ಸಿದ್ದು ಬಜೆಟ್=ಮೋದಿ ಬಜೆಟ್+ಗ್ಯಾರಂಟಿ?

ಬಡವರಿಗೆ ಭೂಮಿ, ರೈತರಿಗೆ ಲಾಭದಾಯಕ ಬೆಲೆ, ಸಣ್ಣ ಉದ್ಯಮಗಳಿಗೆ ರಕ್ಷಣೆ ಮತ್ತು ಮಾರುಕಟ್ಟೆ, ನಗರದ ಬಡವರಿಗೆ ಮೂಲ ಸೌಕರ್ಯ, ಉಚಿತ ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ಹಾಗೂ ಯುವಜನರಿಗೆ ಸುಭದ್ರ ಉದ್ಯೋಗ ಸೃಷ್ಟಿಸುವ ಆರ್ಥಿಕತೆಯನ್ನು ಸೃಷ್ಟಿಸದೆ, ಮೋದಿ ಸರಕಾರದಂತೆ ಲಾಭಕೋರ ಕಾರ್ಪೊರೇಟ್‌ಗಳಿಗೆ ಪರಭಾರೆ ಮಾಡುವ ನೀತಿಗಳನ್ನು ಅನುಸರಿಸುತ್ತ ಗ್ಯಾರಂಟಿಗಳಲ್ಲಿ ಮಾತ್ರ ಭಿನ್ನವಾಗಿರುವ ಕಾಂಗ್ರೆಸ್ ಸರಕಾರ ವಾಸ್ತವದಲ್ಲಿ ಜನರನ್ನು ಲಾಭಕೋರ, ಸುಲಿಗೆಕೋರ ಕಾರ್ಪೊರೇಟ್ ಆರ್ಥಿಕತೆಯ ಗುಲಾಮರನ್ನಾಗಿಸುತ್ತದೆಯೇ ವಿನಃ ಸಂವಿಧಾನದ ಆಶಯಗಳಂತೆ ಸ್ವತಂತ್ರ, ಸ್ವಾವಲಂಬಿ, ಸಬಲ ನಾಗರಿಕರನ್ನಾಗಿಸುವುದಿಲ್ಲ.;

Update: 2025-03-13 10:53 IST
Editor : Thouheed | Byline : ಶಿವಸುಂದರ್
ಸಿದ್ದು ಬಜೆಟ್=ಮೋದಿ ಬಜೆಟ್+ಗ್ಯಾರಂಟಿ?
  • whatsapp icon

ಭಾಗ- 2

ಈ ವರ್ಷವೂ ಸಿದ್ದು ಬಜೆಟ್ ಅಪಾರ ಉತ್ಪ್ರೇಕ್ಷಿತ ಆದಾಯವನ್ನು ಅಂದಾಜು ಮಾಡಿದೆ. ಉದಾಹರಣೆಗೆ ಹೋದವರ್ಷ ಸಿದ್ದು ಸರಕಾರ ರಾಜ್ಯದ ಸ್ವತಂತ್ರ ತೆರಿಗೆ ಸಂಪನ್ಮೂಲಗಳಿಂದ 2024-25ನೇ ಸಾಲಿನಲ್ಲಿ 2,63,178 ಕೋಟಿ ರೂ. ಬರಬಹುದೆಂದು ಅಂದಾಜಿಸಿತ್ತು. ಆದರೆ ಆ ಸಾಲಿನ ಪರಿಷ್ಕೃತ ಅಂದಾಜು ತಿಳಿಸುವಂತೆ ಸಂಗ್ರಹವಾದದ್ದು ಕೇವಲ 2,57,801 ರೂ. ಕೋಟಿ ಮಾತ್ರ. ಆದರೂ ಯಾವುದೇ ಹೊಸ ಕ್ರಮಗಳಾಗಲಿ, ಉತ್ಸಾಹದಾಯಕ ಆರ್ಥಿಕ ವಾತಾವರಣವಾಗಲೀ ಇಲ್ಲದಿದ್ದರೂ ಈ ವರ್ಷ 2,92,477 ಕೋಟಿ ರೂ.ಗಳು ಸಂಗ್ರಹವಾಗಬಹುದೆಂದು ಅಂದಾಜು ಮಾಡಿದೆ. ಅಂದರೆ ಶೇ. 13.5ರಷ್ಟು ಜಾಸ್ತಿ. ಹೋದವರ್ಷದ ವಾಸ್ತವಿಕ ಸಂಗ್ರಹಕ್ಕಿಂತ 35 ಸಾವಿರ ಕೋಟಿ ರೂ. ಹೆಚ್ಚು. ಆದ್ದರಿಂದಲೇ ಈ ವರ್ಷದ ಬಜೆಟ್ ವೆಚ್ಚವೂ ಹೋದವರ್ಷಕ್ಕಿಂತ 35 ಸಾವಿರ ಕೋಟಿ ರೂ. ಹೆಚ್ಚೆಂದು ತೋರಿಸಲಾಗಿದೆ. ಹೀಗಾಗಿ ಹೋದ ವರ್ಷದಂತೆ ಈ ವರ್ಷವೂ ವರ್ಷದ ಕೊನೆಗೆ ಕೊರತೆಯಾದಾಗ ಸಾಲ ಅಥವಾ ಅಷ್ಟು ಮುಖ್ಯವಾದ ವೆಚ್ಚವಲ್ಲವೆಂದು ಪರಿಗಣಿಸುವ ಹಾಗೂ ದಲಿತರಿಗೆ ಸೀಮಿತವಾದ ನಿಧಿಗಳಿಗೆ ಕನ್ನ ಬೀಳುತ್ತದೆ. ಈ ವರ್ಷದ ಬಜೆಟ್‌ನಲ್ಲಿ ಈಗಾಗಲೇ ಎಸ್‌ಸಿಎಸ್‌ಟಿ ಮತ್ತು ಟಿಎಸ್‌ಪಿ ನಿಧಿಯಿಂದ ಗ್ಯಾರಂಟಿಗಳಿಗೆ ರೂ. 13 ಸಾವಿರ ಕೋಟಿಯೆಂದು ನಿಗದಿ ಮಾಡಲಾಗಿದೆ.

ಕಾರ್ಪೊರೇಟ್ ಅಭಿವೃದ್ಧಿಯ ಗ್ಯಾರಂಟಿ ಬಜೆಟ್

ಈಗಾಗಲೇ ವಿವರಿಸಿದಂತೆ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಗಳಾದರೂ ಕಾಂಗ್ರೆಸ್ ಆರ್ಥಿಕ ನೀತಿಗಳ ಪ್ರಧಾನ ಒತ್ತು ಕಾರ್ಪೊರೇಟ್ ಬಂಡವಾಳಕ್ಕೆ ಪೂರಕ ಸನ್ನಿವೇಶ ನಿರ್ಮಿಸುವುದೇ ಆಗಿದೆ. ಹೀಗಾಗಿ ಗ್ಯಾರಂಟಿಯನ್ನು ಹೊರತು ಪಡಿಸಿದರೆ ಸಿದ್ದು ಬಜೆಟ್ ಯಾವ ರೀತಿಯಲ್ಲೂ ಮೋದಿ ಬಜೆಟ್‌ಗಿಂತ ಭಿನ್ನವಿಲ್ಲ. ವಾಸ್ತವವಾಗಿ ಹೋದ ವರ್ಷದ ಬಜೆಟ್‌ನಲ್ಲಿ ಬಿಜೆಪಿಯ ಮೋಹನ್ ದಾಸ್ ಪೈ-ಬೊಮ್ಮಾಯಿಯವರು ಜಂಟಿಯಾಗಿ ಕನಸು ಕಂಡಿದ್ದ ಒಂದು ಟ್ರಿಲಿಯನ್ ಡಾಲರ್ ಆರ್ಥಿಕತೆಯ ಕನಸನ್ನೇ ಸಿದ್ದರಾಮಯ್ಯನವರು ತಮ್ಮ ಕನಸನ್ನಾಗಿ ಬಿತ್ತಿದ್ದರು.

ಈ ವರ್ಷ ಅದರ ಭಾಗವಾಗಿ ಜಾಗತಿಕ ಹೂಡಿಕೆದಾರರ ಸಮ್ಮೇಳನವನ್ನು ಸಂಘಟಿಸಿ ಹೂಡಿಕೆದಾರರು ಕೋರಿದ್ದ ಎಲ್ಲ ಪ್ರೋತ್ಸಾಹಕಗಳನ್ನು ಘೋಷಿಸಿದ್ದಾರೆ. ಅದಕ್ಕೆ 14 ಸಾವಿರ ಕೋಟಿ ರೂ. ಎತ್ತಿಟ್ಟಿದ್ದಾರೆ. ಫಕ್ಸಾನ್ ಎಂಬ ಒಂದು ಕಂಪೆನಿಗೆ ಬಜೆಟ್‌ನಲ್ಲಿ 6,970 ಕೋಟಿ ರೂ. ಪ್ರೋತ್ಸಾಹಕ ಘೋಷಿಸಿದ್ದಾರೆ. ಅಲ್ಲದೆ ಕೃಷಿ, ಕೈಗಾರಿಕೆ ಎಲ್ಲದರಲ್ಲೂ ಮೋದಿ ಕನಸಿನ ಖಾಸಗಿ ಸಹಭಾಗಿತ್ವದ ಯೋಜನೆಗಳನ್ನೂ ಮತ್ತು ಶೇ. 90ರಷ್ಟಿರುವ ಕೃಷಿ ಕಾರ್ಮಿಕರಿಗೆ ಮತ್ತು ಸಣ್ಣ ರೈತರಿಗೆ ಯಾವ ಪ್ರಯೋಜನವೂ ಇಲ್ಲದ ಹಾಗೂ ಕೃಷಿ ಕ್ಷೇತ್ರದಲ್ಲಿರುವ ಕಾರ್ಪೊರೇಟ್ ಕಂಪೆನಿಗಳಿಗೆ ಮಾರುಕಟ್ಟೆ ಒದಗಿಸುವ ಕೃಷಿ ಯಾಂತ್ರೀಕರಣ ಯೋಜನೆಯನ್ನು ಪ್ರಕಟಿಸಲಾಗಿದೆ. ಭೂ ಹೀನರಿಗೆ ಭೂಮಿ ಕೊಡಲಾಗುವುದಿಲ್ಲವೆಂದು ಘೋಷಿಸಿ ಅವನ್ನು ವಿದೇಶಿ ಕಂಪೆನಿಗಳಿಗೆ ಪರಭಾರೆ ಮಾಡಲಾಗುತ್ತಿದೆ. ಶಿಕ್ಷಣ ಮತ್ತು ಆರೋಗ್ಯಗಳ ಅಭಿವೃದ್ಧಿಯನ್ನು ಕಾರ್ಪೊರೇಟ್ ದೈತ್ಯರಾದ ಜುಂಜುನ್‌ವಾಲರ ಅಗಸ್ತ್ಯ, ನಂದನ್ ನಿಲೇಕಣಿಯವರ ಏಕ್ ಸ್ಟೆಪ್, ಸತ್ಯ ಸಾಯಿ ಟ್ರಸ್ಟ್ ಇನ್ನಿತ್ಯಾದಿ ಎನ್‌ಜಿಒಗಳಿಗೆ ಹಾಗೂ ಎಡಿಬಿಯಂತಹ ಅಂತರ್‌ರಾಷ್ಟ್ರೀಯ ಬಂಡವಾಳಕೋರ ಏಜೆನ್ಸಿಗಳಿಗೆ ವಹಿಸಿಕೊಡಲಾಗುತ್ತಿದೆ.

ಗ್ಯಾರಂಟಿಯನ್ನು ಮುಂದುಮಾಡಿ ಮತ್ತು ಬಂಡವಾಳ ಹಾಗೂ ಸಂಪನ್ಮೂಲ ಕೊರತೆಯ ನೆಪವೊಡ್ಡಿ ಇವೆಲ್ಲವನ್ನು ಸಮರ್ಥಿಸಿಕೊಳ್ಳಲು ಸಿದ್ದು ಸರಕಾರ ಪ್ರಯತ್ನಿಸುತ್ತದೆ.

ಕಾರ್ಪೊರೇಟ್ ಕಡಲಲಿ ಗ್ಯಾರಂಟಿಯ ಹಾಯಿದೋಣಿ!

ಬಡವರಿಗೆ ಭೂಮಿ, ರೈತರಿಗೆ ಲಾಭದಾಯಕ ಬೆಲೆ, ಸಣ್ಣ ಉದ್ಯಮಗಳಿಗೆ ರಕ್ಷಣೆ ಮತ್ತು ಮಾರುಕಟ್ಟೆ, ನಗರದ ಬಡವರಿಗೆ ಮೂಲ ಸೌಕರ್ಯ, ಉಚಿತ ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ಹಾಗೂ ಯುವಜನರಿಗೆ ಸುಭದ್ರ ಉದ್ಯೋಗ ಸೃಷ್ಟಿಸುವ ಆರ್ಥಿಕತೆಯನ್ನು ಸೃಷ್ಟಿಸದೆ, ಮೋದಿ ಸರಕಾರದಂತೆ ಲಾಭಕೋರ ಕಾರ್ಪೊರೇಟ್‌ಗಳಿಗೆ ಪರಭಾರೆ ಮಾಡುವ ನೀತಿಗಳನ್ನು ಅನುಸರಿಸುತ್ತ ಗ್ಯಾರಂಟಿಗಳಲ್ಲಿ ಮಾತ್ರ ಭಿನ್ನವಾಗಿರುವ ಕಾಂಗ್ರೆಸ್ ಸರಕಾರ ವಾಸ್ತವದಲ್ಲಿ ಜನರನ್ನು ಲಾಭಕೋರ, ಸುಲಿಗೆಕೋರ ಕಾರ್ಪೊರೇಟ್ ಆರ್ಥಿಕತೆಯ ಗುಲಾಮರನ್ನಾಗಿಸುತ್ತದೆಯೇ ವಿನಃ ಸಂವಿಧಾನದ ಆಶಯಗಳಂತೆ ಸ್ವತಂತ್ರ, ಸ್ವಾವಲಂಬಿ, ಸಬಲ ನಾಗರಿಕರನ್ನಾಗಿಸುವುದಿಲ್ಲ.

ಆಗ ಗ್ಯಾರಂಟಿಗಳು ಕೂಡಾ ಅತ್ಯಗತ್ಯ ತಾತ್ಕಾಲಿಕ ಕಲ್ಯಾಣ ಕ್ರಮವಾಗುವುದರ ಬದಲು, ಕಾರ್ಪೊರೇಟ್ ಬಂಡವಾಳಶಾಹಿ ಆರ್ಥಿಕತೆಯ ಗುಲಾಮಿತನಕ್ಕೆ ಮಣಿಯುವಂತೆ ಮಾಡುವ ತಂತ್ರವಾಗುತ್ತದೆ. ಉದಾಹರಣೆಗೆ, ಸಿದ್ದು ಸರಕಾರ ಅನ್ನ ಭಾಗ್ಯ ಕೊಡುತ್ತಿದೆ. ಆದರೆ ಬಡವರನ್ನು ಸ್ವಾವಲಂಬಿ ಮಾಡುವ ಭೂಮಿಯನ್ನು ಕೊಡಲು ನಿರಾಕರಿಸುತ್ತಿದೆ.

ಬದಲಿಗೆ ಬಡವರ ಭೂಮಿಯನ್ನು ಮೋದಿ ಸರಕಾರದಂತೆ ಕಾರ್ಪೊರೇಟ್‌ಗಳಿಗೆ ಉದಾರವಾಗಿ ಬರೆದುಕೊಡುತ್ತಿದೆ. ಅರ್ಥಾತ್ ಅನ್ನ ಕೊಟ್ಟು ತಟ್ಟೆ ಕಸಿಯುತ್ತಿದೆ. ಒಂದೇ ವ್ಯತ್ಯಾಸ..ಬಿಜೆಪಿ ಸರಕಾರ ಅನ್ನವನ್ನೂ ಕೊಡುತ್ತಿರಲಿಲ್ಲ...

ಆದರೂ ಕಾಂಗ್ರೆಸನ್ನು ಟೀಕಿಸಿದರೆ ಬಿಜೆಪಿಗೆ ಸಹಾಯವಾಗಬಹುದು ಎಂದು ಅಂಜುವ ನೈಜ ಫ್ಯಾಶಿಸ್ಟ್ ವಿರೋಧಿಗಳು ಸಿದ್ದರಾಮಯ್ಯನವರನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಇವೆಲ್ಲಕ್ಕೂ ಮೋದಿ ಸರಕಾರ ಸೃಷ್ಟಿಸಿರುವ ಹಣಕಾಸು ಒತ್ತಡ ಹಾಗೂ ಸಂಪನ್ಮೂಲಗಳ ಕೊರತೆ ಕಾರಣವೆಂದೋ ಅಥವಾ ಆಡಳಿತಶಾಹಿ ಸಿದ್ದರಾಮಯ್ಯನವರನ್ನು ದಾರಿತಪ್ಪಿಸುತ್ತಿದೆಯೆಂದೋ ಸಮರ್ಥಿಸಿಕೊಳ್ಳಲು ಪ್ರಯತ್ನಿಸುತ್ತಾರೆ.

ಕಾರ್ಪೊರೇಟ್ ಹಿತಾಸಕ್ತಿಯೋ? ಸಂಪನ್ಮೂಲ ಮತ್ತು ವಿವೇಚನೆಗಳ ಕೊರತೆಯೋ?

ಆದರೆ ಈ ಅಸಹಾಯಕ ಆಶಾವಾದಿಗಳು ಮರೆಯುವುದೇನೆಂದರೆ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿದ್ದರೂ ಕಾಂಗ್ರೆಸ್ ಮೂಲತಃ ಒಂದು ಕಾರ್ಪೊರೇಟ್ ಬಂಡವಾಳಶಾಹಿ ಪಕ್ಷವೇ ವಿನಾ ಸಮಾಜವಾದಿ ಆಶಯದ ಪಕ್ಷವೇನಲ್ಲ. ಬಿಜೆಪಿಗಿಂತ ಭಿನ್ನವಾಗಿದ್ದರೂ ಹೆಚ್ಚೇನೂ ಮೂಲಭೂತ ವ್ಯತ್ಯಾಸವಿರುವ ಪಕ್ಷವಲ್ಲ. ಫ್ಯಾಶಿಸ್ಟರಲ್ಲದಿದ್ದರೂ ಫ್ಯಾಶಿಸ್ಟ್ ವಿರೋಧಿಗಳೇನಲ್ಲ. ಏಕೆಂದರೆ ಫ್ಯಾಶಿಸ್ಟರ ಮತ್ತು ಕಾಂಗ್ರೆಸಿನ ವರ್ಗ ಹಿತಾಸಕ್ತಿಗಳಲ್ಲಿ ಭಿನ್ನವಿಲ್ಲ.

ಉದಾಹರಣೆಗೆ:

-ಕಾಂಗ್ರೆಸ್ ಸರಕಾರ ಗ್ರೇಟರ್ ಬೆಂಗಳೂರು ಹೆಸರಲ್ಲಿ ಬೆಂಗಳೂರನ್ನು ಏಳು ಕಾರ್ಪೊರೇಷನ್‌ಗಳನ್ನಾಗಿ ವಿಭಜಿಸುತ್ತಿರುವುದರ ಹಿಂದೆ ಇರುವುದು ಸಂಪನ್ಮೂಲ ಕೊರತೆಯೋ? ಅಥವಾ ಬೊಮ್ಮನಹಳ್ಳಿ, ಮಹದೇವಪುರ ಗಳಂಥ ಐಟಿ ಅಮರಾವತಿಗಳನ್ನು ಸಾಮಾಜಿಕ ನ್ಯಾಯದ ಜವಾಬ್ದಾರಿಗಳಿಂದ ವಿಮುಕ್ತಗೊಳಿಸುವ ಕಾಂಗ್ರೆಸ್ ಸರಕಾರದ ಕಾರ್ಪೊರೇಟ್ ಪರ ವರ್ಗ ಹಿತಾಸಕ್ತಿಯೋ? ಇದಕ್ಕೂ ಮೋದಿಯವರ ನಗರಾಭಿವೃದ್ಧಿ ನೀತಿಗಳಿಗೂ ಏನು ವ್ಯತ್ಯಾಸ?

-ಇತ್ತೀಚೆಗೆೆ ವಿಧಾನಸಭೆಯಲ್ಲಿ ಡಿ-ಮಾರ್ಟ್, ಬಿಗ್ ಬಾಸ್ಕೆಟ್, ಅಮೆಝಾನ್ ಇನ್ನಿತ್ಯಾದಿ ಖಾಸಗಿ ವ್ಯಾಪಾರಿಗಳಿಗೆ ಅನುಕೂಲವಾಗುವಂತೆ ಮಾಡಿರುವ ಕಾರ್ಪೊರೇಟ್ ಪರ ಎಪಿಎಂಸಿ ತಿದ್ದುಪಡಿಯ ಹಿಂದಿರುವುದು ಸರಕಾರದ ಸಂಪನ್ಮೂಲ ಕೊರತೆಯ ಸಮಸ್ಯೆಯೋ? ಅಥವಾ ಮೋದಿ ಸರಕಾರ ಜಾರಿಗೆ ತರಲು ಹೊರಟಿದ್ದ ಎಪಿಎಂಸಿ ತಿದ್ದುಪಡಿಯಲ್ಲಿ ಇದ್ದಂಥ ಕಾರ್ಪೊರೇಟ್ ವರ್ಗಪರ ಹಿತಾಸಕ್ತಿಯೋ?

-ಬೆಂಗಳೂರಿನ ಅರ್ಧಕ್ಕೂ ಹೆಚ್ಚು ಜನರಿರುವ ಸ್ಲಮ್ ಹಾಗೂ ಕೆಳ ಮಧ್ಯಮ ವರ್ಗದವರಿಗೆ ಏನನ್ನೂ ಕೊಡದೆ ಕೇವಲ ಕಾರು ಒಡೆಯರಿಗೆ ಅನುಕೂಲವಾಗುವ ನಲವತ್ತು ಸಾವಿರ ಕೋಟಿ ರೂ. ವೆಚ್ಚದ ಟನಲ್ ರಸ್ತೆ ನಿರ್ಮಾಣ ಯೋಜನೆಯ ಹಿಂದಿರುವುದು ಮೋದಿ ಸರಕಾರದಂತೆ ಕಾರ್ಪೊರೇಟ್ ವರ್ಗ ಹಿತಾಸಕ್ತಿ ನೀತಿಗಳೋ? ಅಥವಾ ಅದೂ ಕೂಡ ಸಂಪನ್ಮೂಲ ನಿರ್ಬಂಧದ ಪರಿಣಾಮವೋ ?

-ಇತ್ತೀಚೆಗೆ ಸದನದಲ್ಲಿ ಬಗರ್ ಹುಕುಂ ರೈತರನ್ನು ನಮೂನೆ 53 ಮತ್ತು 57 ಅನ್ನು ವಿಲೇವಾರಿ ಮಾಡಿದ ನಂತರ ಎತ್ತಂಗಡಿ ಮಾಡಬಹುದು ಎಂದು ಹೇಳಿರುವ ಹಾಗೂ ಸರಕಾರದ ಒಡೆತನದಲ್ಲಿ 10 ಲಕ್ಷ ಎಕರೆ ಜಮೀನುಗಳಿದ್ದರೂ ಯಾವ ಕಾರಣಕ್ಕೂ ನಮೂನೆ 53 ಮತ್ತು 57 ರಲ್ಲಿ ಭೂಹೀನರಿಗೆ ಭೂಮಿ ಕೊಡಲಾಗದು ಎಂದು ಪದೇಪದೇ ಘೋಷಿಸುವ ಕಾಂಗ್ರೆಸ್ ಸರಕಾರದ ನಿಲುವು ಸಂಪನ್ಮೂಲದ ಕೊರತೆಯಿಂದ ಉದ್ಭವಿಸಿರುವುದೋ? ಅಥವಾ ಮೋದಿ ಸರಕಾರದಂತೆ ಕಾಂಗ್ರೆಸ್‌ನ ಉಳ್ಳವರ ಪರವಾದ ವರ್ಗ ಹಿತಾಸಕ್ತಿಯದ್ದೋ?

-ಲಕ್ಷಾಂತರ ಉದ್ಯೋಗ ಸೃಷ್ಟಿಸುವ ಕಿರು-ಸಣ್ಣ-ಮಧ್ಯಮ ಗಾತ್ರದ ಉದ್ಯಮಗಳಿಗೆ- ಎಂಎಸ್‌ಎಂಇಗಳಿಗೆ -ಬಜೆಟ್‌ನಲ್ಲಿ 100 ಕೋಟಿ ರೂ.ಯನ್ನು ಕೂಡ ಎತ್ತಿಡದೆ...ಸಾವಿರ ಸುಭದ್ರ ಉದ್ಯೋಗವನ್ನೂ ಕೂಡ ಸೃಷ್ಟಿಸದ ಕಾರ್ಮಿಕ ವಿರೋಧಿ, ಮಹಿಳಾ ವಿರೋಧಿ FOXON ಕಂಪೆನಿಯೊಂದಕ್ಕೆ 6,970 ಕೋಟಿ ನೀಡುತ್ತಿರುವ ಕಾಂಗ್ರೆಸ್ ಸರಕಾರಕ್ಕೆ ಇರುವುದು ಸಂಪನ್ಮೂಲ ಕೊರತೆಯೋ? ಅಥವಾ ಮೋದಿ ಸರಕಾರದಂತೆ ದೊಡ್ಡ ಕಾರ್ಪೊರೇಟ್ ಪರ ಪಕ್ಷಪಾತವೋ?

-ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಅಂಗನವಾಡಿ, ಬಿಸಿಯೂಟ ಅಡುಗೆ, ಆಶಾ ಕಾರ್ಯಕರ್ತರಿಗೆ 10-15 ಸಾವಿರ ರೂ. ಗೌರವ ಧನ ಕೊಡುವುದಾಗಿ ವಚನವಿತ್ತು ಈಗ ಕೇವಲ ಒಂದು ಸಾವಿರ ರೂ. ಹೆಚ್ಚಳ ಮಾಡಿ, ಮತ್ತೊಂದು ಕಡೆ ವಿದೇಶಿ ಹೂಡಿಕೆದಾರರ ಉತ್ತೇಜನಕ್ಕೆ ಬಜೆಟ್‌ನಲ್ಲಿ 14,000 ಕೋಟಿ ರೂ. ಎತ್ತಿಟ್ಟಿರುವ ಕಾಂಗ್ರೆಸ್ ಸರಕಾರಕ್ಕೆ ಇರುವುದು ಸಂಪನ್ಮೂಲ ಕೊರತೆಯೋ? ಅಥವಾ ಕಾರ್ಪೊರೇಟ್ ಬಂಡವಾಳಶಾಹಿ ಪಕ್ಷಪಾತವೋ?

-ಬಜೆಟ್‌ನಲ್ಲಿ ಎತ್ತಿಡಲಾಗಿರುವ ಎಸ್‌ಸಿಎಸ್‌ಪಿ-ಟಿಎಸ್‌ಪಿ ಹಣವನ್ನು ಕಳೆದ ಹತ್ತು ವರ್ಷಗಳಿಂದ ಮತ್ತು ಈ ಬಜೆಟ್‌ನಲ್ಲೂ ಉದ್ದೇಶಕ್ಕೆ ವ್ಯತಿರಿಕ್ತವಾಗಿ ದುರುಪಯೋಗ ಮತ್ತು ವರ್ಗಾವಣೆ ಮಾಡುತ್ತಿರುವ ಕಾಂಗ್ರೆಸ್‌ಗೆ ಇರುವುದು ಸಂಪನ್ಮೂಲ ಕೊರತೆಯೋ? ಅಥವಾ ಜಾತಿ ಮತ್ತು ವರ್ಗ ಪಕ್ಷಪಾತವೋ?

-ಶಿಕ್ಷಣದಲ್ಲಿ ಕೇಂದ್ರದ ಎನ್‌ಇಪಿ ನೀತಿಗಳಂತೆ ಹಿಂಬಾಗಿಲ ಪ್ರವೇಶ, ಕಾರ್ಪೊರೇಟ್ ಎನ್‌ಜಿಒ ಸಹಯೋಗ, ಸ್ಕಾಲರ್ ಶಿಪ್ ಕಡಿತ ಇತ್ಯಾದಿಗಳನ್ನು ಮೌನವಾಗಿ ನಕಲು ಮಾಡುತ್ತಿರುವ ಕಾಂಗ್ರೆಸ್ ಸರಕಾರದ ಕ್ರಮಗಳ ಹಿಂದೆ ಇರುವುದು ಸಂಪನ್ಮೂಲ ನಿರ್ಬಂಧವೋ? ಅಥವಾ ಮೂಲದಲ್ಲಿ ಕಾಂಗ್ರೆಸ್-ಬಿಜೆಪಿಗಳೆರಡಕ್ಕೂ ಸಮ್ಮತವಾಗಿರುವ ನವ ಉದಾರವಾದಿ ಶಿಕ್ಷಣ ನೀತಿಯೋ?

ಫ್ಯಾಶಿಸ್ಟ್ ವರ್ಗದ ಸೋಲು- ವರ್ಗ ಸಂಘರ್ಷದಿಂದಲೋ? ವರ್ಗ ಸಂಧಾನದಿಂದಲೋ?

ಹಾಗೆ ನೋಡಿದರೆ ದೊಡ್ಡ ಬಂಡವಾಳಶಾಹಿ ಕಾರ್ಪೊರೇಟ್ ಪಕ್ಷಪಾತವೇ ಸಮಕಾಲೀನ ಫ್ಯಾಶಿಸಂನ ಆರ್ಥಿಕ ಆಯಾಮವಲ್ಲವೇ? ಅದನ್ನು ಪೋಷಿಸುವ ಕಾಂಗ್ರೆಸ್ ನೀತಿಗಳು ಫ್ಯಾಶಿಸಂ ಅನ್ನು ಮುಖಾಮುಖಿಯಾಗುವ ಬದಲು ಪೋಷಿಸುವುದಿಲ್ಲವೇ? ಇಂದಿನ ಸಂದರ್ಭದಲ್ಲಿ ಬಿಜೆಪಿಯ ಅಪಾಯವನ್ನು ಮಣಿಸಲು ಕಾಂಗ್ರೆಸ್ ಅನಿವಾರ್ಯವೆಂಬ ಒಕ್ಕಣ್ಣ ನೋಟದಲ್ಲಿ ಅದರ ಕಾರ್ಪೊರೇಟ್ ಪಕ್ಷಪಾತಿ ಆರ್ಥಿಕ ನೀತಿಗಳನ್ನೂ ಕೂಡ ಗಾಂಧಾರಿ ಕುರುಡಿನಿಂದ ಸಮರ್ಥಿಸುತ್ತಾ ಹೋದರೆ ಕಾಂಗ್ರೆಸ್ ನೀತಿಗಳಿಂದ ಬಾಧಿತ ಮತ್ತು ವಂಚಿತ ಜನರಲ್ಲಿ ಪ್ರಾಮಾಣಿಕ ಪರ್ಯಾಯ ಶಕ್ತಿಗಳು ಅಮಾನ್ಯರಾಗಿ ಬಿಜೆಪಿಯನ್ನೇ ಗಟ್ಟಿಗೊಳಿಸುವಂತಾಗುವುದಿಲ್ಲವೇ?

ಕಾರ್ಪೊರೇಟ್ ಪರತೆಯು ಕಾಂಗ್ರೆಸ್‌ನ ವರ್ಗ ಹಿತಾಸಕ್ತಿಯಾಗಿರುವಾಗ ಅದರ ಜನದ್ರೋಹವನ್ನು ವಿವೇಚನೆಯ ಕೊರತೆ, ಜನಪರ ಪ್ರಗತಿಯ ಖಚಿತವಾದ ನೀಲನಕ್ಷೆಯನ್ನು ಮುಂದಿಟ್ಟು ಮನ ಒಲಿಸಲಾಗದ ಜನಸಂಘಟನೆಗಳ ಕೊರತೆ, ಸರಿಯಾದ ಸಮಾಲೋಚನೆಯ ಕೊರತೆಗಳೆಂದು ವಿಶ್ಲೇಷಿಸಬಹುದೇ?

ಪರಸ್ಪರ ವಿರುದ್ಧ ವರ್ಗ ಹಿತಾಸಕ್ತಿಯನ್ನು ಜನತೆ ವರ್ಗ ಸಂಘರ್ಷದಿಂದಲ್ಲದೇ ವರ್ಗ ಸಂಧಾನದಿಂದ ಎದುರಾಗಬಹುದೇ?

ಕಾರ್ಪೊರೇಟ್ ಪಕ್ಷಪಾತಿ ಆರ್ಥಿಕ ನೀತಿಗಳ ವಿರುದ್ಧ ಬೀದಿಯಲ್ಲಿ ಜನಸಂಗ್ರಾಮವನ್ನು ಕಟ್ಟದೆ ಕಾರ್ಪೊರೇಟ್ ವರ್ಗ ಹಿತಾಸಕ್ತಿಯುಳ್ಳ ಹಾಗೂ ಫ್ಯಾಶಿಸ್ಟರ ದಾಯಾದಿ ಸಂಬಂಧಿಯಾದ ಕಾಂಗ್ರೆಸ್‌ನ ಮೂಲಕ ಫ್ಯಾಶಿಸಂ ಅನ್ನು ಬಿಡಿ ಬಿಜೆಪಿಯನ್ನಾದರೂ ಚುನಾವಣೆಯಲ್ಲಿ ಸೋಲಿಸಬಹುದೇ?

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಶಿವಸುಂದರ್

contributor

Similar News