ವಿಜಯೇಂದ್ರ ವಿರುದ್ಧ ಒಂದಾದ ನಾಯಕರು

ಒಬ್ಬ ನಾಯಕ ಪಕ್ಷಕ್ಕೆ ಮತ್ತು ತನ್ನ ಸಮುದಾಯಕ್ಕೆ ಅನಿವಾರ್ಯ ಜನನಾಯಕ ಆಗುವುದು ನಿರಂತರ ಒಡನಾಟದಲ್ಲಿ. ಕಷ್ಟ-ಸುಖದಲ್ಲಿ ತನು, ಮನ, ಧನದೊಂದಿಗೆ ಸ್ಪಂದಿಸುವಲ್ಲಿ. ಸಂತೋಷ್ ಬಣದ ನಾಯಕರನ್ನು ಸೇರಿ, ಎಲ್ಲರ ಪ್ರೀತಿಗೆ ಪಾತ್ರನಾಗಲು ಯತ್ನಿಸಿದ್ದರೆ ವಿಜಯೇಂದ್ರ ಬಗ್ಗೆ ಕನಿಷ್ಠ ಕನಿಕರವಾದರೂ ಮೂಡುತ್ತಿತ್ತು. ಸಂತೋಷ್ ಬಣದ ಜೊತೆಗೆ, ಬಸವರಾಜ ಬೊಮ್ಮಾಯಿ ಬೆಂಬಲಿಗರು, ಶ್ರೀರಾಮುಲು ತಂಡ, ಒಳಗೊಳಗೇ ಕುದಿಯುತ್ತಿರುವ ಅಸಂಖ್ಯಾತ ನಾಯಕರು ವಿಜಯೇಂದ್ರ ತೊಲಗುವುದನ್ನು ಕಾಯುತ್ತಿದ್ದಾರೆ. ವಿರೋಧಿಗಳ ಬಲ ಹೆಚ್ಚುತ್ತಿದೆ.;

Update: 2025-02-01 13:57 IST
ವಿಜಯೇಂದ್ರ ವಿರುದ್ಧ ಒಂದಾದ ನಾಯಕರು
  • whatsapp icon

ಕರ್ನಾಟಕ ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ. ವಿಜಯೇಂದ್ರ ನಾಯಕನಾಗಿ ರೂಪುಗೊಳ್ಳುವುದು ಅಡ್ಡ ಹಾದಿಯಿಂದ ದುಡ್ಡು ಮಾಡಿದಷ್ಟೇ ಸರಳ ಎಂದು ಭಾವಿಸಿದಂತಿದೆ. ಅವರ ತಂದೆ ಯಡಿಯೂರಪ್ಪ ನಾಯಕರಾಗಿ ಹೊರಹೊಮ್ಮಿದ್ದು ಕಠಿಣ ಪರಿಶ್ರಮದ ನಂತರವೇ. ಅಧಿಕಾರ ಸಿಕ್ಕ ಮೇಲೆ ಹಪಾಹಪಿಯಿಂದ ಹಣ ಮಾಡಲು ಹೋಗಿ ಯಡಿಯೂರಪ್ಪ ಹೆಸರು ಕೆಡಿಸಿಕೊಂಡಿದ್ದು. ಹೋರಾಟದ ಮನೋಭಾವದ ಯಡಿಯೂರಪ್ಪ ಕಾಲಿಗೆ ಚಕ್ರ ಕಟ್ಟಿಕೊಂಡು ಪಕ್ಷ ಸಂಘಟನೆ ಮಾಡಿದ್ದರಿಂದಲೇ ಬಿಜೆಪಿಯಲ್ಲಿ ನಾಯಕರಾಗಿ ಬೆಳೆಯಲು ಸಾಧ್ಯವಾಯಿತು.

ಯಡಿಯೂರಪ್ಪ ವಿರೋಧಿಗಳೂ ಅವರ ಸಂಘಟನಾ ಸಾಮರ್ಥ್ಯ ಮತ್ತು ಕೊಟ್ಟ ಮಾತಿಗೆ ತಪ್ಪದ ಗುಣ ಸ್ವಭಾವವನ್ನು ಮೆಚ್ಚಿಕೊಳ್ಳುತ್ತಿದ್ದರು. ಜೆಡಿಎಸ್ ರಾಜ್ಯ ಅಧ್ಯಕ್ಷರಾಗಿದ್ದ ಎಚ್. ವಿಶ್ವನಾಥ್ ಅವರು ಯಡಿಯೂರಪ್ಪ ಅವರನ್ನು ನಂಬಿಯೇ ಬಿಜೆಪಿಗೆ ಹೋಗಿದ್ದರು. ಮಗ ವಿಜಯೇಂದ್ರ ಎಲ್ಲದರಲ್ಲೂ ಮೂಗು ತೂರಿಸಿ ಅಪ್ಪನ ಹೆಸರನ್ನು ಹಾಳು ಮಾಡಿದರು. ಈಗ ಎಚ್. ವಿಶ್ವನಾಥ್ ಸೇರಿದಂತೆ ಯಡಿಯೂರಪ್ಪ ನಂಬಿ ಬಿಜೆಪಿಗೆ ಹೋದ ಯಾರೊಬ್ಬರೂ ಕೊಟ್ಟ ಮಾತಿಗೆ ತಪ್ಪದ ವ್ಯಕ್ತಿ ಎಂಬ ಮಾತನ್ನು ಒಪ್ಪಿಕೊಳ್ಳುವುದಿಲ್ಲ. ಯಾಕೆಂದರೆ ಸ್ವಾನುಭವ ಬಹಳಷ್ಟು ಕಲಿಸಿಕೊಟ್ಟಿದೆ. ಯಡಿಯೂರಪ್ಪನವರ ವ್ಯಕ್ತಿತ್ವದಲ್ಲಿನ ಗುಣಾತ್ಮಕ ಅಂಶಗಳು ಮಗ ವಿಜಯೇಂದ್ರರ ಕಾರಣಕ್ಕೆ ಮಣ್ಣು ಪಾಲಾಗಿವೆ.

ವಿಜಯೇಂದ್ರ ಬಿಜೆಪಿ ರಾಜ್ಯ ಅಧ್ಯಕ್ಷ ಹುದ್ದೆಗೆ ಯಾವ ರೀತಿಯಲ್ಲೂ ಅರ್ಹನಾಗಿರಲಿಲ್ಲ. ವಿಜಯೇಂದ್ರ ಹಠ ಮಾಡಿ ಆ ಹುದ್ದೆ ಪಡೆದರೋ ಅಥವಾ ಯಡಿಯೂರಪ್ಪನವರೇ ಪುತ್ರ ವ್ಯಾಮೋಹದಿಂದ ಆ ಹುದ್ದೆ ಕೊಡಿಸಿದರೋ...? ಏನೇ ಆಗಿದ್ದರೂ ಅದು ತಪ್ಪು ನಿರ್ಧಾರವಾಗಿತ್ತು. ವಯಸ್ಸಿನ ಕಾರಣಕ್ಕೆ ವಿಜಯೇಂದ್ರ ಆ ಹುದ್ದೆಗೆ ನಾಲಾಯಕ್ ಅಂತ ಹೇಳಲಾಗದು. ಚಿಕ್ಕ ವಯಸ್ಸಿನ ಅದೆಷ್ಟೋ ಜನ ದೊಡ್ಡ ಹುದ್ದೆಯನ್ನು ಪಡೆದು ಸಮರ್ಥವಾಗಿ ನಿಭಾಯಿಸಿದ್ದಾರೆ. ನಾಯಕನಾಗಲು ಬೇಕಾಗಿದ್ದು ಪ್ರಬುದ್ಧತೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಚಾಕಚಕ್ಯತೆ ಮತ್ತು ಹಿರಿಯರನ್ನು, ಕಿರಿಯರನ್ನು ಅವರ ಯೋಗ್ಯತೆಗೆ ಅನುಸಾರವಾಗಿ ಗೌರವಿಸುವ, ಹೊಣೆಗಾರಿಕೆ ನೀಡುವ ಜಾಣ್ಮೆ ಇರಬೇಕು.

ಯಡಿಯೂರಪ್ಪ ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಪಕ್ಷದಲ್ಲಿನ ಬಹುತೇಕ ಕಿರಿಯ ನಾಯಕರನ್ನು ಏಕವಚನದಲ್ಲೇ ಮಾತನಾಡುತಿದ್ದರು. ಬೊಮ್ಮಾಯಿ, ಲಕ್ಷ್ಮಣ ಸವದಿ, ಮುರುಗೇಶ್ ನಿರಾಣಿ ಸೇರಿದಂತೆ ಎಲ್ಲರನ್ನೂ ಏಕವಚನದಲ್ಲಿ ಸಂಭೋದಿಸುತ್ತಿದ್ದರು. ಯಾರೊಬ್ಬರೂ ಅಪಾರ್ಥ ಮಾಡಿಕೊಳ್ಳುತ್ತಿರಲಿಲ್ಲ ಅಥವಾ ಅಪಮಾನ ಎಂದು ಭಾವಿಸುತ್ತಿರಲಿಲ್ಲ. ನಾನು ಕಂಡಂತೆ ಕಾಂಗ್ರೆಸ್‌ನ ಹಿರಿಯ ನಾಯಕ ಎಸ್.ಎಂ. ಕೃಷ್ಣ ಮಾತ್ರ ಬಹುವಚನದಲ್ಲಿ ವ್ಯವಹರಿಸುತ್ತಿದ್ದರು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು, ಮಲ್ಲಿಕಾರ್ಜುನ ಖರ್ಗೆಯವರು, ಯಡಿಯೂರಪ್ಪ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ರಕರ್ತರು ಮತ್ತು ಹಿರಿಯರನ್ನು ಹೊರತು ಪಡಿಸಿದರೆ ಎಲ್ಲರೊಂದಿಗೆ ಏಕ ವಚನದಲ್ಲೇ ವ್ಯವಹರಿಸುತ್ತಾರೆ. ಆ ಹಿರಿತನ ಮತ್ತು ನಾಯಕತ್ವದ ಗುಣ ಬಂದಾಗ ಎಲ್ಲರೂ ಸಹಜವಾಗಿಯೇ ಆ ನಡವಳಿಕೆಯನ್ನು ಒಪ್ಪಿಕೊಳ್ಳುತ್ತಾರೆ. ವಿಜಯೇಂದ್ರ, ಪ್ರಿಯಾಂಕ್ ಖರ್ಗೆ ಮುಂತಾದವರು ತಮ್ಮ ಪಕ್ಷದ ನಾಯಕರಿಗೆ ಏಕವಚನದಲ್ಲಿ ಮಾತನಾಡಿದರೆ ಹುದ್ದೆಯ ಕಾರಣಕ್ಕೆ ಸಹಿಸಿಕೊಳ್ಳಬಹುದು. ಆದರೆ ಅದು ಅಭಾಸ ಎನಿಸುತ್ತದೆ ಮತ್ತು ಮುಜುಗರಕ್ಕೆ ಕಾರಣವಾಗುತ್ತದೆ. ಅಪ್ಪನ ಹಿರಿತನ, ನಾಯಕತ್ವದ ಗುಣ ಮಗನಲ್ಲಿ ಕಂಡಾಗ ಮಾತ್ರ ಅನುಯಾಯಿಗಳು ಸಹಜವಾಗಿ ಒಪ್ಪಿಕೊಳ್ಳುತ್ತಾರೆ. ಎಚ್.ಡಿ. ದೇವೇಗೌಡರನ್ನು ಅಪಾರವಾಗಿ ಗೌರವಿಸುವ ಅನುಯಾಯಿಗಳು ಕುಮಾರಸ್ವಾಮಿಯವರನ್ನು ಕಿರಿಯ ಎಂದೇ ಭಾವಿಸುತ್ತಾರೆ. ಯಜಮಾನಿಕೆ ತೋರಿದರೆ ಸೂಕ್ತ ಸಮಯದಲ್ಲಿ ಕೆಟ್ಟದಾಗಿ ಪ್ರತಿಭಟಿಸುತ್ತಾರೆ. ಜೆಡಿಎಸ್‌ನ ಜಿ.ಟಿ. ದೇವೇಗೌಡ ಮತ್ತು ಕುಮಾರಸ್ವಾಮಿ ನಡುವಿನ ಸಂಘರ್ಷಕ್ಕೆ ಈ ಬಗೆಯ ನಡವಳಿಕೆಯೇ ಕಾರಣ. ಜಿ.ಟಿ. ದೇವೇಗೌಡರಿಗೆ ಸಿದ್ದರಾಮಯ್ಯ ಇಷ್ಟ ಆಗುತ್ತಾರೆಯೇ ಹೊರತು ಕುಮಾರಸ್ವಾಮಿ ಅಲ್ಲ. ನಾಯಕನಾದವನಿಗೆ ಯಾರೊಂದಿಗೆ ಹೇಗೆ ವ್ಯವಹರಿಸಬೇಕು ಎಂಬ ಸಾಮಾನ್ಯ ಜ್ಞಾನ ಇರಬೇಕು.

ಮಹಾರಾಷ್ಟ್ರದಲ್ಲಿ ದಶಕಗಳ ಹಿಂದೆಯೇ ಬಿಜೆಪಿ ಅತ್ಯಂತ ಕಿರಿಯ ವಯಸ್ಸಿನ ದೇವೇಂದ್ರ ಫಡ್ನವೀಸ್ ಅವರಿಗೆ ನಾಯಕನ ಪಟ್ಟ ನೀಡಿತು. ಪಕ್ಷದ ನಾಯಕತ್ವದ ಜೊತೆಗೆ ಮುಖ್ಯಮಂತ್ರಿ ಹುದ್ದೆಯೂ ನೀಡಲಾಗಿತ್ತು. ಬಿಜೆಪಿಯ ಹಿರಿಯ ನಾಯಕ ನಿತಿನ್ ಗಡ್ಕರಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾಗ ದೇವೇಂದ್ರ ನಾಗಪುರದ ಮೇಯರ್ ಆಗಿದ್ದರು. ಅತ್ಯಂತ ಕಿರಿಯ ವಯಸ್ಸಿನ ದೇವೇಂದ್ರ ಫಡ್ನವೀಸ್ ಅವರಿಗೆ ಮುಖ್ಯಮಂತ್ರಿ ಹುದ್ದೆ ನೀಡಿದಾಗ ಬಿಜೆಪಿಯವರು ಮಾತ್ರವಲ್ಲ ಉಳಿದ ಪಕ್ಷದ ನಾಯಕರೂ ಹುಬ್ಬೇರಿಸಿದ್ದರು. ಮಹಾರಾಷ್ಟ್ರದಲ್ಲಿ ಬ್ರಾಹ್ಮಣ ಸಮುದಾಯದ ಸಂಖ್ಯಾ ಬಲ ಕಡಿಮೆ. ಅಲ್ಲಿ ಮರಾಠರು, ದಲಿತರು, ಹಿಂದುಳಿದ ವರ್ಗದ ಜನಸಂಖ್ಯೆ ಅಧಿಕ ಪ್ರಮಾಣದಲ್ಲಿದೆ. ಅದಕ್ಕೂ ಮೊದಲು ಶಿವಸೇನೆಯ ಬಾಳಾಸಾಹೇಬ್ ಠಾಕ್ರೆಯವರು ಬ್ರಾಹ್ಮಣ ಸಮುದಾಯದ ಮನೋಹರ ಜೋಶಿಯವರಿಗೆ ಮುಖ್ಯಮಂತ್ರಿ ಸ್ಥಾನ ನೀಡಿ ಅಚ್ಚರಿಗೊಳಿಸಿದ್ದರು. ಅಷ್ಟಕ್ಕೂ ದೇವೇಂದ್ರ ಫಡ್ನವೀಸ್‌ಗೆ ಹೋಲಿಸಿದರೆ ಮನೋಹರ್ ಜೋಶಿ ಅನುಭವಿಯಾಗಿದ್ದರು. ದೇವೇಂದ್ರ ಫಡ್ನವೀಸ್ ಐದು ವರ್ಷಗಳ ಕಾಲ ಮುಖ್ಯಮಂತ್ರಿ ಅವಧಿ ಪೂರೈಸಿ, ನಂತರ ಅರ್ಧ ಅವಧಿಗೆ ಉಪ ಮುಖ್ಯಮಂತ್ರಿಯೂ ಆದರು. ಈಗ ಮತ್ತೆ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ್ದಾರೆ. ಫಡ್ನವೀಸ್ ಅವರಿಗೆ ಪಕ್ಷದಲ್ಲಿ ಸಾಕಷ್ಟು ವಿರೋಧ ಇತ್ತು. ಮಾಜಿ ಉಪಮುಖ್ಯಮಂತ್ರಿ ಗೋಪಿನಾಥ ಮುಂಢೆಯವರ ಪುತ್ರಿ ಪಂಕಜಾ ಮುಂಢೆಯವರು ಫಡ್ನವೀಸ್‌ನಾಯಕತ್ವದ ವಿರುದ್ಧ ಆಗಾಗ ಕಹಳೆ ಮೊಳಗಿಸುತ್ತಿದ್ದರು. ದೇವೇಂದ್ರ ಫಡ್ನವೀಸ್ ಅವರ ಆಡಳಿತ ಅತ್ಯುತ್ತಮವಾಗಿರಲಿಲ್ಲ. ಆದರೆ ಪಕ್ಷ ಮತ್ತು ಸರಕಾರದಲ್ಲಿ ಭಿನ್ನಾಭಿಪ್ರಾಯ ಕಾಣಿಸದಂತೆ ಜಾಣತನದಿಂದ ವ್ಯವಹರಿಸಿದ್ದು ಯುವ ನಾಯಕರಿಗೆ ಪಾಠದಂತಿದೆ.

ದೇವೇಂದ್ರ ಫಡ್ನವೀಸ್‌ಗೆ ಸಾಧ್ಯವಾಗಿದ್ದು ವಿಜಯೇಂದ್ರಗೆ ಯಾಕೆ ಸಾಧ್ಯವಾಗಲಿಲ್ಲ? ವಿಜಯೇಂದ್ರ ಅತಿಯಾಗಿ ನಂಬಿದ್ದು ಯಡಿಯೂರಪ್ಪ ಅವರ ನಾಮಬಲ ಒಂದನ್ನೇ. ಯಡಿಯೂರಪ್ಪ ಬಿಜೆಪಿಯಲ್ಲಿ ನಾಯಕನಾಗಿ ಹೊರಹೊಮ್ಮಿದ್ದು, ಕರ್ನಾಟಕದ ವೀರಶೈವ ಲಿಂಗಾಯತರು ಇವ ನಮ್ಮವ ಎಂದು ಒಪ್ಪಿಕೊಂಡಿದ್ದು ಒಂದೇ ದಿನದಲ್ಲಿ ನಡೆದ ವಿದ್ಯಮಾನವಲ್ಲ. ಯಡಿಯೂರಪ್ಪ ಮಾತ್ರವಲ್ಲ, ದೇವರಾಜ ಅರಸು, ದೇವೇಗೌಡ, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಸಮುದಾಯದ ಪ್ರೀತಿಗೆ ಪಾತ್ರರಾಗುತ್ತಲೇ ಜನನಾಯಕರಾಗಿ ರೂಪುಗೊಂಡಿದ್ದು ಸುದೀರ್ಘ ಒಡನಾಟದಿಂದ. ದೇವರಾಜ ಅರಸು ಅವರಿಗಂತೂ ದೊಡ್ಡ ಸಮುದಾಯದ ಬಲ ಇರಲಿಲ್ಲ. ಎಲ್ಲರನ್ನೂ ವಿಶ್ವಾಸದ ತೆಕ್ಕೆಯಲ್ಲಿ ತೆಗೆದುಕೊಂಡು ಜನನಾಯಕರಾಗಿ ಬೆಳೆದರು.

ಒಕ್ಕಲಿಗ ಸಮುದಾಯದಲ್ಲಿ ಹಲವು ಜನನಾಯಕರಿದ್ದರು. ದೇವೇಗೌಡರನ್ನೇ ಯಾಕೆ ಆ ಸಮುದಾಯ ಅಪ್ಪಿಕೊಂಡಿತು? ಕುರುಬ ಸಮುದಾಯದ ಕೆ.ಎಸ್. ಈಶ್ವರಪ್ಪ ಜನಸಂಘ ಕಾಲದಿಂದಲೂ ಸಾರ್ವಜನಿಕ ಬದುಕಿನಲ್ಲಿ ಸಕ್ರಿಯವಾಗಿದ್ದರು. ಸಮುದಾಯವೂ ಅವರನ್ನು ತಮ್ಮ ನಾಯಕ ಎಂದು ಒಪ್ಪಿಕೊಳ್ಳಲಿಲ್ಲ. ಬಿಜೆಪಿಯಲ್ಲೂ ಜನನಾಯಕನಾಗಿ ಹೊರ ಹೊಮ್ಮಲಿಲ್ಲ. ಅದೇ ಸಿದ್ದರಾಮಯ್ಯ ಅವರು ಸಮುದಾಯದ ಒಮ್ಮತದ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಹಾಗೆಯೇ ಕರ್ನಾಟಕದ ಜನನಾಯಕರಾಗಿ ಹೊರಹೊಮ್ಮಿದರು. ಕಾಂಗ್ರೆಸ್ ಪಕ್ಷಕ್ಕೆ ಸಿದ್ದರಾಮಯ್ಯ ಅನಿವಾರ್ಯ ಆಗಿದ್ದರಿಂದಲೇ ಅವರನ್ನು ಎರಡೆರಡು ಬಾರಿ ಮುಖ್ಯಮಂತ್ರಿ ಹುದ್ದೆಗೆ ಪರಿಗಣಿಸಲಾಯಿತು.

ಕರ್ನಾಟಕದ ರಾಜಕೀಯ ಇತಿಹಾಸದ ಕನಿಷ್ಠ ಪರಿಜ್ಞಾನ ಇದ್ದಿದ್ದರೂ ಬಿ.ವೈ. ವಿಜಯೇಂದ್ರಗೆ ಈ ಗತಿ ಬರುತ್ತಿರಲಿಲ್ಲ. ಕರ್ನಾಟಕದಲ್ಲಿ ಇಲ್ಲಿಯವರೆಗೆ ಯಾರೊಬ್ಬರೂ ಅಪ್ಪನ ನಾಮಬಲದಿಂದಲೇ ಜನ ನಾಯಕರಾಗಿ ರೂಪುಗೊಂಡಿಲ್ಲ. ಎಸ್. ನಿಜಲಿಂಗಪ್ಪ, ರಾಮಕೃಷ್ಣ ಹೆಗಡೆ ಮಕ್ಕಳನ್ನು ರಾಜಕೀಯಕ್ಕೆ ತರಲಿಲ್ಲ. ವೀರೇಂದ್ರ ಪಾಟೀಲ್, ಜೆ.ಎಚ್. ಪಟೇಲ್ ಒಲ್ಲದ ಮನಸ್ಸಿನಿಂದ ತಮ್ಮ ಮಕ್ಕಳಿಗೆ ರಾಜಕೀಯ ಅವಕಾಶ ಕಲ್ಪಿಸಿದರು. ಒಂದು ಬಾರಿ ಶಾಸನ ಸಭೆಗೆ ಆಯ್ಕೆಯಾದವರು ಮತ್ತೆ ಜನರ ಪ್ರೀತಿಗೆ ಪಾತ್ರರಾಗಲೇ ಇಲ್ಲ. ಆರ್. ಗುಂಡೂರಾವ್ ಅವರ ಪುತ್ರ ದಿನೇಶ್ ಗುಂಡೂರಾವ್‌ಗೆ ಅಪ್ಪನ ಹೆಸರು ತುಸು ಸಹಾಯ ಮಾಡಿರಬಹುದು. ಆದರೆ ಅವರು ನಿರಂತರ ಜನರ ನಡುವೆ ಇದ್ದೇ ಈ ಹಂತ ತಲುಪಿದ್ದಾರೆ. ವಿಜಯೇಂದ್ರ ತರಹ ನಡವಳಿಕೆ ರೂಢಿಸಿಕೊಂಡಿದ್ದರೆ ದಿನೇಶ್ ಗುಂಡೂರಾವ್ ಎರಡನೇ ಬಾರಿ ಶಾಸಕನಾಗಲು ಹೆಣಗಾಡಬೇಕಾಗುತ್ತಿತ್ತು.

ಎಚ್.ಡಿ. ದೇವೇಗೌಡರ ತಂತ್ರಗಾರಿಕೆ ಮತ್ತು ನಾಮಬಲದಿಂದ ಎಚ್.ಡಿ. ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿ ಹುದ್ದೆ ಅಲಂಕರಿಸಬಹುದು. ಕೇಂದ್ರ ಮಂತ್ರಿಯಾಗಿಯೂ ಕಾರ್ಯ ನಿರ್ವಹಿಸುವ ಅವಕಾಶ ಪಡೆದಿರಬಹುದು. ಆದರೆ ಈ ಹೊತ್ತಿಗೂ ಕುಮಾರಸ್ವಾಮಿ ಜನನಾಯಕನಾಗಿ ರೂಪುಗೊಳ್ಳಲಿಲ್ಲ. ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದಾಗ ಜನಪ್ರಿಯತೆಯ ಹತ್ತಿರ ಹೋಗಿದ್ದರು. ಆದರೆ ಯಶಸ್ವಿಯಾಗಲಿಲ್ಲ. ಎಚ್.ಡಿ. ರೇವಣ್ಣ ಅತ್ಯುತ್ತಮ ಜನಸಂಪರ್ಕ ಹೊಂದಿಯೂ ಹಾಸನ ಜಿಲ್ಲೆಗೆ ನಾಯಕತ್ವ ಸೀಮಿತಗೊಳಿಸಿಕೊಂಡರು.

ಬಸವರಾಜ ಬೊಮ್ಮಾಯಿ ಯಡಿಯೂರಪ್ಪ ನೀಡಿದ ಭಿಕ್ಷೆಯಲ್ಲಿ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದರೇ ಹೊರತು ಜನನಾಯಕರಾಗಿ ಹೊರಹೊಮ್ಮಲೇ ಇಲ್ಲ. ವಿಜಯೇಂದ್ರಗೆ ಹೋಲಿಸಿದರೆ, ಕುಮಾರಸ್ವಾಮಿ ಮತ್ತು ಬೊಮ್ಮಾಯಿ ಅವರು ಜನನಾಯಕರಾಗುವ ಹೆಚ್ಚು ಸಾಮರ್ಥ್ಯ ಹೊಂದಿದ್ದರು. ಉಡಾಫೆ ಮತ್ತು ಅತಿಯಾದ ಆತ್ಮವಿಶ್ವಾಸದಲ್ಲಿ ಮಣ್ಣು ಮುಕ್ಕಿದರು.

ಬಿ.ವೈ. ವಿಜಯೇಂದ್ರಗೆ ಹೋಲಿಸಿದರೆ ಅವರ ಅಣ್ಣ ರಾಘವೇಂದ್ರ ಬಗ್ಗೆ ಎಲ್ಲೆಡೆ ಉತ್ತಮ ಅಭಿಪ್ರಾಯ ಇದೆ. ಅಪ್ಪ ಮತ್ತು ಅಣ್ಣನ ಸಲಹೆ ಮೇರೆಗೆ ಪಕ್ಷವನ್ನು ಮುನ್ನಡೆಸಿದ್ದರೆ, ವಿಜಯೇಂದ್ರಗೆ ಈ ದುರ್ಗತಿ ಎದುರಾಗುತ್ತಿರಲಿಲ್ಲ. ರಾಘವೇಂದ್ರ ಬಗ್ಗೆ ಬಿಜೆಪಿಯವರು ಮಾತ್ರವಲ್ಲ ಬೇರೆ ಪಕ್ಷದವರು ಮೆಚ್ಚುಗೆಯ ಮಾತುಗಳನ್ನು ಆಡುತ್ತಾರೆಂದರೆ ಅಷ್ಟರಮಟ್ಟಿಗೆ ಆತ ದುರಹಂಕಾರ ಕಡಿಮೆ ಮಾಡಿಕೊಂಡಿರಬೇಕು.

ವಿಜಯೇಂದ್ರ ಬಿಜೆಪಿ ರಾಜ್ಯ ಅಧ್ಯಕ್ಷ ಹುದ್ದೆಯ ಜವಾಬ್ದಾರಿ ಹೊತ್ತುಕೊಳ್ಳುವ ಸಂದರ್ಭದಲ್ಲಿ ಪಕ್ಷದ ಸಂಘಟನೆ ದುರ್ಬಲವಾಗಿತ್ತು. ಯಡಿಯೂರಪ್ಪ ಅವರ ಅನುಗಾಲದ ವಿರೋಧಿಗಳೆಲ್ಲ ಗಾಯಗೊಂಡ ಹುಲಿಗಳಾಗಿದ್ದರು. ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ನಿಜವಾಗಿಯೂ ಬುದ್ಧಿವಂತ ಮತ್ತು ಸಂಘಟನಾ ಚತುರ. ಕರ್ನಾಟಕದ ಬಹುಪಾಲು ಸುದ್ದಿ ಮಾಧ್ಯಮಗಳು ಅವರ ನಿಯಂತ್ರಣದಲ್ಲಿವೆ. ಅವರು ಇಶಾರೆ ಕೊಟ್ಟರೆ ಬಯಸಿದ ಸುದ್ದಿಗಳು ದಿನ ಬೆಳಗಾಗುವುದರಲ್ಲಿ ಪ್ಲಾಂಟ್ ಆಗುತ್ತವೆ. ಅವರು ಮನಸ್ಸು ಮಾಡಿದರೆ ಅತ್ಯಂತ ಜನಪರ ಮತ್ತು ಗಂಭೀರ ಸ್ವರೂಪದ ಸುದ್ದಿಗಳು ಕ್ಷಣ ಮಾತ್ರದಲ್ಲಿ ಸಾಯುತ್ತವೆ. ಅಂಥ ಪ್ರಭಾವಿ ನಾಯಕನ ವಿಶ್ವಾಸದಲ್ಲಿ ಆರೆಸ್ಸೆಸ್‌ನ ಅನೇಕ ಹಿರಿಯರು ಮತ್ತು ಬಿಜೆಪಿಯ ಮುಖಂಡರು ಇದ್ದಾರೆ. ಸಂತೋಷ್ ಅವರ ಬದುಕಿನ ಏಕೈಕ ಗುರಿ ಯಡಿಯೂರಪ್ಪ ಅವರ ದೈತ್ಯ ನಾಯಕತ್ವ ಕೊನೆಗಾಣಿಸಿ ಆ ಜಾಗದಲ್ಲಿ ಯಾವುದೇ ಜಾತಿ ಪ್ರಾಬಲ್ಯ ಇಲ್ಲದ ಸಂಪೂರ್ಣ ಸಂಘದ ಹಿಡಿತದಲ್ಲಿರುವ ಹೊಸ ನಾಯಕತ್ವ ಸ್ಥಾಪಿಸುವುದಾಗಿತ್ತು. ಯಡಿಯೂರಪ್ಪ, ಅನಂತಕುಮಾರ್ ನಾಯಕತ್ವದ ಹಿಡಿತ ಕೊನೆಗಾಣಿಸಿ ಹೊಸ ನಾಯಕತ್ವ, ಅದು ಸಂಘ ಪ್ರಣೀತ ಮತ್ತು ಪ್ರೇರಿತ ನಾಯಕತ್ವ ತರಲು ಮೊದಲಿನಿಂದಲೂ ಯತ್ನಿಸುತ್ತಿದ್ದರು. 2021ರಲ್ಲಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸುವಲ್ಲಿ ಸಂತೋಷ್ ನಿರ್ಣಾಯಕ ಪಾತ್ರ ವಹಿಸಿದ್ದರು. ಮೋದಿ ಮತ್ತು ಅಮಿತ್ ಶಾ ಅವರಿಗೆ ಹತ್ತಿರವಾಗಿ ಯಡಿಯೂರಪ್ಪ ಅವರನ್ನೇನೋ ಕೆಳಗಿಳಿಸಿದರು. ಆದರೆ ಬಸವರಾಜ ಬೊಮ್ಮಾಯಿ ಬರುವುದು ಅವರಿಗೆ ಸುತಾರಾಂ ಇಷ್ಟ ಇರಲಿಲ್ಲ. ಏನೇನೋ ಉಪ ಜಾತಿಯ ಲೆಕ್ಕ ಹಾಕಿ ಯಡಿಯೂರಪ್ಪ ಅವರು ಸಾದರ ಲಿಂಗಾಯತ ಸಮುದಾಯದ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಹುದ್ದೆಯಲ್ಲಿ ಪ್ರತಿಷ್ಠಾಪಿಸಿದರು. ಮುಖ್ಯಮಂತ್ರಿ ಹುದ್ದೆ ಅಲಂಕರಿಸುತ್ತಲೇ ಬೊಮ್ಮಾಯಿ ಸರಕಾರದ ಆಡಳಿತ ಯಂತ್ರವನ್ನು ಬಿ.ಎಲ್. ಸಂತೋಷ್ ಅವರ ಮರ್ಜಿಗೆ ಒಪ್ಪಿಸಿ, ವ್ಯವಹಾರ ವಹಿವಾಟನ್ನು ಯಡಿಯೂರಪ್ಪ ಮತ್ತು ವಿಜಯೇಂದ್ರ ಸುಪರ್ದಿಗೆ ಕೊಟ್ಟರು. ದುರಂತವೆಂದರೆ ತನ್ನನ್ನು ಅಂದಿನ ಆರೋಗ್ಯ ಮಂತ್ರಿ ಡಾ. ಸುಧಾಕರ್‌ರ ನಿಯಂತ್ರಣಕ್ಕೆ ಕೊಟ್ಟರು. ಸಂತೋಷ್ ಅವರಿಗೆ ಎರಡು ವರ್ಷದಲ್ಲಿ ಹಿಂದೂ-ಮುಸ್ಲಿಮ್ ಧ್ರುವೀಕರಣದ ರಾಜಕಾರಣ ಮಾಡಿ ಕರ್ನಾಟಕದಲ್ಲಿ ಬಿಜೆಪಿಗೆ ನೂರಾ ಐವತ್ತು ಸೀಟು ಗೆಲ್ಲಿಸುವ ಕನಸು ಇತ್ತು. ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರು ಎಷ್ಟು ಸಾಧ್ಯವೋ ಅಷ್ಟು ಹಣ ಮಾಡುವ ಆಸೆಗೆ ಬಿದ್ದರು. ಬಸವರಾಜ ಬೊಮ್ಮಾಯಿ ತಂದೆ ಎಸ್. ಆರ್. ಬೊಮ್ಮಾಯಿಯವರ ತತ್ವ ಆದರ್ಶಗಳನ್ನು, ಜನತಾ ಪರಿವಾರದ ರಾಜಕೀಯ ಮತ್ತು ಆಡಳಿತ ಅನುಭವವನ್ನು ಪಕ್ಕಕ್ಕೆ ಇಟ್ಟು ಅರಾಜಕ ರಾಜಕಾರಣ ಮಾಡತೊಡಗಿದರು. ಹೇಗೂ ಮೋದಿ-ಅಮಿತ್ ಶಾ ನಾಮ ಬಲದಿಂದ ಕರ್ನಾಟದಲ್ಲಿ ಬಿಜೆಪಿ ಗೆದ್ದೇ ಗೆಲ್ಲುತ್ತದೆ. ಸಂತೋಷ್ ಅಥವಾ ಪ್ರಹ್ಲಾದ್ ಜೋಶಿ ಯಾರೇ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದರೂ ತಾನು ಮಾತ್ರ ಕೇಂದ್ರದಲ್ಲಿ ಸಂಪುಟದಲ್ಲಿ ಕ್ಯಾಬಿನೆಟ್ ಮಂತ್ರಿಯಾಗುವುದು ನಿಶ್ಚಿತ ಎಂದೇ ನಂಬಿದ್ದರು. 2023ರ ವಿಧಾನಸಭಾ ಚುನಾವಣೆಯ ಸಂಪೂರ್ಣ ಜವಾಬ್ದಾರಿಯನ್ನು ಬಿ.ಎಲ್. ಸಂತೋಷ್ ವಹಿಸಿಕೊಂಡರು. ಬಸವರಾಜ ಬೊಮ್ಮಾಯಿ ನೆಪ ಮಾತ್ರಕ್ಕೆ ನಾಯಕರಾದರು. ಯಡಿಯೂರಪ್ಪ ಅವರಿಗೆ ಸಂಸದೀಯ ಮಂಡಳಿಯ ಸದಸ್ಯನನ್ನಾಗಿಸಿ ಪಕ್ಕಕ್ಕೆ ತಳ್ಳಿದ್ದರು. ಟಿಕೆಟ್ ಹಂಚಿಕೆಯಿಂದ ಹಿಡಿದು ಚುನಾವಣಾ ತಂತ್ರಗಾರಿಕೆ ರೂಪಿಸುವ ಹೊಣೆ ಹೊತ್ತ ಸಂತೋಷ್ ಉತ್ತರ ಪ್ರದೇಶ-ಗುಜರಾತ್ ಮಾದರಿಯ ಹಿಂದೂ-ಮುಸ್ಲಿಮ್ ಮತಗಳ ಧ್ರುವೀಕರಣಕ್ಕೆ ಯತ್ನಿಸಿದರು. ಲಿಂಗಾಯತ ಸೇರಿದಂತೆ ಯಾವೊಂದು ಜಾತಿಯ ಪ್ರಾಬಲ್ಯ ಇಲ್ಲದ ಹಾಗೆ ಟಿಕೆಟ್ ಹಂಚಿದರು. ಹಾಲಿ ಶಾಸಕರಿಗೆ ಟಿಕೆಟ್ ತಪ್ಪಿಸಿ ಹೊಸ ಮುಖಗಳಿಗೆ ಅವಕಾಶ ನೀಡಿದರು. ಜಗದೀಶ್ ಶೆಟ್ಟರ್‌ರಂಥ ಹಿರಿಯರಿಗೆ ಟಿಕೆಟ್ ತಪ್ಪಿಸಿದರು. ಬೊಮ್ಮಾಯಿ ಹುಚ್ಚರ ಮದುವೆಯಲ್ಲಿ ಉಂಡವನೇ ಜಾಣ ಎನ್ನುವಂತೆ ತನಗೆ ಬೇಡವಾದ ಲಕ್ಷ್ಮಣ ಸವದಿ ಮುಂತಾದವರನ್ನು ಬಲಿ ಹಾಕಿದರು. ಅನುಭವಿ ಯಡಿಯೂರಪ್ಪ ತನಗೆ ಬೇಕಾದವರಿಗೆ ಟಿಕೆಟ್ ಕೊಡಿಸಿ ಉಳಿದಿದ್ದು ತನಗೆ ಸಂಬಂಧವೇ ಇಲ್ಲ ಎಂಬಂತೆ ಶಿಕಾರಿಪುರದಲ್ಲಿ ಸ್ಥಿತರಾದರು. ಬಿಜೆಪಿಯಲ್ಲಿ ಯಾರ್ಯಾರನ್ನು ಸೋಲಿಸಬೇಕು ಎಂದು ಅಂದುಕೊಂಡಿದ್ದರೋ ಆ ಪ್ರಯತ್ನದಲ್ಲಿ ಫಲ ಕಂಡರು. ಸಿ.ಟಿ. ರವಿ, ಸೋಮಣ್ಣ ಸೇರಿದಂತೆ ಬಿ.ಎಲ್. ಸಂತೋಷ್ ಬಣದ ಆಪ್ತರನ್ನು ಬಲಿ ಹಾಕಿದರು. ಬೊಮ್ಮಾಯಿ ಮುಖಕ್ಕೆ, ಸಂತೋಷ್ ತಂತ್ರಗಾರಿಕೆಗೆ, ಮಾಧ್ಯಮಗಳ ಅಬ್ಬರಕ್ಕೆ ಕರ್ನಾಟಕದ ಮತದಾರ ಜಗ್ಗಲಿಲ್ಲ. ಬಿಜೆಪಿಯನ್ನು ಹೀನಾಯವಾಗಿ ಸೋಲಿಸಿದರು. ಕರ್ನಾಟಕ ಬಿಜೆಪಿಯಲ್ಲಿನ ಒಳ ಜಗಳದ ವಿರಾಟ್ ಸ್ವರೂಪ ಕಂಡ ಮೋದಿ-ಆಮಿತ್ ಶಾ, ಲೋಕಸಭಾ ಚುನಾವಣೆ ಹೊತ್ತಿಗೆ ಜೋಕರ್ ಕಾರ್ಡ್‌ಗಳನ್ನು ಬದಲಿಸಿದರು. ಹೇಗಾದರೂ ಮಾಡಿ ಕರ್ನಾಟಕದಲ್ಲಿ ಹೆಚ್ಚು ಸ್ಥಾನ ಗೆಲ್ಲುವುದು ಅವರ ಗುರಿಯಾಗಿತ್ತು. ಯಡಿಯೂರಪ್ಪ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡರು. ಅವರ ಮಗನಿಗೆ ಬಿಜೆಪಿ ರಾಜ್ಯ ಅಧ್ಯಕ್ಷ ಹುದ್ದೆ ದಯಪಾಲಿಸಿದರು. ನಿರೀಕ್ಷಿತ ಪ್ರಮಾಣದ ಗೆಲುವೂ ಸಾಧಿಸಿದರು. ಬಿಜೆಪಿಯಲ್ಲಿ ಪೂರ್ಣ ಪ್ರಮಾಣದ ಒಗ್ಗಟ್ಟು ಇಲ್ಲದ ಕಾರಣಕ್ಕೆ ಎರಡು ಮೂರು ಸ್ಥಾನಗಳ ನಷ್ಟ ಅನುಭವಿಸಿದರು.

ಬಿ.ಎಲ್. ಸಂತೋಷ್ ಅವರಂಥ ಅನುಭವಿ ತಂತ್ರಗಾರನೆದುರು ತನ್ನ ನಾಯಕತ್ವ ಸಾಬೀತು ಪಡಿಸಬೇಕಾಗಿದೆ ಎಂಬ ಗಾಂಭೀರ್ಯ ಇಲ್ಲದಂತೆ ವಿಜಯೇಂದ್ರ ನಡೆದುಕೊಂಡರು. ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವುದು ದೂರದ ಮಾತು, ಆಪ್ತ ವಲಯದ ಅನುಯಾಯಿಗಳನ್ನೂ ಘಾಸಿಗೊಳಿಸಿದರು. ಈಗ ಡಾ. ಸುಧಾಕರ್ ಬಹಿರಂಗ ಬಂಡಾಯ ಸಾರಿದ್ದಾರೆಂದರೆ, ಬಸವರಾಜ ಬೊಮ್ಮಾಯಿ ಸೇರಿದಂತೆ ಅಸಂಖ್ಯಾತ ಯಡಿಯೂರಪ್ಪ ಅನುಯಾಯಿಗಳ ನೋವು ಅಲ್ಲಿ ಅಡಗಿದೆ. ಸಂತೋಷ್ ಬಣದವರು ವಿಜಯೇಂದ್ರ ನೇತೃತ್ವ ಒಪ್ಪಿಕೊಳ್ಳಲು ಸಾಧ್ಯವೇ ಇರಲಿಲ್ಲ. ಒಂದು ಕಾಲದಲ್ಲಿ ಯಡಿಯೂರಪ್ಪ ಅವರಿಂದ ಅನುಕೂಲ ಮಾಡಿಕೊಂಡವರು, ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಬದಲಿಗೆ ಎಲ್ಲರನ್ನೂ ಎಷ್ಟು ಸಾಧ್ಯವೋ ಅಷ್ಟು ತುಳಿಯಲು ಯತ್ನಿಸಿದರು. ಸಮರ್ಥ ಜನನಾಯಕ ಆಗಬೇಕೆಂಬ ಹಂಬಲ ಉಳ್ಳವರು ಬೈದವರನ್ನು ಬಂಧುಗಳೆಂದು ಅಪ್ಪಿಕೊಳ್ಳುವ ಅನಿವಾರ್ಯತೆ ರಾಜಕಾರಣದಲ್ಲಿ ಇರುತ್ತದೆ. ವಿಜಯೇಂದ್ರ, ಅಪ್ಪನ ಕಾರಣಕ್ಕೆ ಎಲ್ಲರೂ ಗುಲಾಮರಂತೆ ಬಿದ್ದುಕೊಂಡಿರುತ್ತಾರೆ ಎಂದೇ ಭಾವಿಸಿದರು. ಲಿಂಗಾಯತ ಸಮುದಾಯ ತಮ್ಮ ಮನೆತನದ ಜೀತಕ್ಕಿರುವ ಗುಲಾಮರ ಗುಂಪು ಎಂದು ಗಟ್ಟಿಯಾಗಿ ನಂಬಿಕೊಂಡರು. ಒಬ್ಬ ನಾಯಕ ಪಕ್ಷಕ್ಕೆ ಮತ್ತು ತನ್ನ ಸಮುದಾಯಕ್ಕೆ ಅನಿವಾರ್ಯ ಜನನಾಯಕ ಆಗುವುದು ನಿರಂತರ ಒಡನಾಟದಲ್ಲಿ. ಕಷ್ಟ-ಸುಖದಲ್ಲಿ ತನು, ಮನ, ಧನದೊಂದಿಗೆ ಸ್ಪಂದಿಸುವಲ್ಲಿ. ಸಂತೋಷ್ ಬಣದ ನಾಯಕರನ್ನು ಸೇರಿ, ಎಲ್ಲರ ಪ್ರೀತಿಗೆ ಪಾತ್ರನಾಗಲು ಯತ್ನಿಸಿದ್ದರೆ ವಿಜಯೇಂದ್ರ ಬಗ್ಗೆ ಕನಿಷ್ಠ ಕನಿಕರವಾದರೂ ಮೂಡುತ್ತಿತ್ತು. ಸಂತೋಷ್ ಬಣದ ಜೊತೆಗೆ, ಬಸವರಾಜ ಬೊಮ್ಮಾಯಿ ಬೆಂಬಲಿಗರು, ಶ್ರೀರಾಮುಲು ತಂಡ, ಒಳಗೊಳಗೇ ಕುದಿಯುತ್ತಿರುವ ಅಸಂಖ್ಯಾತ ನಾಯಕರು ವಿಜಯೇಂದ್ರ ತೊಲಗುವುದನ್ನು ಕಾಯುತ್ತಿದ್ದಾರೆ. ವಿರೋಧಿಗಳ ಬಲ ಹೆಚ್ಚುತ್ತಿದೆ. ಚನ್ನಪಟ್ಟಣದಲ್ಲಿ ಸಿ.ಪಿ. ಯೋಗೇಶ್ವರ್‌ರನ್ನು ಮೈತ್ರಿ ಅಭ್ಯರ್ಥಿ ಮಾಡಿದ್ದರೆ ಅಷ್ಟರ ಮಟ್ಟಿಗೆ ಸಂತೋಷ ಬಣವನ್ನು ಹಿಮ್ಮೆಟ್ಟಿಸಿದಂತಾಗುತ್ತಿತ್ತು. ಸಂಡೂರ್ ಮತ್ತು ಶಿಗ್ಗಾಂವಿ ಉಪ ಚುನಾವಣಾ ಫಲಿತಾಂಶ, ವಿಜಯೇಂದ್ರಗೆ ಗೆಲ್ಲಿಸುವ ತಾಕತ್ತು, ವರ್ಚಸ್ಸು ಮತ್ತು ನಾಯಕತ್ವದ ಗುಣ ಇಲ್ಲ ಎನ್ನುವುದು ಸ್ಪಷ್ಟಪಡಿಸಿದೆ. ಯಡಿಯೂರಪ್ಪ ಈಗಲಾದರೂ ಪುತ್ರ ವ್ಯಾಮೋಹ ಬಿಟ್ಟು ಅಪ್ರಬುದ್ಧ ಮಗನಿಗೆ ದೀರ್ಘ ಕಾಲ ಉಪಯೋಗಕ್ಕೆ ಬರುವ ರಾಜಕೀಯದ ಪಾಠ ಹೇಳಿಕೊಡಬೇಕಿದೆ. ನಾಯಕ ಅನುಭವದಿಂದ, ತಪ್ಪು ತಿದ್ದಿಕೊಳ್ಳುವುದರಿಂದ, ವೈಫಲ್ಯವನ್ನು ಒಪ್ಪಿಕೊಂಡು ಹೊಸ ಮನುಷ್ಯನಾಗುವುದರಿಂದ ಹುಟ್ಟಿಕೊಳ್ಳುತ್ತಾನೆ. ಕರ್ನಾಟಕದಲ್ಲಿ ವಿಜಯೇಂದ್ರ ಸೇರಿದಂತೆ ಬಹುಪಾಲು ಯುವ ನಾಯಕರು ಒಮ್ಮೆಲೇ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದಾರೆ ಹೊರತು ಜನರ ಪ್ರೀತಿ ವಿಶ್ವಾಸವನ್ನು ಗೆಲ್ಲುವ ಸವಾಲು ಸ್ವೀಕರಿಸುತ್ತಿಲ್ಲ. ಸಂತೋಷ್ -ಯಡಿಯೂರಪ್ಪ ಬಣಗಳ ನಡುವಿನ ಪೈಪೋಟಿಯಲ್ಲಿ ಬಸವರಾಜ ಬೊಮ್ಮಾಯಿ ಬಿಜೆಪಿ ರಾಜ್ಯಾಧ್ಯಕ್ಷರಾಗಲು ಹಂಬಲಿಸುತ್ತಿರುವುದು ನಿಚ್ಚಳವಾಗುತ್ತಿದೆ. ಬೊಮ್ಮಾಯಿಯವರು ತಾನು ಮುಖ್ಯಮಂತ್ರಿ ಹುದ್ದೆಯ ರೇಸ್‌ನಲ್ಲಿ ಇಲ್ಲ ಎಂದು ಹೇಳುತ್ತಲೇ ಆ ಹುದ್ದೆ ಪಡೆದರು. ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಈಶ್ವರಪ್ಪ ಪುತ್ರ ಕಾಂತೇಶ್‌ಗೆ ನೀಡಬೇಕು ಎಂದು ಕೋರ್ ಕಮಿಟಿಯಲ್ಲಿ ಹೇಳಿದ್ದೇನೆ ಎನ್ನುತ್ತಲೇ ಸಂಸದನಾದರು. ಶಿಗ್ಗಾಂವಿಯಲ್ಲಿ ಮಗನಿಗಾಗಿ ಯತ್ನಿಸುತ್ತಿಲ್ಲ ಎಂದು ಹೇಳುತ್ತಲೇ ಟಿಕೆಟ್ ತಂದರು. ಸಾದರ ಸಮುದಾಯದ ಬೊಮ್ಮಾಯಿ, ಜಿ.ಎಂ. ಸಿದ್ದೇಶ್, ಬಿ.ಪಿ. ಹರೀಶ್ ಸೇರಿದಂತೆ ಹಲವರ ವಿರೋಧ ಕಟ್ಟಿಕೊಂಡು ಮುಂದಿನ ಚುನಾವಣೆಯಲ್ಲಿ ವಿಜಯೇಂದ್ರ ಗೆಲ್ಲುವುದೇ ಕಷ್ಟವಿದೆ. ವಿಜಯೇಂದ್ರರನ್ನು ಮುಳುಗಿಸಲು ಇಷ್ಟು ದಿನ ಯಡಿಯೂರಪ್ಪ ವಿರೋಧಿಗಳು ರಣ ತಂತ್ರ ರೂಪಿಸಿದ್ದರು. ಈಗ ಯಡಿಯೂರಪ್ಪ ಆಪ್ತ ವಲಯದವರೇ ವಿಜಯೇಂದ್ರ ನಾಯಕನಾಗಲಾರ ಎಂದು ಭಾವಿಸಿದಂತಿದೆ. ಬಸವರಾಜ ಬೊಮ್ಮಾಯಿ, ಸುಧಾಕರ್, ಶ್ರೀರಾಮುಲು ಯಡಿಯೂರಪ್ಪನವರ ಬಹುದೊಡ್ಡ ಫಲಾನುಭವಿಗಳು. ಅಂತೂ ಇಂತೂ ಶಿಸ್ತಿನ ಪಕ್ಷ ಅವಸಾನದ ಅಂಚಿಗೆ ಬಂದು ತಲುಪಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಡಾ. ರಾಜಶೇಖರ ಹತಗುಂದಿ

contributor

Similar News