ಈ ಕಾಲದ, ಈ ದೇಶದ ಫ್ಯಾಶಿಸಂ ಕುರಿತು...

ಎರಡನೇ ಮಹಾಯುದ್ಧಾನಂತರ 1923ರ ಸಂದರ್ಭಕ್ಕೆ ಹೋಲಿಸಿದರೆ ರೂಪಮಾತ್ರದಲ್ಲಾದರೂ ಬಂಡವಾಳಶಾಹಿ ಬಹುಪಕ್ಷೀಯ ಪ್ರಜಾತಂತ್ರ ವ್ಯವಸ್ಥೆ ಜಗತ್ತಿನ ಬಹುಪಾಲು ದೇಶಗಳಲ್ಲಿ ಬೇರೂರಿದೆ. ಭಾರತದಲ್ಲೂ ಬಹುಪಕ್ಷೀಯ ಪ್ರಜಾತಂತ್ರ ಇಲ್ಲಿನ ಸಾಮಾಜಿಕ ಶ್ರೇಣೀಕರಣ ವ್ಯವಸ್ಥೆಯ ಮೇಲೆ ತಂದು ಸುರಿದಿರುವ ಎರೆಮಣ್ಣಷ್ಟೇ ಆಗಿದೆ. ಅದು ಕಳೆದ 75 ವರ್ಷಗಳಲ್ಲಿ ಬೇರನ್ನೇ ಬಿಡದಿರುವುದರಿಂದ ಇಲ್ಲಿಯ ಬ್ರಾಹ್ಮಣಶಾಹಿ ಜಾತಿ ವ್ಯವಸ್ಥೆ ಫ್ಯಾಶಿಸ್ಟ್ ಕ್ರೌರ್ಯವೇ ಆಗಿರುವ ಜಾತಿ ಕ್ರೌರ್ಯ ಮತ್ತು ಜಾತಿ ಮೇಲರಿಮೆಗಳನ್ನು ಮತ್ತದರ ಹಿಂಸಾಚಾರಗಳನ್ನು ಹಿಂದುತ್ವ ನಾಗರಿಕತೆಯ ಅಂತರ್ಗತ ಭಾಗವನ್ನಾಗಿ ಮಾಡಿಬಿಟ್ಟಿದೆ. ಹಾಗೆಯೇ 1991ರ ನಂತರ ಭಾರತದ ಆಳುವವರ್ಗವು ಸರ್ವಸಮ್ಮತಿಯಿಂದ ಒಪ್ಪಿಕೊಂಡ ಮಾರುಕಟ್ಟೆ ಆರ್ಥಿಕ ವ್ಯವಸ್ಥೆ ಕಳೆದ 35 ವರ್ಷಗಳಲ್ಲಿ ಸಮಾಜವನ್ನು ಅತಂತ್ರಗೊಳಿಸಿ ಭೀಕರ ಸಾಮಾಜಿಕ ಮತ್ತು ಆರ್ಥಿಕ ಸಂಕ್ಷೋಭೆಯನ್ನು ಹುಟ್ಟುಹಾಕಿದೆ. ಭಾರತದಲ್ಲಿ ಮಾತ್ರವಲ್ಲದೆ ಜಗತ್ತಿನ ಬಹುಪಾಲು ಪ್ರಜಾತಂತ್ರಗಳು ಆ ಕಾರಣದಿಂದಲೇ ಸರ್ವಾಧಿಕಾರಗಳಾಗುತ್ತಿವೆ.;

Update: 2025-03-19 09:59 IST
Editor : Thouheed | Byline : ಶಿವಸುಂದರ್
ಈ ಕಾಲದ, ಈ ದೇಶದ ಫ್ಯಾಶಿಸಂ ಕುರಿತು...
  • whatsapp icon

ಭಾಗ- 1

ಮೋದಿಯವರ ನೇತೃತ್ವದಲ್ಲಿ ಬಿಜೆಪಿ ಸರಕಾರ ಸ್ವಂತ ಬಲದ ಮೇಲೆ 2014ರಲ್ಲಿ ಅಧಿಕಾರಕ್ಕೆ ಬಂದಮೇಲೆ, ಆ ನಂತರ 2019ರಲ್ಲಿ ಅತ್ಯಂತ ದ್ವೇಷಪೂರಿತ ಅಜೆಂಡಾಗಳನ್ನು ಮುಂದಿಟ್ಟುಕೊಂಡೇ ಮೊದಲಿಗಿಂತಲೂ ಹೆಚ್ಚಿನ ಬಲದ ಮೇಲೆ ಎರಡನೇ ಬಾರಿ ಸರಕಾರ ರಚಿಸಿದ ನಂತರ ಭಾರತದ ಎಡ ಹಾಗೂ ಪ್ರಗತಿಪರ ವಲಯಗಳಲ್ಲಿ ಭಾರತದ ಪ್ರಭುತ್ವದ ಫ್ಯಾಶಿಸ್ಟ್ ಸ್ವರೂಪದ ಬಗ್ಗೆ ಮತ್ತು ಅದನ್ನು ಸೋಲಿಸಲು ಬೇಕಾದ ಕಾರ್ಯತಂತ್ರಗಳ ಬಗ್ಗೆ ತೀವ್ರವಾದ ಚರ್ಚೆ ನಡೆಯುತ್ತಿದೆ.

ಸರಕಾರಗಳ ಮತ್ತು ಸಂಘಟನೆಗಳ ಅತ್ಯಂತ ಕ್ರೂರ ಹಾಗೂ ಸರ್ವಾಧಿಕಾರಿ ನಡೆಗಳನ್ನು ಬಿಡುಬೀಸಾಗಿ ‘ಫ್ಯಾಶಿಸ್ಟ್’ ಎಂದು ಕರೆಯುವ ಪ್ರವೃತ್ತಿ ಕನ್ನಡದ ರಾಜಕೀಯ ಬರಹಗಳಲ್ಲಿ ಸರ್ವೇ ಸಾಮಾನ್ಯ. ಹೀಗಾಗಿ ಫ್ಯಾಶಿಸಂ ಎಂಬುದು ಕ್ರೂರ ಸರಕಾರಕ್ಕೆ ಅಥವಾ ಸರಕಾರ ಕ್ರೌರ್ಯಕ್ಕೆ ಬಳಸುವ ಮತ್ತೊಂದು ನಾಮಪದ ಎಂಬ ತಿಳುವಳಿಕೆಯೂ ಸಾಮಾನ್ಯವಾಗಿದೆ. ಆದರೆ ಫ್ಯಾಶಿಸಂ ಎಂದರೆ ಕೇವಲ ಕ್ರೌರ್ಯವಲ್ಲ.

ಫ್ಯಾಶಿಸಂ ಎಂಬುದು ಒಂದು ಪ್ರಜಾತಂತ್ರಕ್ಕೆ ಮತ್ತು ಮಾನವೀಯ ಸಹಬಾಳ್ವೆಗೆ ವ್ಯತಿರಿಕ್ತವಾಗಿ ಮುಂದಿಟ್ಟ ಒಂದು ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ವ್ಯವಸ್ಥೆ. ಜಗತ್ತಿನ ಬಂಡವಾಳಶಾಹಿ ಆರ್ಥಿಕತೆ ಮತ್ತು ಬಂಡವಾಳಶಾಹಿ ಪ್ರಜಾತಂತ್ರ ಜಗತ್ತನ್ನೇ ಸೂರೆ ಹೊಡೆಯುವ ಪ್ರಕ್ರಿಯೆಯಲ್ಲಿ ಎದುರಾದ ಬಿಕ್ಕಟ್ಟನ್ನು ನಿವಾರಿಸಿಕೊಳ್ಳಲು ಅದರೊಳಗಿಂದಲೇ ಹುಟ್ಟಿಕೊಂಡ ಒಂದು ದ್ವೇಷ ನಾಗರಿಕತೆಯ ಪರ್ಯಾಯ ವ್ಯವಸ್ಥೆ. ಹೀಗಾಗಿ ಫ್ಯಾಶಿಸಂ ಅನ್ನು ಒಂದು ಪಕ್ಷ ಅಥವಾ ಒಂದು ಸಂಘಟನೆಗೆ ಅಥವಾ ಅದು ಎಸಗಿದ ಅತಿರೇಕದ ಕ್ರೂರ ಘಟನಾವಳಿಗಳಿಗೆ ಸೀಮಿತ ಮಾಡಿ ನೋಡುವುದರಿಂದ ಫ್ಯಾಶಿಸಂನ ಅಪಾಯವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲಾಗದು ಅಥವಾ ಬಲವಾದ ಫ್ಯಾಶಿಸ್ಟ್ ವಿರೋಧಿ ಜನಸಂಗ್ರಾಮವನ್ನೂ ಕಟ್ಟಿ ಸೋಲಿಸಲೂ ಆಗದು.

ಆ ಕಾಲ-ದೇಶಗಳ ಫ್ಯಾಶಿಸಂ

ಜಗತ್ತಿನ ಇತಿಹಾಸದಲ್ಲಿ ಮಾನವ ಕುಲವು ಫ್ಯಾಶಿಸ್ಟ್ ಗಂಡಾಂತರವನ್ನು ಮೊದಲು ಎದುರಿಸಿದ್ದು ಮೊದಲ ಮಹಾಯುದ್ಧದ ನಂತರದ 1925-45ರ ಅವಧಿಯಲ್ಲಿ. ಮೊದಲ ಮಹಾಯುದ್ಧಾನಂತರದಲ್ಲಿ ಅಪಾರ ಆರ್ಥಿಕ ಬಿಕ್ಕಟ್ಟು ಮತ್ತು ಸಾಮಾಜಿಕ ಸಂಕ್ಷೋಭೆಯನ್ನು ಎದುರಿಸುತ್ತಿದ್ದ ಇಟಲಿಯಲ್ಲಿ ಮುಸ್ಸೋಲಿನಿಯ ನೇತೃತ್ವದಲ್ಲಿ ಫ್ಯಾಶಿಸ್ಟ್ ಪಕ್ಷವು ಮತ್ತು ಯುದ್ಧದಲ್ಲಿ ಸೋತು ಅಪಮಾನ, ಅಪಾರ ನಿರುದ್ಯೋಗ, ಹಸಿವು, ಸಂಕ್ಷೋಭೆಯನ್ನು ಎದುರಿಸುತ್ತಿದ್ದ ಜರ್ಮನಿಯಲ್ಲಿ ಹಿಟ್ಲರನ ನಾಝಿ ಪಕ್ಷವು ಫ್ಯಾಶಿಸಂನ ಕ್ಲಾಸಿಕಲ್ ಉದಾಹರಣೆಗಳು. ಇದಲ್ಲದೆ ಎರಡು ಮಹಾಯುದ್ಧಗಳ ನಡುವಿನ ಅವಧಿಯಲ್ಲಿ ಸ್ಪೇನ್ (ಸ್ಪೇನ್‌ನ ಫ್ರಾಂಕೋ ಅತಿ ದೀರ್ಘ ಕಾಲ 1939-75ರ ವರೆಗೆ ಅಧಿಕಾರದಲ್ಲಿದ್ದ ಫ್ಯಾಶಿಸ್ಟ್. ಆದರೆ ಎರಡನೇ ಮಹಾಯುದ್ಧದ ನಂತರದ ಅವಧಿಯಲ್ಲಿ ಸ್ಪೇನಿನ ಫ್ಯಾಶಿಸಂ ರೂಪದಲ್ಲಿ ಹಲವು ಬದಲಾವಣೆ ಮಾಡಿಕೊಂಡಿತ್ತು), ಪೋರ್ಚ್‌ಗಲ್ ಸೇರಿದಂತೆ ಇಂದಿನ ಯೂರೋಪಿನ ಹಲವಾರು ದೇಶಗಳಲ್ಲಿ ಹಾಗೂ ಲ್ಯಾಟಿನ್ ಅಮೆರಿಕದ ಹಲವಾರು ದೇಶಗಳಲ್ಲೂ ಫ್ಯಾಶಿಸಂ ಸಮಾಜವನ್ನು ಮತ್ತು ಕೆಲ ಕಾಲ ರಾಜಕೀಯ ಅಧಿಕಾರವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದವು.

ಮೊದಲ ಮಹಾಯುದ್ಧಾನಂತರದ ಘೋರ ಆರ್ಥಿಕ ಪರಿಸ್ಥಿತಿ ಮತ್ತು ಅಸ್ತಿತ್ವದಲ್ಲಿದ್ದ ‘ಪ್ರಜಾತಂತ್ರ’ದ ಹೆಸರಿನ ಉದಾರವಾದಿ ಬಂಡವಾಳಶಾಹಿ ಸರಕಾರಗಳ ಘೋರ ವೈಫಲ್ಯಗಳು ಕೂಡ ಈ ಫ್ಯಾಶಿಸ್ಟ್ ಶಕ್ತಿಗಳು ವೇಗವಾಗಿ ಜನಪ್ರಿಯಗೊಳ್ಳಲು ಮತ್ತು ಅಧಿಕಾರಕ್ಕೆ ಬರಲು ಕಾರಣವಾಯಿತು. ಈ ಫ್ಯಾಶಿಸ್ಟ್ ಶಕ್ತಿಗಳು ಪ್ರಜಾತಂತ್ರ-ಚುನಾವಣೆ-ಉದಾರವಾದಿ ಸಾಮಾಜಿಕ ಮೌಲ್ಯಗಳ ಬದಲಿಗೆ ತಮ್ಮ ತಮ್ಮ ಪೂರ್ವಜರ ಫ್ಯೂಡಲ್ ಗತ ವೈಭವ, ಸಂಕುಚಿತ ದ್ವೇಷಕಾರಿ ಜನಾಂಗೀಯ ರಾಷ್ಟ್ರವಾದವನ್ನು ಸಮಾಜವಾದಿ ಪರಿಭಾಷೆಗಳೊಂದಿಗೆ ಬೆರೆಸಿ ಮುಂದಿಟ್ಟವು. ನಾಝಿ ಪಕ್ಷದ ಅರ್ಥವೇ ನ್ಯಾಷನಲ್ ಸೋಷಿಯಲಿಸಂ(ರಾಷ್ಟ್ರವಾದಿ ಸಮಾಜವಾದ) ಆಗಿತ್ತು. ಏಕೆಂದರೆ ಈ ಎಲ್ಲಾ ದೇಶಗಳಲ್ಲಿ ವಿವಿಧ ಬಗೆಯ ಸಮಾಜವಾದಿ ಜನಶಕ್ತಿಗಳಾದ ಕಮ್ಯುನಿಸ್ಟ್, ಅನಾರ್ಕಿಸ್ಟ್ ಮತ್ತಿತರರೂ ಕಾರ್ಮಿಕ ವರ್ಗದ ನಡುವೆ ಬಲಿಷ್ಠರಾಗಿದ್ದರು, ಬಂಡವಾಳಶಾಹಿ ಪ್ರಜಾತಂತ್ರದ ವಿರುದ್ಧ ನೈಜ ಸಮಾಜವಾದಿ ಅಜೆಂಡಾಗಳನ್ನಿಟ್ಟುಕೊಂಡು ಸಮರಶೀಲ ಹೋರಾಟ ನಡೆಸುತ್ತಿದ್ದರು ಮತ್ತು ಪ್ರಜಾತಂತ್ರದ ಚುನಾವಣೆಯ ಮಾದರಿಯಲ್ಲಿ ಅಧಿಕಾರವನ್ನು ಕೂಡ ಪಡೆದುಕೊಳ್ಳುವ ಹೊಸ್ತಿಲಲ್ಲಿದ್ದರು. ಇದಲ್ಲದೆ 1917ರಲ್ಲಿ ರಶ್ಯದಲ್ಲಿ ಕಾರ್ಮಿಕ ವರ್ಗವೇ ಕ್ರಾಂತಿಯನ್ನು ಸಂಪೂರ್ಣಗೊಳಿಸಿ ಅಧಿಕಾರಕ್ಕೆ ಬಂದ ನಂತರದಲ್ಲಿ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಕಾರ್ಮಿಕ ವರ್ಗ ಸಮಾಜವಾದಿ-ಕಮ್ಯುನಿಸ್ಟ್ ಶಕ್ತಿಗಳಡಿಯಲ್ಲಿ ಸಂಘಟಿತವಾಗಿ ಬಂಡವಾಳಶಾಹಿಗೆ ದೊಡ್ಡ ಸಮಾಜವಾದಿ ಸವಾಲಾಗಿ ಬೆಳೆಯುತ್ತಿತ್ತು.

ಇಂತಹ ಸಂದರ್ಭದಲ್ಲಿ ಅತ್ಯಂತ ಬಿಕ್ಕಟ್ಟಿನಲ್ಲಿದ್ದ ಇಟಲಿ ಮತ್ತು ಜರ್ಮನಿಯ ಬಂಡವಾಳಶಾಹಿ ಆಳುವವರ್ಗಗಳು ಅಸ್ತಿತ್ವದಲ್ಲಿದ್ದ ಉದಾರವಾದಿ ಪ್ರಜಾತಂತ್ರದ ವೈಫಲ್ಯವನ್ನು ಸಮಾಜವಾದಿ-ಕಮ್ಯುನಿಸ್ಟರು ಬಳಸಿಕೊಳ್ಳದಂತೆ ಮಾಡಲು ಫ್ಯಾಶಿಸ್ಟ್ ಶಕ್ತಿಗಳಿಗೆ ಮತ್ತು ಅದರ ಜನಾಂಗೀಯ ಶ್ರೇಷ್ಠತೆ, ನರಮೇಧ, ಹಿಂಸಾಚಾರ ಮತ್ತಿತರ ಉದಾರವಾದ ವಿರೋಧಿ ಮೌಲ್ಯಗಳಿಗೆ ತಾನೇ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಮದ್ದತು ಕೊಡುತ್ತಾರೆ. ಚುನಾವಣೆಯ ಮೂಲಕವೇ ಅಧಿಕಾರ ಹಿಡಿಯಲು ಪೂರಕವಾಗುತ್ತಾರೆ. ಅಧಿಕಾರಕ್ಕೆ ಬಂದ ಮೇಲೆ ಈ ಫ್ಯಾಶಿಸ್ಟರು ಸಮಾಜದಲ್ಲಿ ಪ್ರಬಲವಾಗಿದ್ದ ಕಮ್ಯುನಿಸ್ಟರನ್ನು ಮತ್ತು ಸಮಾಜವಾದಿಗಳನ್ನು ಭೀಕರವಾಗಿ ಕೊಂದು ಹಾಕುತ್ತಾರೆ. ನಂತರ ಹಂತಹಂತವಾಗಿ ತಮ್ಮ ಪಕ್ಷದೊಳಗಿದ್ದ ಕಾರ್ಮಿಕ ಹಿನ್ನೆಲೆಯ ಬಂಡವಾಳಶಾಹಿ ವಿರೋಧಿ ಸದಸ್ಯಗಣವನ್ನು ಹತ್ಯೆ ಮಾಡಿ ಖುಲ್ಲಂಖುಲ್ಲ ಬಂಡವಾಳಶಾಹಿಗಳ ಆಸಕ್ತಿಯ ವಿಸ್ತರಣೆಗೆ ದಾರಿ ಸುಗಮಗೊಳಿಸುತ್ತಾರೆ. ತಮ್ಮ ಈ ಕ್ರೌರ್ಯಕ್ಕೆ ಸಾಮಾಜಿಕ ತಳಹದಿ ಒದಗಿಸಿಕೊಳ್ಳಲು ಯಹೂದಿ ವಿರೋಧಿ ಕಮ್ಯುನಿಸ್ಟ್ ಮತ್ತು ವೈಚಾರಿಕತೆ ವಿರೋಧಿ ದ್ವೇಷ ರಾಜಕಾರಣವನ್ನು ರಾಷ್ಟ್ರೀಯ ಮೌಲ್ಯಗಳನ್ನಾಗಿ ಪ್ರಚಾರ ಮಾಡುತ್ತಾರೆ. ಹಿಟ್ಲರ್ ಮತ್ತು ಮುಸ್ಸೋಲಿನಿ ಒಟ್ಟು ಸೇರಿ ಎರಡನೇ ಮಹಾಯುದ್ಧಕ್ಕೂ ಕಾರಣರಾಗುತ್ತಾರೆ.

ಉದಾರವಾದಿ ಪ್ರಜಾತಂತ್ರದ ಫ್ಯಾಶಿಸ್ಟ್ ಮೋಹ

ತಮ್ಮ ತಮ್ಮ ದೇಶಗಳ ಮೇಲೆ ಹಿಟ್ಲರ್ ದಾಳಿ ಮಾಡುವ ತನಕವೂ ಅಮೆರಿಕ, ಬ್ರಿಟನ್ ಮತ್ತು ಫ್ರಾನ್ಸಿನ ತಥಾಕಥಿತ ಉದಾರವಾದಿ ಪ್ರಜಾತಂತ್ರವಾದಿ ಸರಕಾರಗಳು ಹಿಟ್ಲರ್‌ನ ಫ್ಯಾಶಿಸಂಗೆ ಬೆಂಬಲವಾಗಿ ನಿಲ್ಲುತ್ತವೆ. ಅಂತಿಮವಾಗಿ ಈ ಫ್ಯಾಶಿಸಂನ್ನು ಸೋಲಿಸುವುದು ಸೋವಿಯತ್ ರಶ್ಯದ ಕಾರ್ಮಿಕ ವರ್ಗದ ಕೆಂಪು ಸೈನ್ಯ ಮತ್ತು ಅದರ ಜೊತೆಗೂಡಿ ಯುದ್ಧ ಸಾರಿದ ಪೂರ್ವ ಯೂರೋಪ್ ದೇಶಗಳ ಫ್ಯಾಶಿಸ್ಟ್ ವಿರೋಧಿ ಕ್ರಾಂತಿ ಪಡೆಗಳು.

ಯುದ್ಧದಲ್ಲಿ ಫ್ಯಾಶಿಸ್ಟ್ ಜರ್ಮನಿ ಸೋತರೂ, ರಣರಂಗದಿಂದ ಪಲಾಯನ ಮಾಡಿದ ಸಾವಿರಾರು ಕೊಲೆಗಡುಕ ಫ್ಯಾಶಿಸ್ಟರನ್ನು ‘ಪ್ರಜಾತಂತ್ರವಾದಿ’ ಅಮೆರಿಕ ಮತ್ತು ಪಶ್ಚಿಮ ಯೂರೋಪ್ ದೇಶಗಳು ಮತ್ತು ಅರ್ಜೆಂಟೀನಾ ದೇಶಗಳು ‘ರಾಷ್ಟ್ರೀಯವಾದಿ’ಗಳೆಂದು ಪುರಸ್ಕರಿಸಿ ತಮ್ಮತಮ್ಮ ದೇಶಗಳಲ್ಲಿ ಪುನರ್ವಸತಿ ಮಾಡಿಕೊಡುತ್ತವೆ. ಅರ್ಥಾತ್ ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ ಹಾಗೂ ಸಮಾಜವಾದಿ ಸವಾಲನ್ನು ಎದುರಿಸಬೇಕಾದ ಸಂದರ್ಭದಲ್ಲಿ ಫ್ಯಾಶಿಸಂ ಅನ್ನು ತನ್ನ ರಿಸರ್ವ್ ರಾಜಕೀಯ ಸಾಧನವನ್ನಾಗಿ ಕಾಪಾಡಿಕೊಳ್ಳುತ್ತಾರೆ. ಏಕೆಂದರೆ 1957ರಲ್ಲಿ ಫ್ರಾನ್ಸಿನ ಸಂದರ್ಭದಲ್ಲಿ ಜೀನ್ ಪಾಲ್ ಸಾರ್ತ್ ಹೇಳಿದಂತೆ ಫ್ಯಾಶಿಸ್ಟರು ಹುಟ್ಟಿ ಬೆಳೆಯುವ ಸಾಮಾಜಿಕ, ಆರ್ಥಿಕ ಸಂದರ್ಭ ಇರುವಷ್ಟು ಕಾಲ ಫ್ಯಾಶಿಸಂ ಸೋಲುವುದಿಲ್ಲ.

ಹೀಗಾಗಿ ಫ್ಯಾಶಿಸಂ ಎಂಬುದು ಕೇವಲ ಸಾಮಾಜಿಕ ಅಥವಾ ಸಾಂಸ್ಕೃತಿಕ ಅತಿರೇಕದ ವಿದ್ಯಮಾನವಲ್ಲ. ಅದು ಅಸ್ತಿತ್ವದಲ್ಲಿರುವ ‘ಪ್ರಜಾತಾಂತ್ರಿಕ’ ವ್ಯವಸ್ಥೆಯು ಆಳುವವರ್ಗವನ್ನು ರಾಜಕೀಯ-ಸಾಮಾಜಿಕ ಬಿಕ್ಕಟ್ಟಿನಿಂದ ಪಾರು ಮಾಡಲಾಗದಾಗ ಬಳಸುವ ಪರ್ಯಾಯ ವಿದ್ಯಮಾನ. ಅದಕ್ಕೆ ಸಾಧನವಾಗುವುದು ಸಮಾಜದ ಅತ್ಯಂತ ಪ್ರತಿಗಾಮಿ ಶಕ್ತಿಗಳು. ಈ ಪ್ರತಿಗಾಮಿ ಶಕ್ತಿಗಳು, ಹೆಚ್ಚುತ್ತಿರುವ ಆರ್ಥಿಕ ಬಿಕ್ಕಟ್ಟಿನಿಂದ ಸಂತ್ರಸ್ತರಾದ ಜನರ ಸಾಮಾಜಿಕ ಸಂಕ್ಷೋಭೆಯನ್ನು ಬಳಸಿಕೊಂಡು ಬೆಳೆಯುವ, ಅತ್ಯಂತ ಅಪಾಯಕಾರಿ ಶಕ್ತಿಗಳಾಗಿವೆ. ಅವುಗಳು ಜನರಲ್ಲಿ ಒಂದು ತಳಹದಿ ಮಾಡಿಕೊಂಡು ಸಾಮಾಜಿಕ ಶಕ್ತಿಯಾಗಿ ಬೆಳದ ನಂತರ ಉದಾರವಾದಿ ಬಂಡವಾಳಶಾಹಿ ಆಳುವವರ್ಗಗಳೇ ಅದರ ಬೆಂಬಲಕ್ಕೆ ನಿಂತು ಅಧಿಕಾರಕ್ಕೆ ಬರಲು ಅನುವು ಮಾಡಿಕೊಡುತ್ತದೆ. ಹೀಗಾಗಿ ಉದಾರವಾದಿ ಬಂಡವಾಳಶಾಹಿ ವರ್ಗ ಫ್ಯಾಶಿಸ್ಟ್ ವಿರೋಧಿ ಸಂಗ್ರಾಮದಲ್ಲಿ ಎಂದಿಗೂ ವಿಶ್ವಾಸಾರ್ಹ ಸ್ನೇಹಿತನಲ್ಲವೆಂಬುದು ಇತಿಹಾಸದ ಒಂದು ಪಾಠ.

ಫ್ಯಾಶಿಸಂ- ಸಾರ ಒಂದೇ ಆದರೂ ರೂಪ ಹಲವು

ರಾಬರ್ಟ್ ಗ್ರಿಫಿನ್ ಅವರು ತಮ್ಮ ‘ಅನಾಟಮಿ ಆಫ್ ಫ್ಯಾಶಿಸಂ’ ಪುಸ್ತಕದಲ್ಲಿ ಜಗತ್ತಿನ ಎಲ್ಲಾ ಫ್ಯಾಶಿಸ್ಟರ ಸಿದ್ಧಾಂತ palingenetic ultranationalism- ಪುನರುತ್ಥಾನವಾದಿ ಉಗ್ರ ರಾಷ್ಟ್ರವಾದ- ಎಂದು ಬಣ್ಣಿಸುತ್ತಾರೆ. ಇದರ ಅತ್ಯುಗ್ರ ಅಭಿವ್ಯಕ್ತಿ ಹಿಟ್ಲರ್ 1943-45ರ ನಡುವೆ ನಡೆಸಿದ 60 ಲಕ್ಷ ಯಹೂದಿಗಳ ಭೀಕರ ನರಮೇಧ. ಆದರೆ ಒಂದು ಪ್ರಭುತ್ವ ಅಥವಾ ದೇಶವನ್ನು ಫ್ಯಾಶಿಸ್ಟ್ ಎಂದು ಕರೆಯಲು ಉಗ್ರ ನರಮೇಧ ನಡೆಯ ಬೇಕಿರುವುದು ಕಡ್ಡಾಯವೇನಲ್ಲ.

ಹಾಗೆ ನೋಡಿದರೆ ಸ್ಪೇನಿನ ಫ್ರಾಂಕೋನ ಫ್ಯಾಶಿಸ್ಟ್ ಸರ್ವಾಧಿಕಾರವನ್ನು ಬಿಟ್ಟರೆ ಇಟಲಿ ಮತ್ತು ಜರ್ಮನ್ ಬಗೆಯ ಅತ್ಯುಗ್ರ ಫ್ಯಾಶಿಸ್ಟ್ ಸರ್ವಾಧಿಕಾರಗಳು 10- 20 ವರ್ಷಕ್ಕಿಂತ ಹೆಚ್ಚು ನಿರಂತರವಾಗಿ ಅಧಿಕಾರದಲ್ಲಿರಲಿಲ್ಲ. 1923-45ರ ನಡುವೆ ಜಗತ್ತಿನ ಕನಿಷ್ಠ 26 ದೇಶಗಳಲ್ಲಿ ಫ್ಯಾಶಿಸ್ಟ್ ಎಂದು ಕರೆಯಬಹುದಾದ ವಿವಿಧ ಸ್ವರೂಪದ ಜನ ಸಂಘಟನೆ, ಜನ ಚಳವಳಿ ಮತ್ತು ಸರಕಾರಗಳು ತಾತ್ಕಾಲಿಕವಾಗಿ ಅಥವಾ ಹೆಚ್ಚುಕಾಲ ಅಧಿಕಾರದಲ್ಲಿದ್ದವು. ಅಲ್ಲೆಲ್ಲಾ ಉದಾರವಾದಿ ಪ್ರಜಾತಂತ್ರ ಸಂಸ್ಥೆಗಳ ಮೇಲೆ ವ್ಯವಸ್ಥಿತ ದಾಳಿ ನಡೆದು ಉನ್ಮತ್ತ ಬಹುಸಂಖ್ಯಾತ ಜನಸಮುದಾಯದ ಬೆಂಬಲದೊಂದಿಗೆ ಅತ್ಯಂತ ಪ್ರತಿಗಾಮಿ ಬಂಡವಾಳಶಾಹಿಗಳು ಅಧಿಕಾರಕ್ಕೆ ಬಂದರೇ ವಿನಾ ಹಿಟ್ಲರ್ ರೀತಿಯ ನರಮೇಧಗಳನ್ನೇನೂ ನಡೆಸಿರಲಿಲ್ಲ. ನರಮೇಧಗಳನ್ನು ನಡೆಸಲಿಲ್ಲ ಎಂದ ಮಾತ್ರಕ್ಕೆ ಅವುಗಳನ್ನು ಫ್ಯಾಶಿಸ್ಟ್ ಅಲ್ಲ ಎಂದು ಹೇಳಲಾಗುವುದಿಲ್ಲ.

ಅದೇ ರೀತಿ ಆ ಕಾಲಘಟ್ಟದಲ್ಲಿ ಆಯಾ ದೇಶಗಳ ಸಮಾಜವನ್ನೇ ಫ್ಯಾಶಿಸ್ಟ್ ಚಿಂತನೆಯಿಂದ ಅಲ್ಲೋಲ ಕಲ್ಲೋಲ ಮಾಡಿದ ಕೆಲವು ಫ್ಯಾಶಿಸ್ಟ್ ಚಳವಳಿಗಳು ಅಧಿಕಾರಕ್ಕೆ ಬರದೇ ಸೋತವು. ಸ್ವಯಂ ಫ್ರಾನ್ಸೇ ಅದಕ್ಕೊಂದು ಉದಾಹರಣೆ.

ಹಾಗೆಯೇ ಸ್ವಯಂ ಹಿಟ್ಲರ್ ಕೂಡ 1934ರಲ್ಲಿ ಅಧಿಕಾರಕ್ಕೆ ಬಂದ ನಂತರ ಹಂತಹಂತವಾಗಿ ತನ್ನ ಫ್ಯಾಶಿಸ್ಟ್ ಕ್ರಮಗಳನ್ನು ಜಾರಿಗೊಳಿಸಿದ. ಇತರ ರಾಜಕೀಯ ಪಕ್ಷಗಳನ್ನು ಬಹಳ ಬೇಗ ನಿಷೇಧಗೊಳಿಸಿದರೂ ಸಮಾಜದೊಳಗೆ ಯಹೂದಿ ವಿರೋಧಿ ಮತ್ತು ಕಾರ್ಮಿಕ ವಿರೋಧಿ ಕ್ರಮಗಳನ್ನು ಜಾರಿಗೊಳಿಸಿದ್ದು ತಡವಾಗಿ ಮತ್ತು ಹಂತಹಂತವಾಗಿ. ಯಹೂದಿಗಳನ್ನು 1938ರಲ್ಲೂ ಕೂಡ ಯಹೂದಿಗಳ ನರಮೇಧ ಅಜೆಂಡಾದಲ್ಲಿ ಇರಲಿಲ್ಲ. ಬದಲಿಗೆ ಯಹೂದಿಗಳನ್ನು ಮೆಡಗಾಸ್ಕರ್‌ಗೆ ಅನಾಮತ್ತು ವರ್ಗಾಯಿಸಬೇಕೆಂಬ ಯೋಜನೆಯಿತ್ತು. ಮೇಲಾಗಿ ಎರಡನೇ ವಹಾಯುದ್ಧವನ್ನು ಪ್ರಾರಂಭಿಸಿದ ಮೇಲೆ ಇಡೀ ಸಮಾಜ ಮತ್ತು ಆರ್ಥಿಕತೆ ಯುದ್ಧೋನ್ಮುಖ ವಾಗಿದ್ದು ಕೂಡ ಒಂದು ಅಸಾಮಾನ್ಯ ಸಂದರ್ಭವನ್ನು ಜರ್ಮನ್ ಫ್ಯಾಶಿಸ್ಟರ ಮುಂದಿರಿಸಿತ್ತು. ಮತ್ತೊಂದು ಕಡೆ ಯುದ್ಧದಲ್ಲಿ ಸೋಲುಗಳು ಕಾಣತೊಡಗಿದೊಡನೆ ಇಟಲಿಯಲ್ಲಿ ಮುಸ್ಸೋಲಿನಿಯ ವಿರುದ್ಧ 1943ರಲ್ಲಿ ಇಟಲಿಯ ವಿವಿಧ ಶಕ್ತಿಗಳೇ ಬಂಡಾಯ ಹೂಡಿ ಫ್ಯಾಶಿಸಂ ಅನ್ನು ಅಧಿಕಾರದಿಂದ ಕಿತ್ತೊಗೆದು ಜೈಲಿಗೆ ದೂಡಿದರು. ನಂತರ ಹಿಟ್ಲರ್ ಆತನನ್ನು ಸೆರೆಯಿಂದ ಬಚಾವು ಮಾಡಬೇಕಾಯಿತು.

ಇದು ಫ್ಯಾಶಿಸಂನ ಒಂದು ಸಂಕ್ಷಿಪ್ತ ಇತಿಹಾಸ. ಇಪ್ಪತ್ತನೇ ಶತಮಾನದಲ್ಲಿ ಮತ್ತು ಯುರೋಪಿನ ನಿರ್ದಿಷ್ಟ ಸಂದರ್ಭದಲ್ಲಿ ಕ್ಲಾಸಿಕಲ್ ಫ್ಯಾಶಿಸಂ ಹುಟ್ಟಿ, ಬೆಳೆದು ಮತ್ತು ಸೋತ ಸಂದರ್ಭ.

ಭಾರತೀಯ ಫ್ಯಾಶಿಸಂ

ಇಂದು ಜಗತ್ತು ಮತ್ತು ಭಾರತ ಮತ್ತೊಮ್ಮೆ ಫ್ಯಾಶಿಸ್ಟ್ ಅಪಾಯವನ್ನು ಎದುರಿಸುತ್ತಿದೆ. ಹೀಗಾಗಿ ಇತಿಹಾಸದ ಅನುಭವದಿಂದ ಹಲವು ಪಾಠಗಳನ್ನು ಕಲಿತರೂ ಸಮಕಾಲೀನ ಕಾಲ ಮತ್ತು ದೇಶದಲ್ಲಿ ಫ್ಯಾಶಿಸಂನ ಹೊಸ ರೂಪ ಮತ್ತು ಸಾರಗಳ ಬಗ್ಗೆಯೂ ಸ್ಪಷ್ಟ ಗ್ರಹಿಕೆಯ ಅಗತ್ಯವಿದೆ. ಭಾರತದ ಪ್ರಖ್ಯಾತ ಎಡಪಂಥೀಯ ಚಿಂತಕ ಎಜಾಝ್ ಅಹ್ಮದ್ ಹೇಳುವಂತೆ every country gets fascism it deserves - ಪ್ರತಿಯೊಂದು ದೇಶವು ತಾನು ಎಂತಹ ಫ್ಯಾಶಿಸಂ ಪಡೆಯಲು ಅರ್ಹವೋ ಅಂತಹ ಫ್ಯಾಶಿಸಂ ಪಡೆಯುತ್ತದೆ.

ಸಮಕಾಲೀನ ಸಂದರ್ಭದಲ್ಲಿ ಭಾರತದ ಮಾತ್ರವಲ್ಲ ಜಗತ್ತಿನ ಯಾವುದೇ ದೇಶದಲ್ಲಿ ಇಪ್ಪತ್ತನೇ ಶತಮಾನದಲ್ಲಿ ಯುರೋಪ್ ಕಂಡ ಫ್ಯಾಶಿಸಂ ಯಥಾವತ್ ಪುನರಾವರ್ತಿಸುವುದಿಲ್ಲ.

ಆದರೆ ಸಾರ ಒಂದೇ- ಪ್ರಜಾತಂತ್ರ ಸಮಾಜದ ನಾಶ ಮತ್ತು ಶೋಷಿತ ಜನರ ಸಮ್ಮತಿಯೊಂದಿಗೆ ಆಳುವ ವರ್ಗಗಳ ಅತ್ಯಂತ ನಗ್ನ ಭಯೋತ್ಪಾದಕ ಸರ್ವಾಧಿಕಾರ.

ಆದರೆ ರೂಪ- ಈ ದೇಶ ಮತ್ತು ಈ ಕಾಲದಲ್ಲಿ ಬೇರೆ ಇರುತ್ತದೆ. ಹೀಗಾಗಿ ಒಂದು ದೇಶ ಫ್ಯಾಶಿಸ್ಟ್ ಆಗಿದೆಯೋ ಇಲ್ಲವೋ ಎಂಬುದಕ್ಕೆ ಸಾರವು ಮಾನದಂಡವಾಗಿರಬೇಕೇ ವಿನಹ ರೂಪವಲ್ಲ.

ಆದರೆ ಇಂದಿನ ಕಾಲ ಮತ್ತು ಸಂದರ್ಭ 1923-39ರ ನಡುವಿನ ಮಹಾಯುದ್ಧಗಳ ನಡುವಿನ ಸಂದರ್ಭಕ್ಕಿಂತ ಭಿನ್ನವಾಗಿದೆ. ಅಲ್ಲದೆ ಎರಡನೇ ಮಹಾಯುದ್ಧಾನಂತರ 1923ರ ಸಂದರ್ಭಕ್ಕೆ ಹೋಲಿಸಿದರೆ ರೂಪಮಾತ್ರದಲ್ಲಾದರೂ ಬಂಡವಾಳಶಾಹಿ ಬಹುಪಕ್ಷೀಯ ಪ್ರಜಾತಂತ್ರ ವ್ಯವಸ್ಥೆ ಜಗತ್ತಿನ ಬಹುಪಾಲು ದೇಶಗಳಲ್ಲಿ ಬೇರೂರಿದೆ. ಭಾರತದಲ್ಲೂ ಬಹುಪಕ್ಷೀಯ ಪ್ರಜಾತಂತ್ರ ಇಲ್ಲಿನ ಸಾಮಾಜಿಕ ಶ್ರೇಣೀಕರಣ ವ್ಯವಸ್ಥೆಯ ಮೇಲೆ ತಂದು ಸುರಿದಿರುವ ಎರೆಮಣ್ಣಷ್ಟೇ ಆಗಿದೆ. ಅದು ಕಳೆದ 75 ವರ್ಷಗಳಲ್ಲಿ ಬೇರನ್ನೇ ಬಿಡದಿರುವುದರಿಂದ ಇಲ್ಲಿಯ ಬ್ರಾಹ್ಮಣಶಾಹಿ ಜಾತಿ ವ್ಯವಸ್ಥೆ ಫ್ಯಾಶಿಸ್ಟ್ ಕ್ರೌರ್ಯವೇ ಆಗಿರುವ ಜಾತಿ ಕ್ರೌರ್ಯ ಮತ್ತು ಜಾತಿ ಮೇಲರಿಮೆಗಳನ್ನು ಮತ್ತದರ ಹಿಂಸಾಚಾರಗಳನ್ನು ಹಿಂದುತ್ವ ನಾಗರಿಕತೆಯ ಅಂತರ್ಗತ ಭಾಗವನ್ನಾಗಿ ಮಾಡಿಬಿಟ್ಟಿದೆ. ಹಾಗೆಯೇ 1991ರ ನಂತರ ಭಾರತದ ಆಳುವವರ್ಗವು ಸರ್ವಸಮ್ಮತಿಯಿಂದ ಒಪ್ಪಿಕೊಂಡ ಮಾರುಕಟ್ಟೆ ಆರ್ಥಿಕ ವ್ಯವಸ್ಥೆ ಕಳೆದ 35 ವರ್ಷಗಳಲ್ಲಿ ಸಮಾಜವನ್ನು ಅತಂತ್ರಗೊಳಿಸಿ ಭೀಕರ ಸಾಮಾಜಿಕ ಮತ್ತು ಆರ್ಥಿಕ ಸಂಕ್ಷೋಭೆಯನ್ನು ಹುಟ್ಟುಹಾಕಿದೆ. ಭಾರತದಲ್ಲಿ ಮಾತ್ರವಲ್ಲದೆ ಜಗತ್ತಿನ ಬಹುಪಾಲು ಪ್ರಜಾತಂತ್ರಗಳು ಆ ಕಾರಣದಿಂದಲೇ ಸರ್ವಾಧಿಕಾರಗಳಾಗುತ್ತಿವೆ.

ಭಾರತವು ಫ್ಯಾಶಿಸಂ ಘಟ್ಟ ತಲುಪಿದೆಯೋ ಇಲ್ಲವೋ ಎಂಬುದಕ್ಕೆ ಅದರ ಅತ್ಯಂತ ಅತಿರೇಕದ ಉದಾಹರಣೆಯಾದ ನರಮೇಧಗಳ ಸಾಧ್ಯತೆಯನ್ನೇ ಗಮನಿಸೋಣ:

ನಾಗರಿಕ ಸಮಾಜ ನರಭಕ್ಷಕ ಸಮಾಜವಾಗುವ ಹತ್ತು ಹಂತಗಳು

ನರಮೇಧಗಳ ಬಗ್ಗೆ ನಿರಂತರವಾದ ಅಧ್ಯಯನ ನಡೆಸುತ್ತಿರುವ ಅಮೆರಿಕದ ಪ್ರೊಫೆಸರ್ ಗ್ರೆಗೋರೊ ಸ್ಟಾನ್ಟನ್ ಅವರು ನರಮೇಧದ ಕ್ಲೈಮಾಕ್ಸ್ ತಲುಪುವ ಮುನ್ನ ಸಮಾಜ ಹಾದು ಹೋಗುವ ಹತ್ತು ಹಂತಗಳನ್ನು ಹೀಗೆ ಗುರುತಿಸುತ್ತಾರೆ:

1.Classification-ಅನ್ಯ ಗುಂಪು ಯಾವುದು ಮತ್ತು ಏಕೆ ಎಂಬ ವರ್ಗೀಕರಣ.

2. Symbolisation- ಆ ಗುಂಪಿನ ಚಹರೆಗಳ ಪಟ್ಟೀಕರಣ.

3. Discrimination- ಆ ಗುಂಪಿನ ಸದಸ್ಯರ ಬಗ್ಗೆ ತಾರತಮ್ಯ ಅನುಸರಿಸುವುದು

4. Dehumanisation- ಆ ಗುಂಪನ್ನು ಅಪಮಾನಿಸುತ್ತಾ, ಮಾನವೀಯ ಘನತೆಗಳನ್ನು ನಿರಾಕರಿಸುತ್ತಾ ಅಮಾನವೀಯಗೊಳಿಸುವುದು

5. Organisation- ಈ ತಾರತಮ್ಯ, ಧೋರಣೆಗಳನ್ನು ವ್ಯವಸ್ಥಿತವಾಗಿ ಸಂಘಟಿಸುವುದು

6. Polarisation- ಇವುಗಳ ಆಧಾರದ ಮೇಲೆ ನಾವು- ಅವರು ಎಂದು ಸಮಾಜವನ್ನು ಧ್ರುವೀಕರಿಸುವುದು

7. Preparation- ನರಮೇಧಕ್ಕೆ ಬೇಕಿರುವ ವ್ಯವಸ್ಥಿತ ಸಿದ್ಧತೆಗಳನ್ನು ಮಾಡಿಕೊಳ್ಳುವುದು

8. Parsecution- ಆ ಗುಂಪುಗಳನ್ನು ಶಾಸನಾತ್ಮಕವಾಗಿ ಬೇರ್ಪಡಿಸಿ ನಾಗರಿಕ ಹಕ್ಕುಗಳನ್ನು ನಿರಾಕರಿಸುತ್ತಾ ದಮನವನ್ನು ಪ್ರಾರಂಭಿಸುವುದು.

9. Extermination- ಸಾಮೂಹಿಕ ಕಗ್ಗೊಲೆ

10. Denial- ಹತ್ಯಾಕಾಂಡದ ನಿರಾಕರಣೆ, ಸಾಕ್ಷಿ ನಾಶ, ಸಾಕ್ಷಿ ಬೆದರಿಕೆ, ಇವೆಲ್ಲವೂ ಮುಂದಿನ ನರಮೇಧಕ್ಕೆ ತಯಾರಿಯೇ ಆಗಿರುತ್ತದೆ.

ಇವೆಲ್ಲವೂ ಅನುಕ್ರಮ ಹಂತಗಳಾಗಿಯೂ ಕಾಣಿಸಿಕೊಳ್ಳಬಹುದು ಅಥವಾ ಒಂದೇ ಸಮಯದಲ್ಲಿ ಹಲವು ಹಂತಗಳ ಪ್ರಕ್ರಿಯೆಗಳೂ ಕಾಣಿಸಬಹುದು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಶಿವಸುಂದರ್

contributor

Similar News