿತ್ತು. ಹಾಗಾಗಿಯೇ ಇಲ್ಲಿ ಉಲ್ಲೇಖಿಸಲಾಗಿದೆಯೇ ಹೊರತು, ಟೀಕಾತ್ಮಕವಾಗಿ ಅಲ್ಲ. ಇದು ಆತ್ಮಾವಲೋಕನದ ಪ್ರಶ್ನೆ.
ಸೂಕ್ಷ್ಮತೆ-ಸಂವೇದನೆಗಳ ನೆಲೆಯಲ್ಲಿ
ಇಲ್ಲಿ ಹೇಳಬಯಸುವುದೇನೆಂದರೆ, ವಿಶಾಲ ಸಮಾಜದಲ್ಲಿ ಇಂದಿಗೂ ಗುರುತಿಸಲಾಗದ ಲಿಂಗ ಸೂಕ್ಷ್ಮತೆ ಮತ್ತು ಮಹಿಳಾ ಸಂವೇದನೆಯನ್ನು ತಳಮಟ್ಟದಿಂದಲೇ ಉತ್ತೇಜಿಸುವ ನಿಟ್ಟಿನಲ್ಲಿ, ಜಾತಿಧರ್ಮಗಳ ವಿರುದ್ಧ ನಿರಂತರ ಹೋರಾಟದಲ್ಲಿ ತೊಡಗಿರುವ ಪ್ರಗತಿಪರ ಸಂಘಟನೆಗಳ ಪಾತ್ರ ಮಹತ್ವದ್ದಾಗಿರುತ್ತದೆ. ಪಿತೃಪ್ರಧಾನ ವ್ಯವಸ್ಥೆಯ ಮೂಲ ಬೇರುಗಳನ್ನು ಅಲುಗಾಡಿಸಿ, ಶಿಥಿಲಗೊಳಿಸದೆ ಹೋದರೆ, ಎಂತಹುದೇ ಕ್ರಾಂತಿಕಾರಿ ಮಹಿಳಾ ಸಬಲೀಕರಣದ ಉಪಕ್ರಮಗಳೂ ಸಹ ಗಂಡಾಳ್ವಿಕೆಯ ರಥಚಕ್ರಕ್ಕೆ ಸಿಲುಕಿ ಮರೆಯಾಗಿಬಿಡುತ್ತವೆ. ಹಾಸನದಲ್ಲಿ ನಡೆದಿರುವ ಘಟನೆಗಳು, ಅದರ ಸುತ್ತ ಸೃಷ್ಟಿಯಾಗಿರುವ ಸಾರ್ವಜನಿಕ ಸಂಕಥನಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದು ಅರ್ಥವಾಗುತ್ತದೆ. ಪಿತೃಪ್ರಧಾನತೆ ಸೃಷ್ಟಿಸುವ ಗಂಡಾಳ್ವಿಕೆಯ ನೆಲೆಗಳು, ಪುರುಷಾಧಿಪತ್ಯದ ಚೌಕಟ್ಟುಗಳು, ಇವುಗಳಿಂದ ಪೋಷಿಸಲ್ಪಡುವ ಪ್ರಾಚೀನ ಸಂಪ್ರದಾಯಗಳು ಹಾಗೂ ಧಾರ್ಮಿಕ ಕಟ್ಟಳೆಗಳು ಮಹಿಳಾ ಸಬಲೀಕರಣವನ್ನು ಕೇವಲ ಹಾಳೆಗಳ ಮೇಲೆ ಉಳಿಸಿಬಿಡುತ್ತವೆ.
ಈ ನೆಲೆಯಲ್ಲಿ ನಿಂತು ನೋಡಿದಾಗ ನಾವು ಕಟ್ಟಿಕೊಂಡಿರುವ ಎಡಪಂಥೀಯ, ಪ್ರಜಾಸತ್ತಾತ್ಮಕ, ಪ್ರಗತಿಪರ, ವೈಚಾರಿಕ ಹೋರಾಟಗಳ ಮಧ್ಯದಿಂದಲೇ ಲಿಂಗಸೂಕ್ಷ್ಮತೆ ಮತ್ತು ಮಹಿಳಾ ಸಂವೇದನೆಯನ್ನು ಮತ್ತಷ್ಟು ಗಟ್ಟಿಗೊಳಿಸುವ ಪ್ರಯತ್ನಗಳನ್ನು ಮಾಡಬೇಕಿದೆ. ಪ್ರತಿಯೊಂದು ಹೆಜ್ಜೆಯಲ್ಲೂ ಒಳಗೊಳ್ಳುವಿಕೆಯ ತಾತ್ವಿಕತೆಯನ್ನು ನಿರ್ಲಕ್ಷಿಸದೆ, ಮಹಿಳಾ ಪ್ರಾತಿನಿಧ್ಯದ ಬಗ್ಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಸಾಹಿತ್ಯಕ, ಬೌದ್ಧಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ವೇದಿಕೆಗಳಲ್ಲಿ ಕಾಣಬಹುದಾದ ಪ್ರಾತಿನಿಧ್ಯವನ್ನೂ ಮೀರಿ, ಸಮಾಜದಲ್ಲಿ ಲಿಂಗ ಸೂಕ್ಷ್ಮತೆಯನ್ನೊಳಗೊಂಡ ಒಳಗೊಳ್ಳುವಿಕೆಯತ್ತ ನಮ್ಮ ಆಲೋಚನೆಗಳು ಹರಿಯಬೇಕಿದೆ. ಆಗ ಮಾತ್ರ ನಾವು ಎತ್ತರದ ದನಿಯಲ್ಲಿ ಮಾತನಾಡುವ ಮಹಿಳಾ ಸಮಾನತೆ ಅಥವಾ ಸಬಲೀಕರಣ ಎಂಬ ಪದಗಳ ಔದಾತ್ಯವೂ ಸಾರ್ಥಕವಾಗುತ್ತದೆ.