ವಕ್ಫ್ (ತಿದ್ದುಪಡಿ) ಕಾಯ್ದೆ-2025 ಮುಸ್ಲಿಮರಿಂದ ವಕ್ಫ್ ಅನ್ನು ಮತ್ತು ವಕ್ಫ್ ನಿರ್ವಹಣೆಯನ್ನು ಕಸಿಯುವ ಹುನ್ನಾರ

ವಕ್ಫ್ ಆಸ್ತಿಗಳನ್ನು ಸಮುದಾಯದಿಂದ ಕಸಿದುಕೊಳ್ಳುವ, ವಕ್ಫ್ ನಿರ್ವಹಣೆಯಲ್ಲಿ ಮುಸ್ಲಿಮರನ್ನು ಮೈನಾರಿಟಿಗೊಳಿಸುವ, ಮುಸ್ಲಿಮರ ಬಗ್ಗೆ ಪೂರ್ವಗ್ರಹ ಹೆಚ್ಚಿಸುವ ಈ ಕಾಯ್ದೆ ಅದರ ಆಶಯಗಳಿಗೆ ತದ್ವಿರುದ್ಧವಾಗಿದೆ. ಸಂವಿಧಾನದ ಉಲ್ಲಂಘನೆಯಾಗಿದೆ. ಹಿಂದುತ್ವ ಫ್ಯಾಶಿಸಂನ ಕಾರ್ಯತಂತ್ರವಾಗಿದೆ. ಇದು ಕೇವಲ ಮುಸ್ಲಿಮ್ ವಿರೋಧಿಯಲ್ಲ. ಇದು ಸಂವಿಧಾನ ವಿರೋಧಿ. ಎಲ್ಲಾ ಅಲ್ಪಸಂಖ್ಯಾತ ವಿರೋಧಿ. ಭಾರತದ ಜನತೆ ಒಟ್ಟುಗೂಡಿ ಈ ಫ್ಯಾಶಿಸ್ಟ್ ಕಾಯ್ದೆಯನ್ನು ಸೋಲಿಸಬೇಕು.;

Update: 2025-04-09 08:30 IST
Editor : Thouheed | Byline : ಶಿವಸುಂದರ್
ವಕ್ಫ್ (ತಿದ್ದುಪಡಿ) ಕಾಯ್ದೆ-2025 ಮುಸ್ಲಿಮರಿಂದ ವಕ್ಫ್ ಅನ್ನು ಮತ್ತು ವಕ್ಫ್ ನಿರ್ವಹಣೆಯನ್ನು ಕಸಿಯುವ ಹುನ್ನಾರ
  • whatsapp icon

ಕೊನೆಗೂ ಭಾರತದ ಮುಸ್ಲಿಮರ ಎಲ್ಲಾ ‘ಉಮ್ಮೀದ್’ ಅನ್ನು ಕಸಿಯುವ ವಕ್ಫ್ ತಿದ್ದುಪಡಿ ಕಾಯ್ದೆ-2025 ಸಂಸತ್ತಿನಲ್ಲಿ ಬಹುಮತ ಪಡೆದುಕೊಂಡು ಅವಸರವಸರವಾಗಿ ರಾಷ್ಟ್ರಪತಿಯ ಸಹಿಯನ್ನು ಪಡೆದುಕೊಂಡು ಕಾಯ್ದೆಯಾಗಿಯೇ ಬಿಟ್ಟಿದೆ. ಇದು ಮುಸ್ಲಿಮರ ಅಸ್ತಿತ್ವ, ಅಸ್ಮಿತೆ ಹಾಗೂ ಬದುಕುಗಳ ಮೇಲೆ ಫ್ಯಾಶಿಸ್ಟ್ ಬಿಜೆಪಿ ಸರಕಾರ ನಡೆಸುತ್ತಿರುವ ಆಕ್ರಮಣದ ಮುಂದುವರಿಕೆಯೇ ಆಗಿದ್ದು, ಎಂದಿನಂತೆ ಸೋಗಲಾಡಿ ಸೆಕ್ಯುಲರ್ ಪಕ್ಷಗಳಾದ ತೆಲುಗು ದೇಶಂ, ಜೆಡಿಯು, ಜೆಡಿಎಸ್, ಎಲ್‌ಜೆಪಿ ಪಕ್ಷಗಳು ಬಿಜೆಪಿಯ ಆಕ್ರಮಣಕ್ಕೆ ಕೈಗೂಡಿಸಿದೆ. ಇದು ಸುಳ್ಳು ಪುರಾಣ ಸೃಷ್ಟಿಸಿ ಬಾಬರಿ ಮಸೀದಿಯನ್ನು ಕೆಡವಿ ರಾಮಮಂದಿರ ಕಟ್ಟಿದಷ್ಟೇ ಅತ್ಯಂತ ಕರಾಳ ಮತ್ತು ದೂರಗಾಮಿ ಫ್ಯಾಶಿಸ್ಟ್ ಉದ್ದೇಶ ಹೊಂದಿರುವ ಕ್ರಮವಾಗಿದೆ.

ಹಾಲಿ ಈ ಕಾಯ್ದೆಯನ್ನು ಸೋಮವಾರ ಹಲವಾರು ಪಕ್ಷಗಳು ಮತ್ತು ಸಂಘಟನೆಗಳು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಿವೆ. ಸುಪ್ರೀಂ ಇದನ್ನು ವಿಚಾರಣೆಗೆ ಒಪ್ಪಿಕೊಂಡಿದೆ. ಆದರೆ ಇದೇ ರೀತಿ ಸಿಎಎ ಕಾಯ್ದೆಯನ್ನು ಪ್ರಶ್ನಿಸಿ 156 ಅಹವಾಲುಗಳು ಸಲ್ಲಿಕೆಯಾಗಿವೆ. ಸುಪ್ರೀಂ ಕೋರ್ಟು ಅಹವಾಲುಗಳನ್ನು ವಿಚಾರಣೆಗೆ ಒಪ್ಪಿಕೊಂಡಿದ್ದರೂ ಸಿಎಎ ಜಾರಿಗೆ ತಡೆಯಾಜ್ಞೆಯನ್ನು ನೀಡಲಿಲ್ಲ. ಇದುವರೆಗೆ ಅದರ ವಿಚಾರಣೆಯನ್ನು ಪ್ರಾರಂಭಿಸಿಲ್ಲ. ವಕ್ಫ್ ಕಾಯ್ದೆಯ ವಿಷಯವೂ ಸಾಂವಿಧಾನಿಕ ವ್ಯಾಖ್ಯಾನದ ವಿಷಯವಾಗಿದ್ದು ಕನಿಷ್ಠ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠವನ್ನು ರಚಿಸಬೇಕು. ಈಗಾಗಲೇ ಇಂತಹ ಹಲವು ಸಾಂವಿಧಾನಿಕ ವಿಷಯಗಳು ಸಾಂವಿಧಾನಿಕ ಪೀಠದ ಮುಂದಿವೆ. ಅಲ್ಲದೆ ಇನ್ನೆರಡು ತಿಂಗಳಲ್ಲಿ ಹಾಲಿ ಮುಖ್ಯ ನ್ಯಾಯಾಧೀಶ ನ್ಯಾ. ಖನ್ನ ಅವರು ನಿವೃತ್ತರಾಗಲಿದ್ದಾರೆ. ಹೀಗಾಗಿ ಸದ್ಯಕ್ಕೆ ಕೋರ್ಟಿನಿಂದ ತ್ವರಿತ ನ್ಯಾಯ ಸಿಗುವ ಭರವಸೆಯಿಲ್ಲ. ತ್ವರಿತ ವಿಚಾರಣೆ ನಡೆದರೂ ಬಾಬರಿ ಮಸೀದಿ ಪ್ರಕರಣದಲ್ಲಿ ಸಾಂವಿಧಾನಿಕ ಪೀಠವೇ ಎಂಥ ಅಸಾಂವಿಧಾನಿಕ ತೀರ್ಪು ಕೊಟ್ಟಿತೆಂಬುದನ್ನೂ ಗಮನಿಸಿದ್ದೇವೆ.

ಆದ್ದರಿಂದ ಸಂಸತ್ತಿನಲ್ಲಿ ಜಾರಿ ಮಾಡಿದ ರೈತ ವಿರೋಧಿ ಕೃಷಿ ಮಸೂದೆಗಳನ್ನು ವಾಪಸ್ ತೆಗೆದುಕೊಳ್ಳುವ ರೀತಿ ಹೇಗೆ ಭಾರತದ ರೈತಾಪಿ ಧರ್ಮಾತೀತವಾಗಿ ಬೃಹತ್ ಜನಾಂದೋಲನ ರೂಪಿಸಿತೋ, ಸಿಎಎ- ಎನ್‌ಆರ್‌ಸಿ ವಿರುದ್ಧ ಜನಸಂಗ್ರಾಮ ನಡೆಯಿತೋ ಅದೇ ರೀತಿಯಲ್ಲಿ ಮೋದಿ ಸರಕಾರದ ಈ ಫ್ಯಾಶಿಸ್ಟ್ ದಮನದ ವಿರುದ್ಧವೂ ಸರ್ವಧರ್ಮೀಯರ ಬೃಹತ್ ಜನಾಂದೋಲನ ನಡೆಯುವ ಅಗತ್ಯವಿದೆ. ಅದು ಸಾಧ್ಯವಾಗಬೇಕೆಂದರೆ ವಕ್ಫ್ ಬಗ್ಗೆ, ವಕ್ಫ್ ಬೋರ್ಡ್ ಬಗ್ಗೆ ಮತ್ತು ಮೋದಿ ಸರಕಾರದ ಈ ವಕ್ಫ್ ಕಾಯ್ದೆಯಲ್ಲಿ ಮಾಡಿರುವ ಕರಾಳ ಕಾನೂನುಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಅಗತ್ಯವಿದೆ.

ಈಗಾಗಲೇ ಇದೇ ಅಂಕಣದಲ್ಲಿ ವಕ್ಫ್‌ನ ಇತಿಹಾಸ, ಉದ್ದೇಶ ಮತ್ತು ಮೋದಿ ಸರಕಾರದ ಮಸೂದೆಯಲ್ಲಿರುವ ಕೋಮುವಾದ ಹಾಗೂ ಜಂಟಿ ಸದನ ಸಮಿತಿಯಲ್ಲಿ ವಿರೋಧ ಪಕ್ಷಗಳು ಮಾಡಿದ ಪ್ರಸ್ತಾವಗಳ ಬಗ್ಗೆ ಮತ್ತು ಅದನ್ನು ಏಕಪಕ್ಷೀಯವಾಗಿ ಜಂಟಿ ಸಮಿತಿ ತಿರಸ್ಕರಿಸಿದ ಬಗ್ಗೆ ಬರೆಯಲಾಗಿದೆ. ಹೀಗಾಗಿ ಅವುಗಳ ಪುನರಾವರ್ತನೆ ಮಾಡದೆ ಈ ಲೇಖನದಲ್ಲಿ ಹಾಲಿ ಕಾಯ್ದೆಯಾಗಿರುವ ವಕ್ಫ್ (ತಿದ್ದುಪಡಿ)ಕಾಯ್ದೆ- 2025ರಲ್ಲಿ ವಕ್ಫ್ ಕೊಡುವಲ್ಲಿ ಮತ್ತು ವಕ್ಫ್ ನಿರ್ವಹಣೆಯಲ್ಲಿ ಮುಸ್ಲಿಮರ ಧ್ವನಿಯನ್ನು ದಮನಿಸಲೆಂದೇ ಸೇರ್ಪಡೆಯಾಗಿರುವ ಅಂಶಗಳ ಬಗ್ಗೆ ಮಾತ್ರ ಚರ್ಚಿಸಲಾಗಿದೆ.

ಕಾಯ್ದೆಯ ಪೂರ್ಣ ಪಠ್ಯವನ್ನು ಆಸಕ್ತರು ಈ ವೆಬ್ ವಿಳಾಸದಲ್ಲಿ ಗಮನಿಸಬಹುದು:

https://www.minorityaffairs.gov.in/WriteReadData/RTF1984/1743763149.pdf

ವಕ್ಫ್ ಕೌನ್ಸಿಲ್ ಮತ್ತು ವಕ್ಫ್ ಬೋರ್ಡಿನಲ್ಲಿ ಮುಸ್ಲಿಮರೇ ಮೈನಾರಿಟಿ!

ಸಂವಿಧಾನದ ಆರ್ಟಿಕಲ್ 26ರ ಪ್ರಕಾರ ಭಾರತದ ಯಾವುದೇ ಧರ್ಮೀಯರು ತಮ್ಮ ಧಾರ್ಮಿಕ ಚಟುವಟಿಕೆಗಳನ್ನು ನಡೆಸಲು ಹಾಗೂ ದತ್ತಿದಾನಗಳನ್ನು ಮಾಡಲು ತಮ್ಮದೇ ಆದ ಸಂಸ್ಥೆಗಳನ್ನು ರಚಿಸಿಕೊಂಡು ನಿರ್ವಹಣೆ ಮಾಡಿಕೊಳ್ಳಬಹುದು. ಅದರಲ್ಲಿ ಭ್ರಷ್ಟಾಚಾರ, ಕಾನೂನು ಬಾಹಿರ ಅಕ್ರಮಗಳ ನಿಗ್ರಹದಂತಹ ಧಾರ್ಮಿಕ ವ್ಯವಹಾರಗಳಿಗೆ ಸಂಬಂಧಪಡದ ವಿಷಯಗಳಲ್ಲಿ ಮಾತ್ರ ಅಸ್ತಿತ್ವದಲ್ಲಿರುವ ಕಾನೂನಿನ್ವಯ ಸರಕಾರ ಮಧ್ಯ ಪ್ರವೇಶ ಮಾಡಬಹುದು. ಒಂದು ವೇಳೆ ಮಧ್ಯ ಪ್ರವೇಶ ಮಾಡಿದರೂ ಆ ಸಂಸ್ಥೆಗಳ ಇತರ ಧಾರ್ಮಿಕ ವಿಷಯಗಳಲ್ಲಿ ಮೂಗು ತೂರಿಸುವಂತಿಲ್ಲ. ಹಿಂದೂ, ಮುಸ್ಲಿಮ್, ಕ್ರೈಸ್ತ ಇನ್ನಿತರ ಎಲ್ಲಾ ಧರ್ಮೀಯರು ಈ ಕಲಮಿನ ಅಡಿಯಲ್ಲೇ ಧಾರ್ಮಿಕ ಹಾಗೂ ದತ್ತಿ ದಾನ ಸಂಸ್ಥೆಗಳನ್ನು ಕಟ್ಟಿಕೊಂಡು ನಿರ್ವಹಣೆ ಮಾಡುತ್ತಿದ್ದಾರೆ. ಇಂತಹ ಧಾರ್ಮಿಕ ಸಂಸ್ಥೆಗಳ ಆಡಳಿತ ಸಂಸ್ಥೆಗಳಲ್ಲಿ ಆಯಾ ಧರ್ಮೀಯರೇ ಇರುತ್ತಾರೆ. ಸರಕಾರದ ಪ್ರತಿನಿಧಿಗಳು ಇರುವ ಸಂದರ್ಭದಲ್ಲಿ ಅಂತಹ ಸರಕಾರಿ ಅಧಿಕಾರಿ ಅಥವಾ ಮಂತ್ರಿ ಆಯಾ ಧರ್ಮೀಯರೇ ಆಗಿರುತ್ತಿದ್ದರು. ಮೋದಿ ಸರಕಾರ ಅಧಿಕಾರಕ್ಕೆ ಬಂದ ಮೇಲಂತೂ ಕಾಶಿ ವಿಶ್ವನಾಥ ದೇವಸ್ಥಾನ, ಅಯೋಧ್ಯೆ ರಾಮಮಂದಿರ, ಇತ್ತೀಚೆಗೆ ತಿರುಪತಿ ತಿರುಮಲ ದೇವಸ್ಥಾನ ಟ್ರಸ್ಟುಗಳಲ್ಲೂ ಸರಕಾರಿ ಅಧಿಕಾರಿ ಮತ್ತು ಕರ್ಮಾಚಾರಿಗಳೂ ಹಿಂದೂಗಳೇ ಆಗಿರಬೇಕೆಂದು ಕಾನೂನು ಮಾಡಿವೆ.

ಈ ಹಿನ್ನೆಲೆಯಲ್ಲಿ ವಕ್ಫ್ ಬೋರ್ಡ್ ಕಾಯ್ದೆಯನ್ನೂ ಗಮನಿಸಿದಾಗ ಮೋದಿ ಸರಕಾರದ ಕೋಮುವಾದಿ ಪಕ್ಷಪಾತ ಮತ್ತು ತಾರತಮ್ಯ ಎದ್ದುಕಾಣುತ್ತದೆ.

ಸ್ವಾತಂತ್ರ್ಯಾನಂತರದಲ್ಲಿ 1954ರಲ್ಲಿ ವಕ್ಫ್ ಕಾಯ್ದೆಯೊಂದು ಜಾರಿಯಾಯಿತು. ಅದಾದ ನಂತರದಲ್ಲಿ ಪ್ರಧಾನವಾಗಿ 1995ರಲ್ಲಿ ಒಂದು ಸಮಗ್ರವಾದ ವಕ್ಫ್ ಕಾಯ್ದೆ ಜಾರಿಯಾಯಿತು. ಇದು ಪ್ರಧಾನ ಕಾಯ್ದೆಯಾಗಿದ್ದು ಮೋದಿ ಸರಕಾರ ಈ ಕಾಯ್ದೆಗೆ ಆಮೂಲಾಗ್ರವಾದ ತಿದ್ದುಪಡಿಯನ್ನು ತಂದಿದೆ.

1995ರ ಮೂಲ ಕಾಯ್ದೆಯ ಸೆಕ್ಷನ್ 9(2)ರ ಪ್ರಕಾರ ಒಂದು ಸೆಂಟ್ರಲ್ ವಕ್ಫ್ ಕೌನ್ಸಿಲ್ ರಚಿಸಬೇಕು. ಅದರ ಸದಸ್ಯರನ್ನು ಹೀಗೆ ಆಯ್ಕೆ ಮಾಡಲಾಗುವುದೆಂದು ನಿರ್ದೇಶಿಸಲಾಗಿತ್ತು:

The Council shall consist of- (a) the Union Minister in-charge of 1[waqf]-ex officio Chairperson; (b) the following members to be appointed by the Central Government from amongst Muslims, namely:- (i) three persons to represent Muslim organisations having all India character and national importance; 3 [(ii) four persons of national eminence, one each from the fields of administration or management, financial management, engineering or architecture and medicine;] (iii) three Members of Parliament of whom two shall be from the House of the People and one from the Council of States; (iv) Chairpersons of three Boards by rotation; (v) two persons who have been Judges of the Supreme Court or a High Court; (vi) one Advocate of national eminence; (vii) one person to represent the mutawallis of the 1[waqf] having a gross annual income of rupees five lakhs and above; (viii) three persons who are eminent scholars in Muslim Law: [Provided that at least two of the members appointed under sub-clauses (i) to (viii) shall be women.]

(ಆಸಕ್ತರು 1995ರ ಮೂಲ ಕಾಯ್ದೆಯನ್ನು ಈ ವೆಬ್ ವಿಳಾಸದಲ್ಲಿ ಓದಬಹುದು: https://centralwaqfcouncil.gov.in/sites/default/files/The Waqf Act 1995.pdf)

ಅಂದರೆ 1995ರ ಕಾಯ್ದೆಯ ಪ್ರಕಾರ ಸೆಂಟ್ರಲ್ ವಕ್ಫ್ ಕೌನ್ಸಿಲ್‌ನಲ್ಲಿ ಪದನಿಮಿತ್ತ ಅಧ್ಯಕ್ಷರಾಗುವ ಕೇಂದ್ರದ ವಕ್ಫ್ ಮಂತ್ರಿಯೊಬ್ಬರನ್ನು ಬಿಟ್ಟರೆ ಉಳಿದವರೆಲ್ಲರೂ ಕಡ್ಡಾಯವಾಗಿ ಮುಸ್ಲಿಮರಾಗಬೇಕು. ಅದರ ಅನ್ವಯ ಆಯ್ಕೆಯಾಗುವ 1) ಅಖಿಲ ಭಾರತ ಸ್ವರೂಪ ಇರುವ ಮುಸ್ಲಿಮ್ ಸಂಘಟನೆಗಳ ಮೂವರು ಸದಸ್ಯರು, 2) ಹಣಕಾಸು, ಆಡಳಿತ, ವೈದ್ಯಕೀಯ ಮತ್ತು ವಾಸ್ತುಶಿಲ್ಪ ವಲಯದ ನಾಲ್ವರು ಪರಿಣಿತರು 3) ಲೋಕಸಭೆಯ ಇಬ್ಬರು ಮತ್ತು ರಾಜ್ಯಸಭೆಯ ಒಬ್ಬರು ಸದಸ್ಯರು 4) ರಾಜ್ಯಗಳ ವಕ್ಫ್ ಬೋರ್ಡುಗಳ ಮೂವರು ಸದಸ್ಯರು 5) ಸುಪ್ರೀಂ ಕೋರ್ಟಿನ ಅಥವಾ ಹೈಕೋರ್ಟಿನ ಇಬ್ಬರು ನಿವೃತ್ತ ನ್ಯಾಯಾಧೀಶರು 6) ರಾಷ್ಟ್ರೀಯ ಮಾನ್ಯತೆಯುಳ್ಳ ಒಬ್ಬ ವಕೀಲರು 7) ಐದು ಲಕ್ಷಕ್ಕಿಂತ ಹೆಚ್ಚು ವಾರ್ಷಿಕ ಆದಾಯವುಳ್ಳ ವಕ್ಫ್‌ನ ಒಬ್ಬ ಮುತವಲ್ಲಿ 8) ಇಸ್ಲಾಮಿಕ್ ಕಾಯ್ದೆಯಲ್ಲಿ ಪರಿಣಿತರಾಗಿರುವ ಮೂವರು ಸದಸ್ಯರು (ಹಾಗೂ ಈ ಎಂಟು ವಿಭಾಗಗಳಿಂದ ಕನಿಷ್ಠ ಇಬ್ಬರು ಮುಸ್ಲಿಮ್ ಮಹಿಳೆಯರಾಗಿರಬೇಕು)

ಆದರೆ 1995ರ ಕಾಯ್ದೆಯ ಪ್ರಕಾರ 21 ಸದಸ್ಯರ ಸೆಂಟ್ರಲ್ ಕೌನ್ಸಿಲ್‌ನಲ್ಲಿ 20 ಜನರು ಕಡ್ಡಾಯವಾಗಿ ಮುಸ್ಲಿಮರಾಗಬೇಕಿತ್ತು ಹಾಗೂ ಸಾಮಾನ್ಯವಾಗಿ 21ನೇ ಪದ ನಿಮಿತ್ತ ಅಧ್ಯಕ್ಷರಾಗುವ ವಕ್ಫ್ ಮಂತ್ರಿ ಕೂಡ ಮುಸ್ಲಿಮರೇ ಆಗಿರುತ್ತಿದ್ದರು. ಆ ಮೂಲಕ ಆಯಾ ಧರ್ಮದ ಸಂಸ್ಥೆಯ ಆಡಳಿತವನ್ನು ಆಯಾ ಧರ್ಮೀಯರೇ ನಡೆಸಿಕೊಳ್ಳುವ ಸಾಂವಿಧಾನಿಕ ನಿಯಮವನ್ನು ಪಾಲಿಸಲಾಗುತ್ತಿತ್ತು ಹಾಗೂ ಗಮನಿಸಬೇಕಾದ ಅಂಶವೆಂದರೆ ಮುಸ್ಲಿಮ್ ಮಹಿಳೆಯರಿಗೆ 1995ರ ಕಾಯ್ದೆಯಲ್ಲೇ ಅವಕಾಶವಿತ್ತು. ಅದು ಮೋದಿ ಕಾಯ್ದೆಯ ಕೊಡುಗೆಯೇನಲ್ಲ.

ಆದರೆ ವಕ್ಫ್ (ತಿದ್ದುಪಡಿ) ಕಾಯ್ದೆ-2025ರಲ್ಲಿ ಈ ಮೂಲ ಆಶಯಕ್ಕೆ ತಿದ್ದುಪಡಿ ತಂದು ವಕ್ಫ್ ಕೌನ್ಸಿಲ್‌ನಲ್ಲಿ ಮುಸ್ಲಿಮರೇ ಮೈನಾರಿಟಿಯಾಗುತ್ತಿದ್ದಾರೆ. ಈ 2025ರ ಹೊಸ ಕಾಯ್ದೆಯ ಸೆಕ್ಷನ್ 10, 1995ರ ಕಾಯ್ದೆಗೆ ಈ ರೀತಿಯ ತಿದ್ದುಪಡಿಗಳನ್ನು ಮಾಡಿದೆ:

10 (2) The Council shall consist of- (a) the Union Minister in charge of waqf-Chairperson, ex officio; (b) three Members of Parliament of whom two shall be from the House of the People and one from the Council of States; (c) the following members to be appointed by the Central Government from amongst Muslims, namely:- (i) three persons to represent Muslim organisations having all India character and national importance; (ii) Chairpersons of three Boards by rotation; (iii) one person to represent the mutawallis of the waqf having a gross annual income of five lakh rupees and above; (iv) three persons who are eminent scholars in Muslim law; (d) two persons who have been Judges of the Supreme Court or a High Court; (e) one Advocate of national eminence; (f) four persons of national eminence, one each from the fields of administration or management, financial management, engineering or architecture and medicine; (g) Additional Secretary or Joint Secretary to the Government of India dealing with waqf matters in the Union Ministry or department-member, ex officio: Provided that two of the members appointed under clause (c) shall be women: Provided further that two members appointed under this sub-section, excluding ex officio members, shall be non-Muslim.”.

ಮೇಲಿನ ಸೆಕ್ಷನ್ ಸ್ಪಷ್ಟ ಪಡಿಸುವಂತೆ ಮುಸ್ಲಿಮ್ ಸಮುದಾಯದಿಂದ ಕಡ್ಡಾಯವಾಗಿ ಆಯ್ಕೆ ಮಾಡಿಕೊಳ್ಳಬೇಕಿರುವುದು ಸಬ್ ಸೆಕ್ಷನ್ c(i)(ii) (iii)(iv)ಗಳಲ್ಲಿ ಹೇಳಿರುವ ವಿಭಾಗಗಳಿಂದ ಮಾತ್ರ: ಅಂದರೆ ಅಖಿಲ ಭಾರತ ಸ್ವರೂಪ ಇರುವ ಮುಸ್ಲಿಮ್ ಸಂಘಟನೆಗಳ ಮೂವರು ಸದಸ್ಯರು, ರಾಜ್ಯಗಳ ವಕ್ಫ್ ಬೋರ್ಡುಗಳ ಮೂವರು ಸದಸ್ಯರು, ಐದು ಲಕ್ಷಕ್ಕಿಂತ ಹೆಚ್ಚು ವಾರ್ಷಿಕ ಆದಾಯವುಳ್ಳ ವಕ್ಫ್‌ನ ಒಬ್ಬ ಮುತವಲ್ಲಿ, ಇಸ್ಲಾಮಿಕ್ ಕಾಯ್ದೆಯಲ್ಲಿ ಪರಿಣಿತರಾಗಿರುವ ಮೂವರು ಸದಸ್ಯರು ಮಾತ್ರ ಕಡ್ಡಾಯವಾಗಿ ಮುಸ್ಲಿಮರಾಗಿರಬೇಕು. ಉಳಿದಂತೆ 1995ರ ಕಾಯ್ದೆಯಲ್ಲಿರುವಂತೆ ಸಂಸತ್ ಸದಸ್ಯರು, ನಿವೃತ್ತ ನ್ಯಾಯಾಧೀಶರು, ಗಣ್ಯ ವಕೀಲರು, ವಿವಿಧ ನಾಲ್ಕು ಕ್ಷೇತ್ರಗಳ ಪರಿಣಿತರು, ಕೇಂದ್ರ ಸರಕಾರ ನೇಮಿಸುವ ಅಧಿಕಾರಿ ಇವರೆಲ್ಲರೂ ಮುಸ್ಲಿಮರೇ ಆಗಬೇಕೆಂದು ಕಡ್ಡಾಯವಿಲ್ಲ. ಮೇಲಾಗಿ ಇಬ್ಬರು ಸರಕಾರಿ ಅಧಿಕಾರಿಗಳನ್ನು ಹೊರತು ಪಡಿಸಿ ಇಬ್ಬರು ಕಡ್ಡಾಯವಾಗಿ ಮುಸ್ಲಿಮೇತರಿರಬೇಕು.

ಇದರಿಂದಾಗಿ ಈಗ 22 ಜನರ ಕೌನ್ಸಿಲ್‌ನಲ್ಲಿ 10 ಸದಸ್ಯರು ಮಾತ್ರ ಕಡ್ಡಾಯವಾಗಿ ಮುಸ್ಲಿಮರಾಗಿರುತ್ತಾರೆ. ಇನ್ನುಳಿದ 12 ಸದಸ್ಯರು ಮುಸ್ಲಿಮೇತರಾಗಿರುವ ಅವಕಾಶವನ್ನು ಈ ಕಾಯ್ದೆ ಒದಗಿಸುತ್ತದೆ. ಅಂದರೆ ವಕ್ಫ್ ಕೌನ್ಸಿಲ್‌ನಲ್ಲಿ ಮುಸ್ಲಿಮರೇ ಮೈನಾರಿಟಿ ಆಗುತ್ತಾರೆ.

ರಾಜ್ಯ ವಕ್ಫ್ ಬೋರ್ಡಿನಲ್ಲೂ ಮುಸ್ಲಿಮರು ಮೈನಾರಿಟಿ

ಅದೇ ರೀತಿ ರಾಜ್ಯ ವಕ್ಫ್ ಬೋರ್ಡಿನಲ್ಲೂ ಮುಸ್ಲಿಮರು ವಕ್ಫ್ -2025ರ ಕಾಯ್ದೆಯನ್ವಯ ಮೈನಾರಿಟಿ ಆಗಲಿದ್ದಾರೆ.

1995ರ ಮೂಲ ವಕ್ಫ್ ಕಾಯ್ದೆಯ ಸೆಕ್ಷನ್ 14ರ ಪ್ರಕಾರ ರಾಜ್ಯ ವಕ್ಫ್ ಬೋರ್ಡಿನಲ್ಲಿ ಒಬ್ಬರು ಅಧ್ಯಕ್ಷರು, ರಾಜ್ಯದ ಮುಸ್ಲಿಮ್ ಸಂಸದರು, ಶಾಸಕರು, ರಾಜ್ಯ ಬಾರ್ ಕೌನ್ಸಿಲಿನ ಮುಸ್ಲಿಮ್ ಸದಸ್ಯರು ಮತ್ತು ಒಂದು ಲಕ್ಷಕ್ಕಿಂತ ಹೆಚ್ಚಿನ ವಾರ್ಷಿಕ ಆದಯವಿರುವ ವಕ್ಫ್‌ನ ಮುತವಲ್ಲಿಗಳು ಆಯ್ಕೆ ಮಾಡುವ ಇಬ್ಬರು ಸದಸ್ಯರು, ಸರಕಾರ ನೇಮಕ ಮಾಡುವ ಒಬ್ಬ ಮುಸ್ಲಿಮ್ ಪರಿಣಿತ, ಶಿಯಾ ಮತ್ತು ಸುನ್ನಿ ಇಸ್ಲಾಮಿಕ್ ವ್ಯಾವಹಾರಗಳನ್ನು ಬಲ್ಲ ಇಬ್ಬರು ಮುಸ್ಲಿಮ್ ಪರಿಣಿತರು, ಸರಕಾರದ ಜಂಟಿ ಕಾರ್ಯದರ್ಶಿ ಮಟ್ಟದ ಒಬ್ಬ ಮುಸ್ಲಿಮ್ ಅಧಿಕಾರಿ ಸದಸ್ಯರಾಗಿರುತ್ತಿದ್ದರು. ಅಂದರೆ 1995ರ ಕಾಯ್ದೆಯ ಆಶಯದಂತೆ ವಕ್ಫ್ ಬೋರ್ಡಿನ ಏಳೂ ಸದಸ್ಯರು ಮುಸ್ಲಿಮರೇ ಆಗಿರುತ್ತಿದ್ದರು.

ಆದರೆ 2025ರ ಕಾಯ್ದೆ ಸೆಕ್ಷನ್‌ಗೆ ತಿದ್ದುಪಡಿ ತಂದಿದೆ. ಹೊಸ ಕಾಯ್ದೆಯ ಪ್ರಕಾರ 11 ಜನ ಬೋರ್ಡ್ ಸದಸ್ಯರಲ್ಲಿ ಕಡ್ಡಾಯವಾಗಿ 4 ಜನರು ಮುಸ್ಲಿಮರಿದ್ದರೆ ಸಾಕು. ಉಳಿದ ಏಳು ಸದಸ್ಯರು ಸರಕಾರದಿಂದ ನೇಮಕವಾಗುವ ಮುಸ್ಲಿಮೇತರ ಸದಸ್ಯರು. ಇದಲ್ಲದೆ ಇವರಲ್ಲಿ ಕಡ್ಡಾಯವಾಗಿ ಇಬ್ಬರು ಮುಸ್ಲಿಮೇತರರು ಆಗಿರಲೇ ಬೇಕೆಂದು ಕಡ್ಡಾಯ ಮಾಡಿದೆ.

ಹೀಗೆ ವಕ್ಫ್ (ತಿದ್ದುಪಡಿ) ಕಾಯ್ದೆ-2025 ವಕ್ಫ್ ಕೌನ್ಸಿಲ್ ಮತ್ತು ವಕ್ಫ್ ಬೋರ್ಡ್ ಎರಡರಲ್ಲೂ ಮುಸ್ಲಿಮರನ್ನೇ ಮೈನಾರಿಟಿ ಮಾಡುತ್ತಿದೆ.

ಮುಸ್ಲಿಮರಿಗೆ ಮಾತ್ರ ಸೆಕ್ಯುಲರ್ ನಿರ್ಬಂಧವೇ?

ಇದಲ್ಲದೆ 1995ರ ಕಾಯ್ದೆಯ ಸೆಕ್ಷನ್ ವಕ್ಫ್ ಕೌನ್ಸಿಲ್‌ಗೆ ಸರಕಾರ ನೇಮಕ ಮಾಡುವ ಚೀಫ್ ಎಕ್ಸಿಕ್ಯುಟೀವ್ ಆಫೀಸರ್ (ಸಿಇಒ) ಮುಸ್ಲಿಮರೇ ಆಗಿರಬೇಕಿತ್ತು. 2025ರ ಹೊಸ ಕಾಯ್ದೆಯ ಸೆಕ್ಷನ್ 16 ಇದಕ್ಕೆ ತಿದ್ದುಪಡಿ ತಂದು ಸಿಇಒ ಮುಸ್ಲಿಮರೇ ಆಗಿರಬೇಕೆಂಬ ಕಡ್ಡಾಯವನ್ನು ತೆಗೆದು ಹಾಕಿದೆ. ಹಾಗೆಯೇ ರಾಜ್ಯ ಬೋರ್ಡ್ ಮತ್ತು ಸೆಂಟ್ರಲ್ ವಕ್ಫ್ ಕೌನ್ಸಿಲ್‌ಗಳಲ್ಲಿ ಇಬ್ಬರು ಮುಸ್ಲಿಮೇತರರನ್ನು ಕಡ್ಡಾಯಗೊಳಿಸಿದೆ.

ಮೇಲ್ನೋಟಕ್ಕೆ ಸೆಕ್ಯುಲರ್ ಕ್ರಮವೆಂದು ಕಾಣುವ ಈ ತಿದ್ದುಪಡಿಗಳು ಅನ್ಯಾಕ್ರಮಣ ದುರುದ್ದೇಶವನ್ನೇ ಹೊಂದಿರುವುದು ಸ್ಪಷ್ಟ. ಏಕೆಂದರೆ ಮುಸ್ಲಿಮ್ ಧಾರ್ಮಿಕ ಸಂಸ್ಥೆಗಳಲ್ಲಿ ಮುಸ್ಲಿಮೇತರರನ್ನು ಕಡ್ಡಾಯ ಮಾಡುವ ಮೋದಿ ಸರಕಾರ ಅದೇ ನಿರ್ಬಂಧವನ್ನು ಹಿಂದೂ, ಜೈನ, ಸಿಖ್, ಕ್ರಿಶ್ಚಿಯನ್ ಧಾರ್ಮಿಕ ಸಂಸ್ಥೆಗಳ ಆಡಳಿತ ನಿರ್ವಹಣೆಗಳಲ್ಲೂ ಆಯಾ ಧರ್ಮದವರಲ್ಲದವರನ್ನು ಏಕೆ ಕಡ್ಡಾಯ ಮಾಡುವುದಿಲ್ಲ?

ಅದೇ ರೀತಿ ವಕ್ಫ್ ಬೋರ್ಡ್ ಮತ್ತು ಕೌನ್ಸಿಲ್‌ಗಳ ಆಡಳಿತ ನಿರ್ವಹಣೆಗೆ ನೇಮಕವಾಗುವ ಸರಕಾರಿ ಅಧಿಕಾರಿಗಳು ಮುಸ್ಲಿಮರೇ ಆಗಿರಬೇಕೆಂಬ ಕಡ್ಡಾಯವನ್ನು ತೆಗೆದುಹಾಕಿರುವ ಮೋದಿ ಸರಕಾರ ಕಾಶಿ ವಿಶ್ವನಾಥ, ಅಯೋಧ್ಯಾ ಟ್ರಸ್ಟ್‌ಗಳ ಆಡಳಿತಾಧಿಕಾರಿಗಳಿರಲಿ ಸಿಬ್ಬಂದಿ ಕೂಡ ಹಿಂದೂಯೇತರರು ಇರಬಾರದೆಂದು ಕಾನೂನು ಮಾಡಿರುವುದೇಕೆ? ಈ ಕಾಯ್ದೆಯನ್ನು ಬೆಂಬಲಿಸಿದ ತೆಲುಗು ದೇಶಂ ಪಕ್ಷ ತಿರುಪತಿ ದೇವಸ್ಥಾನದ ಆಡಳಿತದ ಯಾವುದೇ ಸರಕಾರಿ ಹುದ್ದೆಯಲ್ಲಿ ಹಿಂದೂಯೇತರರು ಇರಬಾರದೆಂದು ಕಾನೂನು ಮಾಡಿರುವುದೇಕೆ? ಇದು ಪ್ರಭುತ್ವವು ಧರ್ಮಾಧಾರಿತ ತಾರತಮ್ಯ ಮಾಡಲಾಗದು ಎಂಬ ಆರ್ಟಿಕಲ್ 14 ಮತ್ತು 15ರ ಉಲ್ಲಂಘನೆಯಲ್ಲವೇ?

ಹಾಗೆಯೇ ವಕ್ಫ್ ದಾನ ಮಾಡುವ ವ್ಯಕ್ತಿ ಕನಿಷ್ಠ ಐದು ವರ್ಷ ಮುಸ್ಲಿಮನಾಗಿದ್ದೇನೆಂದು ಸಾಬೀತು ಪಡಿಸಬೇಕೆಂಬ ಕಾನೂನಿನ ಹಿಂದಿರುವುದು ಪೂರ್ವಗ್ರಹವಲ್ಲದೆ ಮತ್ತೇನು? ಸಾಬೀತು ಪಡಿಸುವುದು ಯಾರ ಮುಂದೆ? ಇತರ ಧಾರ್ಮಿಕ ದಾನ ದತ್ತಿಗಳಿಗೆ ಇರದ ಶರತ್ತು ವಕ್ಫ್ ಗೇಕೆ? ಇದು ಸಂವಿಧಾನದ ಆರ್ಟಿಕಲ್ 300ರ ಪ್ರಕಾರ ಅಸ್ತಿ ಒಡೆಯನ ಹಕ್ಕಿನ ಉಲ್ಲಂಘನೆಯಲ್ಲವೇ?

ಇದರ ಹಿಂದೆ ಇರುವುದು ಧಾರ್ಮಿಕ ಸಂಸ್ಥೆಗಳ ಆಡಳಿತದ ಸೆಕ್ಯುಲರೀಕರಣವಲ್ಲ. ಬದಲಿಗೆ ಮುಸ್ಲಿಮ್ ಧಾರ್ಮಿಕ ಸಂಸ್ಥೆಗಳ ಮೇಲೆ ಸಂಘಿ ಫ್ಯಾಶಿಸ್ಟರ ಆಕ್ರಮಣ ಆಷ್ಟೆ.

ಇದಲ್ಲದೆ 2025ರ ಕಾಯ್ದೆಯ ಸೆಕ್ಷನ್ 33 ಮುತವಲ್ಲಿಗಳ ನೇಮಾಕಾತಿಯ ಅರ್ಹತೆಯ ಬಗ್ಗೆ ವಿಧಿಸುವಾಗ ಭಯೋತ್ಪಾದನಾ ಕಾಯ್ದೆಯಡಿ ನಿರ್ಬಂಧಿತವಾಗಿರುವ ಸಂಘಟನೆಗಳ ಜೊತೆ ಸಂಪರ್ಕವಿರಬಾರದೆಂಬ ಅಂಶವನ್ನು ಸೇರಿಸಲಾಗಿದೆ. ಹಿಂದೂ ಸಂಸ್ಥೆಗಳ ಆಡಳಿತಾಧಿಕಾರಿಗಳ ನೇಮಕಾತಿಗಳಲ್ಲಿ ಇಲ್ಲದ ಕಲಮನ್ನು ಮುಸ್ಲಿಮ್ ಮುತವಲ್ಲಿಯ ನೇಮಕಾತಿಯ ಸಂದರ್ಭದಲ್ಲಿ ಸೇರಿಸುವುದರ ಹಿಂದೆ ಇರುವುದು ಮುಸ್ಲಿಮರ ಬಗ್ಗೆ ಹಿಂದುತ್ವವಾದಿ ಪೂರ್ವಗ್ರಹಗಳೇ ಹೊರತು ಬೇರೇನಲ್ಲ.

ವಕ್ಫ್‌ಗಳ ಸರಕಾರಿ ಆಕ್ರಮಣಕ್ಕೆ ಮಾನ್ಯತೆ

ಈ ಹೊಸ ಕಾಯ್ದೆಗಳ ಮೂಲ ಆಶಯವಿದ್ದದ್ದೇ ವಕ್ಫ್ ಆಸ್ತಿಗಳ ಸರಕಾರಿ ಹಾಗೂ ಖಾಸಗಿ ಅತಿಕ್ರಮಣವನ್ನು ಮಾನ್ಯಗೊಳಿಸುವುದು. ಅದಕ್ಕಾಗಿ ದಾಖಲೆಗಳಿಲ್ಲದ ಕಾಲದಿಂದಲೂ ಮೌಖಿಕ ಆದೇಶ ಮತ್ತು ಒಪ್ಪಿಗೆಯ ಮೇರೆಗೆ ಶತಮಾನಗಳಿಂದ ವಕ್ಫ್ ಆಗಿ ಬಳಕೆಯಾಗುತ್ತಿದ್ದ ದಾಖಲೆಗಳಿಲ್ಲದ ಬಳಕೆಯಿಂದ ವಕ್ಫ್ (ವಕ್ಫ್ ಬೈ ಯೂಸರ್) ಎಂದು ಮಾನ್ಯಗೊಂಡಿದ್ದ ವಕ್ಫ್‌ಗಳನ್ನು ಅಮಾನ್ಯಗೊಳಿಸಲು ಮೋದಿ ಸರಕಾರ ಬಯಸುತ್ತಿತ್ತು. ಅದರ ಬಗ್ಗೆ ತೀವ್ರ ಪ್ರತಿರೋಧ ಹುಟ್ಟಿದ್ದರಿಂದ ತಾತ್ಕಾಲಿಕವಾಗಿ ಅದನ್ನು ಹಿಂದೆಗೆದುಕೊಂಡಿದೆ. ಆದರೂ ಹೊಸ ಕಾಯ್ದೆ ಜಾರಿಗೆ ಬರುವ ಮುನ್ನ ಅವು ರಿಜಿಸ್ಟರ್ ಆಗದಿದ್ದರೆ ಮಾನ್ಯವಾಗದು.

ಹಾಗೆಯೇ ವಕ್ಫ್ ಆಸ್ತಿಗಳ ಅತಿ ದೊಡ್ಡ ಆಕ್ರಮಣಕೋರ ಸಂಸ್ಥೆ ಸರಕಾರವೇ. ಹೊಸ ಕಾಯ್ದೆಯ ಪ್ರಕಾರ ಸರಕಾರವು ಅತಿಕ್ರಮಣ ಮಾಡಿಕೊಂಡಿದ್ದರೆ ಮತ್ತು ಆಸ್ತಿಯು ವಿವಾದಿತವಾಗಿದ್ದರೆ ವಿವಾದ ಬಗೆಹರಿಯುವವರೆಗೆ ಅದನ್ನು ವಕ್ಫ್ ಎಂದು ಪರಿಗಣಿಸುವುದಿಲ್ಲ. ಅಷ್ಟು ಮಾತ್ರವಲ್ಲದೆ ಸರಕಾರ ಮತ್ತು ವಕ್ಫ್ ಆಸ್ತಿಗೆ ತಗಾದೆಯಿದ್ದರೆ ಅದನ್ನು ಬಗೆಹರಿಸುವುದು ಸರಕಾರವೇ ನಿಯೋಜಿಸುವ ಅಧಿಕಾರಿ. ಇದು ತನ್ನ ಕೇಸಿನಲ್ಲಿ ತಾನೇ ನ್ಯಾಯಾಧೀಶನಾಗಬಾರದೆಂಬ ಮೂಲ ನ್ಯಾಯ ನಿಯಮದ ಉಲ್ಲಂಘನೆಯಾಗಿದ್ದರೂ ಸರಕಾರ ಅದನ್ನು ಉಳಿಸಿಕೊಂಡಿದೆ.

ಹೆಚ್ಚಿನ ವಿವರಗಳಿಗೆ ವಕ್ಫ್ (ತಿದ್ದುಪಡಿ) ಕಾಯ್ದೆ-2025 ಅನ್ನು ಈ ವಿಳಾಸದಲ್ಲಿ ಓದಬಹುದು:

https://www.minorityaffairs.gov.in/WriteReadData/RTF1984/1743763149.pdf

ಈ ಕಾಯ್ದೆ ಜಾರಿಗೆ ತರಲು ಕಾರಣ ವಕ್ಫ್ ರಕ್ಷಣೆ, ಹಿಂದುಳಿದ ಮುಸ್ಲಿಮರ ಮಹಿಳೆಯರ ಪ್ರಾತಿನಿಧ್ಯ, ಪಾರದರ್ಶಕತೆ ಎಂಬಿತ್ಯಾದಿ ಉದಾತ್ತ ಧೇಯಗಳನ್ನು ಸರಕಾರ ಉಲ್ಲೇಖಿಸಿದೆ. ವಕ್ಫ್ ಆಸ್ತಿಗಳನ್ನು ಸಮುದಾಯದಿಂದ ಕಸಿದುಕೊಳ್ಳುವ, ವಕ್ಫ್ ನಿರ್ವಹಣೆಯಲ್ಲಿ ಮುಸ್ಲಿಮರನ್ನು ಮೈನಾರಿಟಿಗೊಳಿಸುವ, ಮುಸ್ಲಿಮರ ಬಗ್ಗೆ ಪೂರ್ವಗ್ರಹ ಹೆಚ್ಚಿಸುವ ಈ ಕಾಯ್ದೆ ಅದರ ಆಶಯಗಳಿಗೆ ತದ್ವಿರುದ್ಧವಾಗಿದೆ. ಸಂವಿಧಾನದ ಉಲ್ಲಂಘನೆಯಾಗಿದೆ. ಹಿಂದುತ್ವ ಫ್ಯಾಶಿಸಂನ ಕಾರ್ಯತಂತ್ರವಾಗಿದೆ.

ಇದು ಕೇವಲ ಮುಸ್ಲಿಮ್ ವಿರೋಧಿಯಲ್ಲ. ಇದು ಸಂವಿಧಾನ ವಿರೋಧಿ. ಎಲ್ಲಾ ಅಲ್ಪಸಂಖ್ಯಾತ ವಿರೋಧಿ. ಭಾರತದ ಜನತೆ ಒಟ್ಟುಗೂಡಿ ಈ ಫ್ಯಾಶಿಸ್ಟ್ ಕಾಯ್ದೆಯನ್ನು ಸೋಲಿಸಬೇಕು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಶಿವಸುಂದರ್

contributor

Similar News