ಅಂಬೇಡ್ಕರ್ ದ್ವೇಷಿ, ಸಂವಿಧಾನ ದ್ರೋಹಿಗಳ ‘ಸಂವಿಧಾನ ಸನ್ಮಾನ ಅಭಿಯಾನ’

ಸಂಘಪರಿವಾರದ ಅಂಗಸಂಸ್ಥೆಗಳು ಈಗ ನಡೆಸುತ್ತಿರುವ ‘ಸಂವಿಧಾನ ಸನ್ಮಾನ ಅಭಿಯಾನ’ದಲ್ಲಿ ಸಂವಿಧಾನದ ಹಾಗೂ ಅಂಬೇಡ್ಕರ್ರ ನಿಜವಾದ ಅನುಯಾಯಿಗಳು ತಾವೇ ಹೊರತು ಕಾಂಗ್ರೆಸ್ ಅಥವಾ ಇತರ ಪಕ್ಷಗಳಲ್ಲ ಎಂದು ನಂಬಿಸಲು ಹಲವಾರು ಸುಳ್ಳುಗಳನ್ನು, ಐತಿಹಾಸಿಕ ಅರ್ಧ ಸತ್ಯಗಳನ್ನು, ಪ್ರಚಾರ ಮಾಡುತ್ತಿದೆ. ಆ ಮೂಲಕ ತನ್ನ ನಿಜ ಸ್ವರೂಪವಾದ ಅಂಬೇಡ್ಕರ್ ದ್ವೇಷ ಹಾಗೂ ಸಂವಿಧಾನ ದ್ರೋಹವನ್ನು ಮರೆಮಾಚುವ ಕುತಂತ್ರ ನಡೆಸಿದೆ.. ಈ ಸರಣಿ ಲೇಖನವು ಸಂಘಿ ಅಭಿಯಾನದ ಸುಳ್ಳುಗಳನ್ನು, ಬಯಲಿಗೆಳೆಯಲಿದೆ ಮತ್ತು ಸಂಘಿಗಳ ಅಸಲಿ ಪಾತ್ರವನ್ನು ಮತ್ತು ಹಾಲಿ ದುರುದ್ದೇಶಗಳನ್ನು ಅನಾವರಣ ಮಾಡಲಿದೆ.. ಕರ್ನಾಟಕದ ರಾಜಕೀಯ ಆರೋಗ್ಯದ ಹಿತದೃಷ್ಟಿಯಿಂದ ಈ ಸರಣಿಯನ್ನು ಪ್ರಕಟಿಸಲಾಗುತ್ತಿದೆ.

Update: 2024-12-11 05:03 GMT

ಸರಣಿ- 8

-ನಂತರ 1952ರಲ್ಲಿ ಶೆಡ್ಯೂಲ್ಡ್ ಕಾಸ್ಟ್ ಫೆಡರೇಷನ್(ಎಸ್.ಸಿ.ಎಫ್.)ನ ಚುನಾವಣಾ ಪ್ರಣಾಳಿಕೆಯಲ್ಲಿ ಕಾಶ್ಮೀರ ಸಮಸ್ಯೆಗೆ ಏಕೆ ಮತ್ತು ಹೇಗೆ ಜನಮತಗಣನೆಯೇ ಪರಿಹಾರವೆಂದು ವಿವರಿಸುತ್ತಾರೆ:

‘‘ಕಾಶ್ಮೀರದ ವಿಷಯದಲ್ಲಿ ಕಾಂಗ್ರೆಸ್ ಸರಕಾರವು ಅಳವಡಿಸಿಕೊಂಡಿರುವ ನೀತಿಯು ಶೆಡ್ಯೂಲ್ಡ್ ಕಾಸ್ಟ್ ಫೆಡರೇಷನ್ಗೆ ಸಮ್ಮತವಿಲ್ಲ. ಈ ನೀತಿಯು ಹೀಗೆ ಮುಂದುವರಿದಲ್ಲಿ ಅದು ಭಾರತ ಮತ್ತು ಪಾಕಿಸ್ತಾನದ ನಡುವೆ ಶಾಶ್ವತ ವೈರತ್ವವನ್ನು ಹುಟ್ಟುಹಾಕುತ್ತದೆ ಮತ್ತು ಎರಡೂ ದೇಶಗಳ ನಡುವೆ ಯುದ್ಧ ನಡೆಯುವ ಸಾಧ್ಯತೆಯನ್ನೂ ಹೆಚ್ಚಿಸುತ್ತದೆ. ಎರಡೂ ದೇಶಗಳು ಒಳ್ಳೆಯ ಮತ್ತು ಸ್ನೇಹಪೂರ್ವಕ ನೆರೆಹೊರೆಯವರಾಗಿ ಮುಂದುವರಿಯುವುದು ಎರಡೂ ದೇಶಗಳಿಗೂ ಒಳ್ಳೆಯದು ಮತ್ತು ಅತ್ಯಗತ್ಯವಾದದ್ದು. ಈ ಉದ್ದೇಶವನ್ನು ಸಾಧ್ಯಗೊಳಿಸಲು ಪಾಕಿಸ್ತಾನದ ಬಗ್ಗೆ ನಾವು ಅನುಸರಿಸುವ ನೀತಿಯು ಎರಡು ಮುಖ್ಯ ವಿಷಯಗಳನ್ನು ಪರಿಗಣಿಸಬೇಕು:

1. ಈಗಾಗಲೇ ಆಗಿರುವ ದೇಶ ವಿಭಜನೆಯನ್ನು ರದ್ದುಗೊಳಿಸುವ ಮಾತುಗಳನ್ನು ಯಾರೂ ಆಡಬಾರದು. ದೇಶ ವಿಭಜನೆ ಆಗಿರುವುದನ್ನು ಎರಡೂ ದೇಶಗಳು ವಾಸ್ತವವೆಂದು ಒಪ್ಪಿಕೊಳ್ಳಬೇಕು ಮತ್ತು ಎರಡೂ ದೇಶಗಳು ಎರಡು ಭಿನ್ನ ಸಾರ್ವಭೌಮಿ ದೇಶಗಳಾಗಿ ಮುಂದುವರಿಯಬೇಕು.

2. ಕಾಶ್ಮೀರವನ್ನು ವಿಭಜಿಸಬೇಕು. ಕಾಶ್ಮೀರದ ಮುಸ್ಲಿಮ್ ಬಾಹುಳ್ಯದ ಪ್ರಾಂತವು, ಕಾಶ್ಮೀರ ಕಣಿವೆಯಲ್ಲಿರುವ ಮುಸ್ಲಿಮರು ಇಚ್ಛೆ ಪಟ್ಟಲ್ಲಿ, ಪಾಕಿಸ್ತಾನಕ್ಕೆ ಹೋಗಬೇಕು ಮತ್ತು ಮುಸ್ಲಿಮೇತರರು ವಾಸಿಸುವ ಜಮ್ಮು ಮತ್ತು ಲಡಾಖ್ ಪ್ರಾಂತವು ಭಾರತಕ್ಕೆ ಸೇರಬೇಕು.’’

(DR. BABASAHEB AMBEDKAR : WRITINGS AND SPEECHES VOL. 17-1, p. 396)

-1952ರಲ್ಲಿ ಸಂಸತ್ತಿನಲ್ಲಿ ನಡೆದ ಭಾರತದ ವಿದೇಶಾಂಗ ನೀತಿ ಹಾಗೂ ರಕ್ಷಣಾ ವೆಚ್ಚಗಳ ಬಗೆಗಿನ ಚರ್ಚೆಯಲ್ಲಿ ಭಾಗವಹಿಸುತ್ತಾ ಅಂಬೇಡ್ಕರ್ ಅವರು ಮತ್ತೊಮ್ಮೆ ಕಾಶ್ಮೀರ ವಿವಾದದ ಬಗ್ಗೆ ತಮ್ಮ ನಿಲುವನ್ನು ಒತ್ತಿಹೇಳುತ್ತಾರೆ:

‘‘ಕಾಶ್ಮೀರದಂತಹ ವಿವಾದಾಸ್ಪದ ವಿಷಯಗಳನ್ನು ಬಗೆಹರಿಸಲು ಜನಮತಗಣನೆಯೆಂಬ ಸಾಧನವನ್ನು ಬಳಸಬೇಕೇ ಎಂಬುದನ್ನು ಅರಿಯಲು ತೀರಾ ಹಳೆಯ ಪುರಾವೆಗಳನ್ನು ಹುಡುಕುವ ಅಗತ್ಯವೇನೂ ಇಲ್ಲ. ಎರಡನೇ ಮಹಾಯುದ್ಧದ ನಂತರ, ನನಗೆ ನೆನಪಿರುವ ಹಾಗೆ, ಎರಡು ಪ್ರಕರಣಗಳನ್ನು ಜನಮತಗಣನೆಯ ಮೂಲಕ ಬಗೆಹರಿಸಬೇಕಾಯಿತು. ಒಂದು (ಆಗ ಪೋಲ್ಯಾಂಡಿನ ಭಾಗವಾಗಿದ್ದು ಜರ್ಮನಿ ಮತ್ತು ಪೋಲ್ಯಾಂಡ್ನ ನಡುವೆ ತಗಾದೆಗೊಳಗಾಗಿದ್ದ-ಲೇ.) ಉತ್ತರ ಸಿಲೇಸಿಯಾ ಮತ್ತೊಂದು (ಈ ಹಿಂದೆ ಜರ್ಮನರು ಫ್ರೆಂಚರಿಂದ ವಶಪಡಿಸಿಕೊಂಡಿದ್ದ-ಲೇ.) ಅಲ್ಸೇಸ್-ಲೋರೈನ್ ಪ್ರಾಂತ. ಈ ಎರಡೂ ವಿವಾದಗಳನ್ನು ಜನಮತಗಣನೆಯ ಮೂಲಕ ಅಲ್ಲಿನ ನಿವಾಸಿಗಳ ಮತಾಭಿಪ್ರಾಯಗಳ ಆಧಾರದ ಮೇಲೆ ತೀರ್ಮಾನಿಸಲಾಯಿತು. ಪ್ರಬುದ್ಧರು ಮತ್ತು ಮೇಧಾವಿಗಳು ಮತ್ತು ನನ್ನ ಗೌರವಾನ್ವಿತ ಸ್ನೇಹಿತರೂ ಆಗಿರುವ ಗೋಪಾಲಸ್ವಾಮಿ ಅಯ್ಯಂಗಾರ್ ಅವರಿಗೆ ಈ ವಿಷಯವು ತಿಳಿದಿರುತ್ತದೆ ಎಂದೇ ನಾನು ಭಾವಿಸುತ್ತೇನೆ. ಉತ್ತರ ಸಿಲೇಸಿಯಾ ಮತ್ತು ಅಲ್ಸೇವ್-ಲೋರೈನ್ ಪ್ರಾಂತದ ವಿವಾದಗಳನ್ನು ಬಗೆಹರಿಸಲು ಅಂದಿನ ಲೀಗ್ ಆಫ್ ನೇಷನ್ಸ್ ಅನುಸರಿಸಿದ ಮಾದರಿನ್ನೇ ಕಾಶ್ಮೀರದಲ್ಲಿ ಅಳವಡಿಸುವ ಮೂಲಕ ಈ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಿ, ಈ ವಿವಾದವು ರಕ್ಷಣಾ ಬಜೆಟ್ನಲ್ಲಿ ನುಂಗಿಹಾಕುತ್ತಿರುವ 50 ಕೋಟಿ ರೂ. ನಮ್ಮ ಜನರ ಅಗತ್ಯಗಳಿಗೆ ಬಳಸಿಕೊಳ್ಳಲಾಗದೇ?’’

(DR. BABASAHEB AMBEDKAR : WRITINGS AND SPEECHES VOL. 15, p. 849)

ಹೀಗೆ ಅಂಬೇಡ್ಕರ್ ಅವರು ಅತ್ಯಂತ ಸ್ಪಷ್ಟವಾಗಿ ಭಾರತ ಮತ್ತು ಪಾಕಿಸ್ತಾನದ ಸ್ನೇಹಯುತ ಸಂಬಂಧದ ಪರವಾಗಿದ್ದರು ಮತ್ತು ಕಾಶ್ಮೀರದಲ್ಲಿ ಕಡ್ಡಾಯವಾಗಿ ಜನಮತಗಣನೆ ನಡೆದು ಅಲ್ಲಿನ ಜನರ ಅಭಿಪ್ರಾಯಕ್ಕೆ ತಕ್ಕಂತೆ ನಡೆದುಕೊಳ್ಳಲು ಅವಕಾಶ ಮಾಡಿಕೊಡುವುದರ ಪರವಾಗಿದ್ದರು. ಅದರಿಂದ ಮಾತ್ರ ಭಾರತಕ್ಕೂ, ಪಾಕಿಸ್ತಾನಕ್ಕೂ ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಕಾಶ್ಮೀರದ ಜನತೆಗೂ ಒಳಿತಾಗುತ್ತದೆ ಎಂಬ ಸ್ಪಷ್ಟ ಅಭಿಪ್ರಾಯವನ್ನು ಹೊಂದಿದ್ದರು.

ಇವತ್ತಿಗೂ ಆಗಬೇಕಿರುವುದು ಅದೇ. ಕಾಶ್ಮೀರಿಗಳ ಜಮನತಗಣನೆಯೇ ವಿನಾ ಆರ್ಟಿಕಲ್ 370ರ ರದ್ದತಿಯಲ್ಲ. ಅಂಬೇಡ್ಕರ್ ಅವರು ಮೋದಿ-ಶಾ ಸರಕಾರ ಕಾಶ್ಮೀರಿಗಳ ಮೇಲೆ ಮಾಡಿರುವ ಈ ದಾಳಿಯನ್ನು ಎಂದಿಗೂ ಒಪ್ಪುತ್ತಿರಲಿಲ್ಲ.

ಕಾಶ್ಮೀರ ವಿಷಯದಲ್ಲಿ ಅಂಬೇಡ್ಕರ್ ನಿಲುವಿನ ಬಗ್ಗೆ ಸಂಘಿಳು ಹೇಳುತ್ತಿರುವ ಸುಳ್ಳಿಗೆ ಮಿತಿಯೇ ಇಲ್ಲ.

ಒಬಿಸಿ ಮೀಸಲಾತಿ ಮತ್ತು ಸಂಘಿಗಳು

ಮೂರನೆಯದು ಒಬಿಸಿ ಮೀಸಲಾತಿ ವಿಚಾರ. ಮೀಸಲಾತಿಯು ಸಾಮಾಜಿಕ ಹಾಗೂ ಆರ್ಥಿಕ ನ್ಯಾಯದ ವಿಷಯ. ಸಂವಿಧಾನವು ಸಾಮಾಜಿಕ ನ್ಯಾಯದ ಭರವಸೆಯನ್ನು ನೀಡಿದ್ದರೂ ರಾಜ್ಯಾಧಿಕಾರವು ಈ ದೇಶದ ಪ್ರಬಲ ಆಳುವವರ್ಗಗಳಿಗೆ ಹಸ್ತಾಂತರವಾಗಿದ್ದರಿಂದ ಸಾಮಾಜಿಕ ನ್ಯಾಯದ ಭರವಸೆಯನ್ನು ಜಾರಿಗೊಳಿಸುವ ಬಗ್ಗೆ ಕಾಂಗ್ರೆಸ್ ಮತ್ತು ಇತರ ಎಲ್ಲಾ ಸವರ್ಣೀಯ ಹಿಂದೂ ಪಕ್ಷಗಳಿಗೆ ಅಂತಹ ದೊಡ್ಡ ಕಕ್ಕುಲಾತಿ ಏನೂ ಇರಲಿಲ್ಲ. ವಾಸ್ತವವಾಗಿ ಆಗ ನ್ಯಾಯಾಂಗವೂ ಸಾಮಾಜಿಕ ನ್ಯಾಯದ ಶಾಸನಗಳನ್ನು ಸಂವಿಧಾನ ವಿರೋಧಿ ಎಂದೇ ಪರಿಗಣಿಸುತ್ತಿತ್ತು. ಹೀಗಾಗಿಯೇ ಸಂವಿಧಾನಕ್ಕೆ ಮೊದಲ ತಿದ್ದುಪಡಿಯನ್ನು ಮಾಡಬೇಕಾಗಿ ಬಂತು. ಅದರ ಬಗ್ಗೆ ವಿಷದವಾಗಿ ನಂತರ ಚರ್ಚಿಸೋಣ.

ಜಾತಿ ಅಸ್ಮಿತೆಗಳ ಆಧಾರದ ಬೇಡಿಕೆಗಳನ್ನು ಪರಿಗಣಿಸುವುದು ಹೊಸದಾಗಿ ರೂಪುಗೊಳ್ಳಬೇಕಿರುವ ಭಾರತ ರಾಷ್ಟ್ರ ಅಸ್ಮಿತೆಗೆ ಧಕ್ಕೆ ತರುತ್ತದೆ ಎಂಬುದು ಆಗಿನ ಕಾಂಗ್ರೆಸನ್ನು ಒಳಗೊಂಡಂತೆ ಎಲ್ಲಾ ಆಳುವ ಪಕ್ಷಗಳ ಗ್ರಹಿಕೆಯಾಗಿತ್ತು. ಇದು ಅಂಬೇಡ್ಕರ್ ಅವರ ಸಮಾನತಾವಾದಿ ರಾಷ್ಟ್ರ ನಿರ್ಮಾಣದ ಗ್ರಹಿಕೆಗೆ ವಿರುದ್ಧವಾಗಿತ್ತು. ಆದ್ದರಿಂದ ನೆಹರೂ ಸರಕಾರಕ್ಕೂ ಮತ್ತು ಅಂಬೆಡ್ಕರ್ ಅವರಿಗೂ ಈ ವಿಷಯದಲ್ಲಿ ವೈರುಧ್ಯವಿದ್ದದ್ದು ನಿಜ.

ವಾಸ್ತವದಲ್ಲಿ ನೆಹರೂ ಸರಕಾರ ಅರೆಮನಸ್ಸಿನಿಂದ ಕಾಕಾ ಕಾಲೇಲ್ಕರ್ ನೇತೃತ್ವದಲ್ಲಿ ಮೊದಲ ಹಿಂದುಳಿದ ವರ್ಗಗಳ ಅಯೋಗವನ್ನು ನೇಮಿಸಿದರೂ ಅದರ ಅಧ್ಯಕ್ಷರಾದಿಯಾಗಿ ಸರಕಾರದವರೆಗೆ ಯಾರಿಗೂ ಅದನ್ನು ಜಾರಿಗೆ ತರುವ ಮನಸ್ಸಿರಲಿಲ್ಲ. ಏಕೆಂದರೆ ಮೀಸಲಾತಿಯು ಪ್ರತಿಭೆಯ ಜೊತೆ ರಾಜಿ ಮಾಡಿಕೊಂಡು ದೇಶದ ಪ್ರಗತಿಗೆ ಅಡ್ಡಿಯಾಗುತ್ತದೆ ಎಂಬುದೇ ಆಳುವವರ್ಗದ ನಿಲುವಾಗಿತ್ತು. ಹೀಗಾಗಿ ಕಾಲೇಲ್ಕರ್ ವರದಿ ಜಾರಿಯಾಗಲೇ ಇಲ್ಲ.

ಆದರೆ ಈ ಬಗ್ಗೆ ಸಂಘಿಗಳ ನಿಲುವೇನಾಗಿತ್ತು?

ಮೀಸಲಾತಿ ವಿಷಯದಲ್ಲಿ ಆಗಲೂ ಈಗಲೂ ಸಂಘಿಗಳ ನಿಲುವು ಸವರ್ಣೀಯ ಮತ್ತು ಬ್ರಾಹ್ಮಣೀಯ ನಿಲುವೇ ಆಗಿದೆ. ಅದು ಸಾಮಾಜಿಕ ನ್ಯಾಯ ವಿರೋಧಿಯೇ ಆಗಿತ್ತು. ಆಗಿದೆ. ಪ್ರತಿಭೆಯಿಲ್ಲದವರಿಗೆ ವಿಶೇಷ ಆದ್ಯತೆಯನ್ನು ಕೊಡುವುದು ದೇಶದ್ರೋಹಕ್ಕೆ ಸಮ ಎಂಬುದು ಸಂಘಿಗಳ ದೇಶಭಕ್ತ ಗ್ರಹಿಕೆ. ಸಾಮಾಜಿಕ ವ್ಯವಸ್ಥೆಯಲ್ಲಿ ಸ್ಥಿರತೆ ಬರಬೇಕೆಂದರೆ ಜಾತಿ ಆಧಾರಿತ ವೃತ್ತಿ ವಿಭಜನೆ ಅತ್ಯಗತ್ಯ ಎನ್ನುವುದು ಅವರ ಸಾಮಾಜಿಕ ತತ್ವ ಸಿದ್ಧಾಂತ. ಅದ್ದರಿಂದಲೇ ವರ್ಣಾಶ್ರಮ ಪ್ರತಿಪಾದಿಸುವ ಭಗವದ್ಗೀತೆಯನ್ನು ಕಡ್ಡಾಯ ಪಠ್ಯ ಮಾಡಬೇಕೆನ್ನುವುದು ಅವರ ಶೈಕ್ಷಣಿಕ ಯೋಜನೆ. ಸಾಮಾಜಿಕ ಸಮಾನತೆಯನ್ನು ಪ್ರತಿಪಾದಿಸುವ ಸಂವಿಧಾನವೇ ವಿದೇಶಿ ಎಂಬುದು ಅವರ ತಿರಸ್ಕಾರ. ವಾಸ್ತವದಲ್ಲಿ ದೇಶದಲ್ಲಿ ಉತ್ತಮ ತಳಿಯ ಜನರು ಹೆಚ್ಚಾಗಲು ಹಿಂದುಳಿದ ವರ್ಗದ ಜನರು ತಮ್ಮ ಮೊದಲ ಮಗುವನ್ನು ಬ್ರಾಹ್ಮಣರಿಂದ ಪಡೆದುಕೊಳ್ಳುವಂತಹ ಉತ್ತಮ ವ್ಯವಸ್ಥೆ ಕೇರಳದಲ್ಲಿತ್ತು ಎಂದು ಆರೆಸ್ಸೆಸ್ನ ಎರಡನೇ ಸರಸಂಘ ಚಾಲಕ ಗೋಳ್ವಾಲ್ಕರ್ ಆವರು ಮಾಡಿದ ಭಾಷಣ ಇತ್ತೀಚಿನವರೆಗೆ ಅವರ ಸಮಗ್ರ ಬರಹಗಳ ಸಂಪುಟದಲ್ಲಿರುತ್ತಿತ್ತು.

ಹೀಗಾಗಿಯೇ ಕಾಲೇಲ್ಕರ್ ವರದಿಯನ್ನು ಕಾಂಗ್ರೆಸ್ ಜಾರಿ ಮಾಡದಿದ್ದಾಗ ಅದನ್ನು ಸಂಘಿಗಳು ಪ್ರಶ್ನಿಸಲೂ ಇಲ್ಲ. ಎರಡನೇ ಹಿಂದುಳಿದ ವರ್ಗಗಳ ಆಯೋಗವಾದ ಮಂಡಲ್ ವರದಿಯ ವಿರುದ್ಧ ದೇಶಾದ್ಯಂತ ಹಿಂಸಾತ್ಮಕ ಪ್ರತಿಭಟನೆಯನ್ನು ಹುಟ್ಟು ಹಾಕಿದ ಮೊದಲಿಗರಲ್ಲಿ ಸಂಘಪರಿವಾರವಾಗಿದ್ದರೆ ಎರಡನೆಯ ಸ್ಥಾನದಲ್ಲಿ ಕಾಂಗ್ರೆಸಿತ್ತು. 1980ರ ದಶಕದಲ್ಲಿ ಗುಜರಾತ್ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಆಯಾ ರಾಜ್ಯ ಸರಕಾರಗಳು ಹಿಂದುಳಿದ ವರ್ಗದ ಮೀಸಲಾತಿ ಜಾರಿ ಮಾಡಿದಾಗಲೂ ಅದರ ವಿರುದ್ಧ ಹಿಂಸಾತ್ಮಕ ಪ್ರತಿಭಟನೆ ಮಾಡಿದ ಪ್ರಮುಖ ಶಕ್ತಿಗಳು ಸಂಘಪರಿವಾರದ ಅಂಗಸಂಸ್ಥೆಗಳೇ ಆಗಿದ್ದವು. ಇದೀಗ ಜಾತಿ ಜನಗಣತಿಯನ್ನು ಬಲವಾಗಿ ವಿರೋಧಿಸುತ್ತಿರುವವರೂ ಸಂಘಿಗಳೇ.

ಆದರೆ ಸಾಮಾಜಿಕ ನ್ಯಾಯದ ತತ್ವವನ್ನೇ ಗಾಳಿಗೆ ತೂರಿ ಮೇಲ್ಜಾತಿ ಮಧ್ಯಮ ವರ್ಗದವರಿಗೆ ಮೀಸಲಾತಿ ಕಲ್ಪಿಸಿದ್ದು ಮಾತ್ರ ಇದೇ ಒಬಿಸಿ ಮೀಸಲಾತಿ ವಿರೋಧಿ ಸಂಘಿಗಳು.

ಹೀಗಾಗಿ ಒಬಿಸಿ ಮೀಸಲಾತಿಯ ಬಗ್ಗೆ ಕಾಂಗ್ರೆಸ್ನ ನಿರಾಕರಣ ಧೋರಣೆಯನ್ನು ಅಂಬೇಡ್ಕರ್ ಪ್ರತಿಭಟಿಸಿದ್ದು ನಿಜ. ಆದರೆ ಅದರ ಅರ್ಥ ಸಂಘಿಗಳು ಮೀಸಲಾತಿ ಪರವಾಗಿದ್ದರು ಎಂಬ ಪ್ರಚಾರ ಅತಿ ದೊಡ್ಡ ಸುಳ್ಳು.

ಇನ್ನು ಸರಿಯಾದ ಇಲಾಖೆ ಕೊಡಲಿಲ್ಲ ಎಂಬ ಕಾರಣಕ್ಕೆ ಅಂಬೇಡ್ಕರ್ ರಾಜೀನಾಮೆ ಕೊಟ್ಟರು ಎಂಬ ಒಂದು ಕ್ಷುಲ್ಲಕ ಅಪಪ್ರಚಾರವೂ ಇದೆ. ಆದರೆ ಅದನ್ನೇ ಸಂಘಿಗಳು ಕೂಡ ಈ ಅಭಿಯಾನದಲ್ಲಿ ಮಾಡುತ್ತಿದ್ದಾರೆ.

ಎಲ್ಲಕ್ಕಿಂತ ಮುಖ್ಯವಾಗಿ 1951ರ ಚುನಾವಣೆಗಾಗಿ ತಯಾರಿಸಿದ ಶೆಡ್ಯೂಲ್ಡ್ ಕಾಸ್ಟ್ ಫೆೆಡರೇಶನ್ ಪ್ರಣಾಳಿಕೆಯಲ್ಲಿ ಅಂಬೇಡ್ಕರ್ ಹೀಗೆ ಸ್ಪಷ್ಟವಾಗಿ ನಮೂದಿಸಿದ್ದಾರೆ:

‘‘ಇತರ ಪಕ್ಷಗಳ ಸಂಬಂಧಗಳ ಬಗ್ಗೆ ಶೆಡ್ಯೂಲ್ಡ್ ಕಾಸ್ಟ್ ಫೆೆಡರೇಶನ್ನ ಧೋರಣೆ ಸ್ಪಷ್ಟವಾಗಿದೆ. ಶೆಡ್ಯೂಲ್ಡ್ ಕ್ಯಾಸ್ಟ್ ಫೆೆಡರೇಶನ್ ಹಿಂದೂ ಮಹಾಸಭಾ ಮತ್ತು ಆರೆಸ್ಸೆಸ್ನಂತಹ ಪ್ರಗತಿವಿರೋಧಿ ಪಕ್ಷಗಳ ಜೊತೆ ಯಾವುದೇ ಬಗೆಯ ಮೈತ್ರಿಯನ್ನು ಮಾಡಿಕೊಳ್ಳುವುದಿಲ್ಲ

(Dr. Babasaheb Ambedkar Writings and Speeches, Vol 17 (1)-p. 402)

ಹೀಗೆ ಅಂಬೇಡ್ಕರ್ ಅವರನ್ನು ರಾಜಕೀಯವಾಗಿ ಮತ್ತು ಸೈದ್ಧಾಂತಿಕವಾಗಿ ವಿರೋಧಿಸುತ್ತಾ, ಬೇಗುದಿಗೆ ತಳ್ಳುತ್ತಾ ಅಂತಿಮವಾಗಿ ರಾಜೀನಾಮೆ ಕೊಟ್ಟು ಹೊರಬರುವಂತೆ ಮಾಡುವಲ್ಲಿ ಕಾಂಗ್ರೆಸ್ನ ಎಷ್ಟು ಪಾತ್ರವಿದೆಯೋ ಅಷ್ಟೇ ಪಾತ್ರ ಸಂಘಿಗಳದ್ದೂ ಇದೆ.

5. ಸಂವಿಧಾನ ತಿದ್ದುಪಡಿಯೋ? ಸಂವಿಧಾನ ಬದಲಾವಣೆಯೋ?

2024ರ ಲೋಕಸಭಾ ಚುನಾವಣೆಯಲ್ಲಿ 400ಕ್ಕಿಂತಲೂ ಹೆಚ್ಚು ಸೀಟುಗಳು ಬಂದರೆ ಸಂವಿಧಾನವನ್ನು ಬದಲಾವಣೆ ಮಾಡುತ್ತೇವೆಂದು ಬಿಜೆಪಿ ಬಹಿರಂಗವಾಗಿ ಘೋಷಿಸಿತ್ತು. ಅದರ ಮಾತೃ ಸಂಘಟನೆ ಆರೆಸ್ಸೆಸ್ ಅಂತೂ ಮೊದಲಿಂದಲೂ ಈ ಸಂವಿಧಾನ ಮನುಸ್ಮತಿಗೆ ತಕ್ಕಂತೆ ಇಲ್ಲವೆಂದು ಒಪ್ಪಿಕೊಂಡಿಲ್ಲ. ಹೀಗಾಗಿ ಸಂವಿಧಾನವನ್ನು ಬದಲು ಮಾಡಿ ತಳಸಮುದಾಯಗಳ ಮೇಲೆ ಬ್ರಾಹ್ಮಣೀಯ-ಬಂಡವಾಳಶಾಹಿ ಗುಲಾಮಿಯನ್ನು ಜಾರಿ ಮಾಡುವುದೇ ಸಂಘಿಗಳ ನೈಜ ಕ್ರಿಯಾ ಯೋಜನೆ. ಆದರೆ ಅದನ್ನು ಮಾಡಲು ಬೇಕಾದ ಶಾಸನ ಬಲ ಇನ್ನೂ ಕೂಡಿ ಬಂದಿಲ್ಲ. ಈ ಚುನಾವಣೆಯಲ್ಲಿ ಆ ಬಲ ದಕ್ಕುವುದರ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿತ್ತು. ಆದರೆ ಅದು ಭಾರತದ ದಲಿತ ದಮನಿತ ಜನತೆಯಲ್ಲಿ ಹುಟ್ಟಿಸಿದ ಆತಂಕ ಅವರನ್ನು ಬಿಜೆಪಿಗೆ ಕೊಡುತ್ತಿದ್ದ ಬೆಂಬಲವನ್ನು ಹಿಂದೆಗೆದುಕೊಳ್ಳುವಂತೆ ಮಾಡಿತು.

ಅದ್ದರಿಂದ ಈಗ ಉಲ್ಟಾ ಮಾತಾಡುತ್ತಿರುವ ಸಂಘಿಗಳು ಮತ್ತೆ ದಲಿತ ದಮನಿತರನ್ನು ತೆಕ್ಕೆಗೆ ತೆಗೆದುಕೊಳ್ಳಲು ತಾವೇ ನಿಜವಾದ ಸಂವಿಧಾನ ರಕ್ಷಕರು ಎಂದು ಸೋಗು ಹಾಕುತ್ತಿವೆ. ಸಂವಿಧಾನ ಸಮ್ಮಾನ ಅಭಿಯಾನದಲ್ಲೂ ಅದೇ ತಪ್ಪು ಕಲ್ಪನೆಯನ್ನು ಬಿತ್ತುತ್ತಿದೆ. ಹಾಗೂ ಸಂವಿಧಾನಕ್ಕೆ ಅತಿ ಹೆಚ್ಚು ತಿದ್ದುಪಡಿ ಮಾಡಿರುವ ಕಾಂಗ್ರೆಸ್ ಪಕ್ಷವೇ ಸಂವಿಧಾನ ಬದಲಿಸಿದೆ ಎಂಬ ಅಪಕಲ್ಪನೆಯನ್ನೂ ಪ್ರಚಾರ ಮಾಡುತ್ತಿದೆ.

ಈ ಹುಸಿ ಸಂವಿಧಾನ ಸಮ್ಮಾನ ಅಭಿಯಾನಿಗಳ ಪ್ರಕಾರ ಕಳೆದ 75 ವರ್ಷಗಳಲ್ಲಿ ಸಂವಿಧಾನಕ್ಕೆ 106 ತಿದ್ದುಪಡಿಗಳನ್ನು ಮಾಡಲಾಗಿದ್ದು ಅದರಲ್ಲಿ ಕಾಂಗ್ರೆಸ್ ಪಕ್ಷವೇ 75 ತಿದ್ದುಪಡಿಗಳನ್ನು ಮಾಡಿದೆ. ಕಾಂಗ್ರೆಸೇತರ ಪಕ್ಷಗಳು ಮಾಡಿರುವುದು 35 ತಿದ್ದುಪಡಿಗಳು.

ಎಂದಿನಂತೆ ಇದರಲ್ಲೂ ಅರ್ಧ ಸತ್ಯ ಮತ್ತು ಹಸಿಸುಳ್ಳುಗಳಿವೆ. ಮೊದಲನೆಯದಾಗಿ ಸಂವಿಧಾನಕ್ಕೆ ತಿದ್ದುಪಡಿ ಮಾಡಿಕೊಳ್ಳುವ ಹಕ್ಕನ್ನು ಸಂವಿಧಾನವೇ ಒದಗಿಸಿದೆ. ಅಂಬೇಡ್ಕರ್ ಅವರು 1949ರ ನವೆಂಬರ್ 25ರಂದು ಮಾಡಿದ ಭಾಷಣದಲ್ಲಿ ಸ್ಪಷ್ಟಪಡಿಸಿರುವಂತೆ ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಅಗತ್ಯವಿರುವ ತಿದ್ದುಪಡಿಗಳನ್ನು ಮಾಡಿಕೊಳ್ಳುವುದು ಆಯಾ ಕಾಲದ ಜನರ ಹಕ್ಕು ಮತ್ತು ಅಧಿಕಾರ. ಆದರೆ ಅವು ಸಂವಿಧಾನದ ಮೂಲ ರಚನೆಯಾದ ಸಂಸದೀಯ ಪ್ರಜಾತಂತ್ರ, ನ್ಯಾಯಾಂಗದ ಸ್ವಾತಂತ್ರ್ಯ, ಒಕ್ಕೂಟ ಸ್ವರೂಪ, ಧರ್ಮ ನಿರಪೇಕ್ಷತೆ ಮತ್ತು ಕಲ್ಯಾಣ ರಾಜ್ಯಗಳ ಸ್ವರೂಪಕ್ಕೆ ತಿದ್ದುಪಡಿ ತರುವಂತಿಲ್ಲ. ಅಷ್ಟೆ. ಹೀಗಾಗಿ ಸಂವಿಧಾನಕ್ಕೆ ತಿದ್ದುಪಡಿಗಳನ್ನು ತರುವುದೆಂದರೆ ಸಂವಿಧಾನವನ್ನು ಬದಲಾವಣೆ ಮಾಡಿದಂತಲ್ಲ.

ಆದರೆ ಸಂವಿಧಾನದ ತಿದ್ದುಪಡಿಗಳ ಸಂದರ್ಭದಲ್ಲಿ ಕೇಳಬೇಕಾದ ಅತಿ ಮುಖ್ಯ ಪ್ರಶ್ನೆ ಅದರಿಂದ ಸಾಮಾನ್ಯ ಜನರ ಮತ್ತು ತಳಸಮುದಾಯಗಳ ಹಕ್ಕು, ಅಧಿಕಾರ ಮತ್ತು ಹಿತಾಸಕ್ತಿಯನ್ನು ರಕ್ಷಿಸಲಾಗುತ್ತಿದೆಯೇ ಎಂಬುದು. ಆದರೆ ಆ ಪ್ರಶ್ನೆಯನ್ನು ಸಂಘಿಗಳು ಕೇಳುವುದೇ ಇಲ್ಲ.

ಹಾಗೆ ನೋಡಿದರೆ ಸಂವಿಧಾನ ರಚನಾ ಸಭೆಯಲ್ಲಿ ಪ್ರಬಲ ಜಾತಿ ಮತ್ತು ವರ್ಗಗಳ ಸದಸ್ಯರೇ ಹೆಚ್ಚಿದ್ದರಿಂದ ಭಾರತದ ತಳಸಮುದಾಯದ ಸಾಮಾಜಿಕ ಆರ್ಥಿಕ ಹಕ್ಕುಗಳು ಮೂಲಭೂತ ಹಕ್ಕುಗಳಾಗಲಿಲ್ಲ. ಅವನ್ನು ಕೋರ್ಟಿನಲ್ಲಿ ಪ್ರಶ್ನಿಸಲಾಗದ ಪ್ರಭುತ್ವ ನಿರ್ದೇಶನಾ ತತ್ವಗಳಡಿಯಲ್ಲಿ ಸೇರಿಸಲಾಯಿತು. ಸ್ವಾತಂತ್ರ್ಯಾನಂತರ ಅಧಿಕಾರ ಸಿಕ್ಕಿದ್ದು ಮೇಲ್ಜಾತಿ, ಮೇಲ್ವರ್ಗಗಳಿಗೆ ಆಗಿದ್ದರಿಂದ ಈವರೆಗೆ ಆಗಿರುವ 106 ತಿದ್ದುಪಡಿಗಳಲ್ಲಿ ಯಾವ ತಿದ್ದುಪಡಿಗಳೂ ಸಾಮಾಜಿಕ ಆರ್ಥಿಕ ಹಕ್ಕುಗಳನ್ನು ನಾಗರಿಕ ಹಕ್ಕುಗಳಂತೆ ಮೂಲಭೂತ ಹಕ್ಕುಗಳನ್ನಾಗಿಸಲಿಲ್ಲ.

ಈವರೆಗೆ ಜಾರಿಯಾಗಿರುವ ಅಲ್ಪಸ್ವಲ್ಪ ಜನಪರ ಎನ್ನಬಹುದಾದ ತಿದ್ದುಪಡಿಗಳೂ ಕೂಡ ತಳಸಮುದಾಯಗಳಿಗೆ ಸಾಂಕೇತಿಕವಾದ ಅವಕಾಶ ಮತ್ತು ಹಕ್ಕುಗಳನ್ನು ಕೊಡಿಸುವಂತಹವೇ ವಿನಾ ಸಾರಭೂತ ಸಮಾನತೆ ಒದಗಿಸುವಂತಹದ್ದಲ್ಲ. ಉದಾಹರಣೆಗೆ ಮೀಸಲಾತಿ, ಆಸ್ತಿ ಹಕ್ಕು ರದ್ದತಿ ಇತ್ಯಾದಿಗಳು. ಉಳಿದಂತೆ ಬಹುಪಾಲು ತಿದ್ದುಪಡಿಗಳು ಆಳುವ ವರ್ಗಗಳ ನಡುವಿನ ಸಂಘರ್ಷವನ್ನು ಬಗೆಹರಿಸುವಂತಹ ತಿದ್ದುಪಡಿಗಳೇ ಆಗಿವೆ. ಉದಾಹರಣೆಗೆ ಸಂವಿಧಾನದಲ್ಲಿ ಸಂಸತ್ತಿನದು ಪರಮಾಧಿಕಾರವೇ ಅಥವಾ ನ್ಯಾಯಾಂಗದ್ದೇ ಎನ್ನುವುದು ಇತ್ಯಾದಿ. ಕೆಲವು ಸಂಸತ್ತಿನ ಗಾತ್ರ, ಪರಿಶಿಷ್ಟರ ರಾಜಕೀಯ ಪ್ರಾತಿನಿಧ್ಯದ ಮೀಸಲಾತಿಯ ಕಾಲ ವಿಸ್ತರಣೆಯಂತಹ ಕಾಲಕಾಲಕ್ಕೆ ತಕ್ಕಂತೆ ರೂಢಿಗತವಾಗಿ ಮಾಡಬೇಕಾದ ತಿದ್ದುಪಡಿಗಳು. ಉಳಿದಂತೆ 1991ರ ನಂತರ ಆಗಿರುವ ಬಹುಪಾಲು ತಿದ್ದುಪಡಿಗಳು ಕಲ್ಯಾಣ ರಾಜ್ಯದ ಪರಿಕಲ್ಪನೆಯನ್ನು ಬದಲಿಸಿ ಕಾರ್ಪೊರೇಟ್ ರಾಜ್ಯವನ್ನಾಗಿಸುವ ತಿದ್ದುಪಡಿಗಳು.

ಅದರಲ್ಲೂ ಬಿಜೆಪಿ ತಂದಿರುವ ಇಡಬ್ಲ್ಯುಎಸ್ ಮೀಸಲಾತಿ ತಿದ್ದುಪಡಿ, ರಾಜ್ಯಗಳ ಆರ್ಥಿಕ ಅಧಿಕಾರವನ್ನು ಕಸಿದ ಜಿಎಸ್ಟಿ ತಿದ್ದುಪಡಿ, ಸೆಸ್ ಹಾಗೂ ಸರ್ಚಾರ್ಜ್ ಅನ್ನು ಲೂಟಿ ಹೊಡೆಯುವ ಅಧಿಕಾರವನ್ನು ಕೇಂದ್ರಕ್ಕೆ ಒದಗಿಸುವ ವಾಜಪೇಯಿ ಕಾಲದ ತಿದ್ದುಪಡಿ, ನ್ಯಾಯಾಂಗದ ಸ್ವಾತಂತ್ರ್ಯವನ್ನು ಹತ್ತಿಕ್ಕುವ ತಿದ್ದುಪಡಿಗಳನ್ನು ಅಂಬೇಡ್ಕರ್ವಾದಿ ತಿದ್ದುಪಡಿಗಳೆನ್ನುವುದಂತೂ ಅಂಬೇಡ್ಕರ್ಗೆ ಮಾಡುವ ಮಹಾ ಅಪಮಾನ.

ಹೀಗೆ ಈವರೆಗೆ ಕಾಂಗ್ರೆಸ್ ತಂದ ತಿದ್ದುಪಡಿಗಳು ಅಂಬೇಡ್ಕರ್ ಆಶಯವನ್ನು ಮೂಲಭೂತವಾಗಿ ಸಾಕಾರಗೊಳಿಸುವುದೇನೂ ಆಗಿರಲಿಲ್ಲ. ಆದರೆ ಬಿಜೆಪಿ ತರುತ್ತಿರುವ ತಿದ್ದುಪಡಿಗಳು ಅಂಬೇಡ್ಕರ್ ಆಶಯಕ್ಕೆ ತದ್ವಿರುದ್ಧವಾಗಿವೆ ಮತ್ತು ಅಂಥ ತಿದ್ದುಪಡಿಗಳನ್ನು ಕಾಂಗ್ರೆಸ್ ಹಾಗೂ ಇತರ ಪಕ್ಷಗಳೂ ಅನುಮೋದಿಸುತ್ತಿವೆ. ಏಕೆಂದರೆ ಎರಡೂ ಪಕ್ಷಗಳ ವರ್ಗ ಹಿತಾಸಕ್ತಿಯಲ್ಲಿ ಹೆಚ್ಚು ಭಿನ್ನತೆ ಇಲ್ಲ.

ಹೀಗಾಗಿ ತಾವು ಅಂಬೇಡ್ಕರ್ ಸಂವಿಧಾನದ ರಕ್ಷಕರು ಎಂದು ಹೇಳಿಕೊಳ್ಳುವುದು ಮಹಾದ್ರೋಹ. ಏಕೆಂದರೆ ಸಂವು ಈ ಸಂವಿಧಾನದ ಆಶಯಗಳಿಗೆ ತದ್ವಿರುದ್ಧ ಆಶಯಗಳನ್ನು ಹೊಂದಿದೆ.

ಆದರೂ ತಾವು ಸಂವಿಧಾನ ರಕ್ಷಕರು ಉಳಿದವರಲ್ಲ ಎಂದು ಹೇಳಲು ಸಂಘಿಗಳು ಸಂವಿಧಾನದ ಮೊದಲ ತಿದ್ದುಪಡಿಯ ಹಿಂದೆ ನೆಹರೂ ಸರ್ವಾಧಿಕಾರವನ್ನು ಉಳಿಸಿಕೊಳ್ಳುವ ಅಗತ್ಯವಿತ್ತು. ಇಂದಿರಾ ತಂದ ತಿದ್ದುಪಡಿಗಳಲ್ಲಿ ಅಧಿಕಾರ ರಕ್ಷಿಸಿಕೊಳ್ಳುವ ತುರ್ತಿತ್ತು ಎಂದು ಪ್ರಚಾರ ಮಾಡುತ್ತಿದೆ.

ಇದರಲ್ಲೂ ಅರ್ಧ ಸತ್ಯಗಳಿವೆ. ಮತ್ತು ಹಸಿ ಸುಳ್ಳುಗಳಿವೆ. ಅವುಗಳನ್ನು ಒಂದೊಂದಾಗಿ ನೋಡೋಣ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News