ಕಾಂತರಾಜು ವರದಿ: ಜಾತಿಮುಸುಕಿನ ವರ್ಗ ಸಂಘರ್ಷ?

ನಿರೀಕ್ಷಿತವಾಗಿಯೇ ರಾಜ್ಯದ ವಿವಿಧ ಜಾತಿಗಳ ಸಾಮಾಜಿಕ-ಶೈಕ್ಷಣಿಕ ಸ್ಥಾನಮಾನಗಳ ಮತ್ತು ಅದರ ಕಾರಣಗಳ ಚರ್ಚೆ ಪ್ರಾರಂಭವೇ ಆಗದೆ ಬಲಿಷ್ಠ ಜಾತಿಗಳ ಬಲಿಷ್ಠರು ಇಡೀ ಚರ್ಚೆಯನ್ನು ತಮ್ಮ ರಾಜಕೀಯ ಪಟ್ಟಭದ್ರ ಹಿತಾಸಕ್ತಿಯ ಹಿನ್ನೆಲೆಯಲ್ಲಿ ಚರ್ಚೆಯನ್ನು ದಾರಿ ತಪ್ಪಿಸುತ್ತಿದ್ದಾರೆ. ಬಲಿಷ್ಠ ಜಾತಿಗಳ ಪಟ್ಟಭದ್ರರು ತಮ್ಮ ತಮ್ಮ ಜಾತಿಗಳ ಸಂಖ್ಯಾ ಪ್ರಾಬಲ್ಯದ ಪ್ರತಿಪಾದನೆ ಮಾಡುತ್ತಾ ಇಡೀ ವರದಿಯನ್ನು ಅವೈಜ್ಞಾನಿಕ ಎಂದು ಘೋಷಿಸುತ್ತಿದ್ದಾರೆ. ಇದರಲ್ಲಿ ಬಲಿಷ್ಠ ಜಾತಿಗಳ ಮೇಲ್ವರ್ಗದ ಪಟ್ಟಭದ್ರರು ಪಕ್ಷಾತೀತ ಏಕತೆಯನ್ನು ಪ್ರದರ್ಶಿಸುತ್ತಿದ್ದಾರೆ. ಆದರೆ ಈ ಏಕತೆ ಯಾವುದರ ವಿರುದ್ಧ ಮತ್ತು ಯಾರ ವಿರುದ್ಧ?;

Update: 2025-04-23 10:33 IST
Editor : Naufal | Byline : ಶಿವಸುಂದರ್
ಕಾಂತರಾಜು ವರದಿ: ಜಾತಿಮುಸುಕಿನ ವರ್ಗ ಸಂಘರ್ಷ?
  • whatsapp icon

ಭಾಗ- 1

ಅಂತೂ ಇಂತೂ ಕಾಂತರಾಜು ಆಯೋಗವು ನಡೆಸಿದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿಯ ಚರ್ಚೆ ಸಚಿವ ಸಂಪುಟದಲ್ಲಿ ಪ್ರಾರಂಭವಾಗಿದೆ. ವರದಿಯು ಅಧಿಕೃತವಾಗಿ ಸಾರ್ವಜನಿಕರಿಗೆ ಲಭ್ಯವಿಲ್ಲದಿದ್ದರೂ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ದಿನನಿತ್ಯ ಪ್ರಕಟವಾಗುತ್ತಿರುವ ವರದಿಯ ವಿವಿಧ ಅಂಕಿಅಂಶಗಳು ಮತ್ತು ಅದನ್ನು ಆಧರಿಸಿದ ವ್ಯಾಖ್ಯಾನಗಳು ರಾಜ್ಯದಲ್ಲಿ ಬಿಸಿಬಿಸಿ ಚರ್ಚೆಯನ್ನು ಹುಟ್ಟುಹಾಕಿದೆ. ಈ ವಿಷಯದಲ್ಲಿ ಸಂಪುಟ ಸಭೆಯಲ್ಲಿ ನಡೆದ ಚರ್ಚೆ ಅಪೂರ್ಣವಾಗಿರುವುದು ನಿರೀಕ್ಷಿತವೇ ಆಗಿದ್ದು ಅದರ ಅನುಷ್ಠಾನವೂ ಕೂಡ ಹೀಗೆ ನನೆಗುದಿಗೆ ಬಿದ್ದರೂ ಆಶ್ಚರ್ಯವಿಲ್ಲ.

ನಿರೀಕ್ಷಿತವಾಗಿಯೇ ರಾಜ್ಯದ ವಿವಿಧ ಜಾತಿಗಳ ಸಾಮಾಜಿಕ-ಶೈಕ್ಷಣಿಕ ಸ್ಥಾನಮಾನಗಳ ಮತ್ತು ಅದರ ಕಾರಣಗಳ ಚರ್ಚೆ ಪ್ರಾರಂಭವೇ ಆಗದೆ ಬಲಿಷ್ಠ ಜಾತಿಗಳ ಬಲಿಷ್ಠರು ಇಡೀ ಚರ್ಚೆಯನ್ನು ತಮ್ಮ ರಾಜಕೀಯ ಪಟ್ಟಭದ್ರ ಹಿತಾಸಕ್ತಿಯ ಹಿನ್ನೆಲೆಯಲ್ಲಿ ಚರ್ಚೆಯನ್ನು ದಾರಿ ತಪ್ಪಿಸುತ್ತಿದ್ದಾರೆ. ಬಲಿಷ್ಠ ಜಾತಿಗಳ ಪಟ್ಟಭದ್ರರು ತಮ್ಮ ತಮ್ಮ ಜಾತಿಗಳ ಸಂಖ್ಯಾ ಪ್ರಾಬಲ್ಯದ ಪ್ರತಿಪಾದನೆ ಮಾಡುತ್ತಾ ಇಡೀ ವರದಿಯನ್ನು ಅವೈಜ್ಞಾನಿಕ ಎಂದು ಘೋಷಿಸುತ್ತಿದ್ದಾರೆ. ಇದರಲ್ಲಿ ಬಲಿಷ್ಠ ಜಾತಿಗಳ ಮೇಲ್ವರ್ಗದ ಪಟ್ಟಭದ್ರರು ಪಕ್ಷಾತೀತ ಏಕತೆಯನ್ನು ಪ್ರದರ್ಶಿಸುತ್ತಿದ್ದಾರೆ.

ಆದರೆ ಈ ಏಕತೆ ಯಾವುದರ ವಿರುದ್ಧ ಮತ್ತು ಯಾರ ವಿರುದ್ಧ?

ವಾಸ್ತವದಲ್ಲಿ ಒಂದು ಸ್ವಸ್ಥ ಹಾಗೂ ಪ್ರಜಾತಾಂತ್ರಿಕ ಸಮಾಜದಲ್ಲಿ ಇಂಥ ವರದಿಗಳು ಈ ಕೆಳಗಿನ ಪ್ರಶ್ನೆಗಳನ್ನು ಹುಟ್ಟುಹಾಕಬೇಕಿತ್ತು ಮತ್ತು ಒಂದು ಸಂವೇದನಾಶೀಲ ಜನಮುಖಿ ಸರಕಾರ ಅಂತಹ ಚರ್ಚೆಗೆ ನಾಯಕತ್ವ ವಹಿಸಬೇಕಿತ್ತು.

ಸಂವಿಧಾನ ಜಾರಿಯಾಗಿ 75 ವರ್ಷಗಳಾಗುತ್ತಿರುವ ಈ ಹೊತ್ತಿನಲ್ಲಿ ಸಾಮಾಜಿಕವಾಗಿ ಅನ್ಯಾಯ ಹಾಗೂ ತಾರತಮ್ಯಕ್ಕೊಳಗಾಗಿರುವ ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿ ಎಷ್ಟು ಸುಧಾರಿಸಿವೆ? ನಿರೀಕ್ಷೆಯಷ್ಟು ಸುಧಾರಿಸಿಲ್ಲ ಎಂದಾದರೆ ಏನು ಕಾರಣ?, ತುಳಿತಕ್ಕೊಳಗಾದ ಸಮುದಾಯಗಳ ಪ್ರಾತಿನಿಧ್ಯ ಹಾಗೂ ಮೇಲ್ಚಲನೆ ಒದಗಿಸುವ ಉದ್ದೇಶದಿಂದ ಜಾರಿಯಾಗಿರುವ ಮೀಸಲಾತಿ ಸಾಮಾಜಿಕ ಅನ್ಯಾಯವನ್ನು ಸರಿದೂಗಿಸುವಲ್ಲಿ ಎಷ್ಟು ಸಫಲವಾಗಿದೆ? ಇವೆಲ್ಲವನ್ನೂ ಆಧರಿಸಿ ಪಾಠ ಕಲಿತು ಇಂದಿನ ಆರ್ಥಿಕ-ಸಾಮಾಜಿಕ ಸನ್ನಿವೇಶದಲ್ಲಿ ಸಾಮಾಜಿಕ ನ್ಯಾಯವನ್ನು ಪರಿಣಾಮಕಾರಿಯಾಗಿ ದಕ್ಕಿಸುವಲ್ಲಿ ಯಾವ ನೀತಿಗಳನ್ನು ಅನುಸರಿಸಬೇಕು?

ಆದರೆ ಅದರ ಬದಲಿಗೆ ಇಡೀ ಚರ್ಚೆಯನ್ನು ಬಲಿಷ್ಠ ಜಾತಿಗಳ ಬಲಿಷ್ಠ ವರ್ಗವು ತನ್ನ ರಾಜಕೀಯ-ಸಾಮಾಜಿಕ ಪಟ್ಟವನ್ನು ಭದ್ರಪಡಿಸಿಕೊಳ್ಳಲು ಅನುಕೂಲವಾಗುವಂತೆ ನೆರೇಟಿವ್ ರೂಪಿಸುತ್ತಿದೆ.

ವಾಸ್ತವದಲ್ಲಿ ಇತ್ತೀಚಿನ ಎಲ್ಲಾ ಆರ್ಥಿಕ ಸಮೀಕ್ಷೆಗಳು ಕಳೆದ 75 ವರ್ಷಗಳಲ್ಲಿ ಸಾಮಾಜಿಕವಾಗಿ ಹಿಂದುಳಿದ ವರ್ಗಗಳ ಸಾಮಾಜಿಕ ಆರ್ಥಿಕ ಸ್ಥಿತಿಗತಿ ಶೋಷಕ ಜಾತಿಗಳ ಸ್ಥಿತಿಗತಿಗಳಿಗೆ ಹೋಲಿಸಿದಲ್ಲಿ ಕುಸಿಯುತ್ತಿವೆ ಎಂಬುದನ್ನೇ ಸೂಚಿಸುತ್ತಿವೆ. ಅದರಲ್ಲೂ 1991ರ ನಂತರದ ಆರ್ಥಿಕ ನೀತಿಗಳು ಶೋಷಿತ ಸಮುದಾಯಗಳನ್ನು ಇನ್ನಷ್ಟು ಅಭದ್ರಗೊಳಿಸಿವೆ ಮತ್ತು ಅತಂತ್ರಗೊಳಿಸಿವೆ. 1991ರ ಆರ್ಥಿಕ ನೀತಿಗಳ ಪರಿಣಾಮವಾಗಿ ಪ್ರಭುತ್ವದ ಹಿಂದೆಗೆತ, ಅದರಿಂದಾಗಿ ಸರಕಾರಿ ಉದ್ಯೋಗ ಮತ್ತು ಶಿಕ್ಷಣಗಳ ಅವಕಾಶಗಳ ದೊಡ್ಡ ಕಡಿತ ಹಾಗೂ ಸಮಗ್ರ ಖಾಸಗೀಕರಣದ ನೀತಿಗಳು ಮತ್ತು ಖಾಸಗಿಯಲ್ಲಿ ಮೀಸಲಾತಿ ಕಡ್ಡಾಯ ಮಾಡಲಾಗದ ಸರಕಾರಗಳ ಕಾರ್ಪೊರೇಟ್ ನೀತಿಗಳು ಮೀಸಲಾತಿಯನ್ನು ನಿಧಾನಕ್ಕೆ ಅಪ್ರಸ್ತುತಗೊಳಿಸುತ್ತಾ ಶೋಷಿತರ ಆರ್ಥಿಕತೆ ಮತ್ತು ಪ್ರಾತಿನಿಧ್ಯ ಎರಡನ್ನು ಕಿರಿದಾಗಿಸಿದವು.

ಇದರ ಜೊತೆಜೊತೆಗೆ 1994ರಲ್ಲಿ ಇಂದ್ರಾ ಸಹಾನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟಿನ ಒಂಭತ್ತು ನ್ಯಾಯಾಧೀಶರ ಸಾಂವಿಧಾನಿಕ ಪೀಠ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳ ಒಟ್ಟಾರೆ ಮೀಸಲಾತಿಯು ಶೇ.50ರ ಮೇಲ್ಮಿತಿಯನ್ನು ದಾಟಬಾರದು ಎಂದು ತಾಕೀತು ಮಾಡಿದ್ದು ಸಹ ಮೀಸಲಾತಿಯ ಪ್ರಮಾಣವನ್ನೇ ಇನ್ನಷ್ಟು ಕಡಿತಗೊಳಿಸಿತು.

ಈ ಎರಡೂ ನೀತಿಗಳು ನೇರವಾಗಿ ಸಾಮಾಜಿಕ ನ್ಯಾಯವನ್ನು ಕೇವಲ ಸಾಂಕೇತಿಕಗೊಳಿಸಿತು. ಈ ವಿವರಗಳು ಈಗಾಗಲೇ ಬಿಹಾರದಲ್ಲಿ ನಡೆದ ಸಾಮಾಜಿಕ ಸ್ಥಿತಿಗತಿ ವರದಿಗಳು ಸಾಬೀತು ಪಡಿಸಿವೆ. ಕರ್ನಾಟಕದಲ್ಲೂ ಕಾಂತರಾಜು ವರದಿ ಜಾತಿ ಪ್ರಮಾಣದ ಬಗೆಗಿನ ಕಲ್ಪಿತ ಉನ್ಮಾದಗಳಿಂದ ಹೊರಬಂದು ಭಾರತದ ಶೋಷಿತ ಸಮುದಾಯಗಳ ಮತ್ತು ವರ್ಗಗಳ ಸಾಮಾಜಿಕ ಸ್ಥಿತಿಗತಿ ಮತ್ತು ಅದರ ಕಾರಣವನ್ನು ಶೋಧಿಸುವ ಚರ್ಚೆಯನ್ನು ಹುಟ್ಟುಹಾಕಬೇಕಿದೆ.

ಆದರೆ ಸಾಮಾಜಿಕವಾಗಿ ಜಾತಿ ಆಧಾರಿತ ವ್ಯವಸ್ಥೆಯ ಪರಂಪರಾನುಗತ ಫಲಾನುಭವಿಗಳು ಮತ್ತು ಕಾರ್ಪೊರೇಟ್ ಆರ್ಥಿಕ ನೀತಿಗಳ ಫಲಾನುಭವಿಗಳು ಬಲಿಷ್ಠ ಜಾತಿಗಳ ಬಲಿಷ್ಠ ವರ್ಗಗಳೇ ಆಗಿರುವುದರಿಂದ ಅವು ಪಕ್ಷಾತೀತವಾಗಿ ಯಥಾಸ್ಥಿತಿಯನ್ನು ಕಾಪಾಡಲು ಬಯಸುತ್ತಿವೆ. ಆದರೆ ಅದು ಶೋಷಿತ ವರ್ಗ ಮತ್ತು ಸಮುದಾಯಗಳ ವರ್ಗ ಹಿತಾಸಕ್ತಿಗೆ ತದ್ವಿರುದ್ಧವಾಗಿದೆ. ಹೀಗಾಗಿ ಕಾಂತರಾಜು ವರದಿಯ ಸುತ್ತ ರಾಜ್ಯದಲ್ಲಿ ನಡೆಯುತ್ತಿರುವ ಚರ್ಚೆಗಳು ಜಾತಿಯ ಮುಸುಕನ್ನು ಹೊದ್ದ ವರ್ಗ ಸಂಘರ್ಷವೇ ಆಗಿದೆ.

ನಿಜವಾದ ಸಾಮಾಜಿಕ ನ್ಯಾಯ ದಕ್ಕಿಸಿಕೊಳ್ಳಲು ಈ ವರ್ಗ ಸಂಘಷರ್ ಅತ್ಯಗತ್ಯವಾಗಿದ್ದು ಬದಲಾವಣೆ ಪರಿಣಾಮಕಾರಿಯಾಗಬೇಕೆಂದರೆ ಸಮಸ್ಯೆಯ ಹಲವು ಆಯಾಮಗಳ ಅರಿವು ಅತ್ಯಗತ್ಯ. ಅದಾಗಬೇಕೆಂದರೆ ಕಾಂತರಾಜು ವರದಿಯ ಸಂಪೂರ್ಣ ಮಾಹಿತಿ ಸಾರ್ವಜನಿಕರಿಗೆ ಅಧಿಕೃತವಾಗಿ ಲಭ್ಯವಾಗಬೇಕು. ಮತ್ತು ಅದರ ಸುತ್ತ ವಸ್ತುನಿಷ್ಠ ಸಾರ್ವಜನಿಕ ಚರ್ಚೆಯಾಗಬೇಕು. ಇದು ಎಲ್ಲಾ ಶೋಷಿತ ಜಾತಿಗಳ ಮತ್ತು ದಮನಿತರ ಮೊಟ್ಟ ಮೊದಲ ಆಗ್ರಹವಾಗಬೇಕು.

ಎರಡನೆಯದಾಗಿ ಮತ್ತು ಅತಿಮುಖ್ಯವಾಗಿ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳ ಮೀಸಲಾತಿಗೆ ಮಾತ್ರ ಹೇರಲ್ಪಟ್ಟಿರುವ ಶೇ. 50ರ ಮೇಲ್ಮಿತಿ ರದ್ದಾಗಿ ಜನಸಂಖ್ಯೆ ಪ್ರಮಾಣಕ್ಕೆ ಅನುಗುಣವಾಗಿ ಮೀಸಲಾತಿ ಜಾರಿಯಾಗಬೇಕು. ಇದು ಕನಿಷ್ಠ ಪರಿಹಾರ. ಆದರೆ ಅಷ್ಟು ಮಾತ್ರ ಸಾಲದು ಎಂಬುದನ್ನು ಬಿಹಾರದ ಸಾಮಾಜಿಕ ಸ್ಥಿತಿಗತಿ ವರದಿ ಸ್ಪಷ್ಟವಾಗಿ ಪುರಾವೆ ಒದಗಿಸುತ್ತದೆ.

ಜಾತಿ ವಿವರಗಳಿಲ್ಲದ ಜನಗಣತಿಗಳು ಅರ್ಧ ಸತ್ಯಗಳು

ಈ ದೇಶದಲ್ಲಿ ಬ್ರಿಟಿಷರು 1871 ರಲ್ಲಿ ಶುರು ಮಾಡಿದ ಮೊದಲ ಸೆನ್ಸಸ್ ನಿಂದಲೂ ಜನಗಣತಿಯ ಜೊತೆಗೆ ಜಾತಿ ಜನಗಣತಿಯೂ ಪ್ರಾರಂಭವಾದವು. 1931ರಲ್ಲಿ ಬ್ರಿಟಿಷರು ಮಾಡಿದ ಕೊನೆಯ ಜನಗಣತಿಯವರೆಗೂ ಜಾತಿಯನ್ನು ಕೂಡ ಸರ್ವೇ ಮತ್ತು ಎಣಿಕೆ ಮಾಡಲಾಗುತ್ತಿತ್ತು.

ಈ ಸೆನ್ಸಸ್‌ನ ಅಂಕಿಅಂಶಗಳು ಕೊಟ್ಟ ಗ್ರಹಿಕೆ ದೇಶದಲ್ಲಿ ದಮನಕ್ಕೊಳಗಾದ ಜಾತಿಗಳು ರಾಜಕೀಯವಾಗಿ ಚೈತನ್ಯವಂತರಾಗಲು ಮತ್ತು ರಾಜಕಾರಣದ ಗುತ್ತೇದಾರಿಕೆ ಹಿಡಿದಿದ್ದ ಹಿಂದೂ ಮೇಲ್ಜಾತಿ ಪಟ್ಟಭದ್ರರಿಗೆ ಸವಾಲು ಹಾಕಲು ಶಕ್ತಿ ನೀಡಿತು. ಹಾಗೂ ಜಾತಿಗಳ ಐಡೆಂಟಿಟಿಯನ್ನು ಗಟ್ಟಿ ಮಾಡಿತು.

ಹಾಗೆಂದು ಸೆನ್ಸಸೇ ಜಾತಿಯನ್ನು ಹುಟ್ಟುಹಾಕಿತು ಎಂಬ ಅತಿರೇಕವನ್ನು ಕೆಲವು ಸಮಾಜಶಾಸ್ತ್ರಜ್ಞರು ಮಾಡುತ್ತಾರಾದರೂ, ಭಾರತದ ಇತಿಹಾಸದಲ್ಲಿ ಅಲ್ಪಸ್ವಲ್ಪ ಜಾತಿ ಚಲನೆ ಇದ್ದದ್ದು ಮಧ್ಯಸ್ಥ ಜಾತಿಗಳಾದ ಶೂದ್ರ ವರ್ಣಗಳಿಗೆ ಸೇರಿದ ಜಾತಿಗಳ ನಡುವೆ ಮಾತ್ರ. ಉಳಿದಂತೆ ಮೇಲ್ ತುದಿಯಲ್ಲಿ ಯಾಜಮಾನ್ಯ ಬ್ರಾಹ್ಮಣ ಜಾತಿ ಹಾಗೂ ಅದರ ಕೆಳ ತುದಿಯಲ್ಲಿ ದಲಿತ ಜಾತಿಗಳು ಬ್ರಿಟಿಷರ ಸೆನ್ಸಸ್‌ಗೆ ಮುಂಚೆಯೇ ಘನೀಕೃತಗೊಂಡಿದ್ದವು. ಅಂಬೇಡ್ಕರ್ ಅವರು ಸವರ್ಣ ಹಿಂದೂ ರಾಜಕಾರಣಕ್ಕೆ ಸಮರ್ಥವಾಗಿ ಸವಾಲೆಸೆಯಲು ದಲಿತ ಅಸ್ಮಿತೆಯ ರಾಜಕಾರಣ ಬಳಸಿಕೊಳ್ಳಲು ಸಾಧ್ಯವಾದದ್ದು ಈ ಜಾತಿಗಣತಿಯಿಂದಲೇ.

ಸ್ವಾತಂತ್ರ್ಯಾನಂತರದಲ್ಲಿ 1951ರಿಂದ ಪ್ರಾರಂಭವಾದ ಸೆನ್ಸಸ್‌ನಿಂದ ಈವರೆಗೆ ಜನಗಣತಿಯ ಭಾಗವಾಗಿ ಜಾತಿಗಣತಿಯನ್ನು ಮಾಡುತ್ತಿಲ್ಲ. ಅಂಬೇಡ್ಕರ್ ಅವರ ನೇತೃತ್ವದಲ್ಲಿ ಸ್ವಾತಂತ್ರ್ಯ ಹೋರಾಟದ ಉದ್ದಕ್ಕೂ ಅಸ್ಪಶ್ಯ ಜಾತಿಗಳ ಹಿತಾಸಕ್ತಿಯನ್ನು ರಕ್ಷಿಸಿಕೊಳ್ಳುವ ಸಂಘರ್ಷ ಜೀವಂತವಾಗಿದ್ದರಿಂದ ಸೆನ್ಸಸ್ ನಲ್ಲಿ ದಲಿತ ಮತ್ತು ಆದಿವಾಸಿಗಳ ಜಾತಿ ಗಣತಿ ಮಾತ್ರ ಮುಂದುವರಿದಿದೆ. ಅದರ ಜೊತೆಗೆ ಲಿಂಗ ಹಾಗೂ ಧರ್ಮಾಧಾರಿತ ಜನಗಣತಿಯೂ ನಡೆಯುತ್ತಿದೆ.

ಹಿಂದುಳಿದ ಮೀಸಲಾತಿ ಮತ್ತು ಅಬ್ರಾಹ್ಮಣ ಪ್ರಭಾವಿಗಳ ಸಬಲೀಕರಣ

ಸ್ವಾತಂತ್ರ್ಯಾನಂತರದ 75 ವರ್ಷಗಳಲ್ಲಿ ಭೂ ಸುಧಾರಣೆ, ಹಸಿರು ಕ್ರಾಂತಿ ಮತ್ತು ಇತರ ಯೋಜನೆಗಳು ಗ್ರಾಮೀಣ ಭಾರತದಲ್ಲಿ ನಿಧಾನವಾಗಿ ಭೂ ಒಡೆತನ ಹೊಂದಿದ್ದ ಶೂದ್ರ ಜಾತಿಗಳನ್ನು ಸಬಲೀಕರಿಸಿ ಮೇಲ್ಚಲನೆ ಹೊಂದಲು ಕಾರಣವಾದವು. ಆ ಆರ್ಥಿಕ ಸಬಲೀಕರಣದಿಂದ ಅಬ್ರಾಹ್ಮಣ ಪ್ರಭಾವಿ ಹಿಂದುಳಿದ ಜಾತಿಗಳ ಮೇಲ್‌ಸ್ತರಗಳು ರಾಜಕೀಯ ಮತ್ತು ಆಡಳಿತದಲ್ಲೂ ಬ್ರಾಹ್ಮಣರ ಆಧಿಪತ್ಯವನ್ನು ಪ್ರಶ್ನಿಸಿ ತಮ್ಮ ಪಾಲು ಕೇಳಲಾರಂಭಿಸಿದವು. ಅದರ ಭಾಗವಾಗಿಯೇ 70-80ರ ದಶಕಗಳಲ್ಲಿ ಹಲವಾರು ರಾಜ್ಯಗಳಲ್ಲಿ ಹಿಂದುಳಿದ ಜಾತಿಗಳಿಗೂ ಮೀಸಲಾತಿ ಜಾರಿಯಾಯಿತು.

1989ರಲ್ಲಿ ವಿ.ಪಿ. ಸಿಂಗ್ ನೇತೃತ್ವದ ಸರಕಾರ ಕೇಂದ್ರ ಸರಕಾರದ ಉದ್ಯೋಗಗಳಲ್ಲೂ ಹಿಂದುಳಿದ ಜಾತಿಗಳಿಗೆ ಮಂಡಲ್ ಆಯೋಗದನ್ವಯ ಮೀಸಲಾತಿಯನ್ನು ಜಾರಿಗೊಳಿಸಿತು. ಅದಾದ ನಂತರದಲ್ಲಿ ಹಿಂದುಳಿದ ಜಾತಿಗಳಲ್ಲಿ ಮೇಲ್ಚಲನೆ ಹೊಂದುತ್ತಿದ್ದ ಜಾತಿಗಳು ರಾಜಕೀಯವಾಗಿಯೂ ಬಲಿಷ್ಠಗೊಂಡವು.

ಜಾತಿಗಣತಿಗೆ ಸುಪ್ರೀಂ ಕೋರ್ಟಿನ ಪರೋಕ್ಷ ಆದೇಶ

1992ರಲ್ಲಿ ಸುಪ್ರೀಂ ಕೋರ್ಟಿನ ಒಂಭತ್ತು ನ್ಯಾಯಾಧೀಶರ ಪೀಠವು ಮಂಡಲ್ ವರದಿಯಾಧಾರಿತ ಮೀಸಲಾತಿಯ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿಹಿಡಿಯಿತು ಮತ್ತು ಪ್ರತೀ ರಾಜ್ಯಗಳಲ್ಲಿ ಒಂದು ಶಾಶ್ವತ ಹಿಂದುಳಿದ ವರ್ಗದ ಆಯೋಗದ ನೇಮಕಾತಿಗೆ ಆದೇಶಿಸಿತು ಹಾಗೂ ಕಾಲಕಾಲಕ್ಕೆ ಹಿಂದುಳಿದ ಮೀಸಲಾತಿಯ ಪಟ್ಟಿಯನ್ನು ತಳಮಟ್ಟದ ಮಾಹಿತಿಯನ್ನು ಆಧರಿಸಿ ಪರಿಷ್ಕರಣೆ ಮಾಡಲು ಆದೇಶಿಸಿತು.

ಆ ನಂತರದಲ್ಲಿ ರಾಜ್ಯಗಳು ನೀಡಿದ ಹಿಂದುಳಿದ ವರ್ಗದ ಮೀಸಲಾತಿಯ ಪಟ್ಟಿಯ ಬಗ್ಗೆ ವಿವಾದ ಉಂಟಾದಾಗಲೆಲ್ಲಾ ಕೋರ್ಟುಗಳು ಮೀಸಲಾತಿ ಫಲವನ್ನು ಪಡೆದುಕೊಳ್ಳಲಿರುವ ಜಾತಿಗಳು ಹಿಂದುಳಿದಿವೆಯೇ ಮತ್ತು ಅವುಗಳ ಪ್ರಮಾಣಕ್ಕೆ ಅನುಸಾರವಾಗಿ ಪ್ರಾತಿನಿಧ್ಯ ಪಡೆದಿವೆಯೇ ಇಲ್ಲವೇ ಎಂಬ ಬಗ್ಗೆ ತಳಮಟ್ಟದ ವೈಜ್ಞಾನಿಕ ಮಾಹಿತಿ ಇದ್ದರೆ ಮಾತ್ರ ಅನುಮೋದಿಸಲು ಇಲ್ಲದಿದ್ದರೆ ತಿರಸ್ಕರಿಸಲು ಪ್ರಾರಂಭಿಸಿದವು.

2010ರಲ್ಲಿ ಯುಪಿಎ ಸರಕಾರ ಜಾತಿ ಜನಗಣತಿ ಮತ್ತು ಜಾತಿವಾರು ಹಿಂದುಳಿದಿರುವಿಕೆಯ ಸರ್ವೇಗಳನ್ನು ನಡೆಸಿತಾದರೂ ಅದರ ಫಲಿತಾಂಶಗಳನ್ನು ಬಿಡುಗಡೆ ಮಾಡಲಿಲ್ಲ. ಅದಕ್ಕೆ ಜಾತಿಯನ್ನು ನಮೂದಿಸುವಾಗ ಉಪಜಾತಿಗಳ ಮತ್ತು ಬಳಿಗಳ ಹೆಸರನ್ನು ಹೇಳಿರುವುದರಿಂದ ಲಕ್ಷಾಂತರ ಹೆಸರುಗಳು ಜಾತಿಗಳ ಹೆಸರಲ್ಲಿ ನಮೂದಾಗಿವೆ ಎಂಬ ಸಬೂಬನ್ನು ನೀಡಲಾಗುತ್ತಿದೆ. ಆದರೂ ಅದನ್ನೇ ಬಹಿರಂಗ ಪಡಿಸಲು ಏನು ಅಡ್ಡಿ?

2014ರಲ್ಲಿ ಮೋದಿ ಸರಕಾರ ಅಧಿಕಾರಕ್ಕೆ ಬಂದ ಮೇಲಂತೂ ಜಾತಿ ಜನಗಣತಿಯನ್ನು ಮೂಲೆಗೆ ಸರಿಸಿತು. ಮಾತ್ರವಲ್ಲ, 2021ರ ಜುಲೈನಲ್ಲಿ ಸಂಸತ್ತಿಗೆ ನೀಡಿತ ಉತ್ತರವೊಂದರಲ್ಲಿ ತಮ್ಮ ಸರಕಾರ ಯಾವ ಕಾರಣಕ್ಕೂ ಜಾತಿ ಜನಗಣತಿ ಮಾಡುವುದಿಲ್ಲ ಎಂದು ಘೋಷಿಸಿತು. ಈ ಮಧ್ಯೆ ಬಿಹಾರದ ಜಾತಿ ಜನಗಣತಿಯ ಬಗ್ಗೆ ಬಿಹಾರದ ಬಿಜೆಪಿ ಬೆಂಬಲ ವ್ಯಕ್ತಪಡಿಸಿದರೂ, ಬಿಜೆಪಿ ಹೈಕಮಾಂಡ್ ವಿರೋಧಿಸುತ್ತಿದೆ. ಜಾತಿ ಜನಗಣತಿಯು ವ್ಯಕ್ತಿಯ ಖಾಸಗಿತನದ ಉಲ್ಲಂಘನೆ ಎಂಬ ನೆಪವೊಡ್ಡಿ ಬಿಹಾರದ ಜನಗಣತಿಯ ವಿರೋಧಿಸಿ ಬಿಜೆಪಿ ಬೆಂಬಲಿಗರೇ ಹೈಕೋರ್ಟಿನಲ್ಲಿ ದಾವೆ ಹೂಡಿದ್ದರು. ಆದರೆ ಅದನ್ನು ಪಾಟ್ನಾ ಹೈಕೋರ್ಟು ಪುರಸ್ಕರಿಸದೇ ಇದ್ದಾಗ ಈಗ ಸುಪ್ರೀಂ ಕೋರ್ಟಿನಲ್ಲಿ ದಾವೆಯನ್ನು ಹೂಡಿದ್ದಾರೆ. ಸುಪ್ರೀಂಕೋರ್ಟು ಜಾತಿ ಜನಗಣತಿಗೆ ತಡೆಯಾಜ್ಞೆ ನೀಡದೆ ಮುಂದಿನ ವಿಚಾರಣೆಯನ್ನು ಮುಂದೂಡಿದೆ.

ಅಂದರೆ ಸಾರಾಂಶದಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿಗೆ ಸಂಬಂಧಪಟ್ಟಂತೆ ಈವರೆಗೆ ಕೋರ್ಟುಗಳು ಜಾತಿ ಜನಗಣತಿ ಮತ್ತು ಜಾತಿವಾರು ಹಿಂದುಳಿದಿರುವಿಕೆಯ ಸರ್ವೇಯನ್ನು ಮಾಡಬೇಕೆಂದು, ಆ empirical data ಅಧರಿಸಿಯೇ ಮೀಸಲಾತಿ ಪ್ರಮಾಣ ನಿಗದಿ ಮಾಡಬೇಕೆಂದು ಆದೇಶಿಸುತ್ತಿತ್ತು ಎಂದಾಗಲಿಲ್ಲವೇ?

ಹಾಗಿದ್ದಲ್ಲಿ ಕೇಂದ್ರ ಸರಕಾರವೂ ಸಹ ಕಾಲಕಾಲಕ್ಕೆ ತನ್ನ ಮೀಸಲಾತಿಯನ್ನು ಪರಿಷ್ಕರಿಸುವ ಮುನ್ನ ದೇಶಾದ್ಯಂತ ಜಾತಿ ಜನಗಣತಿ ಮಾಡಬೇಕೆಂದು ಸುಪ್ರೀಂ ಕೋರ್ಟು ಏಕೆ ಕೇಂದ್ರ ಸರಕಾರಕ್ಕೆ ಆದೇಶಿಸಲಿಲ್ಲ ಎಂಬುದು ನಿಗೂಢವೇ.

ಬಿಹಾರ ಬಯಲು ಮಾಡಿದ ಮಿಥ್ಯೆಗಳು

1. ಶೇ. 63ಕ್ಕೆ ಶೇ. 27 ಮೀಸಲಾತಿ, ಶೇ. 15 ಜನಸಂಖ್ಯೆಗೆ ಶೇ. 10!

ಬಿಹಾರದ ಜಾತಿಜನಗಣತಿಯ ವರದಿ ಪ್ರಕಟವಾಗಿದ್ದು, ಜಾತಿವಾರು ಸಾಮಾಜಿಕ-ಆರ್ಥಿಕ ಸ್ಥಿತಿಗತಿಗಳ ವರದಿ ಬಯಲಾಗಬೇಕಿದೆ. ಆದರೂ ಜಾತಿವಾರು ಪ್ರಮಾಣದ ಬಗ್ಗೆ ಈ ವರದಿಯು ಕೊಟ್ಟಿರುವ ವಿವರಗಳು ಸ್ಫೋಟಕವಾಗಿವೆ.

ಮೊದಲನೆಯದಾಗಿ ಈ ವರದಿಯ ಪ್ರಕಾರ ಬಿಹಾರದ 13 ಕೋಟಿ ಜನಸಂಖ್ಯೆಯಲ್ಲಿ ಶೇ. 63ರಷ್ಟು ಜನತೆ ಹಿಂದುಳಿದ ಜಾತಿಗಳಿಗೆ ಸೇರಿದವರು. ಮಂಡಲ್ ವರದಿ 1931ರ ಕೊನೆಯ ಜಾತಿ ಜನಗಣತಿಯನ್ನು ಆಧರಿಸಿ ಮತ್ತು ಕೆಲವು ಸ್ಯಾಂಪಲ್ ಸರ್ವೇಗಳನ್ನು ಆಧರಿಸಿ ಈ ದೇಶದಲ್ಲಿ ಹಿಂದುಳಿದ ಜಾತಿಗಳ ಪ್ರಮಾಣವು ಶೇ. 52 ಇರಬಹುದು ಎಂದು ಅಂದಾಜಿಸಿತ್ತು. ಇಂದ್ರಾ ಸಹಾನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟು ಒಟ್ಟಾರೆ ಮೀಸಲಾತಿ ಪ್ರಮಾಣವು ಯಾವ ಕಾರಣಕ್ಕೂ ಶೇ. 50 ಅನ್ನು ದಾಟಬಾರದು ಎಂದು ಮೇಲ್ಮಿತಿ ವಿಧಿಸಿದ್ದರಿಂದ ಮತ್ತು ಸಾಂವಿಧಾನಿಕವಾಗಿ ಎಸ್‌ಸಿ ಮತ್ತು ಎಸ್‌ಟಿಗಳಿಗೆ ಈಗಾಗಲೇ ಶೇ. 23ರಷ್ಟು ಮೀಸಲಾತಿ ದಕ್ಕುತ್ತಿದ್ದರಿಂದ ಹಿಂದುಳಿದ ವರ್ಗಗಳ ಮೀಸಲಾತಿ ಪ್ರಮಾಣ ಶೇ. 27ಕ್ಕೆ ಮಿತಿಗೊಂಡಿತು. ಆ ನಂತರ ಎಲ್ಲಾ ರಾಜ್ಯಗಳಲ್ಲೂ ಇದೇ ಕಡೆದಿಟ್ಟ ಕಾನೂನಾಯಿತು.

ಆದರೆ ಬಿಹಾರದ ಜನಗಣತಿಯ ಪ್ರಕಾರ ಹಿಂದುಳಿದ ಜಾತಿಗಳ ಜನಸಂಖ್ಯೆ ಶೇ. 52 ಅಲ್ಲ. ಬದಲಿಗೆ ಶೇ. 63ರಷ್ಟು. ಅಂದರೆ ಶೇ. 11 ರಷ್ಟು ಜಾಸ್ತಿ. ಆದರೂ ಶೇ. 50ರ ಮೇಲ್ಮಿತಿ ಕಾರಣದಿಂದ ಅವರಿಗೆ ದಕ್ಕುತ್ತಿರುವ ಮೀಸಲಾತಿ ಕೇವಲ ಶೇ. 27.

ಆದರೆ ಬಿಹಾರದ ಜಾತಿ ಜನಗಣತಿ ತೋರಿಸಿಕೊಟ್ಟಿರುವಂತೆ ಮೇಲ್ಜಾತಿಗಳ ಜನಸಂಖ್ಯೆ ಕೇವಲ ಶೇ. 15. ಆದರೆ ಇತ್ತೀಚೆಗೆ ಜಾರಿಯಾದ ಇಡಬ್ಲುಎಸ್ ಮೀಸಲಾತಿಯ ಕಾರಣದಿಂದ ಈ ಶೇ. 15ರಷ್ಟಿರುವ ಸಮುದಾಯಕ್ಕೆ ಶೇ. 10ರಷ್ಟು ಮೀಸಲಾತಿ ಸಿಗುತ್ತದೆ. ಇದಕ್ಕಿಂತ ಸಾಮಾಜಿಕ ಅನ್ಯಾಯ ಮತ್ತೊಂದು ಇರಬಹುದೇ?

ಮೇಲ್ಜಾತಿಗಳಿಗೆ ಪ್ರತೀ ಮೂವರಲ್ಲಿ ಇಬ್ಬರಿಗೆ ಮೀಸಲಾತಿ ಅವಕಾಶ ಸಿಕ್ಕರೆ, ಹಿಂದುಳಿದ ಜಾತಿಗಳಲ್ಲಿ ಪ್ರತೀ ಮೂವರಲ್ಲಿ ಒಬ್ಬರಿಗೆ ಮಾತ್ರ ಈ ಅವಕಾಶ ಸಿಗುತ್ತದೆ. ಇದು ಈಗಾಗಲೇ ಇರುವ ಜಾತಿ ತಾರತಮ್ಯವನ್ನು ಹಿಗ್ಗಿಸುವ ಕ್ರಮವೇ ಆಗಿದೆ.

2. ಹಿಂದುಳಿದ ವರ್ಗಗಳಿಗಿಂತ ಅತ್ಯಂತ ಹಿಂದುಳಿದ ವರ್ಗ ಹೆಚ್ಚು

ಬಿಹಾರ ಜಾತಿಗಣತಿ ಹೊರತಂದಿರುವ ಮತ್ತೊಂದು ಮುಖ್ಯ ಅಂಶ ಒಟ್ಟಾರೆಯಾಗಿ ಹಿಂದುಳಿದ ವರ್ಗಗಳ ಪ್ರಮಾಣ ಜನಸಂಖ್ಯೆಯ ಶೇ. 63ರಷ್ಟಿದ್ದರೂ, ಅದರಲ್ಲಿ ಅತ್ಯಂತ ಹಿಂದುಳಿದವರ ಪ್ರಮಾಣ ಶೇ. 36. ಸಾಪೇಕ್ಷವಾಗಿ ಈ ಸಮುದಾಯಗಳಿಗಿಂತ ಮುಂದುವರಿದ ಹಿಂದುಳಿದ ಜಾತಿಗಳ ಪ್ರಮಾಣ ಶೇ. 27. ಅಂದರೆ ಸಾಪೇಕ್ಷವಾಗಿ ಬಲಿಷ್ಠ ಹಿಂದುಳಿದ ಜಾತಿಗಳಿಗಿಂತ ಅತ್ಯಂತ ಹಿಂದುಳಿದ ಜಾತಿಗಳ ಪ್ರಮಾಣ ಶೇ. 9ರಷ್ಟು ಜಾಸ್ತಿ.

ಆದರೆ ಅಷ್ಟೇ ಪ್ರಮಾಣದಲ್ಲಿ ಅತ್ಯಂತ ಹಿಂದುಳಿದ ಜಾತಿಗಳಿಗೆ ಅವಕಾಶಗಳು ಲಭ್ಯವಾಗಿದೆಯೇ ಅಥವಾ ಅವು ಪ್ರಧಾನವಾಗಿ ಶೇ. 27ರಷ್ಟಿರುವ ಸಾಪೇಕ್ಷವಾಗಿ ಮುಂದುವರಿದಿರುವ ಹಿಂದುಳಿದ ಜಾತಿಗಳಿಗೆ ದಕ್ಕಿದೆಯೇ ಎಂಬುದು ಸಾಮಾಜಿಕ ನ್ಯಾಯದ ರಾಜಕಾರಣ ಮುಂದಿಡಬೇಕಾದ ಹೆಜ್ಜೆಗಳನ್ನು ತೀರ್ಮಾನಿಸುತ್ತದೆ.

ಪ್ರಾಯಶಃ ಇತರ ಎಲ್ಲಾ ರಾಜ್ಯಗಳಲ್ಲೂ ಅತ್ಯಂತ ಹಿಂದುಳಿದ ಜಾತಿಗಳ ಪ್ರಮಾಣ, ಈಗಾಗಲೇ ಹೆಚ್ಚಿನ ಸೌಲಭ್ಯ ಪಡೆಯುತ್ತಿರುವ ಹಿಂದುಳಿದ ಜಾತಿಗಳಿಗಿಂತ ಹೆಚ್ಚಿರುವ ಸಾಧ್ಯತೆಯೇ ಹೆಚ್ಚು. ಬಿಹಾರ ಸರಕಾರ ಜಾತಿ ಗಣತಿಯ ಜೊತೆಜೊತೆಗೆ ನಡೆಸಿರುವ ಜಾತಿವಾರು ಸಾಮಾಜಿಕ-ಆರ್ಥಿಕ ಸ್ಥಿತಿಗತಿ ಸಮೀಕ್ಷೆಯೂ ಹೊರಬಂದಾಗ ಕಳೆದ 30-40 ವರ್ಷಗಳ ಹಿಂದುಳಿದ ವರ್ಗದ ರಾಜಕಾರಣ ಯಾವ್ಯಾವ ಜಾತಿಗಳಿಗೆ ಎಷ್ಟೆಷ್ಟು ಲಾಭ ತಂದುಕೊಟ್ಟಿವೆ ಎಂಬುದು ಸ್ಪಷ್ಟವಾಗುತ್ತದೆ.

ಆದರೂ ಅತ್ಯಂತ ಹಿಂದುಳಿದ ಜಾತಿಗಳು ಸಾಪೇಕ್ಷವಾಗಿ ಸೌಲಭ್ಯ ವಂಚಿತವೇ ಎಂಬುದು ನಮ್ಮ ಕರ್ನಾಟಕದ ಉದಾಹರಣೆಯನ್ನು ನೋಡಿದರೂ ಗೊತ್ತಾಗುತ್ತದೆ. ಇದರಿಂದಾಗಿಯೇ ಹಿಂದುಳಿದ ಜಾತಿಗಳಲ್ಲಿ ಪ್ರಬಲವಾದವರು ಜಾತಿ ಜನಗಣತಿಯನ್ನು ವಿರೋಧಿಸುವ, ಜಾತಿ ಜನಗಣತಿಯಿಂದ ಜಾತಿ ವೈಷಮ್ಯ ಹೆಚ್ಚಾಗುತ್ತದೆ ಎಂದು ಸಬೂಬು ಹೇಳುವುದರ ಹಿಂದಿನ ಪಟ್ಟಭದ್ರ ಹಿತಾಸಕ್ತಿ ಇದೇ ಆಗಿದೆ.

ಈ ಪ್ರಬಲ ಜಾತಿಗಳಲ್ಲಿನ ಜಾತಿ ಪ್ರತಿಷ್ಠೆ ಹಾಗೂ ಅತ್ಯಂತ ಹಿಂದುಳಿದವರ ಬಗೆಗಿನ ತಿರಸ್ಕಾರ ಧೋರಣೆಯೇ ಅವರನ್ನು ನವಬ್ರಾಹ್ಮಣರನ್ನಾಗಿಸಿ ಹಿಂದುತ್ವದ ಪ್ರತಿಪಾದಕರನ್ನಾಗಿ ಮಾಡುತ್ತದೆ.

ಆ ಅರ್ಥದಲ್ಲಿ ಈ ಪ್ರಬಲ ಜಾತಿಗಳ ಜಾತಿ ದುರಭಿಮಾನಿಗಳು ಬ್ರಾಹ್ಮಣ್ಯದ ಗೇಟ್ ಕೀಪರ್‌ಗಳಲ್ಲ. ಬದಲಿಗೆ ಸ್ಟೇಕ್ ಹೋಲ್ಡರ್‌ಗಳೇ ಆಗಿದ್ದಾರೆ

ಈ ಸನ್ನಿವೇಶದಲ್ಲಿ ಜಾತಿ ಜನಗಣತಿಯಿಂದ ಹೊರಬರುವ ಸತ್ಯಾಂಶಗಳಿಂದ ಹಿಂದುಳಿದ ವರ್ಗದ ರಾಜಕಾರಣ ಮತ್ತಷ್ಟು ಸಾಮಾಜಿಕ ನ್ಯಾಯದ ಕಡೆ ಚಲಿಸಬೇಕೆಂದರೆ ಅತ್ಯಂತ ಹಿಂದುಳಿದ ವರ್ಗಗಳಿಗೆ ಆಗಿರುವ ವಂಚನೆಯನ್ನು ಅಂಗೀಕರಿಸುವ ನ್ಯಾಯಪ್ರಜ್ನೆಯನ್ನು ಪ್ರದರ್ಶಿಸಬೇಕಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ಶಿವಸುಂದರ್

contributor

Similar News