ಈ ಕಾಲದ, ಈ ದೇಶದ ಫ್ಯಾಶಿಸಂ ಕುರಿತು...

Update: 2025-03-20 10:32 IST
Editor : Thouheed | Byline : ಶಿವಸುಂದರ್
ಈ ಕಾಲದ, ಈ ದೇಶದ ಫ್ಯಾಶಿಸಂ ಕುರಿತು...
  • whatsapp icon

ಭಾಗ- 2

ಮೋದಿ ನಂತರದ ಭಾರತೀಯ ಸಮಾಜದಲ್ಲಿ ಪ್ರೊ. ಗ್ರೆಗೋರೊ ಸ್ಟಾನ್ಟನ್ ಅವರು ಹೇಳಿದ ನರಮೇಧದ ಕ್ಲೈಮಾಕ್ಸ್ ತಲುಪುವ ಮುನ್ನ ಸಮಾಜ ಹಾದು ಹೋಗುವ ಹಂತಗಳ ಹತ್ತೂ ಪ್ರಕ್ರಿಯೆಗಳು ತೀವ್ರಗತಿಯಲ್ಲಿ ಸಾಗುತ್ತಿವೆ. ನಾಗರಿಕ ಸಮಾಜವನ್ನು ಮೃಗೀಯಗೊಳಿಸುತ್ತಿದೆ. ಮುಸ್ಲಿಮರನ್ನು ಅನ್ಯೀಕರಣಗೊಳಿಸುತ್ತಾ, ದಲಿತ-ಶೂದ್ರ ಸಮುದಾಯವನ್ನು ಅಮಾನ್ಯಗೊಳಿಸುತ್ತಾ ಸಾಂಸ್ಕೃತಿಕ-ರಾಜಕೀಯ ನರಮೇಧಗಳನ್ನು ನಡೆಸುತ್ತಿದೆ. ಇತರ ಪಕ್ಷಗಳು ಅಧಿಕಾರಕ್ಕೆ ಬಂದರೂ ಈ ಯಾವ ಪ್ರಕ್ರಿಯೆಗಳನ್ನು ನಿಲ್ಲಿಸುತ್ತಿಲ್ಲ. ಹೀಗಾಗಿಯೇ ಪ್ರೊ. ಗ್ರೆಗೋರಿ ಅವರ ಪ್ರಕಾರ ಭಾರತ ಇಂದು ನರಮೇಧದ ತುರ್ತುಸ್ಥಿತಿಯನ್ನು ಎದುರಿಸುತ್ತಿದೆ.

ಸುಸ್ಥಿರ ಭಾರತೀಯ ಫ್ಯಾಶಿಸಂ ಮತ್ತು ಸುಸ್ಥಿರ ಸಮಾಜವಾದಿ ಸಂಗ್ರಾಮ

ಈ ಹಿನ್ನೆಲೆಯಲ್ಲಿ ಭಾರತದ ಫ್ಯಾಶಿಸಂನ ಸಾರ-ರೂಪಗಳ ಚರ್ಚೆಯನ್ನು ಗಮನಿಸಿದಾಗ ಕೆಲವು ಸ್ಪಷ್ಟತೆಗಳು ಅಗತ್ಯವಾಗಿವೆ. ಕ್ಲಾಸಿಕಲ್ ಫ್ಯಾಶಿಸಂಗೆ ಹೋಲಿಸಿದಾಗ ಪ್ರಧಾನವಾಗಿ ಭಾರತದ ಫ್ಯಾಶಿಸ್ಟ್ ಶಕ್ತಿಗಳು

1) ಪ್ರಜಾತಂತ್ರವನ್ನು ಸಂಪೂರ್ಣವಾಗಿ ನಿರ್ನಾಮ ಮಾಡಲು ಸಾಧ್ಯವಾಗಿಲ್ಲ ಮತ್ತು

2) ಫ್ಯಾಶಿಸ್ಟೇತರ ಪಕ್ಷಗಳಿಗೆ ಮತ್ತು ಹಾಲಿ ಇರುವ ಬಂಡವಾಳಶಾಹಿ ಪ್ರಜಾತಂತ್ರಕ್ಕೆ ಫ್ಯಾಶಿಸಂ ಅನ್ನು ವಿರೋಧಿಸುವ ಚೈತನ್ಯವಿದೆ ಮತ್ತು

3) ಫ್ಯಾಶಿಸ್ಟ್ ಸಂಘ ಪರಿವಾರವು ಇನ್ನು ಪ್ರಭುತ್ವನ್ನು ಇಡಿಯಾಗಿ ಆಕ್ರಮಿಸಿಲ್ಲ. ಆದ್ದರಿಂದ ಭಾರತವು ನವ ಫ್ಯಾಶಿಸ್ಟ್ ಅಪಾಯವನ್ನು ಎದುರಿಸುತ್ತಿದೆಯೇ ವಿನಾ ಫ್ಯಾಶಿಸ್ಟ್ ಆಗಿಯೇ ಬಿಟ್ಟಿಲ್ಲ ಎಂಬ ತರ್ಕಗಳು ಇವೆ.

ಫ್ಯಾಶಿಸಂನ ಸ್ವರೂಪವನ್ನು ಫ್ಯಾಶಿಸ್ಟ್ ಸಿದ್ಧಾಂತ, ಫ್ಯಾಶಿಸ್ಟ್ ಚಳವಳಿ ಮತ್ತು ಫ್ಯಾಶಿಸ್ಟ್ ಅಧಿಕಾರವೆಂಬ ಮೂರು ಸ್ಥರಗಳಲ್ಲಿ ಸಾಮಾನ್ಯವಾಗಿ ಚರ್ಚಿಸಲಾಗುತ್ತದೆ.

ಇದರಲ್ಲಿ ಸಂಘಪರಿವಾರ ಮತ್ತು ಅದರ ಹಿಂದೂ ರಾಷ್ಟ್ರ ಸಿದ್ಧಾಂತ ಕ್ಲಾಸಿಕಲ್ ಫ್ಯಾಶಿಸಂ ಸಿದ್ಧಾಂತದಿಂದಲೇ ಪ್ರಭಾವಿತವಾದ ಫ್ಯಾಶಿಸ್ಟ್ ಸಿದ್ಧಾಂತ ಎಂಬುದರಲ್ಲಿ ಯಾರಿಗೂ ಭಿನ್ನಾಭಿಪ್ರಾಯವಿಲ್ಲ. ಆದರೆ ಬೇರೆ ಐರೋಪ್ಯ ಫ್ಯಾಶಿಸ್ಟರಿಗಿಂತ ಭಿನ್ನವಾಗಿ ಈ ಫ್ಯಾಶಿಸ್ಸ್ ಸಿದ್ಧಾಂತಕ್ಕೆ ಭಾರತದ ಬ್ರಾಹ್ಮಣಶಾಹಿ ಜಾತಿ ವ್ಯವಸ್ಥೆ ಸಾಮಾಜಿಕ ನೆಲೆಯನ್ನು ಒದಗಿಸಿಕೊಡುತ್ತದೆ ಎಂಬುದಕ್ಕೆ ಹಾಗೂ ಭಾರತದ ಎಲ್ಲಾ ಪ್ರಜಾತಾಂತ್ರಿಕ ಪಕ್ಷಗಳು ಇದೇ ಫ್ಯಾಶಿಸ್ಟ್ ಬೇರುಗಳನ್ನು ಹೊಂದಿವೆ ಎಂಬುದರ ಬಗ್ಗೆ ಭಾರತೀಯ ಫ್ಯಾಶಿಸ್ಟ್ ವಿರೋಧಿ ಶಕ್ತಿಗಳು ಹೆಚ್ಚು ಗಮನ ಕೊಟ್ಟಂತೆ ಕಾಣುವುದಿಲ್ಲ. ಆದ್ದರಿಂದ ಉಳಿದ ಪ್ರಜಾತಾಂತ್ರಿಕ ಪಕ್ಷಗಳ ಫ್ಯಾಶಿಸಂ ವಿರೋಧದ ಟೊಳ್ಳುತನವನ್ನು ಗಮನಿಸುತ್ತಿಲ್ಲ.

ಎರಡನೆಯದಾಗಿ 1925ರಲ್ಲಿ ಹುಟ್ಟಿದ ಫ್ಯಾಶಿಸ್ಟ್ ಆರೆಸ್ಸೆಸ್ ಜಗತ್ತಿನ ಅತಿ ದೀರ್ಘವಾದ ಫ್ಯಾಶಿಸ್ಟ್ ಚಳವಳಿ ಎಂಬುದನ್ನು ಕೂಡ ಯಾರೂ ಅಲ್ಲಗೆಳೆಯುವುದಿಲ್ಲ. ಆದರೆ 1945ರ ನಂತರ ಜಾಗತಿಕ ಮತ್ತು ಭಾರತೀಯ ಸಂದರ್ಭದಲ್ಲಿ ಅದರಲ್ಲೂ 1991ರ ನಂತರದ ಸಂದರ್ಭದಲ್ಲಿ ಭಾರತೀಯ ಫ್ಯಾಶಿಸಂ ಮತ್ತು ಕಾರ್ಪೊರೇಟ್ ಶಕ್ತಿಗಳು ಜೊತೆಗೂಡಿ ಬಂಡವಾಳ ಶಾಹಿ ಚುನಾವಣಾ ರಾಜಕಾರಣದ ರೂಪವನ್ನು ಉಳಿಸಿಕೊಂಡು ಸಾರದಲ್ಲಿ ಫ್ಯಾಶೀಕರಿಸುವುದರಲ್ಲಿ ಯಶಸ್ವಿಯಾಗಿದೆ ಎಂಬುದನ್ನು ಕಡೆಗಣಿಸುತ್ತಿವೆ.

ವರ್ತಮಾನದ ಭಾರತದ ಮತ್ತು ಇತರ ದೇಶಗಳಲ್ಲಿ ಸಂಭವಿಸುತ್ತಿರುವ ಅತ್ಯಂತ ಕುತೂಹಲಕರ ಸಂಗತಿಯೆಂದರೆ ಉಗ್ರ ಬಲಪಂಥೀಯ ಶಕ್ತಿಗಳಿಗೆ ಸ್ಥಾಪಿತ ಉದಾರವಾದಿ ಪ್ರಜಾತಂತ್ರದ ಸಂಸ್ಥೆಗಳ ಜೊತೆಗೆ ಸಂಘರ್ಷದ ಬದಲಿಗೆ ಹಿತವಾದ ಮೈತ್ರಿ ಏರ್ಪಟ್ಟಿರುವುದು!

ನವಉದಾರವಾದದ ರಾಜಕೀಯದ ಉದ್ದೇಶಗಳಿಗೂ ಮತ್ತು ಉಗ್ರ ಬಲಪಂಥದ ರಾಜಕೀಯ ಉದ್ದೇಶಗಳಿಗೂ ನಡುವೆ ಏರ್ಪಟ್ಟಿರುವ ಈ ಅಪಾಯಕಾರಿ ಆದರೆ ಅತ್ಯಂತ ಆಪ್ತ ಮೈತ್ರಿಯಿಂದಾಗಿ ತಮ್ಮ ತಮ್ಮ ದೇಶಗಳ ಉದಾರವಾದಿ ಸಂವಿಧಾನಗಳನ್ನು ಮತ್ತು ಸಂಸ್ಥೆಗಳನ್ನು ನಾಟಕೀಯವಾಗಿ ಕಿತ್ತುಹಾಕುವ ಅಗತ್ಯವೇ ಇಲ್ಲದೆ ಎಷ್ಟು ಸುಲಭವಾಗಿ ಆಯಾ ದೇಶಗಳ ಫ್ಯಾಶಿಸ್ಟ್ ಶಕ್ತಿಗಳು ತಮ್ಮ ಪ್ರಯೋಜನಗಳಿಗೆ ಪೂರಕವಾಗಿ ಒಗ್ಗಿಸಿಕೊಳ್ಳುತ್ತಿದ್ದಾರೆೆಂಬುಕ್ಕೆ ಮೋದಿ ಸರಕಾರವೇ ಸಂವಿಧಾನದ ಭಜನೆ ಮಾಡುತ್ತಿರುವುದು ಒಂದು ಉದಾಹರಣೆ.

ಇದರ ಅರ್ಥ ಈ ದೇಶದ ಪ್ರಜಾತಂತ್ರಕ್ಕೆ ಇನ್ನೂ ಫ್ಯಾಶೀ ವಿರೋಧಿ ಸಾಮರ್ಥ್ಯವಿದೆಯೆಂದಲ್ಲ. ಬದಲಿಗೆ ಸಮಕಾಲೀನ ಫ್ಯಾಶಿಸಂ ರೂಪದಲ್ಲಿ ಮಾತ್ರ ಪ್ರಜಾತಂತ್ರವನ್ನು ಉಳಿಸಿಕೊಂಡು ಸಾರದಲ್ಲಿ ಫ್ಯಾಶೀಕರಿಸುವುದರಲ್ಲಿ ಯಶಸ್ವಿಯಾಗಿದೆ ಎಂದರ್ಥ ಹಾಗೂ ಆ ಕೈಂಕರ್ಯಕ್ಕೆ ಎಲ್ಲಾ ‘ಪ್ರಜಾತಾಂತ್ರಿಕ’ ಪಕ್ಷಗಳೂ ಕೈಜೋಡಿಸುತ್ತಾ ಬಂದಿವೆ ಎಂದರ್ಥ. ಆಗಾಗ ಅವುಗಳ ನಡುವೆ ಉಂಟಾಗುವ ಚುನಾವಣಾ ವೈಷಮ್ಯವನ್ನು ಫ್ಯಾಶಿಸ್ಟ್ ವಿರೋಧಿ ವೈರುಧ್ಯವೆಂದು ಭಾವಿಸುವುದು ಹಾಗೂ ಅದರಿಂದಾಗಿ ಭಾರತವಿನ್ನೂ ಫ್ಯಾಶಿಸ್ಟ್ ಆಗಿಲ್ಲವೆಂದು ವ್ಯಾಖ್ಯಾನಿಸುವುದು ಮತ್ತು ಅವುಗಳನ್ನು ನೆಚ್ಚಿಕೊಳ್ಳುವ ರಾಜಕೀಯ ಕಾರ್ಯತಂತ್ರ ರೂಪಿಸುವುದು ರಾಜಕೀಯ ಪ್ರಮಾದವಾಗುತ್ತದೆ.

ಹೀಗಾಗಿ ಬ್ರಾಹ್ಮಣಶಾಹಿ ಹಿಂದುತ್ವ ಮತ್ತು ಕಾರ್ಪೊರೇಟ್ ಬಂಡವಾಳವಾದ ಭಾರತೀಯ ಫ್ಯಾಶಿಸಂನ ಸಿದ್ಧಾಂತ ಮತ್ತು ಮಾರ್ಗದರ್ಶಿ. ಭಾರತದ ಆಳುವ ವರ್ಗಗಳ ಯಾವುದೇ ರಾಜಕೀಯ ಪಕ್ಷವೂ ಎಷ್ಟೇ ಬಿಜೆಪಿ ವಿರೋಧಿಯಾಗಿದ್ದರೂ ಬ್ರಾಹ್ಮಣಶಾಹಿ ವಿರೋಧಿ ಅಥವಾ ಬಂಡವಾಳಶಾಹಿ ವಿರೋಧಿಯಲ್ಲ. ಇತಿಹಾಸದಲ್ಲೂ ಕೂಡ ಯಾವ ಉದಾರವಾದಿ ಪ್ರಜಾತಂತ್ರವಾದಿಗಳೂ ಸಹ ಬಿಕ್ಕಟ್ಟಿನಲ್ಲಿದ್ದಾಗ ಫ್ಯಾಶಿಸಂ ಸ್ನೇಹಿತರೇ ಆಗಿಬಿಟ್ಟಿದ್ದವು. ಆದ್ದರಿಂದ ಭಾರತದ ಫ್ಯಾಶಿಸಂ ವಿರೋಧಿ ಹೋರಾಟ ಅತ್ಯಂತ ಪ್ರತಿಗಾಮಿ ಬ್ರಾಹ್ಮಣವಾದಿ ಬಂಡವಾಳಶಾಹಿ ವಿರೋಧಿ ಹೋರಾಟವೇ ಆಗಬೇಕಿರುತ್ತದೆ. ಅರ್ಥಾತ್ ಭಾರತದ ಆಳುವವರ್ಗಗಳಲ್ಲಿ ಫ್ಯಾಶಿಸಂ ವಿರೋಧಿ ಬಂಡವಾಳಶಾಹಿ ವರ್ಗವನ್ನು ಮತ್ತು ಪಕ್ಷವನ್ನು ಕಾಣುವುದು ರಾಜಕೀಯ ಕುರುಡಾಗುತ್ತದೆ.

ಆದ್ದರಿಂದಲೇ ಭಾರತೀಯ ಪ್ರಜಾತಂತ್ರ ಮತ್ತು ರಾಜಕೀಯ ವ್ಯವಸ್ಥೆಯು 1991ರಿಂದಲೇ ಫ್ಯಾಶಿಸ್ಟ್ ವಿರೋಧಿಯಾಗುವ ಸಾಮರ್ಥ್ಯವನ್ನು ಒಳಗಿನಿಂದಲೇ ಕಳೆದುಕೊಳ್ಳುತ್ತಾ ಬಂದಿದ್ದು ಮೋದಿ ಯುಗದಲ್ಲಿ ಅತ್ಯಂತ ಫ್ಯಾಶಿಸ್ಟ್ ಆಗಿ ಪರಿವರ್ತನೆಯಾಗಿದೆ.

ಫ್ಯಾಶಿಸಂ ಸರ್ವಾಧಿಕಾರ ಜಾರಿಯಾಗಲು ಪಾಶ್ಚಿಮಾತ್ಯ ದೇಶಗಳಲ್ಲಿ ಬೇಹುಗಾರಿಕೆ, ಕೊಲ್ಲು ಪಡೆ ಇತ್ಯಾದಿ ಡೀಪ್ ಸ್ಟೇಟ್ ಮತ್ತು ಸಂವಿಧಾನ ಬಾಹಿರ ಸಶಸ್ತ್ರ ಪಡೆಗಳಿದ್ದರೆ ಭಾರತದಲ್ಲಿ ಡೀಪ್ ಸ್ಟೇಟ್ ಜೊತೆಗೆ ಸಂಘಪರಿವಾರದ ರೂಪದಲ್ಲಿ ಡೀಪ್ ಫ್ಯಾಶಿಸ್ಟ್ ಸೊಸೈಟಿಯೂ ಇದೆ.

ಹೀಗಾಗಿ ಭಾರತೀಯ ಫ್ಯಾಶಿಸಂ ಯೂರೋಪಿನ ಫ್ಯಾಶಿಸಂಗೆ ಹೋಲಿಸಿಕೊಂಡರೆ ಇನ್ನು ಸುಸ್ಥಿರವಾದದ್ದು. ಹೀಗಾಗಿ ಅದನ್ನು ಸೋಲಿಸಲು ಸುಸ್ಥಿರ ಮತ್ತು ಸುದೀರ್ಘ ಫ್ಯಾಶಿಸ್ಟ್ ವಿರೋಧಿ ಸಮಾಜವಾದಿ ಜನಸಂಗ್ರಾಮವೇ ಆಗಬೇಕು. ಅದರ ನಾಯಕತ್ವವನ್ನು ಹಿಂದೂ ಬ್ರಾಹ್ಮಣಶಾಹಿ ಹಾಗೂ ಕಾರ್ಪೊರೇಟ್ ಬಂಡವಾಳಶಾಹಿ ಶಕ್ತಿಗಳಿಂದ ಬಾಧಿತರಾದ ದಲಿತ-ದಮನಿತ-ಶೋಷಿತ ಜನರೇ ವಹಿಸಬೇಕು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಶಿವಸುಂದರ್

contributor

Similar News