ಸಂಘಿಗಳ ಬಾಯಲ್ಲಿ ಸಂವಿಧಾನ

ಕಳೆದ ಮೂವತ್ತು ವರ್ಷಗಳಲ್ಲಿ ಆರೆಸ್ಸೆಸ್, ಬಿಜೆಪಿಗಳ ಧರ್ಮಾ ಧಾರಿತ, ಸಂವಿಧಾನ ಬಾಹಿರ ‘ಹಿಂದೂ ರಾಷ್ಟ್ರ’ ರಾಜಕಾರಣವು ಮುಸ್ಲಿಮರ ಪ್ರಾತಿನಿಧ್ಯ, ಅವಕಾಶ, ಪ್ರಗತಿಗಳೆಲ್ಲದರ ಮೇಲೆ ದಾಳಿ ಮಾಡುತ್ತಿದೆ. ಆದ್ದರಿಂದ, ಈ ದೇಶದ ಐಕ್ಯತೆ ಮತ್ತು ಸಮಗ್ರತೆ ಉಳಿಯಬೇಕೆಂದರೆ ಒಂದೋ ಆರೆಸ್ಸೆಸ್, ಬಿಜೆಪಿಗಳ ಕೋಮುವಾದಿ ಫ್ಯಾಶಿಸ್ಟ್ ರಾಜಕಾರಣವಾದರೂ ನಿಷೆೇಧವಾಗಬೇಕು ಅಥವಾ ಅದರಿಂದ ಬಾಧಿತರಾದ ಧಾರ್ಮಿಕ ಸಮುದಾಯಗಳಿಗೆ ಧರ್ಮಾಧಾರಿತವಾದ ಪರಿಹಾರವನ್ನಾದರೂ ಒದಗಿಸಬೇಕು ಎಂಬ ಪರಿಸ್ಥಿತಿ ಎದುರಾಗುತ್ತಿರುವುದಂತೂ ನಿಜ. ಅಲ್ಲವೇ?;

Update: 2025-03-26 09:52 IST
Editor : Thouheed | Byline : ಶಿವಸುಂದರ್
ಸಂಘಿಗಳ ಬಾಯಲ್ಲಿ ಸಂವಿಧಾನ
  • whatsapp icon

ಭೂತದ ಬಾಯಲ್ಲಿ ಭಗವದ್ಗೀತೆ ಎಂಬ ವಿರೋಧಾಭಾಸದಂತೆ ಸಂಘಿಗಳು ಕೂಡಾ ಇತ್ತೀಚೆಗೆ ಸಂವಿಧಾನ ಪಠಣ ಪ್ರಾರಂಭಿಸಿದ್ದಾರೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಂಘಿಗಳ ಗುರುಪೀಠವಾದ ಆರೆಸ್ಸೆಸ್‌ನ ಅಖಿಲ ಭಾರತ ಪ್ರತಿನಿಧಿ ಸಭೆಯು ಮುಸ್ಲಿಮರಿಗೆ ನೀಡುತ್ತಿರುವ ಮೀಸಲಾತಿಯು ಧರ್ಮಾಧಾರಿತವಾದ ಮೀಸಲಾತಿಯಾಗಿದ್ದು ಸಂವಿಧಾನ ಬಾಹಿರವೆಂದು ತೀರ್ಮಾನ ಮಾಡಿದೆ.

ಇದರ ಜೊತೆಗೆ ಮುಸ್ಲಿಮ್ ಮೀಸಲಾತಿಯ ಬಗ್ಗೆ ಟೀವಿ ಕಾರ್ಯಕ್ರಮ ಒಂದರಲ್ಲಿ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸ್ವಲ್ಪ ಉಡಾಫೆಯಿಂದ ಕೊಟ್ಟ ಉತ್ತರವನ್ನು ತಪ್ಪು ವ್ಯಾಖ್ಯಾನ ಮಾಡುತ್ತಾ ಮುಸ್ಲಿಮರಿಗೆ ಮೀಸಲಾತಿ ನೀಡಲು ಕಾಂಗ್ರೆಸ್ ಸಂವಿಧಾನವನ್ನು ಬದಲಿಸಲು ಹೊರಟಿದೆ ಎಂದು ಸಂಘಪರಿವಾರ ದುರುದ್ದೇಶದ ಹುಯಿಲು ಎಬ್ಬಿಸಿದೆ.

ಸಂಘಪರಿವಾರ ಮತ್ತದರ ಬಿಜೆಪಿ ಸರಕಾರಗಳು ಮುಸ್ಲಿಮರ ಅಸ್ತಿತ್ವ ಹಾಗೂ ಅಸ್ಮಿತೆಯನ್ನೇ ನಾಶ ಮಾಡಲು ಹಲವಾರು ಅಮಾನವೀಯ ಹಾಗೂ ಬರ್ಬರ ರಾಜಕೀಯ ಮತ್ತು ಸಾಮಾಜಿಕ ದಾಳಿಗಳನ್ನು ನಡೆಸುತ್ತಿವೆ. ಅವೆಲ್ಲವೂ ಸಂವಿಧಾನ ವಿರೋಧಿ ಕೃತ್ಯಗಳೇ ಆಗಿವೆ. ಆದರೆ ಅದೇ ಸಂಘಿಗಳ ಕುಲೋತ್ತಮರು ಇದೀಗ ಅದೇ ಸಂವಿಧಾನವನ್ನು ತಮ್ಮ ಕೋಮುವಾದಿ ಅಜೆಂಡಾಗಳಿಗೆ ಪೂರಕವಾಗಿ ವ್ಯಾಖ್ಯಾನಿಸುತ್ತಿರುವುದು ಭಯಾನಕ ಆದರೆ ಅಸಂಗತ ನಾಟಕದ ಅಂಕದಂತೆ ಕಂಡರೂ ಇವು ಸಂವಿಧಾನವನ್ನು ಒಳಗಿನಿಂದಲೇ ಕೇಸರೀಕರಿಸುವ ಮತ್ತೊಂದು ಅಜೆಂಡಾ ಎನ್ನುವುದಕ್ಕೆ ಹೊಸ ಸಾಕ್ಷಿಗಳೇನು ಬೇಕಿಲ್ಲ.

ಮುಸ್ಲಿಮ್ ಮೀಸಲಾತಿ ಮತ್ತು ಸಂವಿಧಾನದ ಆರ್ಟಿಕಲ್ 15 (4)ಮತ್ತು 16 (4)

ಇಂದು ಕರ್ನಾಟಕ ಸರಕಾರವನ್ನೂ ಒಳಗೊಂಡಂತೆ, ಕೇರಳ, ತಮಿಳುನಾಡು, ತೆಲಂಗಾಣ, ಬಿಹಾರ ಹಾಗೂ ಇನ್ನಿತರ ಹಲವಾರು ರಾಜ್ಯಗಳಲ್ಲಿ ಮುಸ್ಲಿಮರಿಗೆ ಕೊಡುತ್ತಿರುವ ಮೀಸಲಾತಿ ಹಾಗೂ ಕೇಂದ್ರ ಸರಕಾರವೂ ತನ್ನ ಉದ್ಯೋಗಗಳಲ್ಲಿ ಕರ್ನಾಟಕವೂ ಒಳಗೊಂಡಂತೆ ಹಲವು ರಾಜ್ಯಗಳಲ್ಲಿ ಬಹುಪಾಲು ಮುಸ್ಲಿಮ್ ಸಮುದಾಯವನ್ನು ಒಳಗೊಳ್ಳುವ ಮೀಸಲಾತಿಯನ್ನು ಕೊಡುತ್ತಿರುವುದು ಧರ್ಮಾಧಾರಿತವೂ ಅಲ್ಲ. ಸಂವಿಧಾನ ಬಾಹಿರವೂ ಅಲ್ಲ. ಅದು ಅತ್ಯಂತ ಸಂವಿಧಾನ ಬದ್ಧ.

ಏಕೆಂದರೆ ಸಂವಿಧಾನದ ಆರ್ಟಿಕಲ್ 15 (4) ಮತ್ತು 16 (4)ರ ಪ್ರಕಾರ ಪ್ರಭುತ್ವವು ಸಮಾಜದಲ್ಲಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ‘ವರ್ಗ’ಗಳನ್ನು ವೈಜ್ಞಾನಿಕವಾಗಿ ಪತ್ತೆ ಹಚ್ಚಿ ಅವರ ಏಳಿಗೆಗೆ ಮೀಸಲಾತಿಯನ್ನೂ ಒಳಗೊಂಡಂತೆ ಇತರ ಪೂರಕ ಕ್ರಮಗಳನ್ನು ಕೈಗೊಳ್ಳಬೇಕು. ಕಾಲಕಾಲಕ್ಕೆ ಸರಕಾರಗಳು ಸಮಾಜದಲ್ಲಿ ಈ ಬಗೆಯ ಹಿಂದುಳಿದಿರುವಿಕೆಗೆ ಬಲಿಯಾಗಿರುವ ಯಾವುದೇ ವರ್ಗಗಳು, ಅವರು ಯಾವುದೇ ಧರ್ಮ, ಸಮುದಾಯ, ಜಾತಿಗಳಿಗೆ ಸೇರಿದ್ದರೂ, ಪತ್ತೆ ಹಚ್ಚಿ ಅವರ ಸಾಮಾಜಿಕ ಉನ್ನತಿಗಾಗಿ ಮೀಸಲಾತಿಯನ್ನೂ ಒಳಗೊಂಡಂತೆ ವಿಶೇಷ ಅವಕಾಶಗಳನ್ನು ಕಲ್ಪಿಸಬೇಕು. ಸಂವಿಧಾನಕ್ಕೆ ಅನುಗುಣವಾಗಿ ನಡೆದುಕೊಳ್ಳುವ ಯಾವುದೇ ಸರಕಾರ ಈ ಕಾರಣಗಳಿಗಾಗಿ ಮುಸ್ಲಿಮರಿಗೆ ಮೀಸಲಾತಿಯನ್ನು ಕಲ್ಪಿಸಲೇ ಬೇಕು. ಅದಕ್ಕೆ ಧರ್ಮದ ಅಡ್ಡಗೋಡೆಯಿಲ್ಲ.

ಮುಸ್ಲಿಮರು ಹಿಂದುಳಿದ ವರ್ಗಗಳ ಭಾಗ- ಸಾಂವಿಧಾನಿಕ ಕೋರ್ಟುಗಳ ಆದೇಶ

ಮೊದಲನೆಯದಾಗಿ ಮುಸ್ಲಿಮರನ್ನು ಇಡೀ ಸಮುದಾಯವಾಗಿ ಹಿಂದುಳಿದಿದೆ ಎಂದು ಪರಿಗಣಿಸಿ ಕರ್ನಾಟಕದಲ್ಲಿ ಮಾತ್ರವಲ್ಲದೆ ಕೇರಳ, ತಮಿಳುನಾಡು ಹಾಗೂ ಬಿಹಾರಗಳಲ್ಲಿ ಕೂಡ ಈಗಲೂ Other Backward Classes-ಇತರ ಹಿಂದುಳಿದ ವರ್ಗಗಳ ಭಾಗವಾಗಿ ಮೀಸಲಾತಿಯನ್ನು ಕಲ್ಪಿಸಲಾಗಿದೆ. ಕೇಂದ್ರ ಸರಕಾರದ ಒಬಿಸಿ ಪಟ್ಟಿಯಲ್ಲೂ ಈಗ 20 ರಾಜ್ಯಗಳ ವಿವಿಧ ಮುಸ್ಲಿಮ್ ಸಮುದಾಯಗಳು ಮೀಸಲಾತಿಯನ್ನು ಪಡೆದುಕೊಳ್ಳುತ್ತಿವೆ. 2013ರಲ್ಲಿ ಕರ್ನಾಟಕದ ಬಿಜೆಪಿಯ ಸದಾನಂದ ಗೌಡ ಸರಕಾರವು ಮುಸ್ಲಿಮರ ಒಂಭತ್ತು ಉಪ ಪಂಗಡಗಳನ್ನು ಬಿಟ್ಟು ಉಳಿದೆಲ್ಲಾ ಮುಸ್ಲಿಮರನ್ನು ಕೇಂದ್ರದ ಒಬಿಸಿ ಮೀಸಲಾತಿ ಒದಗಿಸುವಾಗ ಹಿಂದುಳಿದ ವರ್ಗಗಳೆಂದೇ ಪರಿಗಣಿಸಬೇಕೆಂದು ಆದೇಶಿಸಿತ್ತು.

ಇದರಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಅಸ್ಪಶ್ಯತೆ ಮತ್ತು ಐತಿಹಾಸಿಕ ಅಗಮ್ಯತೆಯನ್ನು ಆಧರಿಸಿ ಎಸ್‌ಸಿ ಮತ್ತು ಎಸ್‌ಟಿ ಮೀಸಲಾತಿಗಳನ್ನು ಕಲ್ಪಿಸುವುದರ ಜೊತೆಗೆ ಆರ್ಟಿಕಲ್ 15(4) ಮತ್ತು 16 4)ರ ಪ್ರಕಾರ ಇತರ ಹಿಂದುಳಿದ ‘ವರ್ಗ’ಗಳನ್ನು ಗುರುತಿಸಿ ವಿಶೇಷ ಅಭಿವೃದ್ಧಿ ಅವಕಾಶಗಳನ್ನು ಕಲ್ಪಿಸುವುದನ್ನೂ ಸಂವಿಧಾನ ಕಡ್ಡಾಯ ಮಾಡುತ್ತದೆ. ಇಲ್ಲಿ ಇತರ ಹಿಂದುಳಿದ ವರ್ಗಗಳನ್ನು ಗುರುತಿಸುವುದಕ್ಕೆ ಧರ್ಮಾಧಾರಿತ ನಿಷೇಧವೇನೂ ಇಲ್ಲ.

ಕರ್ನಾಟಕದಲ್ಲಿ 1920ರ ಮಿಲ್ಲರ್ ಕಮಿಷನ್, ಸ್ವಾತಂತ್ರ್ಯಾನಂತರದಲ್ಲಿ ನಾಗನಗೌಡ ಸಮಿತಿ, ಬಹುಪಾಲು ಮುಸ್ಲಿಮರನ್ನು ಈ ಕಾರಣಗಳಿಗಾಗಿಯೇ ‘ಹಿಂದುಳಿದ ವರ್ಗ’ಗಳ ಭಾಗವಾಗಿ ಪರಿಗಣಿಸುತ್ತದೆ. 1974ರ ಹಾವನೂರ್ ಕಮಿಷನ್ ಮುಸ್ಲಿಮರನ್ನು ಸಾಪೇಕ್ಷವಾಗಿ ಹಿಂದುಳಿದ ಸಮುದಾಯವೆಂದು ಕಂಡುಕೊಂಡರೂ ಹಿಂದುಳಿದ ಜಾತಿಗಳ ಭಾಗವಾಗಿ ಪರಿಗಣಿಸಿತ್ತು. ದೇವರಾಜ ಅರಸು ಸರಕಾರ ಮುಸ್ಲಿಮರನ್ನೂ ಹಿಂದುಳಿದ ವರ್ಗವಾಗಿ ಪರಿಗಣಿಸಿ ಮೀಸಲಾತಿ ಆದೇಶವನ್ನು ನೀಡುತ್ತದೆ. ಅದನ್ನು ಕರ್ನಾಟಕ ಹೈಕೋರ್ಟಿನಲ್ಲಿ ಪ್ರಶ್ನಿಸಿದಾಗ ಹೈಕೋರ್ಟಿನ ವಿಭಾಗೀಯ ಪೀಠ 1979ರ ಎಪ್ರಿಲ್ 9ರಂದು WP 4371/77 ಪ್ರಕರಣದಲ್ಲಿ ಅತ್ಯಂತ ಸ್ಪಷ್ಟವಾಗಿ ಹೀಗೆ ತೀರ್ಪಿತ್ತಿದೆ:

‘‘..ಮುಸ್ಲಿಮರ ಕುರಿತಾಗಿ ಹೇಳಬೇಕೆಂದರೆ ಮುಸ್ಲಿಮರು ಧಾರ್ಮಿಕ ಅಲ್ಪಸಂಖ್ಯಾತರಾಗಿದ್ದಾರೆ ಎಂಬ ಏಕೈಕ ಕಾರಣಕ್ಕೆ ಅವರನ್ನು ಹಿಂದುಳಿದ ವರ್ಗಗಳಿಂದ ಆಯೋಗವು ಹೊರಗಿಟ್ಟಿದ್ದು ಸಮಂಜಸವಾದ ಕ್ರಮವಲ್ಲ. ಅದೇನೇ ಇದ್ದರೂ ಆಯೋಗವು ಮುಸ್ಲಿಮರು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದ್ದು ಸರಕಾರಿ ಸೇವೆಗಳಲ್ಲೂ ಸೂಕ್ತ ಪ್ರಾತಿನಿಧ್ಯ ಹೊಂದಿಲ್ಲ ಎಂಬುದನ್ನು ಗುರುತಿಸಿದೆ. ಅವರು ಧಾರ್ಮಿಕ ಅಲ್ಪಸಂಖ್ಯಾತರಾಗಿದ್ದಾರೆ ಎಂಬುದು ಅವರನ್ನು ಹಿಂದುಳಿದ ವರ್ಗಗಳ ಪಟ್ಟಿಯಿಂದ ಹೊರಗಿಡಲು ಕಾರಣವೇ ಅಲ್ಲ. ಆದ್ದರಿಂದ ಸರಕಾರವು ಮುಸ್ಲಿಮರನ್ನು ಮತ್ತೆ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಿ ಸರಿಯಾದುದನ್ನೇ ಮಾಡಿದೆ ಎಂದು ನಾವು ಪರಿಗಣಿಸುತ್ತೇವೆ’’.

ಹಾಗೆಯೇ 1992ರಲ್ಲಿ ಮಂಡಲ್ ವರದಿಯ ಸಾಂವಿಧಾನಿಕತೆಯನ್ನು ಪರಿಶೀಲಿಸಲು ರಚಿಸಲಾಗಿದ್ದ ಒಂಭತ್ತು ನ್ಯಾಯಾಧೀಶರ ಪೀಠವು ಇಂದ್ರಾ ಸಹಾನಿ ಪ್ರಕರಣದಲ್ಲಿ ಮುಸ್ಲಿಮರಿಗೆ ಹಿಂದುಳಿದ ವರ್ಗಗಳಾಗಿ ಮೀಸಲಾತಿ ಕಲ್ಪಿಸುವ ಬಗ್ಗೆ ನಿಸ್ಸಂದಿಗ್ಧವಾಗಿ ಹೀಗೆ ಸ್ಪಷ್ಟಪಡಿಸಿದೆ:

‘‘ಸರಕಾರೀ ಸೇವೆಗಳಲ್ಲಿ ಅಸಮರ್ಪಕ ಪ್ರಾತಿನಿಧ್ಯವು ಯಾವುದೋ ಒಂದು ಜನವರ್ಗಕ್ಕೆ ಮಾತ್ರ ಸೀಮಿತವಾಗಿಲ್ಲ. ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿರುವ ಎಲ್ಲರಿಗೂ ಅದು ಸಮಾನವಾಗಿ ಅನ್ವಯವಾಗುತ್ತದೆ. ಅವರು ಹಿಂದೂಗಳೊಳಗಿನ ಶೂದ್ರ ಸಮುದಾಯಕ್ಕೆ ಸೇರಿದವರಾಗಿರಬಹುದು ಅಥವಾ ಅದೇ ರೀತಿ ಹಿಂದುಳಿದಿರುವಿಕೆಗೆ ಗುರಿಯಾಗಿರುವ ಮುಸ್ಲಿಮ್, ಸಿಖ್ ಅಥವಾ ಕ್ರಿಶ್ಚಿಯನ್ ಸಮುದಾಯಗಳಿಗೆ ಸೇರಿದವರಾಗಿದ್ದರೂ ಸಮಾನವಾಗಿ ಅನ್ವಯವಾಗುತ್ತದೆ

(https://indiankanoon.org/doc/1363234/)

ಹೀಗಾಗಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರು ಮುಸ್ಲಿಮ್ ಸಮುದಾಯಕ್ಕೆ ಸೇರಿದವರಾಗಿದ್ದರೆ ಅವರಿಗೆ ಒಬಿಸಿ ಮೀಸಲಾತಿ ನೀಡಬೇಕಾದ್ದು ಸರಕಾರದ ಸಾಂವಿಧಾನಿಕ ಕರ್ತವ್ಯ. ಅದನ್ನು ಧರ್ಮದ ಆಧಾರದಲ್ಲಿ ನಿರಾಕರಿಸುವುದು ಸಂವಿಧಾನ ವಿರೋಧಿ ಕೃತ್ಯವಾಗುತ್ತದೆ.

ಕರ್ನಾಟಕದಲ್ಲಿ 1986ರ ವೆಂಕಟಸ್ವಾಮಿ ಆಯೋಗದ ವರದಿ ಮತ್ತು 1990ರ ನ್ಯಾ. ಚಿನ್ನಪ್ಪರೆಡ್ಡಿ ನೇತೃತ್ವದ ಕರ್ನಾಟಕದ ಮೂರನೇ ಹಿಂದುಳಿದ ಆಯೋಗದ ವರದಿಗಳೆಲ್ಲವೂ ಅತ್ಯಂತ ವೈಜ್ಞಾನಿಕ ಅಧ್ಯಯನ ಹಾಗೂ ದತ್ತಾಂಶಗಳನ್ನು ಆಧರಿಸಿಯೇ ಮುಸ್ಲಿಮರಲ್ಲಿ ಅತಿ ಹಿಂದುಳಿದವರನ್ನು ಅತಿ ಹಿಂದುಳಿದ ಪ್ರವರ್ಗಗಳಿಗೆ ಸೇರಿಸಿದ್ದಲ್ಲದೆ, ಇಡೀ ಮುಸ್ಲಿಮ್ ಸಮುದಾಯವನ್ನು ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ವರ್ಗವಾಗಿ ಪರಿಗಣಿಸಿ ಇಡೀ ಸಮುದಾಯಕ್ಕೆ ಒಬಿಸಿ ಮೀಸಲಾತಿಯನ್ನು ಕಲ್ಪಿಸಿವೆ. 1990ರಲ್ಲಿ ಕೂಲಂಕಶ ಸಾಮಾಜಿಕ ಅಧ್ಯಯನದ ನಂತರ ವರದಿ ನೀಡಿದ ನ್ಯಾ. ಚಿನ್ನಪ್ಪರೆಡ್ಡಿ ಆಯೋಗವು ಹೀಗೆ ಅಭಿಪ್ರಾಯ ಪಡುತ್ತದೆ:

‘‘ಒಟ್ಟಾರೆ ಈ ಅಧ್ಯಯನವು ಮುಸ್ಲಿಮರು ಒಂದು ಸಮುದಾಯವಾಗಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗವಾಗಿದ್ದಾರೆ ಎಂಬ ಚಿತ್ರಣವನ್ನು ನೀಡುತ್ತದೆ’’.

(p 170, Volume 1)

ಒಬಿಸಿ ಮೀಸಲಾತಿಗೆ ‘ಕೆನೆ ಪದರ ನೀತಿ’ ಅನ್ವಯವಾಗುವುದರಿಂದ ಮುಸ್ಲಿಮರನ್ನೂ ಒಳಗೊಂಡಂತೆ ಆಯಾ ಸಮುದಾಯಗಳಲ್ಲಿರುವ ಬಲಾಢ್ಯರಿಗೆ ಈ ಮೀಸಲಾತಿ ಸೌಲಭ್ಯ ಕಾನೂನು ಪ್ರಕಾರ ಸಿಗುವುದಿಲ್ಲ.

ಹಾಗೆ ನೋಡಿದರೆ ಬಿಜೆಪಿ ನೇತೃತ್ವದ ಬಸವರಾಜ ಬೊಮ್ಮಾಯಿ ಸರಕಾರವೂ ಕೂಡ 2023ರಲ್ಲಿ ಚುನಾವಣೆಗೆ ಮುಂಚೆ ಜಾರಿ ಮಾಡಿ, ಸುಪ್ರೀಂ ಕೋರ್ಟಿನಲ್ಲಿ ಛೀಮಾರಿ ಹಾಕಿಸಿಕೊಂಡ ನಂತರ ಹಿಂದೆಗೆದುಕೊಂಡ ಹೊಸ ಮೀಸಲಾತಿ ಸೂತ್ರದಲ್ಲೂ ಬೇರೆ ಬೇರೆ ಪ್ರವರ್ಗದಡಿ ಕ್ರಿಶ್ಚಿಯನ್ನರಿಗೂ, ದಿಗಂಬರ ಜೈನರಿಗೂ ಮತ್ತು ಬೌದ್ಧರಿಗೂ ಮೀಸಲಾತಿಯನ್ನೂ ಮುಂದುವರಿಸಿತ್ತು. ಆದರೆ ಅದೇ ಮಾನದಂಡವನ್ನು ಮುಸ್ಲಿಮರಿಗೆ ಅನ್ವಯಿಸದೆ ಕೋಮುವಾದಿ ದುರುದ್ದೇಶವನ್ನು ಬಯಲು ಮಾಡಿಕೊಂಡಿತ್ತು.

ಹೀಗಾಗಿ ಯಾವುದೇ ಧರ್ಮ ಅಥವಾ ಜಾತಿ ಅಥವಾ ಇತರ ಪಂಗಡಗಳಿಗೆ ಸೇರಿದ ಗುಂಪೊಂದು ಆಯಾ ರಾಜ್ಯಗಳಲ್ಲಿ ಮುಂದುವರಿದ ಗುಂಪುಗಳಿಗಿಂತ ಸಾಪೇಕ್ಷವಾಗಿ ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದಿದೆಯೆಂದು ಕಂಡುಬಂದರೆ ಅವುಗಳನ್ನು ಇಡಿಯಾಗಿ ‘ಸಾಮಾಜಿಕ ಹಿಂದುಳಿದ ವರ್ಗ’ವೆಂದೇ ಪರಿಗಣಿಸಿ ಮೀಸಲಾತಿಯನ್ನೂ ಒಳಗೊಂಡಂತೆ ಇತರ ಉಪಾಧಿಗಳನ್ನು ಕಲ್ಪಿಸಿಕೊಡುವುದೇ ಸಂವಿಧಾನ ಬದ್ಧ ಸರಕಾರದ ಕರ್ತವ್ಯ. ಅದನ್ನು ಮಾಡದಿರುವುದೇ ಸಂವಿಧಾನ ಬಾಹಿರ.

ಆದ್ದರಿಂದ ಮುಸ್ಲಿಮರಿಗೆ ಧರ್ಮಾಧಾರಿತ ಮೀಸಲಾತಿ ಕೊಡಲಾಗುತ್ತಿದೆ ಎಂಬ ಆರೆಸ್ಸೆಸ್‌ಗಳ ವಾದವೇ ಸಂವಿಧಾನ ವಿರೋಧಿಯಾದದ್ದು.

ಆರೆಸ್ಸೆಸಿಗರೇ ಇಡಬ್ಲ್ಯುಎಸ್ ಮೀಸಲಾತಿಯನ್ನೇಕೆ ವಿರೋಧಿಸಲಿಲ್ಲ?

ಹಾಗೆ ನೋಡಿದರೆ ಸಂವಿಧಾನದ ಸಾಮಾಜಿಕ ನ್ಯಾಯದ ಆಶಯಕ್ಕೆ ತದ್ವಿರುದ್ಧವಾದದ್ದು ಮೇಲ್ಜಾತಿ ಮಧ್ಯಮ ವರ್ಗಕ್ಕೆ ಆರ್ಥಿಕ ಹಿಂದುಳಿದಿರುವಿಕೆಯ ಆಧಾರದಲ್ಲಿ ಕೊಟ್ಟಿರುವ ಇಡಬ್ಲ್ಯುಎಸ್ ಮೀಸಲಾತಿ. ಸಂವಿಧಾನದ 15 (4) ಮತ್ತು 16 (4)ರ ಪ್ರಕಾರ ಸಂವಿಧಾನದಲ್ಲಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸಿ ಮೀಸಲಾತಿಯನ್ನು ಕಲ್ಪಿಸುವ ಅವಕಾಶ ಮಾತ್ರವೇ ಇದೆ. ಮೀಸಲಾತಿಯನ್ನು ಕಲ್ಪಿಸಲು ಆರ್ಥಿಕ ಹಿಂದುಳಿದಿರುವಿಕೆಯನ್ನು ಏಕಮಾತ್ರ ಮಾನದಂಡವಾಗಿ ಪರಿಗಣಿಸಲಾಗದೆಂದು ಒಂಭತ್ತು ನ್ಯಾಯಾಧೀಶರು 1992ರಲ್ಲಿ ಇಂದ್ರಾ ಸಹಾನಿ ಪ್ರಕರಣದಲ್ಲಿ ಸರ್ವ ಸಮ್ಮತಿಯಿಂದ ಕೊಟ್ಟ ತೀರ್ಪಿನಲ್ಲಿ ಸ್ಪಷ್ಟಪಡಿಸಲಾಗಿದೆ. ಆರ್ಥಿಕ ಹಿಂದುಳಿದಿರುವಿಕೆಯ ಜೊತೆಗೆ ಸಾಮಾಜಿಕ-ಶೈಕ್ಷಣಿಕ ಹಿಂದುಳಿದಿರುವಿಕೆ ಇದ್ದಾಗ ಮಾತ್ರ ಸಾಮಾಜಿಕ ನ್ಯಾಯದ ಭಾಗವಾಗಿ ಸಾಂವಿಧಾನಿಕವಾಗಿ ಮೀಸಲಾತಿಗೆ ಅರ್ಹರಾಗುತ್ತಾರೆ.

ಆದರೆ 2019ರಲ್ಲಿ ನರೇಂದ್ರ ಮೋದಿಯವರ ಸಂಘಿ ಸರಕಾರ ಆರ್ಥಿಕ ಹಿಂದುಳಿದಿರುವಿಕೆಯನ್ನು ಏಕಮಾತ್ರ ಮಾನದಂಡವನ್ನಾಗಿ ಮಾಡಿಕೊಂಡು ಎಸ್‌ಸಿ-ಎಸ್‌ಟಿ-ಒಬಿಸಿ ಮೀಸಲಾತಿ ಪಡೆಯದ ಅಂದರೆ ಮೇಲ್ಜಾತಿಗಳಿಗೆ ಸೀಮಿತವಾಗಿ ಮಾತ್ರ ಇಡಬ್ಲ್ಯುಎಸ್ ಮೀಸಲಾತಿಯನ್ನು ಜಾರಿ ಮಾಡಿತು. ಈ ಮೀಸಲಾತಿಯನ್ನು ಜಾರಿ ಮಾಡಲು ತನಗೆ ಆರ್ಟಿಕಲ್ 46 ಅವಕಾಶ ಮಾಡಿಕೊಡುತ್ತದೆಂದು ವಾದಿಸಿತು. ಆದರೆ ಸಂವಿಧಾನದ ಆರ್ಟಿಕಲ್ 46 ಹೀಗೆ ಹೇಳುತ್ತದೆ:

‘‘The State shall promote with special care the educational and economic interests of the weaker sections of the people, and, in particular, of the Scheduled Castes and the Scheduled Tribes, and shall protect them from social injustice and all forms of exploitation’’.

ಹೀಗೆ ಆರ್ಟಿಕಲ್ 46 ಸ್ಪಷ್ಟಪಡಿಸುವಂತೆ ಸಮಾಜದ ದುರ್ಬಲ ವರ್ಗಗಳು ಎಂದರೆ ಆರ್ಥಿಕವಾಗಿ ಮಾತ್ರ ದುರ್ಬಲವಾಗಿರುವ ಎಂದು ಈ ಆರ್ಟಿಕಲ್ ಹೇಳುವುದಿಲ್ಲ. ಬದಲಾಗಿ ಈ ವಿಶೇಷ ರಕ್ಷಣೆಯನ್ನು ಸಾಮಾಜಿಕ ಅನ್ಯಾಯ ಹಾಗೂ ಇತರ ಎಲ್ಲಾ ಬಗೆಯ ಶೋಷಣೆಗಳಿಂದ ರಕ್ಷಿಸಲು ನೀಡಲಾಗುವುದೆಂದು ಹೇಳುತ್ತದೆ. ಈ ದೇಶದಲ್ಲಿ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳು ಸಾಮಾಜಿಕ ಅನ್ಯಾಯ ಮತ್ತು ಇತರ ಶೋಷಣೆಗಳಿಗೆ ಗುರಿಯಾಗುತ್ತಿದ್ದಾರೆಯೇ ವಿನಾ ಆ ಗುಂಪುಗಳಿಗೆ ಸೇರದ ಶೋಷಕ ಜಾತಿಗಳಲ್ಲ. ಅಷ್ಟು ಮಾತ್ರವಲ್ಲ ಆ ಮೀಸಲಾತಿಗೆ ವಾರ್ಷಿಕ 8 ಲಕ್ಷ ಅರ್ಥಾತ್ ಮಾಸಿಕ 65,000 ರೂ. ಆದಾಯ ಇರುವವರನ್ನು ಆರ್ಥಿಕವಾಗಿ ದುರ್ಬಲ ವರ್ಗವೆಂದು ಘೋಷಿಸಿದೆ. ಅರ್ಥಾತ್ ಇಡಬ್ಲ್ಯುಎಸ್ ಮೀಸಲಾತಿಯು ಮೇಲ್ಜಾತಿಗಳ ಮಧ್ಯಮವರ್ಗಕ್ಕೆ ಕೊಟ್ಟ ಮೀಸಲಾತಿಯೇ ಆಗಿದೆ. ಏಕೆಂದರೆ ಆರ್ಥಿಕವಾಗಿ ದುರ್ಬಲ ವರ್ಗಗಳೆಂಬ ಮಾನದಂಡವನ್ನು ಅನುಸರಿಸಿದರೂ ಆರ್ಥಿಕವಾಗಿ ಅತ್ಯಂತ ಹಿಂದುಳಿದಿರುವವರು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯಗಳಿಗೆ ಸೇರಿದವರೇ ಆಗಿರುತ್ತಾರೆ. ಅವರಿಗೆ ಇಡಬ್ಲ್ಯುಎಸ್ ಮೀಸಲಾತಿ ಸಲ್ಲುವುದಿಲ್ಲ.

ಆರೆಸ್ಸೆಸ್‌ಗಳು ಸಂವಿಧಾನಪರರು ಮತ್ತು ಶೋಷಿತರ ಪರರೂ ಆಗಿದ್ದರೆ ಮೋದಿ ಸರಕಾರ ಜಾರಿಗೆ ತಂದ ಈ ಸಂವಿಧಾನ ವಿರೋಧಿ ಇಡಬ್ಲ್ಯುಎಸ್‌ಮೀಸಲಾತಿಯನ್ನು ಏಕೆ ವಿರೋಧಿಸಲಿಲ್ಲ?

ಮುಸ್ಲಿಮ್ ಮೀಸಲಾತಿಗೆ ಸಂವಿಧಾನ ತಿದ್ದುಪಡಿ ತರುವುದಾಗಿ ಡಿ.ಕೆ. ಶಿವಕುಮಾರ್ ಹೇಳಿದರೋ ಇಲ್ಲವೋ, ಮೋದಿ ಸರಕಾರ ಮಾತ್ರ ಮೇಲ್ಜಾತಿ ಮಧ್ಯಮ ವರ್ಗದವರಿಗೆ ಮೀಸಲಾತಿ ನೀಡಲು ಸಂವಿಧಾನಕ್ಕೆ 103ನೇ ತಿದ್ದುಪಡಿಯನ್ನು ತಂದಿದ್ದಂತೂ ನಿಜ.

ಸಂವಿಧಾನಪರರಾದ ಆರೆಸ್ಸೆಸಿಗರೇ ಇದನ್ನು ಏಕೆ ನೀವು ಬೀದಿಬೀದಿಯಲ್ಲಿ ವಿರೋಧಿಸಲಿಲ್ಲ? ಸುಪ್ರೀಂ ಕೋರ್ಟ್ ಇಡಬ್ಲ್ಯುಎಸ್ ಮೀಸಲಾತಿಯನ್ನು 3-2 ಬಹುಮತದಲ್ಲಿ ಎತ್ತಿಹಿಡಿಯಿತು. ಕಾಂಗ್ರೆಸ್ ಒಳಗೊಂಡಂತೆ, ಬಿಎಸ್‌ಪಿ, ಎಡಪಕ್ಷಗಳೆಲ್ಲವೂ ಈ ಸಂವಿಧಾನ ಬಾಹಿರ ಇಡಬ್ಲ್ಯುಎಸ್‌ಮೀಸಲಾತಿಯ ಬೆಂಬಲಕ್ಕೆ ನಿಂತರು. ಇವರೆಲ್ಲರಿಗಿಂತ ‘ದೇಶಭಕ್ತ’ರಾದ ಆರೆಸ್ಸೆಸ್‌ಗಳೇ ನೀವೇಕೆ ಇವರನ್ನು ಮತ್ತು ಬಿಜೆಪಿಯನ್ನು ವಿರೋಧಿಸಲಿಲ್ಲ?

ಆರೆಸ್ಸೆಸಿಗರೇ ‘ಹಿಂದೂ ರಾಷ್ಟ್ರವೇ’ ಸಂವಿಧಾನ ಬಾಹಿರವಲ್ಲವೇ?

ಮುಸ್ಲಿಮ್ ಮೀಸಲಾತಿಯನ್ನು ಸಂವಿಧಾನ ಬಾಹಿರವೆಂದ ಸಭೆಯಲ್ಲೇ ಆರೆಸ್ಸೆಸ್ ನಾಯಕರು ಭಾರತವನ್ನು ಆದಷ್ಟು ಬೇಗ ‘ಹಿಂದೂ ರಾಷ್ಟ್ರ’ವನ್ನಾಗಿ ಮಾಡಲು ಅಂತಿಮ ಯೋಜನೆಗಳನ್ನು ರೂಪಿಸಿದ್ದಾರೆ. ಅರೆಸ್ಸೆಸಿಗರೇ ‘ಹಿಂದೂ ರಾಷ್ಟ್ರ’ವೆಂಬ ಕಲ್ಪನೆಯೇ ಭಾರತದ ಸಂವಿಧಾನಕ್ಕೆ ವಿರುದ್ಧವಲ್ಲವೇ? ಭಾರತದ ಸಂವಿಧಾನದ ಮುನ್ನುಡಿಗೆ ‘ಸೆಕ್ಯುಲರ್’ ಎಂಬ ಪದ ಜೋಡಣೆಯಾಗಿದ್ದು 1977ರಲ್ಲಾದರೂ 1950ರ ಜನವರಿ 26ರಂದೇ ಭಾರತ ಸಂವಿಧಾನವು ಭಾರತದ ಪ್ರಭುತ್ವವು ಯಾವೊಂದು ಧರ್ಮದ ಪ್ರಭುತ್ವವಲ್ಲವೆಂದು ಘೋಷಿಸಿತ್ತು. ಆ ಕಾರಣಕ್ಕಾಗಿಯೇ 1950ರಲ್ಲಿ ಜಾರಿಯಾದ ಸಂವಿಧಾನದಲ್ಲಿ ಸೆಕ್ಯುಲರಿಸಂನ ಸಾರವಾದ ಆರ್ಟಿಕಲ್ 14, 15, 16, 25, 26, 27, 29 ಮತ್ತು 30ಗಳನ್ನು ಮೂಲಭೂತ ಹಕ್ಕುಗಳಾಗಿ ಘೋಷಿಸಿತು. ಅದಕ್ಕಾಗಿಯೇ ಆರ್ಟಿಕಲ್ 25, 26, 27 ಕಲಂಗಳು ಈ ದೇಶದ ಪ್ರಜೆಗಳು ತಮ್ಮ ತಮ್ಮ ಧರ್ಮವನ್ನು ಪಾಲಿಸಲು, ಮತ್ತು ಪ್ರಚಾರ ಮಾಡಲು ಅವಕಾಶ ಮಾಡಿಕೊಡುತ್ತದೆ. ಸಂವಿಧಾನದ 14, 15, 16 ಕಲಂಗಳು ಭಾರತದ ಪ್ರಭುತ್ವವು ಧರ್ಮದ ಆಧಾರದ ಮೇಲೆ ಭಾರತದ ನಾಗರಿಕರ ನಡುವೆ ಯಾವುದೇ ತಾರತಮ್ಯ ಮಾಡುವುದಿಲ್ಲವೆಂದು ಘೋಷಿಸುತ್ತದೆ ಹಾಗೂ ಈ ದೇಶದ ಭಾಷಿಕ ಮತ್ತು ಧಾರ್ಮಿಕ ಅಲ್ಪಸಂಖ್ಯಾತರಿಗೆ ತಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಕಾಪಾಡಿಕೊಳ್ಳಲು ವಿಶೇಷ ಸಂಸ್ಥೆಗಳನ್ನು ಮಾಡಿಕೊಳ್ಳಲು ಆರ್ಟಿಕಲ್ 29 ಮತ್ತು 30ರಲ್ಲಿ ವಿಶೇಷ ರಕ್ಷಣೆ ಕೊಡುತ್ತದೆ.

ಹೀಗಾಗಿ ಸಂಘಿಗಳ ಹಿಂದೂ ರಾಷ್ಟ್ರ ಪರಿಕಲ್ಪನೆಯೇ ಸಂವಿಧಾನ ಬಾಹಿರ. ಅದನ್ನು ಜಾರಿಗೊಳಿಸುವುದೇ ತಮ್ಮ ಧ್ಯೇಯವೆಂದು ಘೋಷಿಸುವ ಆರೆಸ್ಸೆಸ್, ಬಿಜೆಪಿ ಇನ್ನಿತರ ಸಂಘಟನೆಗಳ ಅಸ್ತಿತ್ವವೇ ಸಂವಿಧಾನ ಬಾಹಿರವಲ್ಲವೇ?

ಧರ್ಮಾಧಾರಿತ ಮೀಸಲಾತಿ ಅಧರ್ಮವೇ?

ಧರ್ಮಾಧಾರಿತ ಮೀಸಲಾತಿಯು ಸದ್ಯಕ್ಕೆ ಸಂವಿಧಾನದ ಪ್ರಕಾರ ಮಾನ್ಯವಲ್ಲ ಅನ್ನುವುದು ಸರಿ. ಆದರೆ ಸಮಾಜದ ಒಂದು ವರ್ಗ ಧರ್ಮದ ಆಧಾರದಲ್ಲಿ ತಾರತಮ್ಯಕ್ಕೆ ಗುರಿಯಾಗುತ್ತಿದ್ದರೆ ಮತ್ತು ಅವಕಾಶ ವಂಚಿತರಾಗಿದ್ದರೆ ಧರ್ಮಾಧಾರಿತವಾಗಿಯೇ ಮೀಸಲಾತಿ ಕೊಡಬಾರದೇಕೆ ಎಂಬ ಚಿಂತನೆಯು ಸಂವಿಧಾನ ಬಾಹಿರವೇನಲ್ಲ. ಏಕೆಂದರೆ ಮೇಲ್ಜಾತಿ ಬಡವರಿಗೆ ನೀಡಿದ ಸುಪ್ರೀಂ ತೀರ್ಪಿಗೆ ವ್ಯತಿರಿಕ್ತವಾಗಿ ಆರ್ಥಿಕ ಮಾನದಂಡವನ್ನೇ ಏಕೈಕ ಮಾನದಂಡವನ್ನಾಗಿ ಬಳಸಿ ಕೊಟ್ಟಿರುವ ಇಡಬ್ಲ್ಯುಎಸ್ ಮೀಸಲಾತಿಯೂ ಕೂಡ 2019ರ ವರೆಗೆ ಸಂವಿಧಾನ ಬಾಹಿರವಾಗಿತ್ತು. ಸಂವಿಧಾನಕ್ಕೆ ತಿದ್ದುಪಡಿಯನ್ನು ತಂದು ಆ ಮೀಸಲಾತಿಯನ್ನು ನೀಡಿರುವಾಗ ಅಗತ್ಯವಿದ್ದಲ್ಲಿ ಮತ್ತು ಸಾಮಾಜಿಕ ನ್ಯಾಯಕ್ಕೆ ಪೂರಕವಾಗಿದ್ದಲ್ಲೇ ಧರ್ಮಾಧಾರಿತ ಮೀಸಲಾತಿಯ ಬಗ್ಗೆ ಚಿಂತನೆ ಮಾಡುವುದು ಅತ್ಯಗತ್ಯವಾಗುತ್ತದೆ.

ಹಾಗೆ ನೋಡಿದರೆ ಮುಸ್ಲಿಮರ ಸ್ಥಿತಿಗತಿಗಳ ಬಗ್ಗೆ ಕೂಲಂಕಶ ಅಧ್ಯಯನ ಮಾಡಿರುವ ಸಾಚಾರ್ ಸಮಿತಿ, ರಂಗನಾಥ ಮಿಶ್ರಾ ವರದಿಗಳೆಲ್ಲವೂ ಮುಸ್ಲಿಮರು ಅವರು ಅನುಸರಿಸುತ್ತಿರುವ ಧರ್ಮದ ಕಾರಣಕ್ಕಾಗಿಯೇ ಸಮಾಜದಲ್ಲಿ ಹೆಚ್ಚಿನ ತಾರತಮ್ಯಕ್ಕೆ ಮತ್ತು ಅವಕಾಶ ವಂಚನೆಗೆ ಗುರಿಯಾಗುತ್ತಿದ್ದಾರೆಂದು ಅಂಕಿಅಂಶಗಳ ಸಮೇತ ಸಾಬೀತು ಪಡಿಸುತ್ತದೆ. ಕಳೆದ ಇಪ್ಪತ್ತು ವರ್ಷಗಳಲ್ಲಂತೂ ಸಂಘಪರಿವಾರದ ಕಾರಣದಿಂದ ಮುಸ್ಲಿಮರು, ಕ್ರಿಶ್ಚಿಯನ್ನರು ತಮ್ಮ ಧರ್ಮದ ಗುರುತಿನ ಕಾರಣಕ್ಕೆ ಹೆಚ್ಚೆಚ್ಚು ದಾಳಿ, ತಾರತಮ್ಯ ಮತ್ತು ವಂಚನೆಗೆ ಗುರಿಯಾಗುತ್ತಿದ್ದಾರೆ. ಹೀಗಾಗಿ ಅವರ ಅಸ್ಮಿತೆ ಮತ್ತು ಅಸ್ತಿತ್ವದ ರಕ್ಷಣೆಗೆ ಧರ್ಮಾಧಾರಿತ ರಕ್ಷಣೆ ಮತ್ತು ಸಾಮಾಜಿಕ ನ್ಯಾಯದ ಕ್ರಮಗಳು ಬೇಕಲ್ಲವೇ ಎಂಬ ಬಗ್ಗೆ ಹೆಚ್ಚು ಚರ್ಚೆಗಳು ನಡೆಯಬೇಕಿವೆ.

ವಾಸ್ತವದಲ್ಲಿ ಬ್ರಿಟಿಷರ ಕಾಲದಲ್ಲಿ ಈ ದೇಶಕ್ಕೆ ರಾಜಕೀಯ ಮೀಸಲಾತಿ ಸಿಕ್ಕಿದ್ದೇ ಕೋಮು ಆಧಾರಿತವಾಗಿ. ಅಂಬೇಡ್ಕರ್ ಅವರೂ ಸಹ ಅಸ್ಪಶ್ಯರನ್ನು ಮುಸ್ಲಿಮರಂತೆ, ಸಿಖ್ಖರಂತೆ ಹಿಂದೂಗಳಿಂದ ಪ್ರತ್ಯೇಕವಾದ ಅಲ್ಪಸಂಖ್ಯಾತನ್ನಾಗಿಯೇ ಪರಿಗಣಿಸಿ ರಾಜಕೀಯ ಪ್ರಾತಿನಿಧ್ಯ ನೀಡಬೇಕೆಂದು ಆಗ್ರಹಿಸಿದ್ದರು.

ಸ್ವಾತಂತ್ರ್ಯಕ್ಕೆ ಮುಂಚೆ 1945ರಲ್ಲಿ ಪಕ್ಷಾತೀತವಾಗಿ ನೇವಕವಾಗಿದ್ದ ತೇಜ್ ಬಹದ್ದೂರ್ ಸಪ್ರು ಅವರ ಸಮಿತಿಯು ಕೂಡ ಮುಸ್ಲಿಮ್ ಲೀಗ್‌ನ ಪಾಕಿಸ್ತಾನ ಪ್ರತಿಪಾದನೆಯನ್ನು ನಿರಾಕರಿಸುತ್ತಾ ಜಂಟಿ ಮತಕ್ಷೇತ್ರಗಳಲ್ಲಿ ಮುಸ್ಲಿಮ್ ಮೀಸಲಾತಿಯನ್ನು ಒದಗಿಸುವ ಪ್ರಸ್ತಾವವನ್ನು ಮಾಡಿತ್ತು. ದೇಶ ವಿಭಜನೆಯ ಹಿನ್ನೆಲೆಯಲ್ಲಿ ಧರ್ಮಾಧಾರಿತ ಮೀಸಲಾತಿಯು ದೇಶದ ಐಕ್ಯತೆಗೆ ಧಕ್ಕೆ ತರುತ್ತದೆಂದು ಧರ್ಮಾಧಾರಿತ ಮೀಸಲಾತಿಯನ್ನು ಸಂವಿಧಾನ ನಿರಾಕರಿಸಿತು. ಆದರೆ ಸಾಮಾಜಿಕವಾಗಿ ಹಿಂದುಳಿದಿದ್ದರೆ ಧರ್ಮದ ಗುಂಪಾಗಿದ್ದರೂ ಮೀಸಲಾತಿಯನ್ನು ಒದಗಿಸುವ ಅವಕಾಶಗಳನ್ನು ಒದಗಿಸಿತು.

ಆದರೆ ಕಳೆದ ಮೂವತ್ತು ವರ್ಷಗಳಲ್ಲಿ ಆರೆಸ್ಸೆಸ್, ಬಿಜೆಪಿಗಳ ಧರ್ಮಾ ಧಾರಿತ, ಸಂವಿಧಾನ ಬಾಹಿರ ‘ಹಿಂದೂ ರಾಷ್ಟ್ರ’ ರಾಜಕಾರಣವು ಮುಸ್ಲಿಮರ ಪ್ರಾತಿನಿಧ್ಯ, ಅವಕಾಶ, ಪ್ರಗತಿಗಳೆಲ್ಲದರ ಮೇಲೆ ದಾಳಿ ಮಾಡುತ್ತಿದೆ.

ಆದ್ದರಿಂದ, ಈ ದೇಶದ ಐಕ್ಯತೆ ಮತ್ತು ಸಮಗ್ರತೆ ಉಳಿಯಬೇಕೆಂದರೆ ಒಂದೋ ಆರೆಸ್ಸೆಸ್, ಬಿಜೆಪಿಗಳ ಕೋಮುವಾದಿ ಫ್ಯಾಶಿಸ್ಟ್ ರಾಜಕಾರಣ ವಾದರೂ ನಿಷೆೇಧವಾಗಬೇಕು ಅಥವಾ ಅದರಿಂದ ಬಾಧಿತರಾದ ಧಾರ್ಮಿಕ ಸಮುದಾಯಗಳಿಗೆ ಧರ್ಮಾಧಾರಿತವಾದ ಪರಿಹಾರವನ್ನಾದರೂ ಒದಗಿಸ ಬೇಕು ಎಂಬ ಪರಿಸ್ಥಿತಿ ಎದುರಾಗುತ್ತಿರುವುದಂತೂ ನಿಜ. ಅಲ್ಲವೇ?

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಶಿವಸುಂದರ್

contributor

Similar News