ಅಂಬೇಡ್ಕರ್ ದ್ವೇಷಿ, ಸಂವಿಧಾನ ದ್ರೋಹಿಗಳ ‘ಸಂವಿಧಾನ ಸನ್ಮಾನ ಅಭಿಯಾನ’
ಸಂಘಪರಿವಾರದ ಅಂಗಸಂಸ್ಥೆಗಳು ಈಗ ನಡೆಸುತ್ತಿರುವ ‘ಸಂವಿಧಾನ ಸನ್ಮಾನ ಅಭಿಯಾನ’ದಲ್ಲಿ ಸಂವಿಧಾನದ ಹಾಗೂ ಅಂಬೇಡ್ಕರ್‌ರ ನಿಜವಾದ ಅನುಯಾಯಿಗಳು ತಾವೇ ಹೊರತು ಕಾಂಗ್ರೆಸ್ ಅಥವಾ ಇತರ ಪಕ್ಷಗಳಲ್ಲ ಎಂದು ನಂಬಿಸಲು ಹಲವಾರು ಸುಳ್ಳುಗಳನ್ನು, ಐತಿಹಾಸಿಕ ಅರ್ಧ ಸತ್ಯಗಳನ್ನು, ಪ್ರಚಾರ ಮಾಡುತ್ತಿದೆ. ಆ ಮೂಲಕ ತನ್ನ ನಿಜ ಸ್ವರೂಪವಾದ ಅಂಬೇಡ್ಕರ್ ದ್ವೇಷ ಹಾಗೂ ಸಂವಿಧಾನ ದ್ರೋಹವನ್ನು ಮರೆಮಾಚುವ ಕುತಂತ್ರ ನಡೆಸಿದೆ.. ಈ ಸರಣಿ ಲೇಖನವು ಸಂಘಿ ಅಭಿಯಾನದ ಸುಳ್ಳುಗಳನ್ನು, ಬಯಲಿಗೆಳೆಯಲಿದೆ ಮತ್ತು ಸಂಘಿಗಳ ಅಸಲಿ ಪಾತ್ರವನ್ನು ಮತ್ತು ಹಾಲಿ ದುರುದ್ದೇಶಗಳನ್ನು ಅನಾವರಣ ಮಾಡಲಿದೆ.. ಕರ್ನಾಟಕದ ರಾಜಕೀಯ ಆರೋಗ್ಯದ ಹಿತದೃಷ್ಟಿಯಿಂದ ಈ ಸರಣಿಯನ್ನು ಪ್ರಕಟಿಸಲಾಗುತ್ತಿದೆ.
ಸರಣಿ- 6
ಸಂಘಿ ಅಭಿಯಾನ ಒಂದು ಹಸಿಸುಳ್ಳನ್ನು ಬಿತ್ತುತ್ತಿದೆ. ಕಾಂಗ್ರೆಸ್ ಪಕ್ಷ ಹಿಂದೂ ಬಹುಸಂಖ್ಯಾತರಿದ್ದ ಖುಲ್ನಾ ಕ್ಷೇತ್ರವನ್ನು ಪಾಕಿಸ್ತಾನಕ್ಕೆ ಉದ್ದೇಶಪೂರ್ವಕವಾಗಿ ಬಿಟ್ಟುಕೊಟ್ಟಿದ್ದರಿಂದ ಅಂಬೇಡ್ಕರ್ ಸದಸ್ಯತ್ವ ಹೋಯಿತೆನ್ನುವುದು ಅವರ ವಾದ. ಆದರೆ ಈ ಕ್ಷೇತ್ರದಲ್ಲಿ ಸವರ್ಣೀಯರಿಗಿಂತ ತಳಸಮುದಾಯದ ಜನರೇ ಹೆಚ್ಚು. ವಾಸ್ತವದಲ್ಲಿ ಮಂಡಲ್ ನೇತೃತ್ವದಲ್ಲಿ ಫೆಡರೇಶನ್ ದೇಶ ವಿಭಜನೆಯ ವಿರುದ್ಧ ಕೊನೆಯ ನಿಮಿಷದವರೆಗೂ ಪ್ರಚಾರ ಮಾಡುತ್ತದೆ.
1946ರ ಫಲಿತಾಂಶ: ಮುಂದುವರಿದ ಸವರ್ಣೀಯ ವಿಜಯ ಮತ್ತು ಅಂಬೇಡ್ಕರ್ ಸೋಲು
ಈ ಎಲ್ಲಾ ಕಾರಣದಿಂದ ಮುಂಬೈ ಮತ್ತು ಇಡೀ ಭಾರತದಲ್ಲಿ ಸರ್ದಾರ್ ಪಟೇಲರ ವಿಶೇಷ ಮುತುವರ್ಜಿಯಿಂದ ಚುನಾವಣೆ ನಡೆಯಿತು ಹಾಗೂ ಆ ಚುನಾವಣೆಯಲ್ಲಿ ಅಂಬೇಡ್ಕರ್ ಸೋತರು ಮತ್ತು ಅವರ AISCF (All India Scheduled Caste Federation) ಪಕ್ಷ ಕೂಡ ಘೋರವಾಗಿ ಸೋಲನ್ನಪ್ಪಿತು. 151 ಮೀಸಲು ಮತಕ್ಷೇತ್ರಗಳಲ್ಲಿ ಅಂಬೇಡ್ಕರ್‌ರ ಫೆಡರೇಶನ್ ಗೆದ್ದದ್ದು ಕೇವಲ ಎರಡು ಕ್ಷೇತ್ರಗಳಲ್ಲಿ ಮಾತ್ರ. ಅದರಲ್ಲಿ ಒಬ್ಬರು ಬಂಗಾಳದ ದಕ್ಷಿಣ ಬರಿಸಲ್ ಕ್ಷೇತ್ರದಿಂದ ಆಯ್ಕೆಯಾದ ಕಟ್ಟಾ ಅಂಬೇಡ್ಕರ್‌ವಾದಿ ಜೋಗೇಂದ್ರನಾಥ್ ಮಂಡಲ್.
ಫೆಡರೇಶನ್ ಸೋಲಿಗೆ ಕಾರಣವಿತ್ತು. ಇದು ಪೂನ ಒಪ್ಪಂದ ಸ್ವಾಯತ್ತ ಮತ್ತು ಸ್ವಾಭಿಮಾನಿ ದಲಿತ ರಾಜಕಾರಣದ ಮೇಲೆ ಸವರ್ಣೀಯ ರಾಜಕಾರಣ ಹೇರಿದ ಸೋಲಾಗಿತ್ತು. ಅದರಲ್ಲಿ ಕಾಂಗ್ರೆಸ್‌ನಷ್ಟೇ ಹಿಂದೂ ಮಹಾಸಭಾಗೂ ಸರಿಸಮ ಪಾಲಿತ್ತು.
ಆಗ ಸಾರ್ವತ್ರಿಕ ಮತದಾನವೂ ಇರಲಿಲ್ಲ. ಆಸ್ತಿವಂತರು ಮತ್ತು ವಿದ್ಯಾವಂತರಿಗೆ ಮಾತ್ರ ಮತದಾನದ ಹಕ್ಕಿತ್ತು. ಇದರಿಂದಾಗಿಯೂ ಅಸ್ಪಶ್ಯ ಮತದಾರರ ಸಂಖ್ಯೆ ಅದರಲ್ಲೂ ಜಾಗೃತ ಮತದಾರರ ಸಂಖ್ಯೆ ಸವರ್ಣೀಯ ಹಿಂದೂಗಳಿಗೆ ಹೋಲಿಸಿದಲ್ಲಿ ಕಡಿಮೆಯೇ ಇತ್ತು. ಹೀಗಾಗಿ ಜಂಟಿ ಮತದಾನ ನಡೆದಾಗ ಸವರ್ಣೀಯರ ರಾಜಕೀಯ ಮತ್ತು ಸಂಖ್ಯಾ ಬಲವೇ ಮೀಸಲು ಕ್ಷೇತ್ರದ ಫಲಿತಾಂಶ ನಿರ್ಧರಿಸುತ್ತಿತ್ತು. ಈಗಲೂ ನಡೆಯುತ್ತಿರುವುದು ಅದೇ ಅಲ್ಲವೇ?
ಇದಲ್ಲದೆ ಆಗಿನ ಬ್ರಿಟಿಷ್ ಪೊಲೀಸ್ ದಾಖಲೆೆಗಳೇ ತಿಳಿಸುವಂತೆ ಹಾಗೂ ಚುನಾವಣೆಯ ನಂತರ ಅಂಬೇಡ್ಕರ್ ಮತ್ತು ಬಂಗಾಳದ ಫೆಡರೇಶನ್ ನಾಯಕ ಮತ್ತು ಜೋಗೇಂದ್ರನಾಥ್ ಮಂಡಲ್ ಬ್ರಿಟಿಷ್ ವೈಸ್‌ರಾಯ್‌ಗೆ ಬರೆದ ಪತ್ರಗಳಲ್ಲಿ ಸ್ಪಷ್ಟವಾಗಿರುವಂತೆ ಅಂಬೇಡ್ಕರ್ ಮತ್ತು ಅವರ ಶೆಡ್ಯೂಲ್ಡ್ ಕಾಸ್ಟ್ ಫೆೆಡರೇಶನ್ ಅನ್ನು ಸೋಲಿಸಲು ಕಾಂಗ್ರೆಸ್ ಮತ್ತು ಹಿಂದೂ ಮಹಾಸಭಾ ಹಣ ಹಂಚಿಕೆ, ಅಪಪ್ರಚಾರ, ಬೆದರಿಕೆ, ಪ್ರಾಕ್ಸಿ ಮತದಾನ, ಮತಪಟ್ಟಿ ಹೇರಾಫೇರಿ ಎಲ್ಲವನ್ನೂ ಮಾಡಿದ್ದವು. ಏಕೆಂದರೆ ಮೀಸಲು ಕ್ಷೇತ್ರಗಳಲ್ಲೂ ಕಾಂಗ್ರೆಸೇ ಗೆಲ್ಲಬೇಕಿತ್ತು ಮತ್ತು ಆ ಮೂಲಕ ಅಸ್ಪಶ್ಯರ ಅಸಲಿ ಪ್ರತಿನಿಧಿ ತಾನೇ ಹೊರತು ಅಂಬೇಡ್ಕರ್ ಅಲ್ಲ ಮತ್ತು ಅಸ್ಪಶ್ಯರು ಹಿಂದೂಗಳ ಭಾಗವೇ ಹೊರತು ಪ್ರತ್ಯೇಕವಲ್ಲ ಎಂದು ಸಾಧಿಸಿ ತೋರಬೇಕಿತ್ತು.
ಇದರಿಂದಾಗಿ ಅಂಬೇಡ್ಕರ್ ಅವರು ಸಂವಿಧಾನ ಸಭೆಗೆ ಆಯ್ಕೆಯಾಗುವ ಅವಕಾಶವನ್ನು ಪಟೇಲ-ನೆಹರೂ ನೇತೃತ್ವದ ಕಾಂಗ್ರೆಸ್ ಹಾಗೂ ಹಿಂದೂ ಮಹಾಸಭಾ ನುಚ್ಚುನೂರು ಮಾಡಿತ್ತು. ಇದರ ಮಧ್ಯೆ ಅಂಬೇಡ್ಕರ್ ತಾನು ಸಂವಿಧಾನ ಸಭೆಯ ಚುನಾವಣೆಗೆ ನಿಂತರೂ ಮುಂಬೈ ಪ್ರಾಂತದಿಂದ ಗೆಲ್ಲುವುದು ಅಸಾಧ್ಯ ಎಂದು ಅರಿತು ಬಂಗಾಳ ಪ್ರಾಂತದ ಯುರೋಪಿಯನ್ ಸದಸ್ಯರ ಬೆಂಬಲ ಯಾಚಿಸುತ್ತಾರೆ. ಆದರೆ ಅ ಸದಸ್ಯರು ಮತದಾನದಿಂದ ಹೊರಗುಳಿಯುವ ನಿರ್ಧಾರ ತೆಗೆದುಕೊಂಡಿರುತ್ತಾರೆ.
ಆಗ ಕಟ್ಟಾ ಅಂಬೇಡ್ಕರ್‌ವಾದಿ ಮತ್ತು ಫೆಡರೇಶನ್‌ನಿಂದ ಬಂಗಾಳ ಪ್ರಾಂತೀಯ ಶಾಸನ ಸಭೆಗೆ ಆಯ್ಕೆಯಾಗಿದ್ದ ಜೋಗೇಂದ್ರನಾಥ್ ಮಂಡಲ್ ಅವರು ಬಂಗಾಳದ ಖುಲ್ನಾ-ಜೆಸ್ಸುರ್ ಕ್ಷೇತ್ರದಿಂದ ಅಗತ್ಯವಿರುವಷ್ಟು ಚುನಾಯಿತ ಸದಸ್ಯರ ಮತಗಳನ್ನು ಕ್ರೋಡೀಕರಿಸಿ ಅಂಬೇಡ್ಕರ್ ಅವರನ್ನು ಗೆಲ್ಲಿಸಿ ಸಂವಿಧಾನ ಸಭೆಗೆ ಕಳಿಸುವ ತೀರ್ಮಾನ ಮಾಡುತ್ತಾರೆ. ತಾನು ಹಾಗೂ ಇನ್ನಿತರ ಸ್ವತಂತ್ರ ಮತ್ತು ಇತರ ಪಕ್ಷಗಳ ಚುನಾಯಿತ ಪರಿಶಿಷ್ಟರ ಬೆಂಬಲವನ್ನು ಪಡೆದುಕೊಳ್ಳಲು ಉದ್ಯುಕ್ತರಾಗುತ್ತಾರೆ.
ಇದನ್ನು ಶತಾಯ ಗತಾಯ ತಡೆಗಟ್ಟಲು ಕಾಂಗ್ರೆಸ್ ಪಕ್ಷ ಬಂಗಾಳ ಘಟಕವನ್ನು ನಿಯೋಜಿಸುತ್ತದೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಮಾಡಿದ ದ್ರೋಹ ಈಗಾಗಲೇ ದಾಖಲಾಗಿದೆ ಮತ್ತು ಅದನ್ನು ಹೇಗಿದ್ದರೂ ಸಂಘಪರಿವಾರವೂ ಉತ್ಪ್ರೇಕ್ಷಿಸಿ ಹೇಳುತ್ತಲೇ ಇದೆ. ಆದರೆ ಅದು ಬಚ್ಚಿಡುತ್ತಿರುವುದು ಮಂಡಲ್, ಫೆಡರೇಶನ್ ಮತ್ತು ಅಂಬೇಡ್ಕರ್ ವಿರುದ್ಧ ಬಂಗಾಳದ ಹಿಂದೂ ಮಹಾಸಭಾ ಮತ್ತು ಅದರ ನಾಯಕರಾದ ಹಾಗೂ ಆ ನಂತರ ಬಿಜೆಪಿಯ ಪಿತಾಮಹರೂ ಆದ ಶಾಮ್ ಪ್ರಸಾದ್ ಮುಖರ್ಜಿಯವರ ಪಾತ್ರವನ್ನು.
ಸಂವಿಧಾನ ಸಭೆಯ ಚುನಾವಣೆಯಲ್ಲಿ ಏನಾಯಿತೆಂದು ಅರಿಯುವ ಮುಂಚೆ ಜೋಗೇಂದ್ರನಾಥ ಮಂಡಲ್, ಫೆಡರೇಶನ್ ಹಾಗೂ ಸ್ವಾಭಿಮಾನಿ ದಲಿತ ಅಸ್ಮಿತೆಯನ್ನು ನಾಶ ಮಾಡಲು ಅರೆಸ್ಸೆಸ್‌ನ ಕಾಲಾಳುಗಳ ಬೆಂಬಲದೊಂದಿಗೆ ಹಿಂದೂ ಮಹಾಸಭಾ ಮಾಡಿದ ಕುತಂತ್ರಗಳನ್ನು ಅರಿತುಕೊಳ್ಳಬೇಕು.
ಜೋಗೇಂದ್ರನಾಥ್ ಮಂಡಲ್ ಮತ್ತು ದಲಿತದ್ರೋಹಿ ಹಿಂದೂ ಮಹಾಸಭಾ
ಜೋಗೇಂದ್ರನಾಥ ಮಂಡಲ್ ಅವರು ಬಂಗಾಳ ಪ್ರಾಂತದ ಕಟ್ಟಾ ಆಂಬೇಡ್ಕರ್‌ವಾದಿ ಮತ್ತು ಅಂಬೇಡ್ಕರ್ ಅವರು ಸ್ಥಾಪಿಸಿದ ಶೆಡ್ಯೂಲ್ಡ್ ಕಾಸ್ಟ್ ಫೆಡರೇಶನ್‌ನ ಪ್ರಮುಖ ನಾಯಕರು. ಮೊದಲು ಕಾಂಗ್ರೆಸ್‌ಮುಖಿಯಾಗಿದ್ದರೂ ಆನಂತರ ಕಾಂಗ್ರೆಸ್ ಅಥವಾ ಸಭಾ ಅವಲಂಬಿತ ಸವರ್ಣೀಯ ರಾಜಕೀಯ ಗುಲಾಮಗಿರಿಗಿಂತ ಸ್ವತಂತ್ರ, ಸ್ವಾಭಿಮಾನಿ ಮತ್ತು ಸ್ವಾಯತ್ತ ದಲಿತ ರಾಜಕಾರಣ ಮಾತ್ರ ನೈಜ ವಿಮೋಚನೆಯ ಮಾರ್ಗವೆಂಬ ಅಂಬೇಡ್ಕರ್ ಚಿಂತನೆಯನ್ನು ಮನಸಾರೆ ಒಪ್ಪಿಕೊಂಡು ಅದಕ್ಕಾಗಿ ಬಂಗಾಳ ಪ್ರಾಂತ್ಯದಲ್ಲಿ ದಲಿತರನ್ನು ವಿಸ್ತೃತವಾಗಿ ಮತ್ತು ಬಲವಾಗಿ ಸಂಘಟಿಸುತ್ತಾರೆ. ಆ ಕಾರಣಕ್ಕಾಗಿಯೇ ನಂತರದಲ್ಲಿ ಕಾಂಗ್ರೆಸ್ ಮತ್ತು ಹಿಂದೂ ಮಹಾಸಭಾ ಮಂಡಲ್ ಅವರ ಮೇಲೆ ನಿರಂತರವಾಗಿ ದಾಳಿ ಮಾಡುತ್ತಾರೆ ಮತ್ತು ಅವರ ಸಭೆಗಳನ್ನು, ಚುನಾವಣೆಗಳನ್ನು ವಿಫಲಗೊಳಿಸಲು ದಾಳಿ ನಡೆಸುತ್ತಲೇ ಬರುತ್ತಾರೆ.
ಸಂಘಿಗಳು ತಮ್ಮ ಇಂದಿನ ಸಂವಿಧಾನ ಅಭಿಯಾನದಲ್ಲಿ ಈ ಯಾವ ಸತ್ಯಗಳನ್ನೂ ಹೇಳುವುದಿಲ್ಲ. ವಾಸ್ತವವಾಗಿ ಶಾಮ್‌ಪ್ರಸಾದ್ ಮುಖರ್ಜಿ ಮತ್ತು ಹಿಂದೂ ಮಹಾಸಭಾ ಫೆಡರೇಶನನ್ನು ವಿರೋಧಿಸುವುದು ಏಕೆ ಎಂಬುದನ್ನು ಜೋಗೇಂದ್ರನಾಥ್ ಮಂಡಲ್ ಅವರೇ ಹೀಗೆ ಸ್ಪಷ್ಟವಾಗಿ ಹೇಳುತ್ತಾರೆ:
‘‘ಸ್ನೇಹಿತರೇ, ಹಿಂದೂ ಮಹಾಸಭಾಗೆ ನಮ್ಮ ಬಗ್ಗೆ ಅಸೂಯೆ ಮತ್ತು ದ್ವೇಷ ಮಡುಗಟ್ಟಲು ಕಾರಣವಿಷ್ಟೆ. ಪರಿಶಿಷ್ಟರು ತಮ್ಮ ಸ್ವತಂತ್ರ ಅಸ್ತಿತ್ವವನ್ನು ಪ್ರತಿಪಾದಿಸುತ್ತಾ ಶೈಕ್ಷಣಿಕವಾಗಿ, ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಸವರ್ಣೀಯರ ಸರಿಸಮವಾಗಿ ಬೆಳೆಯುತ್ತಿದ್ದಾರೆ. ಶಾಸ್ತ್ರ ಮತ್ತು ಧರ್ಮಗಳ ಹೆಸರಿನಲ್ಲಿ ಈವರೆಗೆ ನಮ್ಮನ್ನು ತುಳಿದವರೇ ಇವರು. ಇದೇ ಹಿಂದೂ ಮಹಾಸಭಾ ನಾವು ಸಂಘಟಿರಾಗತೊಡಗಿದೊಡನೆ ಹಲವಾರು ಅಡ್ಡಿಗಳನ್ನು ತೊಡಕುಗಳನ್ನು ಹುಟ್ಟುಹಾಕುತ್ತಿದೆ. ನಮ್ಮ ಸಮುದಾಯವು ಕತ್ತಲಿಂದ ಅರಿವಿನ ಬೆಳಕಿನೆಡೆಗೆ ಹೆಜ್ಜೆ ಹಾಕುತ್ತಿರುವುದು ಹಿಂದೂ ಮಹಾಸಭಾವನ್ನು ಕಂಗಾಲುಗೊಳಿಸಿದೆ.
ನಾವು ಸಂಘಟಿತರಾದರೆ ಕೇವಲ ಮೂವತ್ತು ಲಕ್ಷದಷ್ಟಿರುವ ಈ ಬ್ರಾಹ್ಮಣ, ಕಾಯಸ್ಥ ಮತ್ತು ವೈಶ್ಯರು ಎರಡೂವರೆ ಕೋಟಿ ಹಿಂದೂಗಳ ಎಲ್ಲಾ ಅವಕಾಶಗಳನ್ನು ಸೌಕರ್ಯಗಳನ್ನೂ ಕಬಳಿಸಲಾಗುವುದಿಲ್ಲ. ಹೀಗಾಗಿ ಬಲವಂತದಿಂದಾದರೂ ಸರಿ, ಕುತಂತ್ರದಿಂದಾದರೂ ಸರಿ ಪರಿಶಿಷ್ತರು ಒಂದಾಗದಂತೆ ತಡೆಯುವುದೇ ಹಿಂದೂ ಸಭಾದ ಏಕೈಕ ಗುರಿಯಾಗಿದೆ.’’
(ಪು. 118-119, ಪ್ರೊ. ದ್ವೈಪಾಯನ್ ಸೇನ್ ಅವರ ‘The Decline of the Caste Question: Jogendranath Mandal and the Defeat of Dalit Politics in Bengal’ ಕೃತಿಯಿಂದ)
ಸಂವಿಧಾನ ಸಭೆಯ ಚುನಾವಣೆಯಲ್ಲೂ ಕಾಂಗ್ರೆಸ್ ಮತ್ತು ಹಿಂದೂ ಮಹಾಸಭಾ ಅಂಬೇಡ್ಕರ್ ಅವರು ಚುನಾವಣೆಯಲ್ಲಿ ಸೋಲುವಂತೆ ನಿರಂತರ ತಂತ್ರ ಕುತಂತ್ರಗಳನ್ನು ಹೆಣೆದರೆಂಬುದನ್ನು ಈ ಬಗ್ಗೆ ವಿಶೇಷ ಅಧ್ಯಯನ ಮಾಡಿರುವ ಪ್ರೊ. ದ್ವೈಪಾಯನ್ ಸೇನ್ ಅವರು ತಮ್ಮ ‘ದಿ ಡಿಕ್ಲನ್’ ಕೃತಿಯಲ್ಲಿ ದಾಖಲೆಗಳ ಸಮೇತ ವಿವರಿಸುತ್ತಾರೆ. ಮಹಾಸಭಾದ ಪಿಡುಗಿನ ಬಗ್ಗೆ ಮಂಡಲ್ ಅವರ ಭಾಷಣವನ್ನು ವಿಸ್ತೃತವಾಗಿ ಕೋಟ್ ಮಾಡುತ್ತಾರೆ. ಆಸಕ್ತರು ಆ ಪುಸ್ತಕವನ್ನು ಖಂಡಿತಾ ಓದಬಹುದು.
ಅಂಬೇಡ್ಕರ್‌ರನ್ನು ಸಂವಿಧಾನ ಸಭೆಗೆ ಆಯ್ಕೆ ಮಾಡಿದ ಸ್ವಾಭಿಮಾನಿ ದಲಿತರು
ಹಿಂದೂ ಮಹಾಸಭಾ, ಅದರ ನೆರಳಿನಂತಹ ಆರೆಸ್ಸೆಸ್ ಹಾಗೂ ಕಾಂಗ್ರೆಸ್ ಎಷ್ಟೇ ಕುತಂತ್ರಗಳನ್ನು ಮಾಡಿದರೂ ಜೋಗೇಂದ್ರನಾಥ ಮಂಡಲ್ ಅವರ ನೇತೃತ್ವದಲ್ಲಿ ಅವರ ತಂಡ ನಡೆಸಿದ ನಿರಂತರ ಅಭಿಯಾನ ಮತ್ತು ಅಂಬೇಡ್ಕರ್ ಅವರ ಬಗ್ಗೆ ತಳಸಮುದಾಯಗಳಲ್ಲಿ ಅದರಲ್ಲೂ ವಿಶೇಷವಾಗಿ ನಾಮಶೂದ್ರ ಸಮುದಾಯದಲ್ಲಿ ಇದ್ದ ವಿಶೇಷ ಆದರ-ಅಭಿಮಾನಗಳಿಂದಾಗಿ ಅಂಬೇಡ್ಕರ್ ಅವರು ಸಂವಿಧಾನ ಸಭೆಗೆ ಆಯ್ಕೆಯಾಗುತ್ತಾರೆ. ಬಂಗಾಳದ ಪ್ರಾಂತೀಯ ಶಾಸನ ಸಭೆಗೆ ಆಯ್ಕೆಯಾಗಿದ್ದ ಮಂಡಲ್ ಹಾಗೂ ಆದಿವಾಸಿ ಮತ್ತು ಅಸ್ಪಶ್ಯ ನಾಮಶೂದ್ರ ಮತ್ತು ರಾಜವಂಶಿ ಸಮುದಾಯಗಳಿಗೆ ಸೇರಿದ ಕಾಂಗ್ರೆಸ್ ಚುನಾಯಿತ ಸದಸ್ಯರೂ ಸಹ ಆತ್ಮಸಾಕ್ಷಿ ಮತವನ್ನು ಚಲಾಯಿಸಿ ಅಂಬೇಡ್ಕರ್ ಅವರನ್ನು ಸಂವಿಧಾನ ಸಭೆಗೆ ಆಯ್ಕೆ ಮಾಡುತ್ತಾರೆ.
ಖುಲ್ನಾ ಜೆಸ್ಸುರ್ ಕ್ಷೇತ್ರದಿಂದ ಅಂಬೇಡ್ಕರ್ ಅವರಿಗೆ ಮತಹಾಕಿದ ಪ್ರಾಂತೀಯ ಶಾಸನ ಸಭಾ ಸದಸ್ಯರು ಇವರುಗಳು:
1.ಜೋಗೇಂದ್ರನಾಥ್ ಮಂಡಲ್ (ನಾಮಶೂದ್ರ), ಬರಿಸಾಲ್ ಕ್ಷೇತ್ರ, ಶೆಡ್ಯೂಲ್ ಕಾಸ್ಟ್ ಫೆಡರೇಶನ್ ಪಕ್ಷ.
2. ಮುಕುಂದ್ ಬಹೆರಿ ಮಲ್ಲಿಕ್ (ನಾಮಶೂದ್ರ), ಖುಲ್ನ ಕ್ಷೇತ್ರ, ಸ್ವತಂತ್ರ.
3. ದ್ವಾರಿಕಾನಾಥ್ ಬರೂರಿ (ನಾಮಶೂದ್ರ), ಫರೀದ್ ಪುರ ಕ್ಷೇತ್ರ, ಕಾಂಗ್ರೆಸ್ ಪಕ್ಷ.
4. ಗಯಾನಾಥ್ ಬಿಸ್ವಾಸ್ (ನಾಮಶೂದ್ರ), ತಂಗೈಲ್ ಕ್ಷೇತ್ರ, ಕಾಂಗ್ರೆಸ್ ಪಕ್ಷ.
5. ನಾಗೇಂದ್ರ ನಾರಾಯಣ್ ರೇ (ರಾಜಬಂಶಿ), ರಂಗ್ಪುರ್, ಸ್ವತಂತ್ರ.
6. ಕ್ಷೇತ್ರನಾಥ್ ಸಿಂಗ (ರಾಜಬಂಶಿ), ರಂಗ್ಪುರ್, ಕಾಂಗ್ರೆಸ್ ಪಕ್ಷ
7. ಬೀರ್ ಬಿರ್ಸಾ (ಆದಿವಾಸಿ), ಮುರ್ಶಿದಾಬಾದ್, ಕಾಂಗ್ರೆಸ್
(ಮೂಲ: Iconoclast, Anand Teltumbde, p.369)
ಹೀಗೆ ಸ್ವತಂತ್ರ ಸದಸ್ಯರು ಮತ್ತು ಕಾಂಗ್ರೆಸ್ ಪಕ್ಷದ ಆಣತಿಯನ್ನು ಮೀರಿ ಮತ ಚಲಾಯಿಸಿದ ಕಾಂಗ್ರೆಸ್‌ನ ತಳಸಮುದಾಯದ ಸದಸ್ಯರ ಬೆಂಬಲದಿಂದ ಅಂಬೇಡ್ಕರ್ ಅವರು ಸಂವಿಧಾನ ಸಭೆಗೆ ಆಯ್ಕೆಯಾಗುತ್ತಾರೆ. ಅಂಬೇಡ್ಕರ್ ಗೆ ಮತಚಲಾಯಿಸಿದ ಕಾಂಗ್ರೆಸ್ ಸದಸ್ಯರು ನಂತರದ ದಿನಗಳಲ್ಲಿ ಕಾಂಗ್ರೆಸ್ ತೊರೆದು ಫೆಡರೇಶನ್ ಸೇರಿಕೊಳ್ಳುತಾರೆ.
ಸಾರಾಂಶವಿಷ್ಟೆ: ಅಂಬೇಡ್ಕರ್ ಅವರನ್ನು ಸಂವಿಧಾನ ಸಭೆಗೆ ಆಯ್ಕೆಯಾಗದಂತೆ ತಡೆದಿದ್ದರಲ್ಲಿ ಪಟೇಲ್-ನೆಹರೂ ನೇತೃತ್ವದ ಕಾಂಗ್ರೆಸ್‌ಗೆ ದೊಡ್ಡ ಪಾತ್ರವಿದೆ. ಅದರಲ್ಲಿ ನೆಹರೂರವರದ್ದು ಖಂಡನೀಯ ಪಾತ್ರ. ಆದರೆ ಅದರಷ್ಟೇ ಅಥವಾ ಅದಕ್ಕಿಂತ ಹೆಚ್ಚು ಪಟೇಲ್‌ರ ಪಾತ್ರವಿದೆ. ಸಂಘಿ ಅಭಿಯಾನವು ಈ ಸತ್ಯವನ್ನು ಮುಚ್ಚಿಡುತ್ತದೆ.
ಅವೆಲ್ಲಕ್ಕಿಂತ ಹೆಚ್ಚಾಗಿ ತಾವು ದೊಡ್ಡ ಅಂಬೇಡ್ಕರ್ ಅನುಯಾಯಿಗಳೆಂದು ಕೊಚ್ಚಿಕೊಳ್ಳುವ ಈ ಸಂಘಿಗಳು ಅಂಬೇಡ್ಕರ್ ಅವರು ಸಂವಿಧಾನ ಸಭೆಗೆ ಆಯ್ಕೆಯಾಗದಂತೆ ಅತಿ ದೊಡ್ಡ ಪಾತ್ರವನ್ನೇ ವಹಿಸಿದ್ದರು ಎಂಬುದನ್ನು ಕೂಡ ಮೇಲಿನ ಇತಿಹಾಸ ಸ್ಪಷ್ಟಪಡಿಸುತ್ತದೆ. ವಿಶೇಷವಾಗಿ ಈ ಇತಿಹಾಸವನ್ನು ದಲಿತ ದಮನಿತರಿಂದ ಸಂಘಿಗಳು ಮುಚ್ಚಿಡಬಯಸುತ್ತಾರೆ.
ಇಷ್ಟಾಗಿಯೂ 1947ರ ಜೂನ್‌ನಲ್ಲಿ ಭಾರತದ ವಿಭಜನೆಯಾಗುತ್ತದೆ. ಅಂಬೇಡ್ಕರ್ ಅವರು ಆಯ್ಕೆಯಾಗಿದ್ದ ಖುಲ್ನಾ ಕ್ಷೇತ್ರ ಪೂರ್ವ ಪಾಕಿಸ್ತಾನಕ್ಕೆ ವರ್ಗಾವಣೆಯಾಗಿದ್ದರಿಂದ ಅಂಬೇಡ್ಕರ್ ಅವರ ಸಂವಿಧಾನ ಸಭೆಯ ಸದಸ್ಯತ್ವ ರದ್ದಾಗುತ್ತದೆ.
ಆದರೆ ಇದರಲ್ಲೂ ಸಂಘಿ ಅಭಿಯಾನ ಒಂದು ಹಸಿಸುಳ್ಳನ್ನು ಬಿತ್ತುತ್ತಿದೆ. ಕಾಂಗ್ರೆಸ್ ಪಕ್ಷ ಹಿಂದೂ ಬಹುಸಂಖ್ಯಾತರಿದ್ದ ಖುಲ್ನಾ ಕ್ಷೇತ್ರವನ್ನು ಪಾಕಿಸ್ತಾನಕ್ಕೆ ಉದ್ದೇಶಪೂರ್ವಕವಾಗಿ ಬಿಟ್ಟುಕೊಟ್ಟಿದ್ದರಿಂದ ಅಂಬೇಡ್ಕರ್ ಸದಸ್ಯತ್ವ ಹೋಯಿತೆನ್ನುವುದು ಅವರ ವಾದ. ಆದರೆ ಈ ಕ್ಷೇತ್ರದಲ್ಲಿ ಸವರ್ಣೀಯರಿಗಿಂತ ತಳಸಮುದಾಯದ ಜನರೇ ಹೆಚ್ಚು. ವಾಸ್ತವದಲ್ಲಿ ಮಂಡಲ್ ನೇತೃತ್ವದಲ್ಲಿ ಫೆಡರೇಶನ್ ದೇಶ ವಿಭಜನೆಯ ವಿರುದ್ಧ ಕೊನೆಯ ನಿಮಿಷದವರೆಗೂ ಪ್ರಚಾರ ಮಾಡುತ್ತದೆ.
ಏಕೆಂದರೆ ವಿಭಜನೆಯಾದರೆ ಪೂರ್ವ ಬಾಂಗ್ಲಾದಿಂದ ಸವರ್ಣೀಯ ಹಿಂದೂಗಳು ಸುಲಭವಾಗಿ ಪಶ್ಚಿಮಕ್ಕೆ ಬಂದು ಬದುಕಬಹುದು. ಆದರೆ ಅತ್ಯಂತ ಬಡತನದಲ್ಲಿರುವ ಪರಿಶಿಷ್ಟರು ಪಶ್ಚಿಮಕ್ಕೆ ಬಂದು ಬದುಕಲು ಸಾಧ್ಯವಿಲ್ಲ ಎಂದು ವಿವರಿಸುತ್ತಾ ದೇಶವಿಭಜನೆಯು ದಲಿತರ ಹಿತಾಸಕ್ತಿಗೆ ವಿರುದ್ಧ ಎಂದು ಫೆಡರೇಶನ್ ಪ್ರಚಾರ ಮಾಡುತ್ತದೆ.
ಆದರೆ ಹಿಂದೂಗಳ ಆತಂಕವನ್ನು ಬಳಸಿಕೊಂಡು ದೇಶವಿಭಜನೆಯನ್ನು ತೀವ್ರಗೊಳಿಸಿದ್ದು, ಆ ಮೂಲಕ ಖುಲ್ನಾ ವರ್ಗಾವಣೆಯನ್ನು ಆಗಗೊಳಿಸಿದ್ದು ಈ ಸಂಘಿಗಳೇ. ಹಾಗೆ ನೋಡಿದರೆ ಸ್ವಾಯತ್ತ ಪ್ರಾಂತಗಳ ಕಾನ್‌ಫೆಡರೇಶನ್ ಆಗಕೂಡದು ಮತ್ತು ದೇಶವಿಭಜನೆಯೇ ಆಗಲಿ ಎಂದು ಕಾಂಗ್ರೆಸನ್ನು ಒಪ್ಪಿಸಿದ್ದು ಕಾಂಗ್ರೆಸ್‌ನ ಬಿಜೆಪಿಗಳ ಆರಾಧ್ಯದೈವ ಪಟೇಲರೇ. ಸಮಾಜದಲ್ಲಿ ವಿಭಜನೆ ಬಿಟ್ಟರೆ ಬೇರೆ ಪರ್ಯಾಯವಿಲ್ಲ ಎಂಬ ಸಂದರ್ಭವನ್ನು ಸೃಷ್ಟಿ ಮಾಡಿದ್ದು ಮುಸ್ಲಿಮ್ ಲೀಗ್ ಮತ್ತು ಆರೆಸ್ಸೆಸ್ ಹಾಗೂ ಹಿಂದೂ ಮಹಾಸಭಾ.
ದೇಶ ವಿಭಜನೆಯಾಗಿ ಭಾರತವು ಸ್ವಾತಂತ್ರ್ಯಗೊಂಡ ಮೇಲೆ ಹೊಸ ರಾಷ್ಟ್ರದ ಎಲ್ಲಾ ಭಿನ್ನಮತೀಯ ಶಕ್ತಿಗಳನ್ನು ಒಳಗೊಂಡು ಸಂವಿಧಾನವನ್ನು ರಚಿಸಬೇಕೆಂಬ ಕಾಂಗ್ರೆಸ್‌ನ ರಾಜಕೀಯ ತಂತ್ರದ ಭಾಗವಾಗಿ ಕಾಂಗ್ರೆಸ್ ಪಕ್ಷವೇ ಅಂಬೇಡ್ಕರ್ ಅವರನ್ನು ಸಂವಿಧಾನ ಸಭೆಗೆ ಬರಮಾಡಿಕೊಳ್ಳುತ್ತದೆ ಮತ್ತು ಕರಡು ಸಮಿತಿಯ ಅಧ್ಯಕ್ಷರನ್ನಾಗಿ ಮಾಡುತ್ತದೆ. ಇತಿಹಾಸದ ಈ ಸಂಗತಿಯನ್ನು ಕೂಡ ಸಂಘಿಗಳು ಗೌಣಗೊಳಿಸಿ ಮರೆಮಾಚುತ್ತಿದ್ದಾರೆ.