ಉನ್ನತ ಶಿಕ್ಷಣ: ಕೇಂದ್ರ-ರಾಜ್ಯಗಳ ಸಂಘರ್ಷ

ಕುಲಪತಿ ನೇಮಕಾತಿ ಅಧಿಕಾರ ಮುಖ್ಯಮಂತ್ರಿಯಿಂದ ಕಿತ್ತುಕೊಳ್ಳುತ್ತಿರುವುದು ಒಕ್ಕೂಟ ವ್ಯವಸ್ಥೆಯ ಮೂಲ ತತ್ವವನ್ನು ಧಿಕ್ಕರಿಸಿದಂತೆ. ಇದನ್ನು ಶಿಕ್ಷಣ ತಜ್ಞರು ಮಾತ್ರವಲ್ಲ ಉನ್ನತ ಶಿಕ್ಷಣದ ಬಗ್ಗೆ ಕಾಳಜಿ ಹೊಂದಿರುವ ಎಲ್ಲರೂ ವಿರೋಧಿಸಬೇಕು. ಆದರೆ ಕರ್ನಾಟಕ ಸರಕಾರ ಉನ್ನತ ಶಿಕ್ಷಣ ಇಲಾಖೆಯಲ್ಲಿನ ಗಂಭೀರ ಸ್ವರೂಪದ ಲೋಪಗಳನ್ನು ಸರಿಪಡಿಸದ ಹೊರತು ಕೇಂದ್ರದ ನೀತಿ ವಿರುದ್ಧ ಗಟ್ಟಿ ಧ್ವನಿಯಲ್ಲಿ ಮಾತನಾಡಲು ಆಗುವುದಿಲ್ಲ.

Update: 2025-01-11 05:39 GMT

ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಒಕ್ಕೂಟ ವ್ಯವಸ್ಥೆಯ ಮೂಲ ತತ್ವಕ್ಕೆ ಭಾರೀ ಪೆಟ್ಟು ಬೀಳುತ್ತಿದೆ. ರಾಜ್ಯ ಸರಕಾರಗಳಿಂದ ಹೆಚ್ಚು ತೆರಿಗೆ ಪಡೆದುಕೊಂಡು ಕಡಿಮೆ ಅನುದಾನ ನೀಡುವ ಕೇಂದ್ರ ಸರಕಾರದ ಕೆಟ್ಟ ಪ್ರವೃತ್ತಿಯಿಂದ ವಿಶೇಷವಾಗಿ ದಕ್ಷಿಣದ ರಾಜ್ಯಗಳು ಬೇಸತ್ತಿವೆ. ಹೆಚ್ಚು ತೆರಿಗೆ ಸಂಗ್ರಹಿಸುವ ರಾಜ್ಯಗಳಿಗೆ ಹೆಚ್ಚು ಇನ್ಸೆಂಟಿವ್ ನೀಡಿದರೆ ಆಯಾ ರಾಜ್ಯ ಸರಕಾರಗಳ ಕಾರ್ಯ ಕ್ಷಮತೆಗೆ ಬೆನ್ನು ತಟ್ಟಿದಂತಾಗುತ್ತದೆ.

ಕೇಂದ್ರ ಸರಕಾರ ಆಡಳಿತದ ಎಲ್ಲ ಹಂತದಲ್ಲೂ ರಾಜಕೀಯ ಮಾಡುತ್ತಿರುವುದರಿಂದ ಕರ್ನಾಟಕದಂಥ ಪ್ರಗತಿ ಹೊಂದಿದ ರಾಜ್ಯಗಳು ತೊಂದರೆ ಅನುಭವಿಸುವಂತಾಗಿದೆ. ಅನುದಾನ ನೀಡುವಲ್ಲಿ ಕೇಂದ್ರ ಸರಕಾರ ದಕ್ಷಿಣದ ರಾಜ್ಯಗಳಿಗೆ ಕಳೆದ ಹತ್ತು ವರ್ಷಗಳಿಂದ ಅನ್ಯಾಯ ಮಾಡುತ್ತಲೇ ಇದೆ. ಕೇಂದ್ರ ಹಣಕಾಸು ಮಂತ್ರಿ ಶ್ರೀಮತಿ ನಿರ್ಮಲಾ ಸೀತಾರಾಮನ್ ಕರ್ನಾಟಕದಿಂದ ರಾಜ್ಯಸಭಾ ಸದಸ್ಯರಾಗಿದ್ದರೂ ತಾನು ಪ್ರತಿನಿಧಿಸುತ್ತಿರುವ ರಾಜ್ಯದ ಬಗ್ಗೆ ಕನಿಷ್ಠ ಪ್ರೀತಿ ಇಟ್ಟುಕೊಂಡಿಲ್ಲ.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರದ ಅನುದಾನ ಮತ್ತು ರಾಜ್ಯಗಳ ಸ್ವಾಯತ್ತತೆಗೆ ಸಂಬಂಧಿಸಿದಂತೆ ಬಹುದೊಡ್ಡ ರಂಪ ಮಾಡಿದ್ದರು. ಪ್ರಧಾನಿಯಾದ ಮೇಲೆ ಮೋದಿಯವರು ಒಕ್ಕೂಟ ತತ್ವವನ್ನೇ ಮರೆತಿದ್ದಾರೆ. ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರದಲ್ಲಿ ಹೆಚ್ಚು ಕಾಲಾವಧಿಗೆ ಕಾಂಗ್ರೆಸ್ ನೇತೃತ್ವದ ಸರಕಾರ ಆಡಳಿತ ನಡೆಸುತ್ತಿತ್ತು. ಸಹಜವಾಗಿ ರಾಜ್ಯಪಾಲರು ಕಾಂಗ್ರೆಸ್ ಮರ್ಜಿಯಲ್ಲಿರುವವರೇ ನೇಮಕಗೊಳ್ಳುತ್ತಿದ್ದರು. ಗುಜರಾತ್‌ನಲ್ಲೂ ವಿಶ್ವವಿದ್ಯಾನಿಲಯಗಳ ಕುಲಪತಿಗಳ ನೇಮಕಾತಿಯಲ್ಲಿ ಮುಖ್ಯಮಂತ್ರಿ ಮತ್ತು ರಾಜ್ಯಪಾಲರ ನಡುವೆ ಬಹು ದೊಡ್ಡ ಸಂಘರ್ಷವೇ ಏರ್ಪಟ್ಟಿತ್ತು. ಆಗ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರು ಕುಲಪತಿ ನೇಮಕದಲ್ಲಿ ರಾಜ್ಯಪಾಲರ ಅಧಿಕಾರವೇ ಇಲ್ಲದಂತೆ ಮಾಡಿ ಕಾನೂನು ರೂಪಿಸಿದ್ದರು. ಆ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಕಾನೂನು ಸಮರದಲ್ಲೂ ಮೋದಿ ಗೆಲುವು ಸಾಧಿಸಿದ್ದರು. ಕುಲಪತಿ ನೇಮಕಾತಿ ಅಧಿಕಾರವನ್ನು ಸಂಪೂರ್ಣ ತಮ್ಮಲ್ಲೇ ಇಟ್ಟುಕೊಂಡಿದ್ದರು.

ಗುಜರಾತ್ ಮಾದರಿಯ ಕಾನೂನು ರೂಪಿಸುವುದಾಗಿ ಕರ್ನಾಟಕದ ಉನ್ನತ ಶಿಕ್ಷಣ ಸಚಿವ ಡಾ. ಸುಧಾಕರ್ ಅವರು ಬೆಳಗಾವಿ ಅಧಿವೇಶನ ಪೂರ್ವದಲ್ಲಿ ಹೇಳಿಕೊಂಡಿದ್ದರು. ಆದರೆ ಅಧಿವೇಶನದಲ್ಲಿ ವಿಶ್ವವಿದ್ಯಾನಿಲಯಗಳ ಅಧಿನಿಯಮ ತಿದ್ದುಪಡಿ ಮಾಡುವ ಮಸೂದೆಯನ್ನು ಅವರು ಮಂಡಿಸಲೇ ಇಲ್ಲ. ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾನಿಲಯದ ಕುಲಪತಿ ನೇಮಕಾತಿಯಲ್ಲಿ ಮುಖ್ಯಮಂತ್ರಿಗಳ ಪರಮಾಧಿಕಾರ ಇರುವ ಮಸೂದೆ ಮಂಡಿಸಿ ಉಭಯ ಸದನಗಳ ಒಪ್ಪಿಗೆ ಪಡೆದುಕೊಂಡರು.

ಉನ್ನತ ಶಿಕ್ಷಣ ಸಚಿವ ಡಾ. ಸುಧಾಕರ್ ಅವರು ಅಳುಕಿನಿಂದ ರೂಪಿಸಿದ ಕಾನೂನಿಗೆ ರಾಜ್ಯಪಾಲರ ಅಂಕಿತ ಬೀಳುವ ಮೊದಲೇ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದ ಮೂಲಕ ಕುಲಪತಿ ನೇಮಕಾತಿಯಲ್ಲಿ ರಾಜ್ಯ ಸರಕಾರದ ಪಾತ್ರ ಇಲ್ಲದಂತೆ ಮಾಡುತ್ತಿದ್ದಾರೆ. ಈ ಮೊದಲು ಕರ್ನಾಟಕದಲ್ಲಿ ವಿಶ್ವವಿದ್ಯಾನಿಲಯಗಳ ಕುಲಪತಿ ನೇಮಕಾತಿಗಾಗಿ ಶೋಧನಾ ಸಮಿತಿಯನ್ನು ರಾಜ್ಯ ಸರಕಾರ ರಚಿಸಿ ಆದೇಶ ಹೊರಡಿಸುತ್ತಿತ್ತು. ರಾಜ್ಯ ಸರಕಾರದ ಪ್ರತಿನಿಧಿ ಶೋಧನಾ ಸಮಿತಿಯ ಅಧ್ಯಕ್ಷರಾಗಿರುತ್ತಿದ್ದರು. ಶೋಧನಾ ಸಮಿತಿಯಲ್ಲಿ ರಾಜ್ಯಪಾಲರು, ಯುಜಿಸಿ ಮತ್ತು ಸಿಂಡಿಕೇಟ್ ನಾಮನಿರ್ದೇಶಿತ ಸದಸ್ಯರು ಇರುತ್ತಿದ್ದರು. ಆ ಶೋಧನಾ ಸಮಿತಿಯು ಮೂರು ಜನ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಉನ್ನತ ಶಿಕ್ಷಣ ಸಚಿವಾಲಯಕ್ಕೆ ನೀಡುತ್ತಿದ್ದರು. ಅಲ್ಲಿಂದ ಆ ಕಡತ ಮುಖ್ಯಮಂತ್ರಿ ಕಚೇರಿಗೆ ಹೋಗುತ್ತಿತ್ತು. ಮುಖ್ಯಮಂತ್ರಿ ಮೂರರಲ್ಲಿ ಒಂದು ಹೆಸರನ್ನು ಟಿಕ್ ಮಾಡಿ ರಾಜ್ಯಪಾಲರಿಗೆ ಕಳುಹಿಸಿಕೊಡುತ್ತಿದ್ದರು. ಮುಖ್ಯಮಂತ್ರಿ ಟಿಕ್ ಮಾಡಿದ ಹೆಸರಿನ ಬಗ್ಗೆ ರಾಜ್ಯಪಾಲರಿಗೆ ತಕರಾರು ಇದ್ದರೆ ಕಡತವನ್ನು ವಾಪಸ್ ಕಳುಹಿಸಿಕೊಡುತ್ತಿದ್ದರು. ಸ್ಪಷ್ಟೀಕರಣ ನೀಡಿದ ಮೇಲೆ ರಾಜ್ಯಪಾಲರು ಕೆಲವೊಮ್ಮೆ ಒಪ್ಪಿಕೊಳ್ಳುತ್ತಿದ್ದರು. ಮುಖ್ಯಮಂತ್ರಿ ಸೂಚಿಸಿದ ಅಭ್ಯರ್ಥಿ ಬಗ್ಗೆ ರಾಜ್ಯಪಾಲರಿಗೆ ಪೂರ್ವಗ್ರಹ ಇದ್ದರೆ ಮೂರರಲ್ಲಿ ತಮಗೆ ಒಪ್ಪಿಗೆಯಾಗುವ ಒಬ್ಬರನ್ನು ಕುಲಪತಿಯನ್ನಾಗಿಸಿ ಆದೇಶ ಹೊರಡಿಸುತ್ತಿದ್ದರು. ಇತ್ತೀಚೆಗೆ ನಿಧನರಾದ ಚಿಂತಕ ಪ್ರೊ. ಮುಝಫರ್ ಅಸ್ಸಾದಿ ಅವರ ಹೆಸರನ್ನು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಹುದ್ದೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿಫಾರಸು ಮಾಡಿದ್ದರು. ಆದರೆ ರಾಜ್ಯಪಾಲರು ಅಸ್ಸಾದಿ ಅವರ ಹೆಸರಿಗೆ ಸಮ್ಮತಿ ಸೂಚಿಸಲಿಲ್ಲ. ಯಾಕೆಂದರೆ ಮುಸ್ಲಿಮ್ ಸುಮುದಾಯದ ಅಸ್ಸಾದಿಯವರು ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಕುಲಪತಿಯಾಗುವುದು ಸ್ಥಳೀಯ ಆರೆಸ್ಸೆಸ್ ಮುಖಂಡರಿಗೆ ಇಷ್ಟ ಇರಲಿಲ್ಲ. ಅವರೆಲ್ಲ ಸೇರಿ ರಾಜ್ಯಪಾಲರ ಮೇಲೆ ಒತ್ತಡ ಹೇರಿದ್ದರು. ಹಾಗಾಗಿ ರಾಜ್ಯಪಾಲರು ಅಸ್ಸಾದಿ ಅವರ ಹೆಸರನ್ನು ಮಂಗಳೂರು ವಿ.ವಿ ಕುಲಪತಿ ಹುದ್ದೆಗೆ ಒಪ್ಪಿಕೊಳ್ಳಲೇ ಇಲ್ಲ. ಬಿಜೆಪಿಯ ರಾಜ್ಯಪಾಲರು ಮಾತ್ರ ಹೀಗೆ ಮಾಡಿದ್ದಾರೆ ಎಂದು ಹೇಳಲಾಗದು. ಕರ್ನಾಟಕದ ರಾಜ್ಯಪಾಲರಾಗಿದ್ದ ಎಚ್.ಆರ್. ಭಾರದ್ವಾಜ್ ಹಲವು ಬಾರಿ ರಾಜ್ಯ ಸರಕಾರದ ಶಿಫಾರಸನ್ನು ಕಡೆಗಣಿಸಿದ್ದರು.

ರಾಜ್ಯಪಾಲರಿಗಿದ್ದ ಸೀಮಿತ ಅಧಿಕಾರಾವಧಿಯಲ್ಲೇ ಅಷ್ಟೆಲ್ಲ ಆಟ ಆಡಿರುವಾಗ, ಅವರಿಗೆ ಪರಮಾಧಿಕಾರ ನೀಡಿದರೆ ಏನಾಗಬಹುದು..?

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗದ ಮೂಲಕ ಕುಲಪತಿ ನೇಮಕಾತಿಯಲ್ಲಿ ರಾಜ್ಯಪಾಲರಿಗೆ ಪರಮಾಧಿಕಾರ ನೀಡಲು ಹೊರಟಿದ್ದಾರೆ. ಯುಜಿಸಿ ತನ್ನ ನಿಯಮಾವಳಿಯಲ್ಲಿ ತಿದ್ದುಪಡಿ ಮಾಡಿ ಕರಡು ಪ್ರತಿಯನ್ನು ಸಾರ್ವಜನಿಕರ ಅಭಿಪ್ರಾಯಕ್ಕೆ ಬಿಟ್ಟಿದೆ. ಇದೆಲ್ಲ ಔಪಚಾರಿಕ ವಿಧಾನವಷ್ಟೇ. ಕೇಂದ್ರ ಸರಕಾರ ಮನಸ್ಸು ಮಾಡಿದರೆ ಅಧಿಕೃತ ಆದೇಶ ಹೊರಡಿಸುವುದು ದೊಡ್ಡ ಸಂಗತಿಯಲ್ಲ. ಕರಡು ಪ್ರತಿಯಲ್ಲಿ ಪ್ರಸ್ತಾಪಿಸಿದಂತೆ ಕುಲಪತಿ ನೇಮಕಾತಿಗಾಗಿ ರಚಿಸುವ ಶೋಧನಾ ಸಮಿತಿಯನ್ನು ಅಂತಿಮಗೊಳಿಸುವ ಪರಮಾಧಿಕಾರ ರಾಜ್ಯ ಸರಕಾರದ ವಿಶ್ವವಿದ್ಯಾನಿಲಯಗಳಿಗಾದರೆ ರಾಜ್ಯಪಾಲರು, ಕೇಂದ್ರೀಯ ವಿಶ್ವವಿದ್ಯಾನಿಲಯಗಳಿಗೆ ರಾಷ್ಟ್ರಪತಿಗಳು ಹೊಂದುತ್ತಾರೆ. ರಾಜ್ಯ ಸರಕಾರ ಮತ್ತು ಮುಖ್ಯಮಂತ್ರಿಯ ಪಾತ್ರ ಏನೇನೂ ಇರುವುದಿಲ್ಲ. ಯುಜಿಸಿ ರೂಪಿಸುವ ಈ ನಿಯಮಾವಳಿಗಳನ್ನು ರಾಜ್ಯ ಸರಕಾರ ಉಲ್ಲಂಘಿಸಿದರೆ ವಿಶ್ವವಿದ್ಯಾನಿಲಯಗಳ ಮಾನ್ಯತೆ ರದ್ದು ಮಾಡುವ ಮತ್ತು ಧನ ಸಹಾಯಕ್ಕೆ ಕತ್ತರಿ ಹಾಕುವ ಬೆದರಿಕೆ ಬೇರೆ ಹಾಕಿದೆ.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ವಿಶ್ವವಿದ್ಯಾನಿಲಯಗಳ ಕುಲಪತಿಗಳ ನೇಮಕಾತಿಯಲ್ಲಿ ಹೆಚ್ಚು ಆಸಕ್ತಿ ತೋರಲು ಮುಖ್ಯ ಕಾರಣ ಸೈದ್ಧಾಂತಿಕ ಬದ್ಧತೆ. ಕುಲಪತಿಗಳ ನೇಮಕಾತಿಯಲ್ಲಿ ಹಿಡಿತ ಸಾಧಿಸಿದರೆ ವಿಶ್ವವಿದ್ಯಾನಿಲಯಗಳಲ್ಲಿ ಸಂಘ ಪರಿವಾರದ ವಿಚಾರಧಾರೆಗಳನ್ನು ಪ್ರಸಾರ ಮಾಡಲು ಅನುಕೂಲ ಆಗುತ್ತದೆ. ಕೇಂದ್ರ ಸರಕಾರದ ವ್ಯಾಪ್ತಿಯಲ್ಲಿರುವ ಎಲ್ಲ ಕೇಂದ್ರೀಯ ವಿಶ್ವವಿದ್ಯಾನಿಲಯಗಳಿಗೆ ಸಂಘದ ನಂಟಿರುವ ಪ್ರಾಧ್ಯಾಪಕರುಗಳನ್ನೇ ಕುಲಪತಿಯನ್ನಾಗಿ ನೇಮಿಸಿದ್ದಾರೆ. ಇಡೀ ಶೈಕ್ಷಣಿಕ ವ್ಯವಸ್ಥೆಯನ್ನೇ ಕೇಸರೀಕರಣಗೊಳಿಸುವುದು ಬಿಜೆಪಿ ಸರಕಾರದ ಉದ್ದೇಶ.

ಬಿಜೆಪಿ ಅಧಿಕಾರದಲ್ಲಿ ಇರದ ರಾಜ್ಯಗಳ ವಿಶ್ವವಿದ್ಯಾನಿಲಯಗಳನ್ನೂ ತನ್ನ ಹಿಡಿತಕ್ಕೆ ತೆಗೆದುಕೊಂಡು ಅಲ್ಲಿ ಸಂಘ ಪರಿವಾರದ ವಿಚಾರಧಾರೆಗಳನ್ನು ಪ್ರಸಾರ ಮಾಡಲು ಈ ಹೊಸ ನಿಯಮಾವಳಿ ರೂಪಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರದ ನಿಲುವನ್ನು ಸ್ಪಷ್ಟ ಮಾತುಗಳಲ್ಲಿ ವಿರೋಧಿಸಿದ್ದಾರೆ. ಕೇವಲ ಬಾಯಿ ಮಾತಿನ ವಿರೋಧದಿಂದ ಏನೂ ಸಾಧಿಸಲಾಗದು. 2013ಕ್ಕೂ ಮುಂಚೆ ಐದು ವರ್ಷಗಳ ಕಾಲ ಕರ್ನಾಟಕದಲ್ಲಿ ಬಿಜೆಪಿ ಸರಕಾರ ಇತ್ತು. ಆ ಐದು ವರ್ಷಗಳಲ್ಲಿ ಎಷ್ಟು ಸಾಧ್ಯವೋ ಅಷ್ಟು ಕೇಸರಿಮಯ ಮಾಡಲಾಗಿತ್ತು. ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲೂ ಪ್ರತಿಭೆಗಿಂತಲೂ ಸಂಘ ನಿಷ್ಠೆ ಪ್ರಮುಖ ಮಾನದಂಡವಾಗಿತ್ತು. ಕುಲಪತಿ, ಕುಲಸಚಿವ, ಸಿಂಡಿಕೇಟ್ ಸದಸ್ಯರ ನೇಮಕಾತಿಯಲ್ಲೂ ಸಂಘ ನಿಷ್ಠೆಯೇ ಕೆಲಸ ಮಾಡಿತ್ತು.

2013ರಲ್ಲಿ ಮೊದಲ ಬಾರಿಗೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದಾಗ ಭಾಗ್ಯಗಳ ಸರದಾರ್ ಅನಿಸಿಕೊಂಡರು. ಸಾಮಾಜಿಕ ವಲಯದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ ಮೆಚ್ಚುಗೆ ಗಳಿಸಿದ್ದರು. ಆದರೆ ಉನ್ನತ ಶಿಕ್ಷಣಕ್ಕೆ ಪ್ರಾಮುಖ್ಯತೆ ಕೊಡಲೇ ಇಲ್ಲ. ಅಷ್ಟೇ ಯಾಕೆ ಒಳ್ಳೆಯ ಉನ್ನತ ಶಿಕ್ಷಣ ಸಚಿವರನ್ನೂ ನೀಡಲಿಲ್ಲ. ಮೊದಲಿಗೆ ಆರ್.ವಿ. ದೇಶಪಾಂಡೆಯವರಿಗೆ ಉನ್ನತ ಶಿಕ್ಷಣ ಇಲಾಖೆ ವಹಿಸಲಾಗಿತ್ತು. ಅವರು ಯಾವುದರಲ್ಲೂ ಆಸಕ್ತಿ ತೋರದೆ ತಮ್ಮ ಶಿಷ್ಯ ಹನುಮಂತ ಕೊಟಬಾಗಿ ಮತ್ತು ಇಲಾಖೆಯ ಅಧಿಕಾರಿಗಳ ಸುಪರ್ದಿಗೆ ಒಪ್ಪಿಸಿ ವ್ಯವಸ್ಥೆ ಹಾಳಾಗುವುದನ್ನು ಮೂಕ ಪ್ರೇಕ್ಷಕರಂತೆ ನೋಡುತ್ತಿದ್ದರು. ಅವರ ಅವಧಿಯಲ್ಲೇ ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ವಹಿಸಿಕೊಡಲಾಯಿತು. ಒಎಂಆರ್ ಪ್ರಶ್ನೆ ಪತ್ರಿಕೆ ಮೂಲಕ ನೇಮಕಾತಿ ಪ್ರಕ್ರಿಯೆ ನಡೆಯತೊಡಗಿದವು. ಅದೊಂದು ದೊಡ್ಡ ಹಗರಣ ಎಂಬುದು ಆಮೇಲೆ ಗೊತ್ತಾಯಿತು. ಆಗಿನ ರಾಜ್ಯಪಾಲರಾದ ಭಾರದ್ವಾಜ್ ಅವರು ಎಲ್ಲದರಲ್ಲೂ ಹಣ ಮಾಡುವ ಹಾದಿ ಕಂಡುಕೊಂಡರು. ಕುಲಪತಿ ಹುದ್ದೆಗೆ ಕೋಟಿ ಕೋಟಿ ರೂ. ವ್ಯವಹಾರ ನಡೆಯತೊಡಗಿತು. ಮುಂದೆ ಅದೊಂದು ಸಂಪ್ರದಾಯ ಆಯಿತು. ಉನ್ನತ ಶಿಕ್ಷಣ ಇಲಾಖೆಯ ಮಹತ್ವವನ್ನೇ ಅಂದಿನ ಕಾಂಗ್ರೆಸ್ ಸರಕಾರ ಮನಗಾಣಲಿಲ್ಲ. ಆನಂತರ ಬಂದ ಟಿ.ಬಿ. ಜಯಚಂದ್ರ ಉನ್ನತ ಶಿಕ್ಷಣ ಸಚಿವರಾಗಿ ಹೇಳಿಕೊಳ್ಳುವ ಕೆಲಸ ಮಾಡಲಿಲ್ಲ. ಅಧಿಕಾರಿಗಳು ಹೇಳಿದ್ದೇ ಕಾರ್ಯಗತವಾಗುತ್ತಿತ್ತು. ಕಳೆದ ಇಪತ್ತು ವರ್ಷಗಳಿಂದ ವಿಶ್ವವಿದ್ಯಾನಿಲಯಗಳಲ್ಲಿ ಬೋಧಕ ಮತ್ತು ಬೋಧಕೇತರ ಹುದ್ದೆಗಳು ಖಾಲಿ ಇವೆ. ಆ ಕಡೆ ಅವರು ಗಮನ ಹರಿಸಲಿಲ್ಲ. ಭರತ್‌ಲಾಲ್ ಮೀನಾ ಎಂಬ ಐಎಎಸ್ ಅಧಿಕಾರಿಯ ದುರಾಸೆಗೆ ಕರ್ನಾಟಕದಲ್ಲಿ ಖಾಸಗಿ ಮತ್ತು ಡೀಮ್ಡ್ ವಿಶ್ವವಿದ್ಯಾನಿಲಯಗಳು ನಾಯಿ ಕೊಡೆಗಳಂತೆ ತಲೆ ಎತ್ತಿದವು. ಸರಕಾರಿ ವಿಶ್ವವಿದ್ಯಾನಿಲಯಗಳು ಸಂಪೂರ್ಣ ಕಡೆಗಣನೆಗೆ ಒಳಗಾದವು. ಜಯಚಂದ್ರ ನಂತರ ಉನ್ನತ ಶಿಕ್ಷಣ ಸಚಿವರಾದ ಬಸವರಾಜ್ ರಾಯರೆಡ್ಡಿ ವಿಶ್ವವಿದ್ಯಾನಿಲಯಗಳ ಸ್ವಾಯತ್ತತೆಗೆ ಕುತ್ತು ತರಲು ಯತ್ನಿಸಿದರು. ವಿಶ್ವವಿದ್ಯಾನಿಲಯಗಳ ಬೋಧಕ ಸಿಬ್ಬಂದಿ ನೇಮಕಾತಿಗಳನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲು ಹರಸಾಹಸ ಪಟ್ಟರು. ರಾಯರೆಡ್ಡಿಯವರ ತಪ್ಪು ನಿರ್ಧಾರಗಳು ಮುಂದೆ ಬಿಜೆಪಿ ಅವಧಿಯ ಅವಘಡಗಳಿಗೆ ಬುನಾದಿ ಹಾಕಿದವು.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದಲ್ಲಿ ಉನ್ನತ ಶಿಕ್ಷಣದ ಬಗ್ಗೆ ಕಿಂಚಿತ್ತೂ ಆಸಕ್ತಿ ಇಲ್ಲದ ಜಿ.ಟಿ. ದೇವೇಗೌಡರಿಗೆ ಆ ಇಲಾಖೆಯ ಮಂತ್ರಿ ಮಾಡಿದ ಕುಮಾರಸ್ವಾಮಿ ಪರೋಕ್ಷವಾಗಿ ಎಲ್ಲವನ್ನು ನಿಯಂತ್ರಿಸುತ್ತಿದ್ದರು. ಪಾಪ ದೇವೇಗೌಡರು ಅಷ್ಟೋ ಇಷ್ಟೋ ದುಡ್ಡು ಮಾಡಲು ಅಳಿಯ ಮತ್ತು ಮಗನಿಗೆ ಬಿಟ್ಟು ಆ ಇಲಾಖೆಯ ಗೊಡವೆಗೆ ಹೋಗಲೇ ಇಲ್ಲ.

ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದ ಬಿಜೆಪಿ ಸಿ.ಎನ್. ಅಶ್ವಥ್ ನಾರಾಯಣ ಅವರನ್ನು ಉನ್ನತ ಶಿಕ್ಷಣ ಸಚಿವರಾನ್ನಾಗಿಸಿ ಸಂಘದ ಅಜೆಂಡಾ ಮತ್ತು ಹಣದ ವ್ಯವಹಾರ ಸಮ ಪ್ರಮಾಣದಲ್ಲಿ ನಡೆಯುವಂತೆ ಮಾಡಿತು.

ಕರ್ನಾಟಕದ ಉನ್ನತ ಶಿಕ್ಷಣ ಇಲಾಖೆಯನ್ನು ಹಣಕ್ಕಾಗಿ ಹದಗೆಡಿಸಿದ ಕೀರ್ತಿ ಅಶ್ವಥ್ ನಾರಾಯಣ ಅವರಿಗೆ ಸಲ್ಲಬೇಕು. ಕುಲಪತಿಗಳ ಅಧಿಕಾರವನ್ನು ಮೊಟಕು ಗೊಳಿಸಿದರು. ವಿಶ್ವವಿದ್ಯಾನಿಲಯಗಳಲ್ಲಿ ಸಮಗ್ರ ವಿಶ್ವವಿದ್ಯಾನಿಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ (ಯುಯುಸಿಎಂಎಸ್) ಜಾರಿಗೆ ತಂದು ಕುಲಪತಿಗಳು ಆರ್ಥಿಕ ಪರಾವಲಂಬಿ ಆಗುವಂತೆ ಮಾಡಿದರು. ವಿದ್ಯಾರ್ಥಿಗಳ ಪ್ರವೇಶ, ಪರೀಕ್ಷೆ ಇತ್ಯಾದಿ ಮಹತ್ವದ ಕೆಲಸಗಳು ಯುಯುಸಿಎಂಎಸ್ ಮೂಲಕ ನಡೆಯುವಂತೆ ಮಾಡಿದರು. ವಿಶ್ವವಿದ್ಯಾನಿಲಯಗಳ ಆರ್ಥಿಕ ಮೂಲವನ್ನೇ ಕಿತ್ತುಕೊಂಡರು. ಯಾವ ವಿಶ್ವವಿದ್ಯಾನಿಲಯಗಳಿಗೂ ಹೆಚ್ಚಿನ ಅನುದಾನ ನೀಡಲಿಲ್ಲ. ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ವಹಿಸಲಿಲ್ಲ. ಅತಿಥಿ ಉಪನ್ಯಾಸಕರು ಪಾಠ ಪ್ರವಚನಗಳು ಮಾಡತೊಡಗಿದರು. ಕಡಿಮೆ ಸಂಬಳ, ಹೆಚ್ಚು ದುಡಿಮೆ ಅತಿಥಿ ಉಪನ್ಯಾಸಕರ ಬದುಕಾಯಿತು.

ಇರುವ ವಿಶ್ವವಿದ್ಯಾನಿಲಯಗಳಿಗೆ ಅನುದಾನ ಕೊಡಲಾಗದ ಮಂತ್ರಿ ಹತ್ತು ಹೊಸ ವಿಶ್ವವಿದ್ಯಾನಿಲಯಗಳ ಸ್ಥಾಪನೆಗೆ ಅವಕಾಶ ಮಾಡಿಕೊಟ್ಟರು. ಖಾಸಗಿ ಮತ್ತು ಡೀಮ್ಡ್ ವಿವಿಗಳಿಗೆ ರತ್ನ ಗಂಬಳಿ ಹಾಸಿದರು.

ಎರಡನೇ ಅವಧಿಗೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ಮೇಲೆ ಉನ್ನತ ಶಿಕ್ಷಣ ಖಾತೆಗೆ ಅಪಾರ ತಿಳಿವಳಿಕೆ ಇರುವ ಕ್ರಿಯಾಶೀಲ ವ್ಯಕ್ತಿಯನ್ನು ಮಂತ್ರಿ ಮಾಡಬೇಕಿತ್ತು. ಬಿಜೆಪಿಯವರಿಗೆ ಕುಲಪತಿ ಹುದ್ದೆ, ವಿವಿಗಳನ್ನು ಕೇಸರಿಮಯ ಮಾಡುವ ಸಾಧನ ಆಗಿತ್ತು. ಕಾಂಗ್ರೆಸ್ ನಾಯಕರಿಗೆ ಅಂಥ ಯಾವ ಸೈದ್ಧಾಂತಿಕ ದರ್ದು ಇಲ್ಲವಾದ್ದರಿಂದ ಉನ್ನತ ಶಿಕ್ಷಣ ಇಲಾಖೆ ಅವರ ಆದ್ಯತಾ ಕ್ಷೇತ್ರ ಆಗಲಿಲ್ಲ. ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಒಂದೂವರೆ ವರ್ಷಗಳು ಕಳೆದಿವೆ. ಈಗಲೂ ಉನ್ನತ ಶಿಕ್ಷಣ ಇಲಾಖೆಯಲ್ಲಿ ಅಶ್ವತ್ಥ ನಾರಾಯಣ ರೂಪಿಸಿದ ವ್ಯವಸ್ಥೆ ಜಾರಿಯಲ್ಲಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಭ್ರಷ್ಟಾಚಾರ ಮುಂದುವರಿದಿದೆ. ವಿಶ್ವವಿದ್ಯಾನಿಲಯಗಳಿಗೆ ಮಾರಕವಾಗಿರುವ ಯುಯುಸಿಎಂಎಸ್ ವ್ಯವಸ್ಥೆ ಹಾಗೆಯೇ ಮುಂದುವರಿದಿದೆ. ಅಶ್ವತ್ಥ ನಾರಾಯಣ ಅವರ ಆಪ್ತ ಕಾರ್ಯದರ್ಶಿ ಹಣಕ್ಕಾಗಿ ರೂಪಿಸಿದ ಆ ವ್ಯವಸ್ಥೆ ರದ್ದು ಪಡಿಸಲು ಈಗಿನ ಸರಕಾರಕ್ಕೆ ಸಾಧ್ಯ ಆಗಿಲ್ಲ.

ಉನ್ನತ ಶಿಕ್ಷಣ ವ್ಯಾಪ್ತಿಯಲ್ಲಿರುವ 32 ವಿಶ್ವವಿದ್ಯಾನಿಲಯಗಳು ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಸಂಪೂರ್ಣ ವಿಫಲವಾಗಿವೆ. ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಕೊರತೆಯಿಂದ ಗುಣಮಟ್ಟದ ಶಿಕ್ಷಣ ಮತ್ತು ಸಂಶೋಧನಾ ಚಟುವಟಿಕೆಗಳು ಗಗನ ಕುಸುಮವಾಗಿವೆ. ಹೊಸದಾಗಿ ಆರಂಭವಾದ ವಿಶ್ವವಿದ್ಯಾನಿಲಯಗಳಲ್ಲಿ ಪ್ರಾಧ್ಯಾಪಕರು ಇಲ್ಲ. ಕುಲಪತಿಯೇ ಗುಮಾಸ್ತ, ಅಟೆಂಡೆರ್ ಎಲ್ಲವೂ ಆಗಿ ಕೆಲಸ ಮಾಡಬೇಕು. ಇಪ್ಪತ್ತೆರಡು ಸರಕಾರಿ ವಿಶ್ವವಿದ್ಯಾನಿಲಯಗಳಲ್ಲಿ ಪ್ರತಿಶತ 60ರಷ್ಟು ಹುದ್ದೆಗಳು ಖಾಲಿ ಇವೆ. ಯುಜಿಸಿ ನಿಯಮದ ಪ್ರಕಾರ ಕರ್ನಾಟಕದ ಎಲ್ಲ ವಿವಿಗಳು ನ್ಯಾಕ್ ಪ್ರಮಾಣ ಪತ್ರ ಗಳಿಸುವ ಅರ್ಹತೆ ಕಳೆದುಕೊಳ್ಳುತ್ತವೆ.

ಕೇಂದ್ರ ಸರಕಾರ ರೂಪಿಸಿದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕರ್ನಾಟಕ ಸರಕಾರ ತಿರಸ್ಕರಿಸಿ ತನ್ನದೇ ಆದ ಶಿಕ್ಷಣ ನೀತಿಯನ್ನು ರೂಪಿಸಿ ಜಾರಿಗೊಳಿಸಿದೆ. ಕುಲಪತಿ ನೇಮಕಾತಿ ಅಧಿಕಾರ ಮುಖ್ಯಮಂತ್ರಿಯಿಂದ ಕಿತ್ತುಕೊಳ್ಳುತ್ತಿರುವುದು ಒಕ್ಕೂಟ ವ್ಯವಸ್ಥೆಯ ಮೂಲ ತತ್ವವನ್ನು ಧಿಕ್ಕರಿಸಿದಂತೆ. ಇದನ್ನು ಶಿಕ್ಷಣ ತಜ್ಞರು ಮಾತ್ರವಲ್ಲ ಉನ್ನತ ಶಿಕ್ಷಣದ ಬಗ್ಗೆ ಕಾಳಜಿ ಹೊಂದಿರುವ ಎಲ್ಲರೂ ವಿರೋಧಿಸಬೇಕು. ಆದರೆ ಕರ್ನಾಟಕ ಸರಕಾರ ಉನ್ನತ ಶಿಕ್ಷಣ ಇಲಾಖೆಯಲ್ಲಿನ ಗಂಭೀರ ಸ್ವರೂಪದ ಲೋಪಗಳನ್ನು ಸರಿಪಡಿಸದ ಹೊರತು ಕೇಂದ್ರದ ನೀತಿ ವಿರುದ್ಧ ಗಟ್ಟಿ ಧ್ವನಿಯಲ್ಲಿ ಮಾತನಾಡಲು ಆಗುವುದಿಲ್ಲ. ಕರ್ನಾಟಕ ರಾಜ್ಯ ಶಿಕ್ಷಣ ನೀತಿಯನ್ನು ರೂಪಿಸಿ ಜಾರಿಗೊಳಿಸಿದೆ. ಆದರೆ ಯುಜಿಸಿ ರಾಷ್ಟ್ರೀಯ ಶಿಕ್ಷಣ ನೀತಿಗೆ ಪೂರಕವಾಗಿ ನಿಯಮಾವಳಿಗಳನ್ನು ಸಿದ್ಧಪಡಿಸಿ ಹೇರುತ್ತಿದೆ. ಶಿಕ್ಷಣ ಸಹವರ್ತಿ ಪಟ್ಟಿಯಲ್ಲಿರುವುದರಿಂದ ರಾಜ್ಯ ಸರಕಾರ ಶಿಕ್ಷಣ ನೀತಿ ರೂಪಿಸಬಹುದು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದಲ್ಲಿ ಸಮಸ್ಯೆ ಎದುರಾಗದು. ಆದರೆ ಉನ್ನತ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುವ ವಿವಿಗಳ ಪದವಿಗಳಿಗೆ ಯುಜಿಸಿ ಕುತ್ತು ತರದಂತೆ ನಿಗಾ ವಹಿಸಬೇಕು.

ಉನ್ನತ ಶಿಕ್ಷಣ ಇಲಾಖೆಯ ಹೊರಗಿರುವ, ಬೇರೆ ಇಲಾಖೆಯ ವ್ಯಾಪ್ತಿಗೆ ಸೇರಿರುವ ರಾಜೀವ್ ಗಾಂಧಿ ವಿವಿ ಸೇರಿದಂತೆ ಹತ್ತು ವಿಶ್ವವಿದ್ಯಾನಿಲಯಗಳು ಆರ್ಥಿಕವಾಗಿ ಸಬಲವಾಗಿವೆ. ಖಾಸಗಿ ವಿಶ್ವವಿದ್ಯಾನಿಲಯಗಳು, ಡೀಮ್ಡ್ ವಿವಿಗಳು ಮತ್ತು ಸರಕಾರಿ ವಿಶ್ವವಿದ್ಯಾನಿಲಯಗಳ ಪೈಪೋಟಿಯಲ್ಲಿ ಹಣ ಬಲ ಮತ್ತು ಹಣದ ಹರಿವು ಹೊಂದಿರುವ ವಿವಿಗಳು ಗೆಲ್ಲುತ್ತವೆ. ಬಡ ಮತ್ತು ಮಧ್ಯಮ ವರ್ಗದ ಮಕ್ಕಳು ಆಶ್ರಯಿಸಿರುವ ಸರಕಾರಿ ವಿಶ್ವವಿದ್ಯಾನಿಲಯಗಳು ಈಗಲೇ ಮುಚ್ಚುವ ಸ್ಥಿತಿಗೆ ತಲುಪಿವೆ. ಕರ್ನಾಟಕದಲ್ಲಿನ ಖಾಸಗಿ ಮತ್ತು ಡೀಮ್ಡ್ ವಿವಿಗಳು ಕೇಂದ್ರ ಸರಕಾರ ರೂಪಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಳವಡಿಸಿಕೊಂಡಿವೆ. ಮುಂದೊಂದು ದಿನ ಈ ಎಲ್ಲ ಸಂಗತಿಗಳು ತಾರತಮ್ಯ ಸೃಷ್ಟಿಗೆ ಕಾರಣವಾಗಬಾರದು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಉನ್ನತ ಶಿಕ್ಷಣ ಮಂತ್ರಿ ಸುಧಾಕರ್ ಅವರು ಕೇಂದ್ರ ಸರಕಾರ ಕುಲಪತಿ ನೇಮಕಾತಿಯಲ್ಲಿ ರಾಜ್ಯಪಾಲರ ಕೈ ಬಲಪಡಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಬೇಕು. ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಲು ರಾಜ್ಯ ಸರಕಾರ ಮುಂದಾಗಬೇಕು. ಇದನ್ನು ಕೇವಲ ಕುಲಪತಿ ನೇಮಕದ ಪ್ರಶ್ನೆಯಾಗಿ ಪರಿಗಣಿಸದೆ ಇಡೀ ಶಿಕ್ಷಣ ವ್ಯವಸ್ಥೆಯನ್ನು ಬುಡಮೇಲು ಮಾಡುವ, ಕೇಸರೀಕರಣಗೊಳಿಸುವ ಕೋಮುವಾದಿ ಹುನ್ನಾರವೆಂದು ಭಾವಿಸಬೇಕು.

ಉನ್ನತ ಶಿಕ್ಷಣದ ಬಗ್ಗೆ ಈಗಲಾದರೂ ರಾಜ್ಯ ಸರಕಾರ ನಿಜವಾದ ಕಾಳಜಿ ತೋರಬೇಕು. ಕನ್ನಡ ವಿಶ್ವವಿದ್ಯಾನಿಲಯ, ಜಾನಪದ ವಿಶ್ವವಿದ್ಯಾನಿಲಯ, ಸಂಗೀತ ವಿಶ್ವವಿದ್ಯಾನಿಲಯಗಳು ಹೆಚ್ಚು ಕಡಿಮೆ ಮುಚ್ಚುವ ಸ್ಥಿತಿ ತಲುಪಿವೆ. ಉನ್ನತ ಶಿಕ್ಷಣ ಇಲಾಖೆಗೆ ಹೆಚ್ಚು ಹಣ ಒದಗಿಸುವುದು ಒಂದು ಲೆಕ್ಕ. ಇಡೀ ಇಲಾಖೆಯನ್ನು ಕಾಲದ ಅಗತ್ಯಕ್ಕೆ ತಕ್ಕಂತೆ ಮರು ರೂಪಿಸುವುದು ಮೊದಲ ಆದ್ಯತೆಯಾಗಿ ಪರಿಗಣಿಸಬೇಕು. ಕುಲಸಚಿವ, ಕುಲಪತಿ ಮತ್ತು ಪ್ರಾಧ್ಯಾಪಕರ ನೇಮಕಾತಿಯಲ್ಲಿ ಪಾರದರ್ಶಕತೆ, ಲಂಚ ರಹಿತ ವ್ಯವಸ್ಥೆ ರೂಪಿಸಿದರೆ ಮಾತ್ರ ಸರಕಾರಿ ವಿವಿಗಳು ಗುಣಮಟ್ಟದ ಶಿಕ್ಷಣ ನೀಡುವ ಸಾಮರ್ಥ್ಯ ದಕ್ಕಿಸಿಕೊಳ್ಳುತ್ತವೆ. ತಮಿಳುನಾಡು, ಕೇರಳ ಸೇರಿದಂತೆ ಬಿಜೆಪಿಯೇತರ ಸರಕಾರಗಳ ಜೊತೆಗೆ ಸಮಾಲೋಚಿಸಿ ಕೇಂದ್ರ ಸರಕಾರದ ತಾನಾಶಾಹಿಯನ್ನು ವಿರೋಧಿಸಲು ಮುಂದಾಗಬೇಕು. ವಿಶ್ವವಿದ್ಯಾನಿಲಯಗಳ ಮೂಲಕ ಕೋಮುವಾದಿ ವಿಚಾರಗಳನ್ನು ಬಿತ್ತಿ ಬೆಳೆಯಲು ಮುಂದಾಗಿರುವ ಬಿಜೆಪಿಯ ಹುನ್ನಾರವನ್ನು ವಿಫಲಗೊಳಿಸುವುದು ಸರಕಾರದ ಮೊದಲ ಆದ್ಯತೆ ಆಗಬೇಕು. ಬಿಜೆಪಿಯವರು ಉನ್ನತ ಶಿಕ್ಷಣ ವಲಯದಲ್ಲಿ ಮೊದಲ ಆದ್ಯತೆಯಾಗಿ ಕೋಮುವಾದಿ ವಿಷ ಬಿಟ್ಟಿದ್ದಾರೆ. ಅಷ್ಟೇ ಅಲ್ಲ ಇಡೀ ಶಿಕ್ಷಣ ವ್ಯವಸ್ಥೆಯನ್ನು ಭ್ರಷ್ಟಗೊಳಿಸಿದ್ದಾರೆ. ಸರಕಾರಿ ವಿವಿಗಳು ಸಂಪೂರ್ಣ ಭ್ರಷ್ಟಗೊಂಡು ಒಮ್ಮೆ ವಿಶ್ವಾಸಾರ್ಹತೆ ಕಳೆದುಕೊಂಡರೆ ಖಾಸಗಿ ಮತ್ತು ವಿದೇಶಿ ವಿಶ್ವವಿದ್ಯಾನಿಲಯಗಳ ಪ್ರಾಬಲ್ಯ ಹೆಚ್ಚುತ್ತದೆ. ಈ ದೇಶದ ಬಡವರನ್ನು ಉನ್ನತ ಶಿಕ್ಷಣದಿಂದ ವಂಚಿತರನ್ನಾಗಿಸುವುದು ಮತ್ತು ಎಲ್ಲರಲ್ಲಿ ಮತೀಯ ವಿಷ ಬಿತ್ತಿ ಅರಾಜಕ ವ್ಯವಸ್ಥೆ ನಿರ್ಮಿಸುವುದು ಅವರ ಉದ್ದೇಶವಾಗಿರಬೇಕು. ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮಂತ್ರ ಮಾತ್ರ ಬಿಜೆಪಿಯ ಎಲ್ಲ ಬಗೆಯ ನೀಚ ಹುನ್ನಾರಗಳನ್ನು ವಿಫಲಗೊಳಿಸಬಲ್ಲದು. ಉಳಿದ ಮೂರು ವರ್ಷಗಳ ಅವಧಿಯಲ್ಲಿ ಕರ್ನಾಟಕದ ಉನ್ನತ ಶಿಕ್ಷಣ ಕ್ಷೇತ್ರ ಘನತೆ ಗೌರವ ಸಂಪಾದಿಸಿಕೊಳ್ಳುವಂತಾಗಲಿ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಡಾ. ರಾಜಶೇಖರ ಹತಗುಂದಿ

contributor

Similar News