ಮನಮೋಹನ್ ಸಿಂಗ್ : ಬಂಡವಾಳಶಾಹಿ ಭಾರತದ ಮುಕುಟ, ಬಡವರ ಭಾರತದ ಸಂಕಟ
ಭಾಗ- 2
ಸೌತ್ ಕಮಿಶನ್ ವರದಿಯಲ್ಲಿ ಪ್ರಮುಖವಾಗಿ ಸೂಚಿಸಿರುವ ಪರ್ಯಾಯಗಳನ್ನು ಸಂಕ್ಷಿಪ್ತಗೊಳಿಸಿ ಹೇಳಬಹುದಾದರೆ ಅದು IMF ನಿರ್ದೇಶಿಸುವ Structural Adjustment Program- SAP-ಗೆ ತದ್ವಿರುದ್ಧವಾದ ‘ದೇಶೀಯ ಆರ್ಥಿಕತೆಯನ್ನು ಆಧರಿಸಿದ ಸ್ವಾವಲಂಬನೆ ಮತ್ತು ಅದರ ಆಧಾರದಲ್ಲಿ ಬಡದೇಶಗಳ ನಡುವೆ ಕೊಡುಕೊಳ್ಳುವಿಕೆಗಳ ಸಹಯೋಗ’.
1991ರಲ್ಲಿ ಭಾರತವು ಮನಮೋಹನ್ ಸಿಂಗ್ ನಿರ್ದೇಶನದಲ್ಲಿ ಅನುಸರಿಸಿದ ಮಾರುಕಟ್ಟೆ ಪರ ನೀತಿಗಳನ್ನು ಬಿಟ್ಯರೆ ಬೇರೆ ಯಾವ ಮಾರ್ಗ ಇತ್ತು ಎಂದು ಪ್ರಶ್ನಿಸುವವರು ಮನಮೋಹನ್ ಸಿಂಗ್‌ರೇ ಬರೆದಿದ್ದ ಈ ವರದಿಯನ್ನು ಓದಲೇ ಬೇಕು. ಅದರ ಪೂರ್ಣ ಪಾಠ ಈ ಕೆಳಗಿನ ವೆಬ್ ವಿಳಾಸದಲ್ಲಿ ಸಿಗುತ್ತದೆ:
https://www.southcentre.int/wp-content/uploads/2013/02/The-Challenge-to-the-South_EN.pdf
ವಿಪರ್ಯಾಸವೆಂದರೆ ಈ ವರದಿಯನ್ನು ಬರೆದ ಮನಮೋಹನ್ ಸಿಂಗ್‌ರೇ ಕೇವಲ ಒಂದು ವರ್ಷದ ನಂತರ 1991ರಲ್ಲಿ ತಮ್ಮ ಬಜೆಟ್ ಭಾಷಣದಲ್ಲಿ ಐಎಂಎಫ್ ನಿರ್ದೇಶಿತ ಸುಧಾರಣೆಗಳೆಲ್ಲವನ್ನು ಜಾರಿಗೊಳಿಸುತ್ತಾರೆ ಮತ್ತು ಅದೊಂದೇ ತಕ್ಷಣದ ಬಿಕ್ಕಟಿನಿಂದ ಬಚಾವಾಗಲು ಮಾತ್ರವಲ್ಲ ಅಭಿವೃದ್ಧಿಯ ಮಾರ್ಗ ಎಂದು ಹೇಳುತ್ತಾರೆ. ಹೀಗೆ ಬಡರಾಷ್ಟ್ರಗಳ ಸೌತ್ ಕಮಿಷನ್‌ನ ಸೆಕ್ರೆಟರಿಯಾಗಿದ್ದವರು ಬಂಡವಾಳಶಾಹಿ ರಾಷ್ಟ್ರಗಳ ನಾರ್ತ್ ಬ್ಲಾಕಿನ ದಳಪತಿಯಾಗುತ್ತಾರೆ. ಈ ವೈರುಧ್ಯವು ಮನಮೋಹನ್ ಸಿಂಗ್‌ರ ವ್ಯಕ್ತಿತ್ವದ ಬಗ್ಗೆಯೂ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.
ಹಾಗೆ ನೋಡಿದರೆ ಮಾರುಕಟ್ಟೆಗೆ ಮತ್ತು ಖಾಸಗಿ ಬಂಡವಾಳಕ್ಕೆ ಆರ್ಥಿಕತೆಯ ನೇತೃತ್ವ ವರ್ಗಾಯಿಸುವ ಈ ‘ಐಎಂಎಫ್ ನಿರ್ದೇಶಿತ ಸುಧಾರಣೆಗಳು’ ಸಂವಿಧಾನದಲ್ಲಿ ನಿರ್ದೇಶಿತವಾದ ಪ್ರಭುತ್ವ ನೇತೃತ್ವದ ಕಲ್ಯಾಣ ರಾಜ್ಯದ ನಿರ್ದೇಶನಗಳಿಗೆ ತದ್ವಿರುದ್ಧವಾದದ್ದು. ಸಂವಿಧಾನದ ಮೂಲಭೂತ ಆಶಯಗಳಾದ ಕಲ್ಯಾಣ ರಾಜ್ಯಕ್ಕೆ ಕೊಡಲಿ ಪೆಟ್ಟು ಕೊಟ್ಟಿದ್ದು 1991ರ ಕಾಂಗ್ರೆಸ್ ಸರಕಾರದ ಸಿಂಗ್‌ರ ಈ ನೀತಿಗಳೇ.
ಹಾಗೆಯೇ ಮತ್ತೊಂದು ಸಂವಿಧಾನದ ಮತ್ತೊಂದು ಪ್ರಧಾನ ಆಶಯವಾದ ಸೆಕ್ಯುಲರಿಸಂ ಅನ್ನು ಬಾಬರಿ ಮಸೀದಿ ಕೆಡವಿ ಹಾಕುವ ಮೂಲಕ ಸಾಂಕೇತಿಕವಾಗಿ ಸಂಘಿಗಳು ಕೆಡವಿ ಹಾಕಿದ್ದು ಕೂಡಾ ಸಿಂಗ್-ರಾವ್ ಸರಕಾರದ ಅವಧಿಯಲ್ಲೇ.
ಆದರೆ ಅದು ಕೇವಲ ಮನಮೋಹನ್ ಸಿಂಗ್ ಎಂಬ ವ್ಯಕ್ತಿಯ ಆಯ್ಕೆಯಲ್ಲ. ಅದು ಆಳುವವರ್ಗದ ಬಂಡವಾಳಶಾಹಿಗಳ ಸಾಮೂಹಿಕ ಆಯ್ಕೆ. ಕಾಂಗ್ರೆಸ್ ಮತ್ತು ಬಿಜೆಪಿ ಆ ವರ್ಗದ ಎರಡು ರಾಜಕೀಯ ಸಾಧನಗಳಷ್ಟೆ.
ಬಡವರನ್ನು ಬಲಿಗೊಟ್ಟು ಬಂಡವಾಳಿಗರನ್ನು ಬೆಳೆಸಿದ ಸುಧಾರಣೆಗಳು
ಮನಮೋಹನ್ ಸಿಂಗ್‌ರ ಈ ಸಂವಿಧಾನ ವಿರೋಧಿ ನೀತಿಗಳನ್ನು ಕೊಂಡಾಡುವವರು ಉತ್ತರಿಸಬೇಕಿರುವುದು ಈ ನೀತಿಗಳಿಂದ ಯಾವ ವರ್ಗವನ್ನು ಬಲಿಗೊಟ್ಟು ಯಾವ ವರ್ಗವನ್ನು ಉಳಿಸಿ ಬೆಳೆಸಲಾಯಿತು ಎಂಬುದು. ಸಾಮಾನ್ಯವಾಗಿ ಈ 91ರ ನೀತಿಗಳು ಭಾರತದಲ್ಲಿ ಮಧ್ಯಮ ವರ್ಗವನ್ನು ಬೆಳೆಸಿ ಒಂದು ದೊಡ್ಡ ಮಾರುಕಟ್ಟೆಯನ್ನು ಹುಟ್ಟುಹಾಕಿತು ಮತ್ತು ಇದರಿಂದ ಜಿಡಿಪಿ ಹೆಚ್ಚಿತು, ಅಭಿವೃದ್ಧಿ ದರ ಹೆಚ್ಚಿತು ಎಂಬ ವಾದಗಳನ್ನು ಮಂಡಿಸುತ್ತಾರೆ. ಈ ವಾದವನ್ನು ಸರಿಯೆಂದು ಒಪ್ಪಿಕೊಂಡರೆ ಮನಮೋಹನ್ ಸಿಂಗ್‌ರ ಲಾಯಲ್ ಶಿಷ್ಯ ನರೇಂದ್ರ ಮೋದಿಯವರಾಗುತ್ತಾರೆ. ಏಕೆಂದರೆ ಮೇಲಿನ ತರ್ಕವನ್ನು ಒಪ್ಪಿಕೊಂಡರೆ ಭಾರತ ಇಷ್ಟರಲ್ಲೇ ಮೂರನೇ ಅತಿ ದೊಡ್ಡ ಆರ್ಥಿಕತೆಯೂ ಆಗಲಿದೆ. ಆದರೆ ಇದು ರೈತರ, ಸಣ್ಣಪುಟ್ಟ ಉದ್ಯಮಿಗಳ, ಕಾರ್ಮಿಕರ ಮತ್ತು ಬಡವರ ಅಭಿವೃದ್ಧಿಯನ್ನು ಸಾಧಿಸಿತೇ ಎಂಬ ಪ್ರಶ್ನೆಯನ್ನು ಮೋದಿಗೆ ಮಾತ್ರವಲ್ಲದೆ ಮನಮೋಹನ್ ಸಿಂಗ್ ಅವಧಿಗೂ ಕೇಳಬೇಕಿರುತ್ತದೆ. ಬಡತನ ರೇಖೆಯೆಂಬ ಹುಸಿ ರೇಖೆಯನ್ನು ಹುಡುಕಿ ತುತ್ತು ಅನ್ನ ಮಾತ್ರ ತಿನ್ನುತ್ತಿರುವವರನ್ನು ಬಡತನ ರೇಖೆಯ ಮೇಲಕ್ಕೆ ಎತ್ತಿ ಹಾಕಿ ಬಡವರನ್ನು ಕಡಿಮೆ ಮಾಡುವ ತಂತ್ರವನ್ನು ಹುಡುಕಿದ್ದು ಸಿಂಗ್ ಅವಧಿಯಲ್ಲಿ. ಅದನ್ನು ಅತ್ಯಂತ ದಕ್ಷತೆಯಿಂದ ಜನರನ್ನು ಮೋಸ ಮಾಡಲು ಬಳಸುತ್ತಿರುವುದು ಮೋದಿ. ಅಷ್ಟೇ ವ್ಯತ್ಯಾಸ.
ವಾಸ್ತವದಲ್ಲಿ ‘ಐಎಂಎಫ್ ನಿರ್ದೇಶಿತ ಸುಧಾರಣೆಗಳನ್ನು’ ಜಾರಿಗೆ ತಂದ 81 ದೇಶಗಳೊಳಗೆ ಅಪಾರವಾದ ಅಸಮಾನತೆ ಹೆಚ್ಚಾಗಿದೆಯೆಂದು ಮತ್ತು ದೇಶದೇಶಗಳ ನಡುವಿನ ಅಸಮಾನತೆಯು ಹೆಚ್ಚಾಗಿದೆಯೆಂದು ವಿಶ್ವ ಬ್ಯಾಂಕಿನ ಮಾಜಿ ಅಧ್ಯಕ್ಷ ಜೋಸೆಫ್ ಸ್ಟಿಗ್ಲಿಶ್ ಅವರೇ ತಮ್ಮ ‘Globalisation and Its Discontents’ ಪುಸ್ತಕದಲ್ಲಿ ಅಂಕಿಅಂಶಗಳ ಸಮೇತ ದಾಖಲಿಸಿದ್ದಾರೆ.
1991ರ ನಂತರದ ವರ್ಷಗಳಲ್ಲಿ ಭಾರತದಲ್ಲೂ ಒಳಗೊಂಡಂತೆ ಈ ಮಾರುಕಟ್ಟೆ ಸುಧಾರಣೆಗಳನ್ನು ಅನುಸರಿಸಿದ ಎಲ್ಲಾ ದೇಶಗಳಲ್ಲೂ ಬಡತನ ಹೆಚ್ಚಾಗಿದೆಯೆಂದೂ ಕಳೆದ ಐದು ವರ್ಷಗಳಲ್ಲಿ ಕನಿಷ್ಠ ಪಕ್ಷ 20ಕ್ಕೂ ಹೆಚ್ಚು ಸ್ವತಂತ್ರ ಅಧ್ಯಯನಗಳು ಮತ್ತು ಸ್ವಯಂ ಐಎಂಎಫ್ ಕೂಡ ಪರೋಕ್ಷವಾಗಿ ಒಪ್ಪಿಕೊಳ್ಳುತ್ತಿವೆ.
(https://pmc.ncbi.nlm.nih.gov/articles/PMC9172087/)
ಈ ಬಂಡವಾಳಶಾಹಿ ಅಭಿವೃದ್ಧಿ ಮಾದರಿಯು ತನ್ನ ಸುಲಿಗೆಯ ಪ್ರಕ್ರಿಯೆಯಲ್ಲಿ ಕೆಲವು ನಿರ್ದಿಷ್ಟ ಕ್ಷೇತ್ರಗಳಲ್ಲಿ ಮೊದಲಿಗಿಂತ ಹೆಚ್ಚಿನ ಒಂದು ಮಾರುಕಟ್ಟೆ ಪರಾವಲಂಬಿ ಮತ್ತು ಅಭದ್ರ ಮಧ್ಯಮವರ್ಗವನ್ನು ಹೆಚ್ಚಿಸಿದೆ. ಆದರೆ ಅದು ಇದೇ ಮಾರುಕಟ್ಟೆ ನಿಯಮದ ಭಾಗವಾಗಿ ಮತ್ತು ತಾರ್ಕಿಕ ಮುಂದುವರಿಕೆಯಾಗಿ ಮೋದಿ ಕಾಲದಲ್ಲಿ ಮೊದಲಿಗಿಂತ ಹೆಚ್ಚಿನ ಬಿಕ್ಕಟ್ಟನ್ನು ಮತ್ತು ಅಸ್ತಿತ್ವದ ಅತಂತ್ರತೆಯನ್ನು ಅನುಭವಿಸುತ್ತಿದೆ.
ಭಾರತದ ಕೃಷಿ ಕ್ಷೇತ್ರದಲ್ಲಿ, ಉದ್ಯೋಗ ಕ್ಷೇತ್ರದಲ್ಲಿ ಆಗಿರುವ ಎರಡು ದುಷ್ಪರಿಣಾಮಗಳು ಈ ಸಿಂಗ್-ಮೋದಿ ಸುಧಾರಣೆಯ ವಿನಾಶಕ ಪರಿಣಾಮವನ್ನು ವಿವರಿಸಬಲ್ಲವು.
ಸಿಂಗ್ ‘ಸುಧಾರಣೆಗಳು’ ಮತ್ತು ರೈತರ ಆತ್ಮಹತ್ಯೆಗಳು
1991ರಲ್ಲಿ ಮನಮೋಹನ್ ಸಿಂಗ್ ಕೃಷಿಯಲ್ಲಿ ಜಾರಿಗೆ ತಂದ ಸುಧಾರಣೆಯ ಸಾರಾಂಶ ಭಾರತದ ಕೃಷಿಯಲ್ಲಿ ಸರಕಾರಿ ಹೂಡಿಕೆ, ಸರಕಾರಿ ಬೆಂಬಲ, ಸರಕಾರಿ ಖರೀದಿ ಇತ್ಯಾದಿಗಳೆಲ್ಲವನ್ನು ಹಿಂದೆಗೆದುಕೊಳ್ಳುವುದು ಮತ್ತು ಹೂಡಿಕೆ ಮತ್ತು ಕೃಷಿ ಖರೀದಿಯಲ್ಲಿ, ಕೃಷಿ ಮೂಲಭೂತ ಸೌಕರ್ಯಗಳಲ್ಲಿ ಖಾಸಗಿ ಹೂಡಿಕೆಗೆ ಹೆಚ್ಚು ಅವಕಾಶ ಕೊಡುವುದು. ಇದರ ಮುಂದುವರಿಕೆಯ ಭಾಗವಾಗಿಯೇ ಭಾರತವು ರಾವ್-ಸಿಂಗ್‌ರ ನೇತೃತ್ವದಲ್ಲಿ ಮತ್ತು ಬಿಜೆಪಿಯಂಥ ಪಕ್ಷಗಳ ಬೆಂಬಲದೊಂದಿಗೆ ಭಾರತದ ಕೃಷಿಯನ್ನು ಸಂಪೂರ್ಣವಾಗಿ ಮಾರುಕಟ್ಟೆಗೆ ತೆರೆದಿಡುವ GATT-WTO ಗಳಿಗೂ 1995ರಲ್ಲಿ ಸಹಿ ಮಾಡಿತು.
ಇದರ ಪರಿಣಾಮ ಎರಡೇ ವರ್ಷಗಳಲ್ಲಿ ಕಾಣಲಾರಂಭಿಸಿತು. 1997ರಿಂದ ಪ್ರಾರಂಭವಾದ ಸಣ್ಣ ಮತ್ತು ಅತಿ ಸಣ್ಣ ರೈತರ ಆತ್ಮಹತ್ಯೆಗಳು ಈವರೆಗೂ ನಿಂತಿಲ್ಲ. 1996-2013ರ ಅವಧಿಯಲ್ಲಿ ಭಾರತದ 4 ಲಕ್ಷಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೋದಿ ಸರಕಾರಕ್ಕೂ ಅದರ ಹಿಂದಿನ ಮನಮೋಹನ್ ಸರಕಾರಕ್ಕೂ ಇರುವ ಏಕೈಕ ವ್ಯತ್ಯಾಸವೆಂದರೆ ಮೋದಿ ಸರಕಾರ ಆ ಅಂಕಿಅಂಶಗಳನ್ನು ಕೊಡುವುದನ್ನೇ ನಿಲ್ಲಿಸಿದೆ. ಹೆಚ್ಚಿನ ವಿವರ ಮತ್ತು ಅಂಕಿಅಂಶಗಳಿಗೆ ಆಸಕ್ತರು ಈ ಅಧ್ಯಯನವನ್ನು ಗಮನಿಸಬಹುದು.
(https://ndpublisher.in/admin/issues/IJSSAv1n1i.pdf)
ಮನಮೋಹನ್ ಸಿಂಗ್‌ರ ವಿನಯವಂತಿಕೆ ಇತ್ಯಾದಿಗಳನ್ನು ಮತ್ತು ಅವರು 2007ರಲ್ಲಿ ಮಾಡಿದ 66,000 ಕೋಟಿ ರೂ. ಸಾಲಮನ್ನಾಗಳನ್ನು ಮಾತ್ರ ನೋಡಿ ಹೊಗಳಾಡುವ ಕೆಲವು ಎಡಪಂಥೀಯರು ಕೂಡ ರೈತರ ಆತ್ಮಹತ್ಯೆಗಳಿಗೆ ಕಾರಣವಾದ ಸಿಂಗ್ ಕಾಲದ ಬ್ಯಾಂಕ್ ಸುಧಾರಣೆ, ಕೃಷಿ ನೀತಿಗಳನ್ನು ಮರೆಯುತ್ತಿರುವುದು ಕೇವಲ ದುರದೃಷ್ಟಕರವಲ್ಲ.
2004-14ರ ಮನಮೋಹನ್ ಸಿಂಗ್‌ರ ಪ್ರಧಾನಿ ಅವಧಿಯಲ್ಲಿ ಜಾರಿಯಾದ ಒಓಖಇಉಂ ಇತ್ಯಾದಿ ನೀತಿಗಳು ಆತ್ಮಹತ್ಯೆಯ ಪ್ರಮಾಣವನ್ನು ನಿಲ್ಲಿಸಿತೇ ಹೊರತು ಆತ್ಮಹತ್ಯೆಯ ಕಾರಣಗಳನ್ನೇಕೆ ಬದಲಿಸಲಿಲ್ಲ ಎಂದು ಪ್ರಶ್ನಿಸದಿದ್ದರೆ ಮೋದಿಯ ಮಾರಕ ನೀತಿಗಳನ್ನು ವಿರೋಧಿಸಲು ಕಾರಣವೇ ಇರುವುದಿಲ್ಲ. ವಾಸ್ತವದಲ್ಲಿ 2004ರ ಚುನಾವಣೆಯಲ್ಲಿ 145 ಸೀಟುಗಳನ್ನು ಪಡೆದು ಯುಪಿಎ ಒಕ್ಕೂಟದ ನೇತಾರನಾಗಿ ಅಧಿಕಾರ ರಚಿಸಿದ ಕಾಂಗ್ರೆಸ್‌ಗೆ ಆ ಒಕ್ಕೂಟದಲ್ಲಿ 61 ಸೀಟುಗಳನ್ನು ಪಡೆದು ಅತಿ ದೊಡ್ಡ ಎರಡನೇ ಶಕ್ತಿಯಾಗಿದ್ದ ಎಡರಂಗದ ಬೆಂಬಲ ಅಸ್ತಿತ್ವಕ್ಕೆ ಅನಿವಾರ್ಯವಾಗಿತ್ತು ಹಾಗೂ ಹಕ್ಕು ಆಧಾರಿತ ಇಂತಹ ನೀತಿಗಳು ಈ ಎಡಪಕ್ಷಗಳ ಅವಲಂಬನೆ ಇದ್ದ ಈ ಅವಧಿಯಲ್ಲಿ ಜಾರಿಗೆ ಬಂದವೇ ವಿನಾ, ಎಡ ಪಕ್ಷಗಳ ಹಂಗಿಲ್ಲದ 2009-14ರ ಅವಧಿಯಲ್ಲಲ್ಲ ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬೇಕು.