ಯತ್ನಾಳ್ ಬೆಂಬಲಕ್ಕೆ ಆರೆಸ್ಸೆಸ್ ಮುಖಂಡರು...!!
ಸಂತೋಷ್ ಮತ್ತು ಸಂಘ ಪರಿವಾರದ ಮುಖಂಡರು ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ. ಸದ್ಯ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಯಡಿಯೂರಪ್ಪ ವಿರುದ್ಧ ಛೂ ಬಿಟ್ಟಿದ್ದಾರೆ. ಒಮ್ಮೆ ಯಡಿಯೂರಪ್ಪ ಯುಗ ಅಂತ್ಯವಾದರೆ ಬಸನಗೌಡ ಪಾಟೀಲ್ ಯತ್ನಾಳ್ ವ್ಯಾಲಿಡಿಟಿ ಮುಗಿದು ಹೋಗುತ್ತದೆ. ಅವರಿಗೆ ಮುಖ್ಯಮಂತ್ರಿ ಹುದ್ದೆಯಲ್ಲ ಮಂತ್ರಿಯನ್ನಾಗಿಯೂ ಮಾಡುವುದಿಲ್ಲ. ಯತ್ನಾಳ್ ಶಕ್ತಿ ಮತ್ತು ದೌರ್ಬಲ್ಯ ಎಲ್ಲರಿಗಿಂತ ಸಂತೋಷ್ ಮತ್ತು ಸಂಘದವರಿಗೆ ಚೆನ್ನಾಗಿ ಗೊತ್ತಿದೆ. ಮುಸ್ಲಿಮರ ವಿರುದ್ಧ ಮಾತನಾಡಲು ಯತ್ನಾಳ್ ಬೇಕು. ಯಡಿಯೂರಪ್ಪ ವಿರುದ್ಧ ಕತ್ತಿ ಝಳಪಿಸಲು ಯತ್ನಾಳ್ ಬೇಕು. ಕರ್ನಾಟಕದ ವೀರಶೈವ ಲಿಂಗಾಯತರು ಅದರಲ್ಲೂ ಬಿಜೆಪಿಯಲ್ಲಿನ ಲಿಂಗಾಯತರು ಈ ಹುನ್ನಾರವನ್ನು ಅರ್ಥ ಮಾಡಿಕೊಳ್ಳಬೇಕು.;

ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ಮಾತ್ರವಲ್ಲ ಪಕ್ಷದ ಸಾಮಾನ್ಯ ಕಾರ್ಯಕರ್ತ ಎಷ್ಟೇ ಕಟುವಾದ ಮಾತುಗಳನ್ನಾಡಿದರೂ ಅದಕ್ಕೆ ಒಂದು ಸಮರ್ಥನೆ ಇದೆ. ಭಾರತೀಯ ಜನತಾ ಪಕ್ಷದ ಬೆಳವಣಿಗೆಯಲ್ಲಿ ವಿಜಯೇಂದ್ರ ಪಾತ್ರ ಏನೂ ಇಲ್ಲ. ಅನಿವಾರ್ಯ ಸಂದರ್ಭದಲ್ಲಿ ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಅಧ್ಯಕ್ಷ ಸ್ಥಾನ ಅಲಂಕರಿಸಿದ ಮೇಲಾದರೂ ವಿಜಯೇಂದ್ರ ವಿನಯವಂತಿಕೆ ರೂಢಿಸಿಕೊಂಡು ಪಕ್ಷದ ಹಿರಿ ಕಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲರ ನಾಯಕನಾಗಿ ಹೊರ ಹೊಮ್ಮಬಹುದಿತ್ತು. ಆ ಅವಕಾಶವನ್ನು ಕೈಯಾರೆ ಕಳೆದುಕೊಂಡಿದ್ದಾರೆ. ಹಾಗಾಗಿ ವಿಜಯೇಂದ್ರ ವಿರುದ್ಧ ಯಾರೇ ಮಾತನಾಡಿದರೂ ಅದಕ್ಕೆ ಆತ ಯೋಗ್ಯ ಎಂದು ಅಂಥ ಟೀಕೆಗಳನ್ನು ಅತ್ಯಂತ ಸಹಜ ಪ್ರತಿಕ್ರಿಯೆಗಳೆಂದು ನಿರ್ಲಕ್ಷಿಸಿ ಬಿಡಬಹುದು.
ಆದರೆ, ಬಿಜೆಪಿಯ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ವಿಷಯದಲ್ಲಿ ಹಾಗಲ್ಲ. ಭಾರತೀಯ ಜನತಾ ಪಕ್ಷವನ್ನು ಕರ್ನಾಟಕದಲ್ಲಿ ತಳ ಹಂತದಿಂದ ಸಂಘಟಿಸುವಲ್ಲಿ ಎ.ಕೆ. ಸುಬ್ಬಯ್ಯ, ಬಿ.ಬಿ. ಶಿವಪ್ಪ, ಮಲ್ಲಿಕಾರ್ಜುನಯ್ಯ, ಯಡಿಯೂರಪ್ಪ, ಅನಂತಕುಮಾರ್ ಅವರು ಪ್ರಮುಖ ಪಾತ್ರ ವಹಿಸಿದ್ದನ್ನು ಅಲ್ಲಗಳೆಯಲಾಗದು. ಆದರೆ, ನಗರ ಕೇಂದ್ರಿತ ಭಾರತೀಯ ಜನತಾ ಪಕ್ಷವನ್ನು ಗ್ರಾಮೀಣ ಪ್ರದೇಶಕ್ಕೂ ವಿಸ್ತರಿಸಿದ, ಆ ಪಕ್ಷವನ್ನು ಅಧಿಕಾರ ಸ್ಥಾನಕ್ಕೆ ತಂದು ನಿಲ್ಲಿಸಿದ ಮತ್ತು ಕರ್ನಾಟಕದ ವೀರಶೈವ ಲಿಂಗಾಯತರು ಬಿಜೆಪಿಯ ಮತ ಬ್ಯಾಂಕ್‌ನ ಭಾಗವಾಗುವಂತೆ ಮಾಡಿದ್ದು ಮಾತ್ರ ಯಡಿಯೂರಪ್ಪ. ಭಾರತೀಯ ಜನತಾ ಪಕ್ಷವೆಂದರೆ, ಬ್ರಾಹ್ಮಣ ಬನಿಯಾ ಪಕ್ಷವೆಂದೇ ಗುರುತಿಸುತ್ತಿದ್ದರು. ಯಡಿಯೂರಪ್ಪ ರೈತರ ಸಮಸ್ಯೆಗಳನ್ನು ಎತ್ತಿಕೊಂಡು ಹೋರಾಟ ರೂಪಿಸಿದ್ದರಿಂದ ಬಿಜೆಪಿಯ ವ್ಯಾಪ್ತಿ ವಿಸ್ತರಿಸಿತು. ಎಲ್ಲ ಸಮುದಾಯದವರು, ಮುಸ್ಲಿಮರೂ ಸೇರಿದಂತೆ ಯಡಿಯೂರಪ್ಪ ಅವರನ್ನು ಒಂದು ಹಂತದಲ್ಲಿ ವಿಶ್ವಾಸವಿಡತೊಡಗಿದರು. ಹಾಗೆ ನೋಡಿದರೆ ಯಡಿಯೂರಪ್ಪ ಕೂಡಾ ಆರೆಸ್ಸೆಸ್ ಶಾಖೆಯಿಂದಲೇ ಎದ್ದು ಬಂದವರು. ಶಾಸಕರಾಗಿ, ಪ್ರತಿಪಕ್ಷದ ನಾಯಕರಾಗಿ ಕಾರ್ಯ ನಿರ್ವಹಿಸುವ ಸಂದರ್ಭದಲ್ಲಿ ಸೈದ್ಧಾಂತಿಕ ಮಡಿವಂತಿಕೆಯ ಮಿತಿ ಅರಿತಿರಬೇಕು. ಅನಂತಕುಮಾರ್ ರಾಜಕೀಯ ತಂತ್ರಗಾರಿಕೆ ಮತ್ತು ದಿಲ್ಲಿ ರಾಜಕಾರಣದಲ್ಲಿ ಪಳಗಿದರೆ, ಯಡಿಯೂರಪ್ಪ ಜನಸಾಮಾನ್ಯರ ನಾಡಿ ಮಿಡಿತ ಚೆನ್ನಾಗಿ ಬಲ್ಲವರಾಗಿದ್ದರು. 2004ರಲ್ಲಿ ಕರ್ನಾಟಕದ ಜನತಾ ಪರಿವಾರದ ಮಹಾ ವಿಘಟನೆ ಸಂಭವಿಸಿದ ಮೇಲೆ, ವಿಶೇಷವಾಗಿ ರಾಮಕೃಷ್ಣ ಹೆಗಡೆಯವರ ಅನುಯಾಯಿಗಳು ನಂಬಿದ್ದು ಮತ್ತು ಆಶ್ರಯಿಸಿದ್ದು ಬಿ.ಎಸ್. ಯಡಿಯೂರಪ್ಪ ಅವರ ನಾಯಕತ್ವವನ್ನು. ರಮೇಶ್ ಜಿಗಜಿಣಗಿ ಮತ್ತು ಗೋವಿಂದ ಕಾರಜೋಳ ಅವರು ಮಾತ್ರ ಅನಂತಕುಮಾರ್ ಅವರನ್ನು ಹೆಚ್ಚು ಅವಲಂಬಿಸಿದ್ದರು. ಆದರೆ ಉಳಿದಂತೆ ಜನತಾ ಪರಿವಾರದಿಂದ ಬಿಜೆಪಿಗೆ ಬಂದ ಬಹುಪಾಲು ನಾಯಕರು ಯಡಿಯೂರಪ್ಪ ನಾಯಕತ್ವವನ್ನು ಮಾತ್ರ ನಂಬಿ ಬಂದಿದ್ದರು. ಎಸ್.ಆರ್. ಬೊಮ್ಮಾಯಿ ಸುಪುತ್ರ ಬಸವರಾಜ ಬೊಮ್ಮಾಯಿ ಕೂಡಾ.
ಉದಾರವಾದಿ ಮನೋಭಾವದ ಜನತಾ ಪರಿವಾರದ ನಾಯಕರನ್ನು ಮತ್ತು ಹಿಂದುತ್ವವನ್ನು ಆತ್ಯಂತಿಕವಾಗಿ ನಂಬಿದ ಸಂಘ ಮೂಲದ ನಾಯಕರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವುದು ಕಷ್ಟದ ಕೆಲಸ.
ಕರ್ನಾಟಕದಲ್ಲಿ ಹಿಂದುತ್ವದ ಹೆಸರಲ್ಲಿ ಮತಗಳನ್ನು ಸೆಳೆಯಲು ಸಾಧ್ಯವಿಲ್ಲ ಎಂಬುದನ್ನು ಮನಗಂಡ ಯಡಿಯೂರಪ್ಪ ಜಾತಿ ಸಮೀಕರಣದ ಸಮುದಾಯವಾರು ಸಂಘಟನೆಗೆ ಹೆಚ್ಚು ಮಹತ್ವ ನೀಡಿದರು.
ಕರ್ನಾಟಕದಲ್ಲಿ ವೀರಶೈವ ಲಿಂಗಾಯತರ ಮತಗಳು ಮಾತ್ರವಲ್ಲ ಬೇರೆ ಸಮುದಾಯದ ಮತಗಳನ್ನು ಸೆಳೆಯುವ ಶಕ್ತಿ ಇರುವುದು ಬಿಜೆಪಿಯಲ್ಲಿ ಯಡಿಯೂರಪ್ಪ ಅವರಿಗೆ ಮಾತ್ರ.
ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳೆಂದರೆ, ಠೇವಣಿ ಕಳೆದುಕೊಳ್ಳುವವರು ಎಂಬ ಪ್ರತೀತಿ ಇತ್ತು. ಪುರಸಭೆ, ನಗರಸಭೆ, ಮಹಾನಗರ ಪಾಲಿಕೆ ಹಾಗೂ ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಠೇವಣಿ ಉಳಿಸಿಕೊಂಡರೆ ದೊಡ್ಡ ಸಾಧನೆ. ಶಿಕ್ಷಕರು ಮತ್ತು ಪದವೀಧರ ಮತಕ್ಷೇತ್ರಗಳಲ್ಲಿ ಮಾತ್ರ ಬಿಜೆಪಿಗೆ ಮತ ಬರುತ್ತಿದ್ದವು. ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳಲ್ಲಿ ಬಿಜೆಪಿಯವರು ಅಭ್ಯರ್ಥಿಗಳನ್ನೇ ಹಾಕುತ್ತಿರಲಿಲ್ಲ. ಎಂಭತ್ತರ ದಶಕದಲ್ಲಿ ಕಮ್ಯುನಿಸ್ಟ್ ಶಾಸಕರ ಸಂಖ್ಯೆ ಹೆಚ್ಚಿತ್ತು. ಆದರೆ ಬಿಜೆಪಿಯಿಂದ ಒಬ್ಬರೋ ಇಬ್ಬರೋ ಗೆಲ್ಲುತ್ತಿದ್ದರು. 1983ರಲ್ಲಿ ಮೊದಲ ಬಾರಿಗೆ ಬಿಜೆಪಿಯಿಂದ ಹದಿನೆಂಟು ಜನ ಶಾಸಕರು ಶಾಸನ ಸಭೆಗೆ ಆಯ್ಕೆಯಾಗಿ ಬಂದಿದ್ದರು. ಅದರಲ್ಲಿ ಯಡಿಯೂರಪ್ಪ ಒಬ್ಬರು. 85ರ ಚುನಾವಣೆಯ ಹೊತ್ತಿಗೆ ಬಿಜೆಪಿ ಸಂಖ್ಯಾ ಬಲ ಒಂದಂಕಿಗೆ ಇಳಿಯಿತು. ಕಮ್ಯುನಿಸ್ಟ್ ಶಾಸಕರ ಸಂಖ್ಯೆ ಬಿಜೆಪಿಗಿಂತ ಜಾಸ್ತಿ ಇತ್ತು. ವಿಧಾನಸಭೆಯಲ್ಲಿ ಯಡಿಯೂರಪ್ಪ ಒಬ್ಬರೇ ಬಿಜೆಪಿ ಪರವಾಗಿ ಅಷ್ಟೋ ಇಷ್ಟೋ ಸದ್ದು ಮಾಡುತ್ತಿದ್ದರು. ಆಗ ಕಮ್ಯುನಿಸ್ಟ್ ಶಾಸಕರು ಮತ್ತು ವಾಟಾಳ್ ನಾಗರಾಜ್ ಅವರ ಹವಾ ಜೋರಾಗಿತ್ತು.
ಬಿಜೆಪಿಯ ಸಣ್ಣ ದನಿಯನ್ನು, ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು ಎನ್ನುವಷ್ಟರ ಮಟ್ಟಿಗೆ ಹೆಚ್ಚಿಸಿದ್ದು ಸಾಮಾನ್ಯ ಸಾಧನೆಯಲ್ಲ. ಭಾರತೀಯ ಜನತಾ ಪಕ್ಷಕ್ಕೆ ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಅಧಿಕಾರದ ಗದ್ದುಗೆ ಸಿಗುವಂತೆ ಮಾಡಿದ್ದು ಯಡಿಯೂರಪ್ಪ. 2008ರಲ್ಲಿ ಬಿಜೆಪಿ ಮೊದಲ ಬಾರಿಗೆ ಸರಕಾರ ರಚಿಸಿದ್ದಾಗ ಅದರ ಬಹುದೊಡ್ಡ ಫಲಾನುಭವಿಗಳು ಸಂಘ ಪರಿವಾರದ ಕಾರ್ಯಕರ್ತರು. ಬಿ.ಎಲ್. ಸಂತೋಷ್ ಆಗ ಬಿಜೆಪಿಯ ಸಂಘಟನಾ ಕಾರ್ಯದರ್ಶಿಯಾಗಿದ್ದರು. ಯಡಿಯೂರಪ್ಪ ಸಂತೋಷ್ ಹೇಳಿದ್ದಕ್ಕೆಲ್ಲ ಒಪ್ಪಿಗೆ ಸೂಚಿಸುತ್ತಿದ್ದರು. ಬಿಜೆಪಿ ಕಾರ್ಯಕರ್ತರಿಗಿಂತಲೂ ಆಗ ಸಂತೋಷ್ ಆಪ್ತ ವಲಯದ ಸಂಘದ ಕಾರ್ಯಕರ್ತರು ಆರ್ಥಿಕವಾಗಿ ಸಬಲರಾದರು. ಆರೆಸ್ಸೆಸ್ ಕಾರ್ಯಾಲಯದ ಜೀಗಳಿಗೆ ಸಾರ್ವಜನಿಕ ವಲಯದಲ್ಲಿ ಹೆಚ್ಚು ಮನ್ನಣೆ ದೊರೆಯತೊಡಗಿತು. ಆರೆಸ್ಸೆಸ್ ಜೀಗಳ ಪ್ರೀತಿಗೆ ಪಾತ್ರರಾದರೆ ಕುಲಪತಿ, ಕುಲಸಚಿವ, ಸಿಂಡಿಕೇಟ್ ಸದಸ್ಯರಾಗಬಹುದು ಎಂಬ ಪ್ರತೀತಿ ಬೆಳೆದದ್ದು ಆಗಲೇ. ಆವಾಗಿಂದ ವಿಶ್ವವಿದ್ಯಾನಿಲಯಗಳ ಪ್ರಾಧ್ಯಾಪಕರು ಈ ಜೀಗಳ ಬೆನ್ನು ಹತ್ತಿದರು.
ಕರ್ನಾಟಕದಲ್ಲಿ ಐತಿಹಾಸಿಕ ಪಲ್ಲಟಕ್ಕೆ ಕಾರಣವಾದ ಒಬ್ಬ ನಾಯಕ, ಅದೂ ಸಂಘ ಪರಿವಾರದಿಂದಲೇ ಬೆಳೆದು ಬಂದ ನಾಯಕ ಯಡಿಯೂರಪ್ಪ ಅವರರಿಗೆ ಬಸನಗೌಡ ಪಾಟೀಲ್‌ನಂತಹ ಒಬ್ಬ ಶಾಸಕ ಬಾಯಿಗೆ ಬಂದಂತೆ ಮಾತನಾಡುವಾಗ ಸಂಘ ಪರಿವಾರದ ಮುಖಂಡರು ಆತನಿಗೆ ಬುದ್ಧಿವಾದ ಹೇಳುವುದಿಲ್ಲ. ಯಡಿಯೂರಪ್ಪ 2019ರಲ್ಲಿ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ದಿನದಿಂದ ಬಸನಗೌಡ ಪಾಟೀಲ್ ಟೀಕಿಸಲು ಆರಂಭಿಸಿದ್ದಾರೆ. ಆಗಿನಿಂದ ಇಲ್ಲಿಯವರೆಗೆ ಆತನ ಹುಚ್ಚಾಟ ನಿಂತಿಲ್ಲ. ಆಗ ಯಡಿಯೂರಪ್ಪ ಅವರೊಬ್ಬರನ್ನು ಮಾತ್ರ ಟೀಕಿಸುತ್ತಿದ್ದರು. ಈಗ ಅವರ ಮಗನನ್ನು ಟೀಕಿಸುತ್ತಾರೆ. ಜನಸಂಘದ ಕಾಲದಲ್ಲಿ ಸುಬ್ರಮಣಿಯನ್ ಸ್ವಾಮಿಯವರು ವೈಯಕ್ತಿಕ ಕಾರಣಕ್ಕೆ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಕಟುವಾಗಿ ಟೀಕಿಸುತ್ತಿದ್ದರು. ಸುಬ್ರಮಣಿಯನ್ ಸ್ವಾಮಿ ಸಂಘ ಪರಿವಾರದವರಿಗೆ ಬಹಳ ಹತ್ತಿರವಾಗಿದ್ದರು. ಆದರೆ ಸಂಘ ಪರಿವಾರ ಮತ್ತು ಜನಸಂಘ ಒಟ್ಟಾಗಿ ಅಟಲ್ ಬಿಹಾರಿ ವಾಜಪೇಯಿ ಪರ ನಿಂತಿತ್ತು. ಸುಬ್ರಮಣಿಯನ್ ಸ್ವಾಮಿ ಜನಸಂಘ ತೊರೆದು ಜನತಾ ಪಕ್ಷಕ್ಕೆ ಹೋದರು.
ಒಂದು ವೇಳೆ, ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ವಿರುದ್ಧ ಬಾಯಿ ಹರಿ ಬಿಟ್ಟಿದ್ದರೆ ಏನಾಗುತ್ತಿತ್ತು? ಇಷ್ಟೊತ್ತಿಗೆ ಬಸನಗೌಡ ಪಾಟೀಲ್ ಬೀದಿ ಪಾಲಾಗುವಂತೆ ಮಾಡಿರುತ್ತಿದ್ದರು. ಹಾಗೆ ನೋಡಿದರೆ ಯಡಿಯೂರಪ್ಪ ಎರಡನೇ ಬಾರಿಗೆ ಮುಖ್ಯಮಂತ್ರಿಯಾದಾಗ ಅವರಿಗೆ ಸ್ವಾತಂತ್ರ್ಯವೇ ಇರಲಿಲ್ಲ. ಬಿ.ಎಲ್. ಸಂತೋಷ್ ಹಸ್ತಕ್ಷೇಪ ಮಿತಿಮೀರಿತ್ತು. ಅಥಣಿ ಮತಕ್ಷೇತ್ರದಲ್ಲಿ ಸೋತಿದ್ದ ಲಕ್ಷ್ಮಣ ಸವದಿಯವರಿಗೆ ಸಂತೋಷ್ ಒಮ್ಮೆಲೇ ಉಪಮುಖ್ಯಮಂತ್ರಿ ಸ್ಥಾನ ಕೊಡಿಸಿದ್ದರು. ಚುನಾವಣೆಯಲ್ಲಿ ಸೋತ ಅಭ್ಯರ್ಥಿಗೆ ಒಂದು ವೇಳೆ ಯಡಿಯೂರಪ್ಪ ಉಪಮುಖ್ಯಮಂತ್ರಿ ಸ್ಥಾನ ನೀಡಿದ್ದರೆ ಮಾನ ಹರಾಜು ಹಾಕುತ್ತಿದ್ದರು. ಇಲ್ಲಿಯವರೆಗೆ ಬಿ.ಎಲ್. ಸಂತೋಷ್ ಕೈಗೊಂಡ ಬಹುತೇಕ ಎಲ್ಲ ತೀರ್ಮಾನಗಳು ಸರ್ವಾಧಿಕಾರಿ ನಿಲುವಿನಿಂದ ಕೂಡಿವೆ ಮತ್ತು ಪಕ್ಷಕ್ಕೆ ಕನಿಷ್ಠ ಪ್ರಮಾಣದ ಲಾಭ ತಂದು ಕೊಡುವ ತೀರ್ಮಾನಗಳಲ್ಲ. ಆದರೂ ಪಕ್ಷದ ಯಾರೊಬ್ಬರೂ ಅದನ್ನು ಪ್ರಶ್ನಿಸುವ ಧೈರ್ಯ ಮಾಡಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಬೆಳವಣಿಗೆಯಲ್ಲಿ ಸಂತೋಷ್ ಪಾತ್ರ ಕೇವಲ ಫಲಾನುಭವಿಯದು. ಪಕ್ಷಕ್ಕೆ ಹತ್ತು ಮತಗಳನ್ನು ತಂದು ಕೊಡುವ ಸಾಮರ್ಥ್ಯ ಇಲ್ಲದ, ಮೂಲತಃ ಜನತಾ ಪರಿವಾರದ ಬೆಳಗಾವಿ ಜಿಲ್ಲೆಯ ಈರಣ್ಣ ಕಡಾಡಿಯನ್ನು ಸಂತೋಷ್ ಅವರು ರಾಜ್ಯ ಸಭಾ ಸದಸ್ಯರನ್ನಾಗಿಸಿದರು. ಆತ ರಾಜ್ಯ ಸಭೆಯಲ್ಲಿ ಒಮ್ಮೆಯೂ ಕ್ರಿಯಾಶೀಲವಾಗಿ ಭಾಗವಹಿಸಲಿಲ್ಲ. ಹಿಂದಿ, ಇಂಗ್ಲಿಷ್ ಗೊತ್ತಿರದ ಸಿ.ಟಿ. ರವಿಯವರನ್ನು ಏಕಾಏಕಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಿದರು. ಆಗ ಬಸನಗೌಡ ಪಾಟೀಲ್ ಕೂಡಾ ಬಾಯಿ ಬಿಚ್ಚಿ ಮಾತನಾಡಲಿಲ್ಲ. ಅನಂತಕುಮಾರ್ ನಿಧನದ ನಂತರ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಟಿಕೆಟ್ ಅವರ ಧರ್ಮ ಪತ್ನಿ ತೇಜಸ್ವಿನಿ ಅವರಿಗೆ ನೀಡಬಹುದೆಂದು ಪಕ್ಷದ ಕಾರ್ಯಕರ್ತರ ನಿರೀಕ್ಷೆಯಾಗಿತ್ತು. ಆದರೆ ಸಂತೋಷ್ ಅವರು ಡಿಎನ್‌ಎ ಥಿಯರಿ ಮಂಡಿಸಿ ತೇಜಸ್ವಿನಿ ಅನಂತಕುಮಾರ್ ಅವರಿಗೆ ಟಿಕೆಟ್ ತಪ್ಪಿಸಿ ತೇಜಸ್ವಿ ಸೂರ್ಯ ಅವರನ್ನು ಅಭ್ಯರ್ಥಿಯನ್ನಾಗಿಸಿದರು. ಇದೇ ಕೃತ್ಯ ಯಡಿಯೂರಪ್ಪ ಅಥವಾ ಬೇರೆ ಯಾರೇ ಮಾಡಿದ್ದರೂ ಬ್ರಾಹ್ಮಣ ಸಮುದಾಯ ಯಾವತ್ತೂ ಕ್ಷಮಿಸುತ್ತಿರಲಿಲ್ಲ. ಬೆಳಗಾವಿ ಸಂಸದ, ಕೇಂದ್ರ ಮಂತ್ರಿ ಸುರೇಶ್ ಅಂಗಡಿ ನಿಧನ ಹೊಂದಿದ್ದರು. ಅಲ್ಲಿ ಉಪ ಚುನಾವಣೆ ನಡೆಯಬೇಕಿತ್ತು. ಆಗ ಡಿಎನ್‌ಎ ಅಡ್ಡಿ ಬರಲಿಲ್ಲ. ಗೃಹಿಣಿಯಾಗಿದ್ದ ಸುರೇಶ್ ಅಂಗಡಿಯವರ ಧರ್ಮಪತ್ನಿ ಮಂಗಳಾ ಅಂಗಡಿಯವರಿಗೆ ಲೋಕಸಭಾ ಟಿಕೆಟ್ ನೀಡಲಾಯಿತು. ಮಂಗಳಾ ಅಂಗಡಿಗೆ ಹೋಲಿಸಿದರೆ ತೇಜಸ್ವಿನಿ ಅನಂತಕುಮಾರ್ ಬಿಜೆಪಿ ಮತ್ತು ಎಬಿವಿಪಿಯ ಸಕ್ರಿಯ ಕಾರ್ಯಕರ್ತೆಯಾಗಿದ್ದರು. ನಿಪ್ಪಾಣಿಯಲ್ಲಿ ಶಶಿಕಲಾ ಜೊಲ್ಲೆ ಶಾಸಕಿ, ಚಿಕ್ಕೋಡಿ ಲೋಕಸಭಾ ಕ್ಷೇತ್ರಕ್ಕೆ ಅವರ ಗಂಡ ಅಣ್ಣಾಸಾಹೇಬ್ ಜೊಲ್ಲೆ ಬಿಜೆಪಿ ಅಭ್ಯರ್ಥಿ. ಯಾಕೆಂದರೆ ಅವರಿಗೆ ಸಂತೋಷ್ ಕೃಪೆಯಿದೆ. ಡಿಎನ್‌ಎ ಥಿಯರಿ ಅಡ್ಡ ಬರುವುದೇ ಇಲ್ಲ. ಪಕ್ಷಕ್ಕೆ ನಯಾ ಪೈಸೆ ಅನುಕೂಲಕ್ಕೆ ಬಾರದ ಅದೆಷ್ಟೋ ಜನ ಸಂತೋಷ್ ಕೃಪೆಯಿಂದ ಎಂಪಿ, ಎಂಎಲ್‌ಸಿ ಆಗಿ ಹೋದರು. ಹಾಗೆ ನೋಡಿದರೆ ಯಡಿಯೂರಪ್ಪ ಅವರನ್ನು ತರಾತುರಿಯಲ್ಲಿ ಮುಖ್ಯಮಂತ್ರಿ ಹುದ್ದೆಯಿಂದ ಇಳಿಸಿದ್ದೇ ಸಂತೋಷ್ ಅವರ ಚಿತಾವಣೆಯಿಂದ. ಕೇರಳದಲ್ಲಿ ಎಂಭತ್ತು ವರ್ಷ ದಾಟಿದ ಮೆಟ್ರೋ ಮ್ಯಾನ್ ಶ್ರೀಧರ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಬಿಂಬಿಸಿದ ಸಂತೋಷ್ ಅವರೇ ಕರ್ನಾಟಕದಲ್ಲಿ ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ ಎಂದು ಇಳಿಸಿ ಬಿಟ್ಟರು. ಬಸನಗೌಡ ಪಾಟೀಲ್ ಅದಕ್ಕೆ ಸಾಥ್ ನೀಡಿದ್ದರು. ಈಗ ಮೋದಿಗೂ ವಯಸ್ಸು ಆಗುತ್ತಲೇ ಇದೆ. ಅವರ ಪದ ತ್ಯಾಗದ ಬಗ್ಗೆ ಮಾತನಾಡುವ ಧೈರ್ಯ ಸಂತೋಷ್ ಅವರಿಗೂ ಇಲ್ಲ, ಬಸನಗೌಡ ಪಾಟೀಲ್‌ಗೆ ಮೊದಲೇ ಇಲ್ಲ.
ಬಸವರಾಜ ಬೊಮ್ಮಾಯಿ ಹೆಸರಿಗೆ ಮಾತ್ರ ಮುಖ್ಯಮಂತ್ರಿಯಾಗಿದ್ದರು. ಆಡಳಿತ ಯಂತ್ರ ಮಾತ್ರ ಸಂತೋಷ್ ಇಶಾರೆಯಂತೆ ನಡೆಯುತ್ತಿತ್ತು. ಅಭಿವೃದ್ಧಿಗಿಂತಲೂ ಹೆಚ್ಚು ಮುಸ್ಲಿಮ್ ದ್ವೇಷದ ಅಜೆಂಡಾ ಮುನ್ನೆಲೆಗೆ ಬಂತು. ಕೋಮುವಾದಿ ನೆಲೆಯ ಮತ ಧ್ರುವೀಕರಣ ಮಾಡಿ ಅಧಿಕಾರಕ್ಕೆ ಮರಳುವ ಪ್ಲ್ಯಾನ್ ಸಂತೋಷ್ ಅವರದು. ಎಲ್ಲವೂ ಅವರ ಇಚ್ಛೆಯಂತೆ ನಡೆಯಿತು. 2023ರ ಟಿಕೆಟ್ ಹಂಚಿಕೆಯೂ ಸಂತೋಷ್ ನಿರ್ಧಾರದಂತೆ ನಡೆಯಿತು. ಬೊಮ್ಮಾಯಿಯವರ ಸಿನೆಮಾ ಶೈಲಿಯ ಪ್ರಚಾರ, ಸಂತೋಷ್ ಅವರ ಹಿಂದೂ-ಮುಸ್ಲಿಮ್ ಧ್ರುವೀಕರಣದ ತಂತ್ರಗಾರಿಕೆ ವರ್ಕ್‌ಔಟ್ ಆಗಲಿಲ್ಲ. 2024ರ ಲೋಕಸಭಾ ಚುನಾವಣೆಯ ಹೊತ್ತಿಗೆ ಸಂತೋಷ್ ಮಿತಿಗಳು ಬಿಜೆಪಿ ಹೈಕಮಾಂಡ್‌ಗೆ ಮನವರಿಕೆಯಾಗಿತ್ತು. ಕರ್ನಾಟಕದಲ್ಲಿ ಹೆಚ್ಚು ಲೋಕಸಭಾ ಸ್ಥಾನ ಗೆಲ್ಲಬೇಕೆಂದರೆ ಯಡಿಯೂರಪ್ಪ ಅನಿವಾರ್ಯ ಎಂದು ಮೋದಿ-ಶಾ ಮನಗಂಡರು. ಚಿಕ್ಕೋಡಿ, ಕಲಬುರಗಿ, ರಾಯಚೂರು, ಬಳ್ಳಾರಿ, ಬೀದರ್ ಲೋಕಸಭಾ ಕ್ಷೇತ್ರಗಳನ್ನು ಗೆಲ್ಲಿಸಿ ತರುವ ಹೊಣೆ ಪಂಚಮಸಾಲಿ ನಾಯಕ ಬಸನಗೌಡ ಹೊತ್ತಿದ್ದರು. ಅಲ್ಲೆಲ್ಲ ಯಡಿಯೂರಪ್ಪ ಅಭಿಮಾನಿಗಳು ಹೆಚ್ಚು. ಚುನಾವಣಾ ಭಾಷಣದಲ್ಲಿ ಯಡಿಯೂರಪ್ಪ ಅವರನ್ನು ವಾಚಾಮಗೋಚರವಾಗಿ ಟೀಕಿಸುವುದೇ ಯತ್ನಾಳ್ ಚಟವಾಗಿತ್ತು. ಅಲ್ಲೆಲ್ಲ ಬಿಜೆಪಿ ಅಭ್ಯರ್ಥಿಗಳು ಸೋತರು. ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್ ಗೆಲ್ಲುವುದು ಸಂತೋಷ್ ಅವರಿಗೆ ಇಷ್ಟವಿರಲಿಲ್ಲ. ಅವರ ಶಿಷ್ಯ ಕಡಾಡಿ ಸೇರಿ ಎಲ್ಲರೂ ಎಲ್ಲ ಪ್ರಯತ್ನ ಮಾಡಿದರೂ ಸೋಲಿಸಲು ಸಾಧ್ಯವಾಗಲಿಲ್ಲ.
ಈ ಹಿಂದೆ 2009ರ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ 19 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಆಗ ಮಾಧ್ಯಮಗಳು ಆ ಗೆಲುವಿಗೆ ಸಂತೋಷ್ ತಂತ್ರಗಾರಿಕೆ ಕಾರಣ ಎಂದು ವ್ಯಾಖ್ಯಾನಿಸಿದ್ದವು. ಯಾಕೆಂದರೆ, ಆಗ ಸಂತೋಷ್ ಕರ್ನಾಟಕ ಬಿಜೆಪಿಯ ಸಂಘಟನಾ ಕಾರ್ಯದರ್ಶಿಯಾಗಿದ್ದರು. 2024ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಸಂತೋಷ್ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿದ್ದರು. ಅವರ ತಂತ್ರಗಾರಿಕೆಯಿಂದ ಕೇಂದ್ರದಲ್ಲಿ ಬಿಜೆಪಿಗೆ 2019ಕ್ಕಿಂತ ಹೆಚ್ಚು ಸ್ಥಾನ ಬರಬೇಕಿತ್ತು. ರಾಮ ಮಂದಿರ ನಿರ್ಮಾಣದ ಹೈಪ್ ಬೇರೆ ಇತ್ತು. ಕರ್ನಾಟಕ ಜನರ ನಾಡಿ ಮಿಡಿತ ಅರಿಯದವರು ಭಾರತದಲ್ಲಿ ಏನು ತಾನೇ ಮ್ಯಾಜಿಕ್ ಮಾಡಬಲ್ಲರು.
ಜಿ.ಎಂ. ಸಿದ್ದೇಶ್, ಜೊಲ್ಲೆ, ತೇಜಸ್ವಿ ಸೂರ್ಯ, ಕುಮಾರ ಬಂಗಾರಪ್ಪ, ರಮೇಶ್ ಜಾರಕಿಹೊಳಿ ಕುಟುಂಬ ರಾಜಕಾರಣದ ಬಗ್ಗೆ ಮೌನ ವಹಿಸುವ ಬಸನಗೌಡ ಯಡಿಯೂರಪ್ಪ ಬಗ್ಗೆ ಅತ್ಯಂತ ಕೆಟ್ಟ ಪದಗಳಲ್ಲಿ ಟೀಕಿಸುತ್ತಾರೆ. ಬಿಜೆಪಿಯ ಮಾತೃಸಂಸ್ಥೆಯಂತಿರುವ ಆರೆಸ್ಸೆಸ್‌ನ ಮುಖಂಡರು ಹಿರಿಯರಾದ ಯಡಿಯೂರಪ್ಪ ಅವರ ಬಗ್ಗೆ ಟೀಕಿಸುವುದು ತಪ್ಪು ಅಂತ ಹೇಳಲೇ ಇಲ್ಲ. ಆದರೆ, ಬಸನಗೌಡ ಪಾಟೀಲ್ ಯತ್ನಾಳ್ ಅವರ ಉದ್ಧಟತನ ಅತಿಯಾದಾಗ ಬಿಜೆಪಿ ಹೈಕಮಾಂಡ್ ಅನಿವಾರ್ಯವಾಗಿ ಕ್ರಮ ಜರುಗಿಸಲು ಮುಂದಾಯಿತು. ಆಗ ಆರೆಸ್ಸೆಸ್ ಮುಖಂಡರು ಬಸನಗೌಡ ಪಾಟೀಲ್ ಬೆಂಬಲಕ್ಕೆ ಧಾವಿಸುತ್ತಾರೆ. ಅವರ ವಿರುದ್ಧ ಕ್ರಮ ಜರುಗಿಸದಂತೆ ಕೇಂದ್ರ ನಾಯಕರಿಗೆ ಸೂಚಿಸುತ್ತಾರೆ. ಅಂದರೆ, ಬಸನಗೌಡ ಅಷ್ಟು ದಿನ ಯಡಿಯೂರಪ್ಪ ವಿರುದ್ಧ ಬಾಯಿಗೆ ಬಂದಂತೆ ಮಾತನಾಡಿದ್ದನ್ನು ಸಂತೋಷ್ ಮತ್ತು ಸಂಘದ ಮುಖಂಡರಿಗೆ ತಪ್ಪು ಅಂತ ಅನ್ನಿಸಲೇ ಇಲ್ಲ. ಅಷ್ಟಕ್ಕೂ ಬಸನಗೌಡ ಪಾಟೀಲ್ ಯತ್ನಾಳ್ ಅತ್ಯುತ್ತಮ ಸಂಸದೀಯ ಪಟುವಲ್ಲ. ಸಂವೇದನಾಶೀಲ ರಾಜಕಾರಣಿ ಮೊದಲೇ ಅಲ್ಲ. ಮೈ ತುಂಬಾ ಮುಸ್ಲಿಮ್ ದ್ವೇಷ ತುಂಬಿಕೊಂಡಿದ್ದಾರೆ. ಮುಸ್ಲಿಮರ ವಿರುದ್ಧ ಕೆಟ್ಟದ್ದಾಗಿ ಮಾತನಾಡುವುದೇ ದೇಶ ಭಕ್ತಿ, ಹಿಂದುತ್ವ ಎಂದು ಭ್ರಮಿಸಿರುವ ವ್ಯಕ್ತಿ. ಬಸನಗೌಡ ಪಾಟೀಲ್ ಯತ್ನಾಳ್ ಒಮ್ಮೆ ಕೂಡಾ ಸದನದಲ್ಲಿ ಪ್ರೌಢವಾಗಿ ಮಾತನಾಡಿದ ನಿದರ್ಶನ ಇಲ್ಲ. ಕರ್ನಾಟಕದ ಅಭಿವೃದ್ಧಿ ಬಗ್ಗೆ ದೂರ ದೃಷ್ಟಿಯಿಲ್ಲ. ಉತ್ತರ ಕರ್ನಾಟಕದ ಬಗ್ಗೆಯೂ ಆಳವಾದ ಜ್ಞಾನ ಇಲ್ಲ. ಫ್ಯೂಡಲ್ ಮನಸ್ಥಿತಿಯ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಹುಂಬ ಗೌಡಕಿ ಗತ್ತು ಇದೆಯೇ ಹೊರತು ಸಿದ್ದರಾಮಯ್ಯ, ದೇವೇಗೌಡರು ಅಷ್ಟೇ ಯಾಕೆ ಕೃಷ್ಣ ಭೈರೇಗೌಡರಿಗೆ ಇರುವಷ್ಟು ನಾಡು ನುಡಿಯ ಬಗ್ಗೆ ತಿಳುವಳಿಕೆ ಇಲ್ಲ.
ಯಡಿಯೂರಪ್ಪ ಅವರಿಂದ ಶೋಭಾ ಕರಂದ್ಲಾಜೆ, ಸದಾನಂದ ಗೌಡ, ಬಸವರಾಜ ಬೊಮ್ಮಾಯಿ ಸೇರಿದಂತೆ ನೂರಾರು ಜನ ರಾಜಕೀಯ ಲಾಭ ಪಡೆದುಕೊಂಡಿದ್ದಾರೆ. ಆದರೆ ಯಾರೊಬ್ಬರೂ ಬಸನಗೌಡ ಪಾಟೀಲ್ ಯತ್ನಾಳ್ ಯಡಿಯೂರಪ್ಪ ವಿರುದ್ಧ ಮಾತನಾಡುವುದು ತಪ್ಪು ಅಂತ ಒಮ್ಮೆಯೂ ಹೇಳಲಿಲ್ಲ. ನಳಿನ್ ಕುಮಾರ್ ಕಟೀಲು ಅವರನ್ನು ಬಿಜೆಪಿ ರಾಜ್ಯ ಅಧ್ಯಕ್ಷರನ್ನಾಗಿ ನೇಮಿಸಿದ್ದೇ ಬಿ.ಎಲ್. ಸಂತೋಷ್. ಅಂತಹ ಕೆಟ್ಟ ಅಧ್ಯಕ್ಷ ಬಿಜೆಪಿಗೆ ಯಾವತ್ತೂ ಬಂದಿರಲಿಲ್ಲ. ಕೊನೆಗೂ ಅವರನ್ನು ಕರ್ನಾಟಕದ ಬಿಜೆಪಿ ಕಾರ್ಯಕರ್ತರು ಅಧ್ಯಕ್ಷ ಎಂದು ಒಪ್ಪಿಕೊಳ್ಳಲೇ ಇಲ್ಲ. ಅವರನ್ನು ಅಧ್ಯಕ್ಷನನ್ನಾಗಿ ನೇಮಿಸಿದ ಕ್ರಮವನ್ನು ಬಸನಗೌಡ ಪಾಟೀಲ್ ಯತ್ನಾಳ್ ಒಮ್ಮೆಯೂ ಪ್ರಶ್ನೆ ಮಾಡಲಿಲ್ಲ. ಶಶಿಕಲಾ ಜೊಲ್ಲೆ, ಅಣ್ಣಾ ಸಾಹೇಬ್ ಜೊಲ್ಲೆ, ಪ್ರತಾಪ ಸಿಂಹ, ಸಿದ್ದೇಶ್, ಅರವಿಂದ ಲಿಂಬಾವಳಿ ಮುಂತಾದವರಿಗೆ ಟಿಕೆಟ್ ಕೊಡಿಸಲು, ಗೆಲ್ಲಿಸಲು ಯಡಿಯೂರಪ್ಪ ಬಲ ಬೇಕು. ಆದರೆ ಅಭಿಮಾನಕ್ಕೆ ಪ್ರೀತಿಗೆ ವಿಶ್ವಾಸಕ್ಕೆ ಸಂತೋಷ್ ಬೇಕು. ಯಡಿಯೂರಪ್ಪ ವಿರುದ್ಧ ಬಸನಗೌಡ ಅತ್ಯಂತ ಕೆಟ್ಟ ಪದಗಳಲ್ಲಿ ವರ್ಷಾನುಗಟ್ಟಲೆ ನಿಂದಿಸಿದರೂ ಯಾರೂ ಪ್ರತಿಕ್ರಿಯಿಸುವುದಿಲ್ಲ ಅಂದರೆ ಯಡಿಯೂರಪ್ಪ ಗಂಭೀರವಾಗಿ ಆಲೋಚಿಸಬೇಕು.
ಸಂತೋಷ್ ಮತ್ತು ಸಂಘ ಪರಿವಾರದ ಮುಖಂಡರು ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ. ಸದ್ಯ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಯಡಿಯೂರಪ್ಪ ವಿರುದ್ಧ ಛೂ ಬಿಟ್ಟಿದ್ದಾರೆ. ಒಮ್ಮೆ ಯಡಿಯೂರಪ್ಪ ಯುಗ ಅಂತ್ಯವಾದರೆ ಬಸನಗೌಡ ಪಾಟೀಲ್ ಯತ್ನಾಳ್ ವ್ಯಾಲಿಡಿಟಿ ಮುಗಿದು ಹೋಗುತ್ತದೆ. ಅವರಿಗೆ ಮುಖ್ಯಮಂತ್ರಿ ಹುದ್ದೆಯಲ್ಲ ಮಂತ್ರಿಯನ್ನಾಗಿಯೂ ಮಾಡುವುದಿಲ್ಲ. ಯತ್ನಾಳ್ ಶಕ್ತಿ ಮತ್ತು ದೌರ್ಬಲ್ಯ ಎಲ್ಲರಿಗಿಂತ ಸಂತೋಷ್ ಮತ್ತು ಸಂಘದವರಿಗೆ ಚೆನ್ನಾಗಿ ಗೊತ್ತಿದೆ. ಮುಸ್ಲಿಮರ ವಿರುದ್ಧ ಮಾತನಾಡಲು ಯತ್ನಾಳ್ ಬೇಕು. ಯಡಿಯೂರಪ್ಪ ವಿರುದ್ಧ ಕತ್ತಿ ಝಳಪಿಸಲು ಯತ್ನಾಳ್ ಬೇಕು. ಕರ್ನಾಟಕದ ವೀರಶೈವ ಲಿಂಗಾಯತರು ಅದರಲ್ಲೂ ಬಿಜೆಪಿಯಲ್ಲಿನ ಲಿಂಗಾಯತರು ಈ ಹುನ್ನಾರವನ್ನು ಅರ್ಥ ಮಾಡಿಕೊಳ್ಳಬೇಕು. ಯಡಿಯೂರಪ್ಪ ಅವರಂತಹ ಹಿರಿಯ ನಾಯಕರಿಗೆ ಬಿಜೆಪಿಯಲ್ಲಿ ಕನಿಷ್ಠ ಗೌರವ ಇಲ್ಲ. ಅವರಿಂದ ಸಾಕಷ್ಟು ಲಾಭ ಪಡೆದ ಸಂಘದ ಹಿರಿಯರು ಯಡಿಯೂರಪ್ಪ ವಿರುದ್ಧದ ದಾಳಿಯನ್ನು ನಿಲ್ಲಿಸಲು ಮನಸ್ಸು ಮಾಡುವುದಿಲ್ಲ. ಆದರೆ ಯಡಿಯೂರಪ್ಪ ವಿರುದ್ಧ ಏನೆಲ್ಲಾ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್ ರಕ್ಷಣೆಗೆ ಆರೆಸ್ಸೆಸ್ ಹಿರಿಯರು ಧಾವಿಸುತ್ತಾರೆಂದರೆ ಅವರ ರಾಜಕೀಯ ಕಾರ್ಯತಂತ್ರ ಮತ್ತು ಉದ್ದೇಶ ಸ್ಪಷ್ಟವಾಗುತ್ತದೆ.
ಏನೇ ರಾಜಕೀಯ ಅವಕಾಶ ತಪ್ಪಿದ್ದರೆ ಅದು ಯಡಿಯೂರಪ್ಪ ಅವರಿಂದ. ರಾಜಕೀಯ ಲಾಭವಾಗಿದ್ದರೆ ಅದು ಸಂತೋಷ್ ಅವರಿಂದ ಎಂದು ಬಿಜೆಪಿಯ ಬಹುತೇಕರು ಭಾವಿಸಿದ್ದಾರೆ. ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಹುದ್ದೆಯಲ್ಲಿ ಇರುವ ಸಂತೋಷ್ ಮನಸ್ಸು ಮಾಡಿದ್ದರೆ ಪ್ರತಾಪ ಸಿಂಹ ಅವರಿಗೆ ಟಿಕೆಟ್ ತಪ್ಪಲು ಸಾಧ್ಯವೇ? ಸಂತೋಷ್ ಬೆಳೆಸಿದ ಶಶಿಕಲಾ ಜೊಲ್ಲೆ, ನಾಗೇಶ್, ಮಂಗಳಾ ಶ್ರೀಧರ್ ಭ್ರಷ್ಟರು ಎಂದು ಸಾರ್ವಜನಿಕ ಬದುಕಿನಲ್ಲಿ ಸಾಬೀತು ಆದಾಗಲೂ ದೊಡ್ಡ ಸಂಗತಿ ಎನಿಸುವುದಿಲ್ಲ. ಶಶಿಕಲಾ ಜೊಲ್ಲೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಮಂತ್ರಿಯಾಗಿದ್ದಾಗ ಮೊಟ್ಟೆ ಖರೀದಿ ಹಗರಣದಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದರು. ಅದರ ಬಗ್ಗೆ ಬಸನಗೌಡ ಪಾಟೀಲ್ ಮಾತನಾಡುವುದೇ ಇಲ್ಲ. ಇಲ್ಲಿಯವರೆಗೆ ಸಂತೋಷ್ ರಾಜ್ಯದಲ್ಲಾಗಲಿ, ಕೇಂದ್ರದಲ್ಲಾಗಲಿ ಅಥವಾ ಬೇರೆ ರಾಜ್ಯದಲ್ಲಾಗಲಿ ಚುನಾವಣೆ ಗೆಲ್ಲಿಸಿದ ನಿದರ್ಶನ ಇಲ್ಲ. ತಮಿಳುನಾಡಿನಲ್ಲಿ ಅಣ್ಣಾ ಮಲೈ ಬದಲು ಬೇರೆ ಯಾರೇ ಇದ್ದರೂ ಒಂದಷ್ಟು ಸೀಟುಗಳನ್ನು ಗೆಲ್ಲುತ್ತಿದ್ದರು. ಅಣ್ಣಾ ಮಲೈ ಹೇಳಿಕೇಳಿ ಸಂತೋಷ್ ಶಿಷ್ಯ. ಆಂಧ್ರದಲ್ಲಿ ಬಂಡಿ ಸಂಜಯ್ ಅವರಿಗೆ ನಾಯಕತ್ವ ನೀಡಿದ್ದರೆ ಏನೋ ಒಂದು ಗೆಲುವು ಸಿಗುತಿತ್ತು. ಅಲ್ಲಿಯೂ ಸಂತೋಷ್ ಶಿಷ್ಯರೇ ಗೆಲುವಿಗೆ ಅಡ್ಡಿ.
ಯಾಕೆಂದರೆ ಸಂತೋಷ್ ಮಾಡೆಲ್ ದ್ವೇಷ ಬಿತ್ತುವ ಬಗೆಯದು. ಒಡೆದು ಆಳುವ ಮನಸ್ಥಿತಿಯದು. ಕರ್ನಾಟಕದಲ್ಲಿ ಹಿಂದೂ-ಮುಸ್ಲಿಮರ ನಡುವೆ ದ್ವೇಷ ಬಿತ್ತಿ ಬೆಳೆ ತೆಗೆಯುವ ಯೋಜನೆ ಸಂತೋಷ್ ಅವರದು. ಅದಕ್ಕೆ ಬಸನಗೌಡ ಮುಂತಾದವರು ರಾಜಕೀಯ ದಾಳ ಅಷ್ಟೇ. ಯಡಿಯೂರಪ್ಪ ಅವರ ಬಗ್ಗೆ ಆರೆಸ್ಸೆಸ್ ಮುಖಂಡರಿಗೂ ಗೌರವ ಇಲ್ಲ ಎನ್ನುವುದು ಬಸನಗೌಡ ಪಾಟೀಲ್ ಯತ್ನಾಳ್ ಪ್ರಕರಣದಲ್ಲಿ ಸಾಬೀತು ಆಗಿದೆ. ಯಡಿಯೂರಪ್ಪ ಅವರಂತಹ ದೈತ್ಯರನ್ನೇ ಲೆಕ್ಕಕ್ಕೆ ಇಲ್ಲದಂತೆ ನಡೆಸಿಕೊಳ್ಳುವ ಸಂಘ ಪರಿವಾರದವರಿಗೆ ಬಸನಗೌಡ ಯಾವ ಲೆಕ್ಕ?