ಬಾಬಾಬುಡಾನ್ ದರ್ಗಾ | ಸಂಘಿಗಳ ಜೊತೆ ಕೈಗೂಡಿಸಿದ ಕಾಂಗ್ರೆಸ್
ಎಂದಿನಂತೆ ಕಾಂಗ್ರೆಸ್ ವಚನಭಂಗ ಮಾಡಿ, ನಾಡಿಗೆ ದ್ರೋಹ ಬಗೆದಿದೆ. ಮಾರ್ಚ್ 26ರಂದು ಸುಪ್ರೀಂಗೆ ಸಲ್ಲಿಸಿರುವ ಅಫಿಡವಿಟ್ನಲ್ಲಿ ಕ್ಯಾಬಿನೆಟ್ ಉಪ ಸಮಿತಿ ಅರ್ಚಕರ ನೇಮಕಾತಿಯನ್ನು ಮಾಡುವುದನ್ನು ಒಪ್ಪಿಕೊಂಡಿದೆ. ಮಾತ್ರವಲ್ಲದೆ ದರ್ಗಾ ನಿರ್ವಹಣೆಗೆ ಡಿಸಿ ನೇತೃತ್ವದಲ್ಲಿ ಎರಡೂ ಸಮುದಾಯಗಳ ಸಮ ಪ್ರಾತಿನಿಧ್ಯ ಹೊಂದಿರುವ ಸಮಿತಿ ರಚಿಸುವುದಾಗಿಯೂ ಸುಪ್ರೀಂ ಕೋರ್ಟಿನಲ್ಲಿ ಅಫಿಡವಿಟ್ ಸಲ್ಲಿಸಿದೆ ಮತ್ತು ಶಾಖಾದ್ರಿಯನ್ನು ಕೇವಲ ಶಾಶ್ವತ ಆಹ್ವಾನಿತ ಸದಸ್ಯನನ್ನಾಗಿ ಮಾತ್ರ ಉಳಿಸಿಕೊಂಡಿದೆ.;

2023ರ ಚುನಾವಣೆಯಲ್ಲಿ ಈ ನಾಡಿನ ದಲಿತ ದಮನಿತರು ಕಾಂಗ್ರೆಸ್ಗೆ ವೋಟು ಹಾಕಿ ಅಧಿಕಾರಕ್ಕೆ ತರುವುದಕ್ಕೆ ಇದ್ದ ಹಲವಾರು ಪ್ರಧಾನ ಕಾರಣಗಳಲ್ಲಿ ಕಾಂಗ್ರೆಸ್ ಸರಕಾರ ಸಂಘಿ ಬಿಜೆಪಿಯ ಹಿಂದುತ್ವ ಕೋಮುವಾದದ ಅಟ್ಟಹಾಸವನ್ನು ತಡೆದು ಅದರಿಂದ ಆದ ಅನ್ಯಾಯಗಳಿಗೆ ಪರಿಹಾರ ಒದಗಿಸುತ್ತದೆ ಎಂಬುದಾಗಿತ್ತು. ಆದರೆ ಅಧಿಕಾರಕ್ಕೆ ಬಂದ ಪ್ರಾರಂಭದಿಂದಲೂ ಆ ಭರವಸೆಗಳನ್ನು ಹುಸಿಯಾಗಿಸುತ್ತಾ ಬಂದ ಕಾಂಗ್ರೆಸ್ ಇದೀಗ ಬಾಬಾಬುಡಾನ್ ದರ್ಗಾ ವಿಷಯದಲ್ಲಂತೂ ಸಂಪೂರ್ಣವಾಗಿ ಸಂಘಿಗಳ ಅಜೆಂಡಾ ಜೊತೆ ಕೈಗೂಡಿಸಿ ನಾಡಿನ ಸೌಹಾರ್ದ ಪರಂಪರೆಗೆ ದ್ರೋಹ ಬಗೆದಿದೆ.
ಬಾಬಾಬುಡಾನ್ ದರ್ಗಾ ವಿಷಯದಲ್ಲಿ ಹಿಂದಿನ ಬಿಜೆಪಿ ಸರಕಾರ ಸಾರ್ವಜನಿಕ ವಿಚಾರಣೆಯ ನಾಟಕ ನಡೆಸಿತ್ತು. ಆ ವಿಚಾರಣೆಯಲ್ಲಿ ಸದರಿ ಸಂಸ್ಥೆಯು ಹಿಂದಿನಿಂದಲೂ ಒಂದು ದರ್ಗಾ ಆಗಿದ್ದು, ಹಿಂದೂ-ಮುಸ್ಲಿಮರಿಬ್ಬರೂ ನಡೆದುಕೊಳ್ಳುವ ಶಾಖಾದ್ರಿಯ ಉಸ್ತುವಾರಿ ಮತ್ತು ಅವರಿಂದ ನೇಮಿಸಲ್ಪಡುವ ಮುಜಾವರ್ ದರ್ಗಾ ಮಾದರಿ ಧಾರ್ಮಿಕ ರೀತಿ ರಿವಾಜು ನಡೆಸಿಕೊಡುವ ವ್ಯವಸ್ಥೆಯೇ ಇತ್ತೆಂದು ಸಕಲ ಬಗೆಯ ದಾಖಲೆಗಳನ್ನು ದರ್ಗಾದ ಶಾಖಾದ್ರಿ, ನಾಡಿನ ಪ್ರಗತಿಪರರು, ದರ್ಗಾಕ್ಕೆ ನಡೆದುಕೊಳ್ಳುವವರು ಒದಗಿಸಿದ್ದರು. ಅಲ್ಲಿ ಈವರೆಗೆ ಹಿಂದೂ ಅರ್ಚಕರಿಂದ ಪೂಜೆಗೆ ಅವಕಾಶ ಕೊಡುವ ಪದ್ಧತಿಯೇ ಇರಲಿಲ್ಲವೆಂದೂ, ಈಗ ಹೊಸದಾಗಿ ಅರ್ಚಕರ ನೇಮಕಾತಿ ಮಾಡುವುದು ಉಪಾಸನಾ ಸ್ಥಳ ಗಳ ಧಾರ್ಮಿಕ ಸ್ವರೂಪವನ್ನು 1942ರ ಆಗಸ್ಟ್ 15ರಂದು ಹೇಗೆ ಇತ್ತೋ ಹಾಗೆ ಉಳಿಸಿಕೊಳ್ಳಬೇಕೆಂಬ 1991ರಲ್ಲಿ ಕಾಂಗ್ರೆಸ್ ಸರಕಾರವೇ ಸಂಸತ್ತಿನಲ್ಲಿ ಜಾರಿ ಮಾಡಿದ Places Of Worship Act (special)-1991 ಗೆ ವಿರುದ್ಧವಾಗುತ್ತದೆಂದೂ ಮನವರಿಕೆ ಮಾಡಿಕೊಡಲಾಗಿತ್ತು.
ಆದರೂ ಬಿಜೆಪಿ ಸರಕಾರ ತನ್ನ ಹಿಂದುತ್ವವಾದಿ ಅಜೆಂಡಾಗಳ ಭಾಗವಾಗಿ ಈ ಎಲ್ಲಾ ಪುರಾವೆಗಳನ್ನು ಪಕ್ಕಕ್ಕೆ ಸರಿಸಿ ಹಿಂದೂ ಅರ್ಚಕರನ್ನು ನೇಮಕಾತಿ ಮಾಡಿತು ಮತ್ತು ದರ್ಗಾದ ಉಸ್ತುವಾರಿಗೆ ಎರಡೂ ಧರ್ಮಗಳ ಪ್ರತಿನಿಧಿಗಳನ್ನು ಸರಕಾರವೇ ನೇಮಕಾತಿ ಮಾಡುವ ನಿಯಮವನ್ನು ಜಾರಿಗೆ ತಂದಿತು.
ಬಿಜೆಪಿ ಸರಕಾರದ ಈ ತೀರ್ಮಾನವನ್ನು 2022ರಲ್ಲೇ ಶಾಖಾದ್ರಿ ಕರ್ನಾಟಕ ಹೈಕೋರ್ಟಿನ ದ್ವಿಸದಸ್ಯ ಪೀಠದಲ್ಲಿ ಪ್ರಶ್ನಿಸಿದರೂ, ನ್ಯಾಯಾಲಯವು 2023ರಲ್ಲಿ ಬಿಜೆಪಿ ಸರಕಾರದ ತೀರ್ಮಾನವನ್ನು ಎತ್ತಿ ಹಿಡಿಯಿತು. ಶಾಖಾದ್ರಿಯವರು ಈ ತೀರ್ಪನ್ನು 2023ರ ಜೂನಿನಲ್ಲೇ ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಿದರು.
2023ರ ಮೇ ತಿಂಗಳಲ್ಲಿ ಸೆಕ್ಯುಲರ್ ಆಳ್ವಿಕೆಯ ಭರವಸೆ ನೀಡುತ್ತಾ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿತು. 2024ರ ಜನವರಿಯಲ್ಲಿ ಸುಪ್ರೀಂ ಕೋರ್ಟು ಶಾಖಾದ್ರಿಯ ಅಹವಾಲಿನ ಬಗ್ಗೆ ಕರ್ನಾಟಕ ಸರಕಾರದ ಅಭಿಪ್ರಾಯ ಕೇಳಿತು. ಆದರೆ ಹತ್ತಿರದಲ್ಲೇ ಸಂಸತ್ ಚುನಾವಣೆ ಇದ್ದ ಕಾರಣವನ್ನು ನೆಪ ಮಾಡಿಕೊಂಡು ಕಾಂಗ್ರೆಸ್ ಸರಕಾರ ಸುಪ್ರೀಂಗೆ ತನ್ನ ಅಭಿಪ್ರಾಯವನ್ನು ತಿಳಿಸದೆ ಮುಂದೂಡುತ್ತಾ ಬಂತು. ಆದರೆ 2025ರ ಜನವರಿಯಲ್ಲಿ ಕಾಂಗ್ರೆಸ್ ಸರಕಾರದ ಈ ವಿಳಂಬ ನೀತಿಯ ಬಗ್ಗೆ ಶಾಖಾದ್ರಿ ಸುಪ್ರೀಂನಲ್ಲಿ ಆಕ್ಷೇಪ ಸಲ್ಲಿಸಿದ ಕಾರಣ ಸುಪ್ರೀಂ ಕೋರ್ಟು 2025ರ ಜನವರಿ 9ರಂದು, ಇನ್ನು ೮ ವಾರಗಳೊಳಗೆ ಕಾಂಗ್ರೆಸ್ ಸರಕಾರ ತನ್ನ ಅಭಿಪ್ರಾಯವನ್ನು ತಿಳಿಸದೇ ಇದ್ದಲ್ಲಿ ದಂಡ ವಿಧಿಸುವುದಾಗಿ ಆದೇಶಿಸಿತು.
ಈ ವಿಷಯದ ಬಗ್ಗೆ ಈ ಹಿಂದಿನ ಕಾಂಗ್ರೆಸ್ ಸರಕಾರ ೨೦೧೭ರಲ್ಲಿ ಎಲ್ಲಾ ಬಗೆಯ ಪರ್ಯಾಲೋಚನೆ ಮತ್ತು ಸಮಾಲೋಚನೆ ಮಾಡಿ 1991ರ ಸಂಸತ್ ಕಾಯ್ದೆಯಂತೆ ಸಂಸ್ಥೆಯ ದರ್ಗಾ ಸ್ವರೂಪವನ್ನು ಉಳಿಸಿಕೊಳ್ಳುವ ತೀರ್ಮಾನವನ್ನು ಮಾಡಿ ಆದೇಶ ಹೊರಡಿಸಿತ್ತು. ಈಗಲೂ ಅದನ್ನೇ ಪುನರುಚ್ಚರಿಸಿದ್ದರೆ ಸಾಕಿತ್ತು. ಆದರೂ ಕಾಂಗ್ರೆಸ್ ಸರಕಾರ ಗೃಹಮಂತ್ರಿ ಪರಮೇಶ್ವರ್ ಅವರ ನೇತೃತ್ವದಲ್ಲಿ ಮತ್ತೊಂದು ಸಂಪುಟ ಉಪ ಸಮಿತಿಯನ್ನು ರಚಿಸಿತು. ಅದರ ನೇತೃತ್ವದಲ್ಲಿ ಮತ್ತೊಮ್ಮೆ ಬಿಜೆಪಿ ಹಾಗೂ ದರ್ಗಾ ಭಕ್ತರ ಹಾಗೂ ಇತರರ ಸಭೆ ಕರೆಯಿತು. ಅದರ ಸಂಪೂರ್ಣ ದುರುಪಯೋಗ ಪಡಿಸಿಕೊಂಡ ಬಿಜೆಪಿ ಸಿ.ಟಿ. ರವಿ ನೇತೃತ್ವದಲ್ಲಿ ಮತ್ತೊಮ್ಮೆ ಹಲವು ಹಳೆಯ ಸುಳ್ಳುಗಳನ್ನೇ ಪ್ರತಿಪಾದಿಸಿ ತಮ್ಮ ಸರಕಾರ 2022ರಲ್ಲಿ ಜಾರಿ ಮಾಡಿದ ದರ್ಗಾ ವಿರೋಧಿ, 1991ರ ಕಾಯ್ದೆ ವಿರೋಧಿ, ಸೌಹಾರ್ದ ವಿರೋಧಿ ಕ್ರಮಗಳನ್ನೇ ಪ್ರತಿಪಾದಿಸಿತು.
ಆದರೆ ಕಳೆದ ಮೂರು ದಶಕಗಳಿಂದಲೂ ದರ್ಗಾದ ಸೌಹಾರ್ದ ಸ್ವರೂಪವನ್ನು ಉಳಿಸಲು ಹೋರಾಡಿಕೊಂಡು ಬಂದಿರುವ ಕೋಮು ಸೌಹಾರ್ದ ವೇದಿಕೆಯ ತಂಡವು ಕಳೆದ ತಿಂಗಳು ಕ್ಯಾಬಿನೆಟ್ ಉಪ ಸಮಿತಿಯನ್ನು ಭೇಟಿ ಮಾಡಿ ಬಿಜೆಪಿಯ ಕುತಂತ್ರವನ್ನು ಹಾಗೂ ಈ ವಿಷಯದಲ್ಲಿ ಕಾಂಗ್ರೆಸ್ ಸರಕಾರಕ್ಕೆ ನ್ಯಾಯವನ್ನು ಒದಗಿಸಲು ಹಾಗೂ ಸಂಘಿ ಕೋಮುವಾದಕ್ಕೆ ತಡೆ ಒಡ್ಡಬಹುದಾದ ಅವಕಾಶವನ್ನು ಕೂಲಂಕಷವಾಗಿ ದಾಖಲೆಗಳ ಸಮೇತ ಮನವರಿಕೆ ಮಾಡಿಕೊಟ್ಟಿತ್ತು.
ಅಷ್ಟೇ ಅಲ್ಲ. ಬಾಬಾಬುಡಾನ್ ದರ್ಗಾ ವಿಷಯವನ್ನು ಮುಂದಿಟ್ಟುಕೊಂಡು ಬಿಜೆಪಿಯು ಇಡೀ ನಾಡಿನ ದರ್ಗಾ ಸಂಸ್ಕೃತಿಯ ಮೇಲೆ ದಾಳಿ ನಡೆಸುತ್ತಿದೆಯಾದ್ದರಿಂದ ಇದನ್ನು ನಾಡಿನ ಸಮಗ್ರ ಸೌಹಾರ್ದ ಹಿತಾಸಕ್ತಿಯ ದೃಷ್ಟಿಯಿಂದಲೂ ತಡೆಗಟ್ಟಬೇಕಿರುವುದು ಅತ್ಯಗತ್ಯವೆಂದು ಆಗ್ರಹಿಸಿತ್ತು.
ಮಂತ್ರಿ ಪರಮೇಶ್ವರ್ ನೇತೃತ್ವದ ಕ್ಯಾಬಿನೆಟ್ ಉಪ ಸಮಿತಿ ಆ ಮಾತುಗಳನ್ನು ಒಪ್ಪಿ ನ್ಯಾ. ನಾಗಮೋಹನ್ ದಾಸ್ ಅವರ ಜೊತೆಗೂ ಸಮಾಲೋಚನೆ ನಡೆಸಿ ಸುಪ್ರೀಂ ಕೋರ್ಟಿನಲ್ಲಿ ಸರಕಾರವು 1991ರ ಕಾಯ್ದೆಯಂತೆ ಯಥಾಸ್ಥಿತಿ ಕಾಪಾಡಬೇಕೆಂದೂ, ಅರ್ಚಕರ ನೇಮಕಾತಿ ಕಾಯ್ದೆಯ ಉಲ್ಲಂಘನೆಯಾಗುತ್ತದೆಂದೂ ಅಫಿಡವಿಟ್ ಸಲ್ಲಿಸುವುದಾಗಿ ಭರವಸೆ ನೀಡಿತ್ತು.
ಆದರೆ ಎಂದಿನಂತೆ ಕಾಂಗ್ರೆಸ್ ವಚನಭಂಗ ಮಾಡಿ, ನಾಡಿಗೆ ದ್ರೋಹ ಬಗೆದಿದೆ. ಮಾರ್ಚ್ ೨೬ರಂದು ಸುಪ್ರೀಂಗೆ ಸಲ್ಲಿಸಿರುವ ಅಫಿಡವಿಟ್ನಲ್ಲಿ ಕ್ಯಾಬಿನೆಟ್ ಉಪ ಸಮಿತಿ ಅರ್ಚಕರ ನೇಮಕಾತಿಯನ್ನು ಮಾಡುವುದನ್ನು ಒಪ್ಪಿಕೊಂಡಿದೆ. ಮಾತ್ರವಲ್ಲದೆ ದರ್ಗಾ ನಿರ್ವಹಣೆಗೆ ಡಿಸಿ ನೇತೃತ್ವದಲ್ಲಿ ಎರಡೂ ಸಮುದಾಯಗಳ ಸಮ ಪ್ರಾತಿನಿಧ್ಯ ಹೊಂದಿರುವ ಸಮಿತಿ ರಚಿಸುವುದಾಗಿಯೂ ಸುಪ್ರೀಂ ಕೋರ್ಟಿನಲ್ಲಿ ಅಫಿಡವಿಟ್ ಸಲ್ಲಿಸಿದೆ. ಮತ್ತು ಶಾಖಾದ್ರಿಯನ್ನು ಕೇವಲ ಶಾಶ್ವತ ಆಹ್ವಾನಿತ ಸದಸ್ಯನನ್ನಾಗಿ ಮಾತ್ರ ಉಳಿಸಿಕೊಂಡಿದೆ.
https://www.deccanherald.com/india/karnataka/district-level-committee-with-hindus-muslims-to-manage-shrine-of-gurudattreya-bababudan-swamy-karnataka-to-sc-3465911
ಇದು 2022ರಲ್ಲಿ ಬಿಜೆಪಿ ಸರಕಾರ ಮಾಡಿದ ಕೋಮುವಾದಿ ಯೋಜನೆಯ ಯಥಾವತ್ ಅನುಸರಣೆಯಾಗಿದೆ.
ಹೀಗೆ ಬಾಬಾಬುಡಾನ್ ದರ್ಗಾ ವಿಷಯದಲ್ಲಿ ಕಾಂಗ್ರೆಸ್ ಸರಕಾರ ಹಿಂದುತ್ವ ಕೋಮುವಾದಕ್ಕೆ ಅಲ್ಪಸ್ವಲ್ಪ ತಡೆ ಒಡ್ಡಬಹುದಾಗಿದ್ದ ಅವಕಾಶವನ್ನೂ ಬಿಟ್ಟುಕೊಟ್ಟು ಸಂಘಿಗಳ ಹಿಂದುತ್ವ ಅಜೆಂಡಾವನ್ನೇ ಚಾಚೂ ತಪ್ಪದೆ ಅನುಸರಿಸಿದೆ.
ಸೈದ್ಧಾಂತಿಕ ಸಂಘರ್ಷವಿರದ ಚುನಾವಣಾ ವಿರೋಧದ ಮಿತಿ
ವಾಸ್ತವದಲ್ಲಿ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳಿಗೂ ಮತ್ತು ಬಿಜೆಪಿ-ಸಂಘಪರಿವಾರಕ್ಕೂ ಇರುವ ಮೂಲಭೂತ ವ್ಯತ್ಯಾಸವಿದು. ಕಾಂಗ್ರೆಸ್ ಹಾಗೂ ಇತರ ವಿರೋಧ ಪಕ್ಷಗಳಿಗೆ ಜನರನ್ನು ಸೈದ್ಧಾಂತಿಕವಾಗಿ ಗೆದ್ದುಕೊಳ್ಳುವ ಯೋಜನೆಯೂ ಇಲ್ಲ. ಇರಾದೆಯೂ ಇಲ್ಲ. ಹೀಗಾಗಿ ಅವು ಹೆಚ್ಚೆಂದರೆ ಕೆಲವು ಆರ್ಥಿಕ ಪ್ರಯೋಜನಕಾರಿ ಯೋಜನೆಗಳ ಮೂಲಕ ಜನರನ್ನು ಗೆಲ್ಲುವ ರಾಜಕಾರಣ ಮಾಡುತ್ತವೆ.
ಆದರೆ ಬಿಜೆಪಿ-ಆರೆಸ್ಸೆಸ್ ಜನರನ್ನು ಸೈದ್ಧಾಂತಿಕವಾಗಿ ಮತ್ತು ಸಾಂಸ್ಕೃತಿಕವಾಗಿ ತಮ್ಮೆಡೆ ಸೆಳೆದುಕೊಳ್ಳುವ ಯೋಜನೆಯ ಜೊತೆಗೆ ಹುಸಿ ಹಿಂದೂ ರಾಷ್ಟ್ರಕ್ಕಾಗಿನ ಸಂಗ್ರಾಮವಾಗಿ ತಮ್ಮ ರಾಜಕಾರಣವನ್ನು ಬಿತ್ತುತ್ತವೆ. ಹೀಗಾಗಿ ಅದನ್ನು ಕೇವಲ ಅವರ ಆರ್ಥಿಕ ವೈಫಲ್ಯಗಳನ್ನು ಎತ್ತಿ ಹಿಡಿಯುವ ಮೂಲಕ ಮಾತ್ರ ಸೋಲಿಸಲು ಸಾಧ್ಯವಿಲ್ಲ. ಆದ್ದರಿಂದಲೇ ಅಪಾರ ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತಿರುವ ವರ್ಗಗಳು ಮತ್ತು ಸಮುದಾಯಗಳು ಕೂಡ ಬಿಜೆಪಿ ಸರಕಾರಗಳ ಬಗ್ಗೆ ಅಸಮಾಧಾನ ಹೊಂದಿದ್ದರೂ ರಾಷ್ಟ್ರದ ಹಿತಾಸಕ್ತಿಗೆ ಅರ್ಥಾತ್ ಹಿಂದೂ ರಾಷ್ಟ್ರದ ಹಿತಾಸಕ್ತಿಗಾಗಿ ಮೋದಿಗೇ ವೋಟು ಎನ್ನುತ್ತಾರೆ.
ಆದ್ದರಿಂದ ಸಂಘಿಗಳ ಸುಳ್ಳನ್ನು ಪ್ರತಿಹೆಜ್ಜೆಯಲ್ಲೂ ಅದರ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಿವೇಶದಲ್ಲೂ ವಿಫಲಗೊಳಿಸಬೇಕು. ಆರ್ಥಿಕ ಮತ್ತು ರಾಜಕೀಯ ಪರಿಧಿಯಲ್ಲಿ ಮಾತ್ರ ಸಂಘೀ ದ್ರೋಹಗಳನ್ನು ವಿರೋಧಿಸುತ್ತಾ, ಸಾಮಾಜಿಕ-ಸಾಂಸ್ಕೃತಿಕ-ಸೈದ್ಧಾಂತಿಕ-ಐತಿಹಾಸಿಕ ಕ್ಷೇತ್ರಗಳಲ್ಲಿ ಅವರ ಸುಳ್ಳುಗಳಿಗೆ ವಾಕ್ ಓವರ್ ಕೊಡುವುದು ಸಾರದಲ್ಲಿ ಅವರನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ ಮತ್ತು ಈ ದೇಶದ ಬಹುತ್ವದ ಸ್ಮಾರಕ ಮತ್ತು ಸ್ಮತಿಗಳ ನಿರ್ನಾಮಕ್ಕೆ ಹೆದ್ದಾರಿಯನ್ನು ಒದಗಿಸಿ ರಾಜಕೀಯವಾಗಿಯೂ ಅವರನ್ನು ಗಟ್ಟಿಗೊಳಿಸುತ್ತದೆ.
ಕರ್ನಾಟಕದಲ್ಲೇ ಅವರ ಈ ವ್ಯವಸ್ಥಿತ ಸುಳ್ಳುಗಳ ಯೋಜನೆಗೆ ಬಲಿಯಾದ ಜೀವಂತ ಸ್ಮಾರಕವಾಗಿರುವುದು ಬಾಬಾಬುಡಾನ್ ದರ್ಗಾ.
ದರ್ಗಾ-ದತ್ತಪೀಠ -ಬೀದಿಸುಳ್ಳುಗಳು ಅಧಿಕೃತ ಸತ್ಯವಾದ ಬಗೆ
ಚಿಕ್ಕಮಗಳೂರಿನ ಬಾಬಾಬುಡಾನ್ ದರ್ಗಾದಲ್ಲಿ 1975ರ ತನಕವೂ ಯಾವುದೇ ವಿವಾದವಿರಲಿಲ್ಲ. ಮೈಸೂರು ಸಂಸ್ಥಾನದ ಒಂದು ದಾಖಲೆಯೇ ತಿಳಿಸುವಂತೆ 1904-05ರ ಸಾಲಿನಲ್ಲೂ ದರ್ಗಾಗೆ ಬಂದ 9,788 ತೀರ್ಥಯಾತ್ರಿಗಳಲ್ಲಿ 8,200 ಜನ ಮುಸ್ಲಿಮರು ಕೇವಲ 638 ಜನ ಹಿಂದೂಗಳು ಹಾಗೂ ಕೇವಲ 83 ಬ್ರಾಹ್ಮಣರು.
ಹೀಗೆ ಇದು ಮೊದಲಿಂದಲೂ ಮುಸ್ಲಿಮ್ ಮತ್ತು ಹಿಂದೂ ಸಮುದಾಯದ ತಳಜಾತಿಗಳು ನಡೆದುಕೊಳ್ಳುವ ಸೌಹಾರ್ದ ಕೇಂದ್ರವಾಗಿತ್ತು. ದಾದಾ ಹಯಾತ್ ಮೀರ್ ಖಲಂದರ್ ಎಂಬ ಸೂಫಿ ಗುರುವಿನ ಸಮಾದಿ ಮತ್ತವರ ಶಿಷ್ಯರುಗಳ ಸಮಾದಿಗಳಿಗೆ ಚಿರಾಗ್, ಚಾದರ್ ಮೂಲಕ ಹಿಂದೂ-ಮುಸ್ಲಿಮರಿಬ್ಬರೂ ಗೌರವ ಸಲ್ಲಿಸುತ್ತಾ ಬಂದಿದ್ದರು. ಇಲ್ಲಿ ಮುಸ್ಲಿಮ್ ಶಾಖಾದ್ರಿಯು ಪಾರುಪತ್ತೆಗಾರನಾಗಿದ್ದು, ಶಾಖಾದ್ರಿಯಿಂದ ನೇಮಿಸಲ್ಪಟ್ಟ ಮುಸ್ಲಿಮ್ ಮುಜಾವರನೇ ಹಿಂದೂ-ಮುಸ್ಲಿಮ್ ಇಬ್ಬರಿಗೂ ತೀರ್ಥ-ಪಡಿ ಇತ್ಯಾದಿಗಳನ್ನು ನೀಡುವ ಸಂಪ್ರದಾಯವಿದೆ. ಇಲ್ಲಿ ಮಾತ್ರವಲ್ಲ ದಕ್ಷಿಣ ಏಶ್ಯದ ಎಲ್ಲಾ ದೇಶಗಳ ದರ್ಗಾದಲ್ಲೂ ಇರುವ ಧಾರ್ಮಿಕ ಪದ್ಧತಿ ಇದೇ ಆಗಿದೆ.
ಆದರೆ 1975ರಲ್ಲಿ ಈ ಅನನ್ಯ ಸೌಹಾರ್ದ ಕೇಂದ್ರವನ್ನು ವಕ್ಫ್ ಆಸ್ತಿ ಎಂದು ಪರಿಗಣಿಸಿ ವಕ್ಫ್ ಬೋರ್ಡಿಗೆ ಸೇರಿಸುವ ಆದೇಶವನ್ನು ಆಗಿನ ಸರಕಾರ ನೀಡಿದಾಗ ಇಲ್ಲಿ ಮೊದಲ ವಿವಾದ ಉಂಟಾಯಿತು. ಈ ಆದೇಶದ ವಿರುದ್ಧ ಹಿಂದೂ ಭಕ್ತಾದಿಗಳ ಪರವಾಗಿ ಇಬ್ಬರು ಕೋರ್ಟಿನ ಮೆಟ್ಟಿಲೇರಿದರು. ಆಗಲೂ ಆ ಭಕ್ತಾದಿಗಳ ಅಹವಾಲಿದ್ದದ್ದು ದರ್ಗಾವು ವಕ್ಫ್ ಬೋರ್ಡಿಗೆ ಸೇರಿದರೆ ಹಿಂದೂ ಭಕ್ತಾದಿಗಳು ದರ್ಗಾಗೆ ಬರಲಾಗುವುದಿಲ್ಲ ಎನ್ನುವುದೇ ಹೊರತು ಅಲ್ಲಿ ಮುಜಾವರನ ಬದಲಿಗೆ ಅರ್ಚಕನನ್ನು ನೇಮಕ ಮಾಡಬೇಕೆಂಬುದಾಗಲೀ, ಬ್ರಾಹ್ಮಣೀಯ ಆಗಮ ಪದ್ಧತಿಯ ಪೂಜೆ ನಡೆಯಬೇಕೆಂಬುದಾಗಲೀ ಅಥವಾ ಅದು ದರ್ಗಾ ಅಲ್ಲ ದೇವಸ್ಥಾನ ಎಂಬುದಾಗಲೀ ಆಗಿರಲಿಲ್ಲ. ಅರ್ಥಾತ್ ವಿವಾದ ಇದ್ದದ್ದು ಕೇವಲ ಹಿಂದೂ ಭಕ್ತಾದಿಗಳ ಪ್ರವೇಶದ ಹಕ್ಕಿನ ಕುರಿತು ಮಾತ್ರ...
ಆದರೆ 1975-2003ರ ನಡುವೆ ಸಂಘಿಗಳು ಹಂತಹಂತವಾಗಿ ಇಲ್ಲದ ಸುಳ್ಳುಗಳನ್ನು ಹರಿಬಿಡುತ್ತಾ, ಅದರ ಬಗ್ಗೆ ವ್ಯವಸ್ಥಿತವಾಗಿ ಅಪಪ್ರಚಾರ ಮಾಡುತ್ತಾ, ಧರ್ಮದ ಮುಸುಕಿನ ಹೊಸ ಪದ್ಧತಿಗಳನ್ನು ಬಲವಂತವಾಗಿ ಬೀದಿಗಳಲ್ಲಿ ನಡೆಸುತ್ತಾ, ಕ್ರಮೇಣ ಅದೇ ಅಧಿಕೃತ ಪದ್ಧತಿಯಾಗಿ ಸರಕಾರ ಒಪ್ಪುವಂತೆ ಮಾಡುತ್ತಾ ಬಂದರು. ಈಗ ಅಂತಿಮವಾಗಿ ಅವರ ಬಿತ್ತಿದ್ದ ಸುಳ್ಳುಗಳನ್ನೆ ಕಾಂಗ್ರೆಸ್ ಸರಕಾರ ಕೂಡ ಸತ್ಯವೆಂದು ಪುರಸ್ಕರಿಸಿದೆ.
ಅಷ್ಟು ಮಾತ್ರವಲ್ಲ ಈ ಸುದೀರ್ಘ ಧಾರ್ಮಿಕ ಮುಸುಕಿನ ಕೋಮುವಾದಿ ರಾಜಕೀಯ ಪ್ರಕ್ರಿಯೆಯಲ್ಲಿ ಇಡೀ ಮಲೆನಾಡು ಮತ್ತು ಕರಾವಳಿ ಪ್ರಾಂತದಲ್ಲಿ ಬಿಜೆಪಿ ಮತ್ತು ಸಂಘ ಪರಿವಾರ ಬಲವಾದ ಹಿಂದುತ್ವವಾದಿ ನೆಲೆಯನ್ನು ಗಳಿಸಿಕೊಳ್ಳಲು ಸಾಧ್ಯವಾಯಿತು. ಹಿಂದೊಮ್ಮೆ ಕಾಂಗ್ರೆಸ್ ಪಕ್ಷದ ಮತ್ತು ಕಮ್ಯುನಿಸ್ಟ್ ಚಳವಳಿಯ ಭದ್ರಕೋಟೆಯಾಗಿದ್ದ ಈ ಪ್ರದೇಶದಲ್ಲಿ ಈಗ ಹಳ್ಳಿಹಳ್ಳಿಗಳಲ್ಲಿ ಕೋಮುವಾದದ ಕೆಸರಿನಲ್ಲಿ ಕಮಲವು ಅರಳಿಕೊಂಡಿದೆ.
ಈ ಇಡೀ ಪ್ರಕ್ರಿಯೆಯಲ್ಲಿ ದೇಶದಲ್ಲಿ ಹೆಚ್ಚಾಗುತ್ತಾ ಬಂದ ಸಂಘಿಗಳ ರಾಜಕೀಯ ಶಕ್ತಿಯೂ, ನ್ಯಾಯಾಂಗ ಮತ್ತು ಕಾರ್ಯಾಂಗದ ಮೇಲೆ ಹೆಚ್ಚುತ್ತಾ ಹೋದ ಸಂಘದ ಪ್ರಭಾವವೂ ಒಂದು ಪ್ರಧಾನ ಕಾರಣವಾಗಿದ್ದರೆ ಸಂಘಿಗಳ ಸುಳ್ಳುಗಳನ್ನು ಇನ್ನಷ್ಟು ಬಲಿಷ್ಠವಾಗಿ ಬಯಲುಗೊಳಿಸದೆ, ವಿರೋಧಿಸದೆ ಚುನಾವಣಾ ಕಾರಣಗಳಿಗಾಗಿ ಅದರೊಂದಿಗೆ ರಾಜಿಯಾದ ಕಾಂಗ್ರೆಸ್ನಂತಹ ವಿರೋಧ ಪಕ್ಷಗಳ ರಾಜಿಕೋರ ರಾಜಕಾರಣವೂ ಅಷ್ಟೇ ಪ್ರಮುಖವಾದ ಮತ್ತೊಂದು ಕಾರಣವಾಗಿದೆ.
ಸಂಘಿ ಸುಳ್ಳುಗಳನ್ನು ಅಧಿಕೃತಗೊಳಿಸಿದ ಕಾಂಗ್ರೆಸ್
ಆದರೆ 1992ರಲ್ಲಿ ಬಾಬರಿ ಮಸೀದಿಯನ್ನು ಕೆಡವಿದ ವರ್ಷವೇ, ಚಿಕ್ಕಮಗಳೂರಿನ ವಿಶ್ವ ಹಿಂದೂ ಪರಿಷತ್ ಬಾಬಾಬುಡಾನ್ ದರ್ಗಾ ಎಂಬುದು ವಾಸ್ತವದಲ್ಲಿ ದತ್ತ ಪೀಠವೂ ಆಗಿದ್ದು ಅಲ್ಲಿ ಅನಸೂಯ ಜಯಂತಿ, ದತ್ತ ಜಯಂತಿ ಮಾಡಲು ಅವಕಾಶ ಕೊಡಲು ಆಗ್ರಹಿಸಿದವು. ಆದರೆ ಆ ವೇಳೆಗಾಗಲೇ ಹೈಕೋರ್ಟು, ಸುಪ್ರೀಂ ಕೋರ್ಟು, ಮುಜರಾಯಿ ಕಮಿಷನರ್ ಎಲ್ಲರೂ ಈ ಸಂಸ್ಥೆಯು ಒಂದು ದರ್ಗಾವೇ ಹೊರತು ಬೇರೇನೂ ಅಲ್ಲ ಎಂದು ಖಚಿತವಾಗಿ ಆದೇಶಕೊಟ್ಟಿದ್ದವು. ಮುಜರಾಯಿ ಕಮಿಷನರ್ ಅಂತೂ ಅಲ್ಲಿ ನಡೆಯುವ ಪೂಜಾ ವಿಧಾನಗಳ ಬಗ್ಗೆಯೂ ಖಚಿತವಾದ ಆದೇಶ ಕೊಟಿದ್ದರು.
ಆದರೂ 1992ರ ಡಿಸೆಂಬರ್ನಲ್ಲಿ ಕಾಂಗ್ರೆಸ್ ಸರಕಾರ ಅಲ್ಲಿ ದತ್ತ ಜಯಂತಿ ನಡೆಸಲು ಅವಕಾಶ ಮಾಡಿಕೊಟ್ಟಿತು. ಹೀಗೆ ಕಾಂಗ್ರೆಸ್ ಸರಕಾರವೇ ಸಂಘಿಗಳ ಸುಳ್ಳುಗಳಿಗೆ ಒಂದು ಅಧಿಕೃತ ಮಾನ್ಯತೆಯನ್ನು ಕೊಟ್ಟುಬಿಟ್ಟಿತು. ಇದು ಸಂಘಿಗಳಿಗೆ ಸಾಕಷ್ಟು ಬಲವನ್ನು ಮತ್ತು ಉತ್ಸಾಹವನ್ನು ತಂದುಕೊಟ್ಟಿತು. ಅಲ್ಲಿಂದಾಚೆಗೆ ಸಂಘಿಗಳು ಪ್ರತೀ ವರ್ಷ ಅಲ್ಲಿ ದತ್ತ ಜಯಂತಿ ಆಚರಣೆಯನ್ನು ಶುರು ಮಾಡಿದರು.
1997ರಿಂದ ಅಯ್ಯಪ್ಪ ಮಾಲೆಯ ರೀತಿ ವಾರಗಟ್ಟಲೆ ನಡೆಯುವ ದತ್ತ ಮಾಲೆ ಕಾರ್ಯಕ್ರಮವನ್ನೂ ಹೊಸದಾಗಿ ಪ್ರಾರಂಭಿಸಿದರು. 1999 ರಿಂದ ಬಿಜೆಪಿ-ವಿಶ್ವಹಿಂದೂ ಪರಿಷತ್ ನಡೆಸುತ್ತಿದ್ದ ಈ ಖಾಸಗಿ ಕಾನೂನು ಬಾಹಿರ ಜಯಂತಿಗಳನ್ನು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆಸಲು ಅಧಿಕೃತ ಸಮಿತಿಯನ್ನು ಕಾಂಗ್ರೆಸ್ ಸರಕಾರ ನೇಮಕ ಮಾಡಿತು.
ಹೀಗೆ ಹಿಂದೂ ವೋಟುಗಳನ್ನು ಕಳೆದುಕೊಳ್ಳುವ ಭಯದಲ್ಲಿ ಆಗಿನ ಕಾಂಗ್ರೆಸ್-ಜೆಡಿಎಸ್ ಸರಕಾರಗಳು ಈ ಸಂಘಿಗಳ ಸುಳ್ಳುಗಳನ್ನು ಅಧಿಕೃತ ಸತ್ಯವನ್ನಾಗಿಸಿಬಿಟ್ಟವು. ನಾಡಿನ ಪ್ರಗತಿಪರರು ಕೂಡ ಪ್ರಾರಂಭದಲ್ಲಿ ಸಂಘಿಗಳ ದೂರಗಾಮಿ ಹುನ್ನಾರಗಳನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲರಾದರು.
2002ರಲ್ಲಿ ಗುಜರಾತ್ ಹತ್ಯಾಕಾಂಡ ಮತ್ತು ಅದಕ್ಕೆ ನಂತರದ ಚುನಾವಣೆಯಲ್ಲಿ ಸಿಕ್ಕ ಜನಬೆಂಬಲಗಳು ಭಾರತದಲ್ಲಿ ಉಗ್ರ ನರಮೇಧಿತ್ವಕ್ಕೆ ದಾರಿ ಮಾಡಿಕೊಟ್ಟವು. ಆವರೆಗೆ ಇದ್ದ ಅಲ್ಪಸ್ವಲ್ಪ ಅಳುಕೂ ಮರೆಯಾಗಿ ಕರ್ನಾಟಕದಲ್ಲೂ ಆಗಿನ ಬಿಜೆಪಿ ಅಧ್ಯಕ್ಷರಾಗಿದ್ದ ಅನಂತ ಕುಮಾರ್ ಅವರು ದತ್ತಪೀಠವನ್ನು ಮತ್ತೊಂದು ಅಯೋಧ್ಯೆಯಾಗಿಸುವುದಾಗಿಯೂ, ಕರ್ನಾಟಕವನ್ನು ಮತ್ತೊಂದು ಗುಜರಾತ್ ಆಗಿಸುವುದಾಗಿಯೂ ಘೋಷಿಸಿದರು.
ಆವರೆಗೆ ವರ್ಷಕ್ಕೊಮ್ಮೆ ದತ್ತಜಯಂತಿಗೆ, ದತ್ತಮಾಲೆಗೆ ಅವಕಾಶ ಕೊಡಬೇಕೆಂಬ ಬೇಡಿಕೆಯು ನಂತರ ದತ್ತಪೀಠವನ್ನು ವಿಮೋಚನೆ ಮಾಡುವ ಚಳವಳಿಯಾಗಿ ಬದಲಾಯಿತು. ಇದ್ದಕ್ಕಿದ್ದ ಹಾಗೆ ಹೊಸ ಇತಿಹಾಸಗಳನ್ನು ಹುಟ್ಟುಹಾಕಲಾಯಿತು.
ಸಂಘಿ ಸಾಥಿ ಕಾಂಗ್ರೆಸ್-ಕಾರ್ಯಾಂಗ-ನ್ಯಾಯಾಂಗ
ಸದರಿ ಸಂಸ್ಥೆಯು ಕಾಲಾನುಕಾಲದಿಂದಲೂ ದತ್ತಾತ್ರೇಯ ದೇವಸ್ಥಾನವಾಗಿತ್ತೆಂದೂ, ಟಿಪ್ಪು ಸುಲ್ತಾನ್ ಕಾಲದಲ್ಲಿ ಅದನ್ನು ದರ್ಗಾ ಆಗಿ ಬಲವಂತವಾಗಿ ಬದಲಾಯಿಸಲಾಯಿತೆಂದೂ ಸುಳ್ಳು ಇತಿಹಾಸದ ಪ್ರಚಾರ ಪ್ರಾರಂಭವಾಯಿತು. ಅದರ ಭಾಗವಾಗಿಯೇ 2003ರಲ್ಲಿ ಕರ್ನಾಟಕ ಹೈಕೋರ್ಟಿನಲ್ಲಿ ದತ್ತಪೀಠದಲ್ಲಿ ಹಿಂದೂ ಅರ್ಚಕನನ್ನು ನೇಮಕ ಮಾಡಬೇಕೆಂಬ ದಾವೆಯನ್ನು ಸಲಿಸಲಾಯಿತು.
ಆದರೆ ಈವರೆಗೆ ಈ ಸುಳ್ಳುಗಳನ್ನು ಸಮರ್ಥಿಸಿಕೊಳ್ಳುವ ಒಂದೇ ಒಂದು ಪುರಾವೆಯನ್ನು ಸಂಘಿಗಳು ಸಾರ್ವಜನಿಕ ವಿಚಾರಣೆಯಲ್ಲಾಗಲೀ, ಹೈಕೋರ್ಟಿನಲ್ಲಾಗಲೀ ಅಥವಾ ಸುಪ್ರೀಂ ಕೋರ್ಟಿನಲ್ಲಾಗಲೀ ಸಲ್ಲಿಸಿಲ್ಲ. ಈ ಹೊಸ ಇತಿಹಾಸಕ್ಕೆ ಅವರು ಆಶ್ರಯಿಸಿದ್ದು 1988ರಲ್ಲಿ ಚಿಕ್ಕಮಗಳೂರಿನ ಆಗಿನ ಉಪ ಆಯುಕ್ತರು ವಿಶ್ವ ಹಿಂದೂ ಪರಿಷತ್ತಿನ ವಕೀಲರೊಬ್ಬರು ಕೊಟ್ಟ ಮೌಖಿಕ ಹೇಳಿಕೆಯನ್ನು ಯಥಾವತ್ ಅಧಿಕೃತ ಇತಿಹಾಸ ಎಂದು ದಾಖಲಿಸಿ ಕೊಟ್ಟ ಆಡಳಿತಾತ್ಮಕ ವರದಿಯನ್ನು!
2007ರಲ್ಲಿ ಹೈಕೋರ್ಟು ಕೂಡ ಯಾವುದೇ ದೀರ್ಘ ವಿಚಾರಣೆ ಇಲ್ಲದೆ ಟಿಪ್ಪು ಸುಲ್ತಾನ್ ಕಾಲದಲ್ಲಿ ಸಂಸ್ಥೆಯ ಆಡಳಿತ ಸ್ವರೂಪ ಬದಲಾಗಿದೆಯೇ ಎಂದು ಪರಿಶೀಲಿಸಿ, ಅರ್ಚಕನನ್ನು ನೇಮಕ ಮಾಡಲು ಆದೇಶಿಸಿತು. ಇದನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಲಾಯಿತಾದರೂ ಆ ವೇಳೆಗಾಗಲೇ ಬಲಗೊಳ್ಳುತ್ತಿದ್ದ ಹಿಂದುತ್ವ ರಾಜಕೀಯ ಸನ್ನಿವೇಶದಲ್ಲಿ ಅದರ ಬಗ್ಗೆ ತೀರ್ಮಾನ ತೆಗೆದುಕೊಳ್ಳದೆ ಸುಪ್ರೀಂ ಕೋರ್ಟಿನ ದ್ವಿಸದಸ್ಯ ಪೀಠದ ನ್ಯಾಯಾಧೀಶರಾಗಿದ್ದ ನ್ಯಾ. ರಂಜನ್ ಗೊಗೊಯಿ ಮತ್ತು ನ್ಯಾ. ರಮಣ ಅವರು 2015ರಲ್ಲಿ ಆ ಬಗ್ಗೆ ಸರಿಯಾದ ತೀರ್ಮಾನ ತೆಗೆದುಕೊಳ್ಳುವಂತೆ ಕರ್ನಾಟಕ ಸರಕಾರಕ್ಕೆ ಆದೇಶಿಸಿದರು.
ಆಗಿನ ಕಾಂಗ್ರೆಸ್ ಸರಕಾರ ಅದರ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ನ್ಯಾ. ನಾಗಮೋಹನ್ ದಾಸ್ ನೇತೃತ್ವದಲ್ಲಿ ಒಂದು ಸಮಿತಿಯನ್ನು ನೇಮಕ ಮಾಡಿದರೂ, ಅದು ದರ್ಗಾ ಸ್ವರೂಪವನ್ನು ಉಳಿಸಿಕೊಳ್ಳಲು 2017ರಲ್ಲಿ ಶಿಫಾರಸು ಮಾಡಿದರೂ, ಕಾಂಗ್ರೆಸ್ ಸರಕಾರ ಅದರಂತೆ 2018ರಲ್ಲಿ ಆದೇಶ ನೀಡಿದರೂ, ಅದನ್ನು ಸಂಘಿಗಳು ಹೈಕೋರ್ಟಿನಲ್ಲಿ 2018ರಲ್ಲಿ ಪ್ರಶ್ನಿಸಿದರು. 2019ರಲ್ಲಿ ಆಪರೇಶನ್ ಕಮಲದ ಮೂಲಕ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಕೋರ್ಟಿನಲ್ಲಿ ಸರಕಾರಿ ವಕೀಲರು ಕೂಡ ಹಿಂದಿನ ಸರಕಾರದ ಆದೇಶವನ್ನು ಸಮರ್ಥಿಸಿಕೊಳ್ಳಲಿಲ್ಲ.
ಆ ವೇಳೆಗಾಗಲೇ ಅತ್ಯಂತ ನ್ಯಾಯಘಾತುಕವಾದ ಅಯೋಧ್ಯೆ ತೀರ್ಪು ಕೂಡ ಹೊರಬಂದು ಬಹುಸಂಖ್ಯಾತರ ಶ್ರದ್ಧಾ ನಂಬಿಕೆಗಳಿಗೆ ಪುರಾವೆ ತೋರುವ ಅಗತ್ಯವಿಲ್ಲ ಎಂದು ಐವರು ಸದಸ್ಯರ ಸಾಂವಿಧಾನಿಕ ಪೀಠ ತೀರ್ಪು ಕೊಟ್ಟಿತ್ತು. ಹೀಗಾಗಿ 2021ರಲ್ಲಿ ಕರ್ನಾಟಕ ಹೈಕೋರ್ಟಿನ ಏಕಸದಸ್ಯ ಪೀಠ ಮತ್ತು 2023ರಲ್ಲಿ ವಿಭಾಗೀಯ ಪೀಠ ಬಹುಸಂಖ್ಯಾತ ಧರ್ಮದವರು ಆ ಸಂಸ್ಥೆಯು ದತ್ತಾತ್ರೇಯ ದೇವಸ್ಥಾನ ಎಂದು ಭಾವಿಸುವುದರಿಂದ ಬಾಬಾಬುಡಾನ್ ದರ್ಗಾದಲ್ಲಿ ಹಿಂದೂ ಆಗಮ ಪದ್ಧತಿಯಲ್ಲಿ ಪೂಜೆ ನಡೆಸಲು ಅರ್ಚಕನ ನೇಮಕಾತಿಯನ್ನು ಆದೇಶಿಸಿದೆ.
ಹೀಗೆ ಬೀದಿಯಲ್ಲಿದ್ದ ಸುಳ್ಳು ಈಗ ಅಧಿಕೃತ ದೇವಸ್ಥಾನವಾಗಿದೆ. ದರ್ಗಾವನ್ನು ನಾಶ ಮಾಡಿದೆ.
ಇದೀಗ ಸತ್ಯವನ್ನು ಕಾಪಾಡಲು ಸುಪ್ರೀಂನಲ್ಲಿ ಇದ್ದ ಕೊನೆಯ ಅವಕಾಶವನ್ನು ಕೈಬಿಟ್ಟ ಕಾಂಗ್ರೆಸ್ ಸರಕಾರ ಸಂಘಿ ಸುಳ್ಳುಗಳಿಗೆ ಮತ್ತು ಅವರ ದಾಳಿಗಳಿಗೆ ಅಧಿಕೃತ ಮುದ್ರೆಯೊತ್ತಿ ಸಂಘಿಗಳ ಜೊತೆ ಸೇರಿ ದರ್ಗಾ ವನ್ನು ನಾಶಗೊಳಿಸಿದೆ.
ಇದು ಕಾಂಗ್ರೆಸ್ ಸರಕಾರ ಮತ್ತು ಪಕ್ಷವು ಜನವಿರೋಧಿ ಆರ್ಥಿಕ ಸಾಮಾಜಿಕ ನೀತಿಗಳನ್ನು ಹಾಗೂ ಮೃದು ಹಿಂದುತ್ವವಾದಿ ನೀತಿಗಳನ್ನು ಅನುಸರಿಸುವುದು ಮಾಹಿತಿ ಕೊರತೆಯಿಂದಲೋ ಅಥವಾ ವಿವೇಚನೆಯ ಕೊರತೆಯಿಂದಲೋ ಅಲ್ಲ ಎಂಬುದನ್ನು ಮತ್ತೊಮ್ಮೆ ಸಾರಿ ಸಾರಿ ಹೇಳಿದೆ.
ಕಾಂಗ್ರೆಸನ್ನು ಸರಿ ಮಾಡುವ ಮೂಲಕ ಸಂಘಿ ಫ್ಯಾಶಿಸಂನ್ನು ಎದುರಿಸಬಹುದು ಎಂಬ ಕೆಲವು ಪ್ರಾಮಾಣಿಕ ಪ್ರಗತಿಪರರ ಅಸಹಾಯಕ ನಿರೀಕ್ಷೆಗಳು ಎಷ್ಟು ಆತ್ಮಘಾತುಕವಾದದ್ದು ಎಂದು ತೋರಿಸಿಕೊಟ್ಟಿದೆ.
ಕಾಂಗ್ರೆಸ್ಗೆ ಒಂದು ಸ್ಪಷ್ಟ ವರ್ಗ ಹಿತಾಸಕ್ತಿ ಇದೆ ಮತ್ತು ಅದರ ವರ್ಗ, ಜಾತಿ ಹಿತಾಸಕ್ತಿಗಳಿಂದ ಹುಟ್ಟುವ ಸ್ಪಷ್ಟವಾದ ಮೃದು ಹಿಂದುತ್ವವಾದಿ ನೀತಿಗಳಿವೆ. ತನ್ನ ಅಧಿಕಾರ ಹಿತಾಸಕ್ತಿಗಾಗಿ ಕಾಂಗ್ರೆಸ್ ಸರಕಾರ ಪ್ರಜ್ಞಾಪೂರ್ವಕವಾಗಿ ಆ ನೀತಿಗಳನ್ನು ಅನುಸರಿಸುತ್ತದೆ.
ಅದನ್ನು ಸಂಘರ್ಷದಿಂದ ಬದಲಿಸಲು ಸಾಧ್ಯವೇ ಹೊರತು ಸಮಾಲೋಚನೆಗಳಿಂದ ಬದಲಿಸಲು ಸಾಧ್ಯವಿಲ್ಲ. ಇನ್ನು ಎಷ್ಟು ಸಾರಿ ಕಲಿತ ಪಾಠವನ್ನೇ ಕಲಿಯಬೇಕು ಮತ್ತು ಎಡವಿದ ಕಡೆಯೇ ಎಡವಬೇಕು ಎಂಬುದನ್ನು ನಾಡಿನ ಜನತೆ ತೀರ್ಮಾನಿಸಬೇಕು ಅಷ್ಟೆ.