ಭಗವದ್ಗೀತೆ ಮತ್ತು ದೇವನೂರರ ಆಪರೇಶನ್

Update: 2016-01-05 05:46 GMT

ಗವದ್ಗೀತೆಯ ಬಗ್ಗೆ ದೇವನೂರ ಮಹಾದೇವ ಅವರು ಆಡಿದ ಮಾತು ರಾಜ್ಯದಲ್ಲಿ ವಿವಾದದ ಅಲೆಯನ್ನು ಎಬ್ಬಿಸಿದೆ. ಈ ಹೇಳಿಕೆಯ ಪರವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ವೈಚಾರಿಕ ಸಂವಾದವೊಂದಕ್ಕೆ ಚಾಲನೆ ನೀಡಬೇಕಾಗಿದ್ದ ದೇವನೂರರ ಮಾತು ಸೌಜನ್ಯದ ಎಲ್ಲೆಮೀರಿದೆ. ಕೆ.ಎಸ್. ಭಗವಾನ್ ಅವರು ದೇವನೂರರನ್ನು ವ್ಯವಸ್ಥೆಯ ಗುಲಾಮ ಎಂದು ಕರೆದಿದ್ದಾರೆ. ಭಗವಾನರ ಈ ಮಾತಿನ ಬಗ್ಗೆ ಇಂದೂಧರ ಹೊನ್ನಾಪುರ, ಅಗ್ನಿ ಶ್ರೀಧರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಜ್ಯ ಹಿಂದುಳಿದ ವರ್ಗದ ಆಯೋಗದ ಹಿಂದಿನ ಅಧ್ಯಕ್ಷ ಕೆ.ಎಸ್. ದ್ವಾರಕಾನಾಥ್ ಮತ್ತು ನ್ಯಾಯವಾದಿ ಶ್ರೀಧರ ಪ್ರಭು ಎಲ್ಲೂ ಸೌಜನ್ಯದ ಎಲ್ಲೆಯನ್ನು ಮೀರದೆ ದೇವನೂರು ಅಭಿಪ್ರಾಯದ ಬಗ್ಗೆ ತಕರಾರು ತೆಗೆದಿದ್ದಾರೆ. ಈ ಸಂದರ್ಭದಲ್ಲಿ ಭಗವದ್ಗೀತೆಗಿಂತ ಸಂವಿಧಾನದ ಬಗ್ಗೆ ಚರ್ಚೆ ನಡೆಯಬೇಕಾಗಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಗೀತೆಯ ಬಗ್ಗೆ ಇದೇ ಮೊದಲ ಬಾರಿಯಲ್ಲ. ಅನೇಕ ವರ್ಷಗಳಿಂದ ಇದೇ ರೀತಿ ಚರ್ಚೆ ನಡೆಯುತ್ತಲೇ ಇದೆ. ಆದರೆ ವೈಚಾರಿಕ ಚರ್ಚೆ ವೈಯಕ್ತಿಕ ದ್ವೇಷಕ್ಕೆ ಕಿಡಿ ಹೊತ್ತಿಸಬಾರದು.

ಸ್ವಾತಂತ್ರ ಹೋರಾಟದ ಸಂದರ್ಭದಲ್ಲಿ ನಮ್ಮ ಅನೇಕ ಹಿಂದೂ ರಾಷ್ಟ್ರೀಯವಾದಿ ನಾಯಕರಿಗೆ ರಾಷ್ಟ್ರೀಯ ಆಸ್ಮಿತೆಗಾಗಿ ಭಗವದ್ಗೀತೆಯು ಸ್ಫೂರ್ತಿಯ ಸೆಲೆಯಾಗಿತ್ತು. ಬ್ರಿಟಿಷರನ್ನು ಎದುರಿಸಿ ಹೋರಾಡಲು ಗೀತೆಯನ್ನು ಅವರು ಬಳಸಿಕೊಂಡಿದ್ದು ನಿಜ. ಆದರೆ ಸ್ವಾತಂತ್ರೋತ್ತರ ಭಾರತದಲ್ಲಿ ಭಗವದ್ಗೀತೆಯನ್ನು ಸಂಪೂರ್ಣ ವ್ಯತಿರಿಕ್ತ ಉದ್ದೇಶಗಳಿಗಾಗಿ ಬಳಸಿಕೊಳ್ಳಲಾಗುತ್ತಿದೆ. ಬಲಪಂಥೀಯ ಶಕ್ತಿಗಳ ಬತ್ತಳಿಕೆಯಲ್ಲಿರುವ ಪ್ರಬಲ ವೈಚಾರಿಕ ಅಸ್ತ್ರ ಗೀತೆಯಾಗಿದೆ. ಅಂತಲೇ ಕೇಂದ್ರ ಸಚಿವ ಸುಷ್ಮಾ ಸ್ವರಾಜ್ ಅಧಿಕಾರ ವಹಿಸಿಕೊಂಡಾಗ ಭಗವದ್ಗೀತೆ ರಾಷ್ಟ್ರೀಯ ಗ್ರಂಥವಾಗಬೇಕು ಎಂದು ಹೇಳಿದರು.


ದೇವನೂರರು ಆಶಿಸಿದಂತೆ ಭಗವದ್ಗೀತೆಯಲ್ಲಿನ ತಾರತಮ್ಯದ ಗಡ್ಡೆಗಳನ್ನು ಆಪರೇಶನ್ ಮಾಡಿ ಬಿಸಾಡುವುದು ಅಷ್ಟು ಸುಲಭವಲ್ಲ. ಅದೀಗ ಕೋಮುವಾದಿ ಶಕ್ತಿಗಳ ಅಸ್ತ್ರವಾಗಿ ಬಳಕೆಯಾಗುತ್ತಿದೆ. ಎಲ್ಲ ಪ್ರಗತಿಪರ ಜಾತ್ಯತೀತ ಕ್ರಾಂತಿಕಾರಿ ಶಕ್ತಿಗಳ ವಿರುದ್ಧ ಈ ಅಸ್ತ್ರವನ್ನು ಬಳಸಲಾಗುತ್ತಿದೆ. ಗೀತೆಯನ್ನು ಬಳಸಿಕೊಂಡು ಅಂಧಶ್ರದ್ಧೆಗೆ ಪ್ರಚೋದನೆ ನೀಡಲಾಗುತ್ತಿದೆ. ‘ದೈವಲೀಲೆ’, ‘ಕರ್ಮಫಲ’, ‘ವಿಧಿನಿಯಮ’ ಮುಂತಾದ ನಿಯತಿವಾದಿ ವಿಚಾರಗಳನ್ನು ತುಂಬಲಾಗುತ್ತಿದೆ. ಭಗವದ್ಗೀತೆ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಸ್ಫೂರ್ತಿ ನೀಡಿದೆ. ಆದಿ ಶಂಕರಾಚಾರ್ಯರು ಗೀತೆಯಲ್ಲಿ ಪಾರಮಾರ್ಥಿಕ ಜ್ಞಾನ ಮತ್ತು ಸನ್ಯಾಸ ಮಾರ್ಗಗಳನ್ನು ಕಂಡರೆ, ಜ್ಞಾನೇಶ್ವರ, ಚೈತನ್ಯ ಮುಂತಾದ ಸಂತಕವಿಗಳಿಗೆ ಅದು ಭಕ್ತಿಯ ಸಂದೇಶವನ್ನು ನೀಡಿದೆ. ಲೋಕಮಾನ್ಯ ತಿಲಕರು ಗೀತೆಯಿಂದ ‘ಶಠಂ ಪ್ರತಿ ಶಾಠ್ಯಂ’ ಅಂದರೆ ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂಬ ಪಾಠ ಕಲಿತರೆ, ಮಹಾತ್ಮ ಗಾಂಧೀಜಿ ಗೀತೆಯಲ್ಲಿ ಅಹಿಂಸೆಯನ್ನು ಕಂಡರು. ಗೀತೆಯ ‘ಪವಾಡ’ ಇಲ್ಲಿಗೆ ನಿಲ್ಲುವುದಿಲ್ಲ. ಈ ದೇಶಕ್ಕೆ ಪರಕೀಯರಾದ ಮುಸಲ್ಮಾನರನ್ನು ವ್ಯವಸ್ಥಿತವಾಗಿ ಮುಗಿಸಬೇಕು ಎಂಬ ಸಿದ್ಧಾಂತವನ್ನು ಆರೆಸ್ಸೆಸ್ ಗುರು ಗೋಳ್ವಲ್ಕರ್ ಗೀತೆಯಿಂದಲೇ ಕಲಿತರು ಎಂದು ಖ್ಯಾತ ಮಾರ್ಕ್ಸ್‌ವಾದಿ ಚಿಂತಕ ಎಸ್.ಜಿ.ಸರ್ದೇಸಾಯಿ ಹೇಳುತ್ತಾರೆ. ಭಗವದ್ಗೀತೆ ಎಂಬುದು ವಿರೋಧಾಭಾಸಗಳ ಕಂತೆ. ಗೀತೆಯ ತುಂಬ ಪರಸ್ಪರ ವಿರುದ್ಧವಾಗಿರುವ ತಾತ್ವಿಕ ನಿಲುವುಗಳೇ ತುಂಬಿವೆ. ದೇವನೂರರು ಆಶಿಸಿದಂತೆ ಗೀತೆಯಲ್ಲಿನ ಜಾತಿ ವರ್ಣದ ತಾರತಮ್ಯದ ಗಡ್ಡೆಗಳಿಗೆ ಆಪರೇಶನ್ ಮಾಡಿ ಒಸಾಕಿ ಬುದ್ಧನಂಶದಿಂದ ಮನುಷ್ಯತ್ವಗೊಳಿಸಿ ಗೀತೆಯನ್ನು ಉಳಿಸಿಕೊಳ್ಳುವುದು ಅಂದುಕೊಂಡಷ್ಟು ಸರಳವಲ್ಲ. ಸ್ವಾತಂತ್ರಪೂರ್ವದಲ್ಲಿ ಬ್ರಿಟಿಷ್ ಸಾಮ್ರಾಜ್ಯಶಾಹಿಗಳ ವಿರುದ್ಧ ಹೋರಾಡಲು ಭಾರತದ ಬಂಡವಾಳ ಶಾಹಿಗೆ ಆಯುಧವಾಗಿದ್ದ ಗೀತೆ ಸ್ವಾತಂತ್ರನಂತರ ಸಂವಿಧಾನ ಪ್ರಜಾಪ್ರಭುತ್ವ ಹಾಗೂ ಸಮಾನತೆಗಳ ವಿರುದ್ಧ ಪ್ರಯೋಗಿಸುವ ಶೋಷಿತ ವರ್ಗಗಳ ಅಸ್ತ್ರವಾಗಿದೆ. ಭಗವದ್ಗೀತೆ ಮತ್ತು ವೇದಾಂತಗಳು ಪ್ರಜಾಪ್ರಭುತ್ವ ಮತ್ತು ಸಮಾಜವಾದಿ ಹೋರಾಟಕ್ಕೆ ಎಂದೂ ವೈಚಾರಿಕ ತಳಹದಿಯನ್ನು ಒದಗಿಸಲಾರವು. ನಮ್ಮ ಹೋರಾಟಕ್ಕೆ ಬುದ್ಧ, ಮಾರ್ಕ್ಸ್, ಅಂಬೇಡ್ಕರ್, ಲೋಹಿಯಾ ಎಂಬ ಬೆಳಕಿನ ಕಿರಣಗಳು ಬೇಕೇ ಹೊರತು ಇಂಥ ಗೊಂದಲದ ಗೂಡಲ್ಲ. ಈ ಮಾತನ್ನು ಬಾಬಾಸಾಹೇಬರು ಸ್ಪಷ್ಟವಾಗಿ ಹೇಳಿದ್ದಾರೆ.

ಅನೇಕ ದಾರ್ಶನಿಕ ಪಂಥಗಳ ಮಿಶ್ರಣವಾಗಿರುವ ಗೀತೆಯ ವಿಷಯ ನಿರೂಪಣೆ ಬಹಳ ವ್ಯಾಪಕವಾಗಿದೆ. ಅದರ ಪ್ರತಿ ಅಧ್ಯಾಯದಲ್ಲಿ ಪರಸ್ಪರ ವಿರುದ್ಧ ಅರ್ಥಗಳಿವೆ. ಅದರಲ್ಲಿ ಹಿಂಸೆಯೂ ಇದೆ, ಅಹಿಂಸೆಯೂ ಇದೆ. ಖ್ಯಾತ ದಾರ್ಶನಿಕ ಡಿ.ಡಿ. ಕೋಸಾಂಬಿಯವರು ವಿಶ್ಲೇಷಿಸಿದಂತೆ ‘‘ಗೀತೆಯ ಈ ಎಲ್ಲ ವಿಭಿನ್ನಾಂಶಗಳಿಗೆ ಒಂದು ಸಮಾನ ಉದ್ದೇಶವಿದೆ. ಅದು ವರ್ಗ ಮತ್ತು ಜಾತಿ ಶೋಷಣೆಯ ಸಮರ್ಥನೆ, ನಿಷ್ಕಾಮ ಕರ್ಮ ಮತ್ತು ಸ್ವಧರ್ಮಗಳ ಕಲ್ಪನೆ ಮೂಲಕ ಗೀತೆ ಈ ಕೆಲಸವನ್ನು ಮಾಡುತ್ತದೆ. ಭಗವದ್ಗೀತೆಯಲ್ಲಿನ ನಿಷ್ಕಾಮ ಕರ್ಮವೆಂದರೆ ದುಡಿಯುವ ಜನ ತಮ್ಮ ಶ್ರಮಕ್ಕೆ ನ್ಯಾಯವಾದ ಪ್ರತಿಫಲವನ್ನು ಅಪೇಕ್ಷಿಸಬಾರದು. ಮೇಲ್ವರ್ಗಗಳ ಮಾಲಕರು ಎಸೆದಿದ್ದನ್ನು ತಿಂದು ದುಡಿದು ನಾಯಿಯಂತೆ ಬಿದ್ದುಕೊಂಡಿರಬೇಕು. ಭಗವದ್ಗೀತೆಯಲ್ಲಿನ ಈ ಸಂದೇಶವೇ ಶೋಷಿತ ವರ್ಗಗಳಿಗೆ ವೇದವಾಕ್ಯವಾಗಿದೆ. ಇದನ್ನು ಬಳಸಿಕೊಂಡು ಶೋಷಣೆ ಮುಂದುವರಿಸಲು ಇದು ಅವಕಾಶ ನೀಡುತ್ತದೆ.

ಸ್ವಧರ್ಮ ಪರಿಪಾಲನೆಯ ಗೀತೆಯಲ್ಲಿನ ವಾಕ್ಯ ಫ್ಯಾಶಿಸ್ಟ್ ಕೋಮುವಾದಿ ಶಕ್ತಿಗಳಿಗೆ ಒಂದು ಅಸ್ತ್ರವಾಗಿದೆ. ಇಸ್ಲಾಮ್ ಮತ್ತು ಕ್ರೈಸ್ತ ಮಾತ್ರವಲ್ಲ ಇತರ ಧರ್ಮಗಳನ್ನು ಅನ್ಯಧರ್ಮಗಳೆಂದು ಪರಿಗಣಿಸುವ ಅವರು ಈ ಧರ್ಮದ ಅನುಯಾಯಿಗಳನ್ನು ಭಾರತದಿಂದ ಓಡಿಸಲು ಗೀತೆಯಿಂದ ಸ್ಫೂರ್ತಿ ಪಡೆಯುತ್ತಾರೆ. ಗೀತೆಯ ಸ್ವಧರ್ಮ ಸಿದ್ಧಾಂತದಿಂದ ಸ್ಫೂರ್ತಿ ಪಡೆದ ಆರೆಸ್ಸೆಸ್ ಸರಸಂಘಚಾಲಕ ಮಾಧವ ಸದಾಶಿವ ಗೋಳ್ವಲ್ಕರ್ ಅವರು ತಮ್ಮ ‘ಚಿಂತನಗಂಗಾ’ ಪುಸ್ತಕದಲ್ಲಿ ‘ಹಿಂದೂಗಳ ಪುಣ್ಯಭೂಮಿಯಾದ ಭಾರತವು ಹಿಂದೂರಾಷ್ಟ್ರ. ಅದು ಹಿಂದುಗಳಿಗೆ ಮಾತ್ರ ಸೇರಿದ್ದು’ ಎಂದು ಪ್ರತಿಪಾದಿಸುತ್ತಾರೆ. ಅವರ ಅಭಿಪ್ರಾಯದಂತೆ ಆರ್ಯರಾದ ಹಿಂದೂಗಳು ಮಾತ್ರ ನಿಜವಾದ ಭಾರತೀಯರು. ಉಳಿದವರೆಲ್ಲ ಮ್ಲೇಚ್ಚರು. ಗೋಳ್ವಲ್ಕರ್‌ರ ಹಿಂದೂ ರಾಷ್ಟ್ರದ ಕಲ್ಪನೆ ಆರ್ಥಿಕ ಹಾಗೂ ರಾಜಕೀಯ ಹತ್ಯೆಗಳ ಕಂತೆಯಲ್ಲ. ಅದು ಮೂಲಭೂತವಾಗಿ ಒಂದು ಸಾಂಸ್ಕೃತಿಕ ಕಲ್ಪನೆ. ಪ್ರಾಚಿನವೂ ಭವ್ಯವೂ ಆದ ನಮ್ಮ ಸಾಂಸ್ಕೃತಿಕ ಜೀವನ ವೌಲ್ಯಗಳೇ ಅದರ ಪ್ರಾಣವಾಯು. ಈ ಪ್ರಾಚಿನ ಸಾಂಸ್ಕೃತಿಗಳ ವೌಲ್ಯಗಳೆಂದರೆ ನಾಲ್ಕು ವರ್ಣಗಳ ಶ್ರೇಣೀಕೃತ ಜಾತಿ ವ್ಯವಸ್ಥೆ. ಗೀತೆಯಲ್ಲಿ ಪ್ರತಿಪಾದಿತವಾದ ನೇರವಾಗಿ ಸಮರ್ಥಿಸುವ ಗೋಳ್ವಲ್ಕರ್ ಬ್ರಿಟಿಷ್ ಆಳ್ವಿಕೆಗಿಂತ ಹಿಂದೆ ಈ ದೇಶದಲ್ಲಿ ಇದ್ದಂತಹ ಸಮಾಜ ವ್ಯವಸ್ಥೆ ಬರಬೇಕೆಂದು ಹೇಳುತ್ತಾರೆ. ಗೋಳ್ವಲ್ಕರ್‌ರ ಮನುವಾದಿ ಹಿಂದೂ ರಾಷ್ಟ್ರ ಕಲ್ಪನೆಗೆ ಭಗವದ್ಗೀತೆ ಒಂದು ಮುಖ್ಯ ವೈಚಾರಿಕ ತಳಹದಿಯನ್ನು ಒದಗಿಸಿದೆ. ಅವರ ಹಿಂದೂ ರಾಷ್ಟ್ರದ ಸಿದ್ಧಾಂತ ವರ್ಣಾಶ್ರಮ ಧರ್ಮದ ಮೇಲೆ ಅಂದರೆ ಶ್ರೇಣೀಕೃತ ಜಾತಿ ವ್ಯವಸ್ಥೆಯ ಮೇಲೆ ನಿಂತಿದೆ. ಇದರೊಂದಿಗೆ ಹಿಟ್ಲರ್-ಮುಸಲೋನಿಗಳ ನಾಝಿ ಫ್ಯಾಶಿಸ್ಟ್ ಸಿದ್ಧಾಂತದಿಂದಲೂ ಗೋಳ್ವಲ್ಕರ್ ಪ್ರೇರಣೆ ಪಡೆದಿದ್ದಾರೆ. ಇಂಥ ಗೋಳ್ವಲ್ಕರ್ ಭಕ್ತರು ದೇಶದ ಅಧಿಕಾರ ಸೂತ್ರವನ್ನು ಹಿಡಿದಿರುವ ಇಂದಿನ ಸನ್ನಿವೇಶದಲ್ಲಿ ಭಗವದ್ಗೀತೆ ರಾಷ್ಟ್ರ ಗ್ರಂಥವಾಗಬೇಕೆಂದು ಸುಷ್ಮಾ ಸ್ವರಾಜ್ ಹೇಳಿಕೆ ನೀಡುತ್ತಾರೆ. ಮೀಸಲಾತಿಯ ಪುನರ್ವಿಮರ್ಶೆಯಾಗಬೇಕೆಂದು ಮೋಹನ್ ಭಾಗವತ್ ಪ್ರಧಾನಿ ಮೋದಿ ಅವರಿಗೆ ಆದೇಶ ನೀಡುತ್ತಾರೆ. ಬೆಲ್ಜಿಯಂನಲ್ಲಿ ನೆಲೆಸುವ ಬಾಲಗಂಗಾಧರನೆಂಬ ಅವಿವೇಕಿ ಡಾ. ಅಂಬೇಡ್ಕರ್‌ರನ್ನು ಅವಹೇಳನ ಮಾಡುತ್ತಾನೆ. ದೇಶದಲ್ಲಿ ಸಂವಾದವೇ ನಿಂತು ಹೋಗಿರುವ ಈ ದಿನಗಳಲ್ಲಿ ವಿಮರ್ಶೆಯ ಮಾತನ್ನಾಡುವುದೇ ಅಪಾಯಕಾರಿ. ದಾಭೋಲ್ಕರ್, ಪನ್ಸಾರೆ, ಕಲಬುರ್ಗಿ ಹತ್ಯೆ ಪ್ರಕರಣಗಳು ನಮ್ಮ ಕಣ್ಣ ಮುಂದಿವೆ. ಇಂಥ ಸನ್ನಿವೇಶದಲ್ಲಿ ಗೀತೆಯ ಬಗ್ಗೆ ವಿಮರ್ಶೆಯ ಬದಲಾಗಿ ಆಪರೇಶನ್ ಮಾತು ದೇವನೂರರ ಬಾಯಿಯಿಂದ ಬಂದಿರಬಹುದು. ಅದಕ್ಕಾಗಿ ನಾವು ಅವರನ್ನು ದೂಷಿಸಬೇಕಾಗಿಲ್ಲ. ಈ ಕಾಲಘಟ್ಟದಲ್ಲಿ ಭಗವದ್ಗೀತೆಯ ವೃಣಗಳನ್ನು ಕತ್ತರಿಸಿ ಬಿಸಾಕಿ- ಬಳಸಿಕೊಳ್ಳಬೇಕೆಂಬ ದೇವನೂರ ಮಹಾದೇವರ ಕರೆ ಸದುದ್ದೇಶದಿಂದಲೇ ಕೂಡಿರಬಹುದು. ಆದರೆ ಗೀತೆಯಂಥ ವಿರೋಧಾಭಾಸಗಳ ಕಂತೆ ಈಗಾಗಲೇ ಶೋಷಿತ ವರ್ಗಗಳ ಫ್ಯಾಶಿಸ್ಟ್ ಕೋಮುವಾದಿಗಳ ಬತ್ತಳಿಕೆ ಸೇರಿಯಾಗಿದೆ. ಇಂಥ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕಾಗಿ ದೇವನೂರರನ್ನು ‘ವ್ಯವಸ್ಥೆಯ ಗುಲಾಮ’ ಎಂದು ಟೀಕಿಸುವುದು ಸರಿಯಲ್ಲ. ಕೋಮುವಾದಿ, ಫ್ಯಾಶಿಸ್ಟರ ಬತ್ತಳಿಕೆಯನ್ನು ಸೇರಿರುವ ಭಗವದ್ಗೀತೆಯನ್ನು ಅದರಲ್ಲಿನ ಗಡ್ಡೆಗಳನ್ನು ಕತ್ತರಿಸಿ ನಮ್ಮ ಗುರಿ ಸಾಧಿಸೋಣ ಎಂಬ ದೇವನೂರರ ಮಾತಿನ ಬಗ್ಗೆ ಅಪಾರ್ಥ ಕಲ್ಪಿಸುವುದು ಬೇಡ. ಅವರ ಪ್ರಾಮಾಣಿಕತೆಯನ್ನು ಸಂದೇಹಿಸುವುದು ಬೇಡ. ದೇವನೂರ ಮಹಾದೇವ ನಮ್ಮವರು. ಪ್ರಾಮಾಣಿಕವಾಗಿ ಬದುಕಿದವರು. ನುಡಿದಂತೆ ನಡೆದವರು. ಅಂಥವರು ವ್ಯಕ್ತಪಡಿಸಿದ ಅಭಿಪ್ರಾಯದ ಬಗ್ಗೆ ಚರ್ಚಿಸೋಣ, ಸಂವಾದ ಮಾಡೋಣ. ಅದರೆ ಮಹಾದೇವರ ತೇಜೋವಧೆಗೆ ಈ ಹೇಳಿಕೆ ಬಳಸಿಕೊಳ್ಳುವುದು ಸರಿಯಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News