1924ರ ಬೆಳಗಾವಿ ಅಧಿವೇಶನದಲ್ಲಿ ಹಿಂದೂ ಮಹಾಸಭಾದ ದಲಿತ ದ್ರೋಹ!

ಹಿಂದೂ ಮಹಾಸಭಾ ಮತ್ತು ಆರೆಸ್ಸೆಸ್ ಸ್ವಾತಂತ್ರ್ಯವೆಂದರೆ ಕೇವಲ ಬ್ರಿಟಿಷ್ ವಿರೋಧಿ ಸ್ವಾತಂತ್ರ್ಯವೇ ಹೊರತು, ಸಾಮಾಜಿಕ ಅಸಮಾನತೆಗಳ ವಿರುದ್ಧದ ಸ್ವಾತಂತ್ರ್ಯವಲ್ಲ ಮತ್ತು ಜಾತಿಯು ಭಾರತದ ಅಸ್ಮಿತೆ, ಮನುಸ್ಮತಿ ಭಾರತದ ಸ್ಥಿರ ಸಮಾಜದ ಸಂವಿಧಾನ ಎಂಬ ಗ್ರಹಿಕೆಯ ರಾಜಕಾರಣವನ್ನು ಸ್ವಾತಂತ್ರ್ಯ ಹೋರಾಟಕ್ಕೆ ಪ್ರತಿಯಾಗಿ ಮತ್ತು ಪರ್ಯಾಯವಾಗಿ ಮುಂದುವರಿಸುತ್ತಾ ಬಂದಿವೆ. ಆಗ ಹಿಂದೂ ಮಹಾಸಭಾಗೂ ಮತ್ತು ಕಾಂಗ್ರೆಸ್‌ಗೂ ಅಂತಹ ದೊಡ್ಡ ವ್ಯತ್ಯಾಸವೇನೂ ಇರಲಿಲ್ಲ. ಕಾಂಗ್ರೆಸ್‌ನ ಬಲಪಂಥೀಯ ನಾಯಕ ಮದನ ಮೋಹನ ಮಾಳವೀಯ ಹಿಂದೂ ಮಹಾಸಭಾದ ಸಂಸ್ಥಾಪಕದಲ್ಲಿ ಒಬ್ಬರಾಗಿದ್ದರು. ಗಾಂಧಿ ಮಾಳವೀಯರನ್ನು ಹಿರಿಯ ಮಾರ್ಗದರ್ಶಿ ಎಂದು ಪರಿಗಣಿಸುತ್ತಿದ್ದರು.

Update: 2024-12-18 05:17 GMT
Editor : Thouheed | Byline : ಶಿವಸುಂದರ್

ಭಾಗ- 1

1924ರ ಡಿಸೆಂಬರ್‌ನಲ್ಲಿ ಕರ್ನಾಟಕದ ಬೆಳಗಾವಿಯಲ್ಲಿ ಕಾಂಗ್ರೆಸ್‌ನ ಐತಿಹಾಸಿಕ ಅಧಿವೇಶನ ನಡೆಯಿತು. ಈ 2024ರ ಡಿಸೆಂಬರ್‌ಗೆ ಅದು ನಡೆದು ನೂರು ವರ್ಷ. ಹೀಗಾಗಿ ಹಾಲಿ ಕರ್ನಾಟಕದ ಅಧಿಕಾರರೂಢ ಕಾಂಗ್ರೆಸ್ ಪಕ್ಷ ಈ ಐತಿಹಾಸಿಕ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ ತಯಾರಿಯನ್ನು ಭರ್ಜರಿಯಾಗಿ ನಡೆಸುತ್ತಿದೆ.

ಸಾಮಾನ್ಯವಾಗಿ ಇಂತಹ ಐತಿಹಾಸಿಕ ಸಂಗತಿಗಳ ಸಂಭ್ರಮಗಳು ಇತಿಹಾಸದಿಂದ ಪಾಠಗಳನ್ನು ಕಲಿಯುವುದಕ್ಕಿಂತ ವರ್ತಮಾನದ ರಾಜಕಾರಣಕ್ಕೆ ಇತಿಹಾಸವನ್ನು ಬಗ್ಗಿಸುವ ಮತ್ತು ಬಳಸಿಕೊಳ್ಳುವ ಉದ್ದೇಶವನ್ನೇ ಹೊಂದಿರುತ್ತವೆ. ಹೀಗಾಗಿ ಈ ಸಂಭ್ರಮಗಳು ಮುಂದಿಡುವ ಇತಿಹಾಸದ ಪುನರ್ ನಿರೂಪಣೆ ಪೂರ್ಣ ಸತ್ಯಗಳೇನೂ ಆಗಿರುವುದಿಲ್ಲ. ಬದಲಿಗೆ ಈ ಸಂಭ್ರಮಗಳು ಹಲವು ಸೂಕ್ಷ್ಮ ಐತಿಹಾಸಿಕ ಸತ್ಯಗಳನ್ನು ಹಿಂದಕ್ಕೆ ಸರಿಸಿಬಿಡುತ್ತವೆ.

ದಲಿತ ಪ್ರಶ್ನೆಯನ್ನು ಹಾಗೂ ಅಂಬೇಡ್ಕರ್‌ರನ್ನು ನಿರ್ವಹಿಸಿದ ರೀತಿಯನ್ನು ಮುಂದಿಟ್ಟುಕೊಂಡು ಭಾರತದ ಸ್ವಾತಂತ್ರ್ಯ ಹೋರಾಟವನ್ನು ಅರ್ಥಮಾಡಿಕೊಳ್ಳಲು ಹೊರಟಾಗ ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದ ಮರೆಮಾಚಿದ ಅಥವಾ ವಿಕೃತಗೊಳಿಸಿದ ಇಂತಹ ಹಲವು ಹಲವು ಸತ್ಯಗಳು ಬಯಲಾಗುತ್ತವೆ.

ವಾಸ್ತವವೆಂದರೆ ಅಂತಹ ಒಂದು ವಿಕೃತಿಗೆ 1924ರ ಬೆಳಗಾವಿ ಅಧಿವೇಶನದಲ್ಲಿ ಇಂದಿನ ಸಂಘಿಗಳ ಪಿತಾಮಹರಾದ ಹಿಂದೂ ಮಹಾಸಭಾದ ನಾಯಕ ಮದನಮೋಹನ ಮಾಳವೀಯರು ಅಸ್ಥಿಭಾರ ಹಾಕಿದರು.

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ದಲಿತರ ಸ್ವತಂತ್ರ ರಾಜಕೀಯ ಅಸ್ಮಿತೆಯನ್ನು ನಿರಾಕರಿಸಿ ದಲಿತರು ಶಾಶ್ವತವಾಗಿ ದಮನಕಾರಿ ಹಿಂದೂ ಧರ್ಮದ ಮತ್ತು ಬಹುಸಂಖ್ಯಾತ ಹಿಂದೂಗಳ ಕೃಪಾಕಟಾಕ್ಷದ ರಾಜಕೀಯ ಹಂಗಿನಿಂದ ಹೊರಬರದಂತೆ ಮಾಡುವಲ್ಲಿ ಗಾಂಧಿ-ಪಟೇಲ್-ನೆಹರೂ ನೇತೃತ್ವದ ಕಾಂಗ್ರೆಸ್‌ಗೆ ಬಹುದೊಡ್ಡ ಪಾತ್ರವಿತ್ತು. ಅದು ಈಗ ಮುಚ್ಚಿಡಲಾಗದ ಸತ್ಯ.

ಆದರೆ ಅದೇ ಸಮಯದಲ್ಲಿ ಮುಚ್ಚಿಡಲ್ಪಡುತ್ತಿರುವ ಮತ್ತು ವಿಕೃತಗೊಳಿಸುತ್ತಿರುವ ಐತಿಹಾಸಿಕ ಸತ್ಯವೆಂದರೆ ದಲಿತರ ಹಿಂದೂ ದಾಸ್ಯವನ್ನು ಶಾಶ್ವತಗೊಳಿಸುವಲ್ಲಿ ಹಿಂದೂ ಮಹಾಸಭಾದ ಪಾತ್ರ ಮತ್ತು ಆ ದಿಕ್ಕಿನಲ್ಲಿ ಹಿಂದೂ ಮಹಾಸಭಾ ಹಾಗೂ ಅದರ ನಾಯಕರಾಗಿದ್ದ ಮದನ ಮೋಹನ ಮಾಳವೀಯರು 1924ರ ಬೆಳಗಾವಿ ಅಧಿವೇಶನವನ್ನು ಬಳಸಿಕೊಂಡ ರೀತಿ.

1924ರಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನದ ಜೊತೆಜೊತೆಗೆ ಮತ್ತು ಅದರ ಭಾಗವಾಗಿ ಮತ್ತು ಅದೇ ಪೆಂಡಾಲಿನಲ್ಲಿ ಕಾಂಗ್ರೆಸ್‌ನ ಸಾಮಾಜಿಕ ಸಮ್ಮೇಳನಗಳು, ಅಖಿಲ ಭಾರತದ ಅಬ್ರಾಹ್ಮಣ ಸಮ್ಮೇಳನ, ಅಖಿಲ ಭಾರತ ಖಿಲಾಫತ್ ಸಮ್ಮೇಳನ ಮತ್ತು ಅಖಿಲ ಭಾರತ ಹಿಂದೂ ಮಹಾಸಭಾದ ಸಮ್ಮೇಳನಗಳೂ ನಡೆದವು.

ಅಖಿಲ ಭಾರತ ಹಿಂದೂ ಮಹಾಸಭಾದ ಸಮ್ಮೇಳನದ ಅಧ್ಯಕ್ಷತೆಯನ್ನು ಕಾಂಗ್ರೆಸ್‌ನೊಳಗಿದ್ದು ಹಿಂದೂ ಮಹಾಸಭಾದಂತಹ ಅತ್ಯಂತ ಉಗ್ರ ಹಿಂದುತ್ವವಾದಿ ಸಂಘಟನೆಯನ್ನು ಸ್ಥಾಪಿಸಿದ ಮದನ ಮೋಹನ ಮಾಳವೀಯ ಅವರು ವಹಿಸಿದ್ದರು. ಈ ಸಭೆಯಲ್ಲಿ ಗಾಂಧಿ ಮತ್ತು ಮುಸ್ಲಿಮ್ ಲೀಗಿನ ನಾಯಕರು ವೀಕ್ಷಕರಾಗಿ ಭಾಗವಹಿಸಿದ್ದರು ಮತ್ತು ಈ ಸಭೆಯಲ್ಲಿ ಮೊತ್ತ ಮೊದಲ ಬಾರಿಗೆ ಹಿಂದೂ ಮಹಾಸಭಾ ಯಾವ ಕಾರಣಕ್ಕೂ ಕೋಮುವಾರು ಪ್ರತ್ಯೇಕ ಮತದಾನವನ್ನು ಒಪ್ಪಲಾಗದೆಂದು ಘೋಷಿಸಿತು ಮತ್ತು ಆ ನಿಟ್ಟಿನಲ್ಲಿ ಕಾಂಗ್ರೆಸ್‌ಗೆ ಪ್ರತ್ಯೇಕವಾಗಿ ಒಂದು ಮೇಲ್ವರ್ಗ ಮತ್ತು ಮೇಲ್ಜಾತಿ ಹಿಂದೂ ರಾಜಕೀಯ ಅಜೆಂಡಾಗಾಗಿ ಹಿಂದೂಗಳನ್ನು ಸಂಘಟಿಸಲು 1924ರ ಬೆಳಗಾವಿಯ ಹಿಂದೂ ಮಹಾಸಭಾ ಮಾಳವೀಯ ಅವರ ನೇತೃತ್ವದಲ್ಲಿ ತೀರ್ಮಾನವನ್ನು ಕೈಗೊಂಡಿತು.

(The Janasangh- A Biograaphy of an Indian Political Party, Craig Baxter)

ಬ್ರಾಹ್ಮಣ್ಯದ ಕುಲ ‘ತಿಲಕ’ರು

ಹಿಂದೂ ಮಹಾಸಭಾದ ದಲಿತ ದ್ರೋಹ ಮತ್ತು ಅದರಲ್ಲಿ 1924ರ ಬೆಳಗಾವಿ ಅಧಿವೇಶನವನ್ನು ಬಳಸಿಕೊಂಡ ರೀತಿಯನ್ನು ಅರ್ಥಮಾಡಿಕೊಳ್ಳಲು ಆಗ ನಡೆಯುತ್ತಿದ್ದ ಕಾಂಗ್ರೆಸ್ ಅಧಿವೇಶನಗಳು ಮತ್ತು ಕಾಂಗ್ರೆಸ್‌ನ ಮತ್ತು ಈಗ ಸಂಘಿಗಳು ತಮ್ಮವರೆಂದು ಕೊಂಡಾಡುವ ಕಾಂಗ್ರೆಸ್‌ನೊಳಗಿದ್ದ ಬಾಲಗಂಗಾಧರ ತಿಲಕರಂತಹ ನಾಯಕರ ಪಾತ್ರವನ್ನು ಮತ್ತು 1909ರ ಮಾರ್ಲೆ-ಮಿಂಟೊ ಸುಧಾರಣೆ ಮುಂದಿಟ್ಟ ಕೋಮುವಾರು ರಾಜಕೀಯವು ಬಯಲುಗೊಳಿಸಿದ ಪ್ರಾತಿನಿಧ್ಯದ ರಾಜಕಾರಣವನ್ನು ಅರ್ಥಮಾಡಿಕೊಳ್ಳಬೇಕು.

ಇಂದಿನ ಸಂಘಿಗಳ ಪಿತಾಮಹರನ್ನು ಒಳಗೊಂಡಂತೆ ಅಂದಿನ ಸ್ವಾತಂತ್ರ್ಯ ಹೋರಾಟದ ಪ್ರಧಾನ ಧಾರೆ ನಾಯಕರು ಪ್ರಧಾನವಾಗಿ ಸ್ವಾತಂತ್ರ್ಯವೆಂದರೆ ಬ್ರಿಟಿಷರಿಂದ ರಾಜಕೀಯ ಸ್ವಾತಂತ್ರ್ಯ ಪಡೆಯುವುದೆಂದು ಮಾತ್ರ ಭಾವಿಸಿದ್ದರು. ಭಾರತೀಯ ಸವರ್ಣೀಯ ಹಿಂದೂ ಸಮಾಜವು ಆಂತರಿಕ ಗುಲಾಮತನದಲ್ಲಿಟ್ಟಿರುವ ಶೂದ್ರ, ಅತಿ ಶೂದ್ರ ಮತ್ತು ಮಹಿಳೆಯರಿಗೆ ಸಾಮಾಜಿಕ ಸ್ವಾತಂತ್ರ್ಯ ದೊರಕುವುದು ಕೂಡ ಸ್ವಾತಂತ್ರ್ಯ ಹೋರಾಟದ ಭಾಗವಾಗಬೇಕೆನ್ನುವುದನ್ನು ಇವರುಗಳು ಬಲವಾಗಿ ವಿರೋಧಿಸುತ್ತಿದ್ದರು. ಅದರ ನಡುವೆಯೂ ರಾನಡೆ-ಮೆಹ್ತಾರಂತಹ ಸಾಮಾಜಿಕ ಸುಧಾರಕರು ಸಮಾಜದಲ್ಲಿ ಹಿಂದೂ ಅನಿಷ್ಟ ಪದ್ಧತಿಯ ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಆಗ್ರಹಿಸುತ್ತಿದ್ದರು ಮತ್ತು ಆ ನಿಟ್ಟಿನಲ್ಲಿ ಕಾಂಗ್ರೆಸ್‌ನ ವಾರ್ಷಿಕ ರಾಜಕೀಯ ಸಮ್ಮೇಳನದ ಆವರಣದಲ್ಲೇ ಸಾಮಾಜಿಕ ಸಮ್ಮೇಳನಗಳನ್ನು-Social Conference-ನಡೆಸುತ್ತಿದ್ದರು.

ಆದರೆ ಬ್ರಿಟಿಷ್ ವಿರೋಧಿ ರಾಜಕೀಯ ಸ್ವಾತಂತ್ರ್ಯ ಹೋರಾಟದಲ್ಲಿ ಕ್ರಾಂತಿಕಾರಿ ನಿಲುವನ್ನು ಪ್ರದರ್ಶಿಸುತ್ತಿದ್ದ ಬಾಲಗಂಗಾಧರ ತಿಲಕರಂತಹ ನಾಯಕರು ಹಿಂದೂ ಸಮಾಜದ ಸಾಮಾಜಿಕ ಸುಧಾರಣೆಯನ್ನು ಅರ್ಥಾತ್ ಮಹಿಳಾ ಸಮಾನತೆ, ಜಾತಿ ಮತ್ತು ಅಸ್ಪಶ್ಯತೆ ನಿರ್ಮೂಲನಗಳಂತೆ ಸಾಮಾಜಿಕ ನ್ಯಾಯ ಮತ್ತು ಸಮಾನತೆಯನ್ನು ಖಡಾ ಖಂಡಿತವಾಗಿ ವಿರೋಧಿಸುತ್ತಿದ್ದರು.

ವಾಸ್ತವದಲ್ಲಿ ಆ ಕಾಲಘಟ್ಟದಲ್ಲಿ ಮಹಾತ್ಮಾ ಫುಲೆಯವರ ನೇತೃತ್ವದಲ್ಲಿ ಹಿಂದೂ ಸಮಾಜದ ಶೂದ್ರ ಮತ್ತು ಅತಿಶೂದ್ರ ವರ್ಗಗಳು ಸಮಾನತೆಯ ನೆಲೆಗಟ್ಟಿನಲ್ಲಿ ಭಟ್‌ಜಿ-ಶೇಟ್‌ಜಿಗಳನ್ನು ವಿರೋಧಿಸುವ ಸತ್ಯ ಶೋಧಕ ಸಂಘಟನೆಗಳನ್ನು ಮತ್ತು ಮೇಳಗಳನ್ನು ಪ್ರಾರಂಭಿಸಿದ್ದರು. ಈ ಸಾಮಾಜಿಕ ಕ್ರಾಂತಿಯಿಂದ ಕಂಗಾಲಾದ ಸ್ವರಾಜ್‌ವಾದಿ ತಿಲಕರು ಅದಕ್ಕೆ ಪ್ರತಿಯಾಗಿ ಭಟ್‌ಜಿ ಮತ್ತು ಶೇಟ್‌ಜಿಗಳ ರಕ್ಷಣೆಯಲ್ಲಿ ತಳಸಮುದಾಯದ ಹಿಂದೂಗಳನ್ನು ಮುಸ್ಲಿಮ್ ವಿರೋಧದ ನೆಲೆಯಲ್ಲಿ ಸಂಘಟಿಸಲು ಪ್ರಾರಂಭಿಸಿದರು. ಫುಲೆಯವರ ಆತ್ಮ ಸಮಾನದ ‘ಮೇಳ’ಕ್ಕೆ ಪ್ರತಿಯಾಗಿ ಸಾರ್ವಜನಿಕ ಗಣೇಶ ಹಾಗೂ ಶಿವಾಜಿ ‘ಉತ್ಸವ’ಗಳನ್ನು ಪ್ರಾರಂಭಿಸಿದರು. ಹಾಗೂ ಕಾಂಗ್ರೆಸ್ ಸಮ್ಮೇಳನದಲ್ಲಿ ಸಾಮಾಜಿಕ ಸಮ್ಮೇಳನಗಳನ್ನು ನಡೆಸುವುದನ್ನು ನಿಲ್ಲಿಸಲು ಆಗ್ರಹಿಸಿದರು. ತಮ್ಮ ನೇತೃತ್ವದಲ್ಲಿ 1895ರಲ್ಲಿ ಪೂನಾದಲ್ಲಿ ಕಾಂಗ್ರೆಸ್ ಸಮ್ಮೇಳನ ನಡೆದಾಗ ಕಾಂಗ್ರೆಸ್ ಆಶ್ರಯದಲ್ಲಿ ಸಾಮಾಜಿಕ ಸಮ್ಮೇಳನ ನಡೆಯುವುದನ್ನು ಯಶಸ್ವಿಯಾಗಿ ತಡೆಗಟ್ಟಿದರು. ಅದಾದ ಬಹುಕಾಲದ ನಂತರ ಮತ್ತೆ ಕಾಂಗ್ರೆಸ್‌ನ ಸಮ್ಮೇಳನದೊಳಗೆ ಸಾಮಾಜಿಕ ಸಮ್ಮೇಳನಗಳು ಪ್ರಾರಂಭವಾದವು. 1920ರಲ್ಲಿ ತಿಲಕರು ನಿಧನರಾದರು.

(ಮೂಲ- Political ideas of B.G. Tilak: colonialism, self and Hindu nationalism- Oak, A ಮತ್ತು ಆನಂದ್ ತೇಲ್‌ತುಂಬ್ಡೆಯವರ Iconoclast)

ಇಂತಹ ಬ್ರಾಹ್ಮಣ ಕುಲ ತಿಲಕರ ಅಚ್ಚುಮೆಚ್ಚಿನ ಶಿಷ್ಯ ಸಾವರ್ಕರ್. ತಿಲಕರ ಸಿದ್ಧಾಂತದ ಮುಂದುವರಿಕೆಯೇ ಮದನ ಮೋಹನ ಮಾಳವೀಯ, ಲಾಲ ಲಜಪತ್ ರಾಯ್ ಮತ್ತು ಆ ನಂತರ ಸಾವರ್ಕರ್ ಕಟ್ಟಿ ಬೆಳೆಸಿದ ಹಿಂದೂ ಮಹಾಸಭಾ. ತಿಲಕರ ಹಿಂದೂ ಸಂಘಟನೆಯ ಸಿದ್ಧಾಂತವನ್ನು, ಮುಸ್ಲಿಮ್ ವಿರೋಧಿ ಬ್ರಾಹ್ಮಣೀಯ ಹಿಂದೂ ರಾಷ್ಟ್ರದ ಸಿದ್ಧಾಂತವನ್ನು ಬೆಳೆಸಿದ್ದು ಸಾವರ್ಕರ್. ಅದರಿಂದ ಸ್ಫೂರ್ತಿ ಪಡೆದ ಹೆಡ್ಗೇವಾರ್ ಕಟ್ಟಿದ್ದು ರಾಷ್ಟ್ರೀಯ ಸ್ವಯಂ ಸೇವಕ ಸಂಘ. ಅದರ ಬಗ್ಗೆ ಅಪಾರ ಸಹಾನುಭೂತಿ ಇದ್ದವರು ಕಾಂಗ್ರೆಸ್‌ನ ಎರಡನೇ ದೊಡ್ಡ ನಾಯಕ ಸರ್ದಾರ್ ಪಟೇಲರು. ಅದರ ಸಂತಾನವೇ ಭಾರತೀಯ ಜನಸಂಘ, ಭಾರತೀಯ ಜನತಾ ಪಕ್ಷ ಮತ್ತು ಇಂದಿನ ಮೋದಿ.

ಹೀಗೆ ಹಿಂದೂ ಮಹಾಸಭಾ ಮತ್ತು ಆರೆಸ್ಸೆಸ್ ಸ್ವಾತಂತ್ರ್ಯವೆಂದರೆ ಕೇವಲ ಬ್ರಿಟಿಷ್ ವಿರೋಧಿ ಸ್ವಾತಂತ್ರ್ಯವೇ ಹೊರತು, ಸಾಮಾಜಿಕ ಅಸಮಾನತೆಗಳ ವಿರುದ್ಧದ ಸ್ವಾತಂತ್ರ್ಯವಲ್ಲ ಮತ್ತು ಜಾತಿಯು ಭಾರತದ ಅಸ್ಮಿತೆ, ಮನುಸ್ಮತಿ ಭಾರತದ ಸ್ಥಿರ ಸಮಾಜದ ಸಂವಿಧಾನ ಎಂಬ ಗ್ರಹಿಕೆಯ ರಾಜಕಾರಣವನ್ನು ಸ್ವಾತಂತ್ರ್ಯ ಹೋರಾಟಕ್ಕೆ ಪ್ರತಿಯಾಗಿ ಮತ್ತು ಪರ್ಯಾಯವಾಗಿ ಮುಂದುವರಿಸುತ್ತಾ ಬಂದಿವೆ. ಆಗ ಹಿಂದೂ ಮಹಾಸಭಾಗೂ ಮತ್ತು ಕಾಂಗ್ರೆಸ್‌ಗೂ ಅಂತಹ ದೊಡ್ಡ ವ್ಯತ್ಯಾಸವೇನೂ ಇರಲಿಲ್ಲ. ಕಾಂಗ್ರೆಸ್‌ನ ಬಲಪಂಥೀಯ ನಾಯಕ ಮದನ ಮೋಹನ ಮಾಳವೀಯ ಹಿಂದೂ ಮಹಾಸಭಾದ ಸಂಸ್ಥಾಪಕದಲ್ಲಿ ಒಬ್ಬರಾಗಿದ್ದರು. ಗಾಂಧಿ ಮಾಳವೀಯರನ್ನು ಹಿರಿಯ ಮಾರ್ಗದರ್ಶಿ ಎಂದು ಪರಿಗಣಿಸುತ್ತಿದ್ದರು.

ಆದ್ದರಿಂದಲೇ ತಿಲಕ್-ಗಾಂಧಿ-ಪಟೇಲ್-ನೆಹರೂರ ಕಾಂಗ್ರೆಸ್ ಮತ್ತು ಮಾಳವೀಯ-ಸಾವರ್ಕರ್-ಹೆಡ್ಗೇವಾರರ ಹಿಂದೂ ಮಹಾಸಭಾ ಮತ್ತು ಆರೆಸ್ಸೆಸ್‌ಗಳು ಹಿಂದೂ ಚೌಕಟ್ಟಿನಿಂದ ಹೊರಬಂದು ಸ್ವತಂತ್ರ ಹಾಗೂ ಪ್ರತ್ಯೇಕ ದಲಿತ ಅಸ್ಮಿತೆಯನ್ನು ಆಗ್ರಹಿಸುತ್ತಿದ್ದ ಅಂಬೇಡ್ಕರ್‌ರನ್ನು ಮತ್ತವರ ರಾಜಕಾರಣವನ್ನು ಒಟ್ಟಾಗಿಯೇ ವಿರೋಧಿಸುತ್ತಿದ್ದರು.

ಇದು ಭಾರತೀಯರಿಗೆ ಆಡಳಿತದಲ್ಲಿ ಮತ್ತು ಶಾಸನ ಸಭೆಗಳಲ್ಲಿ ಸೀಮಿತ ಪ್ರಾತಿನಿಧ್ಯ ಕೊಡಲು ಬ್ರಿಟಿಷರು ಪರಿಚಯಿಸಿದ ಕೋಮುವಾರು ಪ್ರಾತಿನಿಧ್ಯದ ರಾಜಕಾರಣದಲ್ಲಿ ಅತ್ಯಂತ ಸ್ಪಷ್ಟವಾಗಿ ವ್ಯಕ್ತವಾಗತೊಡಗಿತು.

ಕೋಮುವಾರು ಒಪ್ಪಂದ: ದಲಿತರನ್ನು ನುಂಗಿದ ಹಿಂದೂ ಪ್ರಾತಿನಿಧ್ಯ

1905ರ ವಂಗಭಂಗ ಚಳವಳಿಯಿಂದ ಭಾರತದ ಸ್ವಾತಂತ್ರ್ಯ ಹೋರಾಟ ಮತ್ತೊಂದು ಮಜಲಿಗೆ ಹೊರಳುತ್ತಿದ್ದಂತೆ ಅದನ್ನು ನಿಗ್ರಹಿಸುವ ಭಾಗವಾಗಿ ಬ್ರಿಟಿಷ್ ವಸಾಹತುಶಾಹಿಗಳು ತಮ್ಮ ಆಡಳಿತದಲ್ಲಿ ಸ್ಥಳೀಯರಿಗೆ ಸೀಮಿತ ಪ್ರಾತಿನಿಧ್ಯ ನೀಡಲು ಮಾರ್ಲೆ-ಮಿಂಟೊ ಸುಧಾರಣೆಯನ್ನು ತಂದರಷ್ಟೆ. ಆಗಲೇ ಈ ಸ್ಥಳೀಯ ಪ್ರಾತಿನಿಧ್ಯವು ಮೂಲಭೂತವಾಗಿ ಕೋಮುವಾರು ಪ್ರಾತಿನಿಧ್ಯವಾಗಿರಬೇಕೆಂಬ ನಿಯಮವನ್ನು ರೂಪಿಸಿದರು. ಅಂದರೆ ಭಾರತೀಯರನ್ನು ಹಿಂದೂ, ಮುಸ್ಲಿಮ್, ಸಿಖ್ ಧರ್ಮೀಯರು ಎಂದು ಪರಿಗಣಿಸಿ ಆಯಾ ಧಾರ್ಮಿಕ ಜನರ ಜನಸಂಖ್ಯಾ ಅನುಪಾತಕ್ಕೆ ತಕ್ಕಂತೆ ಆಡಳಿತದ ಪ್ರಾತಿನಿಧ್ಯವನ್ನು ನೀಡುವ ಒಡೆದಾಳುವ ಯೋಜನೆ.

ಇದನ್ನು ಭಾರತದ ಸ್ವಾತಂತ್ಯ ಹೋರಾಟಗಾರರು ಒಪ್ಪಿಕೊಂಡರು. 1916ರ ಲಖ್ನೋ ಸಭೆಯಲ್ಲಿ ಕಾಂಗ್ರೆಸ್ ಮತ್ತು ಮುಸ್ಲಿಮ್ ಲೀಗ್ ಹಾಗೂ ಹಿಂದೂ ಮಹಾಸಭಾಗಳು ಈ ಬಗ್ಗೆ ಒಂದು ಒಪ್ಪಂದಕ್ಕೆ ಬಂದವು. ಇದರಿಂದಾಗಿ ಪ್ರತಿಯೊಂದು ಸಮುದಾಯವು ತನ್ನ ಜನಸಂಖ್ಯೆಯ ಗಾತ್ರವನ್ನು ಹಿಗ್ಗಿಸಿ ತೋರಿಸಿ ರಾಜಕೀಯ ಪ್ರಾತಿನಿಧ್ಯ ಪ್ರಮಾಣವನ್ನು ಹೆಚ್ಚಿಸಿಕೊಳ್ಳಲು ಮುಂದಾಗುವ ರಾಜಕೀಯ ಪ್ರಾರಂಭಿಸಿದವು.

ಅದರಿಂದಾಗಿಯೇ ಈವರೆಗೆ ಅಸ್ಪಶ್ಯರನ್ನು ಹಿಂದೂ ಸಮಾಜದ ಭಾಗವಾಗಿ ಎಂದೂ ಪರಿಗಣಿಸದ ಹಿಂದೂ ನಾಯಕರು, ಕಾಂಗ್ರೆಸ್‌ಗರು, ಹಿಂದೂ ಮಹಾಸಭಿಗಳು ಕೇವಲ ರಾಜಕಿಯ ಗಣಿತದ ಕಾರಣಕ್ಕೆ ಇದ್ದಕ್ಕಿದ್ದಂತೆ ಅಸ್ಪಶ್ಯರನ್ನು ಹಿಂದೂ ಸಮಾಜದ ಭಾಗವೆಂದು ಘೋಷಿಸಲಾರಂಭಿಸಿದರು. ಆದರೆ ಇದನ್ನು ಮುಸ್ಲಿಮ್ ಲೀಗ್ ತನ್ನದೇ ಲೆಕ್ಕಾಚಾರದ ಕಾರಣಕ್ಕೆ ವಿರೋಧಿಸಿ ಯಾವ ಕಾರಣಕ್ಕೂ ಅಸ್ಪಶ್ಯರನ್ನು ಹಿಂದೂಗಳೆಂದು ಪರಿಗಣಿಸಬಾರದೆಂದು ಆಗ್ರಹಿಸಿತು. ಅದರ ಭಾಗವಾಗಿಯೇ 1910ರಲ್ಲಿ ನಡೆದ ಸೆನ್ಸಸ್‌ನಲ್ಲಿ ಹಿಂದೂಗಳು, ಆದಿವಾಸಿಗಳು ಮತ್ತು ಅಸ್ಪಶ್ಯರು ಎಂಬ ಮೂರು ಪ್ರತ್ಯೇಕ ಗಣತಿಗಳೇ ನಡೆದವು.

ಅಂಬೇಡ್ಕರ್ ಪ್ರತಿಪಾದನೆ- ‘ಪ್ರತ್ಯೇಕ ಪ್ರಾತಿನಿಧ್ಯದಿಂದ ಮಾತ್ರ ಸ್ವಾಭಿಮಾನಿ ಅಸ್ತಿತ್ವ’

ಈ ಕಾಲಘಟ್ಟದಲ್ಲಿ ಅಂಬೇಡ್ಕರ್ ಅವರು ಭಾರತದ ಭವಿಷ್ಯ ನಿರ್ಮಾಣಕ್ಕೆ ಪೂರ್ವಭಾವಿಯಾಗಿದ್ದ ಪ್ರಾತಿನಿಧ್ಯದ ರಾಜಕಾರಣದ ಸಮಾಲೋಚನಾ ರಾಜಕಾರಣದಲ್ಲಿ ಭಾಗವಹಿಸುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಮಾರ್ಲೆ-ಮಿಂಟೊ ಸುಧಾರಣೆಯ ನಂತರ ಆಡಳಿತದಲ್ಲಿ ಮಾತ್ರವಲ್ಲದೆ ಶಾಸನ ಸಭೆಗಳಲ್ಲೂ ಭಾರತೀಯರಿಗೆ ಸೂಕ್ತ ಪ್ರಾತಿನಿಧ್ಯ ಬೇಕೆಂಬ ಕೂಗು ಮಾಂಟೆಗು-ಚೆಲ್ಮ್ಸ್‌ಫರ್ದ್ ಸುಧಾರಣೆಯಲ್ಲಿ ಕೇಳಿಬಂತು. 1910-1920ರ ನಡುವೆ ಭಾರತದ ಸ್ವಾತಂತ್ರ್ಯ ಹೋರಾಟ ಬೃಹತ್ ಪ್ರಮಾಣದಲ್ಲಿ ವ್ಯಾಪಿಸತೊಡಗಿತ್ತು. ಆಗತಾನೇ ಮೊದಲ ಮಹಾಯುದ್ಧ ಮುಗಿದು ಬ್ರಿಟಿಷರು ಹೈರಾಣಾಗಿದ್ದರು. ಭಾರತದಲ್ಲಿ ಜನಬಂಡಾಯಗಳನ್ನು ಸೀಮಿತ ಪ್ರಾತಿನಿಧ್ಯದ ಮೂಲಕ ತಡೆಯುವ ನೀತಿಯನ್ನು ಅನುಸರಿಸತೊಡಗಿತ್ತು. ಅದರ ಭಾಗವಾಗಿಯೇ 1919 ರಲ್ಲಿ ಭಾರತೀಯರಿಗೆ ಸ್ಥಳೀಯ ಮತ್ತು ಕೇಂದ್ರೀಯ ಶಾಸನ ಸಭೆಗಳಲ್ಲಿ ಪ್ರಾತಿನಿಧ್ಯವನ್ನು ಯಾವ ಆಧಾರದಲ್ಲಿ ಕೊಡಬಹುದೆಂದು ಸಮಾಲೋಚನೆ ನಡೆಸಲು ಬ್ರಿಟಿಷರು ಸೌತ್‌ಬರೋ ಸಮಿತಿಯನ್ನು (Southborough Committee) ನೇಮಿಸುತ್ತಾರೆ.

ಸೌತ್‌ಬರೋ ಸಮಿತಿಯ ಮುಂದೆ ಅತ್ಯಂತ ತಾರ್ಕಿಕ, ವೈಜ್ಞಾನಿಕ ಮತ್ತು ಪ್ರೌಢ ಪ್ರಜಾತಾಂತ್ರಿಕ ವಾದವನ್ನು ಮಂಡಿಸುವ ಅಂಬೇಡ್ಕರ್ ಹೇಗೆ ಅಸ್ಪಶ್ಯರು ಐತಿಹಾಸಿಕವಾಗಿಯಾಗಲೀ, ವರ್ತಮಾನದಲ್ಲಾಗಲೀ, ಹಿಂದೂ ಧರ್ಮದ ಮತ್ತು ಹಿಂದೂ ಸಮಾಜದ ಭಾಗವಾಗಿಯೇ ಇಲ್ಲವೆಂದು ಸಾಬೀತು ಮಾಡುತ್ತಾರೆ. ಮತ್ತು ಸವರ್ಣೀಯ ಹಿಂದೂ ಮತ್ತು ಅಸ್ಪಶ್ಯರ ಸಂಬಂಧ ದಮನಕಾರಿ ಸಂಬಂಧವಾಗಿದ್ದು ಅಸ್ಪಶ್ಯರನ್ನು ಹಿಂದೂ ಸಮಾಜದ ಜೊತೆಗೆ ಸೇರಿಸಿದರೆ ದಲಿತರು ಶಾಶ್ವತ ದಾಸ್ಯಕ್ಕೆ ಒಳಪಡುತ್ತಾರೆ ಎಂದು ಅಂಕಿಅಂಶಗಳೊಂದಿಗೆ ಪ್ರತಿಪಾದಿಸುತ್ತಾರೆ. ಹೀಗಾಗಿ ಯಾವ ರೀತಿ ಸಿಖ್ಖರನ್ನು, ಮುಸ್ಲಿಮರನ್ನು ಪ್ರತ್ಯೇಕ ಕೋಮುಗಳೆಂದು ಪರಿಗಣಿಸಲಾಗಿದೆಯೋ ಅದೇ ರೀತಿ ಅಸ್ಪಶ್ಯರನ್ನು ಪ್ರತ್ಯೇಕ ಕೋಮು ಎಂದೇ ಪರಿಗಣಿಸಿ ಪ್ರತ್ಯೇಕ ಮತದಾರರ ಮತ್ತು ಮೀಸಲು ಮತಕ್ಷೇತ್ರಗಳ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸುತ್ತಾರೆ. ಈ ರೀತಿ ಪ್ರತ್ಯೇಕ ರಾಜಕೀಯ ಪ್ರಾತಿನಿಧ್ಯ ದೊರೆತರೆ ಮಾತ್ರ ಸ್ವತಂತ್ರ, ಸ್ವಾಯತ್ತ ದಲಿತ ಅಸ್ಮಿತೆ ಸಾಧ್ಯವಾಗಿ ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಹಿಂದೂ ಪರಾಧೀನತೆಯಿಂದ ವಿಮೋಚನೆಗೊಳ್ಳಲು ಸಾಧ್ಯವೆಂದು ಪ್ರತಿಪಾದಿಸುತ್ತಾರೆ.

ಈ ರಾಜಕೀಯ ಸಂದರ್ಭದಲ್ಲೇ ಬೆಳಗಾವಿಯಲ್ಲಿ 1924ರಲ್ಲಿ ಕಾಂಗ್ರೆಸ್ ಅಧಿವೇಶನ ನಡೆಯುತ್ತದೆ. ಆ ವೇಳೆಗಾಗಲೇ ಅಸ್ಪಶ್ಯರ ಪ್ರತ್ಯೇಕ ಪ್ರಾತಿನಿಧ್ಯವನ್ನು ಕಾಂಗ್ರೆಸ್ ವಿರೋಧಿಸಿರುತ್ತದೆ ಮತ್ತು ಅಸ್ಪಶ್ಯರ ಮನಒಲಿಸಲು ಕಾಂಗ್ರೆಸ್‌ನ ಇತಿಹಾಸದಲ್ಲೇ ಪ್ರಥಮ ಬಾರಿಗೆ ಗಾಂಧಿಯವರ ನೇತೃತ್ವದಲ್ಲಿ ಕಾಂಗ್ರೆಸ್ ಮತ್ತು ಸವರ್ಣೀಯ ಹಿಂದೂಗಳು ಅಸ್ಪಶ್ಯತಾ ನಿವಾರಣೆಯ ಹೆಸರಲ್ಲಿ ಕೆಲವು ಸಾಂಕೇತಿಕ ಹಾಗೂ ಪರಿಣಾಮಶೂನ್ಯ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಾರೆ.

ಈ ಹಿನ್ನೆಲೆಯಲ್ಲಿ 1924ರ ಬೆಳಗಾವಿಯ ಅಧಿವೇಶನ ಕೂಡ ಎಂದಿನಂತೆ ಅಸ್ಪಶ್ಯತಾ ನಿವಾರಣಾ ಯೋಜನೆಯನ್ನು ತನ್ನ ಕಾರ್ಯಕ್ರಮವಾಗಿ ಘೋಷಿಸುತ್ತದೆ. ಎಂದಿನಂತೆ ಅದೇ ಪೆಂಡಲಿನಲ್ಲಿ ಸಾಮಾಜಿಕ ಸಮಾವೇಶಗಳಾದ ನಂತರ ಹಿಂದೂ ಮಹಾಸಭಾ ಸಮಾವೇಶವೂ ನಡೆಯುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಶಿವಸುಂದರ್

contributor

Similar News