ಮನಮೋಹನ್ ಸಿಂಗ್ : ಬಂಡವಾಳಶಾಹಿ ಭಾರತದ ಮುಕುಟ, ಬಡವರ ಭಾರತದ ಸಂಕಟ

Update: 2025-01-01 04:56 GMT
Editor : Thouheed | Byline : ಶಿವಸುಂದರ್

ಭಾಗ- 1

ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ತಮ್ಮ 92ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಹತ್ತು ವರ್ಷಗಳ ಕಾಲ ಪ್ರಧಾನಿಯಾಗಿದ್ದರೂ ತಮ್ಮ ಸಹಜ ವಿನಯ, ಅಪಾರ ಜ್ಞಾನ, ಅಪರೂಪದ ಅಧಿಕಾರ ವಿರಕ್ತ ಸ್ವಭಾವಗಳು ಮತ್ತು ಮಿತಭಾಷಿಕ ವ್ಯಕ್ತಿತ್ವಗಳಿಂದ ಅಪಾರ ಗೌರವವನ್ನು ಸಂಪಾದಿಸಿದ್ದರು. ಅದರಲ್ಲೂ ಕಳೆದ ಹತ್ತು ವರ್ಷಗಳಿಂದ ಪ್ರಧಾನಿ ಪದವಿಯಲ್ಲಿರುವ ನರೇಂದ್ರ ಮೋದಿಯೆಂಬ ವ್ಯಕ್ತಿಯ ಪರಮ ದುರಹಂಕಾರ, ಅಸೀಮ ಅಜ್ಞಾನ, ಅಪಾರ ದ್ವೇಷ, ಶಬ್ದಾಡಂಬರ ಮತ್ತು ಸ್ವ ವ್ಯಾಮೋಹದ ಗೀಳನ್ನು ದಿನಬೆಳಗಾದರೆ ನೋಡುತ್ತಾ ಅಸಹ್ಯವೆನಿಸಿದವರಿಗೆ, ಮನಮೋಹನ್ ಸಿಂಗ್ ಅವರ ವ್ಯಕ್ತಿತ್ವ ಸಹಜವಾಗಿಯೇ ಒಂದು ಅಪೇಕ್ಷಣೀಯ ಮತ್ತು ಅಪ್ಯಾಯವಾದ ಹೋಲಿಕೆಯಾಗಿ ರೂಪುಗೊಂಡಿದೆ. ಹೀಗಾಗಿಯೇ ಸಿಂಗ್‌ರ ನಿಧನದ ನಂತರ ಅವರ ನೆನಪಿನಲ್ಲಿ ಬರುತ್ತಿರುವ ಲೇಖನಗಳು ಈ ವೈರುಧ್ಯಗಳನ್ನೇ ಮನಸ್ಸಿನಲ್ಲಿಟ್ಟುಕೊಂಡಂತೆ ತೋರುತ್ತಿದೆ. ಕೆಲವೊಮ್ಮೆ ಈ ಮೆಚ್ಚುಗೆಗಳು ಮನಮೋಹನ್ ಸಿಂಗ್‌ರ ರಾಜಕೀಯ ಮತ್ತು ಆರ್ಥಿಕ ನೆಲೆ ನಿಲುವುಗಳನ್ನೂ ಅವಿಮರ್ಶಾತ್ಮಕವಾಗಿ ಮೆಚ್ಚುಕೊಳ್ಳುತ್ತಿವೆ. ಅದು ಹಾಲಿ ಸಂದರ್ಭದ ಸೀಮಿತ ಆಯ್ಕೆಗಳನ್ನಷ್ಟೇ ಸೂಚಿಸುತ್ತಿದೆ.

ಆದರೆ ಮನಮೋಹನ್ ಸಿಂಗ್ 1991ರ ನಂತರ ಈ ದೇಶದ ದಿಕ್ಕನ್ನು ಸಂಪೂರ್ಣ ಬದಲಿಸಿದ ಆರ್ಥಿಕ ನೀತಿಗಳ ಕಮ್ಮಾರರೂ ಆಗಿದ್ದರು. ಹಾಗೆಯೇ 2004-14ರ ನಡುವೆ ಈ ದೇಶದ ಪ್ರಧಾನಿಯೂ ಆಗಿದ್ದರು. ಹೀಗಾಗಿ ಮನಮೋಹನ್ ಸಿಂಗ್ ನಿಧನರಾಗಿರುವ ಈ ಹೊತ್ತಿನಲ್ಲಿ ‘ಪ್ರಧಾನಿ ಮತ್ತು ವಿತ್ತಮಂತ್ರಿ ಮನಮೋಹನ್ ಸಿಂಗ್‌ರ’ ನೀತಿ ಮತ್ತು ಧೋರಣೆಗಳ ವಿಶ್ಲೇಷಣೆಯೂ ಅತ್ಯಗತ್ಯ. ಏಕೆಂದರೆ ಈ ಹೊತ್ತು ಭಾರತ ಸಂವಿಧಾನದ ಆಶಯಗಳಿಗೆ ಎರವಾಗಿ ದೂರವಾಗಿರುವ ಶ್ರೇಯಸ್ಸಿನ ಬಹುಪಾಲು 1991ರ ನಂತರ ಪ್ರಾರಂಭವಾದ ಆರ್ಥಿಕ, ಸಾಮಾಜಿಕ ನೀತಿಗಳಿಗೆ ಸಲ್ಲಬೇಕು. ಹಾಗೆ ನೋಡಿದರೆ ನರೇಂದ್ರ ಮೋದಿ ನೇತೃತ್ವದ ಸಂಘಿಗಳ ಸರಕಾರ ಮುಂದುವರಿಸುತ್ತಿರುವ ಇದೇ ನೀತಿಗಳನ್ನು ಅತ್ಯಂತ ಉಗ್ರವಾಗಿ ಮತ್ತು ವೇಗವಾಗಿ ಅನುಸರಿಸುತ್ತಿವೆಯಷ್ಟೆ.

ಈ ಹಿನ್ನೆಲೆಯಲ್ಲಿ ಮನಮೋಹನ್ ಸಿಂಗ್‌ರಿಗೆ ನೀಡುವ ನಿಜವಾದ ಶ್ರದ್ಧಾಂಜಲಿ ಅವರ ವ್ಯಕ್ತಿತ್ವದ ಗುಣಾವಗುಣಗಳ ಮೆಚ್ಚುಗೆಗೆ ಮಾತ್ರ ಸೀಮಿತವಾಗದೆ ಅವರ ರಾಜಕೀಯ ಹಾಗೂ ಆರ್ಥಿಕ ನೀತಿಗಳ ವಿಶ್ಲೇಷಣೆಯಾಗಬೇಕು. ಆದರೆ ಆಗ ಅದು ಕೇವಲ ಮನಮೋಹನ್ ಸಿಂಗ್‌ರ ನೀತಿಗಳ ವಿಶ್ಲೇಷಣೆ ಮಾತ್ರವಾಗಿರುವುದಿಲ್ಲ. ಏಕೆಂದರೆ ಆ ಆರ್ಥಿಕ ನೀತಿಗಳು ಕಾಂಗ್ರೆಸ್ ಪಕ್ಷದ ಆರ್ಥಿಕ ನೀತಿಗಳಾಗಿದ್ದವು ಮತ್ತು ಇನ್ನೂ ಒಂದು ಹೆಜ್ಜೆ ಮುಂದೆ ಹೋಗುವುದಾದರೆ ಆ ಕಾಲಘಟ್ಟದ ಎಲ್ಲಾ ಆಳುವ ಪಕ್ಷಗಳ ‘ಅನಿವಾರ್ಯ’ವೆಂಬ ಮುಸುಕಿನ ಸರ್ವ ಸಮ್ಮತ ಆರ್ಥಿಕ ನೀತಿಗಳೂ ಆಗಿದ್ದವು. ಹೀಗಾಗಿ ಮನಮೋಹನ್ ಸಿಂಗ್‌ರ ನೀತಿಯ ವಿಶ್ಲೇಷಣೆ ಆ ಕಾಲಘಟ್ಟದ ಪುನರಾವಲೋಕನ ಮತ್ತು ವಿಶ್ಲೇಷಣೆಯೂ ಆಗಬೇಕಾದ ಅಗತ್ಯವಿದೆ. ಆಗ ಮಾತ್ರ ಇಂದು ಭಾರತ ಸಿಲುಕುತ್ತಿರುವ ಬಿಕ್ಕಟ್ಟಿನಿಂದ ಹೊರಬರುವ ಮಾರ್ಗಗಳು ಸಿಕ್ಕೀತು.

ಆದರೆ ಒಂದೆಡೆ ಮನಮೋಹನ್ ಸಿಂಗ್‌ರ ಇಡೀ ಅವಧಿಯನ್ನು 2009ರ ನಂತರದ ಅವಧಿಯಲ್ಲಿ ನಡೆದ ಹಗರಣಗಳಿಗೆ ಮಾತ್ರ ಬಿಜೆಪಿ ದುರುದ್ದೇಶಪೂರ್ವಕವಾಗಿ ಸೀಮಿತಗೊಳಿಸುತ್ತದೆ. ಆ ಅವಧಿಯಲ್ಲಿ ಬಿಜೆಪಿ ಮಾಡಿದ ಹಲವು ಹಗರಣದ ಆರೋಪಗಳು ಸುಳ್ಳೆಂದು ಸಾಬೀತಾಗಿವೆ ಮತ್ತು ಮೋದಿ ನೇತೃತ್ವದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ನಡೆದಿರುವ ಮತ್ತು ನಡೆಯುತ್ತಿರುವ ಹಗರಣಗಳು ಆ ಕಾಲದ ಎಲ್ಲಾ ಹಗರಣಗಳನ್ನು ನಾಚಿಸುವಷ್ಟಿದೆ. ಹೀಗಾಗಿ ಬಿಜೆಪಿಯ ವಿಮರ್ಶೆ ಸೋಗಲಾಡಿತನದ್ದು. ಇನ್ನು ಕಾಂಗ್ರೆಸ್‌ನಿಂದ ಯಾವುದೇ ಬಗೆಯ ವಸ್ತುನಿಷ್ಠ ವಿಶ್ಲೇಷಣೆಯನ್ನು ಹೇಗಿದ್ದರೂ ನಿರೀಕ್ಷಿಸಲಾಗದು.

ಆದರೆ ಸೋಜಿಗದ ಸಂಗತಿಯೆಂದರೆ ಸಂಘಿ ಫ್ಯಾಶಿಸಂ ವಿರುದ್ಧದ ಪ್ರಾಮಾಣಿಕ ಹೋರಾಟದಲ್ಲಿ ಕಾಂಗ್ರೆಸನ್ನು ಹೊಸ ಮಿತ್ರನನ್ನಾಗಿ ನೋಡುತ್ತಿರುವ ನವ ಕಾಂಗ್ರೆಸ್‌ವಾದಿಗಳು 1991ರ ನಂತರ ಅಥವಾ 2004-2014ರ ಅವಧಿಯಲ್ಲಿ ಯಾವ ವಿಷಯಗಳಿಗೆ ಕಾಂಗ್ರೆಸ್ ಸರಕಾರದ-ಮನಮೋಹನ್ ಸಿಂಗ್‌ರ ಆರ್ಥಿಕ ನೀತಿಗಳ ವಿರುದ್ಧ ಹೋರಾಡಿದ್ದರೋ ಅವೆಲ್ಲವನ್ನು ಮರೆತು ಮನಮೋಹನ್ ಸಿಂಗ್‌ರ ಅರ್ಥಿಕ ನೀತಿಗಳ ಗುಣಗಾನದಲ್ಲಿ ಕಾಂಗ್ರೆಸ್‌ನ ಜೊತೆಗೆ ಕೋರಸ್ ಹಾಡುತ್ತಿರುವುದು. ಆದರೆ ಅಂದಿನ ಕಾಂಗ್ರೆಸ್‌ನ ಮನಮೋಹನಾಮಿಕ್ಸ್ ಆರ್ಥಿಕತೆಯೇ ಇಂದಿನ ಸಂಘಿ ಫ್ಯಾಶಿಸ್ಟರ ಮೊದಾನಿಮಿಕ್ಸ್ ಆರ್ಥಿಕತೆಗೆ ಭೂಮಿಕೆ ಹಾಕಿಕೊಟ್ಟಿತು ಎಂಬುದನ್ನು ಮರೆತರೆ ಸಮಾಜವಾದವನ್ನು ತರುವುದಿರಲಿ ಫ್ಯಾಶಿಸಂನ್ನು ಸೋಲಿಸಲಾಗದು.

ಏಕೆಂದರೆ ವರ್ಗ, ಜಾತಿ, ಲಿಂಗಗಳಾಗಿ ವಿಭಜನೆಯಾದ ಒಂದು ದೇಶದಲ್ಲಿ ಒಬ್ಬ ವ್ಯಕ್ತಿ ಮಾಡಿಕೊಳ್ಳುವ ಯಾವ ಆಯ್ಕೆಯೂ ರಾಜಕೀಯ ರಹಿತವಾಗಿರುವುದಿಲ್ಲ. ಬದಲಿಗೆ ಅದು ಒಂದು ದೇಶ, ಅಭಿವೃದ್ಧಿ, ಬೆಳವಣಿಗೆ ಇತ್ಯಾದಿಗಳ ಬೋಡು ಹೆಸರುಗಳ ಮುಸುಕಿನಲ್ಲಿ ಒಂದು ನಿರ್ದಿಷ್ಟ ವರ್ಗದ-ಜಾತಿಯ-ಲಿಂಗದ ಅಬಿವೃದ್ಧಿ, ಬೆಳವಣಿಗೆಗೆ ಪೂರಕವಾದ ರಾಜಕೀಯವನ್ನೇ ಮಾಡುತ್ತಿರುತ್ತದೆ.

ಹೀಗಾಗಿ ದೇಶದ ಅಭಿವೃದ್ಧಿಯ ಹರಿಕಾರ, ಆರ್ಥಿಕ ಸುಧಾರಕ, ಅರ್ಥ ಮಾಂತ್ರಿಕ ಎಂದೆಲ್ಲಾ ಕರೆದಾಗ ಆ ಹೆಸರುಗಳ ಹಿಂದೆ ಆಗುತ್ತಿರುವುದು ಯಾವ ವರ್ಗದ ಅಭಿವೃದ್ಧಿ ಎಂದು ಕೇಳದಿದ್ದರೆ, ‘‘ದೇಶವು ಸಂಕಷ್ಟದಲ್ಲಿದ್ದಾಗ, ದೇಶವನ್ನು ಉಳಿಸಿದರು’’ ಎಂದು ಬಣ್ಣಿಸಿದಾಗ ದೇಶದೊಳಗಿನ ಯಾವ ವರ್ಗ-ಜಾತಿಗಳು ಸಂಕಷ್ಟದಲ್ಲಿದ್ದಾಗ, ಯಾವ ವರ್ಗಗಳನ್ನು ಉಳಿಸಿ ಬೆಳೆಸಿದರು ಎಂದು ಕೇಳದಿದ್ದರೆ ಅಂಬೇಡ್ಕರ್‌ವಾದಿಗಳೂ ಆಗುವುದಿಲ್ಲ, ಮಾರ್ಕ್ಸ್‌ವಾದಿಗಳೂ ಆಗುವುದಿಲ್ಲ, ಸಮಾಜವಾದಿಗಳೂ ಆಗುವುದಿಲ್ಲ. ಈ ಹಿನ್ನೆಲೆಯಲ್ಲಿ ಈ ಲೇಖನದಲ್ಲಿ ಮನಮೋಹನ್ ಸಿಂಗ್ ಎಂಬ ವ್ಯಕ್ತಿಗಿಂತ ಅರ್ಥಶಾಸ್ತ್ರಜ್ಞ ಮತ್ತು ಪ್ರಧಾನಿ ಮನಮೋಹನ್ ಸಿಂಗ್‌ರ ಪಾತ್ರ ಮತ್ತು ನೀತಿಗಳನ್ನು ವಿಶ್ಲೇಷಿಸುವ ಪ್ರಯತ್ನವನ್ನು ಮಾಡಲಾಗಿದೆ.

ಸೌತ್ ಕಮಿಷನ್ ಸೆಕ್ರೆಟರಿಯಾಗಿದ್ದವರು

ನಾರ್ತ್ ಬ್ಲಾಕಿನ ದಳಪತಿಯಾಗಿದ್ದೇಕೆ?

ಮನಮೋಹನ್ ಸಿಂಗ್ ಅವರ ಕೊಡುಗೆಗಳನ್ನು ವಿವರಿಸುವಾಗ, 1990ರಲ್ಲಿ ‘ಭಾರತ’ ಎದುರಿಸುತ್ತಿದ್ದ ಆರ್ಥಿಕ ಬಿಕ್ಕಟ್ಟು, ಕೇವಲ ಮೂರು ತಿಂಗಳಿಗೆ ಮಾತ್ರ ಸಾಲುವಂತಿದ್ದ ವಿದೇಶಿ ವಿನಿಮಯದ ಅಪಾಯಗಳ ಸಂದರ್ಭವನ್ನು ಉದಾಹರಿಸಲಾಗುತ್ತದೆ. 1991ರ ಚುನಾವಣೆಯಲ್ಲಿ ರಾಜೀವ್ ಗಾಂಧಿಯ ಹತ್ಯೆಯ ನೆರಳಲ್ಲಿ ಅಧಿಕಾರಕ್ಕೆ ಬಂದ ಪಿ.ವಿ. ನರಸಿಂಹರಾವ್ ಸರಕಾರ ಮನಮೋಹನ್ ಸಿಂಗ್‌ರನ್ನು ವಿತ್ತಮಂತ್ರಿಯನ್ನಾಗಿ ನೇಮಿಸಿಕೊಳ್ಳುತ್ತದೆ. ಇಬ್ಬರೂ ಸೇರಿ ‘ಅಪಾಯವನ್ನು ಅವಕಾಶವನ್ನಾಗಿ ಬದಲಿಸಿಕೊಂಡು’ ಕೇವಲ ತಾತ್ಕಾಲಿಕವಾಗಿ ಎದುರಾದ ಸಂಕಷ್ಟದಿಂದ ಹೊರಬರುವ ಕಾರ್ಯಕ್ರಮಗಳಿಗೆ ಮುಂದಾಗದೆ ಅಂತರ್‌ರಾಷ್ಟ್ರೀಯ ಮಾರ್ವಾಡಿ ಸಂಸ್ಥೆಯಾದ International Monetary Fund- IMFನ Structural Adjustment Program- SAP ಸಮಗ್ರ ಆರ್ಥಿಕ ಹೊಂದಾಣಿಕೆ ಕಾರ್ಯಕ್ರಮದ ಶರತ್ತುಗಳಂತೆ ಭಾರತದ ಆರ್ಥಿಕತೆಯ ದಿಕ್ಕನ್ನೇ ಬದಲಿಸಿದರು.

ಈ ‘ಸುಧಾರಣೆ’ಗಳ ಪ್ರಧಾನ ಧಾತು ದೇಶದ ಆರ್ಥಿಕತೆಯಲ್ಲಿ ಎಂದರೆ ಕೃಷಿ, ಕೈಗಾರಿಕೆ, ಶಿಕ್ಷಣ, ಆರೋಗ್ಯ, ಉದ್ಯೋಗ, ಕಾರ್ಮಿಕ ಕಲ್ಯಾಣ ಇತ್ಯಾದಿ ಎಲ್ಲದರಲ್ಲೂ ಸರಕಾರದ ಪಾತ್ರವನ್ನು ಮತ್ತು ಹಿಡಿತಗಳನ್ನು ಕಡಿಮೆ ಮಾಡಿ, ಅವುಗಳಲ್ಲಿ ದೇಶಿ ಮತ್ತು ವಿದೇಶಿ ಖಾಸಗಿ ಬಂಡವಾಳಶಾಹಿಗಳ ಪಾತ್ರವನ್ನು ಹೆಚ್ಚಿಸುವ ಮತ್ತು ಅವರ ಲಾಭವನ್ನು ಖಾತರಿ ಮಾಡುವ ದಿಕ್ಕಿನಲ್ಲಿ ಕೃಷಿ, ಕೈಗಾರಿಕೆ, ಉದ್ಯಮ, ತೆರಿಗೆ, ಬ್ಯಾಂಕಿಂಗ್, ಶಿಕ್ಷಣ ಎಲ್ಲಾ ನೀತಿಗಳನ್ನು ಪುನರ್ ರೂಪಿಸುವ ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣದ ನೀತಿಗಳು. ಅಂದರೆ ಭಾರತದ ಸಂವಿಧಾನ ಭಾರತದ ಪ್ರಭುತ್ವಕ್ಕೆ ವಹಿಸಿದ್ದ ಕಲ್ಯಾಣ ರಾಜ್ಯದ ಜವಾಬ್ದಾರಿಗಳೆಲ್ಲವನ್ನು ನಿವಾರಿಸಿಕೊಂಡು ಅವೆಲ್ಲವನ್ನೂ ಮಾರುಕಟ್ಟೆಗೆ, ಅರ್ಥಾತ್ ದೇಸಿ ಮತ್ತು ಅಂತರ್‌ರಾಷ್ಟ್ರೀಯ ಕಾರ್ಪೊರೇಟ್ ಬಂಡವಾಳಶಾಹಿಗಳ ಲಾಭದ ಆಸಕ್ತಿಗೆ ಅಧೀನಗೊಳಿಸುವುದು. ಭಾರತದ ಸಂವಿಧಾನ ಈ ದೇಶದ ರೈತ, ಕಾರ್ಮಿಕ ಹಾಗೂ ಸಣ್ಣಪುಟ್ಟ ಉದ್ಯಮಿಗಳಿಗೆ ಒದಗಿಸಿದ್ದ ರಕ್ಷಣೆಯೆಲ್ಲವನ್ನೂ ಕಿತ್ತು ಹಾಕಿ ಭಾರತವನ್ನು ಬಂಡವಾಳಶಾಹಿ ದಾಳಿಗೆ ಬೆತ್ತಲಾಗಿಸುವುದು.

ಆದರೆ 1990ರಲ್ಲಿ ‘ದೇಶ’ ಎದುರಿಸಿದ ಬಿಕ್ಕಟ್ಟಿಗೆ ಆ ಹಿಂದಿನ ರಾಜೀವ್, ಇಂದಿರಾ ಮತ್ತು ಜನತಾ ಪಕ್ಷಗಳ ಸರಕಾರಗಳು ಅನುಸರಿಸಿದ ಆಮದು ಅವಲಂಬಿತ, ದೊಡ್ಡ ಬಂಡವಾಳಶಾಹಿ ನಿರ್ದೇಶಿತ ಆಮದು ರಫ್ತು ನೀತಿಗಳು, ಕೃಷಿ ನೀತಿಗಳು ಕಾರಣವೇ ಹೊರತು ಈ ದೇಶದ ಬಡ-ಮಧ್ಯಮರೈತರು, ದಲಿತರು-ರೈತ-ಕೂಲಿಗಳು, ಕಾರ್ಮಿಕರು, ಬಡವರು ಕಾರಣರಲ್ಲ. ಆದರೂ 1991ರಲ್ಲಿ ‘ದೇಶ’ವನ್ನು ಉಳಿಸಲು ತಂದ ಈ ಸುಧಾರಣೆಗಳು ರೈತ-ಕಾರ್ಮಿಕ -ದಲಿತರು-ಬಡವರನ್ನೇ ಸುಲಿದು ಬಂಡವಾಳಿಗರ ಸುಲಿಗೆಯನ್ನು ಹೆಚ್ಚಿಸಿದ್ದನ್ನು ಯಾವ ಆರ್ಥಿಕ ಪಂಡಿತರೂ ಹೇಳುವುದಿಲ್ಲ.

ಆದರೆ ಅರ್ಥಮಾಂತ್ರಿಕರಾಗಿದ್ದ ಮನಮೋಹನ್ ಸಿಂಗ್‌ರಿಗೆ ಈ ವಿಷಯಗಳು ಚೆನ್ನಾಗಿಯೇ ಗೊತ್ತಿತ್ತು ಮತ್ತು ಅವರು ಇಂತಹ ಸಂದರ್ಭ ಎದುರಾದಾಗ ದೇಶದ ಬಡವರನ್ನು ಅಂತರ್‌ರಾಷ್ಟ್ರೀಯ ಬಂಡವಾಳಿಗರಿಗೆ ಬಲಿಗೊಡದೆ ದೇಶವನ್ನು ರಕ್ಷಿಸಿಕೊಳ್ಳುವುದು ಹೇಗೆ ಎಂಬ ಯೋಜನೆಯನ್ನು ಮುಂದಿಟ್ಟಿದ್ದರು ಎಂಬುದು ಬಹಳ ಜನಗಳಿಗೆ ಈಗ ಮರೆತಿರಬಹುದು. ಅವರು 1991ರಲ್ಲಿ ವಿತ್ತಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಮಾರುಕಟ್ಟೆ ಶಕ್ತಿಗಳ ಮುಕುಟಮಣಿಯಾಗುವ ಮುನ್ನ, ಅವರು ಭಾರತದಂತಹ ಬಡರಾಷ್ಟ್ರಗಳ ಒಕ್ಕೂಟವಾಗಿದ್ದ South Commissionನ ಸೆಕ್ರಟರಿ ಜನರಲ್ ಆಗಿದ್ದರು.

ಈ ಸೌಥ್ ಕಮಿಷನನ್ನು 1986ರಲ್ಲಿ ಆಫ್ರಿಕಾದ ಮಹಾನ್ ಸ್ವಾಭಿಮಾನಿ ಆಫ್ರಿಕನ್ ರಾಷ್ಟ್ರವಾದಿ ಮತ್ತು ಸಮಾಜವಾದಿ ತಾಂಜೇನಿಯಾದ ಅಧ್ಯಕ್ಷ ಜ್ಯುಲಿಯಸ್ ನೈರೇರೇ ಅವರ ಅಧ್ಯಕ್ಷತೆಯಲ್ಲಿ ಸ್ಥಾಪಿಸಲಾಗಿತ್ತು. ಸಿಂಗ್‌ಅದರ ಸೆಕ್ರಟರಿ ಜನರಲ್ ಆಗಿದ್ದರು. ಆಫ್ರಿಕಾ, ಏಶ್ಯ ಮತ್ತು ಲ್ಯಾಟಿನ್ ಅಮೆರಿಕ ಖಂಡಗಳಲ್ಲಿನ ಭಾರತದಂತಹ ಬಡರಾಷ್ಟ್ರಗಳನ್ನು ವಿದೇಶಿ ವಿನಿಮಯ ಬಿಕ್ಕಟ್ಟುಗಳಿಗೆ ಸಿಲುಕಿಸಿ ತಮ್ಮ ನವವಸಾಹತುವಾದಿ ಶೋಷಣೆಗಳನ್ನು ಮುಂದುವರಿಸುವ ಉತ್ತರದ ಶ್ರೀಮಂತ ಬಂಡವಾಳಶಾಹಿ ರಾಷ್ಟ್ರಗಳ ನಾರ್ಥ್ ಕಮಿಷನ್‌ಗೆ ಪರ್ಯಾಯವಾಗಿ ಈ ಸೌತ್ ಕಮಿಷನ್ ಹುಟ್ಟುಕೊಂಡಿತ್ತು. ಮೂರೂ ಖಂಡಗಳ 27 ದೇಶಗಳ 28 ಸದಸ್ಯರ ಈ ಬಡರಾಷ್ಟ್ರಗಳ ಆಯೋಗ 1990ರಲ್ಲಿ ಭಾರತ ಎದುರಿಸಿದಂತಹ ಬಿಕ್ಕಟ್ಟಿನ ಸಂದರ್ಭಗಳಲ್ಲಿ ಮಾರುಕಟ್ಟೆ ಶಕ್ತಿಗಳಿಗೆ ಬಲಿಯಾಗದಂತೆ ಪರ್ಯಾಯ ಮಾರ್ಗ ಹುಡುಕುವ ಹೊಣೆಯನ್ನು ಹೊತ್ತಿತ್ತು. 1987-90ರ ವರೆಗೆ ಅಧ್ಯಯನ ಮಾಡಿದ ಈ ಸಮಿತಿ 1990ರಲ್ಲಿ The Challenge To The South- The report Of The South Commission ಎಂಬ ಅದ್ಭುತವಾದ ವರದಿಯನ್ನು ನೀಡಿತ್ತು. ಅದನ್ನು ಬರೆದವರಲ್ಲಿ ಪ್ರಮುಖರು ಮನಮೋಹನ್ ಸಿಂಗ್.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಶಿವಸುಂದರ್

contributor

Similar News