ಬಿಜೆಪಿಗೆ ಯತ್ನಾಳ್ ಅನಿವಾರ್ಯವೇ...?

ಈ ಹೊತ್ತು ಭಾರತೀಯ ಜನತಾ ಪಕ್ಷ, ಭಾರತೀಯ ಜಗಳಗಂಟರ ಪಕ್ಷವಾಗಿ ಮಾರ್ಪಾಡಾಗಿದ್ದು ದುರಂತ. ಮಧ್ಯಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌಹಾಣ್, ರಾಜಸ್ಥಾನದಲ್ಲಿ ವಸುಂಧರಾ ರಾಜೇ, ಛತ್ತೀಸ್‌ಗಡದಲ್ಲಿ ರಮಣ ಸಿಂಗ್ ಅವರಂಥ ನಾಯಕರನ್ನು ಅಂಚಿಗೆ ತಳ್ಳುವ ಶಕ್ತಿ ಹೊಂದಿರುವ ಬಿಜೆಪಿ ಕರ್ನಾಟಕದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಅವರ ವಿರುದ್ಧ ಕ್ರಮ ಜರುಗಿಸಲು ಹಿಂದೇಟು ಹಾಕುತ್ತಿರುವುದು ಸಂತೋಷ್ ಬಲಕ್ಕೆ ಹೈಕಮಾಂಡ್ ಬಾಗಿದಂತೆ ಕಾಣುತ್ತದೆ. ಬಿಜೆಪಿಯ ಬೀದಿ ರಂಪ ಕಂಡ ಜನತೆ ಆ ಪಕ್ಷದ ಬಗ್ಗೆ ಹೇಸಿಗೆ ಪಟ್ಟುಕೊಳ್ಳುವಂತಾಗಿದೆ. ಯತ್ನಾಳ್ ಪಕ್ಷದಲ್ಲಿ ಮುಂದುವರಿದಷ್ಟೂ ದಿನ ಬಿಜೆಪಿ ಅಧಿಕಾರದ ಕನಸು ಕಾಣಲು ಸಾಧ್ಯವಾಗುವುದಿಲ್ಲ.;

Update: 2025-02-22 10:15 IST
ಬಿಜೆಪಿಗೆ ಯತ್ನಾಳ್ ಅನಿವಾರ್ಯವೇ...?
  • whatsapp icon

ಭಾರತೀಯ ಜನತಾ ಪಕ್ಷದ ಬಗ್ಗೆ ಇರುವ ಬಹುದೊಡ್ಡ ಪ್ರತೀತಿಯೆಂದರೆ ಅದೊಂದು ಶಿಸ್ತಿನ ಪಕ್ಷ ಎಂಬುದು. ಬಿಜೆಪಿ ಹೈಕಮಾಂಡ್‌ಗೆ ಕೇಂದ್ರದಲ್ಲಿ ಅಧಿಕಾರ ಸಿಗದಿದ್ದಾಗಲೂ ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ. ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಶಿಯವರು ಪಕ್ಷದಲ್ಲಿ ಶಿಸ್ತನ್ನು ನೆಲೆಸುವಂತೆ ಸದಾ ನಿಗಾ ವಹಿಸುತ್ತಿದ್ದರು.

ರಾಷ್ಟ್ರಮಟ್ಟದಲ್ಲಿ ಭಾಷಣದಿಂದಲೇ ಹೆಸರು ಮಾಡಿದ್ದ ಗೋವಿಂದಾಚಾರ್ಯ, ಉಮಾ ಭಾರತಿ ಮುಂತಾದವರನ್ನು ಅಗತ್ಯ ಬಿದ್ದಾಗ ಅಂಚಿಗೆ ತಳ್ಳಿದ ನೂರಾರು ನಿದರ್ಶನಗಳು ಇವೆ. ಕರ್ನಾಟಕದಲ್ಲಿ ಬಿಜೆಪಿಯನ್ನು ತಳಮಟ್ಟದಿಂದ ಸಂಘಟಿಸಿದ್ದ ಎ.ಕೆ. ಸುಬ್ಬಯ್ಯ ಅವರನ್ನು ಆ ಪಕ್ಷ ಉಳಿಸಿಕೊಳ್ಳಲಿಲ್ಲ. ಭಾರತೀಯ ಜನತಾ ಪಕ್ಷಕ್ಕೆ ವ್ಯಕ್ತಿ ಅನಿವಾರ್ಯವಲ್ಲ ಎಂಬುದನ್ನು ದಶಕಗಳಿಂದ ಆ ಪಕ್ಷದ ಹಿರಿಯರು ನಿರೂಪಿಸುತ್ತಲೇ ಬಂದಿದ್ದಾರೆ. ಹಾಗೆ ನೋಡಿದರೆ ಕರ್ನಾಟಕದ ಮಟ್ಟಿಗೆ ಬಿಜೆಪಿಯ ಆಸ್ತಿಯಂತಿದ್ದ ಬಿ.ಎಸ್. ಯಡಿಯೂರಪ್ಪ ಅವರು ಪಕ್ಷ ತೊರೆದು ಹೊಸದೊಂದು ಪಕ್ಷ ಕಟ್ಟಲು ಮುಂದಾದಾಗ ಕೇಂದ್ರ ಮತ್ತು ರಾಜ್ಯ ನಾಯಕರು ಅವರನ್ನು ಉಳಿಸಿಕೊಳ್ಳಲು ವಿಶೇಷ ಪ್ರಯತ್ನವನ್ನೇನೂ ಮಾಡಿರಲಿಲ್ಲ. ಆಗ ಪ್ರಹ್ಲಾದ್ ಜೋಶಿ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದರು. ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದರು. ಯಡಿಯೂರಪ್ಪ ಅವರ ಶಕ್ತಿ ಗೊತ್ತಿದ್ದರೂ ಅವರು ಬಿಜೆಪಿಯಿಂದ ತೊಲಗಲಿ ಎಂಬ ಭಾವನೆ ಕೇಂದ್ರ ಮತ್ತು ರಾಜ್ಯ ನಾಯಕರಲ್ಲಿ ಇತ್ತು. ಅಷ್ಟು ಮಾತ್ರವಲ್ಲ; ಜಯದೇವ ಹೊರತು ಪಡಿಸಿದರೆ ಉಳಿದೆಲ್ಲ ಸಂಘ ಪರಿವಾರದ ಹಿರಿಯರು ಯಡಿಯೂರಪ್ಪ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳುವ ಇರಾದೆ ಹೊಂದಿರಲಿಲ್ಲ. ಹಾಗೆ ನೋಡಿದರೆ ಯಡಿಯೂರಪ್ಪ ಆಗ ಬಾಯಿಗೆ ಬಂದಂತೆ ಮಾತನಾಡಿರಲಿಲ್ಲ. ‘‘ಅನಂತಕುಮಾರ್ ಮತ್ತವರ ತಂಡ ನನಗೆ ಕಿರುಕುಳ ನೀಡಿದೆ’’ ಎಂದಷ್ಟೇ ಹೇಳಿದ್ದರು. ಬಸನಗೌಡ ಪಾಟೀಲ್ ಯತ್ನಾಳ್ ಅವರ ಹಾಗೆ ಯಡಿಯೂರಪ್ಪ ಯಾವತ್ತೂ ಹೆಚ್ಚು ವಾಚಾಳಿಯಾಗಿ ನಡೆದುಕೊಳ್ಳುತ್ತಿರಲಿಲ್ಲ. ಬಿಜೆಪಿಯಲ್ಲಿ ಅತಿ ಹೆಚ್ಚು ವಾಚಾಳಿ ನಾಯಕರೆಂದರೆ, ಕೆ.ಎಸ್. ಈಶ್ವರಪ್ಪ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಮಾತ್ರ.

ಅಷ್ಟಕ್ಕೂ ಯಡಿಯೂರಪ್ಪ ತಾನೊಬ್ಬ ಪ್ರಬಲ ಜನನಾಯಕ ಎಂಬುದನ್ನು ಕರ್ನಾಟಕ ಜನತಾ ಪಕ್ಷ ಕಟ್ಟಿ 2013ರ ವಿಧಾನಸಭಾ ಚುನಾವಣೆಯಲ್ಲಿ ಸಿದ್ಧಮಾಡಿ ತೋರಿಸಿದ್ದಾರೆ. 2008ರಿಂದ ಆಡಳಿತ ಪಕ್ಷವಾಗಿದ್ದ ಬಿಜೆಪಿ 2013ರ ವಿಧಾನಸಭಾ ಚುನಾವಣೆಯಲ್ಲಿ ಕೇವಲ ನಲವತ್ತು ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಿತ್ತು. ಆ ಚುನಾವಣೆಯಲ್ಲಿ ಹಳೆ ಮೈಸೂರು ಭಾಗಕ್ಕೆ ಮಾತ್ರ ಸೀಮಿತವಾಗಿದ್ದ ಜೆಡಿಎಸ್ ಕೂಡಾ ನಲವತ್ತು ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಪಡೆದಿತ್ತು. ಯಡಿಯೂರಪ್ಪ ಕಟ್ಟಿದ ಕೆಜೆಪಿ ಪ್ರತಿಶತ ಹತ್ತರಷ್ಟು ಮತ ಪಡೆದು ಬಿಜೆಪಿಗೆ ಭಾರೀ ಪೆಟ್ಟು ಕೊಟ್ಟಿತ್ತು. ಆ ಕಾರಣಕ್ಕೆ ಮೋದಿ-ಅಮಿತ್ ಶಾ ಜೋಡಿ 2014ರ ಲೋಕಸಭಾ ಚುನಾವಣೆಯ ಹೊತ್ತಿಗೆ ಯಡಿಯೂರಪ್ಪ ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಂಡು ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿ ಬೀಗಿತ್ತು.

ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪ್ರಹ್ಲಾದ್ ಜೋಶಿ ಮತ್ತು ಜಗದೀಶ್ ಶೆಟ್ಟರ್ ಜೋಡಿ ತಮ್ಮ ನಾಯಕ ಅನಂತಕುಮಾರ್ ಬಲದ ಮೇಲೆ ಪಕ್ಷದಿಂದ ಹೊರ ಹಾಕಿದ್ದರು. ಆಗ ಜಾತ್ಯತೀತ ಜನತಾದಳದ ಮೊರೆ ಹೋಗಿದ್ದ ಬಸನಗೌಡ ಪಾಟೀಲ್ ಯತ್ನಾಳ್ ವಿಜಯಪುರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಹೀನಾಯವಾಗಿ ಸೋತಿದ್ದರು. ಬಿಜೆಪಿಗೆ ಡ್ಯಾಮೇಜ್ ಮಾಡುವುದು ದೂರದ ಮಾತು, ಸ್ವತಃ ತಾನೇ ಗೆಲುವು ಸಾಧಿಸುವಲ್ಲಿ ವಿಫಲರಾಗಿದ್ದರು. ಇನ್ನೊಬ್ಬ ಬಾಯಿಬಡುಕ ನಾಯಕ ಕೆ.ಎಸ್. ಈಶ್ವರಪ್ಪ ಕಳೆದ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಬಿಜೆಪಿಯ ಅಧಿಕೃತ ಅಭ್ಯರ್ಥಿ, ಯಡಿಯೂರಪ್ಪ ಅವರ ಪುತ್ರ ಬಿ.ವೈ. ರಾಘವೇಂದ್ರ ಅವರನ್ನು ಸೋಲಿಸಿಯೇ ತಿರುತ್ತೇನೆ ಎಂದು ಈಶ್ವರಪ್ಪ ಅಬ್ಬರಿಸಿ ಬೊಬ್ಬಿರಿದಿದ್ದರು. ಆದರೆ ಚುನಾವಣಾ ಫಲಿತಾಂಶ ಹೊರಬಿದ್ದಾಗ ಡಿಪಾಸಿಟ್ ಕಳೆದುಕೊಂಡಿದ್ದರು. ಅಂದರೆ ಈಶ್ವರಪ್ಪ ಮತ್ತು ಬಸನಗೌಡ ಪಾಟೀಲ್‌ರ ಬಾಯಿಬಡುಕತನಕ್ಕೆ ವೋಟು ತರುವ ಶಕ್ತಿ ಇಲ್ಲ ಎನ್ನುವುದು ಈಗಾಗಲೇ ಸಾಬೀತಾದ ಕಟು ಸತ್ಯ.

ಬಸನಗೌಡ ಪಾಟೀಲ್ ಯತ್ನಾಳ್ ಮಾತಿನಲ್ಲಿ ಒಂದು ತರ್ಕ, ಸುಸಂಬದ್ಧತೆ ಇರುವುದಿಲ್ಲ. 2023ರ ವಿಧಾನಸಭಾ ಚುನಾವಣೆಯಲ್ಲಿ ಬಸನಗೌಡ ಪ್ರಚಾರ ಮಾಡಿದ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಹೀನಾಯವಾಗಿ ಸೋತರು. ಒಬ್ಬ ಜನನಾಯಕನಾದವನು ಗೆದ್ದಾಗ ಬೀಗಿದಂತೆ ಸೋತಾಗ ಸೋಲಿನ ಹೊಣೆಯನ್ನು ತಾನೇ ಹೊರಬೇಕಾಗುತ್ತದೆ. 2023ರ ವಿಧಾನಸಭಾ ಚುನಾವಣೆಯ ಹೊಣೆಯನ್ನು ಬಿ.ಎಲ್. ಸಂತೋಷ್ ಹೊತ್ತಿದ್ದರು. ಬಸವರಾಜ ಬೊಮ್ಮಾಯಿ, ಬಸನಗೌಡ ಪಾಟೀಲ್ ಯತ್ನಾಳ್, ವಿ. ಸೋಮಣ್ಣ ಲಿಂಗಾಯತ ಮತಗಳನ್ನು ತರುವ ಜವಾಬ್ದಾರಿ ಹೊತ್ತಿದ್ದರು. ಸೋಮಣ್ಣ ಅವರನ್ನು ನಾಯಕನಾಗಿ ಬಿಂಬಿಸಲೆಂದೇ ಚಾಮರಾಜನಗರ ಮತ್ತು ವರುಣಾ ಮತ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದರು. ಸೋಮಣ್ಣ ಅವರನ್ನು ಗೆಲ್ಲಿಸಿಕೊಳ್ಳಲು ಯತ್ನಾಳ್, ಬಿ.ಎಲ್. ಸಂತೋಷ್ ಮತ್ತು ಪ್ರತಾಪ ಸಿಂಹ ಏನೆಲ್ಲಾ ತಂತ್ರ ಹೂಡಿದ್ದರು. ಆದರೆ ಯಶಸ್ಸು ಪಡೆಯಲಿಲ್ಲ. ಆ ಚುನಾವಣೆಯ ಸೋಲನ್ನು ಯಡಿಯೂರಪ್ಪ ಅವರ ತಲೆಗೆ ಕಟ್ಟಲು ಯತ್ನಿಸಿದ್ದರು. ಹೊಂದಾಣಿಕೆ ರಾಜಕಾರಣದಿಂದ ಬಿಜೆಪಿ ಹಿನ್ನಡೆ ಅನುಭವಿಸಬೇಕಾಯಿತು ಎಂದು ಮೊದಲು ಪ್ರತಾಪ ಸಿಂಹ ಮೂಲಕ ಹೇಳಿಸಿದರು. ನಂತರ ಸಂತೋಷ್ ಬಣದ ಎಲ್ಲರೂ ಆ ಮಾತನ್ನು ಅನುಮೋದಿಸಿದ್ದರು.

ಕರ್ನಾಟಕದಲ್ಲಿ ಚುನಾವಣೆ ಗೆಲ್ಲಿಸಿಕೊಡುವ ಹೊಣೆಯನ್ನು ಸಂತೋಷ್ ಹೊತ್ತಿರುವಾಗ, ಯಡಿಯೂರಪ್ಪ ಸಹಕರಿಸಬೇಕಿತ್ತು ಎಂದು ನಿರೀಕ್ಷಿಸುವುದೇ ತಪ್ಪು. 2024ರ ಲೋಕಸಭಾ ಚುನಾವಣೆಯನ್ನು ಗೆಲ್ಲಿಸಿಕೊಡುವ ಸಂಪೂರ್ಣ ಹೊಣೆಯನ್ನು ಬಿಜೆಪಿ ವರಿಷ್ಠರು ಯಡಿಯೂರಪ್ಪ ಅವರಿಗೆ ವಹಿಸಿದ್ದರು. ಆ ಕಾರಣಕ್ಕೆ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಿದ್ದರು. ಆಗ ಸಂತೋಷ್ ಬಣದ ಮುಖಂಡರು ಮತ್ತು ಇಡೀ ಸಂಘ ಪರಿವಾರದ ಕಾರ್ಯಕರ್ತರು ಶಸ್ತ್ರ ಕೆಳಿಗಿಟ್ಟು ಕೂತಿದ್ದರು. ವಿಶೇಷವಾಗಿ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿದ್ದ ಜಗದೀಶ್ ಶೆಟ್ಟರ್ ಅವರನ್ನು ಸೋಲಿಸಲೇಬೇಕೆಂದು ಸಂತೋಷ್ ಶಿಷ್ಯ ಈರಣ್ಣ ಕಡಾಡಿ ಹರಸಾಹಸ ಪಟ್ಟರು. ಯಾರನ್ನೇ ಸೋಲಿಸಲು ಅಥವಾ ಗೆಲ್ಲಿಸಲು ಬಹುದೊಡ್ಡ ಬಲ ಬೇಕಾಗಿರುತ್ತದೆ. ಚಿಕ್ಕೋಡಿಯಲ್ಲಿ ಅಣ್ಣಾ ಸಾಹೇಬ್ ಜೊಲ್ಲೆಯವರನ್ನು ಗೆಲ್ಲಿಸಲೇಬೇಕೆಂದು ಬಸನಗೌಡ ಯತ್ನಾಳ್ ಸೇರಿದಂತೆ ಸಂತೋಷ್ ಬಣದ ಹಲವರು ಪಣ ತೊಟ್ಟಿದ್ದರು. ಆದರೆ ಗೆಲ್ಲಿಸಿಕೊಳ್ಳಲಾಗಲಿಲ್ಲ.

ಬಸನಗೌಡ ಪಾಟೀಲ್ ಯತ್ನಾಳ್ ಕಳೆದ ಒಂದೂವರೆ ವರ್ಷಗಳಿಂದ ನಿರಂತರವಾಗಿ ಯಡಿಯೂರಪ್ಪ ಮತ್ತು ಅವರ ಕುಟುಂಬದ ಮೇಲೆ ವಾಗ್ದಾಳಿ ಮಾಡುತ್ತಿದ್ದಾರೆ. ಯತ್ನಾಳ್ ಮಾದರಿಯಲ್ಲಿ ಯಾರಾದರೂ ಬಿ.ಎಲ್. ಸಂತೋಷ್ ಅವರನ್ನು ಬಹಿರಂಗವಾಗಿ ಟೀಕಿಸಿದ್ದರೆ ಶಿಸ್ತಿನ ಹೆಸರಲ್ಲಿ ಎಂದೋ ಉಚ್ಚಾಟಿಸುತ್ತಿದ್ದರು. ಹಾಗಾದರೆ ಬಸನಗೌಡ ಯತ್ನಾಳ್ ಮೇಲೆ ಇಲ್ಲಿಯವರೆಗೆ ಯಾಕೆ ಕ್ರಮ ಜರುಗಿಸಲಿಲ್ಲ? ಅಷ್ಟಕ್ಕೂ ಬಸನಗೌಡ ಪಾಟೀಲ್ ಯತ್ನಾಳ್ ವಿಶ್ವಾಸಾರ್ಹತೆ ಹೊಂದಿರುವ ಜನನಾಯಕನೇ ಅಲ್ಲ. ಕಳೆದ ವಿಧಾನಸಭಾ ಉಪ ಚುನಾವಣೆಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್, ಬಸವರಾಜ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿಯನ್ನು ಗೆಲ್ಲಿಸಿಕೊಳ್ಳುವ ಹೊಣೆ ಹೊತ್ತಿದ್ದರು. ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಲಿಂಗಾಯತ ಉಪ ಪಂಗಡವಾದ ಪಂಚಮಸಾಲಿ ಸಮುದಾಯದ ಮತದಾರರು ಗಣನೀಯ ಪ್ರಮಾಣದಲ್ಲಿ ಇದ್ದಾರೆ. ಬಸನಗೌಡ ಪಾಟೀಲ್ ಕೂಡಾ ಪಂಚಮಸಾಲಿ ನಾಯಕ. ಯತ್ನಾಳ್ ಮೇಲೆ ಪಂಚಮಸಾಲಿ ಸಮುದಾಯಕ್ಕೆ ಸಂಪೂರ್ಣ ನಂಬಿಕೆ ಇದ್ದಿದ್ದರೆ, ಭರತ್ ಬೊಮ್ಮಾಯಿಗೆ ಮತ ನೀಡುತ್ತಿದ್ದರು. ಬಸವರಾಜ ಬೊಮ್ಮಾಯಿಯ ಅವಕಾಶವಾದಿ ರಾಜಕಾರಣದಿಂದ ಬೇಸತ್ತ ಶಿಂಗ್ಗಾವಿ ಪಂಚಮಸಾಲಿ ಮತದಾರರು ಕಾಂಗ್ರೆಸ್ ಅಭ್ಯರ್ಥಿ ಪಠಾಣ್‌ಗೆ ಬೆಂಬಲಿಸಿದ್ದರು. ಅಂದರೆ ಬಸನಗೌಡ ಪಾಟೀಲ್ ಯತ್ನಾಳ್ ಪಂಚಮಸಾಲಿ ಮತದಾರರನ್ನು ಪ್ರಭಾವಿಸುವಷ್ಟು ವರ್ಚಸ್ಸು ಪಡೆದಿಲ್ಲ ಎಂಬುದು ಸಾಬೀತಾಯಿತು. ಹಾವೇರಿ ಜಿಲ್ಲೆಯ ಪಂಚಮಸಾಲಿ ಮತದಾರರನ್ನು ಪ್ರಭಾವಿಸುವುದು ಒತ್ತಟ್ಟಿಗಿರಲಿ, ಸ್ವತಃ ವಿಜಯಪುರ ಜಿಲ್ಲೆಯ ಪಂಚಮಸಾಲಿ ಸಮುದಾಯ ಬಸನಗೌಡರ ಮಾತು ಕೇಳುವ ಸ್ಥಿತಿಯಲ್ಲಿ ಇಲ್ಲ. ಕೈಗಾರಿಕಾ ಮಂತ್ರಿ ಎಂ.ಬಿ. ಪಾಟೀಲ್ ವಿಜಯಪುರ ಜಿಲ್ಲೆಯ ಬಬಲೇಶ್ವರ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. ಅಲ್ಲಿ ಪಂಚಮಸಾಲಿ ಸಮುದಾಯದ ಸಂಖ್ಯಾ ಬಾಹುಳ್ಯವಿದೆ. ಬಸನಗೌಡ ಪಾಟೀಲ್ ಯತ್ನಾಳ್‌ಗೆ ಪಂಚಮಸಾಲಿ ಸಮುದಾಯದ ಮೇಲೆ ಸಂಪೂರ್ಣ ಹಿಡಿತ ಇದ್ದಿದ್ದರೆ, ಎಂ.ಬಿ. ಪಾಟೀಲ್ ಗೆಲ್ಲಲು ಸಾಧ್ಯವೇ ಇಲ್ಲ. ಆ ಮತಕ್ಷೇತ್ರದಲ್ಲಿ ಎಂ.ಬಿ. ಪಾಟೀಲ್‌ರ ಕೂಡು ಒಕ್ಕಲಿಗ ಸಮುದಾಯ ಇಲ್ಲವೇ ಇಲ್ಲ. ವಿಜಯಪುರ ಜಿಲ್ಲೆಯ ಪಂಚಮಸಾಲಿ ಸಮುದಾಯ ಬಸನಗೌಡ ಪಾಟೀಲ್ ಯತ್ನಾಳ್ ಅವರ ನಿಯಂತ್ರಣದಲ್ಲಿ ಇದ್ದಿದ್ದರೆ ಆ ಜಿಲ್ಲೆಯಲ್ಲಿ ಒಬ್ಬನೇ ಒಬ್ಬ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲು ಸಾಧ್ಯವಾಗುವುದಿಲ್ಲ.

ವಿಜಯಪುರ ಜಿಲ್ಲೆಯ ಪಂಚಮಸಾಲಿ ಸಮುದಾಯದ ಮೇಲೆ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಹಿಡಿತ ಇದ್ದಿದ್ದರೆ ಆತ ಜೆಡಿಎಸ್ ಅಭ್ಯರ್ಥಿಯಾಗಿಯೂ ಗೆಲುವು ಸಾಧಿಸಬೇಕಿತ್ತು. ಬಿಜೆಪಿ ಹೊರತು ಪಡಿಸಿ ಯತ್ನಾಳ್‌ಗೆ ಅಸ್ತಿತ್ವವೇ ಇಲ್ಲ. ವಿಜಯಪುರ ಜಿಲ್ಲೆಯ ಬಿಜೆಪಿ ಘಟಕದ ಸುರೇಶ್ ಬಿರಾದಾರ್ ಮುಂತಾದವರು ಪಂಚಮಸಾಲಿ ಸಮುದಾಯಕ್ಕೆ ಸೇರಿದ್ದರೂ ಅವರು ಯಾರೂ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಇಷ್ಟ ಪಡುವುದಿಲ್ಲ.

ಸ್ವಂತ ಜಿಲ್ಲೆಯ ಪಂಚಮಸಾಲಿ ಸಮುದಾಯದ ಪ್ರೀತಿ ವಿಶ್ವಾಸಕ್ಕೆ ಪಾತ್ರನಾಗದ ವ್ಯಕ್ತಿ ಅದು ಹೇಗೆ ಲಿಂಗಾಯತ ಸಮುದಾಯದ ನಾಯಕನಾಗಬಲ್ಲ? ಅದು ಹೇಗೆ ಹಿಂದೂ ಹುಲಿಯಾಗಬಲ್ಲ? ಕರ್ನಾಟಕದ ಲಿಂಗಾಯತ ಸಮುದಾಯದಲ್ಲಿ ಪಂಚಮಸಾಲಿ ಸಮುದಾಯದ ಸಂಖ್ಯಾ ಬಲ ಜಾಸ್ತಿ ಇದೆ. ಆ ಸಮುದಾಯಕ್ಕೆ ಸಮರ್ಥ ನಾಯಕ ದೊರೆತಿಲ್ಲ. ಬಸನಗೌಡ ಪಾಟೀಲ್ ಯತ್ನಾಳ್‌ಗೆ ದೊರೆತ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡು ಆ ಸಮುದಾಯದ ಹಿತ ಕಾಪಾಡಿದ್ದರೆ ಈತನನ್ನು ಅವರು ನಾಯಕನಾಗಿ ಸ್ವೀಕರಿಸುವ ಸಾಧ್ಯತೆ ಇತ್ತು. ಅಷ್ಟಕ್ಕೂ ಬಸನಗೌಡ ಪಾಟೀಲ್‌ಗೆ ಪಂಚಮಸಾಲಿ ಸಮುದಾಯದ ಬಗ್ಗೆ, ವಿಜಯಪುರ ಜಿಲ್ಲೆಯ ಬಗ್ಗೆ ವಿಶೇಷ ಕಾಳಜಿಯೇನೂ ಇಲ್ಲ.ಜಿಲ್ಲೆಯ ಸಿದ್ದೇಶ್ವರ ಬ್ಯಾಂಕನ್ನು ತನ್ನ ಸುಪರ್ದಿಯಲ್ಲಿ ಇಟ್ಟುಕೊಂಡು ಈತ ಜೀವನದುದ್ದಕ್ಕೂ ಸ್ವಾರ್ಥ ರಾಜಕಾರಣ ಮಾತ್ರ ಮಾಡಿದ್ದಾರೆ. ಪಂಚಮಸಾಲಿ ಸಮುದಾಯದ ಒಬ್ಬ ಯುವ ನಾಯಕನನ್ನು ಯತ್ನಾಳ್ ಬೆಳೆಸಿದ ನಿದರ್ಶನ ದೊರೆಯುವುದಿಲ್ಲ. ಈತನ ಶಿಕ್ಷಣ ಸಂಸ್ಥೆಯಲ್ಲಿ ಬಡವರಿಗೆ, ಪಂಚಮಸಾಲಿ ಸಮುದಾಯದ ಬಡ ಮಕ್ಕಳಿಗೂ ಪ್ರವೇಶ ದೊರೆಯುವುದಿಲ್ಲ. ಹಿಂದೂ ಧರ್ಮದ ಬಡವರಿಗೆ ಇಲ್ಲಿ ಕಿಮ್ಮತ್ತಿಲ್ಲ. ಹಣ ಉಳ್ಳ ಶ್ರೀಮಂತರ ಮಕ್ಕಳಿಗೆ ಇಲ್ಲಿ ಪ್ರವೇಶ ನೀಡಲಾಗುತ್ತದೆ. ಬಸನಗೌಡ ಪಾಟೀಲ್ ಯತ್ನಾಳ್ ಪ್ರಾಮಾಣಿಕನಂತೂ ಅಲ್ಲವೇ ಅಲ್ಲ. ಪ್ರತೀ ಚುನಾವಣೆಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಹೆಚ್ಚು ಹಣ ಖರ್ಚು ಮಾಡಿಕೊಳ್ಳುವುದು ಗೋವಾ, ಮುಂಬೈಗೆ ವಲಸೆ ಹೋದ ಮತದಾರರನ್ನು ಕರೆಸಿ ಮತ ಹಾಕಿಸಿಕೊಳ್ಳಲು. ಈಹೊತ್ತಿಗೂ ಬಸನಗೌಡ ಪಾಟೀಲ್ ಯತ್ನಾಳ್ ಗೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲ್ಲುವ ಸಾಮರ್ಥ್ಯ ಇಲ್ಲ. ಕೇಂದ್ರದಲ್ಲಿ ಮಂತ್ರಿಯಾಗಿ ಕಾರ್ಯನಿರ್ವಹಿಸುವ ಅವಕಾಶ ಪಡೆದರೂ ಬಸನಗೌಡ ಬುದ್ಧಿ ಮಾತ್ರ ಬೆಳೆಸಿಕೊಳ್ಳಲಿಲ್ಲ. ಆಯವ್ಯಯದ ಮೇಲೆ ನಡೆಯುವ ಚರ್ಚೆಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಒಂದೇ ಒಂದು ಬಾರಿ ಗಂಭೀರವಾಗಿ ಮಾತನಾಡಿದ ನಿದರ್ಶನ ಸಿಗುವುದಿಲ್ಲ. ರಾಜ್ಯದ ನೀರಾವರಿ ಸೇರಿದಂತೆ ಯಾವ ಸಮಸ್ಯೆ ಮೇಲೆಯೂ ಬೆಳಕು ಚೆಲ್ಲುವ ಮಾತುಗಳನ್ನಾಡಿದ ಉದಾಹರಣೆ ಇಲ್ಲ. ಹುಂಬನ ತರಹ ಮಾತಾಡಿ ಚೆಪ್ಪಾಳೆ ಗಿಟ್ಟಿಸಿಕೊಳ್ಳುವುದರಲ್ಲೇ ತೃಪ್ತಿ ಪಟ್ಟುಕೊಂಡಿದ್ದಾರೆ.

ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಈ ಕ್ಷಣವೇ ಪಕ್ಷದಿಂದ ಹೊರಗೆ ಹಾಕಿದರೂ ಚುನಾವಣಾ ಫಲಿತಾಂಶದ ಮೇಲೆ ಕಿಂಚಿತ್ತೂ ಪರಿಣಾಮ ಬೀರುವುದಿಲ್ಲ. ಬಸನಗೌಡ ಪಾಟೀಲ್ ಮಾತ್ರವಲ್ಲ, ಬಿ.ವೈ. ವಿಜಯೇಂದ್ರ, ಆರ್. ಅಶೋಕ್, ಸಿ.ಟಿ. ರವಿ, ಅರವಿಂದ್ ಲಿಂಬಾವಳಿ, ಕುಮಾರ ಬಂಗಾರಪ್ಪ, ಸುನೀಲ್ ಕುಮಾರ್, ರೇಣುಕಾಚಾರ್ಯ, ಬಿ.ಪಿ. ಹರೀಶ್ ಸೇರಿದಂತೆ ಯಾರನ್ನೇ ಪಕ್ಷದಿಂದ ಹೊರ ಹಾಕಿದರೂ ಪಕ್ಷಕ್ಕೆ ಹಾನಿಯಾಗುವುದಿಲ್ಲ. ಬೆಳಗಾವಿ ಜಿಲ್ಲೆಯಲ್ಲಿ ರಮೇಶ್ ಜಾರಕಿಹೊಳಿ ಅವರಿಗೆ ತುಸು ಪ್ರಭಾವ ಇದೆ. ರಮೇಶ್ ಜಾರಕಿಹೊಳಿ ಅವರಿಗೆ ಹೊರ ಹಾಕಿದರೂ ಸ್ವಂತ ಬಲದ ಮೇಲೆ ಗೆಲ್ಲುವ ಸಾಮರ್ಥ್ಯ ಇದೆ. ಉಳಿದೆಲ್ಲ ನಾಯಕರು ಈಶ್ವರಪ್ಪ ತರಹ ಠುಸ್ ಪಟಾಕಿಯೇ.

ಲಿಂಗಾಯತ ಮತದಾರರ ಮೇಲೆ ಈಗಲೂ ಯಡಿಯೂರಪ್ಪ ಪ್ರಭಾವ ಹೊಂದಿದ್ದಾರೆ. ಲಿಂಗಾಯತರು ಹೊರತು ಪಡಿಸಿಯೂ ಬೇರೆ ಸಮುದಾಯದ ಮತ ಸೆಳೆಯುವ ಶಕ್ತಿಯೂ ಅವರಿಗಿದೆ. ವಿಜಯೇಂದ್ರ ಸದ್ಯ ಹಾರಾಡುತ್ತಿರುವುದು ಅಪ್ಪನ ಬಾಹುಬಲದ ಮೇಲೆಯೇ. ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷನಾಗಿ ಹೆಚ್ಚು ಕಡಿಮೆ ಒಂದು ವರ್ಷ ಆಗುತ್ತಾ ಬಂತು. ಈಗಲೂ ಲಿಂಗಾಯತ ಸಮುದಾಯದ ಪ್ರೀತಿಗೆ ಪಾತ್ರನಾಗಲು ಸಾಧ್ಯವಾಗಿಲ್ಲ. ಉಳಿದ ಸಮುದಾಯದ ಮತದಾರರ ವಿಶ್ವಾಸ ಗಳಿಸುವುದು ದೂರದ ಮಾತು. ಸಂಘಟನಾತ್ಮಕವಾಗಿಯೂ ವಿಜಯೇಂದ್ರ ಪಕ್ಷದ ಮೇಲೆ, ರಾಜ್ಯದ ಎಲ್ಲ ಘಟಕಗಳ ಮೇಲೆ ಸಂಪೂರ್ಣ ಹಿಡಿತ ಸಾಧಿಸಿಲ್ಲ. ವಿಜಯೇಂದ್ರ ನಂಬಿಕೊಂಡಿರುವುದು ಅಪ್ಪನ ನಾಮ ಬಲ. ಕರ್ನಾಟಕದ ಬಗೆಗಿನ ವಿಜಯೇಂದ್ರ ತಿಳುವಳಿಕೆ ಇನ್ನೂ ಕೆಳಮಟ್ಟದಲ್ಲಿದೆ. ಬಜೆಟ್ ಬಗೆಗಿನ ಆತನ ತಿಳುವಳಿಕೆ ಏನೇನೂ ಸಾಲದು. ಆದರೆ ವಿಜಯೇಂದ್ರ ಬಸನಗೌಡ ಪಾಟೀಲ್ ಹಾಗೆ ಹುಂಬನಂತೆ ಮಾತನಾಡುವುದಿಲ್ಲ. ಜಾಣನ ಹಾಗೆ ನಡೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ, ಆದರೆ ಅವರಲ್ಲಿ ದುರಹಂಕಾರವೇ ಎದ್ದು ಕಾಣುವಂತಾಗಿದೆ.

ವಿಜಯೇಂದ್ರ ಅಪ್ಪನ ನಾಮ ಬಲ ನಂಬಿ ರಾಜಕಾರಣ ಮಾಡಿದಂತೆ, ಬಸನಗೌಡ ಪಾಟೀಲ್ ಯತ್ನಾಳ್ ಬಿ.ಎಲ್. ಸಂತೋಷ್ ಬೆಂಬಲ ಅವಲಂಬಿಸಿ ಅಡ್ಡಾದಿಡ್ಡಿ ಬಾಣ ಬಿಡುತ್ತಿದ್ದಾರೆ. ವಿಜಯೇಂದ್ರ, ಬಸನಗೌಡ ಎಷ್ಟೇ ಕಿತ್ತಾಡಿದರೂ ಅದು ಮತದಾರರ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ. ಯಾಕೆಂದರೆ ಆ ಇಬ್ಬರಿಗೂ ಮತದಾರರ ಮೇಲೆ ಹೆಚ್ಚಿನ ಹಿಡಿತವಿಲ್ಲ. ಮತದಾರರ ಮೇಲೆ ಪ್ರಭಾವ ಇರುವುದು ಯಡಿಯೂರಪ್ಪ ಅವರಿಗೆ. ಯಡಿಯೂರಪ್ಪ ಬಗ್ಗೆ ಬಸನಗೌಡ ಪಾಟೀಲ್ ಯತ್ನಾಳ್ ಕಿರುಚಾಡಿದಷ್ಟೂ ಪಕ್ಷದ ಮೇಲೆ ಅಡ್ಡ ಪರಿಣಾಮ ಬಿರುತ್ತದೆ. ಪಕ್ಷದ ಒಳಗೆ ಮತ್ತು ಹೊರಗೆ ವಿಜಯೇಂದ್ರ ಅವರಿಗೆ ದೊಡ್ಡ ಮಟ್ಟದ ಬೆಂಬಲ ಇಲ್ಲ. ಆದರೆ ಯಡಿಯೂರಪ್ಪ ವಿಷಯದಲ್ಲಿ ಈಗಲೂ ಪಕ್ಷದ ಒಳಗೆ ಹಲವರಿಗೆ ಗೌರವ ಇದೆ. ಜನಸಮೂಹ ಯಡಿಯೂರಪ್ಪ ಅವರನ್ನು ಮಾತ್ರ ನಂಬುತ್ತದೆ. ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಮತ ತಂದು ಕೊಡುವ ಬಹು ದೊಡ್ಡ ಶಕ್ತಿಯಾಗಿದ್ದಾರೆ. ಮತ ತಂದು ಕೊಡುವ ಶಕ್ತಿಯನ್ನೇ ದುರ್ಬಲಗೊಳಿಸಿದರೆ ಪಕ್ಷದ ಭವಿಷ್ಯ ಸಹಜವಾಗಿ ಮಂಕಾಗುತ್ತದೆ. ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಸಹಿಸಿಕೊಂಡಷ್ಟು ಪಕ್ಷ ಹೆಚ್ಚು ಮುಜುಗರ ಎದುರಿಸಬೇಕಾಗುತ್ತದೆ. ವಿಜಯೇಂದ್ರ ಗುಣ ಸ್ವಭಾವಕ್ಕೆ ಮದ್ದು ಅರೆಯುವುದು ಎಷ್ಟು ಮುಖ್ಯವೋ ಬಸನಗೌಡ ಯತ್ನಾಳ್ ಅವರಂಥ ಪಕ್ಷವಿರೋಧಿ ವ್ಯಕ್ತಿಯನ್ನು ಕ್ಷಮಿಸುವುದೂ ಅಪಾಯಕಾರಿಯೆ. ಮುಂದೊಂದು ದಿನ ಎಲ್ಲರೂ ಬಸನಗೌಡ ಯತ್ನಾಳ್ ಅವರ ಹಾದಿ ತುಳಿಯಬಹುದು. ಬಿ.ಎಲ್. ಸಂತೋಷ್ ಅವರಿಗೂ ಮುಂದೊಂದು ದಿನ ಯತ್ನಾಳ್‌ರನ್ನು ನಿಯಂತ್ರಿಸುವುದು ಕಷ್ಟವಾಗಬಹುದು. ಭಾರತೀಯ ಜನತಾ ಪಕ್ಷವನ್ನು ಶಿಸ್ತಿನ ಪಕ್ಷ ಎಂದು ಮತದಾರರು ಮತ್ತೆ ನಂಬಬೇಕೆಂದರೆ ಮೊದಲು ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಹೊರ ದಬ್ಬಬೇಕು. ಅಂಥವರಿಂದ ಪಕ್ಷಕ್ಕೆ ನಷ್ಟವೇ ಹೊರತು ಲಾಭವಿಲ್ಲ. ಒಂದು ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷನನ್ನು ಹಲವು ಬಗೆಯಲ್ಲಿ ನಿಯಂತ್ರಿಸಬಹುದು. ಆದರೆ ಅರಾಜಕ ಮನಸ್ಥಿತಿಯ ಬಸನಗೌಡ ಪಾಟೀಲ್ ಯತ್ನಾಳ್‌ರಂತಹ ಹುಂಬರನ್ನು ನಿಯಂತ್ರಿಸಲು ಆಗುವುದಿಲ್ಲ. ಪಕ್ಷದ ಸಂಘಟನೆಯೊಳಗೆ ಗುಣಾತ್ಮಕ ಬದಲಾವಣೆ ತರುವ ಇರಾದೆ ಇದ್ದರೆ ಬಿಜೆಪಿ ಹೈಕಮಾಂಡ್ ಈ ಕ್ಷಣವೇ ಬಸನಗೌಡ ಯತ್ನಾಳ್ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು. ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕ್ರಮ ಜರುಗಿಸದಿದ್ದರೆ, ಕೂಗುಮಾರಿಯನ್ನು ಬಳಸಿಕೊಂಡು ಪಕ್ಷದ ಮೇಲೆ ಹಿಡಿತ ಸಾಧಿಸುವ ಕೆಲ ವ್ಯಕ್ತಿಗಳು ಬಿಜೆಪಿ ಹೈಕಮಾಂಡ್‌ಗೆ ಅನಿವಾರ್ಯವಾಗಿದ್ದಾರೆ ಎಂದೇ ಅರ್ಥ ಮಾಡಿಕೊಳ್ಳಬೇಕಾಗುತ್ತದೆ.

ಈ ಹೊತ್ತು ಭಾರತೀಯ ಜನತಾ ಪಕ್ಷ, ಭಾರತೀಯ ಜಗಳಗಂಟರ ಪಕ್ಷವಾಗಿ ಮಾರ್ಪಾಡಾಗಿದ್ದು ದುರಂತ. ಮಧ್ಯಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌಹಾಣ್, ರಾಜಸ್ಥಾನದಲ್ಲಿ ವಸುಂಧರಾ ರಾಜೇ, ಛತ್ತೀಸ್‌ಗಡದಲ್ಲಿ ರಮಣ ಸಿಂಗ್ ಅವರಂಥ ನಾಯಕರನ್ನು ಅಂಚಿಗೆ ತಳ್ಳುವ ಶಕ್ತಿ ಹೊಂದಿರುವ ಬಿಜೆಪಿ ಕರ್ನಾಟಕದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಅವರ ವಿರುದ್ಧ ಕ್ರಮ ಜರುಗಿಸಲು ಹಿಂದೇಟು ಹಾಕುತ್ತಿರುವುದು ಸಂತೋಷ್ ಬಲಕ್ಕೆ ಹೈಕಮಾಂಡ್ ಬಾಗಿದಂತೆ ಕಾಣುತ್ತದೆ. ಬಿಜೆಪಿಯ ಬೀದಿ ರಂಪ ಕಂಡ ಜನತೆ ಆ ಪಕ್ಷದ ಬಗ್ಗೆ ಹೇಸಿಗೆ ಪಟ್ಟುಕೊಳ್ಳುವಂತಾಗಿದೆ. ಯತ್ನಾಳ್ ಪಕ್ಷದಲ್ಲಿ ಮುಂದುವರಿದಷ್ಟೂ ದಿನ ಬಿಜೆಪಿ ಅಧಿಕಾರದ ಕನಸು ಕಾಣಲು ಸಾಧ್ಯವಾಗುವುದಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಡಾ. ರಾಜಶೇಖರ ಹತಗುಂದಿ

contributor

Similar News