ಕವಲು ದಾರಿಯಲ್ಲಿ ಕನ್ನಡ ಚಿತ್ರರಂಗ

ಕನ್ನಡ ಚಲನಚಿತ್ರ ರಂಗದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಅತ್ಯುತ್ತಮ ಕಥೆಗಳಿವೆ, ಹಾಡು ಬರೆಯುವವರು ಮತ್ತು ಹಾಡುವವರು ಇದ್ದಾರೆ. ಸಮರ್ಪಣಾ ಭಾವದ ಸಂಗೀತ ನಿರ್ದೇಶಕರ ಕೊರತೆ ಇದೆ. ನಟ-ನಟಿ ಮತ್ತು ಎಲ್ಲ ತಂತ್ರಜ್ಞರನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಸಮರ್ಥ ನಿರ್ದೇಶಕರ ಸಂಖ್ಯೆ ಹೆಚ್ಚಬೇಕು. ಎಲ್ಲಕ್ಕೂ ಮಿಗಿಲಾಗಿ ಕನ್ನಡ ಚಿತ್ರರಂಗ ಸಮಸ್ತ ಪ್ರತಿಭಾವಂತ ಕನ್ನಡಿಗರನ್ನು ಒಳಗೊಳ್ಳುವ ಚಿತ್ರರಂಗವಾಗಿ ಬೆಳೆಯಬೇಕು.;

Update: 2025-04-19 13:12 IST
ಕವಲು ದಾರಿಯಲ್ಲಿ ಕನ್ನಡ ಚಿತ್ರರಂಗ
  • whatsapp icon

ಚಲನಚಿತ್ರ ಅತ್ಯಂತ ಪ್ರಭಾವಿ ಮಾಧ್ಯಮ. ಚಲನಚಿತ್ರ ಆವಿಷ್ಕಾರವಾದ ದಿನದಿಂದಲೂ ಅದು ಸಾರ್ವಜನಿಕ ಮತ್ತು ವ್ಯಕ್ತಿಗತ ಬದುಕಿನಲ್ಲಿ ಗಾಢ ಪ್ರಭಾವ ಬಿರುತ್ತಲೇ ಇದೆ. ಹಾಗಾಗಿಯೇ ಚಲನಚಿತ್ರವನ್ನು ಕೇವಲ ಮನೋರಂಜನೆಗಾಗಿ ಇರುವ ಮಾಧ್ಯಮ ಎಂದು ಯಾರೂ ಭಾವಿಸಿಲ್ಲ. ಸಾಹಿತ್ಯ, ಸಂಗೀತ, ನೃತ್ಯ, ಅಭಿನಯದಂತಹ ಅತ್ಯಂತ ಸೂಕ್ಷ್ಮ ಲಲಿತ ಕಲೆಗಳ ಸಂಗಮದಂತಿರುವ ಚಲನಚಿತ್ರ ಮಾಧ್ಯಮ ಸಮಾಜದಲ್ಲಿ ಗೌರವಕ್ಕೆ, ಮನ್ನಣೆಗೆ ಪಾತ್ರವಾಗುತ್ತಲೇ ಬಂದಿದೆ.

ಚಾರ್ಲಿ ಚಾಪ್ಲಿನ್ ರಾಜಕೀಯ ಮತ್ತು ಸಾಮಾಜಿಕ ಬದ್ಧತೆಯುಳ್ಳ ಪ್ರತಿಭಾವಂತ ನಟ. ನಗಿಸುತ್ತಲೇ ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ನ ದುರುಳತನವನ್ನು ಅನಾವರಣಗೊಳಿಸಿದ ಚಾಪ್ಲಿನ್ ಪ್ರತಿಭಟನೆಯ ಅತ್ಯುತ್ತಮ ಮಾದರಿ ಬಿಟ್ಟು ಹೋಗಿದ್ದಾರೆ. ಈ ಹೊತ್ತಿಗೂ ಅನೇಕ ಚಲನಚಿತ್ರಗಳು ವ್ಯವಸ್ಥೆಯ ಕರಾಳ ಮುಖವನ್ನು ಬಯಲು ಮಾಡಿ ಜಾಗೃತಿ ಮೂಡಿಸುತ್ತಿವೆ. ಕೆಲವರು ಸುಳ್ಳು ಕತೆಗಳನ್ನು ಸೃಷ್ಟಿಸಿ ವ್ಯವಸ್ಥೆಯ ವಿಕೃತಿಯನ್ನು ಬೆಂಬಲಿಸುವ ಕಥಾನಕಗಳನ್ನು ಜನಪ್ರಿಯಗೊಳಿಸುತ್ತಿದ್ದಾರೆ. ಚಲನಚಿತ್ರದಂತಹ ಅತ್ಯಂತ ಪ್ರಭಾವಿ ಮಾಧ್ಯಮವನ್ನು ಏಕಕಾಲಕ್ಕೆ ಒಳ್ಳೆಯ ಮತ್ತು ಕೆಟ್ಟ ಉದ್ದೇಶಕ್ಕೆ ಬಳಸುವುದು ಸಹಜ ವಿದ್ಯಮಾನವಾಗಿ ಕೆಲವರು ಪರಿಗಣಿಸಿದ್ದಾರೆ. ಆದರೆ ಪ್ರಭಾವಿ ಮಾಧ್ಯಮವನ್ನು ಒಳ್ಳೆಯ ಉದ್ದೇಶಕ್ಕೆ ಬಳಸಿದಷ್ಟು ಸಮಾಜದ ಆರೋಗ್ಯ ಅತ್ಯುತ್ತಮವಾಗುತ್ತದೆ.

ತೊಂಭತ್ತರ ದಶಕದಲ್ಲಿ ದುತ್ತೆಂದು ಎದ್ದು ಬಂದ ಜಾಗತೀಕರಣ ಎಲ್ಲ ವಲಯಗಳಲ್ಲಿ ಬದಲಾವಣೆ ತಂದಂತೆ ಚಲನಚಿತ್ರರಂಗದಲ್ಲೂ ಸ್ಥಿತ್ಯಂತರಕ್ಕೆ ಕಾರಣವಾಯಿತು. ಅರುವತ್ತು, ಎಪ್ಪತ್ತು, ಎಂಭತ್ತು ಮತ್ತು ತೊಂಭತ್ತರ ದಶಕಗಳಲ್ಲಿ ಕನ್ನಡ ಚಿತ್ರರಂಗ ಜನಪ್ರಿಯತೆಯ ತುತ್ತ ತುದಿ ತಲುಪಿತ್ತು. ಇಪ್ಪತ್ತೊಂದನೆಯ ಶತಮಾನದ ಮೊದಲ ಒಂದೂವರೆ ದಶಕದವರೆಗೂ ಕನ್ನಡ ಚಲನಚಿತ್ರಗಳು ಜನಮಾನಸ ತಲುಪಿ ಲಾಭ ಮಾಡುತ್ತಲೇ ಇದ್ದವು. ನಾಯಕ ನಟರಾದ ಡಾ. ರಾಜಕುಮಾರ್, ಕಲ್ಯಾಣಕುಮಾರ್, ಉದಯಕುಮಾರ್, ಡಾ. ರಾಜೇಶ್, ಗಂಗಾಧರ್, ವಿಷ್ಣುವರ್ಧನ್, ಶ್ರೀನಾಥ್, ಹಾಸ್ಯ ನಟರಾದ ನರಸಿಂಹರಾಜು, ಬಾಲಕೃಷ್ಣ, ಮುಸುರಿ ಕೃಷ್ಣಮೂರ್ತಿ, ದ್ವಾರಕೀಶ್, ವಿಲನ್ ಪಾತ್ರಗಳಿಗೆ ಹೆಸರು ಮಾಡಿದ ವಜ್ರಮುನಿ, ಸುಂದರಕೃಷ್ಣ ಅರಸ್, ತೂಗುದೀಪ ಶ್ರೀನಿವಾಸ್ ಮತ್ತು ಪೋಷಕ ನಟರಾದ ಅಶ್ವಥ್, ಶಕ್ತಿಪ್ರಸಾದ್ ಮುಂತಾದವರು ಕನ್ನಡ ಚಲನಚಿತ್ರರಂಗ ವೈಭವದ ದಿನಗಳನ್ನು ಕಾಣಲು ಕಾರಣರಾಗಿದ್ದರು. ನಾಯಕ ನಟಿಯರಾದ ಪಂಡರಿಬಾಯಿ, ಲೀಲಾವತಿ, ಜಯಂತಿ, ಭಾರತಿ, ಮಂಜುಳಾ, ಆರತಿ ಅಪ್ಪಟ ಕನ್ನಡಿಗರಾಗಿದ್ದು ಕನ್ನಡ ಚಲನಚಿತ್ರಗಳಿಗೆ ಜೀವ ತುಂಬುತ್ತಿದ್ದರು. ಚಿತ್ರ ಸಾಹಿತಿಗಳಾದ ಆರ್.ಎನ್. ಜಯಗೋಪಾಲ್, ಕಣಗಾಲ್ ಪ್ರಭಾಕರ ಶಾಸ್ತ್ರಿ, ಚಿ. ಉದಯಶಂಕರ್, ದೊಡ್ಡರಂಗೇಗೌಡ ಮುಂತಾದವರು ಅತ್ಯುತ್ತಮ ಸಾಹಿತ್ಯ ಒದಗಿಸಿ ಕನ್ನಡ ಚಲನಚಿತ್ರರಂಗದ ಘನತೆ ಗೌರವ ಹೆಚ್ಚುವಂತೆ ಮಾಡಿದ್ದರು.

ಹುಣಸೂರು ಕೃಷ್ಣಮೂರ್ತಿ, ಸಿದ್ದಲಿಂಗಯ್ಯ, ಪುಟ್ಟಣ್ಣ ಕಣಗಾಲ್, ದೊರೆಭಗವಾನ್, ಭಾರ್ಗವರಂಥ ಚಲನಚಿತ್ರ ನಿರ್ದೇಶಕರು ಶ್ರದ್ಧೆಗೆ, ಕ್ರಿಯಾಶೀಲತೆಗೆ ಹೆಸರಾಗಿದ್ದರು. ಸಾಹಿತ್ಯ, ಸಂಗೀತ ಮತ್ತು ಅಭಿನಯವನ್ನು ಅತ್ಯುತ್ತಮ ಹದದಲ್ಲಿ ಪಾಕಗೊಳಿಸುವ ಕಲೆ ಅವರಿಗೆ ಸಿದ್ಧಿಸಿತ್ತು. ಆಗ ಪೌರಾಣಿಕ, ಐತಿಹಾಸಿಕ ಮತ್ತು ಸಾಮಾಜಿಕ ಚಲನಚಿತ್ರಗಳು ನಿರಂತರ ತೆರೆ ಕಂಡು ಜನಮನ ಸೂರೆಗೊಳ್ಳುತ್ತಿದ್ದವು. ಬಬ್ರುವಾಹನ, ಕಿತ್ತೂರು ಚೆನ್ನಮ್ಮ, ಶ್ರೀಕೃಷ್ಣ ದೇವರಾಯ, ಮಯೂರದಂತಹ ಕನ್ನಡ ಚಲನಚಿತ್ರಗಳು ದಕ್ಷಿಣ ಭಾರತದಲ್ಲಿ ಕನ್ನಡ ಚಿತ್ರರಂಗದ ಕೀರ್ತಿ ಪತಾಕೆ ಹಾರಿಸುವಂತೆ ಮಾಡಿತ್ತು. ಮೇಯರ್ ಮುತ್ತಣ್ಣ, ಬಂಗಾರದ ಮನುಷ್ಯ, ಶರಪಂಜರ, ಫಣಿಯಮ್ಮ, ನಾಗರ ಹಾವು ಮುಂತಾದ ಚಿತ್ರಗಳು ಜನಮಾನಸವನ್ನು ಗಾಢವಾಗಿ ಪ್ರಭಾವಿಸಿದ್ದವು. ಬಂಗಾರದ ಮನುಷ್ಯ ಚಲನಚಿತ್ರದಿಂದ ಪ್ರಭಾವಿತರಾದ ಅನೇಕ ವಿದ್ಯಾವಂತರು ಹಳ್ಳಿಗೆ ತೆರಳಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು. ಬಂಗಾರದ ಮನುಷ್ಯ ಬಾಕ್ಸ್ ಆಫಿಸಿನಲ್ಲಿ ದಾಖಲೆ ಸೃಷ್ಟಿಸಿತ್ತು. ಆ ಕಾಲದ ಸಂಗೀತ ನಿರ್ದೇಶಕರಾದ ರಾಜನ್ ನಾಗೇಂದ್ರ, ಜಿ.ಕೆ. ವೆಂಕಟೇಶ್, ಉಪೇಂದ್ರ ಕುಮಾರ್ ಮುಂತಾದವರ ಕೊಡುಗೆ ಅಪಾರವಾಗಿತ್ತು. ಕನ್ನಡದ ನೂರಾರು ಚಲನಚಿತ್ರಗಳು ಸಂಗೀತ ಮತ್ತು ಹಾಡಿನ ಕಾರಣಕ್ಕೆ ಹಿಟ್ ಆಗುತ್ತಿದ್ದವು. ಪಿ. ಕಾಳಿಂಗರಾವ್, ಸಿ. ಅಶ್ವಥ್, ರಾಜೀವ್ ತಾರಾನಾಥ್, ಬಿ.ವಿ. ಕಾರಂತ್, ರವಿ, ಶಿವಮೊಗ್ಗ ಸುಬ್ಬಣ್ಣ, ಚಂದ್ರಶೇಖರ ಕಂಬಾರ್ ವಿಭಿನ್ನ ಸಂಗೀತದಿಂದಾಗಿ ಕನ್ನಡ ಚಿತ್ರರಂಗದ ಭಾಗವಾಗಿದ್ದಾರೆ. ಪಿ.ಬಿ. ಶ್ರೀನಿವಾಸ್, ಎಸ್.ಪಿ. ಬಾಲಸುಬ್ರಮಣ್ಯಂ, ಎಸ್. ಜಾನಕಿ, ವಾಣಿ ಜಯರಾಮ್, ಪಿ. ಸುಶೀಲಾ, ಎಲ್.ಆರ್. ಈಶ್ವರಿ, ಕೆ.ಎಸ್. ಚಿತ್ರಾ ಮುಂತಾದ ಹಾಡುಗಾರರು ಹೊರ ರಾಜ್ಯದವರಾಗಿದ್ದರೂ ಕನ್ನಡದ ಸೊಗಡು ಹೆಚ್ಚಿಸಿ ಕನ್ನಡ ಚಲನಚಿತ್ರಗಳು ಜನಪ್ರಿಯವಾಗುವಂತೆ ಮಾಡಿದ್ದಾರೆ. ಹೆಮ್ಮೆಯ ಕನ್ನಡಿಗ ಡಾ. ರಾಜಕುಮಾರ್ ಅವರು ಅತ್ಯುತ್ತಮ ನಟನೆ ಮತ್ತು ಶ್ರೇಷ್ಠ ಹಾಡುಗಾರಿಕೆಯಿಂದ ಕನ್ನಡ ಚಲನಚಿತ್ರರಂಗ ರಾಷ್ಟ್ರಮಟ್ಟದಲ್ಲಿ ಬೆಳಗುವಂತೆ ಮಾಡಿದವರು. ಹಾಡುಗಾರಿಕೆಗಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಡಾ. ರಾಜಕುಮಾರ್ ಅವರು ದಾದಾ ಸಾಹೇಬ್ ಪ್ರಶಸ್ತಿಗೆ ಭಾಜನರಾದ ಏಕೈಕ ಕನ್ನಡಿಗ. ಪದ್ಮಭೂಷಣ, ಪದ್ಮವಿಭೂಷಣಗಳು ಡಾ. ರಾಜಕುಮಾರ್ ಅವರನ್ನು ಹುಡುಕಿಕೊಂಡು ಬಂದಿದ್ದವು. ಸುದೀರ್ಘ ಕಾಲ ಕನ್ನಡ ಚಲನಚಿತ್ರರಂಗದಲ್ಲಿ ನಾಯಕ ನಟನಾಗಿ ಕ್ರಿಯಾಶೀಲರಾಗಿದ್ದ ಡಾ. ರಾಜಕುಮಾರ್ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳಲಿಲ್ಲ.

ಡಾ. ರಾಜಕುಮಾರ್ ಅವರ ವಾರಿಗೆ ನಟರು ಚಲನಚಿತ್ರಗಳಲ್ಲಿ ಮಿತಿ ಮೀರಿದ ಹಿಂಸೆಗೆ, ರಕ್ತಪಾತಕ್ಕೆ ಅವಕಾಶ ನೀಡುತ್ತಿರಲಿಲ್ಲ. ಕನ್ನಡ ಚಲನಚಿತ್ರಗಳು ಅತ್ಯುತ್ತಮ ಹಾಡುಗಳಿಂದ ಈ ಹೊತ್ತಿಗೂ ನೆನಪಿನಲ್ಲಿ ಉಳಿದಿವೆ. ಆಗಲೂ ಕಲಾತ್ಮಕ ಚಲನಚಿತ್ರಗಳು ತೆರೆ ಕಾಣುತ್ತಿದ್ದವು. ಗಿರೀಶ್ ಕಾರ್ನಾಡ್ರ ಕಾಡು, ಘಟ ಶ್ರಾದ್ಧ, ಒಂದಾನೊಂದು ಕಾಲದಲ್ಲಿ, ಪಿ. ಲಂಕೇಶ್ ಅವರ ಅನುರೂಪ, ಪಲ್ಲವಿ, ಎಲ್ಲಿಂದಲೋ ಬಂದವರು, ಚಂದ್ರಶೇಖರ ಕಂಬಾರ್ ಅವರ ಕಾಡುಕುದುರೆ, ಸಂಗೀತಾದಂತಹ ಚಲನಚಿತ್ರಗಳು ಜನ ಸಾಮಾನ್ಯರಿಗೂ ಇಷ್ಟವಾಗುತ್ತಿದ್ದವು. ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನವಾಗುತ್ತಿದ್ದವು. ಮುಖ್ಯ ವಾಹಿನಿಯ ಮತ್ತು ಕಲಾತ್ಮಕ ಚಲನಚಿತ್ರಗಳು ಒಟ್ಟಾರೆ ಕನ್ನಡದ ಘನತೆ ಹೆಚ್ಚಿಸುತ್ತಿದ್ದವು. ಹಿಂದಿಯಲ್ಲಿ ಶ್ಯಾಮ್ ಬೆನೆಗಲ್ ಮುಂತಾದವರು ಸದಭಿರುಚಿಯ ಹಲವು ಚಿತ್ರಗಳನ್ನು ತೆರೆ ಕಾಣುವಂತೆ ಮಾಡಿದ್ದರು. ಕೂಲಿ, ಯಾರಾನಾದಂತಹ ಹೊಡೆದಾಟ ಬಡಿದಾಟದ ಚಲನಚಿತ್ರಗಳ ಅಬ್ಬರದ ಕಾಲದಲ್ಲಿ ಶ್ಯಾಮ್ ಬೆನೆಗಲ್ ಚಲನಚಿತ್ರದ ಸಾಧ್ಯತೆಯನ್ನು ವಿಸ್ತರಿಸುವ ಪ್ರಯತ್ನ ಮಾಡಿದ್ದರು. ಅವರು ತೋರಿದ ಬೆಳಕಿನಿಂದಾಗಿ ಅಮಿತಾಭ್ ಬಚ್ಚನ್ರಂಥ ಸ್ಟಾರ್ ನಟರು ಪಿಂಕ್ನಂಥ ಸಾಮಾಜಿಕ ಕಾಳಜಿಯುಳ್ಳ ಚಲನಚಿತ್ರಗಳತ್ತ ವಾಲಲು ಸಾಧ್ಯವಾಯಿತು.

ಕನ್ನಡದಲ್ಲಿ ಲಂಕೇಶ್, ಗಿರೀಶ್ ಕಾರ್ನಾಡ್, ಬಿ.ವಿ. ಕಾರಂತ್, ಚಂದ್ರಶೇಖರ ಕಂಬಾರ, ಗಿರೀಶ್ ಕಾಸರವಳ್ಳಿ ಮತ್ತು ಬರಗೂರು ರಾಮಚಂದ್ರಪ್ಪ ಅವರು ಆರಂಭಿಸಿದ ಸದಭಿರುಚಿ ಚಲನಚಿತ್ರ ಅಭಿಯಾನದಿಂದಾಗಿ ಟಿ.ಎಸ್. ನಾಗಾಭರಣ, ಶಂಕರನಾಗ್ ಮುಂತಾದವರು ಕನ್ನಡದಲ್ಲಿ ವಾಣಿಜ್ಯ ಮತ್ತು ಕಲಾತ್ಮಕ ಸಮನ್ವಯಗೊಳಿಸಿದ ಅತ್ಯುತ್ತಮ ಚಲನಚಿತ್ರಗಳು ಬಂದವು. ಅವು ಹಣ ಮಾಡುವುದರ ಜೊತೆಗೆ ನೋಡುಗರ ಅಭಿರುಚಿ ಬದಲಿಸಿದವು. ಶಂಕರನಾಗ್, ಅನಂತನಾಗ್ ಅವರು ಮೂಲತಃ ಶ್ಯಾಮ್ ಬೆನೆಗಲ್ ಗರಡಿಯಲ್ಲಿ ಬೆಳೆದವರು. ಕನ್ನಡ ಚಲನಚಿತ್ರರಂಗದಲ್ಲಿ ಭಿನ್ನ ಮತ್ತು ಅತ್ಯುತ್ತಮ ಚಿತ್ರಗಳಿಂದ ಅವರದೇ ಆದ ಛಾಪು ಮೂಡಿಸಿದರು. ಕಲಾತ್ಮಕ ವಾಣಿಜ್ಯಗಳ ಗಡಿಗೆರೆ ಅಳಿಸಿ ಹಾಕಿದ್ದರು. ಡಾ. ರಾಜಕುಮಾರ್ ಅವರು ಕಲಾತ್ಮಕ-ವಾಣಿಜ್ಯದ ಭೇದವರಿಯದೆ ಅತ್ಯುತ್ತಮ ಚಲಚಿತ್ರಗಳನ್ನು ನೀಡುವುದರತ್ತ ಗಮನ ಹರಿಸುತ್ತಿದ್ದರು.

ಈಗ ಕಾಲ ಬದಲಾಗಿದೆ. ಟಿ.ವಿ. ಮತ್ತು ಮೊಬೈಲ್ಗಳು ನೋಡುಗರಿಗೆ ಹತ್ತಿರವಾಗಿವೆ. ಜನ ಚಿತ್ರ ಮಂದಿರಗಳಿಗೆ ಹೋಗಿ ಚಲನಚಿತ್ರ ನೋಡುವ ಪ್ರವೃತ್ತಿ ಕಡಿಮೆಯಾಗುತ್ತಿದೆ. ಟಿ.ವಿ.ಯಲ್ಲಿ ಧಾರಾವಾಹಿ ಸೇರಿದಂತೆ ಹಲವು ಮನೋರಂಜನಾ ಕಾರ್ಯಕ್ರಮಗಳು ಪ್ರಸಾರವಾಗುತ್ತಿರುವುದರಿಂದ ಚಲನಚಿತ್ರಗಳು ಇವುಗಳ ಜೊತೆಗೆ ಪೈಪೋಟಿ ನಡೆಸುವ ಅನಿವಾರ್ಯತೆ ಸೃಷ್ಟಿಯಾಗಿದೆ.

ಮೊದಲು ಮಹಾನಗರ, ನಗರ, ಪಟ್ಟಣ ಮತ್ತು ಹೋಬಳಿ ಮಟ್ಟದ ಟೆಂಟ್ ಚಿತ್ರಮಂದಿರಗಳು ಭರ್ತಿ ಆಗುತ್ತಿದ್ದವು. ಈಗ ಮಹಾನಗರಗಳಲ್ಲಿ ಮಾಲ್ಗಳು, ದೊಡ್ಡ ಕಾಂಪ್ಲೆಕ್ಸ್ಗಳು ತಲೆ ಎತ್ತುತ್ತಿ ರುವುದರಿಂದ ಚಿತ್ರಮಂದಿರಗಳು ಒಂದೊಂದೇ ಮಾಯವಾಗುತ್ತಿವೆ. ಮಾಲ್ಗಳಲ್ಲಿ ಚಿತ್ರಮಂದಿರಗಳು ಇವೆಯಾದರೂ ಅವು ದುಬಾರಿ ಬೆಲೆ ನಿಗದಿಪಡಿಸುತ್ತವೆ. ಕೆಳ ಮಧ್ಯಮ ಮತ್ತು ಕೆಳ ವರ್ಗ ಮಾಲ್ ಚಿತ್ರಮಂದಿರಗಳಿಗೆ ಹೋಗಲು ಸಾಧ್ಯವಾಗುವುದಿಲ್ಲ. ನಗರ ಮತ್ತು ಪಟ್ಟಣಗಳ ಚಿತ್ರಮಂದಿರಗಳು ಕೆಲವು ಆಯ್ದ ಚಲನಚಿತ್ರಗಳಿಗೆ ಮಾತ್ರ ಭರ್ತಿಯಾಗುತ್ತವೆ. ಒಂದು ಅತ್ಯುತ್ತಮ ಚಲನಚಿತ್ರ ನಿರ್ಮಿಸುವುದು ಸವಾಲಿನ ಸಂಗತಿಯೇ ಸರಿ. ಅದಕ್ಕಿಂತಲೂ ದೊಡ್ಡ ಸವಾಲು ನೋಡುಗರನ್ನು ಸೆಳೆಯುವುದು. ಈ ಸವಾಲನ್ನು ಮೀರಿ ಚಲನಚಿತ್ರ ಉದ್ಯಮವನ್ನು ಎತ್ತಿ ನಿಲ್ಲಿಸಲು ಹಿಂದಿ ಚಿತ್ರರಂಗದ ಮಂದಿ ಒಟಿಟಿ ವೇದಿಕೆ ಸೃಷ್ಟಿಸಿದರು. ಚಿತ್ರಮಂದಿರಗಳಲ್ಲಿ ಒಂದು ಚಲನಚಿತ್ರ ವಾರ ಕಾಲ ಯಶಸ್ವಿಯಾಗಿ ಓಡಿದರೂ ಸಾಕು. ಆ ಮೇಲೆ ಒಟಿಟಿ ವೇದಿಕೆ ಮೂಲಕ ಇನ್ನೊಂದು ನೋಡುಗ ವರ್ಗವನ್ನು ತಲುಪಲು ಯತ್ನಿಸುತ್ತಾರೆ. ಅಲ್ಲೂ ಈಗ ವೆಬ್ ಸೀರೀಸ್ಗಳ ಪೈಪೋಟಿ ಎದುರಿಸಬೇಕಿದೆ. ಡಬ್ಬಿಂಗ್ಗೆ ಅನುಮತಿ ಸಿಕ್ಕಿದ್ದರಿಂದ ಬೇರೆ ಭಾಷೆಯ ಚಲನಚಿತ್ರಗಳು ಒಟಿಟಿ ವೇದಿಕೆಯಲ್ಲಿ ಕನ್ನಡ ಭಾಷೆಯಲ್ಲೇ ನೋಡಲು ಸಿಗುವುದರಿಂದ ಪರ ಭಾಷಾ ಚಿತ್ರಗಳ ಪೈಪೋಟಿ ಎದುರಿಸಿ ಗೆಲ್ಲಬೇಕು.

ಕನ್ನಡದಲ್ಲಿ ಅತ್ಯುತ್ತಮ ಕಲಾವಿದ/ಕಲಾವಿದೆಯರಿಗೆ ಕೊರತೆಯಿಲ್ಲ.ಅತ್ಯುತ್ತಮ ತಂತ್ರಜ್ಞರಿಗೂ ಬರ ಇಲ್ಲ. ಅನಂತನಾಗ್, ಶಂಕರ್ನಾಗ್ ನಂತರ, ರಮೇಶ್ ಅರವಿಂದ್, ಡಾ. ಶಿವರಾಜ್ ಕುಮಾರ್, ಡಾ. ಪುನೀತ್ ರಾಜಕುಮಾರ್, ರಾಘವೇಂದ್ರ ರಾಜಕುಮಾರ್, ಸುದೀಪ್, ಪ್ರೇಮ್, ವಿಜಯ್ ರಾಘವೇಂದ್ರ, ಅರ್ಜುನ್ ಸರ್ಜಾ, ಧ್ರುವ ಸರ್ಜಾ, ಚಿರು ಸರ್ಜಾ, ದುನಿಯಾ ವಿಜಯ್, ಮುಂಗಾರು ಮಳೆ ಗಣೇಶ್, ಯಶ್, ಕಿಶೋರ್, ಡಾಲಿ ಧನಂಜಯ ಸೇರಿದಂತೆ ಹಲವಾರು ಜನ ಪ್ರತಿಭಾವಂತ ನಾಯಕ ನಟರಲ್ಲಿ ಹಲವರು ಈಗಲೂ ಚಿತ್ರರಂಗದಲ್ಲಿ ಕ್ರಿಯಾಶೀಲರಾಗಿದ್ದಾರೆ. ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಅವರ ಪತ್ನಿ ಸುಮಲತಾ ತಮ್ಮದೇ ರೀತಿಯಲ್ಲಿ ಕನ್ನಡ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ್ದಾರೆ. ಡಾ. ರಾಜಕುಮಾರ್ ಮತ್ತು ಪಾರ್ವತಮ್ಮ ರಾಜಕುಮಾರ್ ಅವರು ಕನ್ನಡ ಚಿತ್ರರಂಗಕ್ಕೆ ಸಮರ್ಥ ನಾಯಕತ್ವ ನೀಡಿದ್ದರು. ಕನ್ನಡ ಚಿತ್ರರಂಗಕ್ಕೆ ಏನೇ ಗಂಡಾಂತರ ಎದುರಾದರೂ ಡಾ. ರಾಜ್ ಕುಟುಂಬ ಧಾವಿಸುತ್ತಿತ್ತು. ಅವರ ನಂತರ ಅಂಬರೀಶ್ ಆ ನಾಯಕತ್ವ ವಹಿಸಿಕೊಂಡು ಚಿತ್ರರಂಗವನ್ನು ಮುನ್ನಡೆಸುತ್ತಿದ್ದರು.

ಕಳೆದ ಆರೇಳು ವರ್ಷಗಳಲ್ಲಿ, ಕನ್ನಡ ಚಲನಚಿತ್ರ ರಂಗ ಭಾರೀ ಹಿನ್ನಡೆ ಅನುಭವಿಸುತ್ತಿದೆ. ಗಿರೀಶ್ ಕಾಸರವಳ್ಳಿ, ಬರಗೂರು ರಾಮಚಂದ್ರಪ್ಪ, ಪಿ. ಶೇಷಾದ್ರಿ, ಬಿ.ಎಸ್. ಲಿಂಗದೇವರು, ಶಿವರುದ್ರಯ್ಯ ಮುಂತಾದವರು ನಿರ್ಮಿಸಿದ ಕಲಾತ್ಮಕ ಚಿತ್ರಗಳಿಗೆ ಎಷ್ಟೇ ಪ್ರಶಸ್ತಿ ಪುರಸ್ಕಾರ ಲಭಿಸಿದ್ದರೂ ಒಟಿಟಿ ವೇದಿಕೆಗೆ ಆಯ್ಕೆಯಾಗುವುದಿಲ್ಲ. ಟಿ.ವಿ. ರೈಟ್ಸ್ ಸಿಗುವುದಿಲ್ಲ. ಕಲಾತ್ಮಕ ಚಲನಚಿತ್ರಗಳು ಚಿತ್ರಮಂದಿರದಲ್ಲಿ ನೋಡುಗರನ್ನು ಆಕರ್ಷಿಸುವುದಿಲ್ಲ. ಕಲಾತ್ಮಕ ಚಲನಚಿತ್ರಗಳು ಕಡಿಮೆ ವೆಚ್ಚದಲ್ಲಿ ನಿರ್ಮಾಣಗೊಂಡಿರುತ್ತವೆ. ಆದರೂ ಹಾಕಿದ ಬಂಡವಾಳ ವಾಪಸ್ ಬರಬೇಕಲ್ಲ. ಕರ್ನಾಟಕ ಸರಕಾರ ಹತ್ತು ಲಕ್ಷ ರೂ. ಸಬ್ಸಿಡಿ ನೀಡುತ್ತದೆ. ಅದು ಯಾವುದಕ್ಕೂ ಸಾಕಾಗುವುದಿಲ್ಲ. ಕಲಾತ್ಮಕ ಮತ್ತು ವಾಣಿಜ್ಯ ಚಲನಚಿತ್ರ ನಿರ್ಮಿಸುವವರು ಒಟ್ಟಿಗೆ ಕೂತು ಈಗ ಎದುರಾಗಿರುವ ಮಾರುಕಟ್ಟೆ ಸವಾಲನ್ನು ಎದುರಿಸಬೇಕಿದೆ. ಹೊಂಬಾಳೆ ಫಿಲಂಸ್ ನವರು ಕೆಜಿಎಫ್ ಮತ್ತು ಕಾಂತಾರದಂತಹ ಚಲನಚಿತ್ರ ನಿರ್ಮಿಸಿ ಗೆದ್ದಿದ್ದಾರೆ. ಅದನ್ನು ಒಪ್ಪಿಕೊಳ್ಳೋಣ. ಆದರೆ, ಆ ಮಾದರಿಯ ಚಲನಚಿತ್ರಗಳು ಕನ್ನಡ ಪ್ರಜ್ಞೆಯ ವಿಸ್ತಾರಕ್ಕೆ ಪೂರಕವಾಗಿ ನಿಲ್ಲಬಲ್ಲವೇ ಎಂಬ ಪ್ರಶ್ನೆ ಮೂಡುತ್ತದೆ. ಕಲಾತ್ಮಕ ಎಂದು ಹೇಳಿಕೊಂಡು ತೆರೆ ಕಾಣುವ ಚಲನಚಿತ್ರಗಳು ಚಿತ್ರ ಮಂದಿರಗಳಲ್ಲಿ ನಿಲ್ಲುವುದಿಲ್ಲ. ವಾಣಿಜ್ಯ ಚಿತ್ರಗಳು ಅತಿಯಾದ ಹಿಂಸೆ, ರಕ್ತಪಾತದ ದೃಶ್ಯಗಳಿಂದ ಅವು ಜನರ ಮನಸ್ಸು ಗೆಲ್ಲುತ್ತಿಲ್ಲ. ಮಯೂರ, ಬಂಗಾರದ ಮನುಷ್ಯದಂತಹ ಚಿತ್ರಗಳನ್ನು ಈಗ ನಿರ್ಮಿಸಲು ಆಗುವುದಿಲ್ಲ. ಆದರೆ ಈ ಕಾಲದ ಪೈಪೋಟಿ ಎದುರಿಸಿ ನಿಲ್ಲುವ ಚಿತ್ರಗಳು ಬರಬೇಕಿದೆ. ಯೋಗರಾಜ್ ಭಟ್ಟರು ಮುಂಗಾರು ಮಳೆಯಂಥ ಸದಭಿರುಚಿಯ ಚಿತ್ರ ನೀಡಿ ಗಲ್ಲಾ ಪೆಟ್ಟಿಗೆಯಲ್ಲೂ ಗೆದ್ದರು. ಗುಜರಾತ್ ಲೇಖಕ ಪನ್ನಲಾಲ್ ಪಟೇಲ್ರ ಕತೆ ಆಧರಿತ ಜನುಮದ ಜೋಡಿ ಮಾಸ್ ಮತ್ತು ಕ್ಲಾಸ್ ಎರಡೂ ಕಡೆಗೆ ಯಶಸ್ಸು ಪಡೆದಿತ್ತು. ಆ ಚಲನಚಿತ್ರಕ್ಕೆ ಡಾ. ಬರಗೂರು ರಾಮಚಂದ್ರಪ್ಪ ಅವರು ಸಂಭಾಷಣೆ ಬರೆದಿದ್ದರು.

ಕನ್ನಡ ಚಲನಚಿತ್ರ ರಂಗದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಅತ್ಯುತ್ತಮ ಕಥೆಗಳಿವೆ, ಹಾಡು ಬರೆಯುವವರು ಮತ್ತು ಹಾಡುವವರು ಇದ್ದಾರೆ. ಸಮರ್ಪಣಾ ಭಾವದ ಸಂಗೀತ ನಿರ್ದೇಶಕರ ಕೊರತೆ ಇದೆ. ನಟ ನಟಿ ಮತ್ತು ಎಲ್ಲ ತಂತ್ರಜ್ಞರನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಸಮರ್ಥ ನಿರ್ದೇಶಕರ ಸಂಖ್ಯೆ ಹೆಚ್ಚಬೇಕು. ಎಲ್ಲಕ್ಕೂ ಮಿಗಿಲಾಗಿ ಕನ್ನಡ ಚಿತ್ರರಂಗ ಸಮಸ್ತ ಪ್ರತಿಭಾವಂತ ಕನ್ನಡಿಗರನ್ನು ಒಳಗೊಳ್ಳುವ ಚಿತ್ರರಂಗವಾಗಿ ಬೆಳೆಯಬೇಕು. ಕನ್ನಡದಲ್ಲಿ ಅತ್ಯುತ್ತಮ ಕಥಾ ಸಾಹಿತ್ಯ ಇದೆ. ಅಪಾರ ಸಂಖ್ಯೆಯ ಶ್ರೇಷ್ಠ ಕಾದಂಬರಿಗಳಿವೆ. ಕರ್ನಾಟಕ ಸರಕಾರ ಪ್ರಶಸ್ತಿ ಪುರಸ್ಕಾರ ನೀಡಿ ಕಲಾವಿದರು ಮತ್ತು ತಂತ್ರಜ್ಞರನ್ನು ನಿರಂತರ ಪ್ರೋತ್ಸಾಹಿಸುತ್ತಲೇ ಇದೆ. ಮೈಸೂರು ನಗರದಲ್ಲಿ ಸರಕಾರದ ವತಿಯಿಂದ ಚಿತ್ರನಗರಿ ಮಾಡುವುದಾಗಿ ಸ್ವತಃ ಮುಖ್ಯಮಂತ್ರಿಗಳೇ ಹೇಳಿದ್ದಾರೆ. ಕನ್ನಡ ಚಿತ್ರರಂಗ ಮೊದಲಿನ ವೈಭವ ಮರಳಿ ಪಡೆಯಬೇಕೆಂದರೆ ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ದಕ್ಷಿಣ ಭಾರತ ಮಾತ್ರವಲ್ಲ, ಇಡೀ ಭಾರತದಲ್ಲೇ ಕನ್ನಡ ಚಿತ್ರರಂಗದ ಸಾಧನೆ ಎದ್ದು ಕಾಣುವಂತಾಗಬೇಕು. ಕನ್ನಡಿಗರು ಹುಟ್ಟು ಪ್ರತಿಭಾವಂತರು. ಒಗ್ಗಟ್ಟಿನಿಂದ ಮೈ ಕೊಡವಿ ನಿಂತರೆ ಏನೆಲ್ಲಾ ಸಾಧಿಸಬಲ್ಲರು. ಕನ್ನಡ ಚಲನಚಿತ್ರರಂಗ ಮೊದಲಿನಂತೆ ಜಾತಿ, ಕುಲ, ಮತ ಧರ್ಮಗಳ ಎಲ್ಲೆ ಕಟ್ಟು ಮೀರಿ ಒಗ್ಗಟ್ಟು ಪ್ರದರ್ಶಿಸಿ ಮುನ್ನಡೆಯಬೇಕು. ಆಗ ಯಶಸ್ಸು ಕಟ್ಟಿಟ್ಟ ಬುತ್ತಿ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Contributor - ಡಾ. ರಾಜಶೇಖರ ಹತಗುಂದಿ

contributor

Similar News