ಬಸವ ತತ್ವದಿಂದ ವಿಮುಖವಾಗುತ್ತಿರುವ ಮಠ ಮಾನ್ಯಗಳು

ಮೀಸಲಾತಿ ವಿರೋಧಿ ಎಂ. ವಿಶ್ವೇಶ್ವರಯ್ಯ ಹೆಸರಲ್ಲಿ ವಿಶ್ವವಿದ್ಯಾನಿಲಯ ಸ್ಥಾಪನೆಯಾಗುತ್ತದೆ. ಆದರೆ ಬಸವಣ್ಣ ಯಾರಿಗೂ ನೆನಪಾಗುವುದಿಲ್ಲ. ಬಸವಣ್ಣ, ಬಸವಾದಿ ಶರಣರನ್ನು ಈ ನಾಡಿನ ಮಠ ಮಾನ್ಯಗಳು, ಲಿಂಗಾಯತ ರಾಜಕಾರಣಿಗಳು ಎಂದೋ ಮರೆತಿದ್ದಾರೆ. ಅದರ ಪರಿಣಾಮವೇ ಸಂಘ ಪರಿವಾರದ ವಚನ ದರ್ಶನ ಎಲ್ಲೆಡೆ ವ್ಯಾಪಿಸುತ್ತಿರುವುದು. ಶಿಕ್ಷಣ ವ್ಯಾಪಾರದಲ್ಲಿ ನಿರತರಾಗಿರುವ ವೀರಶೈವ ಲಿಂಗಾಯತ ಮಠ ಮಾನ್ಯಗಳು, ಆ ಸಮುದಾಯದ ರಾಜಕಾರಣಿಗಳು ಈಗಲಾದರೂ ಎಚ್ಚೆತ್ತುಕೊಳ್ಳಲಿ.;

Update: 2025-03-15 10:40 IST
ಬಸವ ತತ್ವದಿಂದ ವಿಮುಖವಾಗುತ್ತಿರುವ ಮಠ ಮಾನ್ಯಗಳು
  • whatsapp icon

ಹನ್ನೆರಡನೆಯ ಶತಮಾನದಲ್ಲಿ ಸಂಭವಿಸಿದ ಬಸವಾದಿ ಶರಣರ ವಚನ ಕ್ರಾಂತಿಗೆ ಹಲವು ಆಯಾಮಗಳಿವೆ.ಸಾಮಾಜಿಕ, ಆರ್ಥಿಕ, ಧಾರ್ಮಿಕ, ಭಕ್ತಿ ಮತ್ತು ಅನುಭಾವಿಕ ಆಯಾಮಗಳಲ್ಲಿ ಶರಣ ಚಳವಳಿಯನ್ನು ಪರಿಭಾವಿಸಲಾಗಿದೆ. ವಚನ ಚಳವಳಿಯ ನೇತಾರ ಬಸವಣ್ಣ ಮತ್ತು ಮಾರ್ಗದರ್ಶನ ಮಾಡುವ ಸ್ಥಾನದಲ್ಲಿದ್ದ ಅಲ್ಲಮಪ್ರಭು ನಮ್ಮ ಕಾಲದಲ್ಲಿಯೂ ಪ್ರಾತಃಸ್ಮರಣೀಯರಾಗಿದ್ದಾರೆ. ಬಸವಾದಿ ಶರಣರು ಪ್ರತಿಪಾದಿಸಿದ ತತ್ವ ಆದರ್ಶಗಳ ಒಟ್ಟಾಶಯವನ್ನು ಹೀಗೆ ಪಟ್ಟಿ ಮಾಡಬಹುದು. ಬಸವಾದಿ ಶರಣರು ವೇದ ಆಗಮಗಳ ಪಾರಮ್ಯವನ್ನು ಕಟುವಾದ ಮಾತುಗಳಲ್ಲಿ ತಿರಸ್ಕರಿಸಿದರು. ‘‘ನೆಲನೊಂದೆ ಹೊಲಗೇರಿ ಶಿವಾಲಯಕ್ಕೆ, ಜಲವೊಂದೇ ಶೌಚಾಚಮನಕ್ಕೆ’’ ಎಂದು ಹೇಳುವ ಮೂಲಕ ಜಾತಿ ತಾರತಮ್ಯವನ್ನು ಸಂಪೂರ್ಣ ಬಹಿಷ್ಕರಿಸಿದರು. ಅಷ್ಟು ಮಾತ್ರವಲ್ಲ ಬಸವಣ್ಣನವರು ಒಂದು ಹೆಜ್ಜೆ ಮುಂದೆ ಹೋಗಿ ‘‘ಅಪ್ಪನು ನಮ್ಮ ಮಾದಾರ ಚೆನ್ನಯ್ಯ, ಬೊಪ್ಪನು ನಮ್ಮ ಡೋಹಾರ ಕಕ್ಕಯ್ಯ’’ ಎಂದು ಕರುಳ ಬಳ್ಳಿಯ ಸಂಬಂಧ ಸ್ಥಾಪಿಸಿಕೊಂಡರು. ‘‘ಎಮ್ಮವರು ಬೆಸಗೊಂಡರೆ ಶುಭ ಲಗ್ನವೆನ್ನಿರಯ್ಯ, ಚಂದ್ರಬಲ ತಾರಾ ಬಲ ಉಂಟೆಂದು ಹೇಳಿರಯ್ಯ’’ ಎಂದು ಹೇಳುವ ಮೂಲಕ ಮೌಢ್ಯ, ಕಂದಾಚಾರಗಳನ್ನು ತಿರಸ್ಕರಿಸಿದರು. ಜಾತಿ ವ್ಯವಸ್ಥೆಯ ನಿರ್ಮೂಲನೆಗೆ ವರ್ಣ ಸಂಕರವೊಂದೇ ಪರಿಹಾರವೆಂದು ಬಲವಾಗಿ ನಂಬಿದ್ದರು. ಹರಳಯ್ಯ ಅವರ ಮಗ ಮತ್ತು ಮಧುವರಸರ ಮಗಳ ನಡುವೆ ಮದುವೆ ಏರ್ಪಡಿಸಿ ಜಾತಿ ವಿನಾಶದ ಮಾದರಿ ತೋರಿಸಿಕೊಟ್ಟರು. ಅನುಭವ ಮಂಟಪ ಪ್ರಜಾಪ್ರಭುತ್ವದ ಶ್ರೇಷ್ಠ ಮಾದರಿಯಾಗಿ ಈ ಹೊತ್ತಿಗೂ ಪ್ರಶಂಸೆಗೆ ಒಳಗಾಗಿದೆ. ಮಹಾಜ್ಞಾನಿ ಅಲ್ಲಮಪ್ರಭು ನೇತೃತ್ವದಲ್ಲಿ ಬಿಜ್ಜಳನ ಆಸ್ಥಾನದ ಮಹಾಮಂತ್ರಿ ಬಸವಣ್ಣ, ಹಡಪದ ಅಪ್ಪಣ್ಣ, ಸೂಳೆ ಸಂಕವ್ವೆ, ಆಯ್ದಕ್ಕಿ ಲಕ್ಕಮ್ಮ, ಮೋಳಿಗೆ ಮಾರಯ್ಯ, ಸಿದ್ದರಾಮ, ಅಕ್ಕಮಹಾದೇವಿ, ಮುಕ್ತಾಯಕ್ಕ ಮತ್ತು ಅಸಂಖ್ಯಾತ ಕಾಯಕ ಜೀವಿಗಳು ಒಂದೆಡೆ ಸೇರಿ ಅರ್ಥಪೂರ್ಣ ಸಂವಾದ ನಡೆಸಿ, ವಚನ ರಚನೆಯ ಮೂಲಕ ಅಭಿವ್ಯಕ್ತಿಯ ಸಾಧ್ಯತೆ ತೋರಿಸಿಕೊಟ್ಟ ಅಪರೂಪದ ವಿದ್ಯಮಾನ. ಜಾತಿ ಅಸಾಮಾನತೆಗೆ ಅವಕಾಶ ಮಾಡಿಕೊಟ್ಟಿದ್ದ ದೇವಾಲಯಗಳನ್ನು ಬಸವಾದಿ ಶರಣರು ತಿರಸ್ಕರಿಸಿದರು. ದೇಹವೇ ದೇಗುಲ ಎಂದು ಹೇಳುವ ಮೂಲಕ ದೇವರು ಮತ್ತು ಭಕ್ತರ ನಡುವಿನ ಅಂತರ ಹೋಗಲಾಡಿಸಿದರು. ದೇವರನ್ನು ಕಾಣಲು ಗುಡಿ ಗುಂಡಾರಗಳಿಗೆ ಹೋಗುವ ಅಗತ್ಯವಿಲ್ಲವೆಂದರು. ಅಷ್ಟು ಮಾತ್ರವಲ್ಲ ದೇವರ ಪರಿಕಲ್ಪನೆಯನ್ನೇ ಬಸವಣ್ಣ ಬದಲಾಯಿಸಿದರು. ಕಲ್ಲು ದೇವರು ದೇವರಲ್ಲ ಎಂದು ಬಸವಣ್ಣ ಸ್ಪಷ್ಟ ಮಾತುಗಳಲ್ಲಿ ಹೇಳಿದರು. ಬಸವಾದಿ ಶರಣರು ಸ್ತ್ರೀ ಸಮಾನತೆಯನ್ನು ಆತ್ಯಂತಿಕವಾಗಿ ಪ್ರತಿಪಾದಿಸಿದರು. ‘‘ಗಡ್ಡ ಮೀಸೆ ಬಂದರೆ ಗಂಡೆಂಬರು, ಮೊಲೆ ಮುಡಿ ಬಂದರೆ ಹೆಣ್ಣೆಂಬರು ಒಳಗೆ ಸುಳಿವ ಆತ್ಮ ಹೆಣ್ಣು ಅಲ್ಲ ಗಂಡು ಅಲ್ಲ’’ ಎಂದು ಪ್ರತಿಪಾದಿಸಿದರು.

ಬಸವಾದಿ ಶರಣರು, ವಿಶೇಷವಾಗಿ ಕಾಯಕ ಮತ್ತು ದಾಸೋಹ ಪರಿಕಲ್ಪನೆಯನ್ನು ಪರಿಚಯಿಸಿದರು. ಸತ್ಯ ಶುದ್ಧ ಕಾಯಕದ ಮೂಲಕ ಸಂಪಾದಿಸಿದ ಸಂಪತ್ತಿನಲ್ಲಿ ಒಂದು ಪಾಲನ್ನು ಸಮಾಜದಲ್ಲಿನ ದೀನ ದಲಿತರ ಏಳ್ಗೆಗಾಗಿ ವಿನಿಯೋಗಿಸಬೇಕು ಎಂಬುದು ಅವರ ದಾಸೋಹ ತತ್ವ. ದಾಸೋಹ ತತ್ವ, ನೀಡುತ್ತಿದ್ದೇನೆ ಎಂಬ ಅಹಂಭಾವವನ್ನು ಒಪ್ಪಿಕೊಳ್ಳುವುದಿಲ್ಲ. ‘‘ಮಾಡಿದೆನೆಂಬುದು ಮನದಲ್ಲಿ ಹೊಳೆದರೆ ಏಡಿಸಿ ಕಾಡಿತ್ತು ಶಿವನ ಡಂಗುರ’’ ಎಂಬ ಎಚ್ಚರಿಕೆ ನೀಡುತ್ತಾರೆ. ದಾಸೋಹಕ್ಕೆ ಪಾಪಿಯ ಧನ ಸಲ್ಲುವುದಿಲ್ಲ. ಪಾಪಿಯ ಧನ ಪ್ರಾಯಶ್ಚಿತ್ತಕ್ಕಲ್ಲದೆ ಸತ್ಪಾತ್ರಕ್ಕೆ ಸಲ್ಲದು ಎನ್ನುತ್ತಾರೆ.‘‘ಇವನಾರವ ಇವನಾರವ ಎಂದೆನಿಸಿದಿರಯ್ಯ, ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯ’’ ಎಂದು ಸ್ವತಃ ಬಸವಣ್ಣನವರೇ ತಮ್ಮ ವಚನದಲ್ಲಿ ಹೇಳಿದ್ದಾರೆ. ಬಸವಣ್ಣನವರ ಈ ಉದಾತ್ತ ತತ್ವ ಚಿಂತನೆಗಳಿಗೆ ಆಕರ್ಷಿತರಾದ ತಳ ಸಮುದಾಯದ ಅಸಂಖ್ಯಾತ ಕಾಯಕ ಜೀವಿಗಳು ಲಿಂಗಾಯತ ಧರ್ಮಕ್ಕೆ ಮತಾಂತರ ಹೊಂದಿದರು. ಕಾಯಕ ಜೀವಿಗಳಿಗೆ ಕಾಯಕ ಗೌರವ ದೊರಕಿದ್ದರಿಂದಲೇ ಲೆಕ್ಕವಿಲ್ಲದಷ್ಟು ತಳ ಸಮುದಾಯದ ವೃತ್ತಿಪರ ಕಸುಬಿನ ಜನರು ಬಸವ ಮಾರ್ಗದ ಪಯಣಿಗರಾದರು. ಹಡಪದರು, ಗಾಣಿಗರು, ನೇಕಾರರು, ಬಣಗಾರರು, ಅಂಬಿಗರು, ಸಮಗಾರರು, ಡೋಹಾರರು ಸೇರಿದಂತೆ ಬಹುತೇಕ ಕಾಯಕ ಜೀವಿಗಳು ಬಸವ ತತ್ವ ಪಾಲಿಸತೊಡಗಿದರು.

ಬಸವಾದಿ ಶರಣರ ತತ್ವಗಳನ್ನು ನಂತರದ ದಿನಗಳಲ್ಲಿ ಪ್ರಚುರ ಪಡಿಸಿದವರು, ಹರಿಹರನಂತಹ ಕವಿಗಳು. ಆದರೆ ಅವರ ಪುರಾಣಗಳು ಬಸವ ತತ್ವದ ಮೂಲ ಅಂತಸ್ಸತ್ವಕ್ಕೆ ತುಸು ವೈಭವೀಕರಿಸಿದ್ದರಿಂದ ಬೇರೆಯದೇ ಅರ್ಥ ಪಡೆದುಕೊಂಡವು. ಬಸವಾದಿ ಶರಣರ ಪ್ರಖರ ತತ್ವಗಳನ್ನು ಜನಸಾಮಾನ್ಯರಲ್ಲಿ ನೆಲೆ ನಿಲ್ಲುವಂತೆ ಮಾಡಿದವರು ಹದಿನೆಂಟು ಮತ್ತು ಹತ್ತೊಂಭತ್ತನೆಯ ಶತಮಾನದ ನೂರಾರು ಜನ ತತ್ವಪದಕಾರರು. ನಿಜಗುಣ ಶಿವಯೋಗಿಗಳು ಬಸವ ತತ್ವದ ಅನುಭಾವಿಕ ತಿರುಳನ್ನು ತಾತ್ವೀಕರಿಸಲು ಯತ್ನಿಸಿದರು. ಆದರೆ ಕಡಕೋಳ ಮಡಿವಾಳಪ್ಪ, ರಾಮಪುರದ ಬಕ್ಕಪ್ಪ, ಕೂಡ್ಲುರು ಶರಣರು, ಅಣವೀರಪ್ಪ ಮುಂತಾದವರು ವಚನ ಚಳವಳಿಯ ಪ್ರಖರ ಸಾಮಾಜಿಕ ಚಿಂತನೆಗಳನ್ನು ಹೆಚ್ಚು ಪ್ರಚಾರ ಮಾಡಿದರು. ಬಸವ ತತ್ವದ ಮೂಲ ಆಶಯಗಳನ್ನು ಅನುಷ್ಠಾನಕ್ಕೆ ತರುವ ಬಹು ದೊಡ್ಡ ರಿಸ್ಕನ್ನು ಯಾರೊಬ್ಬರೂ ತೆಗೆದುಕೊಳ್ಳಲಿಲ್ಲ.

ಹತ್ತೊಂಭತ್ತನೆಯ ಶತಮಾನದ ಆರಂಭದ ವರ್ಷಗಳಲ್ಲಿ ಹರ್ಡೇಕರ ಮಂಜಪ್ಪ, ಹಾನಗಲ್ ಕುಮಾರಸ್ವಾಮಿಗಳು ಮತ್ತು ಫ.ಗು. ಹಳಕಟ್ಟಿ ಮುಂತಾದವರು ಬಸವತತ್ವದ ಭಾಗಶಃ ವಿಚಾರಗಳನ್ನು ಅನುಷ್ಠಾನಕ್ಕೆ ತರಲು ಯತ್ನಿಸಿದ್ದು ಶ್ಲಾಘನೀಯ. ಬಸವಣ್ಣನವರ ಮೂಲ ಕಾಳಜಿಯಾಗಿದ್ದ ಜಾತಿ ವಿನಾಶ ಮತ್ತು ಅದನ್ನು ಸಾಧಿಸಲು ಕಂಡುಕೊಂಡ ವರ್ಣ ಸಂಕರ-ಅಂತರ್ ಜಾತಿ ಮದುವೆ ಮಾಡಿಸುವ ಹಾದಿಯಲ್ಲಿ ಯಾರೊಬ್ಬರೂ ಸಾಗಲಿಲ್ಲ. ಅದನ್ನು ಬಹುದೊಡ್ಡ ಅಭಿಯಾನವನ್ನಾಗಿ ನಡೆಸಲಿಲ್ಲ.

ಹರ್ಡೇಕರ ಮಂಜಪ್ಪ, ಫ.ಗು. ಹಳಕಟ್ಟಿ ಮತ್ತು ಹಾನಗಲ್ ಕುಮಾರಸ್ವಾಮಿಗಳು ತಮಗೆ ಒದಗಿದ ಅವಕಾಶಗಳ ಮಿತಿಯಲ್ಲೇ ಬಸವಾದಿ ಶರಣರ ವಚನಗಳನ್ನು ಪ್ರಚಾರ ಮಾಡಿದರು. ಪ್ರಕಟಣೆ, ಪ್ರಚಾರ ಮತ್ತು ಅಧ್ಯಯನದ ಹಂತದಲ್ಲಿ ಕೆಲಸ ನಡೆದವು. ಹಾನಗಲ್ ಕುಮಾರಸ್ವಾಮಿಗಳು ಅಖಿಲ ಭಾರತ ವೀರಶೈವ ಮಹಾಸಭಾ ಸ್ಥಾಪಿಸಿ ಮಠ ಮಾನ್ಯಗಳು, ಸಂಘ ಸಂಸ್ಥೆಗಳು ಮತ್ತು ರಾಜಕೀಯ ಧುರೀಣರ ಜೊತೆ ನಿರಂತರ ಸಂಪರ್ಕ ಸಾಧಿಸಿ ವಚನಗಳ ಮಹತ್ವ ಮನವರಿಕೆ ಮಾಡಿಕೊಟ್ಟರು. ಬಸವತತ್ವದ ಆಶಯಗಳಲ್ಲಿ ಒಂದಾದ ಅನ್ನ ಮತ್ತು ಅಕ್ಷರ ದಾಸೋಹ ತತ್ವವನ್ನು ಅನುಷ್ಠಾನಕ್ಕೆ ತರುವಂತೆ ಬಹುಪಾಲು ಮಠಗಳಿಗೆ ಪ್ರೇರೇಪಿಸಿದರು. ಹಾನಗಲ್ ಕುಮಾರಸ್ವಾಮಿಗಳು ತಮ್ಮ ಶಿಷ್ಯ ಪಂ. ಪಂಚಾಕ್ಷರಿ ಗವಾಯಿಗಳ ಮೂಲಕ ವಚನಗಳನ್ನು ಹಾಡಿನ ಮೂಲಕ ಜನಮನ ತಲುಪಿಸಲು ಸೂಚಿಸಿದರು. ಪಂ. ಪಂಚಾಕ್ಷರಿ ಗವಾಯಿಗಳು ಮತ್ತು ಅವರ ಶಿಷ್ಯ ಪಂ. ಪುಟ್ಟರಾಜ ಗವಾಯಿಗಳು ಗದುಗಿನ ವೀರೇಶ್ವರ ಪುಣ್ಯಾಶ್ರಮದ ಮೂಲಕ ವಚನ ಗಾಯನ ಪರಂಪರೆ ಹುಟ್ಟು ಹಾಕಿದರು. ಎಲ್ಲ ಜಾತಿಯ ಬಡವರ ಮಕ್ಕಳಿಗೆ ಅನ್ನ ಅಕ್ಷರ ದಾಸೋಹ ನೀಡಿದರು. ವಿಶೇಷವಾಗಿ ಅಂಧ ಮಕ್ಕಳಿಗೆ ಸ್ವಾವಲಂಬನೆಯಾಗುವಂತೆ ಮಾಡಲು ಉಚಿತ ಸಂಗೀತ ಶಿಕ್ಷಣ ನೀಡಿದರು. ಬೆಳಗಾವಿಯಲ್ಲಿ ಶಿರಸಂಗಿ ಲಿಂಗರಾಜರು, ಅರಟಾಳ ರುದ್ರಗೌಡರು ಮುಂತಾದವರ ಪ್ರಯತ್ನದಿಂದ ಕೆ.ಎಲ್.ಇ. ಶಿಕ್ಷಣ ಸಂಸ್ಥೆ ಅಸ್ತಿತ್ವಕ್ಕೆ ಬಂತು. ಅನ್ನ ಅಕ್ಷರ ದಾಸೋಹ ನೀಡಲು ಶುರು ಮಾಡಿದರು. ವಿಜಯಪುರದಲ್ಲಿ ಬಂಥನಾಳ್ ಶಿವಯೋಗಿಗಳು ಮತ್ತು ಫ.ಗು. ಹಳಕಟ್ಟಿಯವರ ಪ್ರಯತ್ನದಿಂದ ಬಿ.ಎಲ್.ಡಿ. ಶಿಕ್ಷಣ ಸಂಸ್ಥೆ ಕಾರ್ಯಾರಂಭ ಮಾಡಿತು. ಕಲಬುರಗಿಯಲ್ಲಿ ಶರಣಬಸವೇಶ್ವರ ಸಂಸ್ಥಾನ, ಭಾಲ್ಕಿಯಲ್ಲಿ ಚನ್ನಬಸವ ಪಟ್ಟದೇವರು ಶಾಂತಿ ವರ್ಧಕ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಜಾತ್ಯತೀತವಾಗಿ ಅನ್ನ ಅಕ್ಷರ ದಾಸೋಹ ನೀಡತೊಡಗಿದರು. ಮೈಸೂರು ಭಾಗದಲ್ಲಿ ಸುತ್ತೂರು ಮಠ, ತುಮಕೂರಿನಲ್ಲಿ ಸಿದ್ದಗಂಗಾ ಮಠ, ಚಿತ್ರದುರ್ಗದಲ್ಲಿ ಜಯದೇವ ಸ್ವಾಮಿಗಳ ಬೃಹನ್ ಮಠ, ಬೆಳಗಾವಿಯಲ್ಲಿ ನಾಗನೂರ ರುದ್ರಾಕ್ಷಿ ಮಠಗಳು ಅನ್ನ, ಅಕ್ಷರ ದಾಸೋಹದ ಜೊತೆಗೆ ಬಸವ ತತ್ವದಲ್ಲಿ ತೊಡಗಿಸಿಕೊಂಡಿದ್ದವು.

ಈ ಪ್ರಮುಖ ಮಠಗಳ ಮೇಲ್ಪಂಕ್ತಿಯನ್ನು ಅನುಸರಿಸಿ ನಾಡಿನ ಸಾವಿರಾರು ವೀರಶೈವ ಲಿಂಗಾಯತ ಮಠಗಳು ಅನ್ನ, ಅಕ್ಷರ ದಾಸೋಹ ಮತ್ತು ಬಸವಾದಿ ಶರಣರ ವಿಚಾರಗಳನ್ನು ಪ್ರಸಾರ ಮಾಡುತ್ತಿದ್ದವು. ಧಾರವಾಡದ ಮುರುಘಾ ಮಠ, ಕೊಪ್ಪಳದ ಗವಿ ಮಠ, ಸಿರಿಗೆರೆ ಮತ್ತು ಸಾಣೆ ಹಳ್ಳಿ ಮಠಗಳು ಅನ್ನ, ಅಕ್ಷರ ದಾಸೋಹ ಮತ್ತು ಬಸವ ತತ್ವದ ಪ್ರಸಾರ ಕಾರ್ಯವನ್ನು ಒಂದು ವ್ರತದಂತೆ ಮಾಡುತ್ತಿದ್ದವು.

ಅನ್ನ, ಅಕ್ಷರ ದಾಸೋಹ ಪ್ರತಿಯೊಂದು ಮಠದ ಆದ್ಯ ಕರ್ತವ್ಯ ಎಂದು ಭಾವಿಸಲಾಗಿತ್ತು. ಬಸವ ತತ್ವದ ಪ್ರಸಾರವೆಂದರೆ : ವಚನ ಗಾಯನ, ಶಿವಾನುಭವ ಗೋಷ್ಠಿ ಮತ್ತು ತತ್ವ ಪದಗಳ ಹಾಡುಗಾರಿಕೆ. ಪ್ರತಿ ಮಠದಲ್ಲಿ ಹೆಚ್ಚು ಕಡಿಮೆ ವಾರಕ್ಕೊಮ್ಮೆ ಶಿವಾನುಭವ ಗೋಷ್ಠಿ ಕಡ್ಡಾಯವಾಗಿ ನಡೆಯುತ್ತಿತ್ತು. ವಾರ್ಷಿಕ ಜಾತ್ರಾ ಮಹೋತ್ಸವದಲ್ಲಿ ವಿಚಾರ ಸಂಕಿರಣ, ವಚನ ಗಾಯನ ಮತ್ತು ಬಸವಾದಿ ಶರಣರ ಕುರಿತ ನಾಟಕಗಳ ಪ್ರದರ್ಶನ ಅನೂಚಾನವಾಗಿ ನಡೆಯುತ್ತಿದ್ದವು.

ಈಗ ಕಾಲ ಬದಲಾಗಿದೆ. ತುಮಕೂರಿನ ಸಿದ್ದಗಂಗಾಮಠ, ಗದುಗಿನ ವೀರೇಶ್ವರ ಪುಣ್ಯಾಶ್ರಮದಂತಹ ಬೆರಳೆಣಿಕೆಯ ಮಠ ಮಾನ್ಯಗಳಲ್ಲಿ ಅಕ್ಷರ, ಅನ್ನದ ದಾಸೋಹ ನಡೆಯುತ್ತಿದೆ. ಉಳಿದೆಡೆ ಅವರ ಆದ್ಯತೆಗಳು ಬದಲಾಗಿವೆ. ದುಬಾರಿ ಆಂಗ್ಲ ಮಾಧ್ಯಮ ಶಾಲೆಗಳು ನಡೆಸುತ್ತಿರುವುದರಿಂದ ಬಡವರು ಅವರ ಕಣ್ಣಿಗೆ ಕಾಣುತ್ತಿಲ್ಲ. ಕೆ.ಎಲ್.ಇ. ಶಿಕ್ಷಣ ಸಂಸ್ಥೆ ಪ್ರಭಾಕರ ಕೋರೆಯಂಥ ಶಿಕ್ಷಣ ವ್ಯಾಪಾರಿಗಳ ಕೈ ವಶವಾಗಿವೆ. ಪ್ರಭಾಕರ ಕೋರೆಗೆ ಬಸವ ತತ್ವವೆಂದರೆ ಭಾವಚಿತ್ರದಲ್ಲಿನ ಬಸವಣ್ಣ ಮಾತ್ರ. ಆ ಭಾವ ಚಿತ್ರ ಇಟ್ಟುಕೊಂಡೇ ಶಿಕ್ಷಣ ವ್ಯಾಪಾರ ಮಾಡುತ್ತಿದ್ದಾರೆ. ಬಂಥನಾಳ್ ಶಿವಯೋಗಿಗಳು ಕಟ್ಟಿದ ವಿಜಯಪುರದ ಬಿ.ಎಲ್.ಡಿ. ಶಿಕ್ಷಣ ಸಂಸ್ಥೆಯನ್ನು ಮಂತ್ರಿ ಎಂ.ಬಿ. ಪಾಟೀಲ್ ಕುಟುಂಬ ಹೈಜಾಕ್ ಮಾಡಿದೆ. ಭಾಲ್ಕಿಯ ಬಸವಲಿಂಗ ಪಟ್ಟದೇವರು ಸ್ಥಾಪಿಸಿದ ಶಾಂತಿವರ್ಧಕ ಶಿಕ್ಷಣ ಸಂಸ್ಥೆ ಇನ್ನೊಬ್ಬ ಮಂತ್ರಿ ಈಶ್ವರ್ ಖಂಡ್ರೆಯವರ ವಶದಲ್ಲಿದೆ. ಅವರಿಗೆ ಅನ್ನ, ಅಕ್ಷರ ದಾಸೋಹ ಎಂದರೇನೇ ಅಲರ್ಜಿ. ಲಾಭವೇ ಅವರ ಮನೆ ದೇವರು. ಅಖಿಲ ಭಾರತ ವೀರಶೈವ ಮಹಾಸಭಾ ಸೇರಿದಂತೆ ಬಸವ ತತ್ವದ ಅನುಷ್ಠಾನಕ್ಕಿರುವ ಎಲ್ಲ ಸಂಘ ಸಂಸ್ಥೆಗಳು ಬೆರಳೆಣಿಕೆಯ ಶ್ರೀಮಂತ ಲಿಂಗಾಯತರ ಪಾಲಾಗಿವೆ. ಆ ಶ್ರೀಮಂತ ಲಿಂಗಾಯತರ ಮುಖ್ಯ ಗುರಿ ರಾಜಕೀಯ ಅಧಿಕಾರ. ನಾಡಿನ ಬಡ ಮತ್ತು ಮಧ್ಯಮ ವರ್ಗದ ಲಿಂಗಾಯತ ಸಮುದಾಯದಲ್ಲಿ ಜಾತಿ ಪ್ರಜ್ಞೆ ಬಿತ್ತಿ ಭಾವನಾತ್ಮಕವಾಗಿ ಚುನಾವಣಾ ರಾಜಕೀಯಕ್ಕೆ ಬಳಸಿಕೊಂಡು ಬಿಸಾಡುವುದು ಇವರ ದಂಧೆಯಾಗಿದೆ. ಕೊಪ್ಪಳದ ಗವಿ ಮಠದ ಜಾತ್ರೆಯಲ್ಲಿ ಸಂಘ ಪರಿವಾರದವರು ಹೊಕ್ಕಿದ್ದಾರೆ. ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನದಲ್ಲೇ ಆರೆಸ್ಸೆಸ್ ‘ವಚನ ದರ್ಶನ’ ಕೃತಿ ಅನಾವರಣಗೊಂಡಿದೆ. ಅನ್ನ, ಅಕ್ಷರ ದಾಸೋಹಕ್ಕೆ ಹೆಸರಾಗಿದ್ದ ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನ ಶಿಕ್ಷಣ ವ್ಯಾಪಾರಕ್ಕೆ ನಿಂತ ದಿನವೇ ಬಸವ ತತ್ವ ಗಡಿಪಾರಾಗಿದೆ. ಕರ್ನಾಟಕದ ಬಹುಪಾಲು ಶ್ರೀಮಂತ ವೀರಶೈವ ಲಿಂಗಾಯತ ಮಠಗಳಿಗೆ ಬಸವ ತತ್ವ ಪ್ರಚಾರ ಮೊದಲ ಆದ್ಯತೆಯಲ್ಲ. ವಚನಗಾಯನದ ಅನುರಣನ ನಿಂತಿದೆ. ಎಲ್ಲೆಡೆ ಸಂಘದ ಹಸ್ತ ಚಾಚಿಕೊಂಡಿದೆ.

2019ರಲ್ಲಿ ಸಾಣೆಹಳ್ಳಿ ಶ್ರೀಗಳು ಮತ್ತೆ ಕಲ್ಯಾಣ ಅಭಿಯಾನ ಶುರು ಮಾಡಿದ್ದರು. ಆದರೆ ಅದರಲ್ಲಿ ಬಸವ ತತ್ವದ ಮೂಲ ಆಶಯವಾದ ಜಾತಿವಿನಾಶದ: ವರ್ಣ ಸಂಕರ-ಅಂತರ್ ಜಾತಿ ವಿವಾಹದ ವಿಷಯವೇ ಪ್ರಸ್ತಾಪವಾಗಿರಲಿಲ್ಲ. ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನವರನ್ನು ನಂಬಿ ಲಿಂಗಾಯತರಾದ ಕಾಯಕ ಜೀವಿಗಳಾದ ಹಡಪದ, ಜೇಡರ, ಗಾಣಿಗ, ಬಣಗಾರ ಮುಂತಾದ ತಳ ಸಮುದಾಯಗಳನ್ನು ಅಖಿಲ ಭಾರತ ವೀರಶೈವ ಮಹಾಸಭಾವಾಗಲಿ, ಶ್ರೀಮಂತ ಲಿಂಗಾಯತರಾಗಲಿ ಸಮಾನವಾಗಿ ಕಾಣಲಿಲ್ಲ. ಆ ಕಾಯಕ ಜೀವಿಗಳಿಗೆ ಗೌರವ ಪ್ರಾಪ್ತವಾಗುವಂತೆ ಮಾಡಿದವರು ಅಭಿನವ ಬಸವಣ್ಣ ಮುಖ್ಯಮಂತ್ರಿ ದೇವರಾಜ ಅರಸು ಅವರು. ಹಾವನೂರು ಆಯೋಗದ ವರದಿ ಹಡಪದ, ನೇಕಾರ, ಗಾಣಿಗ, ಬಣಗಾರ ಸೇರಿದಂತೆ ಲಿಂಗಾಯತದಲ್ಲಿನ ತಳಸಮುದಾಯದ ಹಲವಾರು ಉಪಜಾತಿಗಳಿಗೆ ಅವಕಾಶದ ಬಾಗಿಲು ತೆರೆಯಿತು. ವೀರಶೈವ ಲಿಂಗಾಯತದಲ್ಲಿನ ಬಡವರು ನಿಜವಾದ ಅರ್ಥದಲ್ಲಿ ಬಸವ ತತ್ವ ಆಚರಿಸಿದರೆ ಅವರ ಬಡತನಕ್ಕೂ ವಿಮೋಚನೆ ಸಿಗುತ್ತದೆ. ಲಿಂಗಾಯತ ಸಮುದಾಯದ ರಾಜಕಾರಣಿಗಳ ನೆಲೆ ಕಳೆದು ಹೋಗುತ್ತದೆ. ಬಸವ ತತ್ವವನ್ನು ಅಷ್ಟೋ ಇಷ್ಟೋ ಆಚರಣೆಯಲ್ಲಿ ಇಟ್ಟಿದ್ದ ಮಠ ಮಾನ್ಯಗಳು ಈಗ ವಿಮುಖವಾಗಿವೆ. ಅಖಿಲ ಭಾರತ ವೀರಶೈವ ಮಹಾಸಭಾವಾಗಲಿ, ಜಾಗತಿಕ ಲಿಂಗಾಯತ ಮಹಾಸಭಾವಾಗಲಿ ಈ ನಿಟ್ಟಿನಲ್ಲಿ ಎಂದೋ ಎಚ್ಚೆತ್ತುಕೊಳ್ಳಬೇಕಿತ್ತು. ಮೀಸಲಾತಿ ವಿರೋಧಿ ಎಂ. ವಿಶ್ವೇಶ್ವರಯ್ಯ ಹೆಸರಲ್ಲಿ ವಿಶ್ವವಿದ್ಯಾನಿಲಯ ಸ್ಥಾಪನೆಯಾಗುತ್ತದೆ. ಆದರೆ ಬಸವಣ್ಣ ಯಾರಿಗೂ ನೆನಪಾಗುವುದಿಲ್ಲ. ಬಸವಣ್ಣ, ಬಸವಾದಿ ಶರಣರನ್ನು ಈ ನಾಡಿನ ಮಠ ಮಾನ್ಯಗಳು, ಲಿಂಗಾಯತ ರಾಜಕಾರಣಿಗಳು ಎಂದೋ ಮರೆತಿದ್ದಾರೆ. ಅದರ ಪರಿಣಾಮವೇ ಸಂಘ ಪರಿವಾರದ ವಚನ ದರ್ಶನ ಎಲ್ಲೆಡೆ ವ್ಯಾಪಿಸುತ್ತಿರುವುದು. ಶಿಕ್ಷಣ ವ್ಯಾಪಾರದಲ್ಲಿ ನಿರತರಾಗಿರುವ ವೀರಶೈವ ಲಿಂಗಾಯತ ಮಠ ಮಾನ್ಯಗಳು, ಆ ಸಮುದಾಯದ ರಾಜಕಾರಣಿಗಳು ಈಗಲಾದರೂ ಎಚ್ಚೆತ್ತುಕೊಳ್ಳಲಿ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಡಾ. ರಾಜಶೇಖರ ಹತಗುಂದಿ

contributor

Similar News