ಸಿದ್ದು ಬಜೆಟ್: ವಿಶ್ಲೇಷಣೆಯ ಮಿತಿಗಳು ಮತ್ತು ಸಲಹೆಗಳು

Update: 2025-03-05 10:49 IST
Editor : Thouheed | Byline : ಶಿವಸುಂದರ್
ಸಿದ್ದು ಬಜೆಟ್: ವಿಶ್ಲೇಷಣೆಯ ಮಿತಿಗಳು ಮತ್ತು ಸಲಹೆಗಳು
  • whatsapp icon

ಸಿದ್ದು ಬಜೆಟ್‌ನ ಬಗ್ಗೆ ಕಳೆದ ಎರಡು ವರ್ಷಗಳಿಂದ ಪ್ರತಿಪಕ್ಷ ಬಿಜೆಪಿ ಮಾಡುತ್ತಾ ಬಂದಿರುವ ದುಷ್ಟ ವಿರೋಧ ಮತ್ತು ಆಳುವ ಕಾಂಗ್ರೆಸ್‌ನ ವಂಚಕ ಸಮರ್ಥನೆ ಎರಡೂ ಅಪಾಯಗಳೇ ..

ಏಕೆಂದರೆ ಬಜೆಟ್ ಎಂದರೆ ಹೊಸ ಆರ್ಥಿಕ ನೀತಿಗಳ ಘೋಷಣೆಯಲ್ಲ. ಈಗಾಗಲೇ ನಿರ್ಧಾರಿತವಾದ ಆಳುವ ಪಕ್ಷದ ಆರ್ಥಿಕ ನೀತಿಯ ಚೌಕಟ್ಟಿನಲ್ಲಿ ಆಯಾ ವರ್ಷ ಮಾಡಲಿರುವ ಆದಾಯ-ವೆಚ್ಚಗಳ ಒಂದು ಅಂದಾಜು ಪಟ್ಟಿ ಅಷ್ಟೇ.

1991ರಲ್ಲಿ ಕಾಂಗ್ರೆಸ್‌ನ ನರಸಿಂಹ ರಾವ್- ಮನಮೋಹನ್ ಸಿಂಗ್ ನೇತೃತ್ವದಲ್ಲಿ ಆಗ ವಿರೋಧ ಪಕ್ಷವಾಗಿದ್ದ ಬಿಜೆಪಿಯ ಒಪ್ಪಿಗೆಯೊಂದಿಗೆ ಸಂವಿಧಾನದ ಆಶಯವಾದ ಕಲ್ಯಾಣ ರಾಜ್ಯದ ತತ್ವಗಳಿಗೆ ವಿರುದ್ಧವಾಗಿ ಕಾರ್ಪೊರೇಟ್ ಪರ ನವ ಉದಾರವಾದಿ ಆರ್ಥಿಕ ನೀತಿಗಳು ಜಾರಿಯಯಿತು.

2003 ರಲ್ಲಿ ವಾಜಪೇಯಿ ನೇತೃತ್ವದ ಬಿಜೆಪಿ ಸರಕಾರ ಅಂದಿನ ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್‌ನ ಒಪ್ಪಿಗೆಯೊಂದಿಗೆ Fiscal Responsibility And Budget Management Act (FRBM) (ವಿತ್ತೀಯ ಹೊಣೆಗಾರಿಕೆ ಮತ್ತು ಬಜೆಟ್ ನಿರ್ವಹಣೆ ಕಾಯ್ದೆ )ಯು ದೇಶಾದ್ಯಂತ ರಾಜ್ಯ ಸರಕಾರಗಳಿಗೆ ಮತ್ತು ಕೇಂದ್ರ ಸರ್ಕಾರಕ್ಕೆ ಕಡ್ಡಾಯ ಮಾಡಿತು.

ಇದರ ಪ್ರಕಾರ ಸರಕಾರ ಬಡಜನರಿಗೆ ಕೊಡುತ್ತಿರುವ ರಿಯಾಯಿಯಿ, ಸಬ್ಸಿಡಿ , ಕಲ್ಯಾಣ ವೆಚ್ಚಗಳನ್ನು ಕಡಿಮೆ ಮಾಡುವ ಮೂಲಕ ಹಾಗೂ ಅವುಗಳಿಗೆ ಶುಲ್ಕ ಮತ್ತು ದರವನ್ನು ವಿಧಿಸುವ ಮೂಲಕ ಸರಕಾರಿ ವೆಚ್ಚವನ್ನು ಕಡಿಮೆ ಮಾಡುತ್ತಾ ಸರಕಾರಿ ಆದಾಯವನ್ನು ಜಾಸ್ತಿ ಮಾಡಿಕೊಳ್ಳಬೇಕು. ಮತ್ತು ಸರ್ಕಾರ ತನ್ನ ವೆಚ್ಚವನ್ನು ಕಾರ್ಪೊಪರೇಟ್ ಆರ್ಥಿಕತೆಗೆ ಪೂರಕವಾಗಿ ಬಳಸಬೇಕು. ಇದೇ ಆರ್ಥಿಕ ನೀತಿಯನ್ನೇ ಎಲ್ಲಾ ಪಕ್ಷಗಳ ಸರಕಾರಗಳು ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಜಾರಿ ಮಾಡುತ್ತಿವೆ. ಹೀಗಾಗಿ ಆರ್ಥಿಕ ನೀತಿಗಳ ವಿಷಯಕ್ಕೆ ಬಂದರೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ವೇಗ ಮತ್ತು ಪ್ರಮಾಣದಲ್ಲಿ ವ್ಯತ್ಯಾಸವಿರಬಹುದೇ ವಿನಾ ದಿಕ್ಕು ಮತ್ತು ತತ್ವಗಳಲ್ಲಲ್ಲ.

ಇದರ ನಡುವೆಯೂ ಚುನಾವಣಾ ಅನಿವಾರ್ಯಗಳ ಕಾರಣಕ್ಕಾಗಿ ಸಿದ್ದು ಸರಕಾರ ಐದು ಗ್ಯಾರಂಟಿಗಳ ಭರವಸೆ ಕೊಟ್ಟು ಅಧಿಕಾರಕ್ಕೆ ಬಂದು ಕಳೆದ ಎರಡು ವರ್ಷಗಳಲ್ಲಿ ರಾಜ್ಯದ ಜನರ ಖಾತೆಗೆ 70,000 ಕೋಟಿ ಹಣ ವರ್ಗಾಯಿಸಿದೆ ಎಂದು ಹೇಳಿಕೊಳ್ಳುತ್ತಿದೆ. . ಕಾಂಗ್ರೆಸ್ ಬಿಜೆಪಿ ಸರಕಾರಗಳೇ ಅನುಸರಿಸುತ್ತ ಬಂದ ಆರ್ಥಿಕ ನೀತಿಗಳು ಬಡಜನರ ಬದುಕಿನಲ್ಲಿ ಅಗಾಧ ಬಿಕ್ಕಟ್ಟು ಸೃಷ್ಟಿಸಿರುವ ಕಾಲದಲ್ಲಿ ಗ್ಯಾರಂಟಿಗಳು ಬಡಜನರಿಗೆ ಉಸಿರನ್ನು ನೀಡಿದೆ.

ಹೀಗಾಗಿ ಗ್ಯಾರಂಟಿಗಳ ವಿರುದ್ಧ ವಿರೋಧಿಗಳ ದಾಳಿಯ ಹಿಂದಿರುವ ಬಡವರ ಬಗೆಗಿನ ಅಸಹನೆಯನ್ನು ವಿರೋಧಿಸುತ್ತಾ ಗ್ಯಾರಂಟಿಗಳನ್ನು ರಕ್ಷಿಸಿಕೊಳ್ಳಬೇಕು.

ಆದರೆ ಅದಕ್ಕೆ ಬೇಕಾದ ಸಂಪನ್ಮೂಲವನ್ನು ಸಿದ್ದು ಸರಕಾರ ಎಲ್ಲಿಂದ ದೊರಕಿಸಿಕೊಳ್ಳುತ್ತಿದೆ ಎಂಬುದನ್ನು ವಿಶ್ಲೇಷಿಸಬೇಕು. ಏಕೆಂದರೆ ಬಡವರಿಗೆ ವೆಚ್ಚ ಮಾಡಬೇಕಿರುವ ಅಧಿಕ ಹಣವನ್ನು ಉಳ್ಳವರಿಂದ ವಸೂಲಿ ಮಾಡಬೇಕೇ ವಿನಾ ಅದೇ ಬಡವರಿಂದಲ್ಲ.

ಆದರೆ ಕಳೆದೆರಡು ವರ್ಷಗಳಲ್ಲಿ ಸರಕಾರವೇ ಒಪ್ಪಿಕೊಂಡಂತೆ ಗ್ಯಾರಂಟಿಗಳಿಗೆ ಮಾಡಿರುವ ರೂ. 70,000ಕೋಟಿ ವೆಚ್ಚದಲ್ಲಿ 30,0000 ಕೋಟಿಯನ್ನು ಸವರ್ಣೀಯರ ಹಾಗೂ ದಲಿತರ ಬಡತನಕ್ಕಿರುವ ಅಂತರವನ್ನು ಕಡಿಮೆ ಮಾಡಲು ಮಾಡಬೇಕಾದ ವೆಚ್ಚಕ್ಕೆ ನಿಗದಿಯಾದ SCSP- TSP ಹಣವನ್ನು ಕಡಿತ ಮಾಡಿ ಬಳಸಿಕೊಂಡಿದೆ.

ಕೇಂದ್ರದಲ್ಲಿ ಬಿಜೆಪಿ ಸರಕಾರ SCSP- TSP ಮೊತ್ತದ ಕಡ್ಡಾಯ ವೆಚ್ಚಕ್ಕೆ ಸಿದ್ದು ಸರಕಾರ ತೆಗೆದುಕೊಂಡ ಕ್ರಮಗಳನ್ನೂ ಕೂಡ ತೆಗೆದುಕೊಂಡಿಲ್ಲ. ಆದರೂ ಈಗ ಗ್ಯಾರಂಟಿ ವೆಚ್ಚಕ್ಕೆ SCSP- TSP ಹಣ ವ್ಯಯವಾಗುತ್ತಿರುವ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿದೆ. ಆದ್ದರಿಂದ ಬಿಜೆಪಿಯ ದಲಿತ ಪರ ನಾಟಕಗಳ ಬಗ್ಗೆ ಯಾರೂ ಬಲಿ ಬೀಳಬಾರದು.

ಹಾಗೆಂದು SCSP- TSP ಹಣವನ್ನು ಕಾಂಗ್ರೆಸ್ ಸರಕಾರ ಗ್ಯಾರಂಟಗಾಗಿ ಬಳಸಿಕೊಳ್ಳುತ್ತಿರುವುದು ಮತ್ತು ಈ ಅನ್ಯಾಯವನ್ನು ಸಮರ್ಥಿಸಿಕೊಳ್ಳುತ್ತಿರುವುದನ್ನು ಕೂಡ ವಿರೋಧಿಸಲೇ ಬೇಕು.

ಹೀಗಾಗಿ ಈ ಬಜೆಟ್‌ನಲ್ಲೂ ಕಳೆದೆರಡು ವರ್ಷಗಳಿಂದ ಮಾಡುತ್ತಾ ಬಂದಂತೆ SCSP- TSP ಗಳಿಂದ ಹಣವನ್ನು ಕಿತ್ತು ಗ್ಯಾರಂಟಿ ಮುಂದುವರಿಸುವ ಕಾಂಗ್ರೆಸ್‌ನ ಕುತಂತ್ರದ ಬಗ್ಗೆ ಎಚ್ಚರ ವಹಿಸಬೇಕು.

ಕಲ್ಯಾಣ ರಾಜ್ಯವೆಂದರೆ (Welfare State ) ಇದ್ದವರಿಂದ ಕಿತ್ತು ಇಲ್ಲದವರಿಗೆ ಹಂಚುವುದೇ ವಿನಾ ಇಲ್ಲದವರ ಒಂದು ಜೇಬಿನಿಂದ ಕಿತ್ತು ಮತ್ತೊಂದು ಜೇಬಿಗೆ ಕೊಡುವುದಲ್ಲ.

ಗ್ಯಾರಂಟಿಗಳು ವರ್ತಮಾನದ ಬಿಕ್ಕಟ್ಟಿನಿಂದ ಬದುಕುಳಿಸುವ ತುರ್ತು ಚಿಕಿತ್ಸೆ. ಅದು ಇಂದಿನ ತುರ್ತು ಅಗತ್ಯ.

ಆದರೆ ಅದು ಶಾಶ್ವತ ಉಪಕ್ರಮವಲ್ಲ.

ಒಂದು ಸರಕಾರ ಗ್ಯಾರಂಟಿಗಳ ಅಗತ್ಯ ಬೀಳದಂತೆ ಜನರಿಗೆ ಆದಾಯವನ್ನು ತಂದುಕೊಡುವ ಆರ್ಥಿಕತೆಯನ್ನು ರೂಪಿಸಬೇಕು. ಅದು ಈ ನಾಡಿನ ಶೇ. 90 ರಷ್ಟು ಜನರು ಅವಲಂಬಿಸಿರುವ ಗ್ರಾಮೀಣ ಕೂಲಿ, ನಗರ ಕೂಲಿ ಕಾರ್ಮಿಕರು, ಸಣ್ಣ ಹಿಡುವಳಿ, ಸಣ್ಣ ಪುಟ್ಟ ವ್ಯಾಪಾರ , ಕಿರು ಹಾಗೂ ಸಣ್ಣ ಉದ್ಯಮಗಳನ್ನು ಲಾಭದಾಯಕ ಮಾಡುವ ಆರ್ಥಿಕ ನೀತಿಗಳನ್ನು ಅನುಸರಿಸುವುದರಿಂದ ಮಾತ್ರ ಸಾಧ್ಯ.

ಆದರೆ ಕಾರ್ಪೊರೇಟ್ ದೊಡ್ಡ ಬಂಡವಾಳಶಾಹಿಗಳ ಪರವಾದ ಆರ್ಥಿಕ ನೀತಿ ಈ ಎಲ್ಲಾ ಕ್ಷೇತ್ರಗಳಲ್ಲೂ ಕಾರ್ಪೊರೇಟ್ ಹಿಡಿತವನ್ನು ಹೆಚ್ಚು ಮಾಡಿ ಶೇ. 90 ರಷ್ಟು ಜನರ ಆರ್ಥಿಕತೆಯನ್ನು ಸೊರಗಿಸುತ್ತಿದೆ. ಸರಕಾರದ ಗ್ಯಾರಂಟಿಗಳನ್ನು ಅವಲಂಬಿಸುವಂತೆ ಮಾಡುತ್ತಿದೆ.

ಕಳೆದ ಎರಡು ವರ್ಷಗಳಲ್ಲೂ ಸಿದ್ದು ಸರಕಾರ ಒಂದು ಕೈಯಲ್ಲಿ ಗ್ಯಾರಂಟಿಯನ್ನು ಕೊಟ್ಟು ಮತ್ತೊಂದು ಕಡೆ ಮೋದಿ ಸರ್ಕಾರದ ಆ ಆರ್ಥಿಕ ನೀತಿಗಳನ್ನೇ ಅನುಸರಿಸುತ್ತಾ ಶೇ. 90 ರಷ್ಟು ಜನರ ಆರ್ಥಿಕತೆಯ ಮೇಲೆ ಕಾರ್ಪೊರೇಟ್ ದಾಳಿಗೆ ಅವಕಾಶ ಮಾಡಿಕೊಡುತ್ತಿದೆ ಎಂಬುದನ್ನು ಮರೆಯಬಾರದು.

ಆದ್ದರಿಂದಲೇ ಯಾವ್ಯಾವ ಇಲಾಖೆಗೆ ಎಷ್ಟು ವೆಚ್ಚ ಹೆಚ್ಚಿಸಿದ್ದಾರೆ ಎಂಬುದಕ್ಕೆ ಸೀಮಿತವಾಗುವ ಬಜೆಟ್ ವಿಶ್ಲೇಷಣೆ ಒಂದು ಸೋಮಾರಿ ವಿಶ್ಲೇಷಣೆ.

ಬದಲಿಗೆ ಒಟ್ಟಾರೆ ಮ್ಯಾಕ್ರೋ ಇಕಾನಾಮಿಯಲ್ಲಿ ಸರಕಾರ ಸಮಾಜದಲ್ಲಿ ಯಾರಿಂದ ಕಿತ್ತು ಯಾರಿಗೆ ಕೊಡುತ್ತಿದೆೇ ಎಂಬ ವಿಶ್ಲೇಷಣೆಯಿಂದ ಮಾತ್ರ ಬಜೆಟ್‌ನ ಅಸಲಿ ಸ್ವರೂಪ ಅರ್ಥವಾಗುತ್ತದೆ.

ಅದೇ ರೀತಿ ಪ್ರತೀ ಇಲಾಖೆಯಲ್ಲೂ ಶೇ.90 ಜನರ ಆರ್ಥಿಕತೆಯ ಪರವಾದ ಯೋಜನೆಗೆ ನೀಡಲಾಗುತ್ತಿದೆಯೋ ಅಥವಾ ಕೃಷಿ, ನೀರಾವರಿ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ, ಶಿಕ್ಷಣ , ಆರೋಗ್ಯ , ಸಮಾಜ ಕಲ್ಯಾಣಗಳ ಹೆಸರಿನಲ್ಲಿ ಪ್ರತೀ ಇಲಾಖೆಯಲ್ಲೂ ದೊಡ್ಡ ಬಂಡವಾಳಿಗರ ಹಿಡಿತ ಹೆಚ್ಚಿಸುವಂತೆ ರೂಪಿಸಲಾಗುತ್ತಿದೆಯೋ ಎಂಬುದು ಸರಿಯಾದ ಜನಪರ ವಿಶ್ಲೇಷಣೆ. ಕಳೆದ ಎರಡು ವರ್ಷಗಳ ಸಿದ್ದು ಬಜೆಟ್ ಪ್ರತೀ ಇಲಾಖೆಯಲ್ಲೂ ಕಾರ್ಪೊರೇಟ್ ಬಂಡವಾಳ ಹಿಡಿತ ಹೆಚ್ಚಿಸುವ ಮೋದಿ ನೀತಿಗಳನ್ನೇ ಅನುಸರಿಸಿದೆೆ.

ಬಜೆಟ್ ಎಂದರೆ ಸರಕಾರಕ್ಕೆ ಬರಬಹುದಾದ ಆದಾಯದ ಮತ್ತು ಮಾಡಬಹುದಾದ ವೆಚ್ಚದ ಅಂದಾಜು ಅಷ್ಟೇ. ಅದರ ವಾಸ್ತವಿಕ ಲೆಕ್ಕ ಮುಂದಿನ ವರ್ಷದ ACTUALSನಲ್ಲಿ ಒಂದಷ್ಟು ಮತ್ತು ಅದರ ನಂತರದ ವರ್ಷ ಮಂಡಿಸುವ ಈ ವರ್ಷದ ACTUALS ನಲ್ಲಿ ಸಿಗುತ್ತದೆ.

ಈ ವರ್ಷದ ಬಜೆಟ್‌ನ ಅಂದಾಜಿಗೂ ಎರಡು ವರ್ಷಗಳ ನಂತರ ಸಿಗುವ ಈ ವರ್ಷದ ACTUALS ಕನಿಷ್ಠ ಶೇ. 20-25 ರಷ್ಟು ವ್ಯತ್ಯಾಸವಿರುತ್ತದೆ. ಅಂದರೆ ಬಜೆಟ್‌ನಲ್ಲಿ ಘೋಷಿತವಾಗುವುದರಲ್ಲಿ ಶೇ. 25 ರಷ್ಟು ಆದಾಯ ಸಂಗ್ರಹವಾಗುವುದೇ ಇಲ್ಲ.

ಹೀಗಾಗಿ ವೆಚ್ಚದಲ್ಲೂ ಅಷ್ಟು ಕಡಿಮೆಯಾಗಲೇ ಬೇಕು. ಕಡಿಮೆಯಾಗುತ್ತದೆ.

ಆದರೆ ಸಿದ್ದು ಸರಕಾರವೂ ಕೂಡ ಕೇಂದ್ರದ ಮೋದಿ ಸರಕಾರದಂತೆ ಆದಾಯ ಕಡಿಮೆಯಾದರೂ ಕಾರ್ಪೊರೇಟ್ ಆರ್ಥಿಕತೆಗೆ ಪೂರಕವಾದ ವೆಚ್ಚಗಳನ್ನೇನೂ ಕಡಿಮೆ ಮಾಡುವುದಿಲ್ಲ. ಹೀಗಾಗಿ ವೆಚ್ಚ ಕಡಿಮೆಯಾಗುವುದು ಬಡಜನರ ಆರ್ಥಿಕತೆಗೆ ಸಂಬಂಧಪಟ್ಟ ಬಾಬತ್ತುಗಳಲ್ಲಿ ಮಾತ್ರ.

ಆದ್ದರಿಂದ ಬಜೆಟ್ ವಿಶ್ಲೇಷಣೆ ಮಾಡುವಾಗ ಸರಕಾರ ಮಾಡಿರುವ ಆರ್ಥಿಕ ಪ್ರಗತಿಯ ಅಂದಾಜು ವಾಸ್ತವಿಕವಾಗಿದೆಯೇ ಎಂಬುದನ್ನು ಮೊದಲು ಪರಿಶೀಲಿಸಬೇಕು.

ಸರಕಾರ ತನ್ನ ಆದಾಯದ ಅಂದಾಜನ್ನು ರಾಜ್ಯದಲ್ಲಿ ಆರ್ಥಿಕ ಪ್ರಗತಿ ಯಾವ ಪ್ರಮಾಣದಲ್ಲಿ ಆಗಬಹುದು ಎಂಬ ಅಂದಾಜಿನ ಮೇಲೆ ಮಾಡುತ್ತದೆ. ಅದರ ಮೇಲೆ ರಾಜ್ಯದ , ರಾಷ್ಟ್ರದ , ಅಂತರ್‌ರಾಷ್ಟ್ರೀಯ ಆರ್ಥಿಕತೆಯ ಪರಿಸ್ಥಿತಿಯ ಪರಿಣಾಮಗಳು ಇರುತ್ತವೆ. ಹೀಗಾಗಿ ಸರ್ಕಾರ ಅದನ್ನು ವಾಸ್ತವಿಕವಾಗಿ ಗಣನೆಗೆ ತೆಗೆದುಕೊಂಡಿದೆಯೇ ಎಂಬುದನ್ನು ಮೊದಲು ಪರಿಶೀಲಿಸಬೇಕು. ಕಳೆದೆರಡು ವರ್ಷಗಳಲ್ಲಿ ಸಿದ್ದು ಸರಕಾರ ರಾಷ್ಟ್ರೀಯ ಅಂತರ್‌ರಾಷ್ಟ್ರೀಯ ಪರಿಸ್ಥಿತಿಗಳ ವಿಶ್ಲೇಷಣೆಯಲ್ಲಿ ತೋರಿದಷ್ಟು ವಾಸ್ತವಿಕತೆಯನ್ನು ರಾಜ್ಯದ ಆರ್ಥಿಕ ಪ್ರಗತಿಯ ವಿಶ್ಲೇಷಣೆಯಲ್ಲಿ ತೋರಿರಲಿಲ್ಲ. ಹೀಗಾಗಿ ಆದಾಯದಲ್ಲಿ ಮತ್ತು ವೆಚ್ಚದಲ್ಲಿ ಶೇ. 15-30 ರಷ್ಟು ಉತ್ಪ್ರೇಕ್ಷೆಗಳನ್ನು ಮಾಡಿತ್ತು.

ಇದಲ್ಲದೆ ಕರ್ನಾಟಕ ಸರಕಾರದ ತೆರಿಗೆ ಆದಾಯಗಳ ಶೇ. 10-15 ಭಾಗ ಕೇಂದ್ರದಲ್ಲಿ ನಮಗಿರುವ ತೆರಿಗೆ ಪಾಲಿನಿಂದ ಬರಬೇಕು. ಅದರಲ್ಲಿ ಕರ್ನಾಟಕಕ್ಕೆ ಮೋಸವಾಗುತ್ತಲೇ ಇದೆ. ಮುಂದಿನ ವರ್ಷ ಅದು ಇನ್ನೂ ಕಡಿಮೆಯಾಗುತ್ತದೆ. ಕೇಂದ್ರವು ಮಾಡುತ್ತಿರುವ ವಂಚನೆಯನ್ನು ಖಂಡಿತಾ ವಿರೋಧಿಸಿ ನಮ್ಮ ಹಕ್ಕಿನ ಪಾಲನ್ನು ಪಡೆದುಕೊಳ್ಳಬೇಕು.

ಆದರೆ ಸಿದ್ದು ಸರಕಾರ ರಾಜ್ಯದ ತೆರಿಗೆ ಆದಾಯದ ಶೇ. 10 ರಷ್ಟು ಸಂಗ್ರಹದಲ್ಲಿ ಆಗುತ್ತಿರುವ ವಂಚನೆಯೇ ರಾಜ್ಯದ ಎಲ್ಲಾ ಆರ್ಥಿಕ ಸಮಸ್ಯೆಗಳಿಗೂ ಕಾರಣ ಎಂದು ದೂಷಿಸಿ ತನ್ನ ಕಾರ್ಪೊರೇಟ್ ಬಂಡವಾಳಶಾಹಿ ಪರ ಆರ್ಥಿಕ ನೀತಿಗಳನ್ನು ಮುಚ್ಚಿಟ್ಟುಕೊಂಡು ಬಂದಿದೆ ಎಂಬುದನ್ನು ಮಾರ್ಚ್ 7 ರಂದು ಮಂಡಿಸಲಿರುವ ಬಜೆಟ್‌ನ್ನು ವಿಶ್ಲೇಷಣೆ ಮಾಡುವಾಗ ಮರೆಯಬಾರದು.

ಅಂತಿಮವಾಗಿ , ಬಜೆಟ್ ಯಾರಿಂದ ಕಿತ್ತು ಯಾರಿಗೆ ಕೊಡುತ್ತಾರೆ ಎಂಬ ವರ್ಗ ಪಕ್ಷಪಾತದ ಭಾಗ. ಇತ್ತೀಚಿನ GLOBAL INVESTORS MEET (GIM) ಮತ್ತು ಆನಂತರ ಸರ್ಕಾರ ಪ್ರಕಟಿಸಿರುವ ಕೈಗಾರಿಕಾ ನೀತಿ, ಡಿಕೆಶಿಯವರ ನಗರಾಭಿವೃದ್ಧಿ ನೀತಿ, ಸಿದ್ದು ಅವರ ಗ್ಯಾರಂಟಿಯನ್ನು ಹೊರತುಪಡಿಸಿದ ಕೃಷಿ ನೀತಿ , ಸಾಮಾಜಿಕ ನ್ಯಾಯ ನೀತಿಗಳೆಲ್ಲವೂ ಕಾರ್ಪೊರೇಟ್ ಆರ್ಥಿಕತೆಯನ್ನೇ ಚಾಲಕ ಸ್ಥಾನದಲ್ಲಿಟ್ಟುಕೊಂಡು ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗುವ ಮೋದಿ ಕನಸನ್ನೇ, ಬೊಮ್ಮಾಯಿ- ಮೋಹನ್ ದಾಸ್ ಪೈ ಕನಸನ್ನೇ ಕಾಣುತ್ತಿದೆ.

ಆದ್ದರಿಂದ ಕಾರ್ಪೊರೇಟುಗಳಿಗೆ ಉಳ್ಳವರಿಗೆ ರಿಯಾಯಿತಿಗಳನ್ನು ,

ವಿನಾಯಿತಿಗಳನ್ನು ಮತ್ತು ನಾಡಿನ ಜನರಿಗೆ ದಕ್ಕಬೇಕಾದ ಸಂಪನ್ಮೂಲಗಳನ್ನು ಕಿತ್ತು ಕೊಡಲಾಗುತ್ತಿದೆ. ಹೀಗಾಗಿ ಸರಕಾರಕ್ಕೆ ತೆರಿಗೆ ಆದಾಯವೂ ಕೂಡ ಉಳ್ಳವರಿಂದಲ್ಲದೆ. ಶೇ. 90 ರಷ್ಟು ಬಡವರನ್ನು ಹೆಚ್ಚಿಗೆ ಸುಲಿಯುವುದರಿಂದಲೇ ಬರುತ್ತಿದೆ.

ಹೀಗಾಗಿ ಬಜೆಟ್ಟನ್ನು ವಿಶ್ಲೇಷಿಸುವಾಗ ಯಾವುದಕ್ಕ್ಕೆ ಎಷ್ಟು ವೆಚ್ಚ ಎಂಬುದಕ್ಕಿಂತ ಎಲ್ಲಿಂದ ತೆರಿಗೆ ವಸೂಲಿಯಾಗುತ್ತಿದೆ, ಅರ್ಥಾತ್ ಯಾರಿಂದ ಕಿತ್ತು ಯಾರಿಗೆ ಕೊಡಲಾಗುತ್ತಿದೆ ಎಂಬ ವಿಶ್ಲೇಷಣೆ ಮಾಡದಿದ್ದರೆ ಸಿದ್ದು ಸರಕಾರದ ಅಥವಾ ಮೋದಿ ಸರಕಾರದ ಅಸಲಿ ರೂಪ ಗೊತ್ತಾಗುವುದೇ ಇಲ್ಲ.

ಸಿದ್ದು ಸರಕಾರದ ಬಜೆಟ್ = ಮೋದಿ ಸರಕಾರದ ಬಜೆಟ್ + ಗ್ಯಾರಂಟಿ

ಎಂದು ಮಾತ್ರ ಆದರೆ ಮತ್ತು ಅದನ್ನೇ ಹಿರಿಮೆ ಎಂದು ಕೊಂಡರೆ ಸಿದ್ದು ಸರಕಾರ ಗ್ಯಾರಂಟಿಯ ಬಟ್ಟಲಲ್ಲಿ ಕೊಡುತ್ತಿರುವ ನಿಧಾನ ವಿಷವನ್ನು ಅಮೃತವೆಂದು ಕುಡಿಯುತ್ತಿದ್ದೇವೆ ಎಂದು ಅರ್ಥ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಶಿವಸುಂದರ್

contributor

Similar News