ಮುಸ್ಲಿಮ್ ವಿರೋಧಿ ಯತ್ನಾಳ್ ಬೆನ್ನಿಗೆ ಪಂಚಮಸಾಲಿ ಸ್ವಾಮೀಜಿ

Update: 2025-04-05 11:24 IST
ಮುಸ್ಲಿಮ್ ವಿರೋಧಿ ಯತ್ನಾಳ್ ಬೆನ್ನಿಗೆ ಪಂಚಮಸಾಲಿ ಸ್ವಾಮೀಜಿ
  • whatsapp icon

ಭಾರತೀಯ ಜನತಾ ಪಕ್ಷದಿಂದ ಉಚ್ಚಾಟಿತರಾದ ಕೂಗು ಮಾರಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಆರೆಸ್ಸೆಸ್ ಮನಸ್ಥಿತಿಯ ಸ್ವಾಮೀಜಿಗಳು ಬೆಂಬಲಿಸಿದರೆ ಆಶ್ಚರ್ಯ ಪಡುವ ಅಗತ್ಯವಿಲ್ಲ. ಸಂಘ ಪರಿವಾರವನ್ನು ಕಾಯಾ, ವಾಚಾ, ಮನಸಾ ಬೆಂಬಲಿಸುವ ಅನೇಕ ಸ್ವಾಮೀಜಿಗಳು ಕರ್ನಾಟಕದಲ್ಲಿ ಇದ್ದಾರೆ. ಅವರೆಲ್ಲ ಸಂಘ ಪರಿವಾರದ ತತ್ವ ಸಿದ್ಧಾಂತಗಳನ್ನು ಮೊದಲಿಂದಲೂ ತಾತ್ವಿಕವಾಗಿ ಸ್ವೀಕರಿಸಿದವರು. ಜೇವರ್ಗಿ ತಾಲೂಕಿನ ಆಂದೋಲ ಸ್ವಾಮೀಜಿ ಅಂಥವರಲ್ಲಿ ಒಬ್ಬರು. ಅವರು ವಿಶ್ವ ಹಿಂದೂ ಪರಿಷತ್ತಿನ ಪದಾಧಿಕಾರಿಯೂ ಆಗಿದ್ದಾರೆ.

ಕೆಲವು ಸ್ವಾಮೀಜಿಗಳು ಅಂತರಂಗದಲ್ಲೇ ಬಿಜೆಪಿಯನ್ನು ಆರಾಧಿಸುತ್ತಾರೆ. ಆದರೆ ಬಹಿರಂಗದಲ್ಲಿ ಕಾಂಗ್ರೆಸ್ ಸೇರಿ ಎಲ್ಲ ರಾಜಕೀಯ ಪಕ್ಷಗಳ ಜೊತೆಗೆ ಉತ್ತಮ ಸಂಬಂಧ ಹೊಂದಿರುತ್ತಾರೆ. ಇನ್ನು ಬಸವ ತತ್ವವನ್ನು ತಾತ್ವಿಕವಾಗಿ ಸ್ವೀಕರಿಸಿರುವ, ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕನನ್ನಾಗಿ ಒಪ್ಪಿಕೊಂಡಿರುವ ಕೆಲವು ಸ್ವಾಮೀಜಿಗಳು ಸಂಘ ಪರಿವಾರದ ತತ್ವ ಸಿದ್ಧಾಂತದೊಂದಿಗೆ ಸಂಘರ್ಷ ನಡೆಸುತ್ತಲೇ ಇರುವವರು.

ಸಂಘ ಪರಿವಾರದ ತತ್ವ ಸಿದ್ಧಾಂತಗಳನ್ನು ತಾತ್ವಿಕವಾಗಿ ಒಪ್ಪಿಕೊಳ್ಳದ, ಬಸವಣ್ಣ ಮತ್ತು ಬಸವಾದಿ ಶರಣರ ತತ್ವ ಸಿದ್ಧಾಂತಗಳನ್ನು ಆತ್ಯಂತಿಕವಾಗಿ ಗೌರವಿಸುವ, ಅಷ್ಟು ಮಾತ್ರವಲ್ಲ ಒಂದು ಕಾಲದಲ್ಲಿ ಎಡಪಂಥೀಯ ಸಂಘಟನೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿಯವರು ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬೆಂಬಲಿಸುತ್ತಿರುವುದು ಅತ್ಯಂತ ದುರದೃಷ್ಟಕರ ಸಂಗತಿ.

ಗೌರಿ ಲಂಕೇಶ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಿದಾಗ ಅದನ್ನು ಕಟುವಾದ ಪದಗಳಲ್ಲಿ ಖಂಡಿಸಿದವರು ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ. ಅಷ್ಟು ಮಾತ್ರವಲ್ಲ, ಗೌರಿ ಲಂಕೇಶ್ ಅವರ ಅಂತಿಮ ದರ್ಶನಕ್ಕೆ ರವೀಂದ್ರ ಕಲಾ ಕ್ಷೇತ್ರದ ಆವರಣದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಉದ್ದದ ಸಾಲಿನಲ್ಲಿ ನಿಂತು ಗೌರಿ ಲಂಕೇಶ್ ಅವರ ಅಂತಿಮ ದರ್ಶನ ಪಡೆದು ಕೋಮುವಾದಿಗಳ ಹುನ್ನಾರದ ಬಗ್ಗೆ ಸಮಾನ ಮನಸ್ಕರಲ್ಲಿ ತೀವ್ರವಾದ ಆತಂಕ ವ್ಯಕ್ತಪಡಿಸಿದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಈ ವಿಶಿಷ್ಟ ಗುಣದಿಂದಲೇ ಪ್ರಗತಿಪರರು ಮತ್ತು ಸಾಹಿತಿ ಕಲಾವಿದರ ಮೆಚ್ಚುಗೆಗೆ ಪಾತ್ರರಾಗಿದ್ದರು. ಲಿಂಗಾಯತ, ಹಿಂದೂ ಧರ್ಮದ ಭಾಗವಲ್ಲ ಅದು ಪ್ರತ್ಯೇಕ ಧರ್ಮ ಎಂದು ಬಲವಾಗಿ ಪ್ರತಿಪಾದಿಸಿದವರಲ್ಲಿ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಪ್ರಮುಖರು.

ಲಿಂಗಾಯತ ಸಮುದಾಯದ ಉಪ ಪಂಗಡವಾದ ಪಂಚಮಸಾಲಿಗಳಿಗೆ ಒಂದು ಪೀಠದ ಅಗತ್ಯವಿದೆ ಎಂದು ಮೊದಲ ಪಂಚಮಸಾಲಿ ಪೀಠ ಸ್ಥಾಪಿಸಿದರು. ಆಗ ಯಾರೊಬ್ಬರೂ ಅದರಲ್ಲೂ ವಿಶೇಷವಾಗಿ ಪ್ರಗತಿಪರರು ಉಪ ಪಂಗಡದ ಪೀಠ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಲಿಲ್ಲ. ಯಾಕೆಂದರೆ, ಬಸವ ಜಯ ಮೃತ್ಯುಂಜಯ ಸ್ವಾಮೀಜಿಯವರು ಬಸವ ತತ್ವ ಅನುಯಾಯಿಗಳು ಎಂಬ ಕಾರಣಕ್ಕೆ. ಅವರು ಪಂಚಮಸಾಲಿ ಪೀಠ ಸ್ಥಾಪನೆಗೆ ಸ್ಥಳ ಆಯ್ಕೆ ಮಾಡಿಕೊಂಡಿದ್ದು ಬಸವಣ್ಣನವರ ಐಕ್ಯ ಸ್ಥಳ ಕೂಡಲ ಸಂಗಮದಲ್ಲಿ. ಎಡಪಂಥೀಯ ಸಂಘಟನೆಗಳಲ್ಲಿ ದುಡಿದ ಮತ್ತು ಬಸವ ತತ್ವವನ್ನೇ ಪ್ರಧಾನವಾಗಿ ಅವಲಂಬಿಸಿದ್ದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಉಪಪಂಗಡದ ಪೀಠ ಸ್ಥಾಪಿಸಿದರೂ ಸೈದ್ಧಾಂತಿಕವಾಗಿ ವಿಶಾಲ ಭೂಮಿಕೆಯಲ್ಲಿ ಪ್ರಜಾಸತ್ತಾತ್ಮಕ ನೆಲೆಯಲ್ಲಿ ಕಾರ್ಯ ನಿರ್ವಹಿಸುತ್ತಾರೆ ಎಂದು ಬಲವಾಗಿ ನಂಬಿದ್ದರು. ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಸರಕಾರಗಳು ಅಧಿಕಾರ ನಡೆಸಿದಾಗಲೂ ಜಯ ಮೃತ್ಯುಂಜಯ ಸ್ವಾಮೀಜಿ ತಮ್ಮ ಬಸವ ತತ್ವ ಪಾಲನೆ ಬಿಟ್ಟು ಕೊಟ್ಟಿರಲಿಲ್ಲ. ಬುದ್ಧ, ಬಸವ, ಅಂಬೇಡ್ಕರ್ ಮತ್ತು ಕುವೆಂಪು ಅವರ ತತ್ವ ಆದರ್ಶಗಳನ್ನೇ ಹೋದಲ್ಲೆಲ್ಲ ಪ್ರತಿಪಾದಿಸುತ್ತಿದ್ದರು.

ಹಾಗೆ ನೋಡಿದರೆ ಪಂಚಮಸಾಲಿ ಸಮುದಾಯ ಕೃಷಿಯನ್ನೇ ಪ್ರಧಾನವಾಗಿ ಅವಲಂಬಿಸಿದ ಸಮಾಜ. ಪಂಚಮಸಾಲಿ ಸಮುದಾಯದ ಮೇಲೆ ಬಸವಣ್ಣ ಅವರಿಗಿಂತ ಪಂಚ ಪೀಠಗಳ ಪ್ರಭಾವ ಹೆಚ್ಚಾಗಿತ್ತು. ಆ ಸಮುದಾಯದ ಮೇಲೆ ಬುದ್ಧ, ಬಸವ, ಅಂಬೇಡ್ಕರ್ ಮತ್ತು ಕುವೆಂಪು ಅವರ ಬೆಳಕು ಬೀಳುವಂತೆ ಮಾಡಿದವರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ. ಪಂಚಮಸಾಲಿ ಪೀಠ ಸ್ಥಾಪಿಸಿ ಸಂಘಟನೆ ಆರಂಭಿಸಿದ್ದರೂ ಉಳಿದ ಜಾತಿ ಮತ್ತು ಉಪಜಾತಿಗಳ ಬಗ್ಗೆ ಅಸಹನೆ ಮೂಡಿಸುತ್ತಿರಲಿಲ್ಲ. ಪಂಚಮಸಾಲಿ ಸಮುದಾಯ ಮೂಲತಃ ರೈತಾಪಿ ಸಮುದಾಯವಾಗಿದ್ದರಿಂದ ಪ್ರತೀ ಹಳ್ಳಿಯ ಮುಸ್ಲಿಮ್ ಸಮುದಾಯದ ಜೊತೆಗೆ ಅತ್ಯುತ್ತಮ ಸಂಬಂಧ ಹೊಂದಿತ್ತು. ಪಂಚಮಸಾಲಿ ಸಮುದಾಯ ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ವ್ಯಾಪಿಸಿದೆ. ಲಿಂಗಾಯತ ಸಮುದಾಯದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಉಪ ಪಂಗಡ. ಆದರೆ ರಾಜಕೀಯವಾಗಿ ಅಷ್ಟೇನು ಪ್ರಬಲವಾಗಿ ಬೆಳೆದಿಲ್ಲ. ಭೂ ಸುಧಾರಣೆ ಕಾಯ್ದೆ ಬರುವ ಮುಂಚೆ ಪಂಚಮಸಾಲಿ ಸಮುದಾಯದ ಕೆಲವು ಮನೆತನಗಳು ನೂರಾರು ಎಕರೆ ಜಮೀನು ಹೊಂದಿದ್ದವು. ಆದರೆ ಕಾಲಾಂತರದಲ್ಲಿ ಆ ಜಮೀನು ಕರಗಿ ಅಣ್ಣ ತಮ್ಮಂದಿರಲ್ಲಿ ಪಾಲು ಆಗಿ ಒಂದೋ ಎರಡೋ ಎಕರೆಗೆ ಬಂದು ನಿಂತಿದೆ. ವ್ಯಾಪಾರ ವಹಿವಾಟು ಮತ್ತು ರಾಜಕಾರಣ ಅವಲಂಬಿಸಿದ ಪಂಚಮಸಾಲಿ ಕುಟುಂಬಗಳು ಅತ್ಯುತ್ತಮ ಸ್ಥಿತಿಯಲ್ಲಿ ಇವೆ. ಆದರೆ ಕೃಷಿಯೊಂದನ್ನೇ ಅವಲಂಬಿಸಿರುವ ಬಹುಪಾಲು ಕುಟುಂಬಗಳು ಬಡತನದ ಬೇಗೆಯಲ್ಲಿ ಬಳಲುತ್ತಿವೆ. ಆದರೆ ಪಂಚಮಸಾಲಿ ಸಮುದಾಯ ಯಾವತ್ತೂ ಪ್ರತೀ ಹಳ್ಳಿ, ಪಟ್ಟಣ, ನಗರಗಳ ಮುಸ್ಲಿಮ್ ಸಮುದಾಯದ ಜೊತೆಗೆ ಅತ್ಯುತ್ತಮ ಬಾಂಧವ್ಯ ಹೊಂದಿದೆ. ಜಾತ್ರೆ ಮತ್ತು ದೈವಗಳ ಮೂಲಕ ಆ ಎರಡೂ ಸಮುದಾಯಗಳ ಸಂಬಂಧ ಗಟ್ಟಿಗೊಳ್ಳುತ್ತಲೇ ಇದೆ.ಹಾಗೆ ನೋಡಿದರೆ, ಪಂಚಮಸಾಲಿ ರಾಜಕಾರಣಿಗಳ ಗೆಲುವಿನಲ್ಲಿ ಮುಸ್ಲಿಮ್ ಸಮುದಾಯದ ಪತ್ರ ದೊಡ್ಡದಿರುತ್ತದೆ. ಜನತಾ ಪಕ್ಷ, ಜನತಾ ದಳ, ಕಾಂಗ್ರೆಸ್ ಪಕ್ಷಗಳಿಂದ ಸ್ಪರ್ಧಿಸುವ ಪಂಚಮಸಾಲಿ ಅಭ್ಯರ್ಥಿಗಳಿಗೆ ಮುಸ್ಲಿಮ್ ಸಮುದಾಯದ ಬೆಂಬಲ ಯಾವಾಗಲೂ ದೊರೆಯುತ್ತಿತ್ತು. ಅಷ್ಟೇ ಯಾಕೆ, ಎಷ್ಟೋ ಜನ ಬಿಜೆಪಿಯ ಪಂಚಮಸಾಲಿ ಅಭ್ಯರ್ಥಿಗಳು ಮುಸ್ಲಿಮ್ ಸಮುದಾಯದ ಮತ ಪಡೆದ ನಿದರ್ಶಗಳಿವೆ.

ಬಸವ ಜಯಮೃತ್ಯುಂಜಯ ಸ್ವಾಮೀಜಿ ಪಂಚಮಸಾಲಿ ಪೀಠಕ್ಕೆ ಬಂದ ಮೇಲೆ ಅವರೂ ಮುಸ್ಲಿಮ್ ಸಮುದಾಯದ ಜೊತೆಗೆ ಅತ್ಯುತ್ತಮ ಸಂಬಂಧ ಹೊಂದಿದ್ದರು. ‘‘ನನಗೆ ಮುಸ್ಲಿಮ್ ಸಮುದಾಯದ ಮತಗಳು ಬೇಡ’’ ಎಂದು ಬಹಿರಂಗವಾಗಿ ಘೋಷಿಸಿದ ಏಕೈಕ ಪಂಚಮಸಾಲಿ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್. ಬಿಜೆಪಿಯ ಹಿರಿಯ ಮುಖಂಡ ಮುರುಗೇಶ್ ನಿರಾಣಿಯವರು ಒಮ್ಮೆಯೂ ತನಗೆ ಮುಸ್ಲಿಮ್ ವೋಟು ಬೇಡ ಎಂದು ಹೇಳಿಲ್ಲ. ಅಷ್ಟು ಮಾತ್ರವಲ್ಲ ಮುಸ್ಲಿಮ್ ವಿರೋಧಿ ಮಾತುಗಳನ್ನು ಆಡಿಲ್ಲ. ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದ ಪಂಚಮಸಾಲಿ ಪೀಠ ಅಸ್ತಿತ್ವಕ್ಕೆ ಬರಲು ಮುರುಗೇಶ್ ನಿರಾಣಿ, ವಿಜಯಾನಂದ ಕಾಶಪ್ಪನವರ ಕಾರಣರಾಗಿದ್ದರು. ಆಗ ಬಸನಗೌಡ ಪಾಟೀಲ್ ಯತ್ನಾಳ್ ಪಂಚಮಸಾಲಿ ಪೀಠದ ಹತ್ತಿರ ಸುಳಿದಿರಲಿಲ್ಲ. ನಿರಾಣಿ ಮತ್ತು ಬಸವ ಜಯಮೃತ್ಯುಂಜಯ ಸ್ವಾಮೀಜಿ ನಡುವೆ ಭಿನ್ನಾಭಿಪ್ರಾಯ ಬಂದು, ನಿರಾಣಿಯವರು ವಚನಾನಂದ ಸ್ವಾಮೀಜಿ ನೇತೃತ್ವದಲ್ಲಿ ಹರಿಹರದಲ್ಲಿ ಮತ್ತೊಂದು ಪಂಚಮಸಾಲಿ ಪೀಠ ಸ್ಥಾಪನೆಗೆ ಬೆಂಬಲ ನೀಡಿದರು. ಆಗ ಬಸನಗೌಡ ಪಾಟೀಲ್ ಯತ್ನಾಳ್ ಕೂಡಲಸಂಗಮ ಸ್ವಾಮೀಜಿಗೆ ಹತ್ತಿರವಾದರು. ಬಸವ ತತ್ವವನ್ನೇ ಪೀಠದ ಪ್ರಣಾಲಿಕೆಯನ್ನಾಗಿ ಸ್ವೀಕರಿಸಿದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಯತ್ನಾಳ್ ಅವರನ್ನು ಹತ್ತಿರ ಸೇರಿಸಿಕೊಳ್ಳುವಾಗ ಎಚ್ಚರ ವಹಿಸಬೇಕಿತ್ತು. ನಮ್ಮದು ಬಸವ ತತ್ವದ ಪೀಠ, ಇಲ್ಲಿ ‘‘ಇವನಾರವ ಇವನಾರವ’’ ಎಂದೆಣಿಸುವ ಹಾಗಿಲ್ಲ. ‘‘ಇವ ನಮ್ಮವ, ಇವ ನಮ್ಮವ’’ ಎಂದು ಭಾವಿಸಬೇಕು. ದ್ವೇಷ ಭಾಷಣ ಕೂಡದು. ಪ್ರೀತಿ ಮಾತು ಮಾತ್ರ ಆಡಬೇಕು ಎಂದು ವಾರ್ನ್ ಮಾಡಬೇಕಿತ್ತು. ಬಸನಗೌಡ ಯತ್ನಾಳ್, ವಿಜಯಾನಂದ, ಸಿ.ಸಿ. ಪಾಟೀಲ್, ಬಿ.ಆರ್. ಪಾಟೀಲ್, ಲಕ್ಷ್ಮೀ ಹೆಬ್ಬಾಳ್ಕರ್, ವಿನಯ ಕುಲಕರ್ಣಿ ಮುಂತಾದವರು ಪಂಚಮಸಾಲಿ ಪೀಠದ ಸ್ವಾಮೀಜಿ ಜೊತೆಗೆ ಹೆಜ್ಜೆ ಹಾಕುತ್ತಿದ್ದಾಗ ಯತ್ನಾಳ್ ಬಾಲ ಬಿಚ್ಚಿರಲಿಲ್ಲ. ಸ್ವಾಮೀಜಿಗೆ ಯತ್ನಾಳ್ ಅನಿವಾರ್ಯ ಎನಿಸಿದಾಗ ಬಸನಗೌಡರ ನಾಲಿಗೆಗೆ ಲಗಾಮು ಇಲ್ಲದಂತಾಯಿತು. ಅದರಲ್ಲೂ ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಅವಲಂಭಿಸಲು ಆರಂಭಿಸಿದ ಮೇಲಂತೂ ಆತನ ವರಸೆ ಸಂಪೂರ್ಣ ಬದಲಾಯಿತು. ಸ್ವಯಂ ಘೋಷಿತ ಹಿಂದೂ ಹುಲಿ ಎಂದು ಸಂಭ್ರಮಿಸತೊಡಗಿದರು. ಬಿ.ಎಸ್. ಯಡಿಯೂರಪ್ಪ ವಿರುದ್ಧ ಮಾತನಾಡುವ ಸುಪಾರಿ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ದೊರೆತ ಮೇಲೆ ಮಾಧ್ಯಮಗಳು ಅವರಿಗೆ ಹೆಚ್ಚು ಪ್ರಚಾರ ನೀಡತೊಡಗಿದವು. ಬಿಜೆಪಿಯಲ್ಲಿ ಯಡಿಯೂರಪ್ಪರನ್ನು ಮೀರಿಸುವ ನಾಯಕ ಆಗಬೇಕೆಂದರೆ, ಹಿಂದೂ ಫೈರ್ ಬ್ರಾಂಡ್ ಅನಿಸಿಕೊಳ್ಳಬೇಕು. ಹಿಂದೂ ಫೈರ್ ಬ್ರಾಂಡ್ ಆಗುವುದೆಂದರೆ ಮುಸ್ಲಿಮ್ ಸಮುದಾಯವನ್ನು, ಪ್ರಗತಿಪರರನ್ನು ಬಾಯಿಗೆ ಬಂದಂತೆ ನಿಂದಿಸುವುದು ಎಂದೇ ಭಾವಿಸಿದರು. ಹಿಂದೂ ಧರ್ಮ ಎಂದರೇನು ಎಂಬ ಹೆಸರಿನ ಮಹಾತ್ಮಾ ಗಾಂಧೀಜಿಯವರ ಪುಸ್ತಕವನ್ನು ಬಸನಗೌಡ ಪಾಟೀಲ್ ಯತ್ನಾಳ್ ಓದಲು ಅವರ ಮಾರ್ಗದರ್ಶಕರು ಸೂಚಿಸಿರುವುದಿಲ್ಲ. ರಾಮಕೃಷ್ಣ ಪರಮಹಂಸರು, ಸ್ವಾಮಿ ವಿವೇಕಾನಂದರು ಬರೆದ ಬರಹ ಓದಿದ್ದರೂ ಹಿಂದೂ ಧರ್ಮ ಪಾಲನೆಯೆಂದರೆ ಮುಸ್ಲಿಮ್ ದ್ವೇಷ ಅಲ್ಲ ಎಂಬುದು ಮನವರಿಕೆಯಾಗುತ್ತಿತ್ತು. ಅದೆಲ್ಲ ಹೋಗಲಿ ಕನಿಷ್ಠ ಪಕ್ಷ ನರೇಂದ್ರ ಮೋದಿಯವರು ಚುನಾವಣೆ ಘೋಷಣೆಯಾಗಿ ಬಳಸಿದ ‘ಸಬ್‌ಕಾ ಸಾಥ್ ಸಬ್‌ಕಾ ವಿಕಾಸ್’ ಎಂಬ ಮಾತನ್ನಾದರೂ ಗಮನಿಸಬೇಕಿತ್ತು.ಬಸನಗೌಡ ಪಾಟೀಲ್ ಯತ್ನಾಳ್ ವಿಜಯಪುರದ ಚುನಾಯಿತ ಶಾಸಕ. ಚುನಾಯಿತ ಶಾಸಕ ಎಲ್ಲಕ್ಕೂ ಮೊದಲು ಸಂವಿಧಾನಕ್ಕೆ ಬದ್ಧರಾಗಿರಬೇಕು. ಸಂವಿಧಾನಕ್ಕೆ ಬದ್ಧರಾಗಿರುವುದೆಂದರೆ, ತನ್ನ ಮತ ಕ್ಷೇತ್ರದಿಂದ ಎಲ್ಲರನ್ನೂ ಪ್ರೀತಿಸುವುದು. ಪ್ರೀತಿಸಲು ಮತ್ತು ಸಮಾನವಾಗಿ ಕಾಣಲು ಸಾಧ್ಯವಾಗದಿದ್ದರೆ ದ್ವೇಷವಂತೂ ಮಾಡಲೇಬಾರದು.

ಬಸವ ಜಯಮೃತ್ಯುಂಜಯ ಸ್ವಾಮೀಜಿಯವರ ನೇತೃತ್ವದಲ್ಲಿ ಪಂಚಮಸಾಲಿ ಮೀಸಲಾತಿ ಹೋರಾಟ ನಡೆಯುವಾಗ ಬಸನಗೌಡ ಪಾಟೀಲ್ ಯತ್ನಾಳ್ ಅದರ ಭಾಗವಾಗಿದ್ದರು. ಸ್ವಾಮೀಜಿಯವರ ಹೆಜ್ಜೆಯಲ್ಲಿ ಹೆಜ್ಜೆ ಹಾಕುತ್ತಿದ್ದರು. ಅದೇ ಸಂದರ್ಭದಲ್ಲಿ, ಯತ್ನಾಳ್ ಕನ್ನಡದ ಹಿರಿಯ ಸಾಹಿತಿ ಮತ್ತು ಪ್ರಗತಿಪರ ಚಿಂತಕ ಪ್ರೊ. ಕೆ.ಎಸ್. ಭಗವಾನ್ ಅವರ ಬಗ್ಗೆ ಕೀಳು ಮಟ್ಟದಲ್ಲಿ ನಾಲಿಗೆ ಹರಿ ಬಿಟ್ಟಿದ್ದರು. ‘‘ಭಗವಾನ್ ಮತ್ತು ಅವರಂಥ ಪ್ರಗತಿಪರ ಸಾಹಿತಿಗಳು ಮತ್ತು ಬುದ್ಧಿ ಜೀವಿಗಳಿಗೆ ಹಿಂದೂ ಧರ್ಮದ ವಿರುದ್ಧ ಮಾತನಾಡಲು ಪ್ರತೀ ತಿಂಗಳು ಹಣ ಬರುತ್ತದೆ. ಇವರೆಲ್ಲ ಕಾಂಗ್ರೆಸ್ ಏಜೆಂಟರು’’ ಎಂದು ಟೀಕಿಸಿದ್ದರು. ಆಗಲೇ ನಾನು ಬಸವ ಜಯಮೃತ್ಯುಂಜಯ ಸ್ವಾಮೀಜಿಯವರ ಜೊತೆಗೆ ಮಾತನಾಡಿ ನಿಮ್ಮ ಹೋರಾಟದ ಭಾಗವಾಗಿರುವ ಬಸನಗೌಡ ಯತ್ನಾಳ್ ಅವರಿಗೆ ಬಸವ ಸಂಸ್ಕಾರ ನೀಡಿ ಎಂದು ಹೇಳಿದ್ದೆ. ಸ್ವಾಮೀಜಿ ಬಸನಗೌಡ ಯತ್ನಾಳ್ ಅವರಿಗೆ ಬುದ್ಧಿವಾದ ಹೇಳಿದರೋ ಇಲ್ಲವೋ ಗೊತ್ತಿಲ್ಲ. ಆದರೆ ಯತ್ನಾಳ್ ಹುಚ್ಚಾಟ ಮತ್ತಷ್ಟು ಹೆಚ್ಚಾಯಿತು. ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಪರಿಷತ್ತಿನಲ್ಲಿ ಅತ್ಯಂತ ಕೆಟ್ಟ ಪದಗಳಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಮಂತ್ರಿ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ನಿಂದಿಸಿದಾಗ ಯತ್ನಾಳ್ ಅವರ ಬೆಂಬಲಕ್ಕೆ ನಿಲ್ಲಲಿಲ್ಲ. ಪಂಚಮಸಾಲಿ ಸಮುದಾಯದ ನಾಯಕ ಎಂದು ಬಿಂಬಿಸಿಕೊಳ್ಳಲು ಯತ್ನಿಸುತ್ತಿರುವ ಬಸನಗೌಡ ಪಾಟೀಲ್ ಯತ್ನಾಳ್ ತನ್ನದೇ ಸಮುದಾಯದ ಒಬ್ಬ ಮಹಿಳೆಯನ್ನು ಅತ್ಯಂತ ಕೆಟ್ಟದಾಗಿ ನಿಂದಿಸಿದಾಗಲೂ ರವಿ ಪರ ನಿಲ್ಲಲು ಹೇಗೆ ಮನಸ್ಸು ಬಂತು? ಸಿ. ಟಿ. ರವಿ ಬದಲಿಗೆ ಆ ಪದ ವಿಜಯೇಂದ್ರ ಬಾಯಲ್ಲಿ ಬಂದಿದ್ದರೆ ಬಿಜೆಪಿ ರಾಜ್ಯ ಅಧ್ಯಕ್ಷ ಸ್ಥಾನದಿಂದ ಇಳಿಸುವವರೆಗೂ ಯತ್ನಾಳ್ ವಿರಮಿಸುತ್ತಿರಲಿಲ್ಲ. ಸಿ.ಟಿ. ರವಿ, ಬಿ.ಎಲ್. ಸಂತೋಷ್ ಶಿಷ್ಯ ಆಗಿದ್ದರಿಂದ ಯತ್ನಾಳ್ ನಾಲಿಗೆ ಹೊರಳಲೇ ಇಲ್ಲ. ಬಸನಗೌಡ ಪಾಟೀಲ್ ಯತ್ನಾಳ್ ಗೆ ಪಂಚಮಸಾಲಿ ಸಮುದಾಯದ ಬಗ್ಗೆ ಪ್ರೀತಿ, ಗೌರವ ಮತ್ತು ಅಭಿಮಾನ ಇಲ್ಲವೇ ಇಲ್ಲ ಎಂಬುದು ಹೆಬ್ಬಾಳ್ಕರ್ ಪ್ರಕರಣ ಸಾಬೀತುಪಡಿಸಿತು.

ಮುಸ್ಲಿಮ್ ಸಮುದಾಯವನ್ನು ನಿಂದಿಸುವುದು, ಆ ಸಮುದಾಯದ ಹೆಣ್ಣು ಮಕ್ಕಳ ಬಗ್ಗೆ ಕೆಟ್ಟ ಪದಗಳಲ್ಲಿ ಟೀಕಿಸುವುದೇ ಹಿಂದುತ್ವ ಎಂದು ಭ್ರಮಿಸಿರುವ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಬಸವ ಜಯಮೃತ್ಯುಂಜಯ ಸ್ವಾಮೀಜಿ ಕರೆದು ಬುದ್ಧಿ ಹೇಳಬೇಕಿತ್ತು. ಇಲ್ಲ ಪಂಚಮಸಾಲಿ ಸಂಘಟನೆಯಿಂದ ಹೊರ ಹಾಕಬೇಕಿತ್ತು. ಅದ್ಯಾವುದೂ ಮಾಡದ ಜಯಮೃತ್ಯುಂಜಯ ಸ್ವಾಮೀಜಿ ಬಸನಗೌಡ ಪಾಟೀಲ್ ಯತ್ನಾಳ್ ಸಲಹೆ ಮೇರೆಗೆ ರಾಮಮಂದಿರ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಲು ಅಯೋಧ್ಯೆಗೆ ಹೋಗಿದ್ದರು. ಹರಿಹರ ಪೀಠದ ವಚನಾನಂದ ಸ್ವಾಮೀಜಿಯೂ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೋಗಿದ್ದರು. ಅವರು ಸಂಘ ಪರಿವಾರದ ಚಿಂತನಾ ಕ್ರಮವನ್ನು ಒಪ್ಪಿಕೊಂಡವರು. ಹೆಸರಿಗೆ ಬಸವಣ್ಣನವರ ಭಾವಚಿತ್ರ ಹಾಕಿಕೊಂಡವರು. ಬಸವ ತಾತ್ವಿಕತೆಯನ್ನು ಗಾಢವಾಗಿ ನಂಬಿದವರಲ್ಲ.

ಆದರೆ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮೊದಲಿಂದಲೂ ತಾನೊಬ್ಬ ಬಸವ ಅನುಯಾಯಿ ಎಂದು ಘಂಟಾಘೋಷವಾಗಿ ಹೇಳುತ್ತಾ ಬಂದವರು. ವಿಶೇಷವಾಗಿ ಪ್ರಗತಿಪರರ ವಲಯದಲ್ಲಿ ತಾನೊಬ್ಬ ಪ್ರಗತಿಪರ ಸ್ವಾಮೀಜಿ, ಬುದ್ಧ, ಬಸವ, ಅಂಬೇಡ್ಕರ್ ಮತ್ತು ಕುವೆಂಪು ತತ್ವ ಆದರ್ಶಗಳನ್ನು ಆಚರಣೆಯಲ್ಲಿ ತರುತ್ತಿರುವ ಅಥವಾ ಆಚರಣೆಯಲ್ಲಿ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವ ಸ್ವಾಮೀಜಿ ಎಂದು ಬಲವಾಗಿ ನಂಬಿಸಿದ್ದಾರೆ.

ಕ್ರಾಂತಿಕಾರಿ ಬಸವಣ್ಣ ಮತ್ತು ಕೋಮುವಾದಿ ಮನಸ್ಥಿತಿಯ ಬಸನಗೌಡ ಪಾಟೀಲ್ ಯತ್ನಾಳ್ ಒಂದೇ ಕಡೆಗೆ ಇರಲು ಸಾಧ್ಯವಿಲ್ಲ. ಭಾರತೀಯ ಜನತಾ ಪಕ್ಷ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ನಡುವೆ ಸಾಮರಸ್ಯ ತಪ್ಪಿದೆ. ಇಂತಹ ಸಂದರ್ಭದಲ್ಲಿ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಬಸನಗೌಡ ಪಾಟೀಲ್ ಯತ್ನಾಳ್ ಬೆನ್ನಿಗೆ ನಿಲ್ಲುವುದು ಬಸವ ತತ್ವಕ್ಕೆ ದ್ರೋಹ ಬಗೆದಂತೆ. ಬಸನಗೌಡ ಪಾಟೀಲ್ ಯತ್ನಾಳ್ ಖುದ್ದು ಬಸವಣ್ಣನವರನ್ನೇ ಅಪಮಾನಿಸಿದ ವ್ಯಕ್ತಿ. ಪಂಚಮಸಾಲಿ ಮೀಸಲಾತಿ ಹೋರಾಟದ ಸಂದರ್ಭದಲ್ಲಿ ಕೂಡ ಪ್ರಗತಿಪರರು ಬಸವ ಜಯಮೃತ್ಯುಂಜಯ ಸ್ವಾಮೀಜಿಯವರನ್ನು ಟೀಕಿಸುವ ಗೋಜಿಗೆ ಹೋಗಿರಲಿಲ್ಲ. ಆದರೆ ಮುಸ್ಲಿಮ್ ವಿರೋಧಿ, ಬಸವ ವಿರೋಧಿ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳ ವಿರೋಧಿ ಅಷ್ಟೇ ಯಾಕೆ ಮನುಷ್ಯ ವಿರೋಧಿ ಬಸನಗೌಡ ಪಾಟೀಲ್ ಯತ್ನಾಳ್ ಪರ ನಿಂತಿರುವ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಬಸವಣ್ಣನವರ ಹೆಸರಿಗೆ ಕಳಂಕ ತರುತ್ತಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ್‌ಗೆ ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಸಂವಿಧಾನದ ಬಗ್ಗೆ ಗೌರವ ಇಲ್ಲ. ಬಸವಣ್ಣ ಲೆಕ್ಕಕ್ಕೇ ಇಲ್ಲ. ಉಪನಿಷತ್ತಿನ ಸಾರವಾದ, ‘ವಸುಧೈವ ಕುಟುಂಬಕಮ್’ ಮತ್ತು ’ಸರ್ವೇ ಜನ ಸುಖಿನೋಭವಂತು’ ಎಂಬ ಆದರ್ಶ ವಾಕ್ಯಗಳಲ್ಲಿ ನಂಬಿಕೆಯೇ ಇಲ್ಲ. ಛತ್ರಪತಿ ಶಿವಾಜಿ ಮಹಾರಾಜ ರಾಜಕೀಯ ಕಾರಣಕ್ಕೆ ಔರಂಗಜೇಬ್ ಅವರನ್ನು ವಿರೋಧಿಸಿದರೇ ಹೊರತು ಸಮಸ್ತ ಮುಸ್ಲಿಮ್ ಸಮುದಾಯವನ್ನಲ್ಲ.

ಕೊಪ್ಪಳದ ಗವಿಸಿದ್ದೇಶ್ವರ ಮಠ ಬಸವಾದಿ ಶರಣರ ಆದರ್ಶ ಪಾಲಿಸುವ ಸಿದ್ದರ ಮಠ. ಗವಿಸಿದ್ದೇಶ್ವರ ಜಾತ್ರೆಯಲ್ಲಿ ಮುಸ್ಲಿಮರೂ ಸೇರಿದಂತೆ ಎಲ್ಲ ಸಮುದಾಯದ ಭಕ್ತರು ಸೇರುತ್ತಾರೆ.. ಗವಿಸಿದ್ದೇಶ್ವರ ಮಠದ ಪೀಠವನ್ನು ಅಲಂಕರಿಸಿರುವ ಅಭಿನವಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಸಂವೇದನಾಶೀಲರು.. ಬಿಜೆಪಿಯಿಂದ ಉಚ್ಚಾಟಿತರಾದ ನಂತರ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕೊಪ್ಪಳದ ಗವಿಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿದ್ದರು.

ಬಸವಣ್ಣನವರ ಕುರಿತು ಅವಹೇಳನಕಾರಿ ಮಾತುಗಳನ್ನಾಡಿದ ಯತ್ನಾಳ್ ಅವರಿಗೆ ಮಠಕ್ಕೆ ಬಂದಾಗ ಅಭಿನವಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಬುದ್ದಿ ಮಾತು ಹೇಳಿದ್ದರೆ ಬಸವ ತತ್ವವನ್ನು ಗೌರವಿಸಿದಂತಾಗುತ್ತಿತ್ತು.

ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿಯವರು ಪಂಚಮಸಾಲಿ ಮೀಸಲಾತಿ ಹೋರಾಟದ ಕಾರಣಕ್ಕೆ ಬಸನಗೌಡ ಪಾಟೀಲ್ ಯತ್ನಾಳ್ ಅವರ ಒಡನಾಟದಲ್ಲಿ ಇದ್ದಾರೆ..ಯತ್ನಾಳ್ ಅವರನ್ನು ಬೆಂಬಲಿಸುವ ಅನಿವಾರ್ಯತೆ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರಿಗೆ ಇದ್ದರೆ ಮೊದಲು ಬಸವಣ್ಣನವರ ತತ್ವ ಆದರ್ಶಗಳನ್ನು ಮನನ ಮಾಡಿಸಲಿ. ಯತ್ನಾಳ್ ಅವರಿಗೆ 'ನಾಲಿಗೆ ಶುದ್ದಿ ದೀಕ್ಷೆ ನೀಡಿದ ಮೇಲೆ ಬೆಂಬಲಕ್ಕೆ ನಿಲ್ಲಲಿ.. ಆಗ ಯಾರ ತಕರಾರು ಇರುವುದಿಲ್ಲ. ಬಸನಗೌಡರ ಹುಚ್ಚಾಟಕ್ಕೆ ಬಸವಾದಿ ಶರಣರ ಸಮ ಸಮಾಜದ ಕನಸುಗಳು ನುಚ್ಚು ನೂರಾಗುವುದು ಬೇಡ. ಕರ್ನಾಟಕ : ಸರ್ವ ಜನಾಂಗದ ಶಾಂತಿಯ ತೋಟವಾಗಿ ಉಳಿಯಲಿ ಎಂಬುದು ಬಸವ ಅನುಯಾಯಿಗಳ ಆಶಯ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಡಾ. ರಾಜಶೇಖರ ಹತಗುಂದಿ

contributor

Similar News