ಫ್ಯಾಶಿಸ್ಟ್ ಕಾಲದಲ್ಲಿ ರಾಜಕೀಯ ಪ್ರಜಾತಂತ್ರದ ಬಡಿವಾರಗಳು

ಭಾಗ- 2
ಇತಿಹಾಸದಲ್ಲಿ ಹಳೆಯ ಆಳುವವರ್ಗಗಳನ್ನು ಸೋಲಿಸಿ ಹೊಸ ವರ್ಗಗಳು ತಮ್ಮ ಐತಿಹಾಸಿಕ ಉದಯವನ್ನು ಸೂಚಿಸುವಾಗಲೆಲ್ಲಾ ಸಂಘರ್ಷ ನಡೆದಿರುವುದು ಕೇವಲ ರಣರಂಗದಲ್ಲಿ ಮಾತ್ರವಲ್ಲ ಅಥವಾ ದೈಹಿಕವಾಗಿ ಮಾತ್ರವಲ್ಲ. ಅಲ್ಲಿ ಹಳೆಯ ಮೌಲ್ಯ ವ್ಯವಸ್ಥೆ ಮತ್ತು ಹೊಸ ಮೌಲ್ಯ ವ್ಯವಸ್ಥೆಗಳ ನಡುವೆಯೂ ಸಂಘರ್ಷ ನಡೆದಿದೆ. ಆದರೆ ಗೆದ್ದವರೇ ಇತಿಹಾಸ ಬರೆಯುವುದರಿಂದ ಈ ಮೌಲ್ಯ ವ್ಯವಸ್ಥೆಗಳ ನಡುವಿನ ಸಂಘರ್ಷದ ಇತಿಹಾಸದಲ್ಲಿ ದಾಖಲಾಗಿರುವುದು ಕಡಿಮೆ. ಅದೇನೇ ಇದ್ದರೂ ಒಂದು ಕ್ರಾಂತಿ ಅಥವಾ ಸಾಮಾಜಿಕ ಬದಲಾವಣೆ ಆಗಬೇಕೆಂದರೆ ಅಥವಾ ಆಗುತ್ತಿದೆ ಎಂದು ಭಾವಿಸಬೇಕಾದರೆ ಸಾರಾಂಶದಲ್ಲಿ ಹಳೆಯ ಮೌಲ್ಯ ವ್ಯವಸ್ಥೆಯ ವಿರುದ್ಧವೂ ಸಂಘರ್ಷ-ಕ್ರಾಂತಿ ನಡೆದಿರಬೇಕು. ಅಂಥ ಮೌಲ್ಯ ಕ್ರಾಂತಿ ಇಲ್ಲದಿರುವ ಯಾವುದೇ ಸಾಮಾಜಿಕ ‘ಹೋರಾಟ’ಗಳು ಅಥವಾ ‘ಕ್ರಾಂತಿ’ಗಳು ಸಾರಾಂಶದಲ್ಲಿ ಒಂದು ನಿಜವಾದ ಅರ್ಥದಲ್ಲಿ ಹೋರಾಟವೆಂದಾಗಲೀ, ಕ್ರಾಂತಿಯೆಂದಾಗಲೀ ಕರೆಸಿಕೊಳ್ಳಲು ಅರ್ಹವಾಗಿರುವುದಿಲ್ಲ. ಅಂತಹ ಕ್ರಾಂತಿಗಳು, ಹೋರಾಟಗಳು ಶೋಷಕ ವ್ಯಕ್ತಿಗಳನ್ನು ಬದಲಿಸಿರುತ್ತದೆಯೇ ವಿನಃ ಶೋಷಕ ಶಕ್ತಿಗಳನ್ನಲ್ಲ.
ಆದ್ದರಿಂದ ಫ್ಯಾಶಿಸಂ ವಿರೋಧಿ ಹೋರಾಟಗಳು ಫ್ಯಾಶಿಸಂ ಅನ್ನು ಒಂದು ಲೋಕ ದೃಷ್ಟಿ, ಸಿದ್ಧಾಂತ, ನೀತಿ ಮತ್ತು ಮೌಲ್ಯವನ್ನಾಗಿ ನೋಡದೆ ಹೊರಗಡೆ ಯಾವುದೋ ಒಂದು ಪಕ್ಷದಲ್ಲಿ ಮಾತ್ರ ಹರಳುಗಟ್ಟಿರುವ ಶತ್ರುವೆಂದು ನೋಡಲು ಸಾಧ್ಯವಿಲ್ಲ.
ಹಾಗೆ ನೋಡಿದರೆ ಹಿಟ್ಲರ್‌ನ ಕ್ರೌರ್ಯಕ್ಕೆ ಸಮ್ಮತಿಸಿದ ಸಾಮಾನ್ಯ ಜರ್ಮನರಲ್ಲೂ ಹಿಟ್ಲರ್ ಮನಸ್ಥಿತಿ ಸೃಷ್ಟಿಯಾದದ್ದು ಹೇಗೆ ಎಂದು ಅರ್ಥವಾಗದೆ, ಅದಕ್ಕೆ ಉತ್ತರ ಹುಡುಕದೆ ಮತ್ತು ಸಮಾಜದ ಬೇರುಗಳಲ್ಲಿ, ಸಮಾಜದ ಮನೆಮನಗಳಲ್ಲಿ ಫ್ಯಾಶಿಸಂ ಅನ್ನು ಸೋಲಿಸದೆ ಶಾಸನವಾಗಿ, ಪಕ್ಷವಾಗಿ ಫ್ಯಾಶಿಸಂ ಅನ್ನು ಸೋಲಿಸಲು ಸಾಧ್ಯವೇ ಇಲ್ಲ.
ಹೀಗಾಗಿ ಚಳವಳಿಗಳು ತಮ್ಮೊಳಗೆ ಇರುವ ಅನ್ಯಾಕ್ರಮಣವಾದಗಳ ನೆಲೆಯನ್ನು ಹುಡುಕಿ ಸೋಲಿಸಿಕೊಳ್ಳುವುದು ಫ್ಯಾಶಿಸಂ ವಿರೋಧಿ ಹೋರಾಟದ ಭಾಗವೇ ಆಗಿರುತ್ತದೆ.
ಎಲ್ಲಾ ಸಾಮಾಜಿಕ ಹೋರಾಟಗಳು ಆಳುವ ಶೋಷಕ ವರ್ಗ ಸಮಾಜದ ಶೋಷಿತ ವರ್ಗ ಅಥವಾ ದಮನಿತ ಸಮುದಾಯಗಳ ಮೇಲೆ ನಡೆಸುವ ಶೋಷಣೆ ಮತ್ತು ದಮನದ ವಿರುದ್ಧ ನಡೆಸುವ ಬಂಡಾಯವೇ ಆಗಿರುತ್ತದೆ. ಇಂದಿನ ಸಂದರ್ಭದಲ್ಲೂ ಅದು ರೈತ ಹೋರಾಟ, ದಲಿತರ ಸಂಘರ್ಷ, ಕನ್ನಡಪರ ಹೋರಾಟ, ಕಾರ್ಮಿಕರ ಪ್ರತಿಭಟನೆ ಯಾವುದೇ ಇರಲಿ ಈ ಎಲ್ಲಾ ಹೋರಾಟಗಳು ತಮ್ಮ ತಮ್ಮ ನೆಲೆಯಲ್ಲಿ ಶೋಷಕ ವರ್ಗಗಳ ಆರ್ಥಿಕ, ಭಾಷಿಕ ಮತ್ತು ಸಾಮಾಜಿಕ ನೀತಿಯನ್ನು ಮಾತ್ರ ಪ್ರಶ್ನಿಸುತ್ತಿರುವುದಿಲ್ಲ. ಅದೇ ಸಮಯದಲ್ಲಿ ಅವು ಆಳುವವರ ದಮನಕಾರಿ ನೀತಿಸಂಹಿತೆ ಮತ್ತು ಮೌಲ್ಯ ವ್ಯವಸ್ಥೆಯನ್ನೂ ಪ್ರಶ್ನಿಸುತ್ತಿರುತ್ತದೆ. ಪ್ರಶ್ನಿಸಬೇಕು.
ಆದರೆ ಆ ಬಗೆಯಲ್ಲಿ ಪ್ರಶ್ನಿಸುವ ನೈತಿಕ ಶಕ್ತಿ ಚಳವಳಿಗೆ ಬರಬೇಕೆಂದರೆ ಅವು ಅದಕ್ಕೆ ಪರ್ಯಾಯವಾದ ಮೌಲ್ಯಗಳನ್ನು ಮತ್ತು ನೀತಿಸಂಹಿತೆಯನ್ನೂ ಪ್ರತಿಪಾದಿಸುತ್ತಿರಬೇಕು ಮತ್ತು ಆಚರಿಸುತ್ತಿರಬೇಕು. ಆಗ ಮಾತ್ರ ಅವು ನಿಜವಾದ ಪರ್ಯಾಯವಾಗಬಲ್ಲವು. ಅಂದರೆ ಜನಪರ ಚಳವಳಿಗಳು ಮತ್ತು ಸಂಘಟನೆಗಳು ಪರ್ಯಾಯವಾದ ಸಂಸ್ಕೃತಿ ಮತ್ತು ನೀತಿಸಂಹಿತೆಗಳನ್ನು ತಮ್ಮ ತಮ್ಮ ಸಂಘಟನೆ, ನಾಯಕತ್ವ ಮತ್ತು ಚಳವಳಿಗಳ ಮೂಲಕ ಮೊದಲಿಂದಲೇ ಕಟ್ಟಬೇಕು. ವಾಸ್ತವವಾಗಿ ಅಂತಹ ಪ್ರಯತ್ನಗಳನ್ನು ಕರ್ನಾಟಕದಲ್ಲಿ 70-80ರ ದಶಕದಲ್ಲಿ ದಲಿತ, ರೈತ, ಕಾರ್ಮಿಕ ಚಳವಳಿಗಳು ಕಟ್ಟಲು ಯತ್ನಿಸಿದ್ದವು. ಅದಕ್ಕೆ ಅವು ರಾಜ್ಯಾಧಿಕಾರ ಪಡೆಯದಿದ್ದರೂ ಪ್ರಬಲ ವಿರೋಧ ಪಕ್ಷಗಳಾಗಿಯೂ, ಪ್ರಬಲ ಪರ್ಯಾಯ ನೈತಿಕ ಶಕ್ತಿಯಾಗಿಯೂ, ಸಮಾಜದ ಸಾಕ್ಷಿಪ್ರಜ್ಞೆಗಳಾಗಿಯೂ ಕೆಲಸ ಮಾಡಿದ್ದವು. ಈಗ ಅಂತಹ ಚಳವಳಿಗಳಲ್ಲಿದ್ದ ಹಲವರು ಅಧಿಕಾರ ಹಂಚಿಕೊಂಡಿದ್ದಾರೆ. ಆದರೆ ಚಳವಳಿಗಳು ಈಗಲೂ ಅದೇ ಬಗೆಯ ಪ್ರಬಲ ನೈತಿಕ ಅಂತಃಸಾಕ್ಷಿಯನ್ನು ಉಳಿಸಿಕೊಂಡಿವೆಯೇ? ಇಂದು ಕರ್ನಾಟಕದಲ್ಲಿ ಚಳವಳಿ ರಾಜಕಾರಣದಲ್ಲಿ ಕಂಡುಬರುತ್ತಿರುವ ಗೊಂದಲಗಳಿಗೂ ಮತ್ತು ಚಳವಳಿಗಳು ಎದುರಿಸುತ್ತಿರುವ ನೈತಿಕ-ಸಾಂಸ್ಕೃತಿಕ ಬಿಕ್ಕಟ್ಟಿಗೂ ಏನಾದರೂ ಸಂಬಂಧವಿರಬಹುದೇ?
ಉದಾಹರಣೆಗೆ ಕಣ್ಣೆದುರಿಗೇ ರೈತರ ಆತ್ಮಹತ್ಯೆಗಳು ದಿನನಿತ್ಯ ನಡೆಯುತ್ತಿದ್ದರೂ ಪ್ರಧಾನಿ ‘ಬಡವರಿಗೆ ಉಚಿತವಾಗಿ ಆಹಾರ ಧಾನ್ಯವನ್ನು ಒದಗಿಸುವುದಕ್ಕಿಂತ ಅದನ್ನು ಗೋಡೌನಿನಲ್ಲಿ ಕೊಳೆಯಲು, ಇಲಿಗಳು ತಿನ್ನಲು ಬಿಡುವುದೇ ಹೆಚ್ಚು ಸೂಕ್ತ. ಏಕೆಂದರೆ ಹಾಗೆ ಉಚಿತವಾಗಿ ಕೊಟ್ಟರೆ ಮಾರುಕಟ್ಟೆ ಆರ್ಥಿಕತೆಯ ಸಹಜ ನಡೆಯಲ್ಲಿ ಮಧ್ಯಪ್ರವೇಶ ಮಾಡಿದಂತಾಗುತ್ತದೆ’ ಎಂದು ಹೇಳುವಾಗ ಅವರು ಕೇವಲ ಒಂದು ಆರ್ಥಿಕ ನೀತಿಯನ್ನು ಪ್ರತಿಪಾದಿಸುತ್ತಿಲ್ಲ. ಬದಲಿಗೆ ಸಹಜೀವಿಗಳು ಹಸಿವಿನಿಂದ ನೊಣಗಳಂತೆ ಸಾಯುತ್ತಿದ್ದರೂ ಕೆಲವರ ಲಾಭವೇ ಮುಖ್ಯ ಎಂಬ ಶೋಷಕ ಮೌಲ್ಯವನ್ನು ಮತ್ತು ನೀತಿಸಂಹಿತೆಯನ್ನು ಪ್ರತಿಪಾದಿಸುತ್ತಿದ್ದಾರೆ. ಪ್ರಧಾನಿಯ ಈ ನೀತಿಯನ್ನು ಪ್ರತಿಭಟಿಸುವ ರೈತಸಂಘಗಳು ಮನಮೋಹನ್ ಸಿಂಗ್ ಪ್ರಣೀತ ಈ ಬಂಡವಾಳಶಾಹಿ ಆರ್ಥಿಕ ನೀತಿಗಳನ್ನು ಮಾತ್ರ ಪ್ರತಿಭಟಿಸಿದರೆ ಸಾಲದು. ಅದರ ಜೊತೆಗೆ ಅದರ ಹಿಂದಿರುವ ಬಂಡವಾಳಶಾಹಿ, ಬರ್ಬರ ನೀತಿಸಂಹಿತೆಯನ್ನೂ ಪ್ರತಿಭಟಿಸಬೇಕಾಗುತ್ತದೆ. ಅದಕ್ಕೇ ಪರ್ಯಾಯವಾದ ನೀತಿಸಂಹಿತೆ ರೈತ ಸಂಘದ ಹೋರಾಟ ಪ್ರಣಾಳಿಕೆಯ ಭಾಗವೇ ಆಗಬೇಕಿರುತ್ತದೆ. ಆರ್ಥಿಕ ನೀತಿಯ ವಿರುದ್ಧದ ಹೋರಾಟ ಧರಣಿ, ಮುತ್ತಿಗೆಗಳ ರೂಪದಲ್ಲಿ ನಡೆಯಬಹುದು. ಆದರೆ ಒಂದು ದಮನಕಾರಿ ನೀತಿ ಸಂಹಿತೆಯ ವಿರುದ್ಧದ ಬಂಡಾಯ ಚಳವಳಿಗಾರರ ಬದುಕಿನಲ್ಲಿ ಮತ್ತು ಚಳವಳಿಗಳ ಸಂಘಟನಾ ನೀತಿ-ಸಂಸ್ಕೃತಿ ಮತ್ತು ಕ್ರಮಗಳಲ್ಲೇ ಪ್ರತಿಫಲಿತವಾಗುವ ಅಗತ್ಯವಿದೆ. ಇಲ್ಲದಿದ್ದರೆ ಅದು ಸಮಗ್ರ ಪ್ರತಿರೋಧವಾಗುವುದೇ ಇಲ್ಲ.
ಅದೇ ರೀತಿ ಕಾರ್ಮಿಕ ಸಂಘಟನೆಗಳು ಬಂಡವಾಳಶಾಹಿ ಮಾಲಕರ ವಿರುದ್ಧ ಹೋರಾಡುವಾಗ ಬಂಡವಾಳಶಾಹಿ ನೀತಿಸಂಹಿತೆಯೇ ಆದ ಸ್ವಾರ್ಥ, ಸುಲಿಗೆಯ ಮನೋಭಾವದ ವಿರುದ್ಧವೂ ಹೋರಾಡದಿದ್ದರೆ ಮತ್ತು ತಮ್ಮ ಸಂಘಟನಾ ಸಂಸ್ಕೃತಿಯಲ್ಲಿ ಮತ್ತು ಹೋರಾಟಗಳಲ್ಲಿ ಇದಕ್ಕೆ ಪರ್ಯಾಯ ಮೌಲ್ಯಗಳಾದ ನಿಸ್ವಾರ್ಥ, ಸಹಕಾರ ಇತ್ಯಾದಿ ಮೌಲ್ಯಗಳು ಮತ್ತು ಇರುವುದನ್ನು ಸಮಾನವಾಗಿ ಹಂಚಿ ತಿನ್ನುವ ಮನೋಭಾವಗಳನ್ನು ಹೊಂದಿರದಿದ್ದರೆ ಆ ಸಂಘಟನೆಯೂ ಗಟ್ಟಿಯಾಗುವುದಿಲ್ಲ, ಹೋರಾಟವೂ ಯಶಸ್ವಿಯಾಗುವುದಿಲ್ಲ. ವಾಸ್ತವವಾಗಿ ಕಾರ್ಮಿಕ ಕ್ರಾಂತಿಯಿಂದ ರಶ್ಯ ಹಾಗೂ ಪೂರ್ವ ಯುರೋಪುಗಳಲ್ಲಿ ರಾಜ್ಯಾಧಿಕಾರ ಪಡೆದ ಕಾರ್ಮಿಕ ವರ್ಗವು ಅಲ್ಲಿ ಅಧಿಕಾರವನ್ನು ಕಳೆದುಕೊಳ್ಳಲು ಪ್ರಧಾನ ಕಾರಣ ಅಲ್ಲಿನ ಕಾರ್ಮಿಕ ವರ್ಗದ ನಾಯಕತ್ವದಲ್ಲಿ ಬಂಡವಾಳಶಾಹಿ ಮೌಲ್ಯಗಳೇ ಕ್ರಮೇಣವಾಗಿ ಆವರಿಸಿಕೊಂಡಿದ್ದು.
ಪರ್ಯಾಯ ಮೌಲ್ಯ ವ್ಯವಸ್ಥೆಯ ಆಧಾರದಲ್ಲಿ ಸಮಾಜವನ್ನು ಕಟ್ಟಲು ಪ್ರಯತ್ನಿಸದೆ ನಾಯಕತ್ವವೇ ಬಂಡವಾಳಶಾಹಿ ನೀತಿ-ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಕ್ರಾಂತಿಗೆ ಮತ್ತು ಕಾರ್ಮಿಕ ವರ್ಗಕ್ಕೆ ದ್ರೋಹ ಬಗೆದದ್ದು.
ಅದೇ ರೀತಿ ಬ್ರಾಹ್ಮಣ್ಯದ ವಿರುದ್ಧ ನಡೆಯಬೇಕಾದ/ ನಡೆಯುತ್ತಿರುವ ದಲಿತ ಸಂಘರ್ಷವೂ ಒಂದು ಪರ್ಯಾಯ ನೀತಿಸಂಹಿತೆಯನ್ನು ಮೈಗೂಡಿಸಿಕೊಳ್ಳಬೇಕಾಗುತ್ತದೆ. ಬ್ರಾಹ್ಮಣ್ಯ ನಿಂತಿರುವುದೇ ತಾರತಮ್ಯ ನೀತಿಯ ಆಧಾರದಲ್ಲಿ ಮತ್ತು ದಮನವನ್ನೂ ಸಹ ತತ್ವದ ಮಟ್ಟಕ್ಕೆ ಏರಿಸುವ ತಾತ್ವಿಕ ಮತ್ತು ನೈತಿಕ ಭ್ರಷ್ಟಾಚಾರದ ಆಧಾರದಲ್ಲಿ. ಹೀಗಾಗಿ ಬ್ರಾಹ್ಮಣ್ಯದ ಈ ಆನೈತಿಕ ತಾತ್ವಿಕ ಸಮರ್ಥನೆಯ ಬೆಂಬಲದೊಂದಿಗೆ ಮೇಲ್ಜಾತಿಗಳು ದಲಿತರ ಮೇಲೆ ನಡೆಸುವ ದೌರ್ಜನ್ಯಗಳ ವಿರುದ್ಧ, ವ್ಯವಸ್ಥಿತ ಅಸಮಾನತೆಯ ವಿರುದ್ಧ ದಲಿತ ಸಂಘಟನೆಗಳು ನಡೆಸುವ ಸಂಘರ್ಷದಲ್ಲಿ, ಈ ಭ್ರಷ್ಟಾಚಾರದ ವಿರುದ್ಧ ಮತ್ತು ಅದನ್ನು ತತ್ವದ ಮಟ್ಟಕ್ಕೆ ಏರಿಸುವ ಬ್ರಾಹ್ಮಣೀಯ ಅನೈತಿಕತೆಯ ವಿರುದ್ಧವೂ ಸಂಘರ್ಷವಿರಬೇಕಾದ ಅಗತ್ಯವಿದೆ. ಅಸಮಾನತೆ ಮತ್ತು ಅಸಮಾನತೆಯನ್ನು ಮುಂದುವರಿಸಲು ಅವರು ಬಳಸುವ ಪ್ರತಿಭೆಯೆಂಬ ಬ್ರಾಹ್ಮಣೀಯ ಕುತರ್ಕದ ವಿರುದ್ಧ ಸಮಾನತೆ ಮತ್ತು ಇವರ ಸಂಚಿನ ಎದುರು ‘ಅಪ್ರತಿಭ’ರಾದವರಿಗೆ ಸಂಪನ್ಮೂಲಗಳಲ್ಲಿ ಮೊದಲ ಆದ್ಯತೆಯೆಂಬ ಒಳಮೀಸಲಾತಿ ಇತ್ಯಾದಿ ನೀತಿಸಂಹಿತೆಯನ್ನು ಅನುಸರಿಸಬೇಕಾಗುತ್ತದೆ. ಯಾವ ಕಾರಣಕ್ಕೂ ಕೆಲವರನ್ನು ಮತ್ತು ತಮ್ಮೊಳಗೆ ಸೇರಿಸಿಕೊಂಡುಬಿಡುವ ಬ್ರಾಹ್ಮಣೀಯ ನೀತಿಗಳ ಬಗ್ಗೆ ಎಚ್ಚರವಾಗಿರುವ ಮತ್ತು ಯಾವ ಕಾರಣಕ್ಕೂ ತಾತ್ವಿಕ ಭ್ರಷ್ಟಾಚಾರಕ್ಕೆ ಒಳಗಾಗದ ಮತ್ತು ಅದರ ಮುಂದುವರಿಕೆಯೇ ಆದ ಆರ್ಥಿಕ ಭ್ರಷ್ಟತೆಗೊಳಗಾಗದಂತಹ ಎಚ್ಚರವನ್ನು ಕಾಪಾಡಿಕೊಳ್ಳಬೇಕಾಗುತ್ತದೆ. ಎಲ್ಲೆಲ್ಲಿ ದಲಿತ ಪ್ರತಿರೋಧಗಳು ಇಂತಹ ಬ್ರಾಹ್ಮಣೀಯ ನೀತಿಸಂಹಿತೆಯ ಜೊತೆ ರಾಜಿ ಮಾಡಿಕೊಂಡಿಲ್ಲವೋ ಅಲ್ಲೆಲ್ಲಾ ಇನ್ನೂ ಹೋರಾಟದ ಕಿಡಿ ಜ್ವಲಂತವಾಗಿದೆ.
ಹಾಗೆಯೇ ಕನ್ನಡದ ಅಸ್ಮಿತೆಯನ್ನು ಎತ್ತಿಹಿಡಿಯಲು ಬಯಸುವ ಕನ್ನಡ ಹೋರಾಟಗಳೂ ಸಹ ದಮನ, ಶೋಷಣೆ, ಭ್ರಷ್ಟಾಚಾರ ರಹಿತವಾದ ನೀತಿ ಸಂಹಿತೆ ಮತ್ತು ಪರ್ಯಾಯ ಮೌಲ್ಯ ಪದ್ಧತಿಗಳನ್ನು ಆಚರಿಸದಿದ್ದರೆ ಅದು ಯಾವುದೇ ‘ಪ್ರಗತಿಪರ’ ಹಣೆಪಟ್ಟಿಯನ್ನು ಹೊರಲೂ ಸಾಧ್ಯವಾಗುವುದಿಲ್ಲ. ಕನ್ನಡದ ಮೇಲೆ ಇಂಗ್ಲಿಷ್ ಅಥವಾ ಸಂಸ್ಕೃತ ಹೇರಿಕೆ ಅಥವಾ ಕೇಂದ್ರದ ತಾರತಮ್ಯ ನೀತಿ ಇತ್ಯಾದಿಗಳ ವಿರುದ್ಧ ಹೋರಾಡುವ ಕನ್ನಡ ಪ್ರಜ್ಞೆ ಸಾರಾಂಶದಲ್ಲಿ ದಮನ, ಶೋಷಣೆ ಮತ್ತು ತಾರತಮ್ಯಗಳನ್ನು ಮಾಡುವ ಅಧಿಕಾರ ಕೇಂದ್ರಗಳ ಜೊತೆ ಯಾವುದೇ ಬಗೆಯ ಅನುಸಂಧಾನಗಳನ್ನು ಇಟ್ಟುಕೊಳ್ಳದಿರುವುದು ಪೂರ್ವಶರತ್ತು.
ಆದರೆ, ಅಂತಹ ಆರ್ಥಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಕೇಂದ್ರಗಳ ಜೊತೆ ಮಾಡಿಕೊಳ್ಳುವ ಅನುಸಂಧಾನಗಳು ಕೇವಲ ತಾಂತ್ರಿಕವಾಗಿ ಉಳಿದುಕೊಳ್ಳದೇ ನೈತಿಕ ಮತ್ತು ಸೈದ್ಧಾಂತಿಕ ನೈಚ್ಯಾನುಸಂಧಾನಕ್ಕೂ ಎಡೆ ಮಾಡಿಕೊಡುತ್ತಿರುವುದನ್ನೇ ನಾವು ಉದ್ದಕ್ಕೂ ನೋಡುತ್ತಾ ಬಂದಿರುವುದು. ಹೀಗಾಗಿಯೇ ಕೆಲವು ಅಪವಾದಗಳನ್ನು ಹೊರತುಪಡಿಸಿದರೆ ಬಹುಪಾಲು ಕನ್ನಡ ಸಂಘಟನೆಗಳು ಕನ್ನಡದ ಮತ್ತು ಕನ್ನಡಿಗರ ನಿಜವಾದ ಹಾಗೂ ಪ್ರಬಲರಾದ ಶತ್ರುಗಳ ಜೊತೆ ರಾಜಿಯನ್ನು ಮಾಡಿಕೊಂಡು, ದುರ್ಬಲರನ್ನು ಮಾತ್ರ ಟಾರ್ಗೆಟ್ ಮಾಡಿಕೊಂಡು ಶೋಷಕ ವರ್ಗಗಳ ರಾಜಕಾರಣವನ್ನೇ ನಡೆಸುತ್ತಿರುವುದು. ಕನ್ನಡಪ್ರಜ್ಞೆಯ ನಿಜವಾದ ಶತ್ರುಗಳಾದ ಬ್ರಾಹ್ಮಣೀಯ ಕೋಮುವಾದಿ ಶಕ್ತಿಗಳೊಂದಿಗೆ ತಾತ್ವಿಕ ಅನುಸಂಧಾನವನ್ನೂ ಮಾಡಿಕೊಂಡು ಒಳಗಿನಿಂದಲೇ ಕನ್ನಡವನ್ನು ಕೊಲ್ಲುತ್ತಿರುವುದು. (ರಾಜ್‌ಕುಮಾರ್‌ರನ್ನು ವೀರಪ್ಪನ್ ಅಪಹರಿಸಿದ್ದಾಗ ಒಂದು ಕನ್ನಡ ಸಂಘಟನೆ ಒಂದು ಧರಣಿ ಕಾರ್ಯಕ್ರಮವನ್ನು ಏರ್ಪಡಿಸಿತ್ತು. ಅಲ್ಲಿ ಮಾತನಾಡಿದ ಒಬ್ಬ ಪ್ರಗತಿಪರ ಕನ್ನಡ ಸಾಹಿತಿ ‘‘ಪ್ರತಿಯೊಬ್ಬ ತಮಿಳಿಗನ ಮನಸ್ಸಿನಲ್ಲಿಯೂ ಒಬ್ಬ ವೀರಪ್ಪನ್ ಇರುತ್ತಾನೆ’’ ಎಂದು ಅಪ್ಪಣೆ ಕೊಡಿಸಿದ್ದರು. ಅದಕ್ಕೆ ಕೆಲವು ದಿನಗಳ ಮುಂಚೆ ಕೋಮುವಾದಿ ಬುದ್ಧಿಜೀವಿಯಾದ ಚಿದಾನಂದ ಮೂರ್ತಿ ‘‘ಪ್ರತಿಯೊಬ್ಬ ಮುಸ್ಲಿಮನ ಮನಸ್ಸಿನಲ್ಲಿಯೂ ಒಂದು ಪಾಕಿಸ್ತಾನವಿರುತ್ತದೆ’’ ಎಂದು ಘೋಷಿಸಿದ್ದರು. ಇಲ್ಲಿ ಅವರಿಬ್ಬರ ಹೇಳಿಕೆಯ ನಡುವೆ ಇರುವ ಸಾಮ್ಯತೆ ಕೇವಲ ವಾಕ್ಯಗಳದ್ದಲ್ಲ. ಭಾಷಾ ದುರಭಿಮಾನ ಮತ್ತು ಧಾರ್ಮಿಕ ದುರಭಿಮಾನಗಳಿಗಿರುವ ಸಾಮ್ಯತೆಯದು. ಎರಡೂ ದುರಭಿಮಾನಗಳು ಫ್ಯಾಶಿಸ್ಟ್ ಆಗಿಬಿಡಬಹುದಾದ ಶಕ್ತಿ ಹೊಂದಿದೆ ಎಂದು ಎಚ್ಚರಿಸುವ ಸಾಮ್ಯತೆಯದು. ಭಾಷಾ ಮತ್ತು ಕೋಮುವಾದಿ ಫ್ಯಾಶಿಸ್ಟ್ ಶಕ್ತಿಗಳ ನಡುವೆ ಏರ್ಪಡುವ ಮೈತ್ರಿಯ ಸಾಧ್ಯತೆಯನ್ನು ಸೂಚಿಸುವ ಸಾಮ್ಯತೆಯದು. ಭಾಷಾ ಹೋರಾಟ ಜನಪರ ಹೋರಾಟವೇ ಆಗಿದ್ದರೂ ಅದನ್ನು ಪ್ರಜಾತಾಂತ್ರಿಕ ನೆಲೆಯಲ್ಲಿ ವಿವರಿಸಿಕೊಳ್ಳದಿದ್ದರೆ ಹೇಗೆ ಅದು ಕೋಮುವಾದಿಯೂ ಆಗಿಬಿಡಬಹುದು ಎಂದು ತೋರಿಸುವ ಸಾಮ್ಯತೆಯದು. ಜನಪರ ಹೋರಾಟಗಳ ಮೌಲ್ಯ ಮತ್ತು ನೀತಿಸಂಹಿತೆ ಶೋಷಣೆ ಮತ್ತು ದಮನ ಮಾಡುವ ಶಕ್ತಿಗಳ ಮೌಲ್ಯವಾದ ತಾರತಮ್ಯ, ದಬ್ಬಾಳಿಕೆ, ಭ್ರಷ್ಟಾಚಾರ ಇವುಗಳಿಗಿಂತ ಭಿನ್ನವಾಗಿರದಿದ್ದರೆ ಅವು ಮತ್ತೊಂದು ಜನವಿರೋಧಿ ಶಕ್ತಿಯೇ ಆಗಿಬಿಡುತ್ತವೆ ಎಂದು ತೋರಿಸುವ ಸಾಮ್ಯತೆಯದು. ಈ ತಾತ್ವಿಕ, ನೈತಿಕ ಭ್ರಷ್ಟಾಚಾರವೇ ಹಲವು ಕನ್ನಡ ಸಂಘಟನೆಗಳು ಕನ್ನಡ ಚಳವಳಿಯನ್ನು ಒಂದು ಉದ್ದಿಮೆಯಾಗಿಯೂ, ದಂಧೆಯನ್ನಾಗಿಯೂ ನಡೆಸುವಷ್ಟು ಮತ್ತು ಅದನ್ನು ಪ್ರಶ್ನಿಸಿದರೂ ಸಮರ್ಥಿಸಿಕೊಳ್ಳುವಷ್ಟು ‘ನೈತಿಕ’ ಬಲವನ್ನು ತಂದುಕೊಟ್ಟಿರುವುದು!!
ಇದೊಂದು ದುರಂತ. ಶೋಷಕ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಅಧಿಕಾರ ಕೇಂದ್ರಗಳ ವಿರುದ್ಧ ನಡೆಯುವ ಬಹುಪಾಲು ಚಳವಳಿಗಳು (ಕೆಲವು ಅಪವಾದಗಳನ್ನು ಹೊರತುಪಡಿಸಿ) ರೂಢಿಗತ ಮೌಲ್ಯ ವ್ಯವಸ್ಥೆಗಳಿಗೆ ಪರ್ಯಾಯವಾದ ನೀತಿಸಂಹಿತೆ ಮತ್ತು ಮೌಲ್ಯ ವ್ಯವಸ್ಥೆಯನ್ನು ಅಂತರಂಗದಲ್ಲಿ ರೂಢಿಸಿಕೊಳ್ಳದಿರುವುದೇ ಇಂದು ಕರ್ನಾಟಕದಲ್ಲಿ ನಾವು ಕಾಣುತ್ತಿರುವ ಪರ್ಯಾಯ ರಾಜಕಾರಣದ ಗೊಂದಲಗಳಿಗೆ ಮತ್ತು ಯೋಜಿತ ಗೊಂದಲಗಳಿಗೆ ಕಾರಣವಿರಬೇಕು.
ಫ್ಯಾಶಿಸಂಗೆ ಪರ್ಯಾಯ ಸೃಷ್ಟಿಯಾಗುವುದು ಶೋಷಣೆ ಮತ್ತು ದಮನಕ್ಕೆ ಪರ್ಯಾಯವಾದ ಮೌಲ್ಯಗಳು ಸಮಾಜದಲ್ಲಿ ಗಟ್ಟಿಗೊಂಡಾಗ ಮಾತ್ರ. ಅದನ್ನು ಸಮಾಜದಲ್ಲಿ ಬೇರೂರಿಸಬೇಕಾಗಿರುವುದು ಸಾಮಾಜಿಕ ಚಳವಳಿಗಳೇ.