ಕಾಂತರಾಜು ವರದಿ: ಜಾತಿಮುಸುಕಿನ ವರ್ಗ ಸಂಘರ್ಷ?

Update: 2025-04-26 11:59 IST
Editor : Thouheed | Byline : ಶಿವಸುಂದರ್
ಕಾಂತರಾಜು ವರದಿ: ಜಾತಿಮುಸುಕಿನ ವರ್ಗ ಸಂಘರ್ಷ?
  • whatsapp icon

ಭಾಗ- 4

ಸಾರ್ವಜನಿಕ ವಲಯದ ಖಾಸಗೀಕರಣದ ಈ ಮಹಾ ವಂಚನೆಯನ್ನು ಜನರೆದುರು ಮಹಾ ಸಾಧನೆಯೆಂಬಂತೆ ಮೋದಿ ಸರಕಾರ ಮುಂದಿಡುತ್ತಿದೆ. ಅದಕ್ಕೆ ಅವರ ಆಸ್ಥಾನ ಪಂಡಿತರು ಕೊಡುವ ಕಾರಣ ಸಾರ್ವಜನಿಕ ಉದ್ಯಮಗಳು ಸಾರ್ವಜನಿಕ ಬೊಕ್ಕಸಕ್ಕೆ ನಷ್ಟ ಉಂಟು ಮಾಡುತ್ತಿವೆ ಎಂಬುದೇ ಆಗಿದೆ.

ಆದರೆ ಇದು ನಿಜವೇ? ನೋಡೋಣ:

ಲಾಭ ಗಳಿಸಿದರೂ ನಷ್ಟವೆನ್ನುವ ವಂಚಕ ಮೋದಿ ಸರಕಾರ

ಮೋದಿ ಸರಕಾರವು ಕೇಂದ್ರ ಸರಕಾರದ ಸುಪರ್ದಿಯಲ್ಲಿರುವ ಸಾರ್ವಜನಿಕ ಕಂಪೆನಿಗಳ ಕಾಲಾವಧಿ ಸರ್ವೇಯನ್ನು 2019ರಲ್ಲಿ ಬಿಡುಗಡೆ ಮಾಡಿದೆ. ಅದರ ಪೂರ್ಣ ಪಾಠ ಈ ಕೆಳಗಿನ ವೆಬ್ ವಿಳಾಸದಲ್ಲಿ ದೊರೆಯುತ್ತದೆ:

https://dpe.gov.in/.../def.../files/PE_seurvey_ENG_VOL_1.pdf

ಮೇಲಿನ ವರದಿಯ ಪ್ರಕಾರ 2019ರ ಡಿಸೆಂಬರ್ ವೇಳೆಗೆ ಭಾರತದಲ್ಲಿ ಕೇಂದ್ರ ಸರಕಾರದ ಸ್ವಾಮ್ಯಕ್ಕೆ ಸೇರಿದ 330 ಸಾರ್ವಜನಿಕ ಸಂಸ್ಥೆಗಳಿದ್ದವು. ಅವುಗಳಲ್ಲಿ ಒಟ್ಟಾರೆಯಾಗಿ ಈವರೆಗೆ 26 ಲಕ್ಷ ಕೋಟಿ ರೂಪಾಯಿಗಳಷ್ಟು ಬಂಡವಾಳವನ್ನು ತೊಡಗಿಸಲಾಗಿದೆ.

2018-19ರ ಸಾಲಿನಲ್ಲಿ ಆ 330 ಕಂಪೆನಿಗಳಲ್ಲಿ 178 ಕಂಪೆನಿಗಳು ಲಾಭ ಮಾಡುತ್ತಿದ್ದರೆ, 70 ಕಂಪೆನಿಗಳು ಮಾತ್ರ ನಷ್ಟಕ್ಕೆ ಗುರಿಯಾಗಿದ್ದವು. ಆದರೂ ಅದೇ ಸಾಲಿನಲ್ಲಿ ಲಾಭ ಮಾಡುತ್ತಿದ್ದ ಕಂಪೆನಿಗಳು 1,74,587 ಕೋಟಿ ರೂ.ಗಳಷ್ಟು ಲಾಭ ಮಾಡಿದ್ದರೆ, ನಷ್ಟ ಮಾಡುತ್ತಿದ್ದ ಕಂಪೆನಿಗಳು ಕೇವಲ 30,000 ಕೋಟಿ ರೂ. ಮಾತ್ರ ನಷ್ಟ ಮಾಡಿದ್ದವು. ಅಂದರೆ ಒಟ್ಟಾರೆಯಾಗಿ ಭಾರತದ ಆರ್ಥಿಕತೆಗೆ ಸಾರ್ವಜನಿಕ ಉದ್ಯಮಗಳಿಂದ ರೂ. 1.5 ಲಕ್ಷ ಕೋಟಿಯಷ್ಟು ಲಾಭವೇ ಆಗಿತ್ತು.

ಅಷ್ಟು ಮಾತ್ರವಲ್ಲ. ಈ ಎಲ್ಲಾ ಕಂಪೆನಿಗಳು 2019ರ ಸಾಲಿನಲ್ಲಿ ಡಿವಿಡೆಂಡ್, ಜಿಎಸ್‌ಟಿ, ಕಾರ್ಪೊರೇಟ್ ಟ್ಯಾಕ್ಸ್ ಗಳ ರೂಪದಲ್ಲಿ ಸರಕಾರಕ್ಕೆ 3,68,803 ಕೋಟಿ ರೂ.ಗಳನ್ನು ಪಾವತಿ ಮಾಡಿದ್ದವು.

ಎಲ್ಲಕ್ಕಿಂತ ಹೆಚ್ಚಾಗಿ ಇವು 11 ಲಕ್ಷದಷ್ಟು ಉದ್ಯೋಗಗಳನ್ನು ನೀಡಿದ್ದವು. ಅದರಲ್ಲಿ 5 ಲಕ್ಷದಷ್ಟು ಉದ್ಯೋಗಗಳಾದರೂ ದಲಿತ ಮತ್ತು ಹಿಂದುಳಿದ ಸಮುದಾಯಕ್ಕೆ ದಕ್ಕಿತ್ತು. ಈ ಕಾರ್ಮಿಕರಿಗೆ 2019ರ ಸಾಲಿನಲ್ಲಿ 1,52,684 ಕೋಟಿ ರೂ.ಗಳನ್ನು ಸಂಬಳ ಸಾರಿಗೆಯ ರೂಪದಲ್ಲಿ ನೀಡಲಾಗಿತ್ತು. ಸಹಜವಾಗಿಯೇ ಆ ಮೊತ್ತವು ಆರ್ಥಿಕತೆಯಲ್ಲಿ ಅಷ್ಟರ ಮಟ್ಟಿಗಿನ ಬೇಡಿಕಯನ್ನು ಸೃಷ್ಟಿಸುತ್ತದೆ.

ಇವತ್ತು ಈ ದೇಶದ ಆರ್ಥಿಕತೆ ಕಂಗೆಟ್ಟಿರುವುದೇ ಜನರ ಕೊಳ್ಳುವ ಶಕ್ತಿಯ ಕುಸಿತದಿಂದ, ಅದಕ್ಕೆ ಕಾರಣವಾಗಿರುವ ನಿರುದ್ಯೋಗದಿಂದ ಎನ್ನುವುದರ ಹಿನ್ನೆಲೆಯಲ್ಲಿ ಈ ಉದ್ಯೋಗಗಳ ಮಹತ್ವ ಅರ್ಥವಾಗುತ್ತದೆ ಮತ್ತು ಸರಕಾರಿ ಕಂಪೆನಿಗಳನ್ನು ನಷ್ಟದಾಯಕ ಎಂದು ವರ್ಗೀಕರಿಸುವುದರ ಅಸಂಬದ್ಧತೆಯನ್ನು ತೋರಿಸುತ್ತದೆ.

ಇದಲ್ಲದೆ, ಉದ್ಯೋಗಾವಕಾಶಗಳು ಒದಗಿಸುವ ಮತ್ತೊಂದು ಅತಿದೊಡ್ಡ ಕ್ಷೇತ್ರ ಸರಕಾರದ ಆಡಳಿತ ಯಂತ್ರಾಂಗ. ಇದರಲ್ಲಿ ಅಂದಾಜು 41 ಲಕ್ಷ ಉದ್ಯೋಗಾವಕಾಶಗಳು ಲಭ್ಯವಾಗುತ್ತಿತ್ತು. ಆದರೆ ಇದರಲ್ಲಿ ಈವರೆಗೆ ಸೆಕ್ರೆಟರಿ ಮಟ್ಟದ ಹುದ್ದೆಗಳಿಗೆ ಮೀಸಲಾತಿಯನ್ನು ಜಾತಿ ಪೂರ್ವಗ್ರಹಗಳಿಂದ ಒದಗಿಸುತ್ತಿಲ್ಲ. ಉಳಿದಂತೆ 1989ರಿಂದ ಇದರಲ್ಲಿನ ಕನಿಷ್ಠ 20 ಲಕ್ಷ ಉದ್ಯೋಗಾವಕಾಶಗಳಲ್ಲಿ ದಲಿತ ಮತ್ತು ಹಿಂದುಳಿದ ಸಮುದಾಯಗಳಿಗೆ ಅವಕಾಶಗಳು ಸಿಗಬೇಕಿತ್ತು. ಆದರೆ ಆಡಳಿತ ವೆಚ್ಚವನ್ನು ಕಡಿಮೆ ಮಾಡಬೇಕೆಂಬ ವಿಶ್ವಬ್ಯಾಂಕಿನ ನಿಬಂಧನೆಗೆ ಒಳಪಟ್ಟು 2013ರಿಂದ ಆಡಳಿತ ಯಂತ್ರದ ಗಾತ್ರವನ್ನು ಕಡಿಮೆ ಮಾಡಲಾಗುತ್ತಿದೆ. ಅಂದರೆ ಅಷ್ಟು ಮಟ್ಟಿಗೆ ಮೀಸಲಾತಿಯನ್ನು ನಿರಾಕರಿಸಲಾಗುತ್ತಿದೆ.

ಇದನ್ನೇ ಕನಿಷ್ಠ ಸರಕಾರ-ಗರಿಷ್ಠ ಆಡಳಿತ ಎಂದೂ, ಆಡಳಿತ ಸುಧಾರಣೆಯೆಂದೂ ಹೇಳಲಾಗುತ್ತದೆ. ಸರಕಾರವು ತನ್ನ ನೀತಿಯಲ್ಲಿ ಘೋಷಿಸಿಕೊಂಡಿರುವಂತೆ ನಿವೃತ್ತಿಯಿಂದ ತೆರವಾದ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳದೆ, ಖಾಲಿಯಾಗಿಯೇ ಉಳಿದಿರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳದೆ, ಕೆಳಹಂತದ ಸೇವೆಗಳನ್ನು ದಿನಗೂಲಿ-ಗುತ್ತಿಗೆಯ ಮೂಲಕ ಪೂರೈಸಿಕೊಳ್ಳುವ ಮೂಲಕ ಆಡಳಿತ ಯಂತ್ರಾಂಗದ ಗಾತ್ರ ಮತ್ತು ವೆಚ್ಚವನ್ನು ಕಡಿಮೆ ಮಾಡಿಕೊಳ್ಳುತ್ತಾ ಬಂದಿದೆ. ಮೋದಿ ಸರಕಾರ ಬರಲಿರುವ ವರ್ಷಗಳಲ್ಲಿ ಶೇ. 40ರಷ್ಟು ವೆಚ್ಚವನ್ನು ಕಡಿಮೆ ಮಾಡಿಕೊಳ್ಳುವುದಾಗಿ ವಿಶ್ವಬ್ಯಾಂಕಿಗೆ ಭರವಸೆ ನೀಡಿದೆ. ಹೀಗೆ ಆಡಳಿತ ಯಂತ್ರಾಂಗದ ಅನೌಪಚಾರೀಕರಣ ಮತ್ತು ಖಾಸಗೀಕರಣದ ಮೂಲಕ ಕೇವಲ ಕೇಂದ್ರ ಆಡಳಿತ ಯತ್ರಾಂಗವೊಂದರಲ್ಲೇ 10 ಲಕ್ಷಕ್ಕೂ ಹೆಚ್ಚು ದಲಿತ ಮತ್ತು ಹಿಂದುಳಿದ ಸಮುದಾಯಗಳು ಉದ್ಯೋಗಾವಕಾಶಗಳಿಂದ ವಂಚಿತವಾಗಲಿವೆ.

ಆದರೆ ಅದೇ ಸಮಯದಲ್ಲಿ ಜಾಯಿಂಟ್ ಸೆಕ್ರೆಟರಿ ಮಟ್ಟದ ಹುದ್ದೆಗಳಿಗೆ ನೇರವಾಗಿ ಭರ್ತಿ ಮಾಡಿಕೊಳ್ಳುವುದಾಗಿ ಘೋಷಿಸಿದೆ. ಇದರಿಂದ ಭಡ್ತಿಯ ಮೂಲಕ ಆ ಹುದ್ದೆಗಳನ್ನು ಪಡೆದುಕೊಳ್ಳಬೇಕಿದ್ದ ದಲಿತ-ಹಿಂದುಳಿದ ಅಭ್ಯರ್ಥಿಗಳಿಗೆ ಪ್ರಾತಿನಿಧ್ಯವನ್ನೂ ಮತ್ತು ಅವಕಾಶವನ್ನೂ ನಿರಾಕರಿಸಿದೆ.

ಖಾಸಗೀಕರಣ-ಬಂಡವಾಳಶಾಹಿ ನಾಶವಾಗದೆ ಸಾಮಾಜಿಕ ನ್ಯಾಯ ಸಾಧ್ಯವೇ?

ಹೀಗೆ ಮೇಲಿನ ಅಂಕಿಅಂಶಗಳು ಹಾಗೂ ಸರಕಾರಿ ನೀತಿಗಳು ಕೆಲವು ವಿಷಯಗಳನ್ನೂ ಸಾಬೀತು ಮಾಡುತ್ತವೆ.

ಮೊದಲನೆಯದು ಖಾಸಗೀಕರಣವು ದಲಿತ ಮತ್ತು ಹಿಂದುಳಿದ ಸಮುದಾಯಗಳ ಉದ್ಯೋಗದ ಹಕ್ಕನ್ನು ಕಸಿಯುತ್ತದೆ.

ಎರಡನೆಯದಾಗಿ ಸರಕಾರಿ ವಲಯದ ಖಾಸಗೀಕರಣ ತೀವ್ರವಾಗಿ ನಡೆಯುತ್ತಿರುವ ಹೊತ್ತಿನಲ್ಲೂ ಸರಕಾರಿ ವಲಯದಲ್ಲೇ ಖಾಸಗಿ ವಲಯಕ್ಕಿಂತ ಹೆಚ್ಚಿನ ಔಪಚಾರಿಕ ಉದ್ಯೋಗಗಳು ಲಭ್ಯವಿವೆ.

ಮೂರನೆಯದಾಗಿ ಸರಕಾರಿ ವಲಯದ ಶಾಶ್ವತ ಉದ್ಯೋಗಗಳೂ ದಿನಗೂಲಿ, ಗುತ್ತಿಗೆ ಪದ್ಧತಿಯಿಂದ ನಾಶವಾಗುತ್ತಿವೆ.

ಸಾರ್ವಜನಿಕ ಉದ್ದಿಮೆಗಳು ನಷ್ಟ ಮಾಡುತ್ತಿಲ್ಲ. ಸರಕಾರ ಖಾಸಗೀಕರಿಸುತ್ತಿರುವುದು ಉದ್ಯೋಗ ಸೃಷ್ಟಿಸಿರುವ ಲಾಭ ಮಾಡುತ್ತಿರುವ ಸರಕಾರಿ ಕಂಪೆನಿಗಳನ್ನೇ ಹೊರತು ನಷ್ಟದಲ್ಲಿರುವ ಉದ್ಯಮಗಳನ್ನಲ್ಲ.

ಮೋದಿ ಸರಕಾರದ ಕನಿಷ್ಠ ಸರಕಾರ-ಗರಿಷ್ಠ ಆಡಳಿತವೆಂಬ ನೀತಿ ಹಾಗೂ ನೇರ ಭರ್ತಿ ನೀತಿಗಳು ಕಾರ್ಪೊರೇಟ್-ಬ್ರಾಹ್ಮಣಶಾಹಿ ನೀತಿಗಳಾಗಿವೆ.

ಹೀಗಾಗಿ ಸಾಮಾಜಿಕ ನ್ಯಾಯದ ಹೋರಾಟವು ಖಾಸಗೀಕರಣವನ್ನು ತಡೆಗಟ್ಟುವ ಹೋರಾಟವೂ ಆಗಬೇಕಾದ ತುರ್ತು ಅನಿವಾರ್ಯತೆಯಿದೆ.

ಏಕೆಂದರೆ ಸಮಾಜವಾದಿ ಆರ್ಥಿಕತೆ ಇಲ್ಲದೆ ಸಾಮಾಜಿಕ ನ್ಯಾಯ ಸಿಗುವುದಿಲ್ಲ..

ಹೀಗಾಗಿ, ಕಾಂತರಾಜು ವರದಿಯ ಸುತ್ತ ನಡೆಯುತ್ತಾ ಇರುವ ಚರ್ಚೆಯನ್ನು ಬಲಿಷ್ಠರು ಸಾಮಾಜಿಕ ನ್ಯಾಯದ ಅಜೆಂಡಾಗಳನ್ನು ಮತ್ತು ಕಾಂತರಾಜು ವರದಿಯ ಅವಕಾಶಗಳನ್ನು ಹೈಜಾಕ್ ಮಾಡದಂತೆ ಈ ಪ್ರಶ್ನೆಗಳ ಸುತ್ತ ಚರ್ಚೆಯನ್ನು ಕೇಂದ್ರೀಕರಿಸಬೇಕಿದೆ:

ಸಂವಿಧಾನದ ಆಶಯಗಳಾದ ಸಾಮಾಜಿಕ ನ್ಯಾಯ ಸಾಕಾರವಾಗಬೇಕೆಂದರೆ:

1.ಸಾಮಾಜಿಕ ಅನ್ಯಾಯದ ಅಳತೆಯಾಗಬೇಕು.

2. ಕಾಂತರಾಜು ವರದಿ ಸಾರ್ವಜನಿಕ ಚರ್ಚೆಯಾಗಬೇಕು.

3. ಶೇ.50ರ ಮೀಸಲಾತಿ ಮೇಲ್ಮಿತಿ ತೆಗೆಯಬೇಕು.

4. ಜನಸಂಖ್ಯಾ ಪ್ರಮಾಣಕ್ಕೆ ಅನುಗುಣವಾಗಿ ಮೀಸಲಾತಿಯಾಗಬೇಕು. ಮೀಸಲಾತಿಯಲ್ಲಿ ಒಳಮೀಸಲಾತಿಯಾಗಬೇಕು.

4. ಖಾಸಗಿಯಲ್ಲೂ ಮೀಸಲಾತಿಯಾಗಬೇಕು.

5. ಕ್ರಮೇಣವಾಗಿ ಖಾಸಗಿಯೆಲ್ಲ ಸಾರ್ವಜನಿಕವಾಗಬೇಕು.

ಎಲ್ಲಕ್ಕಿಂತ ಮುಖ್ಯವಾಗಿ...

6.ದೇಶದ ಸಂಪತ್ತಿನಲ್ಲಿ ಕಟ್ಟ ಕಡೆಯವರಿಗೂ ಸಮಪಾಲಿರುವ ಆರ್ಥಿಕ ನ್ಯಾಯ ಸಂಹಿತೆಗೆ ಹೋರಾಡಬೇಕು.

ಈ ವರ್ಗ ಸಂಘರ್ಷ ನಡೆಯದೆ ಸಾಮಾಜಿಕ ನ್ಯಾಯವು ತಳಸಮುದಾಯದ ಮಧ್ಯಮವರ್ಗದಾಚೆಗೆ ದಾಟಿ ಕಟ್ಟಕಡೆಯವರಿಗೆ ಮುಟ್ಟುವುದೇ ಇಲ್ಲ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಶಿವಸುಂದರ್

contributor

Similar News