ಕುಲಪತಿ ಹುದ್ದೆಗಳಿಗೆ ‘ಪ್ರಾಮಾಣಿಕರ’ ನೇಮಕವಾಗಲಿ

ಕುಲಪತಿ, ಕುಲಸಚಿವರು ಮತ್ತು ಸಿಂಡಿಕೇಟ್ ಸದಸ್ಯರ ನೇಮಕಾತಿಯಲ್ಲಿ ಲಂಚದ ವಹಿವಾಟು ನಡೆಯದಿದ್ದರೆ ವಿಶ್ವವಿದ್ಯಾನಿಲಯಗಳ ಶುದ್ಧೀಕರಣ ಪ್ರಕ್ರಿಯೆ ಆರಂಭವಾದಂತೆ. ಎಲ್ಲಕ್ಕೂ ಮಿಗಿಲಾಗಿ ಕುಲಪತಿ, ಕುಲಸಚಿವರು ಮತ್ತು ಸಿಂಡಿಕೇಟ್ ಸದಸ್ಯರ ನೇಮಕಾತಿಯಲ್ಲಿ ಶೈಕ್ಷಣಿಕ ತಜ್ಞತೆ, ಸಾಮಾಜಿಕ ಕಾಳಜಿ, ಬದ್ಧತೆ ಮತ್ತು ಪ್ರಾಮಾಣಿಕತೆ ಪ್ರಧಾನ ಮಾನದಂಡವಾಗಬೇಕು.;

Update: 2025-04-12 11:56 IST
ಕುಲಪತಿ ಹುದ್ದೆಗಳಿಗೆ ‘ಪ್ರಾಮಾಣಿಕರ’ ನೇಮಕವಾಗಲಿ
  • whatsapp icon

ಕರ್ನಾಟಕ ಸರಕಾರದ ವ್ಯಾಪ್ತಿಯಲ್ಲಿ ಒಟ್ಟು 41 ವಿಶ್ವವಿದ್ಯಾನಿಲಯಗಳಿವೆ. ಅವುಗಳ ಪೈಕಿ ಈಗ ಆರು ವಿಶ್ವವಿದ್ಯಾನಿಲಯಗಳ ಕುಲಪತಿ ಹುದ್ದೆ ಖಾಲಿಯಾಗಿವೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯ, ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ, ಕಲಬುರಗಿಯ ಗುಲಬರ್ಗಾ ವಿಶ್ವವಿದ್ಯಾನಿಲಯ, ರಾಯಚೂರಿನ ರಾಯಚೂರು ವಿಶ್ವವಿದ್ಯಾನಿಲಯ, ಬೆಂಗಳೂರು ನಗರ ವಿಶ್ವವಿದ್ಯಾನಿಲಯ ಮತ್ತು ಮೈಸೂರಿನ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾನಿಲಯಗಳಲ್ಲಿ ಪ್ರಭಾರಿ ಕುಲಪತಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಹಿಂದಿನ ಬಿಜೆಪಿ ಸರಕಾರದಲ್ಲಿ ನೇಮಕವಾದ ಕರ್ನಾಟಕ ವಿವಿಯ ಪ್ರೊ. ಕೆ.ಬಿ. ಗುಡಸಿ, ಅಕ್ಕಮಹಾದೇವಿ ಮಹಿಳಾ ವಿವಿಯ ಪ್ರೊ. ತುಳಸಿಮಾಲಾ, ಗುಲ್ಬರ್ಗಾ ವಿವಿಯ ಪ್ರೊ. ದಯಾನಂದ ಅಗಸರ, ರಾಯಚೂರು ವಿವಿಯ ಪ್ರೊ. ಹರೀಶ್ ರಾಮಸ್ವಾಮಿ, ಬೆಂಗಳೂರು ನಗರ ವಿವಿಯ ಪ್ರೊ. ಲಿಂಗರಾಜ ಗಾಂಧಿ ಮತ್ತು ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ವಿವಿಯ ಪ್ರೊ. ನಾಗೇಶ್ ಬೆಟ್ಟಕೋಟೆಯವರ ಕುಲಪತಿ ಹುದ್ದೆಯ ಅಧಿಕಾರಾವಧಿ ಕೊನೆಗೊಂಡಿದೆ.

ಈಗ ಆ ಆರು ವಿವಿಗಳ ಕುಲಪತಿ ಹುದ್ದೆಗಳನ್ನು ಭರ್ತಿ ಮಾಡಲು ಕರ್ನಾಟಕ ಸರಕಾರ ಆಯ್ಕೆ ಪ್ರಕ್ರಿಯೆ ಆರಂಭಿಸಿದೆ. ಆಯ್ಕೆ ಪ್ರಕ್ರಿಯೆಯೆಂದರೆ: ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸುವುದು, ಶೋಧನಾ ಸಮಿತಿ ರಚಿಸುವುದು ಮತ್ತು ಅಂತಿಮವಾಗಿ ಶೋಧನಾ ಸಮಿತಿಯ ವರದಿ ಮತ್ತು ಮುಖ್ಯಮಂತ್ರಿಯವರ ಶಿಫಾರಸು ಆಧರಿಸಿ ರಾಜ್ಯಪಾಲರು ನೇಮಕಾತಿ ಆದೇಶ ಹೊರಡಿಸುತ್ತಾರೆ. ಸದ್ಯ ಆರೂ ವಿವಿಗಳ ಕುಲಪತಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದರೂ ನಾಲ್ಕು ವಿವಿಗಳಿಗೆ ಮಾತ್ರ ಶೋಧನಾ ಸಮಿತಿಗಳು ರಚನೆಯಾಗಿವೆ.

ವಿಶ್ವವಿದ್ಯಾನಿಲಯಗಳ ಕುಲಪತಿ ನೇಮಕಾತಿಯಲ್ಲಿ ಈ ಶೋಧನಾ ಸಮಿತಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಈ ಶೋಧನಾ ಸಮಿತಿಯಲ್ಲಿ, ರಾಜ್ಯ ಸರಕಾರದ, ರಾಜ್ಯಪಾಲರ, ಯುಜಿಸಿ ಮತ್ತು ಆಯಾ ವಿಶ್ವವಿದ್ಯಾನಿಲಯಗಳ ನಾಮನಿರ್ದೇಶಿತ ಪ್ರತಿನಿಧಿಗಳು ಇರುತ್ತಾರೆ. ರಾಜ್ಯ ಸರಕಾರದಿಂದ ನಾಮನಿರ್ದೇಶಿತಗೊಂಡ ಹಿರಿಯ ಶಿಕ್ಷಣ ತಜ್ಞರು ಈ ಶೋಧನಾ ಸಮಿತಿಗೆ ಅಧ್ಯಕ್ಷರಾಗಿರುತ್ತಾರೆ. ಸಹಜವಾಗಿಯೇ ಅಧ್ಯಕ್ಷರು ನಿರ್ಣಾಯಕ ಪಾತ್ರ ವಹಿಸುತ್ತಾರೆ. ಹಾಗಂತ ಸದಸ್ಯರ ಪಾತ್ರವನ್ನು ಅಲ್ಲಗಳೆಯಲಾಗದು. ಪ್ರತೀ ವಿಶ್ವವಿದ್ಯಾನಿಲಯಕ್ಕೆ ಒಟ್ಟು ಮೂರು ಜನ ಅರ್ಹರ ಹೆಸರು ಸೂಚಿಸಬೇಕಾಗಿದ್ದರಿಂದ, ರಾಜ್ಯಪಾಲರಿಂದ ನಾಮನಿರ್ದೇಶಿತಗೊಂಡ ವ್ಯಕ್ತಿಯೂ ಮಹತ್ವದ ಪಾತ್ರ ವಹಿಸುತ್ತಾರೆ. ಹಾಲಿ ವಿಶ್ವವಿದ್ಯಾನಿಲಯಗಳ ಕಾಯ್ದೆ ಪ್ರಕಾರ ಮುಖ್ಯಮಂತ್ರಿಯವರು ಶಿಫಾರಸು ಮಾಡಿದ ಒಂದು ಹೆಸರಿಗೆ ರಾಜ್ಯಪಾಲರು ಒಪ್ಪಿಗೆ ನೀಡಿ ಆದೇಶ ಹೊರಡಿಸಬೇಕು. ಆದರೆ ಕೇಂದ್ರದ ಬಿಜೆಪಿ ಸರಕಾರದ ಮರ್ಜಿಯಿಂದ ನೇಮಕಗೊಂಡ ರಾಜ್ಯಪಾಲರು ಏನಾದರೊಂದು ತಕರಾರು ತೆಗೆಯುತ್ತಾರೆ. ತಮಗೆ ಬೇಕಾದ ಅಭ್ಯರ್ಥಿಯನ್ನು ಕುಲಪತಿ ಹುದ್ದೆಯಲ್ಲಿ ಕೂರಿಸಲು ಸದಾ ಹವಣಿಸುತ್ತಿರುತ್ತಾರೆ.

ಕರ್ನಾಟಕ ಸರಕಾರ ಮತ್ತು ರಾಜ್ಯಪಾಲರ ಹಗ್ಗ ಜಗ್ಗಾಟದಲ್ಲಿ ಪ್ರತಿಭಾವಂತ ಚಿಂತಕ, ಶ್ರೇಷ್ಠ ಶಿಕ್ಷಣ ತಜ್ಞ ಮತ್ತು ಆಡಳಿತದ ಅಪಾರ ಅನುಭವ ಇರುವ ಮಹಾನ್ ಕನಸುಗಾರ ಪ್ರೊ. ಮುಜಾಫರ್ ಅಸ್ಸಾದಿಯವರು ಕೊನೆಗೂ ಕುಲಪತಿಯಾಗಿ ನೇಮಕಗೊಳ್ಳಲೇ ಇಲ್ಲ. ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರಕಾರ ಎರಡು ವಿಷಯಗಳಲ್ಲಿ ತನ್ನ ಬದ್ಧತೆ ಮತ್ತು ಪ್ರಾಮಾಣಿಕ ಕಾಳಜಿ ತೋರಿಸಿದೆ. ಒಂದು: ರಾಜ್ಯದ ಎಲ್ಲ ವಿಶ್ವವಿದ್ಯಾನಿಲಯಗಳಿಗೆ ಪ್ರಾಮಾಣಿಕರು ಮತ್ತು ಶಿಕ್ಷಣ ಕ್ಷೇತ್ರದ ಅನುಭವಿಗಳನ್ನು ಸಿಂಡಿಕೇಟ್ ಸದಸ್ಯರನ್ನಾಗಿ ನೇಮಿಸಿದೆ. ಹಿಂದಿನ ಬಿಜೆಪಿ ಸರಕಾರ ಸಿಂಡಿಕೇಟ್ ಸದಸ್ಯರ ನೇಮಕಾತಿಯಲ್ಲಿ ಎರಡು ಬಗೆಯ ಮಾನದಂಡ ಅನುಸರಿಸುತ್ತಿತ್ತು. ಶಿಕ್ಷಣ ತಜ್ಞರು ಎಂಬ ಪದವೇ ಅವರಿಗೆ ಅಲರ್ಜಿಯಾಗಿತ್ತು. ಅರ್ಧದಷ್ಟು ಸದಸ್ಯರನ್ನು ಸಂಘ ಪರಿವಾರಕ್ಕೆ ಸೇರಿದವರನ್ನು ನೇಮಿಸುತ್ತಿತ್ತು. ಇನ್ನರ್ಧದಷ್ಟು ಸದಸ್ಯರ ನೇಮಕಾತಿ ಹಣದ ಆಧಾರದಲ್ಲಿ ನಡೆಯುತ್ತಿತ್ತು. ಮೊದಲ ಬಾರಿಗೆ ಕರ್ನಾಟಕ ಸರಕಾರ ಅತ್ಯುತ್ತಮ ಶಿಕ್ಷಣ ತಜ್ಞರನ್ನು ಸಿಂಡಿಕೇಟ್ ಸದಸ್ಯರನ್ನಾಗಿ ನೇಮಿಸಿದೆ. ಎರಡು: ವಿಶ್ವವಿದ್ಯಾನಿಲಯಗಳ ಕುಲಪತಿ ಆಯ್ಕೆಗಾಗಿ ರಚಿಸುವ ಶೋಧನಾ ಸಮಿತಿಗೆ ಪ್ರಾಮಾಣಿಕರನ್ನು ಮತ್ತು ಶೈಕ್ಷಣಿಕ ಕಾಳಜಿಯುಳ್ಳ ಶಿಕ್ಷಣ ತಜ್ಞರನ್ನು ರಾಜ್ಯ ಸರಕಾರದ ಪ್ರತಿನಿಧಿಯನ್ನಾಗಿ ನೇಮಿಸಿ ಕಾಳಜಿ ಮೆರೆದಿದೆ.

ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಶೋಧನಾ ಸಮಿತಿಗೆ ಡಾ. ಮಲ್ಲಿಕಾ ಘಂಟಿ, ಕರ್ನಾಟಕ ವಿಶ್ವವಿದ್ಯಾನಿಲಯಕ್ಕೆ ಡಾ. ರಾಜಾಸಾಬ್, ರಾಯಚೂರು ವಿವಿಗೆ ಡಾ. ಸಬಿಹಾ ಮತ್ತು ಗುಲಬರ್ಗಾ ವಿವಿಗೆ ಡಾ. ಜಾಫೆಟ್ ಅವರನ್ನು ಅಧ್ಯಕ್ಷರನ್ನಾಗಿ ಕರ್ನಾಟಕ ಸರಕಾರ ನೇಮಿಸಿದೆ. ವಿಶ್ವವಿದ್ಯಾನಿಲಯದ ಕುಲಪತಿಯಾಗಲು ಪ್ರಾಧ್ಯಾಪಕರಾಗಿ ಕನಿಷ್ಠ ಹತ್ತು ವರ್ಷ ಸೇವೆ ಸಲ್ಲಿಸಿರಬೇಕು ಎಂಬುದು ಪ್ರಾಥಮಿಕ ಅಗತ್ಯ. ಆದರೆ, ಎಲ್ಲರೂ ಅದೊಂದನ್ನೇ ಪ್ರಮುಖ ಮಾನದಂಡವನ್ನಾಗಿ ಪರಿಗಣಿಸಿ ಉಳಿದ ಶೈಕ್ಷಣಿಕ ಮತ್ತು ಆಡಳಿತ ಅನುಭವವನ್ನು ಗೌಣವಾಗಿಸುತ್ತಾರೆ. ವಿಶ್ವವಿದ್ಯಾನಿಲಯದ ನೌಕರಿಗೆ ಸೇರಿದ ಎಲ್ಲರೂ ಹತ್ತು ವರ್ಷದ ಮಾನದಂಡಕ್ಕೆ ಅರ್ಹತೆ ಗಳಿಸುತ್ತಾರೆ. ಆದರೆ ಅವರು ಪ್ರಾಧ್ಯಾಪಕರಾಗಿ ಯಾವ ಸಾಧನೆ ಮಾಡಿದರು ಎಂಬುದು ಮುಖ್ಯವಾಗಬೇಕು. ನಿಜವಾದ ಶೈಕ್ಷಣಿಕ ಕಾಳಜಿಯುಳ್ಳ ಶೋಧನಾ ಸಮಿತಿ ಕುಲಪತಿ ಹುದ್ದೆಯ ಆಕಾಂಕ್ಷಿಗಳ ಶೈಕ್ಷಣಿಕ ಸಾಧನೆ, ಆಡಳಿತದ ಅನುಭವ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅವರು ಪಡೆದುಕೊಂಡ ಮಾನ್ಯತೆಯನ್ನು ಪರಿಗಣಿಸಬೇಕು. ಅವರು ಅತ್ಯಂತ ಪ್ರಾಮಾಣಿಕ ಮತ್ತು ಶೈಕ್ಷಣಿಕ ಕನಸುಗಾರ ಎಂಬುದನ್ನು ದೃಢಪಡಿಸಿಕೊಂಡೇ ಕುಲಪತಿ ಹುದ್ದೆಗೆ ಹೆಸರುಗಳನ್ನು ಸೂಚಿಸಬೇಕು. ಯುಜಿಸಿ ಮತ್ತು ಇನ್ನಿತರ ಸಂಸ್ಥೆಗಳಿಂದ ಕೋಟಿ ಕೋಟಿ ಹಣದ ಪ್ರಾಜೆಕ್ಟ್ ಪಡೆದುಕೊಂಡು, ಯಾವುದೇ ಮಹತ್ತರ ಸಂಶೋಧನೆ ಕೈಗೊಳ್ಳದ ಪ್ರಾಧ್ಯಾಪಕರೇ ಜಾಸ್ತಿಯಾಗಿದ್ದಾರೆ. ಹಣ ಮಾಡುವುದಕ್ಕೆ ಕೈಗೊಂಡ ಅಂಥ ಸಂಶೋಧನೆಗಳಿಂದ ಸಮಾಜಕ್ಕೆ ಯಾವುದೇ ಲಾಭ ಆಗಿರುವುದಿಲ್ಲ. ಅಂತಹ ಕಳ್ಳ ಶಿಕ್ಷಣ ತಜ್ಞರನ್ನು ಪರಿಶೀಲನೆಯ ಹಂತದಲ್ಲೇ ಕೈಬಿಡಬೇಕು.

ಒಂದು ವೇಳೆ ಈ ಪ್ರಾಜೆಕ್ಟ್ ವೀರ ಸಂಶೋಧಕರನ್ನು ಒಳಗೆ ಬಿಟ್ಟುಕೊಂಡರೆ ಕುಲಪತಿ ಹುದ್ದೆಯನ್ನು ಯಾವುದೇ ಬೆಲೆಗಾದರೂ ಖರೀದಿ ಮಾಡುತ್ತಾರೆ. ಮಹಾನ್ ಪ್ರತಿಭಾವಂತರಿದ್ದು, ಅತ್ಯುತ್ತಮ ಶೈಕ್ಷಣಿಕ ಸಾಧನೆ ಮಾಡಿದ ಮತ್ತು ಕೇವಲ ಸಂಬಳವನ್ನೇ ಅವಲಂಬಿಸಿ ಜೀವನ ಸಾಗಿಸುವ ಮೂರು ಜನ ಶಿಕ್ಷಣ ತಜ್ಞರ ಹೆಸರನ್ನು ಕುಲಪತಿ ಹುದ್ದೆಗೆ ಸೂಚಿಸಿದರೆ ಕರ್ನಾಟಕ ಸರಕಾರಕ್ಕೆ ಮತ್ತು ರಾಜ್ಯಪಾಲರಿಗೆ ಪ್ರಾಮಾಣಿಕರನ್ನು ನೇಮಿಸುವುದು ಅನಿವಾರ್ಯವಾಗುತ್ತದೆ.

ಅಂತಹ ಅನಿವಾರ್ಯ ಪರಿಸ್ಥಿತಿ ನಿರ್ಮಾಣ ಮಾಡುವುದು ಈ ಶೋಧನಾ ಸಮಿತಿಯ ಅಧ್ಯಕ್ಷರ ಕೈಯಲ್ಲಿದೆ. ಡಾ. ಮಲ್ಲಿಕಾ ಘಂಟಿ, ಡಾ. ರಾಜಾಸಾಬ್, ಡಾ. ಸಬಿಹಾ ಮತ್ತು ಡಾ. ಜಾಫೆಟ್ ಅವರು ಹಣಕ್ಕಾಗಿ ಕೈ ಚಾಚುವವರಲ್ಲ. ತಮ್ಮ ಬದುಕಿನುದ್ದಕ್ಕೂ ಅತ್ಯುತ್ತಮ ಸಮಾಜದ ಕನಸು ಕಂಡವರು. ವಿಶ್ವವಿದ್ಯಾನಿಲಯಗಳು ಅತ್ಯುನ್ನತ ಶೈಕ್ಷಣಿಕ ಸಂಸ್ಥೆಗಳಾಗಬೇಕು ಎಂದು ಬಯಸಿದವರು ಮತ್ತು ಆ ನಿಟ್ಟಿನಲ್ಲಿ ಶಕ್ತಿ ಮೀರಿ ಪ್ರಯತ್ನಿಸಿದವರು. ಅವರಿಂದ ಅತ್ಯುತ್ತಮ ಅಭ್ಯರ್ಥಿಗಳ ಆಯ್ಕೆಯನ್ನು ನಿರೀಕ್ಷಿಸಬಹುದು.

ಈ ಆರು ವಿವಿಗಳಿಗೆ ಪ್ರಾಮಾಣಿಕರು, ದಕ್ಷರು, ಶೈಕ್ಷಣಿಕ ಕಾಳಜಿಯುಳ್ಳವರು ಕುಲಪತಿಗಳಾಗಿ ನೇಮಕಗೊಂಡರೆ ಒಂದು ಮಾದರಿ ಸೆಟ್ ಮಾಡಿದಂತಾಗುತ್ತದೆ.

ಮೊನ್ನೆ ಮೊನ್ನೆಯಷ್ಟೇ, ಸುಪ್ರೀಂ ಕೋರ್ಟ್ ರಾಜ್ಯಪಾಲರ ಮಿತಿಮೀರಿದ ವಿವೇಚನಾ ಅಧಿಕಾರಕ್ಕೆ ಕಡಿವಾಣ ಹಾಕಿ ಆದೇಶ ಹೊರಡಿಸಿದೆ. ಸುಪ್ರೀಂ ಕೋರ್ಟ್ ನೀಡಿದ ಬಲವನ್ನು ಬಳಸಿಕೊಂಡು ಕರ್ನಾಟಕ ಸರಕಾರ ಅತ್ಯುತ್ತಮ ಕುಲಪತಿಗಳ ನೇಮಕಕ್ಕೆ ಚಾಲನೆ ನೀಡಿದರೆ, ವಿಶ್ವವಿದ್ಯಾನಿಲಯಗಳ ಒಟ್ಟಾರೆ ಸ್ವರೂಪ ಬದಲಾಯಿಸಬಹುದು.

ಹಾಗೆ ನೋಡಿದರೆ, ಕರ್ನಾಟಕದ ಯಾವ ವಿಶ್ವವಿದ್ಯಾನಿಲಯವೂ ಆರ್ಥಿಕವಾಗಿ ಸದೃಢವಾಗಿಲ್ಲ. ಹಣ ಕೊಟ್ಟು ಕುಲಪತಿಯಾಗುವ ವ್ಯಕ್ತಿ ವಿಶ್ವವಿದ್ಯಾನಿಲಯದ ಕಲ್ಲು ಮಣ್ಣು ಮಾರಿ ಅಥವಾ ಶೈಕ್ಷಣಿಕ ವ್ಯವಸ್ಥೆಯನ್ನು ಮತ್ತಷ್ಟು ಕೆಡಿಸಿ ಹಣ ಮಾಡಬೇಕಷ್ಟೆ. ಹಿಂದಿನ ಕುಲಪತಿಗಳು ಕೋಟಿ ಕೋಟಿ ಹಣ ಲಂಚ ನೀಡಿ ಕುಲಪತಿ ಹುದ್ದೆ ಪಡೆದುಕೊಂಡು ಲಂಚಾವತಾರದ ಎಲ್ಲ ಪ್ರಯೋಗ ಮಾಡಿದ್ದಾರೆ. ಅಂಕ ಪಟ್ಟಿ ಹಗರಣ, ಪಿಎಚ್.ಡಿ., ಸೀಟುಗಳ ಮಾರಾಟ, ಭಡ್ತಿಯಲ್ಲಿ ಲಂಚ, ಕಟ್ಟಡ ರಿಪೇರಿಯಲ್ಲಿ ಕಮಿಷನ್.. ಹೀಗೆ ಏನೆಲ್ಲಾ ಕಸರತ್ತು ಮಾಡಿದರೂ ಹಾಕಿದ ಮೂಲ ಬಂಡವಾಳ ತೆಗೆಯಲಾಗಿಲ್ಲ. ಬಂಡರು, ನಿರ್ಲಜ್ಜರು ತುಳಿಯಬಾರದ ದಾರಿ ತುಳಿದು ದುಡ್ಡು ಮಾಡಿ ಬಚಾವ್ ಆಗಿದ್ದಾರೆ.

ಕರ್ನಾಟಕ ರಾಜ್ಯದ ವಿಶ್ವವಿದ್ಯಾನಿಲಯಗಳಿಗೆ ಕಾಯಕಲ್ಪ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮನಸ್ಸು ಮಾಡಿದಂತಿದೆ. ಸಿಂಡಿಕೇಟ್ ಸದಸ್ಯರ ಮತ್ತು ಶೋಧನಾ ಸಮಿತಿಯ ಅಧ್ಯಕ್ಷರ ನೇಮಕಾತಿಯಲ್ಲಿ ರಾಜ್ಯ ಸರಕಾರ ಕಾಳಜಿ ಮತ್ತು ಬದ್ಧತೆ ತೋರಿದೆ. ಒಂದು ವಿಶ್ವವಿದ್ಯಾನಿಲಯಕ್ಕೆ ಪ್ರಾಮಾಣಿಕ ಮತ್ತು ದಕ್ಷ ಕುಲಪತಿ ನೇಮಕಗೊಂಡರೆ ಸಾಲದು, ಆಡಳಿತ ಮತ್ತು ಮೌಲ್ಯಮಾಪನ ಕುಲಸಚಿವರ ನೇಮಕಾತಿಯಲ್ಲೂ ಪ್ರಾಮಾಣಿಕರಿಗೆ ಮಣೆ ಹಾಕಬೇಕು. ಕುಲಪತಿ ಪ್ರಾಮಾಣಿಕರಾಗಿದ್ದು ಕುಲಸಚಿವರು ಲೂಟಿಕೋರರಾಗಿದ್ದರೆ ವಿಶ್ವವಿದ್ಯಾನಿಲಯದ ಶೈಕ್ಷಣಿಕ ಸ್ಥಿತಿಗತಿಯಲ್ಲಿ ಏನೂ ಬದಲಾವಣೆ ತರಲು ಸಾಧ್ಯವಿಲ್ಲ. ಕಳೆದ ಹದಿನೈದು ವರ್ಷಗಳ ಅವಧಿಯಲ್ಲಿ ಕರ್ನಾಟಕದಲ್ಲಿ ಆಡಳಿತ ನಡೆಸಿದ ಎಲ್ಲ ಪಕ್ಷಗಳ ಸರಕಾರಗಳ ಉನ್ನತ ಶಿಕ್ಷಣ ಮಂತ್ರಿಗಳು ಕುಲಪತಿ, ಕುಲಸಚಿವರ ನೇಮಕಾತಿಯಲ್ಲಿ ಹಣ ಮಾಡಿದವರೇ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉನ್ನತ ಶಿಕ್ಷಣ ಸಚಿವ ಡಾ. ಸುಧಾಕರ್ ಅವರಿಗೆ ಅಡ್ಡ ಹಾದಿಯಲ್ಲಿ ದುಡ್ಡು ಮಾಡುವ ದರ್ದು ಇಲ್ಲ ಎನ್ನುವುದು ಸಿಂಡಿಕೇಟ್ ಸದಸ್ಯರ ಮತ್ತು ಕುಲಸಚಿವರ ನೇಮಕಾತಿಯಲ್ಲಿ ಸಾಬೀತುಪಡಿಸಿದ್ದಾರೆ.

ಕುಲಪತಿ, ಕುಲಸಚಿವರು ಮತ್ತು ಸಿಂಡಿಕೇಟ್ ಸದಸ್ಯರ ನೇಮಕಾತಿಯಲ್ಲಿ ಲಂಚದ ವಹಿವಾಟು ನಡೆಯದಿದ್ದರೆ ವಿಶ್ವವಿದ್ಯಾನಿಲಯಗಳ ಶುದ್ಧೀಕರಣ ಪ್ರಕ್ರಿಯೆ ಆರಂಭವಾದಂತೆ. ಎಲ್ಲಕ್ಕೂ ಮಿಗಿಲಾಗಿ ಕುಲಪತಿ, ಕುಲಸಚಿವರು ಮತ್ತು ಸಿಂಡಿಕೇಟ್ ಸದಸ್ಯರ ನೇಮಕಾತಿಯಲ್ಲಿ ಶೈಕ್ಷಣಿಕ ತಜ್ಞತೆ, ಸಾಮಾಜಿಕ ಕಾಳಜಿ, ಬದ್ಧತೆ ಮತ್ತು ಪ್ರಾಮಾಣಿಕತೆ ಪ್ರಧಾನ ಮಾನದಂಡವಾಗಬೇಕು.

ಈಗ ಶೈಕ್ಷಣಿಕ ಕಾಳಜಿಯುಳ್ಳ ಶಿಕ್ಷಣ ತಜ್ಞರನ್ನು ಹೊರಗಿಟ್ಟು ಕೇವಲ ಸಂಘ ಪರಿವಾರದ ಗರಡಿಯಲ್ಲಿ ಮೆದುಳು ರೂಪಿಸಿಕೊಂಡವರನ್ನು ಕೇಂದ್ರೀಯ ವಿಶ್ವವಿದ್ಯಾನಿಲಯಗಳ ಕುಲಪತಿ ಹುದ್ದೆಯಲ್ಲಿ ಕೂರಿಸಲಾಗಿದೆ. ಕೇಂದ್ರೀಯ ವಿಶ್ವವಿದ್ಯಾನಿಲಯಗಳು ಸಂಘ ಪರಿವಾರದ ಶಾಖಾ ಕೇಂದ್ರಗಳಾಗಿ ಪರಿವರ್ತನೆಯಾಗಿವೆ. ಅಲ್ಲಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಸಂಘ ಪರಿವಾರದ ತಾತ್ವಿಕತೆಯನ್ನೇ ಬೋಧಿಸಲಾಗುತ್ತಿದೆ. ಸಂಘ ಪರಿವಾರದಿಂದ ಬಂದ ಪ್ರಾಧ್ಯಾಪಕರಿಗೆ ಹೆಚ್ಚು ಮನ್ನಣೆ ನೀಡಲಾಗುತ್ತಿದೆ. ಸಂಘ ಪರಿವಾರದ ತಾತ್ವಿಕತೆ ಸ್ವೀಕರಿಸದ ಪ್ರಾಧ್ಯಾಪಕರು ಪ್ರತಿಭಟಿಸಲಾಗದೆ, ಅವರ ವ್ಯವಸ್ಥೆಯನ್ನು ಒಪ್ಪಿಕೊಳ್ಳಲಾಗದೆ ತ್ರಿಶಂಕು ಸ್ಥಿತಿಯಲ್ಲಿದ್ದಾರೆ. ನಿಜವಾದ ಶೈಕ್ಷಣಿಕ ಚಟುವಟಿಕೆಗಳಿಗೆ ಅವಕಾಶವೇ ಇಲ್ಲದಂತಾಗಿದೆ.

ಪ್ರಾಮಾಣಿಕ ಕುಲಪತಿ, ಸಂಘ ಪರಿವಾರದ ಶಾಖೆ ನಡೆಸುವ ಕಾರ್ಯಕರ್ತನಾದರೆ ಶೈಕ್ಷಣಿಕ ಪ್ರಯೋಜನ ಇಲ್ಲ. ಜಗತ್ತು ಶಿಕ್ಷಣ ಕ್ಷೇತ್ರದಲ್ಲಿ ಬಹಳ ಮುಂದುವರಿದಿದೆ, ಕಾಲದ ಅಗತ್ಯಕ್ಕೆ ತಕ್ಕಂತೆ ನಮ್ಮ ಶೈಕ್ಷಣಿಕ ವ್ಯವಸ್ಥೆಯನ್ನು ಮರು ಸಂಘಟಿಸದಿದ್ದರೆ ನಾಡಿಗೆ, ದೇಶಕ್ಕೆ ಲಾಭವಿಲ್ಲ. ಕೋಮುವಾದಿ ಮನಸ್ಥಿತಿಯ ವಿದ್ಯಾರ್ಥಿ ಪಡೆ ಸೃಷ್ಟಿಯಾಗುತ್ತದೆಯಷ್ಟೇ.

ಕೇಂದ್ರ ಸರಕಾರ ಕೇಂದ್ರೀಯ ವಿಶ್ವವಿದ್ಯಾನಿಲಯಗಳಿಗೆ ನೂರಾರು ಕೋಟಿ ರೂ. ಅನುದಾನ ನೀಡುತ್ತಿದೆ. ಪೂರ್ಣ ಪ್ರಮಾಣದ ಪ್ರಾಧ್ಯಾಪಕರನ್ನು ನೇಮಿಸಿದೆ. ಆದರೆ ಅಲ್ಲಿ ಸಂಘ ಪರಿವಾರದ ಅಜೆಂಡಾ ಜಾರಿಗೊಳಿಸಲಾಗುತ್ತಿದೆ. ಆದರೆ ಕರ್ನಾಟಕದ ವಿಶ್ವವಿದ್ಯಾನಿಲಯಗಳ ಪರಿಸ್ಥಿತಿ ತೀರಾ ಭಿನ್ನವಾಗಿದೆ. ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯ, ರಾಜೀವಗಾಂಧಿ ಆರೋಗ್ಯ ವಿವಿ, ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಮತ್ತು ಬೆಂಗಳೂರಿನ ಮೂರು ವಿವಿ ಹೊರತುಪಡಿಸಿ ಉಳಿದೆಲ್ಲ ವಿಶ್ವವಿದ್ಯಾನಿಲಯಗಳು ತೀವ್ರವಾದ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿವೆ. ಕೆಲವು ವಿಶ್ವವಿದ್ಯಾನಿಲಯಗಳು ವಿದ್ಯುತ್ ಬಿಲ್ ಕಟ್ಟಲಾರದಷ್ಟು ಕಂಗಾಲಾಗಿವೆ. ರಾಜ್ಯದ ಎಲ್ಲ ವಿವಿಗಳಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಕೊರತೆ ಎದ್ದು ಕಾಣುತ್ತದೆ.

ರಾಜ್ಯದ ಕೆಲವು ವಿಶ್ವವಿದ್ಯಾನಿಲಯಗಳು ನಿವೃತ್ತಿ ಹೊಂದಿದ ಸಿಬ್ಬಂದಿಗೆ ಪೆನ್ಷನ್ ಕೊಡಲಾರದ ಸ್ಥಿತಿಯಲ್ಲಿವೆ. ಬಹುತೇಕ ವಿಶ್ವವಿದ್ಯಾನಿಲಯಗಳು ಅತಿಥಿ ಉಪನ್ಯಾಸಕರ ಅವಲಂಬಿಗಳಾಗಿವೆ. ಖಾಯಂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಪ್ರಮಾಣ ಪ್ರತಿಶತ ಅರುವತ್ತಕ್ಕಿಂತಲೂ ಕಡಿಮೆ ಇದೆ. ವಿವಿಯ ಎಷ್ಟೋ ವಿಭಾಗಗಳಲ್ಲಿ ಪಿಎಚ್.ಡಿ. ಮಾಡ ಬಯಸುವ ಅಸಂಖ್ಯಾತ ವಿದ್ಯಾರ್ಥಿಗಳಿದ್ದಾರೆ. ಆದರೆ ಅವರಿಗೆ ಮಾರ್ಗದರ್ಶನ ಮಾಡಲು ಖಾಯಂ ಬೋಧಕ ಸಿಬ್ಬಂದಿಯಿಲ್ಲ. ಹೀಗಾಗಿ ವಿಶ್ವವಿದ್ಯಾನಿಲಯಗಳಲ್ಲಿ ಸಂಶೋಧನಾ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಂಡಿವೆ. ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಕರ್ನಾಟಕದಲ್ಲಿ ಒಂದೇ ಬಗೆಯ ಮಾನದಂಡ ಇಲ್ಲ. ಆರ್ಥಿಕ ಇಲಾಖೆಯ ಈ ಬಗೆಯ ಅರಾಜಕತೆಯನ್ನು ಅದು ಹೇಗೆ ಸಹಿಸಿಕೊಂಡಿದೆಯೋ?

ಕರ್ನಾಟಕದ ಸರಕಾರಿ ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಪ್ರವೇಶ ಪರೀಕ್ಷೆ ಮೂಲಕ ಮಾಡಲಾಗುತ್ತದೆ. ಖಾಸಗಿ ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಯಾವುದೇ ಪ್ರವೇಶ ಪರೀಕ್ಷೆ ನಡೆಸುವುದಿಲ್ಲ. ನೇರ ಸಂದರ್ಶನದ ಮೂಲಕ ಮಾಡಿಕೊಳ್ಳಲಾಗುತ್ತದೆ. ವಿಶ್ವವಿದ್ಯಾನಿಲಯಗಳ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಮಾನದಂಡ ವಿವಾದದಲ್ಲಿ ಇದೆ.

ಕರ್ನಾಟಕ ಸರಕಾರ, ರಾಜ್ಯದ ವಿಶ್ವವಿದ್ಯಾನಿಲಯಗಳಿಗೆ ಕಾಯಕಲ್ಪ ನೀಡಲು ಮುಂದಾಗಿರುವುದು ಶ್ಲಾಘನೀಯ ಕಾರ್ಯ. ಸಿಂಡಿಕೇಟ್ ಸದಸ್ಯರ ನೇಮಕಾತಿ, ಕುಲಪತಿ ಮತ್ತು ಕುಲಸಚಿವರ ನೇಮಕಾತಿಯಲ್ಲಿ ಪ್ರಾಮಾಣಿಕರನ್ನು ಮತ್ತು ನಿಜವಾದ ಶೈಕ್ಷಣಿಕ ಕಾಳಜಿಯುಳ್ಳವರನ್ನು ನೇಮಿಸಿದ್ದು ಉತ್ತಮ ಬೆಳವಣಿಗೆ. ಈ ಕಾಳಜಿಗೆ ಮತ್ತಷ್ಟು ವೇಗ ಮತ್ತು ವಿಸ್ತಾರ ಪ್ರಾಪ್ತಿಯಾದರೆ ಕರ್ನಾಟಕದ ಸರಕಾರಿ ವಿಶ್ವವಿದ್ಯಾನಿಲಯಗಳು ಮೊದಲಿನ ವೈಭವ ಪಡೆದುಕೊಳ್ಳುವುದರಲ್ಲಿ ಸಂದೇಹ ಇಲ್ಲ. ದಕ್ಷ, ಪ್ರಾಮಾಣಿಕ ಮತ್ತು ನಿಜವಾದ ಶೈಕ್ಷಣಿಕ ಕಾಳಜಿಯುಳ್ಳ ಕುಲಪತಿಗಳನ್ನು ನೇಮಿಸಲು ರಾಜ್ಯಪಾಲರು ಅಡ್ಡಿ ಪಡಿಸಿದರೆ, ಸುಪ್ರೀಂ ಕೋರ್ಟ್ ಆದೇಶದ ಬೆಂಬಲ ಪಡೆದುಕೊಂಡು ಹೊಸ ಕಾಯ್ದೆ ತರಬಹುದಾಗಿದೆ. ಕರ್ನಾಟಕ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಹೆಸರು ಮಾಡಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಿದರೆ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಕರ್ನಾಟಕ ಮತ್ತೆ ತಲೆ ಎತ್ತಿ ನಡೆಯುವ ಅವಕಾಶಗಳಿವೆ.

ಕರ್ನಾಟಕ ಸರಕಾರದ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೆಡಿಕಲ್ ಕಾಲೇಜುಗಳು ಅತ್ಯುತ್ತಮ ಗುಣಮಟ್ಟದ ಶಿಕ್ಷಣಕ್ಕೆ ಹೆಸರಾಗಿವೆ. ಪ್ರತಿಯೊಬ್ಬ ಪ್ರತಿಭಾವಂತ ವಿದ್ಯಾರ್ಥಿ ಬೆಂಗಳೂರು ಮೆಡಿಕಲ್ ಕಾಲೇಜು, ಮೈಸೂರು ಮೆಡಿಕಲ್ ಕಾಲೇಜು ಸೇರಿದಂತೆ ಸರಕಾರಿ ಮೆಡಿಕಲ್ ಕಾಲೇಜುಗಳಲ್ಲಿ ಓದಲು ತುದಿಗಾಲಲ್ಲಿ ನಿಂತಿರುತ್ತಾರೆ. ಸರಕಾರಿ ಮೆಡಿಕಲ್ ಕಾಲೇಜುಗಳಿಗೆ ಅಟ್ಯಾಚ್ ಆಗಿರುವ ಆಸ್ಪತ್ರೆಗಳ ಸ್ಥಿತಿ ಚೆನ್ನಾಗಿಲ್ಲ. ಆ ಮಾತು ಬೇರೆ. ಆದರೆ ಸರಕಾರಿ ಮೆಡಿಕಲ್ ಕಾಲೇಜುಗಳು ಅತ್ಯುತ್ತಮ ಗುಣಮಟ್ಟದ ಶಿಕ್ಷಣಕ್ಕೆ ಹೆಸರು ಮಾಡಿದ್ದು ದೊಡ್ಡ ಸಾಧನೆ.

ಅದೇ ಮಾದರಿ ಅನುಸರಿಸಿ, ಕರ್ನಾಟಕ ಸರಕಾರದ ವ್ಯಾಪ್ತಿಯ ಎಲ್ಲ ವಿಶ್ವವಿದ್ಯಾನಿಲಯಗಳು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿದರೆ ಖಾಸಗಿ ವಿಶ್ವವಿದ್ಯಾನಿಲಯಗಳು ರಾಜ್ಯದಲ್ಲಿ ತಲೆ ಎತ್ತಿ ನಿಲ್ಲಲಾರವು.

ವಿಚಿತ್ರವೆಂದರೆ, ಕರ್ನಾಟಕದಲ್ಲಿ ಒಳ್ಳೆಯದಕ್ಕೂ ಮತ್ತು ಕೆಟ್ಟದಕ್ಕೂ ನಮ್ಮಲ್ಲೇ ಮಾದರಿ ನಿದರ್ಶನಗಳಿವೆ. ಜಯದೇವ ಹೃದ್ರೋಗ ಸಂಸ್ಥೆ ಇಡೀ ಏಶ್ಯದಲ್ಲೇ ಅತ್ಯುತ್ತಮ ಗುಣಮಟ್ಟದ ವೈದ್ಯಕೀಯ ಚಿಕಿತ್ಸೆಗೆ ಹೆಸರು ಮಾಡಿದ ವಿಶ್ವಾಸಾರ್ಹ ಸಂಸ್ಥೆ. ಅದನ್ನು ರಾಜ್ಯ ಸರಕಾರ ನಡೆಸುತ್ತದೆ. ಅತ್ಯಂತ ಕೆಟ್ಟ ಸರಕಾರಿ ಆಸ್ಪತ್ರೆಗಳನ್ನು ರಾಜ್ಯ ಸರಕಾರವೇ ನಡೆಸುತ್ತದೆ. ಈ ವೈರುಧ್ಯ ನಿವಾರಣೆ ಸಾಧ್ಯವಿಲ್ಲವೆ?

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಮತ್ತು ಉನ್ನತ ಶಿಕ್ಷಣ ಸಚಿವ ಡಾ. ಸುಧಾಕರ್ ಅವರನ್ನು ಒಟ್ಟಿಗೆ ಕೂಡಿಸಿಕೊಂಡು ಅತ್ಯುತ್ತಮ ಗುಣಮಟ್ಟದ ಸರಕಾರಿ ಮೆಡಿಕಲ್ ಕಾಲೇಜುಗಳು ರೂಪಿಸಲು ಸಾಧ್ಯವಾಗುವುದಾದರೆ ವಿಶ್ವವಿದ್ಯಾನಿಲಯಗಳನ್ನು ಯಾಕೆ ಸುಧಾರಿಸಲು ಸಾಧ್ಯವಿಲ್ಲ ಎಂಬುದರ ಬಗ್ಗೆ ವಿಶೇಷ ಸಭೆ ನಡೆಸಿದರೆ ಎಲ್ಲದಕ್ಕೂ ಉತ್ತರ ಸಿಗುತ್ತದೆ.

ಕಾಯಕಲ್ಪದ ಭಾಗವಾಗಿ ಕರ್ನಾಟಕ ವಿಶ್ವವಿದ್ಯಾನಿಲಯ, ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ, ರಾಯಚೂರು ವಿಶ್ವವಿದ್ಯಾನಿಲಯ ಮತ್ತು ಗುಲಬರ್ಗಾ ವಿಶ್ವವಿದ್ಯಾನಿಲಯಗಳಿಗೆ ಪ್ರಾಮಾಣಿಕರು, ದಕ್ಷರು ಮತ್ತು ಅಪಾರ ಶೈಕ್ಷಣಿಕ ಅನುಭವ ಉಳ್ಳ ಕನಸುಗಾರ ಕುಲಪತಿಗಳು ನೇಮಕವಾದರೆ ಉನ್ನತ ಶಿಕ್ಷಣದಲ್ಲಿ ಬದಲಾವಣೆಯ ಗಾಳಿ ಬೀಸಲು ಆರಂಭಿಸಿದಂತೆ. ಕುಲಪತಿಗಳ ನೇಮಕಾತಿಯಲ್ಲಿ ಸಾಮಾಜಿಕ ನ್ಯಾಯದ ಪಾಲನೆ ಒಂದು ಕಾಳಜಿಯಾಗಿ ಜಾರಿಗೊಳಿಸಲಾಗಿದೆ. ಕರ್ನಾಟಕದ ಒಟ್ಟು ನಲುವತ್ತೊಂದು ವಿಶ್ವವಿದ್ಯಾನಿಲಯಗಳಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ ಸಮುದಾಯದ ಒಬ್ಬರೂ ಕುಲಪತಿಗಳಿಲ್ಲ. ಹಾಗೆಯೇ ದಲಿತರಲ್ಲಿನ ಎಡಗೈ ಸಮುದಾಯದ ಒಬ್ಬರೂ ಕುಲಪತಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಹಿಂದುಳಿದ ವರ್ಗಗಳಲ್ಲಿ ಗೊಲ್ಲ, ಕಬ್ಬಲಿಗ ಮತ್ತು ನೇಕಾರ ಸಮುದಾಯದ ಪ್ರತಿಭಾವಂತ ಪ್ರಾಧ್ಯಾಪಕರುಗಳಿಗೆ ಕುಲಪತಿಯಾಗುವ ಭಾಗ್ಯ ದೊರೆತದ್ದು ಕಡಿಮೆ. ಸಾಮಾಜಿಕ ನ್ಯಾಯದ ಬಗ್ಗೆ ಅಪಾರ ಕಾಳಜಿ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಎಲ್ಲ ಮಾಹಿತಿ ಗಮನಕ್ಕೆ ಬಂದರೆ ಖಂಡಿತಾ ಪ್ರಾತಿನಿಧ್ಯ ಕಲ್ಪಿಸುತ್ತಾರೆ.

ಉನ್ನತ ಶಿಕ್ಷಣದಲ್ಲಿ ಅಹಿಂದ ವರ್ಗದವರ ಪಾಲುದಾರಿಕೆ ದಿನೇ ದಿನೇ ಕಡಿಮೆಯಾಗುತ್ತಿದೆ. ಮೇಲು ಜಾತಿಯ ಶ್ರೀಮಂತರ ಮಕ್ಕಳು ಉನ್ನತ ಶಿಕ್ಷಣಕ್ಕೆ ವಿದೇಶಿ ವಿಶ್ವವಿದ್ಯಾನಿಲಯಗಳನ್ನು ಹೆಚ್ಚು ಅವಲಂಬಿಸಿದ್ದಾರೆ. ಮಧ್ಯಮ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳು ಮೆಡಿಕಲ್ ಮತ್ತು ಇಂಜಿನಿಯರ್ ಶಿಕ್ಷಣದತ್ತ ಒಲವು ತೋರಿ ವಿದೇಶದತ್ತ ಮುಖ ಮಾಡುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಎಲ್ಲ ಸಮುದಾಯದ ಬಡವರ ಮಕ್ಕಳು ಉನ್ನತ ಶಿಕ್ಷಣದ ಕನಸು ನನಸಾಗಿಸಿಕೊಳ್ಳಬೇಕೆಂದರೆ ಕರ್ನಾಟಕ ಸರಕಾರದ ವ್ಯಾಪ್ತಿಯ ವಿಶ್ವವಿದ್ಯಾನಿಲಯಗಳು ಅಭಿವೃದ್ಧಿ ಹೊಂದುವುದು ಕಾಲದ ಜರೂರಿ ಆಗಿದೆ. ಬಡವರ ಮಕ್ಕಳಿಗೆ ಸರಕಾರಿ ವಿಶ್ವವಿದ್ಯಾನಿಲಯಗಳು ಅಗತ್ಯವಾಗಿವೆ. ಸರಕಾರಿ ವಿಶ್ವವಿದ್ಯಾನಿಲಯಗಳು ಈ ಎಲ್ಲ ಕಾರಣಕ್ಕೆ ಮತ್ತೆ ತಲೆ ಎತ್ತಿ ನಿಲ್ಲಬೇಕು. ಈ ಕಠೋರ ಸತ್ಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತ್ರ ಅರ್ಥ ಮಾಡಿಕೊಳ್ಳಬಲ್ಲರು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Contributor - ಡಾ. ರಾಜಶೇಖರ ಹತಗುಂದಿ

contributor

Similar News