ಅಂಬೇಡ್ಕರ್ ದ್ವೇಷಿ, ಸಂವಿಧಾನ ದ್ರೋಹಿಗಳ ‘ಸಂವಿಧಾನ ಸನ್ಮಾನ ಅಭಿಯಾನ’
ಸಂಘಪರಿವಾರದ ಅಂಗಸಂಸ್ಥೆಗಳು ಈಗ ನಡೆಸುತ್ತಿರುವ ‘ಸಂವಿಧಾನ ಸನ್ಮಾನ ಅಭಿಯಾನ’ದಲ್ಲಿ ಸಂವಿಧಾನದ ಹಾಗೂ ಅಂಬೇಡ್ಕರ್‌ರ ನಿಜವಾದ ಅನುಯಾಯಿಗಳು ತಾವೇ ಹೊರತು ಕಾಂಗ್ರೆಸ್ ಅಥವಾ ಇತರ ಪಕ್ಷಗಳಲ್ಲ ಎಂದು ನಂಬಿಸಲು ಹಲವಾರು ಸುಳ್ಳುಗಳನ್ನು, ಐತಿಹಾಸಿಕ ಅರ್ಧ ಸತ್ಯಗಳನ್ನು, ಪ್ರಚಾರ ಮಾಡುತ್ತಿದೆ. ಆ ಮೂಲಕ ತನ್ನ ನಿಜ ಸ್ವರೂಪವಾದ ಅಂಬೇಡ್ಕರ್ ದ್ವೇಷ ಹಾಗೂ ಸಂವಿಧಾನ ದ್ರೋಹವನ್ನು ಮರೆಮಾಚುವ ಕುತಂತ್ರ ನಡೆಸಿದೆ.. ಈ ಸರಣಿ ಲೇಖನವು ಸಂಘಿ ಅಭಿಯಾನದ ಸುಳ್ಳುಗಳನ್ನು, ಬಯಲಿಗೆಳೆಯಲಿದೆ ಮತ್ತು ಸಂಘಿಗಳ ಅಸಲಿ ಪಾತ್ರವನ್ನು ಮತ್ತು ಹಾಲಿ ದುರುದ್ದೇಶಗಳನ್ನು ಅನಾವರಣ ಮಾಡಲಿದೆ.. ಕರ್ನಾಟಕದ ರಾಜಕೀಯ ಆರೋಗ್ಯದ ಹಿತದೃಷ್ಟಿಯಿಂದ ಈ ಸರಣಿಯನ್ನು ಪ್ರಕಟಿಸಲಾಗುತ್ತಿದೆ.
ಸರಣಿ- 10
6. ತುರ್ತುಸ್ಥಿತಿ ಘನಘೋರ ಆದರೆ ಬೆಂಬಲಿಸಿತ್ತೇಕೆ ಸಂಘಪರಿವಾರ?!
ತುರ್ತುಸ್ಥಿತಿಯನ್ನು ಘೋಷಿಸಲು ಕಾರಣವಾದ ರಾಜಕೀಯ ಹೋರಾಟಗಳಲ್ಲಿ ಆರೆಸ್ಸೆಸ್ ಮತ್ತು ಅದರ ಜನಸಂಘ ಹಾಗೂ ಇತರ ಅಂಗಸಂಸ್ಥೆಗಳ ಪಾತ್ರ ಒಂದಿಷ್ಟಿದ್ದದ್ದು ನಿಜ. ಆದರೆ, ತುರ್ತುಸ್ಥಿತಿಯನ್ನು ಘೋಷಿಸಿದ ನಂತರ ಆರೆಸ್ಸೆಸ್ ಮತ್ತು ಭಾರತೀಯ ಜನಸಂಘದ ನಾಯಕರು ತಾವು ಸರ್ವಾಧಿಕಾರಿ ಎಂದು ಕರೆಯುತ್ತಿದ್ದ ಇಂದಿರಾಗಾಂಧಿಯವರ ಜೊತೆ ಗುಪ್ತ ಒಪ್ಪಂದವನ್ನು ಮಾಡಿಕೊಂಡು ಎಮರ್ಜೆನ್ಸಿಯನ್ನು ಬೆಂಬಲಿಸಿದ್ದು ಕೂಡಾ ಅಷ್ಟೇ ನಿಜ.
ಇತಿಹಾಸದ ಈ ಅತ್ಯಂತ ಅಪಮಾನಕಾರಿ ಪುಟಗಳನ್ನು ಹಾಗೂ ತಮ್ಮ ಈ ಅವಕಾಶವಾದಿ ಜನದ್ರೋಹಿ ಧೋರಣೆಗಳನ್ನು ಬಿಜೆಪಿ-ಸಂಘಪರಿವಾರ ಮುಚ್ಚಿಹಾಕಲು ಸತತವಾಗಿ ಪ್ರಯತ್ನಿಸುತ್ತಲೇ ಇದೆ. ಪ್ರಸಕ್ತ ಸಂವಿಧಾನ ಸನ್ಮಾನ ಅಭಿಯಾನದಲ್ಲೂ ಕಾಂಗ್ರೆಸ್‌ನ ಬಗ್ಗೆ ಅರ್ಧಸತ್ಯಗಳನ್ನು ಹೇಳುತ್ತಿರುವ ಸಂಘಿಗಳು ತಮ್ಮ ಸಂವಿಧಾನ ದ್ರೊಹದ ಬಗ್ಗೆ ಮಹಾ ಮೌನ ಅಥವಾ ಹಸಿಸುಳ್ಳುಗಳನ್ನು ಹೇಳುತ್ತಿವೆ. ಆದರೆ ಆ ಕಾಲದ ಅವರ ಬರಹಗಳು ಮತ್ತು ಅವರ ನಾಯಕರುಗಳೇ ದಾಖಲಿಸಿರುವ ಇತಿಹಾಸಗಳು ಹೇಗೆ ಸಂಘಪರಿವಾರದ ನಾಯಕರು ಎಮರ್ಜೆನ್ಸಿಯನ್ನು ಗುಪ್ತವಾಗಿ ಬೆಂಬಲಿಸಿದ್ದರು ಎಂಬ ಬಗ್ಗೆ ಸಾಕಷ್ಟು ಪುರಾವೆಗಳನ್ನು ಒದಗಿಸುತ್ತವೆ.
ಅಟಲ್ ಬಿಹಾರಿ ವಾಜಪೇಯಿಯವರು ಅರೆಕ್ಷಣವೂ ಜೈಲಿನಲ್ಲಿರಲಿಲ್ಲ!
ತುರ್ತುಸ್ಥಿತಿಯ 20 ತಿಂಗಳುಗಳಲ್ಲಿ ಅತಿ ಹೆಚ್ಚು ಭಾಗ ಅಟಲ್ ಬಿಹಾರಿ ವಾಜಪೇಯಿಯವರು ಪೆರೋಲ್ ಮೇಲೆ ಮನೆಯಲ್ಲಿ ಕಳೆದಿದ್ದರು ಹಾಗೂ ಪೆರೋಲ್ ಪಡೆದುಕೊಳ್ಳಲು ತುರ್ತುಸ್ಥಿತಿಯನ್ನು ತಾವು ವಿರೋಧಿಸುವುದಿಲ್ಲ ಎಂದು ಮುಚ್ಚಳಿಕೆಯನ್ನೂ ಬರೆದುಕೊಟ್ಟಿದ್ದರು!
ಇದನ್ನು ದಾಖಲೆ ಸಮೇತ ಜನರ ಗಮನಕ್ಕೆ ತಂದಿದ್ದು ಕಮ್ಯುನಿಷ್ಟರೂ ಅಲ್ಲ, ಸಮಾಜವಾದಿಗಳೂ ಅಲ್ಲ. ಬದಲಿಗೆ ಬಿಜೆಪಿ ಪಕ್ಷದ ಪ್ರಮುಖ ನಾಯಕರಲ್ಲೊಬ್ಬರಾದ ಸುಬ್ರಮಣಿಯನ್ ಸ್ವಾಮಿಯವರು.
2000ನೇ ಇಸವಿಯ ಜೂನ್ 13ರಂದು ‘ದಿ ಹಿಂದೂ’ ಪತ್ರಿಕೆಗೆ ಬರೆದ ‘The Unlearnt Lessons Of Emergency’ ಎಂಬ ಸುದೀರ್ಘ ಲೇಖನದಲ್ಲಿ ಸುಬ್ರಮಣಿಯನ್ ಸ್ವಾಮಿಯವರು ಹೇಗೆ ಆರೆಸ್ಸೆಸ್ ಮತ್ತು ಜನಸಂಘದ ಹಲವಾರು ನಾಯಕರು ಇಂದಿರಾಗಾಂಧಿಯವರ ಜೊತೆಗೆ ಗುಪ್ತ ಮಾತುಕತೆಗಳಲ್ಲಿ ತೊಡಗಿದ್ದರು ಎಂಬುದನ್ನು ಬಯಲಿಗೆಳೆಯುತ್ತಾರೆ.
ಅದರಲ್ಲೂ ಅಟಲ್ ಬಿಹಾರಿ ವಾಜಪೇಯಿಯವರು ಬಂಧನಕ್ಕೊಳಗಾದ ಕೆಲವೇ ದಿನಗಳಲ್ಲಿ ಇಂದಿರಾಗಾಂಧಿಯವರ ಜೊತೆ ಒಂದು ಒಪ್ಪಂದಕ್ಕೆ ಬರುತ್ತಾರೆ. ತಮಗೆ ಪೆರೋಲ್ ನೀಡಿ ಹೊರಬರಲು ಅವಕಾಶ ನೀಡಿದರೆ ತಾವು ಸರಕಾರಿ ವಿರೋಧಿ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲವೆಂದು ಮುಚ್ಚಳಿಕೆ ಬರೆದುಕೊಟ್ಟು ಹೊರಬರುತ್ತಾರೆ. ಹಾಗೆಯೇ ಹೊರಗಿದ್ದ ಅಷ್ಟೂ ಅವಧಿಯಲ್ಲಿ ಸರಕಾರ ಹೇಳಿದಂತೆ ನಡೆದುಕೊಳ್ಳುತ್ತಾರೆ ಎಂದು ಅವರು ದಾಖಲಿಸಿದ್ದಾರೆ.
ಇದು ಆಶ್ಚರ್ಯವೂ ಅಲ್ಲ. ಹೊಸತೂ ಅಲ್ಲ. ಏಕೆಂದರೆ, ವಾಜಪೇಯಿಯವರು ಸ್ವಾತಂತ್ರ್ಯ ಪೂರ್ವದಲ್ಲಿ ಸಹ ಹೀಗೆ ಮಾಡಿದ್ದರು. 1942ರ ಕ್ವಿಟ್ ಇಂಡಿಯಾ ಚಳವಳಿಯ ಪ್ರದರ್ಶನವೊಂದನ್ನು ನೋಡುತ್ತಿದ್ದಾಗ ಬ್ರಿಟಿಷ್ ಸರಕಾರದಿಂದ ಬಂಧಿಸಲ್ಪಟ್ಟ ವಾಜಪೇಯಿಯವರು, ಆಗಲೂ ಬಂಧನದಿಂದ ಹೊರಬಂದದ್ದು ತಮ್ಮ ಪರಿಚಿತ ಚಳವಳಿಗಾರರ ಹೆಸರನ್ನು ಬಿಟ್ಟುಕೊಟ್ಟು ಮತ್ತು ಇನ್ನೆಂದಿಗೂ ಬ್ರಿಟಿಷ್ ಸರಕಾರದ ವಿರೋಧಿ ಚಳವಳಿಯಲ್ಲಿ ಭಾಗವಹಿಸುವುದಿಲ್ಲ ಎಂದು ಬರೆದುಕೊಟ್ಟೇ ಅಲ್ಲವೇ?
ಇಂದಿರಾ ಗಾಂಧಿಗೆ ಶರಣಾದ ಆರೆಸ್ಸೆಸ್‌ನ ಸರೆಂಡರ್ ಡಾಕ್ಯುಮೆಂಟ್
ಅದೇ ಲೇಖನದಲ್ಲಿ ಸುಬ್ರಮಣಿಯನ್ ಸ್ವಾಮಿಯವರು ಹೇಗೆ ಆರೆಸ್ಸೆಸ್‌ನ ನಾಯಕರು 1976ರ ಡಿಸೆಂಬರ್ ಹೊತ್ತಿಗೆ ಇಂದಿರಾಗಾಂಧಿಯವರ ಎಮರ್ಜೆನ್ಸಿಗೆ ಸಂಪೂರ್ಣ ಹಾಗೂ ಬಹಿರಂಗ ಬೆಂಬಲ ಘೋಷಿಸುವ ‘ಸರೆಂಡರ್ ಡಾಕ್ಯುಮೆಂಟ್’ಗೆ ಸಹಿಹಾಕಲು ತೀರ್ಮಾನ ತೆಗೆದುಕೊಂಡಿದ್ದರು ಎಂಬುದನ್ನು ವಿವರಿಸುತ್ತಾರೆ.
ವಾಸ್ತವವಾಗಿ ತುರ್ತುಸ್ಥಿತಿಯ ಘೋಷಣೆಯಾದ ನಂತರ ಸರಕಾರಕ್ಕೆ ವಿರೋಧ ಮಾಡದಂತೆ ಸಂಘಟನಾತ್ಮಕ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿಯನ್ನು ಆರೆಸ್ಸೆಸ್‌ನ ಹಿರಿಯ ನಾಯಕ ಮಧುಕರ್ ಮೂಳೆಯವರಿಗೆ ವಹಿಸಲಾಗಿತ್ತು. ಸರಕಾರದೊಡನೆ ಸಂಧಾನ ಮಾತುಕತೆಯ ಜವಾಬ್ದಾರಿಯನ್ನು ರಾನಡೆಯವರಿಗೆ ವಹಿಸಲಾಗಿತ್ತು. ಸುಬ್ರಮಣಿಯನ್ ಸ್ವಾಮಿಯವರಿಗೆ ಅಮೆರಿಕವನ್ನೂ ಒಳಗೊಂಡಂತೆ ವಿದೇಶಗಳಲ್ಲಿ ಎಮರ್ಜೆನ್ಸಿ ವಿರೋಧಿ ಹೋರಾಟದ ಬಗ್ಗೆ ಸರಕಾರಗಳ ಬೆಂಬಲ ಪಡೆದುಕೊಳ್ಳುವ ಜವಾಬ್ದಾರಿಯನ್ನು ವಹಿಸಲಾಗಿತ್ತು. ಆದರೆ 1976ರ ನವೆಂಬರ್‌ನಲ್ಲಿ ಮಧುಕರ್ ಮೂಳೆಯವರು ಸುಬ್ರಮಣಿಯನ್ ಸ್ವಾಮಿಯವರಿಗೆ ತಮ್ಮ ಪ್ರಯತ್ನಗಳನ್ನು ನಿಲ್ಲಿಸಲು ಅತ್ಯಂತ ವಿಷಾದದಿಂದ ಸಲಹೆ ಮಾಡುತ್ತಾರೆ. ಏಕೆಂದರೆ:
‘‘the RSS had finalised the document of surrender to be signed at the end of January ೧೯೭೭’’
-ಆರೆಸ್ಸೆಸ್ 1977ರ ಜನವರಿಯ ಕೊನೆಯ ವೇಳೆಗೆ ಶರಣಾಗತಿ ಒಪ್ಪಂದಕ್ಕೆ ಸಹಿ ಹಾಕಲು ತೀರ್ಮಾನಿಸಿದೆ- ಎಂದು ಮಧುಕರ್ ಮೂಳೆಯವರು ವಿಷಾದದಿಂದ ನನಗೆ ತಿಳಿಸಿದರು ಎಂದು ಸುಬ್ರಮಣಿಯನ್ ಸ್ವಾಮಿಯವರು ಆ ಲೇಖನದಲ್ಲಿ ದಾಖಲಿಸುತ್ತಾರೆ.
ಹೆಚ್ಚಿನ ವಿವರಗಳಿಗೆ ಆಸಕ್ತರು ಸುಬ್ರಮಣಿಯನ್ ಸ್ವಾಮಿಯವರ ಲೇಖನವನ್ನು ಈ ವೆಬ್ ವಿಳಾಸದಲ್ಲಿ ಓದಬಹುದು.
https://www.thehindu.com/todays-paper/tp-miscellaneous/tp-others/unlearnt-lessons-of-the-emergency/article೨೮೦೨೬೯೬೮.ece
ಆರೆಸ್ಸೆಸ್ ನಾಯಕರ ಈ ಸರೆಂಡರ್ ತೀರ್ಮಾನದ ಬಗ್ಗೆ ಆ ದಿನಗಳಲ್ಲಿ ಐಬಿಯ ಮುಖ್ಯಸ್ಥರಾಗಿದ್ದ ಟಿ.ವಿ. ರಾಜೇಶ್ವರ್ ಅವರು ತಮ್ಮ ‘India-Crucial Years’ ಪುಸ್ತಕದಲ್ಲೂ ದಾಖಲಿಸಿದ್ದಾರೆ. ಹಾಗೆಯೇ ಈ ವಿದ್ಯಮಾನವನ್ನು ಆ ದಿನಗಳಲ್ಲಿ ಇಂದಿರಾಗಾಂಧಿಯವರ ವಾರ್ತಾಧಿಕಾರಿಯಾಗಿದ್ದ ಹಿರಿಯ ಪತ್ರಕರ್ತ ಎಚ್.ವೈ. ಶಾರದಾಪ್ರಸಾದ್ ಅವರೂ ದಾಖಲಿಸಿರುವುದನ್ನು ಅವರ ಮಗ ರವಿ ವಿಶ್ವೇಶ್ವರ ಶಾರದಾ ಪ್ರಸಾದ್ ಅವರು ‘ದಿ ಪ್ರಿಂಟ್’ ವೆಬ್‌ಪತ್ರಿಕೆಗೆೆ ಬರೆದ ಲೇಖನದಲ್ಲಿ ನೆನಪಿಸಿದ್ದಾರೆ. (https://theprint.in/opinion/rss-leaders-deserted-jayaprakash-resistance-during-indira-emergency/೪೪೮೨೯೪/)