ಫ್ಯಾಶಿಸ್ಟ್ ಕಾಲದಲ್ಲಿ ರಾಜಕೀಯ ಪ್ರಜಾತಂತ್ರದ ಬಡಿವಾರಗಳು

Update: 2025-02-26 09:45 IST
Editor : Thouheed | Byline : ಶಿವಸುಂದರ್
ಫ್ಯಾಶಿಸ್ಟ್ ಕಾಲದಲ್ಲಿ ರಾಜಕೀಯ ಪ್ರಜಾತಂತ್ರದ ಬಡಿವಾರಗಳು
  • whatsapp icon

ಭಾಗ- 1

1949ರ ನವೆಂಬರ್ 25 ರಂದು ಅಂಬೇಡ್ಕರ್ ಅವರು ಸಂವಿಧಾನವನ್ನು ದೇಶಕ್ಕೆ ಅರ್ಪಿಸುತ್ತಾ ರಾಜಕೀಯ ಪ್ರಜಾತಂತ್ರದ ಸೋಗಲಾಡಿತನದ ಬಗ್ಗೆ ನೀಡಿದ ಎಚ್ಚರಿಕೆಯ ಮಾತುಗಳನ್ನು ದೇಶ ಮತ್ತು ಚಳವಳಿಗಳು ಮರೆತದ್ದಕ್ಕೆ ಈಗ ಫ್ಯಾಶಿಸಂ ಭಾರತವನ್ನು ರಾಜಕೀಯವಾಗಿಯೂ, ಆರ್ಥಿಕವಾಗಿಯೂ ಮತ್ತು ಸಾಮಾಜಿಕವಾಗಿಯೂ ಆಳ್ವಿಕೆಯನ್ನು ಮಾಡುತ್ತಿದೆ.

ಅಂದು ಅಂಬೇಡ್ಕರ್ ಅವರು ಒಬ್ಬರಿಗೆ ಒಂದು ಓಟು, ಒಂದು ಓಟಿಗೆ ಒಂದೇ ಮೌಲ್ಯವೆಂಬುದು ರಾಜಕೀಯ ಪ್ರಜಾತಂತ್ರ ಕ್ರಾಂತಿಕಾರಿ ಸಾಧನೆ ಎಂದು ಹೇಳುತ್ತಲೇ, ಒಬ್ಬ ವ್ಯಕ್ತಿಗೆ ಒಂದೇ ಮೌಲ್ಯವೆಂಬ ಸಮಗ್ರ ಪ್ರಜಾತಂತ್ರ ಕೇವಲ ಇದರಿಂದ ಸಾಧ್ಯವಿಲ್ಲವೆಂಬ ಎಚ್ಚರಿಕೆಯನ್ನೂ ಕೊಟ್ಟಿದ್ದರು. ಏಕೆಂದರೆ ರಾಜಕೀಯ ಪ್ರಜಾತಂತ್ರ ಓಟಿನ ದಿನದಂದು ಮಾತ್ರ ಎಲ್ಲರನ್ನು ಸಮಾನರನ್ನಾಗಿ ಕಾಣುತ್ತದೆ. ಆದರೆ ಭಾರತ ಸಮಾಜ ಅನುಸರಿಸುತ್ತಿರುವ ಬ್ರಾಹ್ಮಣಶಾಹಿ ಜಾತಿ ವ್ಯವಸ್ಥೆ ಮತ್ತು ಹಲವರನ್ನು ಸುಲಿದು ಕೆಲವರನ್ನು ಮಾತ್ರ ಅತಿ ಶ್ರೀಮಂತರನ್ನಾಗಿಸುವ ಲಾಭಕೋರ ಬಂಡವಾಳಶಾಹಿ ವ್ಯವಸ್ಥೆಗಳಿಂದಾಗಿ ದೇಶವು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಅಪ್ರಜಾತಾಂತ್ರಿಕವಾಗಿಯೇ ಉಳಿಯುತ್ತದೆ. ಹೀಗಾಗಿ ಒಬ್ಬ ವ್ಯಕ್ತಿಗೆ ಒಂದು ಮೌಲ್ಯವೆಂಬುದು ಪ್ರತಿದಿನ ಸೋಲುತ್ತಿರುತ್ತದೆ. ಆದ್ದರಿಂದ ನಾವು ಕಟ್ಟಿಕೊಂಡಿರುವ ಪ್ರಜಾತಂತ್ರದ ಸೌಧ ಆದಷ್ಟು ಬೇಗ ಈ ಸಾಮಾಜಿಕ ಹಾಗೂ ಆರ್ಥಿಕ ಅಸಮಾನತೆಯನ್ನು ಕೊನೆಗಾಣಿಸದಿದ್ದರೆ ರಾಜಕೀಯ ಪ್ರಜಾತಂತ್ರವೂ ವಿಫಲವಾಗುವುದು ಎಂದು ಎಚ್ಚರಿಸಿದ್ದರು.

ಹಾಗಿದ್ದಲ್ಲಿ ಕಳೆದ 75 ವರ್ಷಗಳಲ್ಲಿ ನಮ್ಮ ರಾಜಕೀಯ ಪ್ರಜಾತಂತ್ರದ ಆತ್ಮವಾದ ಚುನಾವಣಾ ಪ್ರಜಾತಂತ್ರವು ಅರ್ಥಾತ್ ಸಾರ್ವತ್ರಿಕ ಮತದಾನದ ಮೂಲಕ ಆಯ್ಕೆಯಾಗುವ ಶಾಸಕಾಂಗವು ಬಂಡವಾಳಶಾಹಿ ಮತ್ತು ಬ್ರಾಹ್ಮಣಶಾಹಿಯನ್ನು ನಾಶ ಮಾಡುವ ಅರ್ಥಾತ್ ಆರ್ಥಿಕ ಮತ್ತು ಸಾಮಾಜಿಕ ಪ್ರಜಾತಂತ್ರವನ್ನು ಸಾಧಿಸುವ ಪ್ರಯತ್ನಗಳನ್ನೇನಾದರೂ ಮಾಡಿದೆಯೇ?

ಇದಕ್ಕೆ ಉತ್ತರ ಸ್ಪಷ್ಟ. ಭಾರತದಲ್ಲಿ ಮಾತ್ರವಲ್ಲ, ಜಗತ್ತಿನ ಎಲ್ಲಾ ‘ಪ್ರಜಾತಾಂತ್ರಿಕ’ ದೇಶಗಳಲ್ಲೂ ಆರ್ಥಿಕ-ಸಾಮಾಜಿಕ ಅಸಮಾನತೆ ಹೆಚ್ಚುತ್ತಿದೆ. ಹಾಗೂ ಅದು ಸಾಮಾಜಿಕ ಸಂಕ್ಷೋಭೆಯನ್ನು ಹುಟ್ಟು ಹಾಕುತ್ತಾ ರಾಜಕೀಯವನ್ನ್ನು ಸರ್ವಾಧಿಕಾರಿ ಮತ್ತು ಫ್ಯಾಶಿಸ್ಟ್ ಮಾಡುತ್ತಿದೆ.

ಅಂದರೆ ರಾಜಕೀಯ ಪ್ರಜಾತಂತ್ರವು ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಯನ್ನು ಕಡಿಮೆ ಮಾಡುವುದರ ಬದಲು ಹೆಚ್ಚಿಸಿದೆ. ಏಕೆಂದರೆ ಸಮಾಜದಲ್ಲಿ ಅಸ್ತಿತ್ವದಲ್ಲಿರುವ ವರ್ಗ ಸಂಬಂಧಗಳನ್ನು ಹಾಗೂ ಸಾಮಾಜಿಕ ಅಧಿಕಾರ ಸಮೀಕರಣಗಳನ್ನು ಬದಲಾಗದ ಭಾರತದಂಥ ದೇಶಗಳಲ್ಲಿ ಜಾರಿಯಾದ ರಾಜಕೀಯ ಪ್ರಜಾತಂತ್ರವನ್ನು, ಆಯಾ ಸಮಾಜಗಳ ಉಳ್ಳ ವರ್ಗಗಳು ವಶಪಡಿಸಿಕೊಂಡಿವೆ.

ಚುನಾವಣೆಯೆಂಬುದು ಬಡಜನರು, ಶೋಷಿತ ವರ್ಗಗಳು ಶೋಷಕ ವರ್ಗಗಳ ಅಧಿಕಾರವನ್ನು ಶಾಸನಬದ್ಧಗೊಳಿಸುವ ಪವಿತ್ರ ಕರ್ತವ್ಯವಾಗಿ ಮಾತ್ರ ಉಳಿದಿವೆ.

V-Dem ಎಂಬ ಸಂಸ್ಥೆ ಕಳೆದ ಮೂವತ್ತು ವರ್ಷಗಳಿಂದ ಮಾಡುತ್ತಾ ಬಂದಿರುವ ಅಧ್ಯಯನದಂತೆ ಕಳೆದ ಐದು ಹತ್ತು ವರ್ಷಗಳಲ್ಲಿ 27 ಕ್ಕೂ ಹೆಚ್ಚು ಪ್ರಜಾತಂತ್ರಗಳು ಎಲ್ಲಾ ರೀತಿಯಲ್ಲೂ ಚುನಾವಣಾತ್ಮಕ ಸರ್ವಾಧಿಕಾರಗಳಾಗಿವೆ. ಹೀಗಾಗಿ ಮುಂದುವರಿದ ಮತ್ತು ಹೆಚ್ಚುತ್ತಿರುವ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಗಳು ರಾಜಕೀಯ ಪ್ರಜಾತಂತ್ರವನ್ನು ವಿಲಗೊಳಿಸುತ್ತಿದೆ.

► ರಾಜಕೀಯ ಪ್ರಜಾತಂತ್ರ ಸಫಲವಾಗಲು ಆರ್ಥಿಕ-ಸಾಮಾಜಿಕ ಸಮಾನತೆ ಪೂರ್ವಶರತ್ತು ಅಂದರೆ ರಾಜಕೀಯ ಪ್ರಜಾತಂತ್ರ ಸಲವಾಗಲು ಕೇವಲ ರಾಜಕೀಯ ಪ್ರಜಾತಂತ್ರದ ರೀತಿ-ರಿವಾಜುಗಳ ಸುಧಾರಣೆಗಳು ಸಮ್ಮ್ಮೋಹಕ ಅರಿವಳಿಕೆಗಳೇ ವಿನಾ ಪ್ರಜಾತಂತ್ರಕ್ಕೆ ಅತ್ಯಗತ್ಯವಾಗಿ ಬೇಕಿರುವ ಸರ್ಜರಿಯನ್ನು ಮಾಡಲಾರವು. ಆದ್ದರಿಂದ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಗಳು ಇಲ್ಲವಾಗುವುದು ಅಥವಾ ಕಡಿಮೆಯಾಗುವುದು ಪ್ರಜಾತಂತ್ರ ಸಫಲವಾಗಲು ಅತ್ಯಗತ್ಯ ಮಾತ್ರವಲ್ಲ ಪೂರ್ವ ಶರತ್ತು ಎಂಬುದನ್ನು ಪ್ರಜಾತಂತ್ರದ ಸಮಕಾಲೀನ ಇತಿಹಾಸ ಸ್ಪಷ್ಟಪಡಿಸುತ್ತವೆ. ಹೀಗಾಗಿಯೇ ಅಂಬೇಡ್ಕರ್ ಅವರು ರಾಜಕೀಯ ಕ್ರಾಂತಿಗಳಿಗೆ ಮುನ್ನ ಸಾಮಾಜಿಕ ಕ್ರಾಂತಿಯಾಗಬೇಕೆಂದು ಅಭಿಪ್ರಾಯಿಸಿದ್ದರು.

ಅಷ್ಟು ಮಾತ್ರವಲ್ಲದೆ 1947ರಲ್ಲಿ ಬರೆದ ‘States and Minorities’ ಕೃತಿಯಲ್ಲಿ ಸ್ವಾತಂತ್ರ್ಯ, ಸಮಾನತೆ ಮತ್ತು ಬಂಧುತ್ವಗಳು ಅವಿನಾಭಾವಿ ತ್ರಿವಳಿಗಳೆಂದೂ, ಸಮಾನತೆ ಮತ್ತು ಬಂಧುತ್ವಗಳಿಲ್ಲದ ಸಮಾಜದಲ್ಲಿ ಸ್ವಾತಂತ್ರ್ಯವೆಂಬುದು ಉಳ್ಳವರು ಇಲ್ಲದವರನ್ನು ಶೊಷಿಸಲು ಪಡೆದುಕೊಳ್ಳುವ ಶಾಸನವಾಗುತ್ತದೆಂದೂ ಎಚ್ಚರಿಸಿದ್ದರು. ಅಲ್ಲದೆ ಪಾಶ್ಚಿಮಾತ್ಯ ಪ್ರಜಾತಂತ್ರಗಳು ವ್ಯಕ್ತಿ ಸ್ವಾತಂತ್ರ್ಯವನ್ನು ಖಾತರಿ ಪಡಿಸಿದವೇ ವಿನಾ ಸಮಾನತೆಯನ್ನಲ್ಲ. ಹಾಗೆಯೇ ರಶ್ಯ ಮತ್ತು ಚೀನಾದಂತಹ ದೇಶಗಳು ಸಮಾನತೆಯನ್ನು ಖಾತರಿ ಪಡಿಸಿದರೂ ವ್ಯಕ್ತಿ ಸ್ವಾತಂತ್ರ್ಯವನ್ನು ನಗಣ್ಯಗೊಳಿಸಿದವು. ಭಾರತದಲ್ಲಂತೂ ಪ್ರಜಾತಂತ್ರವೆಂಬುದೇ ಎರವಲು ತಂದ ಎರೆಮಣ್ಣು. ಹೀಗಾಗಿ ಇಲ್ಲಿ ವ್ಯಕ್ತಿ ಸ್ವಾತಂತ್ರ್ಯ, ಆರ್ಥಿಕ-ಸಾಮಾಜಿಕ ಸಮಾನತೆಗಳೆಲ್ಲವೂ ಏಕಕಾಲದಲ್ಲಿ ಸಾಧಿಸಬೇಕು. ಅದು ವ್ಯಕ್ತಿ ಸ್ವಾತಂತ್ರ್ಯದಂತೆ, ಸಮಾನತೆಯನ್ನೂ ಮೂಲಭೂತ ಹಕ್ಕನ್ನಾಗಿ ಪರಿಗಣಿಸಿ, ಸಂಪತ್ತನ್ನು ರಾಷ್ಟ್ರೀಕರಿಸುವ ಮೂಲಕ ಸಾಧ್ಯವಾಗಬಹುದು ಎಂದು ಅಭಿಪ್ರಾಯಿಸಿದ್ದರು.

ಆದರೆ 1950ರ ಜನವರಿ 26 ರಂದು ನಾವು ಅಳವಡಿಸಿಕೊಂಡ ಸಂವಿಧಾನದಲ್ಲಿ ವ್ಯಕ್ತಿ ಸ್ವಾತಂತ್ರ್ಯ ಮೂಲಭೂತ ಹಕ್ಕಾಯಿತೇ ವಿನಾ ಆರ್ಥಿಕ-ಸಾಮಾಜಿಕ ಸಮಾನತೆಗಳಲ್ಲ. ಅವುಗಳೆಲ್ಲಾ ಆರ್ಟಿಕಲ್ 38-48ರಲ್ಲಿ ಅಡಕವಾಗಿರುವ ಪ್ರಭುತ್ವ ನಿರ್ದೇಶನಾ ತತ್ವಗಳ ಭಾಗವಾಯಿತು. ಅಂದರೆ ಪ್ರಭುತ್ವಕ್ಕೆ ನೀಡಿದ ಉಪದೇಶಗಳಾಗಿ ಉಳಿದವೇ ವಿನಾ ಜನರು ಚಲಾಯಿಸಬಹುದಾದ ಹಕ್ಕುಗಳಾಗಲಿಲ್ಲ. ಆದ್ದರಿಂದಲೇ ಕಳೆದ 75 ವರ್ಷಗಳಲ್ಲಿ ಅದರಲ್ಲೂ 1991ರ ನಂತರ ಕಾರ್ಪೊರೇಟ್ ಬಂಡವಾಳಶಾಹಿಗಳು ಮತ್ತು ಬ್ರಾಹ್ಮಣಶಾಹಿ ಹಿಂದುತ್ವವಾದಿಗಳು ಪ್ರಜಾತಂತ್ರವನ್ನು ವಿಫಲಗೊಳಿಸಿ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಯನ್ನು ಹೆಚ್ಚಿಸಿದ್ದಾರೆ ಮತ್ತು ಇನ್ನಷ್ಟು ಗಟ್ಟಿಗೊಳಿಸಿದ್ದಾರೆ.

► ಸಾಮಾಜಿಕ ಸಂಬಂಧಗಳನ್ನು ಬದಲಿಸದ ಶಾಸನಗಳ ಬದಲಾವಣೆ

ಹೀಗಾಗಿ ಈ ಕಾಲಘಟ್ಟದಲ್ಲಿ ಎಲ್ಲಾ ಪ್ರಜಾತಂ ತ್ರವಾದಿಗಳು ಕೇಳಿಕೊಳ್ಳಬೇಕಾದ ಪ್ರಶ್ನೆ ಏನೆಂದರೆ ನಮ್ಮ ದೇಶದ ರಾಜಕೀಯ ಪ್ರಜಾತಂತ್ರ ಮತ್ತು ಸಂವಿಧಾನವು ಬ್ರಾಹ್ಮಣಶಾಹಿ ಮತ್ತು ಬಂಡವಾಳಶಾಹಿಯನ್ನು ಏಕೆ ಸೋಲಿಸಲಾಗಲಿಲ್ಲ? ಹಾಗೂ ಅವನ್ನು ಕೇವಲ ಶಾಸನಗಳಿಂದ ಸೋಲಿಸಲು ಸಾಧ್ಯವೇ?

ಬ್ರಾಹ್ಮಣಶಾಹಿ ಮತ್ತು ಬಂಡವಾಳಶಾಹಿಗಳು ಸಾಮಾಜಿಕ ಬೇರುಗಳನ್ನು ಹಾಗೂ ಸಾಂಸ್ಥಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ರಚನೆಗಳನ್ನೂ ಹೊಂದಿರುವ ಅಧಿಕಾರ ರಚನೆಗಳು.

ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗಗಳು, ಪೊಲೀಸ್ ಮತ್ತು ಮಿಲಿಟರಿಗಳು, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ರಚನೆಗಳು ಈ ಅಧಿಕಾರವನ್ನು ಸೈದ್ಧಾಂತಿಕವಾಗಿ, ಶಾಸನಾತ್ಮಕವಾಗಿ, ಸೈನಿಕವಾಗಿ ಮತ್ತು ಸಾಮಾಜಿಕವಾಗಿ ರಕ್ಷಿಸುತ್ತಿರುತ್ತವೆ. ಆದ್ದರಿಂದ ಒಂದು ವೇಳೆ ಶಾಸಕಾಂಗದಲ್ಲಿ ಚುನಾವಣೆಯ ಮೂಲಕ ಕೆಲವು ಪ್ರಾಮಾಣಿಕ ಜನಪರ ಶಕ್ತಿಗಳು ಅಧಿಕಾರಕ್ಕೆ ಬಂದರೂ ಕೆಲವೇ ಕಾಲದಲ್ಲಿ ಉಳಿದ ಅಂಗಸಂಸ್ಥೆಗಳು ಆ ಸರಕಾರಗಳನ್ನು ಹಿಂಸಾತ್ಮಕವಾಗಿ ಕಿತ್ತುಹಾಕುತ್ತವೆ. ಒಂದೊಮ್ಮೆ ಅಧಿಕಾರದಲ್ಲಿ ಉಳಿದರೂ ಅವೂ ಕೂಡ ಉಳ್ಳವರ ಪರವಾದ ರಾಜಿಯೊಂದಿಗೆ ಸರಕಾರ ನಡೆಸಬೇಕಾಗುತ್ತವೆ.

ಸಮಕಾಲೀನ ಇತಿಹಾಸದಲ್ಲಿ ಅದಕ್ಕೆ ಸಾಕಷ್ಟು ಉದಾಹರಣೆಗಳಿವೆ.

ಇಂದಿನ ಫ್ಯಾಶಿಸ್ಟ್ ಸಂದರ್ಭದಲ್ಲಿ ಚುನಾವಣಾ ಪ್ರಜಾತಂತ್ರದಲ್ಲಿ ನಡುಪಂಥವೆಂಬುದು ಬಲದ ಕಡೆಗೆ,

ಎಡಪಂಥವು ನಡುಪಂಥದೆಡೆಗೆ ಸರಿದು, ಜನಪರ ರಾಜಕೀಯಕ್ಕೆ ಸ್ಥಾನವನ್ನೇ ಸಾಂಸ್ಥಿಕವಾಗಿ ಇಲ್ಲವಾಗಿಸಿದೆ.

ಆ ರಾಜಕೀಯಕ್ಕೆ ಮತ್ತೊಮ್ಮೆ ಸ್ಥಾನಮಾನ ಗಳಿಸಿಕೊಳ್ಳಬೇಕೆಂದರೆ ಬಲವಾದ ಜನಚಳವಳಿಗಳಿಲ್ಲದೆ ಸಾಧ್ಯವಿಲ್ಲ.

ಹೀಗಾಗಿ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಗಳನ್ನು ಅಲುಗಾಡಿಸದೆ ಅವುಗಳ ಬುನಾದಿಯ ಮೇಲೆ ರೂಪುಗೊಂಡ ರಾಜಕೀಯ ಪ್ರಜಾತಂತ್ರಗಳು ಅಲ್ಪಸ್ವಲ್ಪ ಸುಧಾರಣೆಗಳನ್ನು ತರಲು ಸಫಲವಾದರೂ ಒಂದು ಸಮಾನತಾ ಸಮಾಜಕ್ಕೆ ಬೇಕಾದ ಪ್ರಜಾತಂತ್ರ ನಿರ್ಮಿಸುವಲ್ಲಿ ವಿಫಲವಾಗುತ್ತವೆ. ಭಾರತದಲ್ಲಿ 1991ರ ನಂತರ ಈ ಸುಧಾರಣೆಗಳು ಕಾರ್ಪೊರೇಟ್ ಬಮ್ಡವಾಳಿ ಸುಧಾರಣೆಗಳಾಗಿವೆಯೇ ವಿನಾ ಜನಪರ ಸುಧಾರಣೆಗಳಾಗಿಲ್ಲ.

► ಫ್ಯಾಶಿಸಂ ಸಾಧನವಾಗಿ ಚುನಾವಣಾ ಪ್ರಜಾತಂತ್ರ

ಇಂದಿನ ಫ್ಯಾಶಿಸ್ಟ್ ಸನ್ನಿವೇಶದಲ್ಲಿ ಚುನಾವಣಾ ಪ್ರಜಾತಂತ್ರವು ಎಲ್ಲಾ ಬಡಿವಾರಗಳನ್ನು ಬಿಟ್ಟು ನಗ್ನ ಸರ್ವಾಧಿಕಾರಿ ಸ್ವಾರೂಪದಲ್ಲಿ ಬೆತ್ತಲಾಗಿ ನಿಂತಿದೆ.

ಚುನಾವಣೆಗಳು ಆಳ್ವಿಕೆಗೆ ಜನಮನ್ನಣೆಯನ್ನು ಖಾತರಿಗೊಳಿಸುತ್ತಿರುವ ಫ್ಯಾಶಿಸ್ಟ್ ಸಾಧನಗಳಾಗುತ್ತಿವೆ. ಏಕೆಂದರೆ ತಳಮಟ್ಟದಲ್ಲಿ ಮತ್ತು ಜನಮಾನಸದಲ್ಲಿ ಗಟ್ಟಿಯಾಗಿ ಬೇರುಬಿಡಲು ಶ್ರಮಿಸುತ್ತಿರುವುದು ಫ್ಯಾಶಿಸ್ಟರೇ. ಫ್ಯಾಶಿಸ್ಟ್ ವಿರೋಧಿ ಶಕ್ತಿಗಳು ಸುಲಭದ ಮತ್ತು ಕಂಫರ್ಟ್ ಮಾರ್ಗಗಳನ್ನು ಆಯ್ಕೆಮಾಡಿಕೊಂಡಂತಿದೆ ಹಾಗೂ ಮೈದಾನದಲ್ಲಿ ಫ್ಯಾಶಿಸ್ಟರಿಗೆ ವಾಕ್ ಓವರ್ ಕೊಟ್ಟಂಥ ಪರಿಸ್ಥಿತಿ ಇದೆ.

ಹೀಗಾಗಿ ಇಂದಿನ ಸಂದರ್ಭದಲ್ಲಿ ಸಮಾಜವಾದ ಹಾಗೂ ಜಾತಿರಹಿತ ಸರ್ವ ಸಮಾನ ಸಮಾಜಗಳನ್ನು ಈ ಬ್ರಾಹ್ಮಣಶಾಹಿ ಮತ್ತು ಬಂಡವಾಳಶಾಹಿಗಳ ಅಧಿಕಾರ ರಚನೆಗಳನ್ನು ನಾಶಗೊಳಿಸುವ ಮೂಲಕ ಮಾತ್ರ ಹಾಗೂ ಅವಕ್ಕೆ ಪರ್ಯಾಯವಾದ ಜಾತಿ ರಹಿತ, ಸಮಾಜವಾದಿ ಅಧಿಕಾರ ರಚನೆಗಳನ್ನು ಕಟ್ಟುವ ಕ್ರಾಂತಿಯ ಮೂಲಕ ಮಾತ್ರ ಸಾಕಾರಗೊಳಿಸಲು ಸಾಧ್ಯ. ಅದು ರಾತ್ರೋರಾತ್ರಿಯೂ ಸಾಧ್ಯವಿಲ್ಲ. ಚುನಾವಣೆಗಳಿಂದಲೂ ಸಾಧ್ಯವಿಲ್ಲ. ಅದಕ್ಕೆ ತಳಸಮುದಾಯದ ನಾಯಕತ್ವದಲ್ಲಿ ಸಮಗ್ರವಾದ,

ದೀರ್ಘಕಾಲೀನ ಹಾಗೂ ರಾಜಿರಹಿತ ಹಾಗೂ ಶೋಷಕ ಪಕ್ಷಗಳು ಕೈ-ಕಾಲು-ಕಿವಿಗಳಾಗಿ ಬಳಸಿಕೊಳ್ಳದಂತೆ ಕಟ್ಟುವ ಚಳವಳಿಯ ಅಗತ್ಯವಿದೆ. ಅದನ್ನು ಹೊರತುಪಡಿಸಿ ಮಿಕ್ಕಿದ್ದೆಲ್ಲಾ ಸದುದ್ದೇಶದ ಕಾಲಕ್ಷೇಪ. ಅಥವಾ ಮಹಾನ್ ಆತ್ಮವಂಚನೆಯಷ್ಟೆ.

ಇಂಥ ಚಳವಳಿಗಳನ್ನು ಕಟ್ಟಬೇಕೆಂದರೆ ಜನರ ವಿಶ್ವಾಸ ಮತ್ತು ಬದ್ಧತೆಗಳನ್ನು ಸಹಜವಾಗಿ ಆರ್ಕಷಿಸುವ ನಡೆ ಮತ್ತು ನುಡಿಗಳಿರಬೇಕು. ಈ ದುರಿತ ಕಾಲದಲ್ಲಿ ಅಂಥ ವಿಶ್ವಾಸವನ್ನು ಪಡೆದುಕೊಳ್ಳಲು ಚಳವಳಿಗಳ ಬಳಿ ಇರುವುದು ತ್ಯಾಗ, ನೈತಿಕತೆ ಮತ್ತು ಪ್ರಾಮಾಣಿಕತೆ. ಶತ್ರು ಮತ್ತು ಮಿತ್ರರು ಯಾರು ಎಂಬ ಬಗ್ಗೆ ಸ್ಪಷ್ಟತೆ. ಬದಲಾವಣೆಯ ಮಾರ್ಗದ ಬಗ್ಗೆ ನಿಖರತೆ ಮತ್ತು ಅದಕ್ಕಾಗಿ ತಮ್ಮನ್ನು ತಾವು ಮುಂಚೂಣಿಯಲ್ಲಿ ನಿಂತು ಅರ್ಪಿಸಿಕೊಳ್ಳಬಹುದಾದ ತ್ಯಾಗ ಮತ್ತು ಬದ್ಧ್ದತೆ.

ಇಂದು ಭಾರತ ಎದುರಿಸುತ್ತಿರುವ ಫ್ಯಾಶಿಸ್ಟ್ ಅಪಾಯ ಹಾಗೂ ಚಳವಳಿಗಳ ಶಕ್ತಿಹೀನತೆಯ ಹಿನ್ನೆಲೆಯಲ್ಲಿ ಈ ಎಚ್ಚರಗಳು ಇನ್ನೂ ಅಗತ್ಯ. ಪ್ರಧಾನ ಶತ್ರುವಾದ ಹಿಂದೂ ಫ್ಯಾಶಿಸಂ ಅನ್ನು ಎದುರಿಸಲು ಅದರಷ್ಟು ಫ್ಯಾಶಿಸ್ಟ್ ಅಲ್ಲದ ಕಾಂಗ್ರೆಸ್ಸ್‌ನೊಂದಿಗೆ ಅನಿವಾರ್ಯ ರೂಪದಲ್ಲಿ ಏರ್ಪಡುವ ಸ್ನೇಹ ನಿಧಾನಕ್ಕೆ ಹೇಗೆ ಒಂದು ಪರ್ಯಾಯವನ್ನು ಕಟ್ಟುವ ಅಗತ್ಯವನ್ನೇ ಮರೆಸಿಬಿಡುತ್ತದೆ ಎಂಬುದಕ್ಕೆ ಕರ್ನಾಟಕದ ಒಂದು ಬಗೆಯ ಚಳವಳಿ ರಾಜಕಾರಣ ದೊಡ್ಡ ದುರಂತ ಉದಾಹರಣೆಯಾಗಿ ನಿಲ್ಲುತ್ತದೆ.

ತಳಸಮುದಾಯಗಳು ವಿಮೋಚನಾವಾದಿ ಸಿದ್ಧಾಂತ, ತಳಮಟ್ಟದ ಸಂಘಟನೆ ಮತ್ತು ಸ್ವತಂತ್ರ ರಾಜಕೀಯ ಶಕ್ತಿಯಾಗದೆ ಫ್ಯಾಶಿಸಂ ಅನ್ನು ಸೋಲಿಸಲು ಸಾಧ್ಯವಿಲ್ಲ. ಅದರಲ್ಲೂ ಬಂಡವಾಳಶಾಹಿ ಮತ್ತು ಬ್ರಾಹ್ಮಣಶಾಹಿ ರಾಜಕೀಯದ ಮತ್ತೊಂದು ಪಕ್ಷವಾಗಿರುವ, ಫ್ಯಾಶಿಸಂ ಅನ್ನು ಸೋಲಿಸುವ ಉದ್ದೇಶವಾಗಲೀ, ಯೋಜನೆಯಾಗಲೀ ಇಲ್ಲದ ಆಳುವ ವರ್ಗದ ಪಕ್ಷವೇ ಆಗಿರುವ ಕಾಂಗ್ರೆಸ್ಸ್‌ನ ಬೆಂಬಲದ ಮೂಲಕ ಫ್ಯಾಶಿಸಂ ಅನ್ನು ಸೋಲಿಸುವುದಿರಲಿ ಬಿಜೆಪಿಯನ್ನು ಚುನಾವಣೆಯಲ್ಲೂ ಸೋಲಿಸಲು ಬರಲಿರುವ ದಿನಗಳಲ್ಲಿ ಸಾಧ್ಯವಿಲ್ಲ.

ಹಳತಿನ ಬಗ್ಗೆ ವಿಶ್ವಾಸ ಕಮರಿ ಹೊಸತಿನ್ನೂ ಹುಟ್ಟದಿರುವ ಈ ನೈತಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಸಮಾನತಾವಾದಿ ಚಳವಳಿಗಳು ಮತ್ತೊಮ್ಮೆ ಮಾಡಿದ ತಪ್ಪನ್ನೇ ಮಾಡದಿರುವುದು ಅತ್ಯಗತ್ಯ ಮಾತ್ರವಲ್ಲ ಐತಿಹಾಸಿಕ ಜವಾಬ್ದಾರಿ ಕೂಡ.

► ಅಂತರಂಗದ ಫ್ಯಾಶಿಸಂ ಸೋಲದೆ ಬಹಿರಂಗದ ಫ್ಯಾಶಿಸಂ ಸೋಲದು.

ಹಾಗೆ ನೋಡಿದರೆ ಯಾವುದೇ ಸಮಾಜದಲ್ಲಿ ಆಳುವ-ಶೋಷಕ ವರ್ಗಗಳು ಭ್ರಷ್ಟರಾಗಿರುವುದು ಅಥವಾ ನೈತಿಕವಾಗಿ ಅಧಃಪತನಗೊಳ್ಳುವುದು ಆಶ್ಚರ್ಯಕರವಲ್ಲ. ಆದರೆ ಇತಿಹಾಸದ ಅತ್ಯಂತ ದುರಂತದ ಕ್ಷಣಗಳು ಎದುರಾಗುವುದು ಅದರ ವಿರುದ್ಧ ಏಳುವ ಬಂಡಾಯಗಳು, ಸಂಘರ್ಷಗಳ ಲೋಕವು ಭ್ರಷ್ಟಗೊಳ್ಳುವುದು ಮತ್ತು ನೈತಿಕವಾಗಿ ಅಧಃಪತನಗೊಳ್ಳುವುದು.

Writer - ವಾರ್ತಾಭಾರತಿ

contributor

Editor - Thouheed

contributor

Byline - ಶಿವಸುಂದರ್

contributor

Similar News