ಸಂಘಿ GIM ಮತ್ತು ಸಿದ್ದು GIM ಎರಡೂ ಬಂಡ್ವಾಳವಿಲ್ಲದ ಬಡಾಯಿಗಳೇ!
ಸಂಘಿಗಳ GIMಗೂ, ಸಿದ್ಧರಾಮಯ್ಯನವರ ಉIಒಗೂ ವ್ಯತ್ಯಾಸವೇನೂ ಇರದಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಏಕೆಂದರೆ ಸಿದ್ದರಾಮಯ್ಯನವರ ಸರಕಾರದ ಕೃಷಿ ಬೆಲೆ ಆಯೋಗವೂ ಮೋದಿ ಸರಕಾರದ ಕೃಷಿ ನೀತಿಗಳನ್ನು ಆಧರಿಸಬೇಕೆಂದು ಮಾರ್ಗ ಸೂಚಿ ನೀಡಲಾಗಿದೆ. ಅಧಿಕಾರಕ್ಕೆ ಬಂದು ಎರಡು ವರ್ಷಗಳು ಮುಗಿಯುತ್ತಾ ಬರುತ್ತಿದ್ದರೂ ಬಿಜೆಪಿ ಸರಕಾರ ಜಾರಿಗೆ ತಂದ ಎಪಿಎಂಸಿ ಕಾಯ್ದೆ, ಗೋಹತ್ಯಾ ನಿಷೇಧ ಕಾಯ್ದೆ ರದ್ದಾಗುವುದಿಲ್ಲ. ಉಪ ಮುಖ್ಯಮಂತ್ರಿ ಡಿಕೆಶಿಯವರ ಬೆಂಗಳೂರು ಅಭಿವೃದ್ಧಿ ಯೋಜನೆಯಲ್ಲಿ ಎರಡು ಮೂರು ಕಾರುಗಳಿಟ್ಟುಕೊಂಡಿರುವ ಮೇಲ್ ಮಧ್ಯಮ ವರ್ಗದವರಿಗಾಗಿ ರೂ. 50,000 ಕೋಟಿ ವೆಚ್ಚದ ಟನಲ್ ರೋಡುಗಳಿರುತ್ತವೇಯೇ ವಿನಾ ಸ್ಲಮ್ಮುಗಳ ಅಭಿವೃದ್ಧಿಯೇ ಇಲ್ಲ.;

ಕರ್ನಾಟಕದ ಕಾಂಗ್ರೆಸ್ ಸರಕಾರ ‘ಪ್ರಗತಿಯ ಮರುಕಲ್ಪನೆ’ಯ ಶೀರ್ಷಿಕೆಯಲ್ಲಿ, ಜನರ ತೆರಿಗೆ ದುಡ್ಡಿನ ಅಂದಾಜು 75 ಕೋಟಿ ರೂ. ವೆಚ್ಚದಲ್ಲಿ ಇದೇ ಫೆಬ್ರವರಿ 12ರಿಂದ ಮೂರು ದಿನಗಳ ಜಾಗತಿಕ ಹೂಡಿಕೆದಾರರ ಸಮ್ಮೇಳನವನ್ನು (GIM) ಆಯೋಜಿಸಿದೆ. ಇದು ಕರ್ನಾಟಕದಲ್ಲಿ ನಡೆಯುತ್ತಿರುವ ಆರನೇ ಹಾಗೂ ಕಾಂಗ್ರೆಸ್ ಸರಕಾರದಡಿಯಲ್ಲಿ ನಡೆಯುತ್ತಿರುವ ಮೂರನೇ GIM (2000, 2016, 2025). ಬಿಜೆಪಿ ಸರಕಾರಗಳು 2010, 2012 ಮತ್ತು 2022ರಲ್ಲಿ ಇದೇ ಬಗೆಯ GIMಗಳನ್ನು ಆಯೋಜಿಸಿದ್ದವು.
ಕಾಂಗ್ರೆಸ್ ಮತ್ತು ಬಿಜೆಪಿ ಸರಕಾರಗಳು ಪರಸ್ಪರ ಸೈದ್ಧಾಂತಿಕ ವಿರೋಧಿಗಳೆಂದು ಬಣ್ಣಿಸಿಕೊಳ್ಳುತ್ತಿದ್ದರೂ ಈ ಜಾಗತಿಕ ಹೂಡಿಕೆದಾರರ ಸಮ್ಮೇಳನಗಳ (GIM) ಹಿಂದಿನ ಅಬಿವೃದ್ಧಿಯ ಗ್ರಹಿಕೆ, ಉದ್ದೇಶ, ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಗಳ ಬಗೆಗಿನ ಬಡಾಯಿ ಮತ್ತು ಫಲಶೃತಿಗಳನ್ನು ಹೋಲಿಸಿ ನೋಡಿದರೆ ಯಾವ ವ್ಯತ್ಯಾಸಗಳೂ ಕಾಣಬರುವುದಿಲ್ಲ. ಏಕೆಂದರೆ ಪ್ರಗತಿ ಮತ್ತು ಅಭಿವೃದ್ಧಿಗಳ ವಿಷಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗಳ ಮೂಲ ಕಲ್ಪನೆ ಮತ್ತು ‘ಮರುಕಲ್ಪನೆ’ಗಳಲ್ಲಿ ಯಾವುದೇ ವ್ಯತ್ಯಾಸಗಳಿಲ್ಲ. ಹೀಗಾಗಿಯೇ ಬಿಜೆಪಿ GIM ಮಾಡುವಾಗ ಕಾಂಗ್ರೆಸ್ ಮಾಡುವ ವಿರೋಧ ಅಥವಾ ಕಾಂಗ್ರೆಸ್ ಉIಒ ಮಾಡುವಾಗ ಬಿಜೆಪಿ ಮಾಡುವ ವಿರೋಧಕ್ಕೆ ಯಾವುದೇ ಜನಪರ ಅರ್ಥಗಳೂ ಇರುವುದಿಲ್ಲ.
ಜಾಗತಿಕ ಹೂಡಿಕೆದಾರರ ಸಮ್ಮೇಳನಗಳ (GIM) ಗಿಮಿಕ್‌ಗಳ ಬಗ್ಗೆ 2010ರಿಂದ ಲಭ್ಯವಿರುವ ಅಂಕಿಅಂಶಗಳನ್ನು ಹೋಲಿಸಿ ನೋಡಿದರೂ ಈ ಸಮ್ಮೇಳನಗಳು ಬಂಡ್ವಾಳವಿಲ್ಲದ ಬಡಾಯಿಗಳು ಎಂದು ಅರ್ಥವಾಗುತ್ತದೆ.
GIM: ಘೋಷಣೆಗಳ ಆಕಾಶ, ವಾಸ್ತವಿಕ ಹೂಡಿಕೆಯ ಪಾತಾಳ
ಯಾವುದೇ ರಾಜ್ಯಗಳ ಯಾವುದೇ ಸರಕಾರಗಳು ತಾವು ನಡೆಸುವ GIM ಗೆ ಮುಂಚೆ ಮತ್ತು GIM ನಡೆಯುವಾಗ ಲಕ್ಷ ಲಕ್ಷ ಕೋಟಿ ರೂ. ಹೂಡಿಕೆಗಳ ಪ್ರಸ್ತಾವ ಬಂದಿದೆಯೆಂದು ಘೋಷಿಸುತ್ತಾರೆ. ಆದರೆ ಅದರ ಶೇ. 10-15ರಷ್ಟು ಪ್ರಸ್ತಾವಗಳೂ ವಾಸ್ತವಿಕ ಹೂಡಿಕೆಯಾಗಿ ಪರಿಣಮಿಸುವುದಿಲ್ಲ. ಉದಾಹರಣೆಗೆ ಕಳೆದ ಆರು ಜಿಮ್‌ಗಳಲ್ಲಿ ಸರಕಾರಗಳ ಪ್ರಕಾರ ಒಟ್ಟು ರೂ. 25 ಲಕ್ಷ ಕೋಟಿಗೂ ಹೆಚ್ಚು ಬಂಡವಾಳ ಹೂಡಿಕೆಗಳು ಘೋಷಿತವಾಗಿವೆ. ಅದರ ಶೇ. 10 ರಷ್ಟು ವಾಸ್ತವಿಕ ಹೂಡಿಕೆಯಾಗಿದ್ದರೂ ಕರ್ನಾಟಕದ ಜಿಡಿಪಿ ಈಗಿರುವುದಕ್ಕಿಂತ ಎರಡು ಪಟ್ಟು ಹೆಚ್ಚಾಗಿರುತ್ತಿತ್ತು. ಆದರೂ ತುತ್ತೂರಿ ಮಾಧ್ಯಮಗಳು ಮಂತ್ರಿಗಳ ಘೋಷಣೆಯನ್ನು ಆಧರಿಸಿ ರಂಗುರಂಗಿನ ಕಥೆಗಳನ್ನು ಕಟ್ಟುತ್ತವೆಯೇ ವಿನಾ ವಾಸ್ತವಿಕ ಹೂಡಿಕೆ ಎಷ್ಟಾಗಿದೆಯೆಂಬ ಫಾಲೊ ಅಪ್ ಸ್ಟೋರಿಯನ್ನು ಮಾಡುವುದಿಲ್ಲ.
ಈ GIMಗಳಲ್ಲಿ ಹೂಡಿಕೆಗಳ ಘೋಷಣೆ ವಾಸ್ತವಿಕ ಹೂಡಿಕೆಯಾಗಲು ನಾಲ್ಕು ಹಂತಗಳನ್ನು ದಾಟಬೇಕಿರುತ್ತದೆ.
ಮೊದಲನೆಯದಾಗಿ ಇಂತಹ ಜಿಮ್‌ಗಳಲ್ಲಿ ಮೊದಲಿಗೆ ಆಹ್ವಾನಿತ ಕಂಪೆನಿಗಳು ತಮ್ಮ Expression Of Interest- EOI ಹೂಡಿಕೆಯ ಬಗ್ಗೆ ಆಸಕ್ತಿಯನ್ನಷ್ಟೇ ಘೋಷಿಸುತ್ತಾರೆ. ಕೇವಲ ಆ ಘೋಷಣೆಗಳು ಕಂಪೆನಿಯನ್ನಾಗಲೀ ಸರಕಾರವನ್ನಾಗಲೀ ನಿರ್ಬಂಧಿಸುವ ಒಡಂಬಡಿಕೆಯಲ್ಲ. ಇದು ಸಮ್ಮೇಳನದ ಮೊದಲ ಭಾಗದಲ್ಲಿ ಆಗುತ್ತದೆ.
ಎರಡನೆಯ ಹಂತ Memorandum Of Understanding- MOU- ಹಂತ. ಇದು ಹೆಚ್ಚು ಕಡಿಮೆ ಸಮ್ಮೇಳನದ ಕೊನೆಯ ದಿನ ಅಥವಾ ಆನಂತರದ ದಿನಗಳಲ್ಲಿ ನಡೆಯುತ್ತದೆ. ಹೂಡಿಕೆದಾರರಿಗೆ ಕೆಲವು ಕ್ಷೇತ್ರಗಳಲ್ಲಿನ ಹೂಡಿಕೆ ಲಾಭದಾಯಕವೆನ್ನಿಸಿದಾಗ ಇನ್ನಷ್ಟು ಹತ್ತಿರದಿಂದ ಸಾಧ್ಯತೆಯನ್ನು ಪರಿಶೀಲಿಸಲು ಈ MOU ಮಾಡಿಕೊಳ್ಳಲಾಗುತ್ತದೆ. ಇದೂ ಕೂಡ ಹೂಡಿಕೆದಾರರನ್ನು ನಿರ್ಬಂಧಿಸುವ ಹಂತವಲ್ಲ. EOI- ಹಂತದಿಂದ MOU ಹಂತಕ್ಕೆ ಬರುವ ವೇಳೆಗೆ ಅರ್ಧಕ್ಕರ್ಧ ಕಡಿಮೆಯಾಗಿರುತ್ತದೆ.
ಮೂರನೆಯ ಹಂತ ಅಧಿಕೃತ ಒಪ್ಪಂದಗಳ ಹಂತ. ಈ ಹಂತದಲ್ಲಿ ಸರಕಾರ ಕಂಪೆನಿಗಳೊಡನೆ ತಾನು ಕೊಡುವ ಸೌಲಭ್ಯಗಳ ಬಗ್ಗೆ ಅಧಿಕೃತವಾಗಿ ನಿರ್ದಿಷ್ಟವಾಗಿ ಒಡಂಬಡಿಕೆಗಳನ್ನು ಮಾಡಿಕೊಳ್ಳುವ ಹಂತ. ಇದು ಕೂಡ ಹೂಡಿಕೆ ಮಾಡಲೇ ಬೇಕೆಂದು ನಿರ್ಬಂಧಿಸುವ ಒಪ್ಪಂದವಲ್ಲ.
ನಾಲ್ಕನೆಯದು ನಿರ್ದಿಷ್ಟವಾಗಿ ರಾಜ್ಯದ ನಿರ್ದಿಷ್ಟ ಜಿಲ್ಲೆಯ ನಿರ್ದಿಷ್ಟ ಜಮೀನು, ವಿದ್ಯುತ್ ಮತ್ತು ನೀರು ಇತ್ಯಾದಿಗಳನ್ನು ಅಧಿಕೃತವಾಗಿ ಪರಭಾರೆ ಮಾಡಿ ಘೋಷಣೆ ವಾಸ್ತವಿಕ ಹೂಡಿಕೆಯಾಗುವ ಹಂತ. ಸಮ್ಮೇಳನಗಳಲ್ಲಿ ಕಂಪೆನಿಗಳು ಮಾಡುವ ಶೇ. 90 ಘೋಷಣೆಗಳು ಈ ಹಂತವನ್ನು ತಲುಪುವುದಿಲ್ಲ. ವಾಸ್ತವವೆಂದರೆ ಈ ಹಂತವೂ ಕೂಡ ಕಂಪೆನಿಗಳನ್ನು ಸರಕಾರದಿಂದ ಇಷ್ಟೆಲ್ಲಾ ಲಾಭ ಪಡೆದುಕೊಂಡ ನಂತರ ಹೂಡಿಕೆ ಮಾಡದೆ ಹಾರಿಹೋಗದಂತೆ ನಿರ್ಬಂಧಿಸುವುದಿಲ್ಲ. ಜಗತ್ತಿನಲ್ಲಿ ಬೇರೆ ಯಾವುದೇ ದೇಶಗಳಲ್ಲಿ ಯಾವುದೇ ಹಂತದಲ್ಲಿ ನಮ್ಮ ರಾಜ್ಯ-ದೇಶಗಳು ಕೊಡುವ ಲಾಭದ ಅವಕಾಶ ಮತ್ತು ರಿಯಾಯಿತಿಗಳಿಗಿಂತ ಹೆಚ್ಚಿನ ಅವಕಾಶ ಸಿಕ್ಕೊಡನೆ ಈ ಕಾರ್ಪೊರೇಟ್ ಹದ್ದುಗಳು ಹಾರಿ ಹೋಗುವ ಅವಕಾಶವನ್ನು ಉಳಿಸಿಕೊಂಡೇ ಇರುತ್ತವೆ.
ಆದ್ದರಿಂದ ಜಿಮ್ ಸಮ್ಮೇಳನಗಳಲ್ಲಿ ಸಭಾಂಗಣಗಳಲ್ಲಿ ಮಾಡುವ ಲಕ್ಷಲಕ್ಷ ಕೋಟಿ ರೂ.ಗಳ ಘೋಷಣೆಗಳ ಬೆನ್ನು ಹತ್ತಿದರೆ ಯಾವ ಸತ್ಯಾಂಶವೂ ಗೋಚರಿಸುವುದಿಲ್ಲ.
ಈ ಹಿಂದಿನ ಐದು ಜಿಮ್‌ಗಳ ವಾಸ್ತವಿಕತೆ ಈ ಅಸಲಿಯತ್ತನ್ನು ಬಯಲುಗೊಳಿಸುತ್ತದೆ.
ಹಿಂದಿನ ಐದು GIMಗಳು: ಹೇಳಿದ್ದು ಮಾರುದ್ದ-ಹೂಡಿದ್ದು ಗೇಣುದ್ದ
ಉದಾಹರಣೆಗೆ ಈ ಹಿಂದಿನ ಹೂಡಿಕೆ ಸಮ್ಮೇಳನಗಳ ಬಡಾಯಿಗಳನ್ನು ಮತ್ತು ಅಸಲಿ ಸಾಧನೆಗಳನ್ನು ಗಮನಿಸೋಣ.
GIM-1: ಕರ್ನಾಟಕದಲ್ಲಿ ಮೊದಲನೇ ಜಿಮ್ ನಡೆದದ್ದು ಕಾಂಗ್ರೆಸ್ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ನೇತೃತ್ವದಲ್ಲಿ. ಅವರಿಗೆ ನರಕಪ್ರಾಯವಾಗಿರುವ ಜನಸಾಮಾನ್ಯರ, ರೈತಾಪಿಯ ನರಕದ ಬದುಕನ್ನು ಸಹನೀಯ ನರಕವನ್ನಾಗಿಯಾದರೂ ಮಾಡುವುದಕ್ಕಿಂತ ಇಲ್ಲಿನ ಕುಬೇರರಿಗೆ ಸಿಂಗಪೂರಿನಂತಹ ಸ್ವರ್ಗ ಸೌಕರ್ಯವನ್ನು ಕೊಡುವುದೇ ಆದ್ಯತೆಯಾಗಿತ್ತು. ಹೀಗಾಗಿ ಜಾಗತಿಕ ಬಂಡವಾಳಶಾಹಿಗಳಿಗೆ ಪೂರಕವಾಗಿ ಬೆಂಗಳೂರನ್ನು ಸಿಲಿಕಾನ್ ವ್ಯಾಲಿಯಾಗಿ ಅಭಿವೃದ್ಧಿಗೊಳಿಸಲು ಅವರು ಜಿಮ್ ನಡೆಸಿದರು. ಇದರಿಂದ 27,000 ಕೋಟಿ ರೂ. ಹೂಡಿಕೆಯಾಗುತ್ತದೆ ಎಂದು ಘೋಷಿಸಿದರೂ MOU ಹಂತಕ್ಕೆ ಬಂದದ್ದೇ ಕೇವಲ 13,000 ಕೋಟಿ ರೂ.ಗಳು ಮಾತ್ರ.
GIM- 2: ಹತ್ತು ವರ್ಷಗಳ ನಂತರ 2010ರಲ್ಲಿ ಯಡಿಯೂರಪ್ಪನವರ ನೇತೃತ್ವದಲ್ಲಿ ನಡೆದ GIMನಲ್ಲಿ 333 ಯೋಜನೆಗಳಿಗೆ MOU ಆಗಿದ್ದು, ರೂ. 3.92 ಲಕ್ಷ ಕೋಟಿ ಹೂಡಿಕೆಯಾಗಿ 7 ಲಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಕೊಚ್ಚಿಕೊಳ್ಳಲಾಗಿತ್ತು. ಆದರೆ ಅಸಲು ಯಾವುದೇ ಪ್ರಮುಖ ವಿದೇಶಿ ಬಂಡವಾಳಗಳು ಹೂಡಿಕೆಯಾಗಲಿಲ್ಲ. ಕೇವಲ 83 ಯೋಜನೆಗಳಲ್ಲಿ 90,000 ಕೋಟಿ ರೂ. ಹೂಡಿಕೆಗಳ ಪ್ರಸ್ತಾವ ಮುಂದಿನ ಹಂತಕ್ಕೆ ಹೋಗಿತ್ತು. ಅವುಗಳಲ್ಲಿ ಬಹುಪಾಲು ಈಗಾಗಲೇ ಅಸ್ತಿತ್ವದಲ್ಲಿ ಇದ್ದ ಯೋಜನೆಗಳ ವಿಸ್ತರಣೆಯೇ ಆಗಿತ್ತು. ಹೀಗಿದ್ದರೂ ಕಂಪೆನಿಗಳು ಮಾಡಿಕೊಳ್ಳುತ್ತಿದ ವಿಸ್ತರಣೆಗೆ ಜಿಮ್ ಹೆಸರಿನಲ್ಲಿ ಸರಕಾರ ಇನ್ನಷ್ಟು ರಿಯಾಯಿತಿಗಳನ್ನು ಒದಗಿಸಿತ್ತಷ್ಟೆ.
GIM- 3: 2012ರಲ್ಲಿ ಶೆಟ್ಟರ್-ಸದಾನಂದ ಗೌಡರ ನೇತೃತ್ವದಲ್ಲಿ ನಡೆದ GIMನಲ್ಲಿ 245 ಹೊಸ MOU ಆಗಲಿದ್ದು, ರಾಜ್ಯದಲ್ಲಿ 3 ಲಕ್ಷ ಕೋಟಿ ರೂ. ಹೆಚ್ಚುವರಿ ಹೂಡಿಕೆಯಾಗಲಿದ್ದು 14 ಲಕ್ಷ ಹೊಸ ಉದ್ಯೋಗಳು ಸೃಷ್ಟಿಯಾಗಲಿವೆ ಎಂದು ಕೊಚ್ಚಿಕೊಳ್ಳಲಾಗಿತ್ತು. ಆದರೆ ವಾಸ್ತವದಲ್ಲಿ ಹೂಡಿಕೆ ಹಂತಕ್ಕೆ ಬಂದದ್ದು ಒಟ್ಟು ರೂ. 12 ಸಾವಿರ ಕೋಟಿಗಳ, 21 ಸಾವಿರ ಉದ್ಯೋಗ ಸೃಷ್ಟಿ ಸಾಮರ್ಥ್ಯದ 39 ಯೋಜನೆಗಳು ಮಾತ್ರ. ಅದರಲ್ಲೂ ಅರ್ಧ ಮುಗಿದಿಲ್ಲ.
GIM- 4: 2016ರಲ್ಲಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಡೆದ GIMನಲ್ಲಿ 4 ಲಕ್ಷ ಕೋಟಿ ರೂ. ಹೂಡಿಕೆಯನ್ನು ಆಕರ್ಷಿಸಿ 6.7 ಲಕ್ಷ ಉದ್ಯೋಗ ಸೃಷ್ಟಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಕೊಚ್ಚಿಕೊಳ್ಳಲಾಗಿತ್ತು. ಆದರೆ ಜಿಮ್ ನಡೆದ ಕೆಲವೇ ದಿನಗಳ ನಂತರ ಮಂಡಿಸಿದ ಬಜೆಟ್‌ನಲ್ಲೇ ಈ ಅಂಕಿಸಂಖ್ಯೆಗಳು ಮುಕ್ಕಾಲು ಪಾಲು ಕಡಿಮೆಯಾಗಿತ್ತು. ತಮ್ಮ ಬಜೆಟ್ ಭಾಷಣದಲ್ಲಿ ಅರ್ಥಮಂತ್ರಿಗಳೂ ಆಗಿದ್ದ ಸಿದ್ದರಾಮಯ್ಯನವರು ‘‘2016ನಲ್ಲಿ ನಡೆದ ಜಿಮ್ ನಲ್ಲಿ 1.7 ಲಕ್ಷ ಉದ್ಯೋಗ ಸೃಷ್ಟಿಸುವ ರೂ. 1.27 ಲಕ್ಷ ಕೋಟಿ ಹೂಡಿಕೆಯ ಒಪ್ಪಂದಗಳಾಗಿವೆ’’ ಎಂದು ಹೇಳಿದ್ದರು. ನಂತರದ ಹಂತಗಳಲ್ಲಿ ಅದು ಕೂಡ ಮೊದಲಿನ ಘೋಷಣೆಯ ಶೇ. 10ಕ್ಕಿಂತಲೂ ಕಡಿಮೆಗೆ ಇಳಿಯಿತು.
GIM- 5: 2022ರಲ್ಲಿ ಬಸವರಾಜ ಬೊಮ್ಮಾಯಿಯವರ ನೇತೃತ್ವದಲ್ಲಿ ನಡೆದ ಐದನೇ GIMನಲ್ಲಿ 10 ಲಕ್ಷ ಉದ್ಯೋಗ ಸೃಷ್ಟಿಯಾಗುವ 10 ಲಕ್ಷ ಕೋಟಿ ರೂ. ಹೂಡಿಕೆಯಾಗುವುದೆಂದು ಕೊಚ್ಚಿಕೊಳ್ಳಲಾಗಿತ್ತು. ಆದರೆ ಅದರಲ್ಲಿ ಜಿಮ್ ಸಮ್ಮೇಳನಕ್ಕೆ ಮುಂಚೆಯೇ ವರ್ಷಗಳಿಂದ ನಡೆಯುತ್ತಾ ಬಂದಿದ್ದ ರೂ. 8.5 ಲಕ್ಷ ಕೋಟಿ ಒಪ್ಪಂದಗಳನ್ನು ಸೇರಿಸಿಕೊಳ್ಳಲಾಗಿತ್ತು. ವಾಸ್ತವದಲ್ಲಿ ಆ ಜಿಮ್ ನಲ್ಲಿ ಒಡಂಬಡಿಕೆಯಾಗಿದ್ದು ಕೇವಲ ರೂ. 1.5 ಲಕ್ಷ ಕೋಟಿಗಳಿಗೆ ಮಾತ್ರ. ಅದರಲ್ಲೂ ಎರಡು ಒಡಂಬಡಿಕೆಗಳು ಮಾತ್ರ MOU ಹಂತ ತಲುಪಿದ್ದವು.
ಈಗ ಮತ್ತೆ ಸಿದ್ದರಾಮಯ್ಯನವರ ನೇತೃತ್ವದಲ್ಲಿ GIM-6 ನಡೆಯುತ್ತಿದೆ. ಮತ್ತೆ 10 ಲಕ್ಷ ಕೋಟಿ ರೂ.ಗಳ ಬಂಡವಾಳ ಹೂಡಿಕೆ ಮತ್ತು ಲಕ್ಷ ಲಕ್ಷ ಉದ್ಯೋಗ ಸೃಷ್ಟಿಗಳ ಬಣ್ಣಬಣ್ಣದ ಕಥನಗಳನ್ನು ಕಾಂಗ್ರೆಸ್ ಸರಕಾರವೂ ಹರಿಬಿಡುತ್ತಿದೆ.
ಆದರೆ GIMಗಳ ಇತಿಹಾಸ ಸ್ಪಷ್ಟಪಡಿಸುವಂತೆ ಜಾಗತಿಕ ಹೂಡಿಕೆದಾರರು ಎಲ್ಲಿ ಕಡಿಮೆ ಖರ್ಚಿನಲ್ಲಿ, ಕಡಿಮೆ ನಿರ್ಬಂಧದಲ್ಲಿ ಹೆಚ್ಚು ಲಾಭ ದಕ್ಕುತ್ತದೋ ಅಲ್ಲಿ ಮಾತ್ರ ಹೂಡುತ್ತಾರೆ. ಅವರ ಉದ್ದೇಶ ಉದ್ಯೋಗ ಸೃಷ್ಟಿಯೂ ಅಲ್ಲ, ಸಮಾಜ ಕಲ್ಯಾಣವೂ ಅಲ್ಲ. ಆದರೆ ಅವರ ಹೂಡಿಕೆಯನ್ನು ಆಕರ್ಷಿಸಲು ಮಾತ್ರ ಸರಕಾರಗಳು ಕರ್ನಾಟಕವನ್ನು ಮತ್ತು ಕರ್ನಾಟಕದ ಜನತೆಯ ಶ್ರಮವನ್ನು ಅಗ್ಗದ ದರದಲ್ಲಿ ಮಾರಾಟಕ್ಕಿಟ್ಟಿವೆ.
GIM: ಉದ್ಯೋಗ ಸೃಷ್ಟಿಯೂ ಇಲ್ಲದ, ಅಭಿವೃದ್ಧಿಯೂ ಇಲ್ಲದ ಕರ್ನಾಟಕದ ಅಗ್ಗದ ಮಾರಾಟ
ಉದ್ಯೋಗ ಸೃಷ್ಟಿಯ ದೃಷ್ಟಿಯಿಂದ ನೋಡಿದರೂ ಈ GIM ದಂಧೆಯೇ ಎಷ್ಟು ಮೋಸಪೂರಿತವಾದದ್ದು ಎಂದು ಸ್ಪಷ್ಟವಾಗುತ್ತದೆ. ಈ GIM ಹಿಂದೆ ಇರುವುದು ಈ ದೇಶ ಮತ್ತು ರಾಜ್ಯದ ಅಭಿವೃದ್ಧಿ ವಿದೇಶಿ ಮತ್ತು ಸ್ವದೇಶಿ ದೊಡ್ಡ ಖಾಸಗಿ ಕಾರ್ಪೊರೇಟ್ ಬಂಡವಾಳಿಗರ ಹೂಡಿಕೆಯಿಂದ ಮಾತ್ರ ಸಾಧ್ಯ ಎಂಬ ಸಂವಿಧಾನ ವಿರೋಧಿ ಅಭಿವೃದ್ಧಿ ಪರಿಕಲ್ಪನೆ.
1991ರಿಂದ ಈ ಪ್ರತಿಗಾಮಿ ಆರ್ಥಿಕ ಸಿದ್ಧಾಂತವೇ ಎಲ್ಲಾ ಪಕ್ಷಗಳ ಅಧಿಕೃತ ಸಂವಿಧಾನವಾಗಿದೆ. ಆದರೆ ಖಾಸಗಿ ಕಾರ್ಪೊರೇಟ್ ಕಂಪೆನಿಗಳು ಬಂಡವಾಳ ಹೂಡಿಕೆ ಮಾಡುವುದು ‘Highest Returns in Safest Heavens’ (ಆತ್ಯಂತ ಸುರಕ್ಷಿತವಾಗಿ ಅತ್ಯಧಿಕ ಲಾಭ)ದಕ್ಕುವ ದೇಶ ಪ್ರದೇಶಗಳಲ್ಲಿ ಮಾತ್ರ.
ಹಾಲಿ ಕಾಲಘಟ್ಟದಲ್ಲಿ ದೊಡ್ಡ ದೊಡ್ಡ ವಿದೇಶಿ ಹಾಗೂ ಸ್ವದೇಶಿ ಕಾರ್ಪೊರೇಟ್ ಉದ್ಯಮಗಳು ಮಾಡುವ ಹೂಡಿಕೆ ಬಂಡವಾಳ ಮತ್ತು ತಂತ್ರಜ್ಞಾನ ಸಾಂದ್ರಿತವಾಗಿದೆಯೇ ವಿನಾ ಕಾರ್ಮಿಕ ಸಾಂದ್ರಿತವಾಗಿಲ್ಲ. ಅವರು ಮಾಡುತ್ತಿರುವ ಹೂಡಿಕೆಗಳೂ ಸಹ ಉನ್ನತ ತಂತ್ರಜ್ಞಾನವನ್ನು ಬಳಸುವ ಹಾಗೂ ಅಪಾಯಕಾರಿಯೂ ಆದ ಸೆಮಿ ಕಂಡಕ್ಟರ್, ಗ್ರೀನ್ ಹೈಡ್ರೋಜನ್ ಇನ್ನಿತ್ಯಾದಿ ಘಟಕಗಳಲ್ಲಿ ಅಥವಾ ಹೆಚ್ಚಿನ ಕಾರ್ಮಿಕರ ಅಗತ್ಯವೇ ಬೀಳದ ಕೃತಕ ಬುದ್ಧಿಮತ್ತೆ ಮತ್ತು ನವೀಕರಿಸುವ ಇಂಧನ ಮೂಲದ ಕ್ಷೇತ್ರಗಳಲ್ಲಿ.
ಹೀಗಾಗಿ ಪ್ರತಿಕೋಟಿ ರೂ. ಹೂಡಿಕೆಗೆ ತಲಾವಾರು ಉದ್ಯೋಗ ಸೃಷ್ಟಿಯ ಕೋಷ್ಟಕವನ್ನು ನೋಡಿದರೆ ಒಂದು ಕೋಟಿ ರೂ. ಹೂಡಿಕೆಗೆ ಒಂದು ಉದ್ಯೋಗವೂ ಸೃಷ್ಟಿಯಾಗದೇ ಇರುವುದು ಸ್ಪಷ್ಟವಾಗುತ್ತಿದೆ.
ಬದಲಿಗೆ ಸರಕಾರ ಕಾರ್ಪೊರೇಟ್‌ಗಳು ಮಾಡುವ ಹೂಡಿಕೆಗೆ ಅಗ್ಗದ ಭೂಮಿ, ತೆರಿಗೆ ವಿನಾಯಿತಿಗಳನ್ನು ಉದಾರವಾಗಿ ಘೋಷಿಸುತ್ತಿದೆ. ಇದರಿಂದ ರೈತರ ಬದುಕೂ ನಾಶವಾಗುತ್ತದೆ. ಬದಲಿಗೆ ಸರಕಾರಕ್ಕೆ ತೆರಿಗೆ ಆದಾಯವೂ ಇಲ್ಲ, ಉದ್ಯೋಗ ಸೃಷ್ಟಿಯೂ ಇಲ್ಲ.
ವಾಸ್ತವದಲ್ಲಿ ಈ ಬಂಡವಾಳ ಮತ್ತು ತಂತ್ರಜ್ಞಾನ ಸಾಂದ್ರಿತ ಉದ್ದಿಮೆಗಳಿಗೆ ಸಾವಿರಾರು ಎಕರೆ ಜಮೀನುಗಳ ಅಗತ್ಯವೂ ಇಲ್ಲ. ಆದರೂ ಬೇರೆ ಯಾವುದೇ ದೇಶದಲ್ಲಿ ಇಲ್ಲದಿದ್ದರೂ ಈ ಕಂಪೆನಿಗಳಿಗೆ ಕರ್ನಾಟಕ ಸರಕಾರ ಸಾವಿರಾರು ಎಕರೆ ಜಮೀನುಗಳನ್ನು ಕೊಟ್ಟು, ಅವು ರಿಯಲ್ ಎಸ್ಟೇಟ್ ಅಗಿ ಬಳಸಿಕೊಳ್ಳಲು ಪ್ರಲೋಭನೆ ಒಡ್ಡುತ್ತಿದೆ.
ಜೊತೆಗೆ ಈ ಕಾರ್ಪೊರೇಟ್ ಹೂಡಿಕೆಗಳು ಬಂದರೂ ಅವು ಈಗಾಗಲೇ ಮಾನವ ಹಾಗೂ ಭೌತಿಕ ಸಂಪನ್ಮೂಲಗಳು ಅಭಿವೃದ್ಧಿಯಾಗಿರುವ ಪ್ರದೇಶಗಳಲ್ಲಿ ಹೂಡಿಕೆ ಮಾಡುತ್ತವೆ ವಿನಾ, ಹಿಂದುಳಿದ ಪ್ರದೇಶಗಳಲ್ಲಲ್ಲ. ಇದರಿಂದ ಪ್ರಾದೇಶಿಕ ತಾರತಮ್ಯ ಹಾಗೂ ಎಲ್ಲಾ ಬಗೆಯ ಅಸಮಾನತೆಗಳೂ ಹೆಚ್ಚಾಗುತ್ತದೆ.
ಹೀಗಾಗಿ ಈ GIM ಎಂಬ ಕಾರ್ಪೊರೇಟ್- ಸರಕಾರಗಳ ಜಂಟಿ ದಂಧೆ ನಾಡಿಗೆ ಯಾವುದೇ ಉಪಯೋಗವಿಲ್ಲದ ಬದಲಿಗೆ ನಾಡನ್ನು ಅಗ್ಗದ ಬೆಲೆಗೆ ಮಾರಾಟ ಮಾಡುವ ಸಂವಿಧಾನ ಮತ್ತು ಜನವಿರೋಧಿ ದಂಧೆಯಾಗಿದೆ.
ಸಿದ್ದರಾಮಯ್ಯನವರ GIM ಮತ್ತು ‘ಕಾರ್ಪೊರೇಟ್ ಅಭಿವೃದ್ಧಿಯ ಮರುಕಲ್ಪನೆ’
ಇದೀಗ 2025ರಲ್ಲಿ ಆರನೇ ಸಮ್ಮೇಳನ ‘ಸಮಾಜವಾದಿ’ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಡೆಯುತ್ತಿದೆ. ಪ್ರಗತಿಯ ಮರುಕಲ್ಪನೆ ಎಂಬ ಉಚಿತ ಶೀರ್ಷಿಕೆ ಇದ್ದರೂ ಇದರಲ್ಲಿ ಕಾರ್ಪೊರೇಟ್ ಖಾಸಗಿ ಬಂಡವಾಳದ ಪ್ರಗತಿಯ ಮರುಕಲ್ಪನೆ ಬಿಟ್ಟು ಬೇರೇನೂ ಇಲ್ಲ.
ಸಿದ್ದರಾಮಯ್ಯನವರ ಸರಕಾರವೂ ಈಗಾಗಲೇ ಬೆಂಗಳೂರು ಹಾಗೂ ಹಲವಾರು ಜಿಲ್ಲೆಗಳಲ್ಲಿ ರೈತರಿಗೆ ಮತ್ತು ಕೂಲಿಕಾರರಿಗೆ ಸೇರಬೇಕಿರುವ ಒಂದು ಲಕ್ಷ ಎಕರೆಗೂ ಹೆಚ್ಚು ಜಮೀನನ್ನು ಈ GIMನಲ್ಲಿ ಭಾಗವಹಿಸಲಿರುವ ಕಾರ್ಪೊರೇಟ್ ಧಣಿಗಳಿಗೆ ಅಗ್ಗದ ದರದಲ್ಲಿ ನೀಡಲು ಕಸಿದುಕೊಂಡಿದೆ ಹಾಗೂ ತೆರಿಗೆ ರಿಯಾಯಿತಿಗಳನ್ನೂ ಘೋಷಿಸಿದೆ.
ಇದರ ಜೊತೆಗೆ ಭಾಗವಹಿಸುತ್ತಿರುವ ದೇಶಗಳ ಮತ್ತು ಉದ್ಯಮಿಗಳ ಪಟ್ಟಿಯಲ್ಲಿ ಉದ್ಯೋಗ ಸೃಷ್ಟಿ ಮಾಡುವ ಕ್ಷೇತ್ರಗಳೇ ಇಲ್ಲ. ನಡೆಯಲಿರುವ ನೂರಕ್ಕೂ ಹೆಚ್ಚು ಸಭೆಗಳಲ್ಲಿ ಸಣ್ಣ ರೈತಾಪಿ ಅಥವಾ ಮಳೆಯಾಶ್ರಿತ ಕೃಷಿ ನಾಡಿನಲ್ಲಿ ಹೂಡಿಕೆಯ ಪ್ರಸ್ತಾವವಿಲ್ಲ. ಶೇ. 60ಕ್ಕೂ ಹೆಚ್ಚು ಘೋಷಿತ ಸಂವಾದಕರು ಕೃತಕ ಬುದ್ಧಿಮತ್ತೆ ಕ್ಷೇತ್ರದವರು. ಉಳಿದವರು ಹಾಸ್ಪಿಟಾಲಿಟಿ ಮತ್ತು ನವ ಇಂಧನ ಕ್ಷೇತ್ರಗಳು. ನೆಪಮಾತ್ರಕ್ಕೆ ಎಂಎಸ್‌ಎಂಇ (ಕಿರು, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ) ಇಬ್ಬರು ಪ್ರತಿನಿಧಿಗಳು. ಇಷ್ಟಾದರೂ ಈಗಾಗಲೇ ಸಿದ್ದರಾಮಯ್ಯನವರ ಸರಕಾರವೂ ರೂ. 10 ಲಕ್ಷ ಕೋಟಿ ಹೂಡಿಕೆಯ ಬಣ್ಣದ ಬಲೂನುಗಳನ್ನು ತೇಲಿ ಬಿಟ್ಟಿದೆ.
ಸಂಘಿಗಳ GIMಗೂ, ಸಿದ್ಧರಾಮಯ್ಯನವರ GIMಗೂ ವ್ಯತ್ಯಾಸವೇನೂ ಇರದಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಏಕೆಂದರೆ ಸಿದ್ದರಾಮಯ್ಯನವರ ಸರಕಾರದ ಕೃಷಿ ಬೆಲೆ ಆಯೋಗವೂ ಮೋದಿ ಸರಕಾರದ ಕೃಷಿ ನೀತಿಗಳನ್ನು ಆಧರಿಸಬೇಕೆಂದು ಮಾರ್ಗ ಸೂಚಿ ನೀಡಲಾಗಿದೆ. ಅಧಿಕಾರಕ್ಕೆ ಬಂದು ಎರಡು ವರ್ಷಗಳು ಮುಗಿಯುತ್ತಾ ಬರುತ್ತಿದ್ದರೂ ಬಿಜೆಪಿ ಸರಕಾರ ಜಾರಿಗೆ ತಂದ ಎಪಿಎಂಸಿ ಕಾಯ್ದೆ, ಗೋಹತ್ಯಾ ನಿಷೇಧ ಕಾಯ್ದೆ ರದ್ದಾಗುವುದಿಲ್ಲ. ಉಪ ಮುಖ್ಯಮಂತ್ರಿ ಡಿಕೆಶಿಯವರ ಬೆಂಗಳೂರು ಅಭಿವೃದ್ಧಿ ಯೋಜನೆಯಲ್ಲಿ ಎರಡು ಮೂರು ಕಾರುಗಳಿಟ್ಟುಕೊಂಡಿರುವ ಮೇಲ್ ಮಧ್ಯಮ ವರ್ಗದವರಿಗಾಗಿ ರೂ. 50,000 ಕೋಟಿ ವೆಚ್ಚದ ಟನಲ್ ರೋಡುಗಳಿರುತ್ತವೇಯೇ ವಿನಾ ಸ್ಲಮ್ಮುಗಳ ಅಭಿವೃದ್ಧಿಯೇ ಇಲ್ಲ.
ಜೊತೆಗೆ ಸಿದ್ದರಾಮಯ್ಯನವರ ಸರಕಾರ ಫೆಲೆಸ್ತೀನಿಯರ ನರಮೇಧದಿಂದ ರಕ್ತಸಿಕ್ತವಾಗಿರುವ ಇಸ್ರೇಲಿ ಬಂಡವಾಳಿಗರನ್ನೂ ಕೂಡ ಕರ್ನಾಟಕದಲ್ಲಿ ಹೂಡಲು ಆಹ್ವಾನಿಸಿದೆ.
ಬೇಕಿರುವುದು GIM ಅಲ್ಲ- ಜನಕೇಂದ್ರಿತ ಅಭಿವೃದ್ಧಿ ಮಾದರಿ
ಎಲ್ಲಿಯತನಕ ಸಂವಿಧಾನದಲ್ಲಿ ನಿರ್ದೇಶಿತವಾಗಿರುವ ಕಲ್ಯಾಣ ರಾಜ್ಯದ ಅಥವಾ ಅದಕ್ಕಿಂತ ಎರಡು ಹೆಜ್ಜೆ ಮುಂದೆ ಹೋಗಿ ಸಮಾಜವಾದಿ ಅಭಿವೃದ್ಧಿ ಮಾದರಿಯನ್ನು ಅನುಸರಿಸದೆ ದೊಡ್ಡ ಖಾಸಗಿ ಬಂಡವಾಳಶಾಹಿ ಅಭಿವೃದ್ಧಿ ಮಾದರಿಯನ್ನು ದೇಶ ಹಾಗೂ ನಾಡು ಅನುಸರಿಸುತ್ತದೋ ಅಲ್ಲಿಯ ತನಕ ಈ GIMಗಳೇ ಅಭಿವೃದ್ಧಿಯ ಸಾಧನ ಎಂಬ ಮೋಸ ನಡೆಯುತ್ತಲೇ ಇರುತ್ತದೆ. ಪಕ್ಷಗಳು ಬದಲಾದರೂ ಕಾರ್ಪೊರೇಟೋಕ್ರಸಿ ನಿರಾತಂಕವಾಗಿ ಮುಂದುವರಿದಿರುತ್ತದೆ.
ಇಂದು ಬೇಕಿರುವುದು ಗ್ರಾಮೀಣ ಕೂಲಿ, ಸಣ್ಣ ರೈತ, ಸಣ್ಣ ಕಿರು ಉದ್ಯಮಗಳನ್ನು ಪೋಷಿಸುವ ಅರ್ಥಿಕ ಅಭಿವೃದ್ಧಿ ಮಾದರಿ. ಅತಿ ಹೆಚ್ಚು ಉದ್ಯೋಗ ಸೃಷ್ಟಿಯಾಗುತ್ತಿರುವುದು ಆ ಕ್ಷೇತ್ರಗಳಲ್ಲಿ ಮಾತ್ರ. ಕಾರ್ಪೊರೇಟ್ ಸಂಘಟಿತ ಕ್ಷೇತ್ರಗಳಲ್ಲಿ ಅಲ್ಲ. ಈ ದೇಶದ ಶೇ. 95 ಜನರು ಆಧರಿಸಿರುವುದು ಆ ಕ್ಷೇತ್ರವನ್ನು. ಈ GIMಗಳು ಆ ಆರ್ಥಿಕತೆಯನ್ನು ನುಂಗಿ ದೊಡ್ಡ ಕಾರ್ಪೊರೇಟ್‌ಗಳನ್ನು ಬೆಳಸುತ್ತವೆ.
ಹೀಗಾಗಿ ಈ GIM ಎಂಬ ಮಾದರಿಯನ್ನು ಸಂಘಿಗಳು ಹಿಂದುತ್ವದ ಹೆಸರಲ್ಲಿ ನಂಬಿಸಿದರೂ, ಸಿದ್ದರಾಮಯ್ಯನವರು ‘ನಾಡಿನ ಅಭಿವೃದ್ಧಿ’ ಎಂದು ನಂಬಿಸಿದರೂ ಅದು ಸಾಮಾನ್ಯ ಜನರಿಗೆ ಮತ್ತು ಸಂವಿಧಾನಕ್ಕೆ ಮಾಡುವ ದ್ರೋಹವೇ ಆಗಿರುತ್ತದೆ. ಹೀಗಾಗಿ ಈ GIM ಎಂಬ ಮಾದರಿಯನ್ನು ಸಂಘಿಗಳು ಹಿಂದುತ್ವದ ಹೆಸರಲ್ಲಿ ನಂಬಿಸಿದರೂ, ಸಿದ್ದರಾಮಯ್ಯನವರು ‘ನಾಡಿನ ಅಭಿವೃದ್ಧಿ’ ಎಂದು ನಂಬಿಸಿದರೂ ಅದು ಸಾಮಾನ್ಯ ಜನರಿಗೆ ಮತ್ತು ಸಂವಿಧಾನಕ್ಕೆ ಮಾಡುವ ದ್ರೋಹವೇ ಆಗಿರುತ್ತದೆ.