ಮಾಧುಸ್ವಾಮಿ ಒಳ ಮೀಸಲಾತಿ ವರದಿಯಲ್ಲಿ ನೈಜ ದತ್ತಾಂಶಗಳಿಲ್ಲ?

ನ್ಯಾಯಮೂರ್ತಿ ಸದಾಶಿವ ಆಯೋಗದ ಅಂಕಿ-ಅಂಶಗಳನ್ನು ಆಕರವಾಗಿ ಸ್ವೀಕರಿಸಿದರೆ ಯಾವುದೇ ಕಾನೂನಿನ ತೊಡಕು ಬರುವುದಿಲ್ಲ. ಮಾಧುಸ್ವಾಮಿ ಸಮಿತಿ ವರದಿ ಕೆಲವರಿಗಾಗಿ ಮಾಡಿದ ಗಮಲಿನ ಪಾಯಸದಂತೆ ಇತ್ತೆಂಬ ಆರೋಪಗಳಿವೆ. ಒಟ್ಟಾರೆ, ಸುಪ್ರೀಂ ಕೋರ್ಟು ನೀಡಿರುವ 5 ಅಂಶಗಳಡಿ ಸಮಾನ ಅಂತರ ಸಾಮಾಜಿಕ ನ್ಯಾಯ ಸೂತ್ರದಡಿ ಒಳ ಮೀಸಲಾತಿ ಪೂರಕ ದತ್ತಾಂಶಗಳಡಿ ಅಖೈರು ಆಗಬೇಕಿದೆ. ಒಳ ಮೀಸಲಾತಿ ಕೇವಲ ಭಾಜಪ, ಕಾಂಗ್ರೆಸ್ ಇಲ್ಲವೇ ಜನತಾ ದಳ ಪಕ್ಷಗಳ ಕಾರ್ಯಸೂಚಿಯಲ್ಲ. ಇದೊಂದು ಪರಿಶಿಷ್ಟ ಜಾತಿಗಳ ಆಂತರಿಕ ಪುರೋಭಿವೃದ್ಧಿಯ ಕಾರ್ಯಸೂಚಿಯಾಗಿದೆ ಎಂದು ಪ್ರಾಜ್ಞರ ಅಭಿಮತಗಳಾಗಿವೆ.

Update: 2025-01-12 05:57 GMT

ಈಗಂತೂ ಒಳ ಮೀಸಲಾತಿ ಜಾರಿಯನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಏಕೆಂದರೆ, ಅದಕ್ಕೆ ಸಾಂವಿಧಾನಕ ಆಶಯಗಳ ಬೆಂಬಲವಿದೆ. ಹೊಲೆಯ ಮತ್ತು ಇತರ ಸಮುದಾಯಗಳ ಜನನಾಡಿಯಲ್ಲಿಯೂ ಈ ಸಮಸ್ಯೆಗೊಂದು ಪರಿಹಾರ ಸಿಗಬೇಕೆಂಬ ಸಾಂಘಿಕ ಅಭಿಮತಗಳು ಸೂಕ್ಷ್ಮ ಮತ್ತು ಸಮಗ್ರವಾಗಿ ಅಲ್ಲಲ್ಲಿ ಮಂಡನೆ ಆಗುತ್ತಿವೆ. ಒಳ ಮೀಸಲಾತಿ ವಿಚಾರದಲ್ಲಿ ಅನೇಕರು ದೇವನೂರ ಮಹಾದೇವ ಅವರನ್ನು ಅವಹೇಳನ ಮಾಡಿದ್ದೂ ಇದೆ. ಕೆಲವು ಒಳ ಮೀಸಲಾತಿ ಹೋರಾಟಗಾರರಲ್ಲಿ ಹಿಂದಿನ ಭಾಜಪ ಸರಕಾರದ ವಿಂಗಡಣೆ ಸೂತ್ರವೇ ಸಾಕೆನ್ನುವವರೂ ಇದ್ದಾರೆ. ಮಾಧುಸ್ವಾಮಿ ಸಮಿತಿಯ ಆಶಯ ದೊಡ್ಡದಿತ್ತು; ಆದರೆ ಈ ಸಮಿತಿ ತುಳಿದ ಮಾರ್ಗೋಪಾಯಗಳು ಮಾತ್ರ ಅತ್ಯಂತ ಅವೈಜ್ಞಾನಿಕವಾಗಿತ್ತು. ಹೇಗೆಂದರೆ, ‘ಒಂದು ಮೆಣಸಿನ ಕಾಳು ಸಂಬಾರ ಪದಾರ್ಥಗಳ ರಾಜನಲ್ಲ’ ಅನ್ನುವ ಆಡುಭಾಷೆಯಂತೆ ಈ ಸಮಿತಿ ಪರಿಶಿಷ್ಟ ಜಾತಿಗಳ ಆಂತರಿಕ ಮೀಸಲಾತಿ ವಿಭಜನೆಗೆ ಪೂರಕವಾದ ದತ್ತಾಂಶಗಳ ಆಕರಗಳನ್ನು ಎಲ್ಲಿಯೂ ಬಿಟ್ಟಿಲ್ಲ.

ದತ್ತಾಂಶ ಅಂದರೆ ಪ್ರತಿಯೊಂದು ಪರಿಶಿಷ್ಟ ಜಾತಿಗಳ ಒಳಗುಂಪುಗಳು ಹೊಂದಿರುವ ಪ್ರಗತಿಯನ್ನು ನಿರ್ಧರಿಸುವ ಮಾನಕ/ಅಳತೆಗೋಲುಗಳು. ಇದರಲ್ಲಿ ಅಡಕವಾಗುವ ಅಂಶಗಳಾದ ಶೈಕ್ಷಣಿಕ ಸಾಧನೆ, ಆರ್ಥಿಕ ಮುನ್ನಡೆ, ಸಾರ್ವಜನಿಕ ಉದ್ಯೋಗಗಳಲ್ಲಿ ಪಡೆದಿರುವ ಪ್ರಾತಿನಿಧ್ಯ ಮತ್ತು ವಿವಿಧ ರಾಜಕೀಯ ಕ್ಷೇತ್ರಗಳಲ್ಲಿ ಸ್ವೀಕರಿಸಿರುವ ಪ್ರಾತಿನಿಧ್ಯಗಳನ್ನು ಪುಷ್ಟೀಕರಿಸುವ ಪ್ರಾಯೋಗಿಕ ದತ್ತಾಂಶಗಳಂತೂ ಇಲ್ಲವೇ ಇಲ್ಲ. ವಾದಿರಾಜು ಆಯೋಗದ ಮುಂದೆ ಪ್ರತಿಪಾದಿಸಿದಂತೆ ಕೇವಲ 6.10 ಲಕ್ಷ ಜನಸಂಖ್ಯೆಗೆ ಶೇ. 1ರಷ್ಟು ಮೀಸಲಾತಿ ಧಾರಣ ಮಾಡಿರುವುದಕ್ಕೆ ಯಾವುದೇ ವೈಜ್ಞಾನಿಕ ತಳಹದಿ ಇಲ್ಲದಿರುವುದು ಅದರ ಒಳಬಣ್ಣದಿಂದ ಸಾದರಗೊಂಡಿದೆ. ಪರಿಶಿಷ್ಟ/ಹಿಂದುಳಿದ ಸಮುದಾಯಗಳ ಒಳಗುಂಪುಗಳ ಅಂತರ ಹಿಂದುಳಿದಿರುವಿಕೆ ಕೇವಲ ಪರಿಮಾಣಾತ್ಮಕ ಅಂಶಗಳಿಂದ ಅಳೆಯಲು ಸಾಧ್ಯವಿಲ್ಲ. ಇದು ಗುಣಾತ್ಮಕ ಅಂಶಗಳಡಿ ತುಲನಾತ್ಮಕ ವಿಶ್ಲೇಷಣೆಗಳಿಂದ ನಡೆದಾಗ ಮಾತ್ರ ಒಂದು ಸಮುದಾಯದ ಮುಂದುವರಿದಿರುವಿಕೆ ಅಥವಾ ಹಿಂದುಳಿದಿರುವಿಕೆ ಇಲ್ಲವೇ ತೀರ ಹಿಂದುಳಿದಿರುವಿಕೆಯನ್ನು ಗುರುತಿಸಲು ಮಾತ್ರ ಸಾಧ್ಯವಿದೆ. ಈ ವಿಚಾರಗಳೇ ನ್ಯಾಯಮೂರ್ತಿ ನಾಗಮೋಹನ್ ದಾಸ್‌ಆಯೋಗದ ಮುಂದಿರುವ ಅಸಲಿ ಸವಾಲುಗಳಾಗಿವೆ. ಅವುಗಳನ್ನು ಹೇಗೆ ಸಂಪಾದಿಸಬೇಕೆಂಬ ಮಾರ್ಗಗಳ ಹುಡುಕಾಟದಲ್ಲಿ ಆಯೋಗ ತನ್ನ ಹೊಣೆಗಾರಿಕೆಯಿಂದ ತಲ್ಲೀನವಾಗಿದೆ.

ಹಾಗೆಯೇ ಯಾವುದೇ ವಿಚಾರಣಾ ಆಯೋಗ ಯಾವುದೇ ವ್ಯಕ್ತಿ, ಸಮುದಾಯ ಅಥವಾ ಸಂಸ್ಥೆಗಳಿಗೆ ಇದೇ ಮಾದರಿಯಲ್ಲಿ ಮನವಿ ಕೊಡಿ ಎಂದು ಹೇಳುವುದಿಲ್ಲ. ಉದಾಹರಣೆಗೆ ಲೋಕಾಯುಕ್ತ ಮುಂದೆ ಹೋದಾಗ ಅಲ್ಲೊಂದು ಸಿದ್ಧ ನಮೂನೆ ಸಿಗುತ್ತದೆ. ನ್ಯಾಯಾಂಗ ತನಿಖೆಯ ಕಾರ್ಯವೈಖರಿ ಇನ್ನೂ ವಿಭಿನ್ನ. ಆದುದರಿಂದ, ನ್ಯಾಯಮೂರ್ತಿ ನಾಗಮೋಹನ್ ದಾಸ್‌ಆಯೋಗದ ಮುಂದೆ ನೊಂದವರು ತಮ್ಮ ಹಕ್ಕನ್ನು ಪ್ರತಿಪಾದಿಸುವ ಹೇಳಿಕೆ ಒಂದು ಕ್ರಮಬದ್ಧತೆಯಲ್ಲಿದ್ದರೆ ಸಾಕು. ಯಾವುದೇ ಸಿದ್ಧಮಾದರಿಯಲ್ಲಿ ಸಲ್ಲಿಸಬೇಕೆಂಬ ಅಳುಕು ಯಾರಿಗೂ ಬೇಕಿಲ್ಲ. ಮನವಿದಾರರ ವಾದಗಳನ್ನು ಪುಷ್ಟೀಕರಿಸುವ ಪೂರಕ ದಾಖಲೆಗಳನ್ನು ಪೋಣಿಸಿದಾಗ ಮನವಿಯ ಸೌಂದರ್ಯ ಮತ್ತಷ್ಟು ಹೆಚ್ಚುತ್ತದೆ. ಈ ವಿಚಾರಣಾ ಆಯೋಗಕ್ಕೆ ತನಗೆ ಪ್ರದತ್ತವಾಗಿಸಿರುವ ಪರಿವ್ಯಾಪ್ತಿಯಡಿ ಪರಿಶೀಲನೆ ಮಾಡಿ ಒಪ್ಪಿತ ಅಂಶಗಳನ್ನು ಮಾತ್ರ ಸ್ವೀಕರಿಸಲು ಅವಕಾಶವಿದೆ. ಹಿಂದಿನ ಸದಾಶಿವ ಆಯೋಗ ಸಹ ಇದೇ ಮಾದರಿಯಲ್ಲಿ ಮನವಿಗಳನ್ನು ಸಾರ್ವಜನಿಕರಿಂದ ಸ್ವೀಕರಿಸಿತ್ತು. ಪರಿಶಿಷ್ಟ ಜಾತಿಯ ಮಾದಿಗರ ಪಾಲಿಗೆ ಯಕ್ಷರಂತೆ ಕಾಣುವ ಸಂಘ ಪರಿವಾರದ ಸಾಮರಸ್ಯ ವೇದಿಕೆಯ ವಾದಿರಾಜು ಮನವಿಯನ್ನು ಹೇಗೆ ಸಿದ್ಧಪಡಿಸಬೇಕೆಂಬ ಪ್ರಶ್ನೆಯನ್ನು ಆಯೋಗದ ಮುಂದಿಟ್ಟಾಗ ವೈಯಕ್ತಿಕವಾಗಿ ಗಾಬರಿ ಹುಟ್ಟಿಸಿತು(ದಿ:7-01-2025). ಏಕೆಂದರೆ, ಮಾಧುಸ್ವಾಮಿ ಸಮಿತಿಯ ಆತ್ಮವೇ ವಾದಿರಾಜರಾಗಿದ್ದರೆಂಬ ಚರ್ಚೆ ನಾಡಿನಾದ್ಯಂತ ಇದೆ. ಬಹುಶಃ ಸದ್ಯದ ಆಯೋಗದ ಮುಂದೆ ಅವರು ಮಾತನಾಡುವಾಗ ನಾಮಕಾವಸ್ತೆಯ ಪ್ರತಿನಿಧಿಯಂತೆ ಅವರ ಅಭಿಮತಗಳು ಭಾಸವಾಗುತ್ತಿದ್ದವು. ಅಂತರಾತ್ಮದಲ್ಲಿ ಇನ್ಯಾರೋ ಮಾನಸಪುತ್ರರನ್ನು ಆರಾಧಿಸುವ ಒಳಗಣ್ಣಿನಾಸೆ ಎದ್ದು ಕಾಣುತ್ತಿತ್ತು. ಅವರು ಮುಂದುವರಿದು ಮತ್ತೊಂದು ಅಭಿಪ್ರಾಯವನ್ನು ಆಯೋಗದ ಮುಂದಿಟ್ಟರು. ಇಂದಿನ ತೀರ್ಮಾನಗಳು ನಾಳೆಯ ಚುನಾವಣೆಯ ರಾಜಕೀಯ ಮೇಲಾಟಕ್ಕೆ ಗ್ರಾಸವಾಗಬಹುದೆಂದು ಪ್ರತಿಪಾದಿಸಿದರು.

ಮೀಸಲಾತಿ ನಿರ್ವಹಣೆಯಲ್ಲಿ ಕರ್ನಾಟಕ ಸುದೀರ್ಘ ಇತಿಹಾಸ ಹೊಂದಿದೆ. ಒಳ ಮೀಸಲಾತಿ ಪರಿಶಿಷ್ಟ ಜಾತಿಗಳ ಆಂತರಿಕ ಸಾಮಾಜಿಕ ಸಮಸ್ಯೆಯಾಗಿದ್ದು, ದೀರ್ಘಕಾಲದ ಪ್ರಗತಿಯ ಹಾದಿಯಲ್ಲಿ ಸಮರ್ಪಕವಾದ ಪ್ರಾತಿನಿಧ್ಯಗಳು ಸಿಗದೆ ನರಳುವವರ ಕೊರತೆ ನೀಗುವ ಸಮಸ್ಯೆಯೇ ಹೊರತು, ರಾಜಕೀಯ ಮೇಲಾಟದ ಸಂಕೇತವಲ್ಲ. ಸೈದ್ಧಾಂತಿಕವಾಗಿ ಪ್ರಜಾಪ್ರಭುತ್ವವನ್ನು ನಂಬದ ಪಕ್ಷ ರಾಜಕಾರಣ ಯಾವಾಗಲೂ ಸಾಂಸ್ಥಿಕ ಸಮಸ್ಯೆಯನ್ನು ಜೀವಂತವಾಗಿಡಲು ಬಯಸುತ್ತದೆ. ಆದರೆ ಮುತ್ಸದ್ದಿ ಸಂಸದೀಯ ರಾಜಕಾರಣ ಸದಾ ಸಮಾಜೋಸಾಂಸ್ಥಿಕ ಸಮಸ್ಯೆಗಳಿಗೆ ಕಾನೂನಿನ ವ್ಯಾಪ್ತಿಯಲ್ಲಿ ಪರಿಹಾರ ಹುಡುಕಲು ತವಕಿಸುತ್ತದೆ. ಇವೆರಡರ ನಡುವಿನ ವ್ಯತ್ಯಾಸಗಳನ್ನು ಅರಿಯುವಲ್ಲಿ ಇಂದಿನ ಯುವ ಪೀಳಿಗೆ ಸಂಪೂರ್ಣವಾಗಿ ಎಡವಿದೆ ಎಂದರೆ ತಪ್ಪಾಗದು. ಈ ರಾಜ್ಯದ ಮಟ್ಟಿಗೆ ಇಂತಹ ಸಂಸದೀಯ ನಡವಳಿಕೆಗಳು ಮೇಲು ಸ್ತರದಲ್ಲಿ ಅನಾವರಣಗೊಳ್ಳಬೇಕಾಗಿದೆ. ಈ ದಿಶೆಯಲ್ಲಿ ನ್ಯಾಯಮೂರ್ತಿ ನಾಗಮೋಹನ್ ದಾಸ್‌ಆಯೋಗದ ವರದಿ ಅತ್ಯಂತ ವೈಜ್ಞಾನಿಕವಾಗಿ ಮಂಡಿತವಾಗಿ ಪರಿಶಿಷ್ಟ ಜಾತಿಗಳ ಜನರೆಲ್ಲರೂ ಒಮ್ಮತದಿಂದ ಸ್ವೀಕರಿಸುವ ಸ್ವರೂಪದಲ್ಲಿ ಹೊರಬಂದರೆ; ಆವಾಗ ಯಾವುದೇ ರಾಜಕೀಯ ಮೇಲಾಟಕ್ಕೆ ಆಸ್ಪದವಿರದು. ಬಹುಶಃ ನ್ಯಾಯಮೂರ್ತಿ ನಾಗಮೋಹನ್ ದಾಸ್ ಒಳ ಮೀಸಲಾತಿ ಆಯೋಗ ಸಹ ನ್ಯಾಯಮೂರ್ತಿ ಸದಾಶಿವ ಆಯೋಗ ಈ ಹಿಂದೆ ಎದುರಿಸಿದ ಸಾಂಸ್ಥಿಕ ಸಂಕಟಗಳ ಸನ್ನಿವೇಶಕ್ಕಿಂತ ವಿಭಿನ್ನವಾದ ಜಟಿಲತೆಯ ಸಂಕೀರ್ಣ ಸಮಸ್ಯೆಗಳನ್ನು ಎದುರಿಸುತ್ತಿದೆ. ಅವುಗಳನ್ನು ನಿಗ್ರಹಿಸಲು ಕಡಿಮೆ ಕಾಲಾವಕಾಶದ ಕೊರತೆಯ ನಡುವೆ ವಾಸ್ತವಿಕ ನೆಲೆಗಟ್ಟಿನಡಿ ತನ್ನ ಉತ್ತರದಾಯಿತ್ವವನ್ನು ಸಾದರಪಡಿಸುವ ಅವಕಾಶವೂ ನಿಚ್ಚಳವಾಗಿದೆ.

ಭಾಜಪ ಸರಕಾರ ಮಾಡಿದ್ದ ಒಳ ಮೀಸಲಾತಿ ವಿಂಗಡಣೆಯೇ ಬೇಕೆನ್ನುವವರು ಮೊದಲು ಸುಪ್ರೀಂ ಕೋರ್ಟಿನ ತೀರ್ಪು ಪ್ರಕಾರ ಒಳಮೀಸಲಾತಿ ನ್ಯಾಯಾಂಗ ಪರಮಾರ್ಶೆಗೆ ಒಳಪಡುತ್ತದೆಂದು ಮನನ ಮಾಡಿಕೊಳ್ಳಬೇಕು. ಮಾಧುಸ್ವಾಮಿ ಸಮಿತಿ ತನ್ನ ನಿಲುವುಗಳನ್ನು ಕಟ್ಟುವಿಕೆಯಲ್ಲಿ ನೈಜ ಪ್ರಾಯೋಗಿಕ ದತ್ತಾಂಶಗಳ ಲಭ್ಯತೆಗಳ ಬಗ್ಗೆ ಪ್ರಾಜ್ಞ ಮನಸ್ಥಿತಿಯಿಂದ ಒಮ್ಮೆ ಪರಿಶೀಲಿಸುವುದು ಸೂಕ್ತವಾಗಿದೆ. ಆಗ ಮುಂದಿನ ಪ್ರತಿಪಾದನೆಗಳಿಗೆ ಅನುವುಮಾಡಿಕೊಡುತ್ತವೆ. ಈ ವರದಿ ನಿಸ್ತೇಜ ಶರೀರದಲ್ಲಿ ಕಣ್ಣು ಮಾತ್ರ ಮಿಟುಕಿಸುವಂತಿದೆ. ಅನೇಕರಲ್ಲಿ ಒಳ ಮೀಸಲಾತಿ ಜಾರಿ ಆದಮೇಲೆ ಅದರ ಅನುಷ್ಠಾನ ಹೇಗೆಂಬ ಆತಂಕಗಳನ್ನು ಅಲ್ಲಲ್ಲಿ ಅಭಿಮತಿಸುತ್ತಿದ್ದಾರೆ. ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಲಂಬಾಂತರ ಮೀಸಲಾತಿ ಬಿಂದುಗಳು ಸೃಜಿಸಿದಾಗ ಅವುಗಳನ್ನು ಅನುಕ್ರಮವಾಗಿ ಸಮಾನಾಂತರ ಬಿಂದುಗಳಾಗಿ ಹಂಚಿದಾಗ ಸಮಸ್ಯೆ ಬರುವುದಿಲ್ಲ. ಅದೇ ನಮೂನೆಯಲ್ಲಿಯೂ ಭಡ್ತಿ ಬಿಂದುಗಳನ್ನು ಮರು ಸೃಷ್ಟಿಮಾಡಲು ಅವಕಾಶಗಳಿವೆ. ಈಗ ನ್ಯಾಯಮೂರ್ತಿ ನಾಗಮೋಹನ ದಾಸ್ ಆಯೋಗದ ಮುಂದೆ ಅಲ್ಪಾವಧಿಯಲ್ಲಿ ಅಧಿಕ ದತ್ತಾಂಶಗಳನ್ನು ಕ್ರೋಡೀಕರಿಸುವ ಮಹತ್ವದ ಸವಾಲು ಸೃಷ್ಟಿಯಾಗಿದೆ. ವಿವಿಧ ಸಮುದಾಯಗಳು ನೀಡುವ ದತ್ತಾಂಶಗಳು ಪ್ರಕಟಿತ/ದೃಢೀಕೃತ ಮೂಲಗಳಿಂದ ಪಡೆದಿರಬೇಕು. ಅವುಗಳ ನೈಜತೆಯು ಪಾರದರ್ಶಕವಾಗಿರಬೇಕು. ಬಹುಶಃ ಒಳ ಮೀಸಲಾತಿಯ ಹಕ್ಕು ಪ್ರತಿಪಾದಿಸುವ ಪ್ರತಿಯೊಂದು ಗುಂಪುಗಳು ಈ ಮನೋಧರ್ಮದಡಿ ತಮ್ಮ ಆಕರ ಮಾಹಿತಿಗಳನ್ನು ಮಂಡಿಸಿದಾಗ ಮಾತ್ರ ಪರಿಶೀಲನೆಗೆ ಯೋಗ್ಯವಾಗುತ್ತವೆ.

ಜೊತೆಗೆ ಸರಕಾರಿ ಸಂಸ್ಥೆಗಳು ಹೇಗೆ ಅಂಕಿಅಂಶಗಳನ್ನು ನೀಡಬಲ್ಲವು ಎಂಬುವುದೂ ಮತ್ತೊಂದು ಸವಾಲಿನ ಪ್ರಶ್ನೆಯಾಗಿದೆ. ಒಂದುವೇಳೆ, ಪರಿಶಿಷ್ಟ ಜಾತಿಯ ವಿವಿಧ ಸಾರ್ವಜನಿಕ ಇಲಾಖೆಗಳ ಉದ್ಯೋಗಸ್ಥ ನೌಕರರು (ಸ್ಥಳೀಯ/ ಸಾರ್ವಜನಿಕ ಉದ್ದಿಮೆ) ಸ್ವಯಂ ಆಸ್ಥೆ ಮೂಲಕ ತಮ್ಮ ತಮ್ಮ ಮೂಲ ಜಾತಿ ಹಿನ್ನೆಲೆಗಳನ್ನು ಸಮುಚ್ಚಿತ ಮಾರ್ಗಗಳಡಿ ನೀಡಿದರೆ ಆಯೋಗದ ತಲೆಭಾರ ಇಳಿದಂತಾಗುತ್ತದೆ. ಆದಿ ಕರ್ನಾಟಕ ಮತ್ತು ಆದಿ ದ್ರಾವಿಡ ಜಾತಿ ಪದಗಳು 94 ವರುಷಗಳಿಂದ (1931) ಹೊಲೆಯ/ಪರೆಯ ಮತ್ತು ಮಾದಿಗ ಸಮುದಾಯಗಳ ನಡುವೆ ಸಾಮಾಜಿಕ ಮೇಲರಿಮೆಯ ಭಾವನಾತ್ಮಕ ಸಂಗತಿಯಾಗಿದೆ. ಅದರಲ್ಲಿರುವ ಸಾಂಖ್ಯಿಕ ಒಗಟಿಗೆ ಪರ್ಯಾಯ ಮಾರ್ಗದಲ್ಲಿ ಪರಿಹಾರ ಕಂಡರೆ, ಮುಂದಿನ ರಾಷ್ಟ್ರೀಯ ಜನಗಣತಿಯಲ್ಲಿ ಸಮಸ್ಯೆ ಮತ್ತಷ್ಟು ಉದ್ದೀಪನವಾಗುವುದಿಲ್ಲ.

ಸರಕಾರದ ಭದ್ರ ಕಪಾಟಿನಲ್ಲಿರುವ ಕಾಂತರಾಜು ಸಮೀಕ್ಷಾ ವರದಿಯನ್ನು ಒಳ ಮೀಸಲಾತಿ ಇತ್ಯರ್ಥಕ್ಕೆ ನೀಡಿದರೆ ಬಹುತೇಕ ಸಮಸ್ಯೆಗೆ ಪರಿಹಾರಾತ್ಮಕ ದಾರಿ ತೆರೆದುಕೊಳ್ಳುತ್ತದೆ. ಜನಗಣತಿ ಕಾಯ್ದೆ (1949)ವ್ಯಾಖ್ಯಾನ ಪ್ರಕಾರ ಜನಗಣತಿ ಮಾಡುವ ಪರಮಾಧಿಕಾರ ಕೇಂದ್ರಕ್ಕೆ ಮಾತ್ರವಿದೆ. ರಾಜ್ಯಗಳು ಮತ್ತು ಸ್ಥಳೀಯ ಆಡಳಿತಗಳು ಅದರ ಆಣತಿಯಂತೆ ಉದ್ದೇಶಗಳ ಈಡೇರಿಕೆಗೆ ಸಹಕಾರ ನೀಡುವ ಹೊಣೆಗಾರಿಕೆ ನೀಡಿದೆ. ಈ ದೃಷ್ಟಿಯಲ್ಲಿ ಹಿಂದಿನ ಸದಾಶಿವ ಆಯೋಗ ಅಂಕಿ-ಅಂಶಗಳ ಕ್ರೋಡೀಕರಣಕ್ಕೆ ಮನೆ-ಮನೆಗಳ ಪ್ರಾಯೋಗಿಕ ಸಮೀಕ್ಷೆ (ಅನುಬಂಧ-1) ನಮೂನೆ ಸಾದರಪಡಿಸಿ ಮಾಹಿತಿಗಳನ್ನು ಸಂಗ್ರಹಿಸಿತ್ತು. ಹಿಂದಿನ ಕಾಂಗ್ರೆಸ್ ಸರಕಾರದ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ವಿರುದ್ಧ ನ್ಯಾಯಾಲಯದಲ್ಲಿ ದಾವೆ ದಾಖಲಾಗಿದ್ದಾಗ ರಾಜ್ಯ ಸರಕಾರ ಇದು ಜನಗಣತಿಯಲ್ಲ ಎಂದು ಪ್ರತಿಪಾದಿಸಿತ್ತು. ಆದುದರಿಂದ, ನ್ಯಾಯಮೂರ್ತಿ ಸದಾಶಿವ ಆಯೋಗದ ಅಂಕಿ-ಅಂಶಗಳನ್ನು ಆಕರವಾಗಿ ಸ್ವೀಕರಿಸಿದರೆ ಯಾವುದೇ ಕಾನೂನಿನ ತೊಡಕು ಬರುವುದಿಲ್ಲ. ಮಾಧುಸ್ವಾಮಿ ಸಮಿತಿ ವರದಿ ಕೆಲವರಿಗಾಗಿ ಮಾಡಿದ ಗಮಲಿನ ಪಾಯಸದಂತೆ ಇತ್ತೆಂಬ ಆರೋಪಗಳಿವೆ. ಒಟ್ಟಾರೆ, ಸುಪ್ರೀಂ ಕೋರ್ಟು ನೀಡಿರುವ 5 ಅಂಶಗಳಡಿ ಸಮಾನ ಅಂತರ ಸಾಮಾಜಿಕ ನ್ಯಾಯ ಸೂತ್ರದಡಿ ಒಳ ಮೀಸಲಾತಿ ಪೂರಕ ದತ್ತಾಂಶಗಳಡಿ ಅಖೈರು ಆಗಬೇಕಿದೆ. ಒಳ ಮೀಸಲಾತಿ ಕೇವಲ ಭಾಜಪ, ಕಾಂಗ್ರೆಸ್ ಇಲ್ಲವೇ ಜನತಾ ದಳ ಪಕ್ಷಗಳ ಕಾರ್ಯಸೂಚಿಯಲ್ಲ. ಇದೊಂದು ಪರಿಶಿಷ್ಟ ಜಾತಿಗಳ ಆಂತರಿಕ ಪುರೋಭಿವೃದ್ಧಿಯ ಕಾರ್ಯಸೂಚಿಯಾಗಿದೆ ಎಂದು ಪ್ರಾಜ್ಞರ ಅಭಿಮತಗಳಾಗಿವೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ದಾಸನೂರು ಕೂಸಣ್ಣ

ಸಮುದಾಯ ಚಿಂತಕರು

Similar News