ಸಿದ್ದು ಬಜೆಟ್=ಮೋದಿ ಬಜೆಟ್+ಗ್ಯಾರಂಟಿ?

ಕಾರ್ಪೊರೇಟ್ ಬಂಡವಾಳವೇ ಪ್ರಗತಿಯ ಚಾಲಕ ಎಂಬ ಸಂವಿಧಾನ ವಿರೋಧಿ ನೀತಿಯನ್ನು ಅನುಸರಿಸುವ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ವಿತ್ತೀಯ ಶಿಸ್ತನ್ನು ಪಾಲಿಸುವುದನ್ನು ಜನರ ಅಭಿವೃದ್ಧಿಗಿಂತಲೂ ಮುಖ್ಯವೆಂದು ಭಾವಿಸುತ್ತವೆ. ಆದರೆ ಚುನಾವಣೆಯ ಅನಿವಾರ್ಯತೆಗಳು ಗ್ಯಾರಂಟಿಯಂತಹ ನೀತಿಗಳನ್ನು ಜಾರಿ ಮಾಡುವಂತೆ ಮಾಡಿದರೂ ಅದು ಚುನಾವಣಾ ಅನಿವಾರ್ಯತೆ ನೀಗುತ್ತಿದ್ದಂತೆ ಇಲ್ಲವಾಗುತ್ತಾ ಹೋಗುತ್ತದೆ ಅಥವಾ ಒಂದು ಕೈಯಲ್ಲಿ ಗ್ಯಾರಂಟಿಯನ್ನು ಕೊಟ್ಟು ಮತ್ತೊಂದು ಕೈಯಲ್ಲಿ ಕಿತ್ತುಕೊಳ್ಳುವ ನೀತಿ ಜಾರಿಯಾಗುತ್ತದೆ. ಹೀಗಾಗಿ ಒಂದು ಅರ್ಥದಲ್ಲಿ ಎಲ್ಲಾ ಸರಕಾರಗಳ ಬಜೆಟ್‌ಗಳು ಇದೇ ಕಾರ್ಪೊರೇಟ್ ಬಂಡವಾಳಶಾಹಿ ಆರ್ಥಿಕ ನೀತಿಗಳನ್ನೇ ತಮ್ಮ ಇತರ ಅನಿವಾರ್ಯತೆಗಳ ಮಟ್ಟಿಗೆ ಅಲ್ಪಸ್ವಲ್ಪ ತಿದ್ದುಪಡಿಗಳನ್ನು ಮಾಡಿಕೊಂಡು ಜಾರಿಗೆ ತರುತ್ತಿವೆ. ಅಷ್ಟರ ಮಟ್ಟಿಗೆ ಮಾತ್ರ ಯಾವುದೇ ಬಜೆಟ್ ಹೊಸತು. ಇಲ್ಲವಾದಲ್ಲಿ ಎಲ್ಲವೂ 1991ರಷ್ಟೇ ಹಳತು. ಹೀಗಾಗಿ ವಿತ್ತೀಯ ಶಿಸ್ತನ್ನು ಕಾಪಾಡಲಾಗಿದೆ ಎಂಬುದು ಜನಪರ ಘೋಷಣೆಯಲ್ಲ. ಕಾರ್ಪೊರೇಟ್ ಪರ ಘೋಷಣೆ.;

Update: 2025-03-12 11:48 IST
Editor : Thouheed | Byline : ಶಿವಸುಂದರ್
ಸಿದ್ದು ಬಜೆಟ್=ಮೋದಿ ಬಜೆಟ್+ಗ್ಯಾರಂಟಿ?
  • whatsapp icon

ಭಾಗ- 1

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ 16ನೇ ಬಜೆಟನ್ನು ಮಂಡಿಸಿ ದಾಖಲೆ ಸೃಷ್ಟಿಸಿದ್ದಾರೆ. ಬಜೆಟ್‌ನ ಬಗ್ಗೆ ಯಥಾ ಪ್ರಕಾರ ಬಿಜೆಪಿಗರು ಮಂಡನೆಗೆ ಮುಂಚೆಯೇ ಜನವಿರೋಧಿ ಬಜೆಟ್ ಎಂಬ ಹುಯಿಲೆಬ್ಬಿಸಿದ್ದರು. ಬಜೆಟ್ ಮಂಡನೆಯಾದ ನಂತರ ತನ್ನ ರಕ್ತದಲ್ಲಿ ಹರಿಯುತ್ತಿರುವ ದ್ವೇಷ ರಾಜಕಾರಣಕ್ಕೆ ತಕ್ಕಂತೆ ಸಿದ್ದು ಬಜೆಟನ್ನು ಹಲಾಲ್ ಬಜೆಟ್, ಮುಸ್ಲಿಮ್ ತುಷ್ಟೀಕರಣದ ಬಜೆಟ್ ಎಂದು ಕರೆಯುತ್ತಾ ತಾವು ಜವಾಬ್ದಾರಿಯುತ ವಿರೋಧ ಪಕ್ಷವಾಗುವುದಕ್ಕೂ ನಾಲಾಕ್ ಎಂದು ಸಾಬೀತು ಮಾಡಿದರು. ಮತ್ತೊಂದು ಕಡೆ ಕಾಂಗ್ರೆಸಿಗರು ಮತ್ತು ಕಾಂಗ್ರೆಸ್‌ವಾದಿ ಪ್ರಗತಿಪರರು ಸಿದ್ದು ಬಜೆಟನ್ನು ಕಂಡು ಕಾಣರಿಯದ ಜನಪರ ಬಜೆಟ್ ಎಂದು ಆರಾಧಿಸುತ್ತಿದ್ದಾರೆ. ಇನ್ನೊಂದು ಕಡೆ ಪ್ರಧಾನ ಶತ್ರುವಾದ ಬಿಜೆಪಿ ಮತ್ತು ಸಂಘಿ ಫ್ಯಾಶಿಸಂ ಅನ್ನು ಸೋಲಿಸಲು ಇಂದಿನ ಸಂದರ್ಭದಲ್ಲಿ ಕಾಂಗ್ರೆಸನ್ನು ಬೆಂಬಲಿಸುವುದು ಅನಿವಾರ್ಯ ಎಂದು ಭಾವಿಸಿರುವ ಪ್ರಾಮಾಣಿಕ ಫ್ಯಾಶಿಸ್ಟ್ ವಿರೋಧಿ ಶಕ್ತಿಗಳು ಕಾಂಗ್ರೆಸಿನ ಮತ್ತು ಪ್ರಸ್ತುತ ಸಿದ್ದು ಬಜೆಟಿನ ಹಲವಾರು ಜನವಿರೋಧಿ ಮತ್ತು ಮೋದಿವಾದಿ ನೀತಿಗಳ ಬಗ್ಗೆ ಗಾಂಧಾರಿ ಕುರುಡನ್ನು ವ್ಯಕ್ತಪಡಿಸಿದ್ದಾರೆ. ಇವೆಲ್ಲದರಾಚೆ ಸಿದ್ದು ಮಂಡಿಸಿರುವ ಬಜೆಟ್ ಮತ್ತು ಅದಕ್ಕೆ ಪೂರಕವಾಗಿ ಒದಗಿಸಿರುವ ಮಧ್ಯಮಾವಧಿ ವಿತ್ತೀಯ ನೀತಿ (MTFP)ಯಂತಹ ಇತರ ಸರಕಾರಿ ದಸ್ತಾವೇಜುಗಳೇ ಸಿದ್ದು ಬಜೆಟ್‌ನ ವಾಸ್ತವಿಕತೆಯನ್ನು ಸ್ಪಷ್ಟಪಡಿಸುತ್ತವೆ.

ಆದರೆ ಹಾಲಿ ಬಜೆಟ್‌ನ ಯಾವುದೇ ವಿಮರ್ಶೆಗೆ ಮುಂಚೆ ವಿರೋಧ ಪಕ್ಷವಾದ ಬಿಜೆಪಿ, ಅತ್ಯಂತ ದುರುದ್ದೇಶದಿಂದ ಬಜೆಟ್‌ನ ವಿಷಯದಲ್ಲೂ ತೋರುತ್ತಿರುವ ಕೋಮುವಾದಿ ಮತ್ತು ನಾಡದ್ರೋಹಿ ನೀತಿಗಳನ್ನು ಕರ್ನಾಟಕದ ಜನತೆ ಖಂಡಿಸಲೇ ಬೇಕು.

ಬಜೆಟನ್ನೂ ಹಲಾಲೆನ್ನುವ ಕಾಮಾಲೆ ಬಿಜೆಪಿ

ಈ ಬಜೆಟ್‌ನ ಅಂದಾಜು ವೆಚ್ಚ 4,09,000 ಕೋಟಿ ರೂ.ಗಳಾಗಲಿದ್ದು ಅದರಲ್ಲಿ 4,500 ಕೋಟಿ ರೂ.ಗಳನ್ನು ಅಲ್ಪಸಂಖ್ಯಾತ ಅಭಿವೃದ್ಧಿಗೆ ಎತ್ತಿಡಲಾಗಿದೆ. ಅಂದರೆ ಬಜೆಟ್‌ನ ಶೇ.1. ಇದನ್ನೇ ಮುಸ್ಲಿಮ್ ತುಷ್ಟೀಕರಣವೆಂದು ಆಪಾದಿಸುತ್ತಿದೆ. ಆದರೆ ಆ ಮೊತ್ತ ಕರ್ನಾಟಕ ರಾಜ್ಯದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರೆಂದು ಪರಿಗಣಿಸಲಾಗಿರುವ ಮುಸ್ಲಿಮ್, ಕ್ರಿಶ್ಚಿಯನ್, ಬೌದ್ಧ, ಸಿಖ್ ಮತ್ತು ಜೈನ ಈ ಎಲ್ಲಾ ಪಂಗಡದವರ ಅಭಿವೃದ್ಧಿಗೆ ತೆಗೆದಿಡಲಾಗಿರುವ ಮೊತ್ತ. ಕೇವಲ ಮುಸ್ಲಿಮರಿಗಲ್ಲ. ಎರಡನೆಯದಾಗಿ ರಾಜ್ಯದ ಶೇ. 16ರಷ್ಟಿರುವ ಮುಸ್ಲಿಮರು ಈ ಅಲ್ಪಸಂಖ್ಯಾತ ಸಮುದಾಯಗಳೊಳಗೆ ಶೇ.95 ರಷ್ಟಾಗುತ್ತಾರೆ. ಹೀಗಾಗಿ ಅಲ್ಪಸಂಖ್ಯಾತ ಸಮುದಾಯಗಳಿಗೆ ಒದಗಿಸಲಾಗುವ ಮೊತ್ತದ ಹೆಚ್ಚಿನ ಭಾಗ ಜನಸಂಖ್ಯಾವಾರು ಹೆಚ್ಚಿರುವ ಮುಸ್ಲಿಮರ ಕಲ್ಯಾಣಕ್ಕೆ ವ್ಯಯವಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಆ ಪ್ರಮಾಣದಲ್ಲಿ ನಾಡಿನ ಆರ್ಥಿಕತೆಯಲ್ಲಿ ತೊಡಗಿ ಕೊಂಡಿರುವ ಮುಸ್ಲಿಮ್ ಸಮುದಾಯ ಅಷ್ಟೇ ಪ್ರಮಾಣದಲ್ಲಿ ಜಿಎಸ್‌ಟಿಯನ್ನೂ ಕಟ್ಟುತ್ತಾರೆ. ಹಾಗೆ ನೋಡಿದರೆ ಮುಸ್ಲಿಮ್ ಸಮುದಾಯದ ತೆರಿಗೆ ಕೊಡುಗೆ, ಅವರ ಜನಸಂಖ್ಯೆಯನ್ನು ಹೋಲಿಸಿದರೆ ಮುಸ್ಲಿಮ್ ಸಮುದಾಯದ ಕಲ್ಯಾಣಕ್ಕೆ ಒದಗಿಸಲಾಗಿರುವ ಮೊತ್ತ ತೀರಾ ಕಡಿಮೆ. ಬಜೆಟ್‌ನಲ್ಲಿ ಮೀಸಲಿಟ್ಟ ಅನುದಾನವೆಲ್ಲವನ್ನೂ ವೆಚ್ಚ ಮಾಡಲಾಗುತ್ತದೆಯೇ ಅಥವಾ ಬಜೆಟ್‌ನಲ್ಲಿ ಪ್ರಸ್ತಾವಿತವಾದ ವೆಚ್ಚದ ರೀತಿಯಿಂದ ಮುಸ್ಲಿಮರ ಕಲ್ಯಾಣವಾಗುತ್ತದೆಯೇ ಎಂಬುದು ಬೇರೆ ವಿಷಯ. ವಾಸ್ತವದಲ್ಲಿ ಒಂದು ಜವಾಬ್ದಾರಿಯುತ ವಿರೋಧ ಪಕ್ಷ ಸರಕಾರವನ್ನು ಈ ವಿಷಯಗಳ ಬಗ್ಗೆ ಪ್ರಶ್ನಿಸಬಹುದಿತ್ತು. ಆದರೆ ದ್ವೇಷ ರಾಜಕಾರಣದ ಬಿಜೆಪಿ ಒಂದು ಜವಾಬ್ದಾರಿಯುತ ವಿರೋಧ ಪಕ್ಷವಾಗಿಯೂ ಕೆಲಸ ನಿರ್ವಹಿಸದೆ ಕೋಮುವಾದವನ್ನು ಬಿತ್ತುವುದಕ್ಕೆ ಮತ್ತು ನಾಡನ್ನು ಒಡೆಯುವುದಕ್ಕೆ ಬಜೆಟನ್ನೂ ಬಳಸಿಕೊಳ್ಳುತ್ತಿದೆ.

ಕೇಂದ್ರದ ತಾರತಮ್ಯ ಮತ್ತು ನಾಡದ್ರೋಹಿ ಬಿಜೆಪಿ

ಸಿದ್ದು ಬಜೆಟ್‌ನ ವಿಶ್ಲೇಷಣೆಗೆ ಮುನ್ನ ಮೋದಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಕರ್ನಾಟಕ ರಾಜ್ಯ ಸಂಪನ್ಮೂಲ ಸಂಗ್ರಹಣೆಯಲ್ಲಿ ಎದುರಿಸುತ್ತಿರುವ ಮತ್ತೊಂದು ಅನ್ಯಾಯವನ್ನು ಗಮನಿಸಲೇ ಬೇಕು. ಮೋದಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಸಹಕಾರಿ ಒಕ್ಕೂಟ ನೀತಿಯನ್ನು ಅನುಸರಿಸುವ ಭರವಸೆಯನ್ನು ನೀಡಿದ್ದರೂ ಹಣಕಾಸು ಆಯೋಗದ ಜೊತೆ ಸೇರಿ ಕೇಂದ್ರದ ತೆರಿಗೆಯಲ್ಲಿ ರಾಜ್ಯದ ಪಾಲನ್ನು ಹಾಗೂ ಕೇಂದ್ರೀಯ ಮತ್ತು ಕೇಂದ್ರ ಪ್ರಾಯೋಜಿತ ಕಾರ್ಯಕ್ರಮಗಳಲ್ಲಿ ಕೇಂದ್ರ ಕೊಡಬೇಕಾದ ಪಾಲನ್ನೂ ಹಾಗೂ ಕೇಂದ್ರದಿಂದ ನಾಡಿಗೆ ದಕ್ಕಬೇಕಿರುವ ಅನುದಾನದ ಪಾಲನ್ನು ಕಡಿತಗೊಳಿಸುತ್ತಾ ಬಂದಿದೆ. ಇವೆಲ್ಲದರಿಂದ ರಾಜ್ಯಕ್ಕೆ ಏನಿಲ್ಲವೆಂದರೂ ವರ್ಷಕ್ಕೆ ರೂ. 12-15,000 ಕೋಟಿ ತೆರಿಗೆ ಪಾಲನ್ನು ಕೇಂದ್ರ ವಂಚಿಸುತ್ತಿದೆ. ಆದರೆ ಈ ತಾರತಮ್ಯ ಮತ್ತು ವಂಚನೆಯ ಬಗ್ಗೆ ರಾಜ್ಯದ ಬಿಜೆಪಿ ಮತ್ತು ಜೆಡಿಎಸ್‌ನ 19 ಎಂಪಿಗಳು ಒಮ್ಮೆಯೂ ಸದನದಲ್ಲಿ ಬಾಯಿ ಬಿಚ್ಚಿಲ್ಲ ಅಥವಾ ತಮ್ಮದೇ ಪಕ್ಷದ ಸರಕಾರವಿರುವಾಗ ಅನ್ಯಾಯವಾದಂತೆ ಒತ್ತಡವನ್ನು ಬೀರಿಲ್ಲ. ಇದು ಬಿಜೆಪಿ ಮಾಡುತ್ತಿರುವ ಮಹಾನ್ ನಾಡದ್ರೋಹ. ಇದರಿಂದಾಗಿ ನಾಡಿನ ಜನರ ಅಭಿವೃದ್ಧಿ ಮತ್ತು ಪ್ರಗತಿಗೆ ಬೇಕಿರುವ ಸಂಪನ್ಮೂಲಗಳಲ್ಲಿ ಕೊರತೆಯುಂಟಾಗುತ್ತಿದೆ ಎನ್ನುವುದು ನಿಜ. ಅಷ್ಟು ಮೊತ್ತ ಬಂದಿದ್ದರೆ ಸಿದ್ದು ಸರಕಾರ ಈ ನಾಡಿನ ಸಾಮಾನ್ಯ ಜನರ ಅಭಿವೃದ್ಧಿಗೆ ಬಳಸುತ್ತಿತ್ತೇ ಅಥವಾ ಅದನ್ನೂ ಉಳಿದ ಮೊತ್ತದಲ್ಲಿ ಮಾಡುತ್ತಿರುವಂತೆ ಎಲ್ಲಾ ಕ್ಷೇತ್ರಗಳಲ್ಲೂ ಕಾರ್ಪೊರೇಟ್ ಬಂಡವಾಳಶಾಹಿ ಅಭಿವೃದ್ಧಿಗೆ ಬಳಸುತ್ತಿತ್ತೇ ಎಂಬುದು ಎರಡನೇ ವಿಷಯ. ಆದರೆ ಕೇಂದ್ರದಿಂದ ಕರ್ನಾಟಕಕ್ಕೆ ವಂಚನೆಯಾಗುತ್ತಿರುವುದನ್ನು ಮತ್ತು ರಾಜ್ಯ ಬಿಜೆಪಿ ಅದಕ್ಕೆ ಕುಮ್ಮಕ್ಕಾಗಿರುವುದನ್ನು ನಾಡಿನ ಜನತೆ ಖಂಡಿಸಲೇ ಬೇಕು.

ಅದೇ ವೇಳೆ ಕೇಂದ್ರದಿಂದ ಬರಬೇಕಾದ ಪಾಲು ಹೆಚ್ಚೆಂದರೆ ರಾಜ್ಯದ ವಾರ್ಷಿಕ ವೆಚ್ಚದ ಕೇವಲ ಶೇ. 5-10ರಷ್ಟು ಮಾತ್ರ ಎಂಬುದನ್ನು ಮರೆಯಬಾರದು. ಇಷ್ಟು ಬರಲೇ ಬೇಕು. ಆದರೆ ಸಿದ್ದು ಸರಕಾರದ ಉಳಿದ ನೀತಿಗಳು ಮತ್ತು ವೆಚ್ಚಗಳನ್ನು ನಿರ್ಧರಿಸುವುದು ಸಿದ್ದು ಸರಕಾರ ರೂಢಿಸಿಕೊಳ್ಳುವ ಶೇ. 95ರಷ್ಟು ಆದಾಯ ಮತ್ತು ವೆಚ್ಚಗಳು ಆಗಿವೆ. ಹೀಗಾಗಿ ಸಿದ್ದು ಸರಕಾರದ ಎಲ್ಲಾ ತಪ್ಪುಗಳಿಗೂ ಶೇ. 5ರಷ್ಟು ಪಾಲು ಕೇಂದ್ರದಿಂದ ಸಿದಿರುವುದನ್ನು ಕಾರಣವಾಗಿಸಬಾರದು. ಅದು ಆತ್ಮ ವಂಚಕ.

ಈಗ ಸಿದ್ದು ಬಜೆಟನ್ನು ಅ) ಸಂವಿಧಾನದ ಹಿನ್ನೆಲೆಯಲ್ಲಿ, ಆ) 1991ರ ನಂತರ ಬದಲಾದ ಆರ್ಥಿಕ ನೀತಿಯ ಹಿನ್ನೆಲೆಯಲ್ಲಿ ಇ) ಬಜೆಟ್‌ನ ಅಂದಾಜುಗಳ ತಥ್ಯತೆಯ ಹಿನ್ನೆಲೆಯಲ್ಲಿ ಮತ್ತು ಈ) ಬಜೆಟ್‌ನಲ್ಲಿ ಮುಂದುವರಿಸಲಾಗಿರುವ ವರ್ಗ ಹಿತಾಸಕ್ತಿಯ ಹಿನ್ನೆಲೆಯಲ್ಲಿ ಪರಿಶೀಲಿಸಬಹುದು

ಸಂವಿಧಾನದ ನಿರ್ದೇಶನ ಮತ್ತು ಬಜೆಟ್‌ಗಳು

ಯಾವುದೇ ಬಜೆಟ್ ತನ್ನಂತೆ ತಾನೇ ಒಂದು ಆರ್ಥಿಕ ನೀತಿಯಲ್ಲ. ಹಾಗೆ ನೋಡಿದರೆ ಈ ದೇಶದ ಆರ್ಥಿಕ ನೀತಿಗಳು ಹೇಗಿರಬೇಕೆಂದು ಸಂವಿಧಾನದ ಆರ್ಟಿಕಲ್ 38-48ರಲ್ಲಿ ಇರುವ ಪ್ರಭುತ್ವ ನಿರ್ದೇಶನಾ ತತ್ವಗಳು ಸ್ಪಷ್ಟಪಡಿಸಿವೆ. ಅದರ ಆಶಯಗಳು ಸಂಪತ್ತನ್ನು ಸಮಾನವಾಗಿ ವಿತರಣೆ ಮಾಡುತ್ತಾ, ಯಾವುದೇ ಐತಿಹಾಸಿಕ ಸಾಮಾಜಿಕ ತಾರತಮ್ಯಗಳು ಮುಂದುವರಿಯದೆ. ಸಕಲರೂ ಲಿಂಗ, ಜಾತಿ, ಧರ್ಮಗಳ ಭೇದಭಾವವಿಲ್ಲದೆ ಘನತೆಯಿಂದ ಬದುಕಲು ಮತ್ತು ಸಬಲ ನಾಗರಿಕರಾಗುವಂತೆ ಆರ್ಥಿಕ ನೀತಿಗಳನ್ನು ರೂಪಿಸಬೇಕು. ಅರ್ಥಾತ್ ಸಾಮಾನ್ಯ ಜನರನ್ನು ಆರ್ಥಿಕತೆಯ ಫಲಾನುಭವಿಗಳನ್ನಾಗಿಯಲ್ಲದೆ ಚಾಲಕಶಕ್ತಿಯನ್ನಾಗಿಸಿಕೊಳ್ಳುವ ಕಲ್ಯಾಣ ರಾಜ್ಯದ ಆರ್ಥಿಕ ನೀತಿಯನ್ನು ಜಾರಿ ಮಾಡುವಂತೆ ಸಂವಿಧಾನ ಪ್ರಭುತ್ವಕ್ಕೆ ನಿರ್ದೇಶನ ಮಾಡಿದೆ. ಇದೇ ಪ್ರತೀ ಬಜೆಟ್‌ನ ಪ್ರತೀ ಸರಕಾರದ ಆರ್ಥಿಕ ನೀತಿಗಳ ನೀಲ ನಕ್ಷೆಯಾಗಬೇಕು. ಈ ನೀಲನಕ್ಷೆ ಸ್ವಾತಂತ್ರ್ಯ ಹೋರಾಟದ ಸಾರ.

ಕಾರ್ಪೊರೇಟ್‌ವಾದಿ ಆರ್ಥಿಕತೆ ಮತ್ತು ಭಿನ್ನವಿಲ್ಲದ ಬಜೆಟ್‌ಗಳು

ಆದರೆ 1991ರ ನಂತರ ಮನಮೋಹನ್ ಸಿಂಗ್ ನೇತೃತ್ವದಲ್ಲಿ ಕಾಂಗ್ರೆಸ್ ಎಲ್ಲಾ ಪ್ರತಿಪಕ್ಷಗಳ ಸಕ್ರಿಯ ಸಮ್ಮತಿಯೊಂದಿಗೆ ಜಾರಿ ಮಾಡಿದ ನವ ಉದಾರವಾದಿ ಆರ್ಥಿಕ ನೀತಿಗಳು ಸಂವಿಧಾನದ ಈ ಆಶಯಕ್ಕೆ ತದ್ವಿರುದ್ಧವಾಗಿ ಕಾರ್ಪೊರೇಟ್ ಬಂಡವಾಳಶಾಹಿ ಆರ್ಥಿಕತೆಯನ್ನು ಚಾಲಕ ಶಕ್ತಿಯನ್ನಾಗಿಸಿಕೊಂಡು ಸಾಮಾನ್ಯ ಜನರ ಕೃಷಿ, ಉತ್ಪಾದನೆ ಮತ್ತು ಸೇವಾ ಕ್ಷೇತ್ರಗಳನ್ನು ಅದಕ್ಕೆ ಅಡಿಯಾಳಾಗಿಸಿತು. 2002ರಲ್ಲಿ ಜಾರಿಯಾದ ವಿತ್ತೀಯಾ ಹೊಣೆಗಾರಿಕೆ ಮತ್ತು ಬಜೆಟ್ ನಿರ್ವಹಣೆ ಕಾಯ್ದೆಯಂತೂ (FRBM) ಸರಕಾರವು ಜನಕಲ್ಯಾಣಕ್ಕೆ ಮಾಡುವ ವೆಚ್ಚವನ್ನೇ ತಗ್ಗಿಸಿ, ಎಲ್ಲಾ ಸರಕಾರಿ ಸೇವೆಗಳನ್ನು ಖಾಸಗೀಕರಿಸಬೇಕೆಂದೂ, ಶುಲ್ಕ ವಿಧಿಸಬೇಕೆಂದೂ, ಸರಕಾರಿ ಆದಾಯವನ್ನು ಹೆಚ್ಚಿಸಿಕೊಂಡು ಅದನ್ನು ಕಾರ್ಪೊರೇಟ್ ಆರ್ಥಿಕತೆಗೆ ಪೂರಕವಾದ ಮೂಲಭೂತ ಸೌಕರ್ಯವನ್ನು ಹೆಚ್ಚಿಸಲು ಬಳಸಬೇಕೆಂದೂ ಕಡ್ಡಾಯ ಮಾಡುತ್ತದೆ. ಈ ಶಾಸನವನ್ನು ಸಹ ಎಲ್ಲಾ ಪಕ್ಷಗಳು ಒಪ್ಪಿಕೊಂಡು ಜಾರಿಗೆ ತಂದಿವೆ. ಅಷ್ಟು ಮಾತ್ರವಲ್ಲದೆ ಸರಕಾರ ತನ್ನ ಖರ್ಚನ್ನು ಕಡಿಮೆ ಮಾಡಿಕೊಂಡು, ಆದಾಯವನ್ನು ಹೆಚ್ಚಿಸಿಕೊಂಡು ವಿತ್ತೀಯ ಶಿಸ್ತನ್ನು ಕಾಪಾಡಿಕೊಂಡು ಬರಬೇಕೆಂದು ತಾಕೀತು ಮಾಡುತ್ತದೆ. ಸರಕಾರದ ಆಡಳಿತ ನಿರ್ವಹಣೆಗೆ ಬೇಕಾದ ವೆಚ್ಚವು ಸರಕಾರದ ರೆವೆನ್ಯೂ ಆದಾಯಕ್ಕಿಂತ ಹೆಚ್ಚಿರಬಾರದು ಮತ್ತು ಸರಕಾರ ಮಾಡುವ ಒಟ್ಟಾರೆ ವೆಚ್ಚ ಆದಾಯಕ್ಕಿಂತ ಹೆಚ್ಚಾದರೆ ಮಾಡುವ ಸಾಲ ರಾಜ್ಯದ ಜಿಡಿಪಿಯ ಶೇ. 3ನ್ನು ಮೀರಬಾರದೆಂದು ತಾಕೀತು ಮಾಡುತ್ತದೆ. ಅದನ್ನೇ ವಿತ್ತೀಯ ಕೊರತೆಯ ಪ್ರಮಾಣ ಎಂದು ಕರೆಯುತ್ತಾರೆ ಹಾಗೂ ಈ ವಿತ್ತೀಯ ಕೊರತೆಯು ಕಡಿಮೆ ಇದ್ದರೆ ಸರಕಾರದ ಸಂಪನ್ಮೂಲಗಳು ಖಾಸಗಿ ಹೂಡಿಕೆದಾರರಿಗೆ ಲಭ್ಯವಾಗುತ್ತದೆ.

ಆದ್ದರಿಂದ ಕಾರ್ಪೊರೇಟ್ ಹೂಡಿಕೆದಾರರು ಎಲ್ಲಿ ವಿತ್ತೀಯ ಶಿಸ್ತನ್ನು ಪಾಲಿಸಲಾಗುತ್ತಿರುತ್ತದೆಯೋ ಅರ್ಥಾತ್ ಜನರಿಗೆ ಸಲ್ಲಬೇಕಾದ ಸಂಪನ್ಮೂಲ ಕಾರ್ಪೊರೇಟ್ ಬಂಡವಾಳಿಗರ ಪಾಲು ಮಾಡುವ ಶಿಸ್ತನ್ನು ಪಾಲಿಸಲಾಗುತ್ತಿರುತ್ತದೆಯೋ ಆ ರಾಜ್ಯ ಮತ್ತು ಆದೇಶಕ್ಕೆ ಕಾರ್ಪೊರೇಟ್ ಹೂಡಿಕೆದಾರರು ಹರಿದು ಬರುತ್ತಾರೆ. ಕಾರ್ಪೊರೇಟ್ ಬಂಡವಾಳವೇ ಪ್ರಗತಿಯ ಚಾಲಕ ಎಂಬ ಸಂವಿಧಾನ ವಿರೋಧಿ ನೀತಿಯನ್ನು ಅನುಸರಿಸುವ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ವಿತ್ತೀಯ ಶಿಸ್ತನ್ನು ಪಾಲಿಸುವುದನ್ನು ಜನರ ಅಭಿವೃದ್ಧಿಗಿಂತಲೂ ಮುಖ್ಯವೆಂದು ಭಾವಿಸುತ್ತಾರೆ. ಆದರೆ ಚುನಾವಣೆಯ ಅನಿವಾರ್ಯತೆಗಳು ಗ್ಯಾರಂಟಿಯಂತಹ ನೀತಿಗಳನ್ನು ಜಾರಿ ಮಾಡುವಂತೆ ಮಾಡಿದರೂ ಅದು ಚುನಾವಣಾ ಅನಿವಾರ್ಯತೆ ನೀಗುತ್ತಿದ್ದಂತೆ ಇಲ್ಲವಾಗುತ್ತಾ ಹೋಗುತ್ತದೆ ಅಥವಾ ಒಂದು ಕೈಯಲ್ಲಿ ಗ್ಯಾರಂಟಿಯನ್ನು ಕೊಟ್ಟು ಮತ್ತೊಂದು ಕೈಯಲ್ಲಿ ಕಿತ್ತುಕೊಳ್ಳುವ ನೀತಿ ಜಾರಿಯಾಗುತ್ತದೆ. ಹೀಗಾಗಿ ಒಂದು ಅರ್ಥದಲ್ಲಿ ಎಲ್ಲಾ ಸರಕಾರಗಳ ಬಜೆಟ್‌ಗಳು ಇದೇ ಕಾರ್ಪೊರೇಟ್ ಬಂಡವಾಳಶಾಹಿ ಆರ್ಥಿಕ ನೀತಿಗಳನ್ನೇ ತಮ್ಮ ಇತರ ಅನಿವಾರ್ಯತೆಗಳ ಮಟ್ಟಿಗೆ ಅಲ್ಪಸ್ವಲ್ಪ ತಿದ್ದುಪಡಿಗಳನ್ನು ಮಾಡಿಕೊಂಡು ಜಾರಿಗೆ ತರುತ್ತಿವೆ. ಅಷ್ಟರ ಮಟ್ಟಿಗೆ ಮಾತ್ರ ಯಾವುದೇ ಬಜೆಟ್ ಹೊಸತು. ಇಲ್ಲವಾದಲ್ಲಿ ಎಲ್ಲವೂ 1991ರಷ್ಟೇ ಹಳತು. ಹೀಗಾಗಿ ವಿತ್ತೀಯ ಶಿಸ್ತನ್ನು ಕಾಪಾಡಲಾಗಿದೆ ಎಂಬುದು ಜನಪರ ಘೋಷಣೆಯಲ್ಲ. ಕಾರ್ಪೊರೇಟ್ ಪರ ಘೋಷಣೆ. ಜನವಿರೋಧಿ ಘೋಷಣೆ. ಆ ಘೋಷಣೆಯನ್ನು ಸಿದ್ದರಾಮಯ್ಯನವರು ಬಜೆಟ್‌ನುದ್ದಕ್ಕೂ ಮಾಡುತ್ತಾರೆ. ಆದರೆ ಅದರಲ್ಲೂ ಹಲವು ಸುಳ್ಳುಗಳನ್ನು ಹೇಳಲಾಗಿದೆ.

ಸಿದ್ದು ವಿತ್ತ ಶಿಸ್ತು-ಪವಾಡವಲ್ಲ-ಕಣ್ಕಟ್ಟು, ಉತ್ಪ್ರೇಕ್ಷೆ

ಬಜೆಟೆಂದರೆ ಒಂದು ಊಹೆ. ಆ ವರ್ಷ ರಾಜ್ಯದ, ರಾಷ್ಟ್ರದ ಮತ್ತು ಅಂತರ್‌ರಾಷ್ಟ್ರೀಯ ಆರ್ಥಿಕ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡಾಗ ರಾಜ್ಯದಲ್ಲಿ ಅಥವಾ ದೇಶದಲ್ಲಿ ಸರಕು ಮತ್ತು ಸೇವೆಗಳ ವಹಿವಾಟು ಅರ್ಥಾತ್ ಆರ್ಥಿಕ ಪ್ರಗತಿ ಎಷ್ಟಾಗಬಹುದು ಎಂದು ಅಂದಾಜಿಸಿ, ಅದರ ಆಧಾರದಲ್ಲಿ ರಾಜ್ಯದ ತೆರಿಗೆ ಆದಾಯ ಎಷ್ಟು ಬರಬಹುದು ಎಂದು ಅಂದಾಜಿಸಲಾಗುತ್ತದೆ ಹಾಗೂ ಅಷ್ಟು ಆದಾಯ ಬರುತ್ತದೆಂಬ ಅಂದಾಜಿನ ಮೇಲೆ ವೆಚ್ಚ ಎಷ್ಟು ಮಾಡಬಹುದು ಎಂಬುದನ್ನು ಅಂದಾಜಿಸಲಾಗುತ್ತದೆ ಹಾಗೂ ಆ ವೆಚ್ಚವನ್ನು ಪೂರ್ವ ನಿರ್ಧಾರಿತವಾದ ಕಾರ್ಪೊರೇಟ್ ಪರ ಆರ್ಥಿಕ ನೀತಿಗೆ ತಕ್ಕಂತೆ ಯಾವ್ಯಾವ ಬಾಬತ್ತಿಗೆ ಎಷ್ಟೆಷ್ಟು ಎಂದು ಅಂದಾಜಿಸಲಾಗುತ್ತದೆ. ಅಂದಾಜು ವೆಚ್ಚದಷ್ಟು ಆದಾಯವಿರದಿದ್ದಾಗ ಉಂಟಾಗುವ ಕೊರತೆಯನ್ನು ಸಾಲ ಮಾಡಿ ಭರಿಸಲಾಗುತ್ತದೆ. ಈ ಸಾಲಕ್ಕೆ ಕಟ್ಟುವ ಬಡ್ಡಿಯೂ ವೆಚ್ಚದ ಪ್ರಮುಖ ಭಾಗವಾಗುತ್ತದೆ.

ರಾಜ್ಯ ಆಯಗಳಲ್ಲಿ ಪ್ರಮುಖವಾಗಿ ತನ್ನ ಸ್ವಂತ ಮೂಲಗಳಿಂದ ಬರುವ ಆದಾಯ, ಕೇಂದ್ರದಿಂದ ಬರಬೇಕಾದ ಪಾಲು ಮತ್ತು ಸಾಲ ಎಂಬ ಮೂರು ಭಾಗಗಳಿರುತ್ತವೆ. 2017ರಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಯಾಗುವವರೆಗೆ ರಾಜ್ಯವು ವಾಣಿಜ್ಯ ತೆರಿಗೆ, ಮಾರಾಟ ತೆರಿಗೆಗಳನ್ನು ಕೂಡ ಹೇರುತ್ತಿತ್ತು. ಆದರೆ 2017ರಲ್ಲಿ ಎಲ್ಲಾ ಪಕ್ಷಗಳು ಮತ್ತು ಎಲ್ಲಾ ಸರಕಾರಗಳು ಅವನ್ನು ಜಿಎಸ್‌ಟಿಯಲ್ಲಿ ವಿಲೀನಗೊಳಿಸಲು ಒಪ್ಪಿಕೊಂಡವು. ಏಕೆಂದರೆ ಆ ಜಿಎಸ್‌ಟಿಯು ಸಾಮಾನ್ಯ ಜನರ ಮೇಲೆ ಹೆಚ್ಚೆಚ್ಚು ತೆರಿಗೆ ಹಾಕಿ ಸುಲಿಯಲು ಅವಕಾಶ ಮಾಡಿಕೊಟ್ಟಿತ್ತು. ಹೆಚ್ಚು ಸುಲಿಗೆಯಾದರೆ ಹೆಚ್ಚು ಪಾಲು ಸಿಗುತ್ತದೆಂದು ಎಲ್ಲಾ ಪಕ್ಷಗಳು ಸಾಮಾನ್ಯ ಜನರನ್ನು ಸುಲಿಯುವ ಈ ಸುಲಿಗೆಕೋರ ಜಿಎಸ್‌ಟಿ ವ್ಯವಸ್ಥೆಗೆ ಒಪ್ಪಿಕೊಂಡವು. ಹೀಗಾಗಿ ಈ ಜಿಎಸ್‌ಟಿ ಎಂಬ ಸುಲಿಗೆ ಸಾಧನದಲ್ಲಿ ಕಾಂಗ್ರೆಸ್ ಮತ್ತು ಎಲ್ಲಾ ರಾಜ್ಯ ಸರಕಾರಗಳು ಸ್ವಸಂತೋಷದಿಂದ ಭಾಗಿಯಾದವು ಎಂಬುದನ್ನು ಮರೆಯಬಾರದು. ಆದ್ದರಿಂದ ಸಿದ್ದು ಸಂಕಷ್ಟಕ್ಕೆ ಜಿಎಸ್‌ಟಿ ಕಾರಣವೆಂಬುದು ಕೂಡ ಮೋಸದ ಕಾಂಗ್ರೆಸ್ ವಾದವೇ ಆಗಿದೆ. ಇದರಲ್ಲಿ ರಾಜ್ಯಕ್ಕೆ ಸಲ್ಲಬೇಕಾದ ಎಸ್‌ಜಿಎಸ್‌ಟಿ ತಾನಾಗಿ ರಾಜ್ಯಕ್ಕೆ ಬರುತ್ತದೆ. ಮೋಸವಾಗುತ್ತಿರುವುದು ಕೇಂದ್ರದ ಪಾಲಾಗುವ ಸಿಜಿಎಸ್‌ಟಿ ಮತ್ತು ಕೇಂದ್ರವೇ ಹಾಕುವ ಕಾರ್ಪೊರೇಟ್ ತೆರಿಗೆ, ಆದಾಯ ತೆರಿಗೆ, ಕಸ್ಟಮ್ಸ್ ತೆರಿಗೆ ಇನ್ನಿತ್ಯಾದಿಗಳಲ್ಲಿ ರಾಜ್ಯಕ್ಕೆ ದಕ್ಕಬೇಕಾದ ಪಾಲಿನಲ್ಲಿ. ಇದರಲ್ಲಿ ಮೋದಿ ಸರಕಾರ ಮತ್ತು ಸ್ಥಳೀಯ ಬಿಜೆಪಿ ದ್ರೋಹವೆಸಗುತ್ತಿದೆ.

ಇದಲ್ಲದೆ ರಾಜ್ಯ ಸರಕಾರ ಮೋಟಾರ್ ತೆರಿಗೆ, ಸ್ಟ್ಯಾಂಪ್ ಮತ್ತು ಡ್ಯೂಟೀಸ್, ಅಬಕಾರಿ ತೆರಿಗೆ, ಪೆಟ್ರೋಲ್ ತೆರಿಗೆ ಮತ್ತು ವಿದ್ಯುತ್ ತೆರಿಗೆಗಳನ್ನು ಹಾಕಬಹುದು.

ಇದಲ್ಲದೆ ಸರಕಾರ ಖಾಸಗಿ ಗಣಿಗಳಿಗೆ ಶುಲ್ಕ ವಿಧಿಸುವ ಮೂಲಕ, ತಾನು ಹೂಡಿರುವ ಹೂಡಿಕೆಗಳಿಂದ ಬರುವ ಲಾಭ, ತಾನು ಕೊಟ್ಟಿರುವ ಸಾಲದ ಮೇಲಿನ ಬಡ್ಡಿ ಮತ್ತು ತಾನು ಒದಗಿಸುತ್ತಿರುವ ನೀರು, ಸಾರಿಗೆ, ತಂಗುದಾಣ ಇನ್ನಿತ್ಯಾದಿ ಸೇವೆಗಳ ಮೇಲೆ ಶುಲ್ಕ ವಿಧಿಸುವ ಮೂಲಕವೂ ಆದಾಯವನ್ನು ಸಂಗ್ರಹಿಸುತ್ತದೆ. ಅವನ್ನು ತೆರಿಗೆಯೇತರ ಆದಾಯ ಎನ್ನುತ್ತಾರೆ. ಖನಿಜ ಸಂಪತ್ತು ಹೆಚ್ಚಿಲ್ಲದ ರಾಜ್ಯಗಳಲ್ಲಿ ಈ ತೆರಿಗೆಯೇತರ ಆದಾಯದ ಪಾಲು ಕಡಿಮೆ. ಕಾರ್ಪೊರೇಟ್ ಅರ್ಥಶಾಸ್ತ್ರಜ್ಞರು ಹಾಗೂ ಅಂತರ್‌ರಾಷ್ಟ್ರೀಯ ಬಂಡವಾಳಶಾಹಿ ಸಂಸ್ಥೆಗಳಾದ ವಿಶ್ವಬ್ಯಾಂಕ್ ಮತ್ತು ಐಎಮ್‌ಎಫ್‌ಗಳು ತೆರಿಗೆಯೇತರ ಆದಾಯ ಹೆಚ್ಚು ಮಾಡಿಕೊಳ್ಳಬೇಕೆಂದು ಅರ್ಥಾತ್ ಸರಕಾರ ಕೊಡುತ್ತಿರುವ ಸೇವೆಗಳಿಗೆ ಹೆಚ್ಚೆಚ್ಚು ಶುಲ್ಕ ವಿಧಿಸಿ ಜನರಿಂದ ವಸೂಲಿ ಮಾಡಬೇಕೆಂದು ತಾಕೀತು ಮಾಡುತ್ತಿವೆ. ಅದರ ಭಾಗವಾಗಿಯೇ ಸಿದ್ದು ಸರಕಾರ ನೀರು, ಸಾರಿಗೆ ದರ, ವಿದ್ಯುತ್ ಸೇವಾ ದರ ಎಲ್ಲವನ್ನೂ ಹೆಚ್ಚಿಸುವ ಪ್ರಸ್ತಾವವನ್ನು ಈ ಬಜೆಟ್‌ನಲ್ಲೂ ಮತ್ತು ಬಜೆಟ್‌ಗೆ ಪೂರ್ವದಲ್ಲೂ ಮಾಡುತ್ತಾ ಬಂದಿದೆ.

ಈಗಾಗಲೇ ಹೇಳಿದಂತೆ ಬಜೆಟ್ ಎಂಬುದು ಒಂದು ಊಹೆ. ಮತ್ತು ಈ ವರ್ಷದ ಬಜೆಟ್ ಅಂದಾಜಿನ (ಬಜೆಟ್ ಎಸ್ಟಿಮೇಟ್)ಊಹೆ ಎಷ್ಟು ನಿಜ ಎಂಬುದು ಮುಂದಿನ ವರ್ಷದ ಪರಿಷ್ಕೃತ ಅಂದಾಜಿನಲ್ಲೂ (ರಿವೈಸ್ಡ್ ಎಸ್ಟಿಮೇಟ್) ಹಾಗೂ ಆ ನಂತರದ ವರ್ಷದ ವಾಸ್ತವಿಕ (ಆಕ್ಚುಯಲ್ಸ್)ಗಳಲ್ಲಿ ಗೊತ್ತಾಗುತ್ತದೆ. ವಾಸ್ತವಿಕವಾಗಿ ಬಜೆಟ್ ಅಂದಾಜಿಗೂ ವಾಸ್ತವಿಕ ಅಂಕಿಅಂಶಗಳಿಗೂ ಶೇ. 15-20ರಷ್ಟು ಅಂತರವಿರುತ್ತದೆ. ಇದಲ್ಲದೆ ವಿತ್ತೀಯ ಶಿಸ್ತನ್ನು ಕಾಪಾಡಿಕೊಂಡು ಬಂದು ವಿದೇಶಿ ಬಂಡವಾಳ ಆಕರ್ಷಿಸುವ ಕಾರ್ಪೊರೇಟ್ ಬಂಡವಾಳಿಗ ಆರ್ಥ ನೀತಿಯನ್ನೇ ಸಿದ್ದು ಸರಕಾರವು ಅನುಸರಿಸುತ್ತಿರುವುದರಿಂದ ಹಾಗೂ ಚುನಾವಣೆಯಲ್ಲಿ ಗ್ಯಾರಂಟಿಯನ್ನು ಘೋಷಿಸಿ ಅದನ್ನು ಇನ್ನು ಕೆಲವು ವರ್ಷಗಳಾದರೂ ಜಾರಿಯಲ್ಲಿಡುವ ತುರ್ತಿರುವುದರಿಂದ ಗ್ಯಾರಂಟಿ ವೆಚ್ಚವನ್ನು ಮಾಡಿದರೂ ವಿತ್ತೀಯ ಶಿಸ್ತು ಅರ್ಥಾತ್ ಸಾಲ ಹೆಚ್ಚು ಮಾಡಿಲ್ಲ ಎಂದು ತೋರಿಸುವ ಅಗತ್ಯವೂ ಇರುವುದರಿಂದ ಸಿದ್ದು ಸರಕಾರ ಅದಾಯದ ಊಹೆಯನ್ನು ಇರುವುದಕ್ಕಿಂತ ಸಾಕಷ್ಟು ಹೆಚ್ಚಿಗೆ ಮಾಡುತ್ತಾ ಬಂದಿದೆ.

ಆದರೆ ಇದು ವಾಸ್ತವಿಕವಲ್ಲವಾದ್ದರಿಂದ ಕಳೆದ ಎರಡೂ ವರ್ಷಗಳಲ್ಲೂ ಆದಾಯ ಕೊರತೆಯಾಗಿ ಸಾಲವನ್ನು ಜಾಸ್ತಿ ಮಾಡಬೇಕಾಯಿತು ಮತ್ತು ಗ್ಯಾರಂಟಿ ವೆಚ್ಚಗಳಿಗಾಗಿ ದಲಿತರಿಗೆಂದು ನಿಗದಿಯಾಗಿರುವ ಎಸ್‌ಸಿಎಸ್‌ಟಿ ಮತ್ತು ಟಿಎಸ್‌ಪಿ ನಿಧಿಗೂ ಕೈಹಾಕಬೇಕಾಯಿತು. ಅಲ್ಲದೆ ಕಾರ್ಪೊರೇಟ್ ಪರ ವೆಚ್ಚಗಳನ್ನು ಬಿಟ್ಟರೆ ಮಿಕ್ಕೆಲ್ಲಾ ಘೋಷಿತ ವೆಚ್ಚಗಳನ್ನು ಕಡಿಮೆ ಮಾಡಬೇಕಾಯಿತು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಶಿವಸುಂದರ್

contributor

Similar News