ಬೈಕ್ ರ್ಯಾಲಿ ಮೂಲಕ ಪ್ರತಿಭಟನೆ, ಹೈಟೆಕ್ ಆದ ಕಂಟ್ರೋಲ್ ರೂಮ್

Update: 2016-01-04 17:58 GMT

! ಮಹಾರಾಷ್ಟ್ರದ ಜೈಲುಗಳ ಸುರಕ್ಷೆಗೆ ಇಸ್ರೇಲ್‌ನ ಸಹಾಯ!
ಮಹಾರಾಷ್ಟ್ರ ರಾಜ್ಯದ ಜೈಲುಗಳಲ್ಲಿ ಸುರಕ್ಷಾ ವ್ಯವಸ್ಥೆ ಇನ್ನಷ್ಟು ಗಟ್ಟಿಗೊಳಿಸಲು ಮಹಾರಾಷ್ಟ್ರ ಸರಕಾರವು ಇಸ್ರೇಲ್‌ನ ಸಹಯೋಗವನ್ನು ಪಡೆಯಲಿದೆ ಎಂದು ಮುಖ್ಯಮಂತ್ರಿಯವರು ತಿಳಿಸಿದ್ದಾರೆ.
ಇಸ್ರೇಲ್‌ನ ಮಹಾ ವಾಣಿಜ್ಯ ರಾಯಭಾರಿಯವರು ಮುಖ್ಯಮಂತ್ರಿ ಯವರನ್ನು ಭೇಟಿಯಾಗಿ ಜೈಲುಗಳ ಸುರಕ್ಷೆಯನ್ನು ಮುಂದಿಟ್ಟು ಚರ್ಚೆ ನಡೆಸಿದ್ದಾರಂತೆ. ಮೊದಲಿಗೆ ನಾಗ್‌ಪುರ ಕೇಂದ್ರ ಕಾರಾಗೃಹದ ಸುರಕ್ಷೆಯನ್ನು ಗಟ್ಟಿಗೊಳಿಸಲಾಗುತ್ತದೆ. ಆದರೂ ಜೈಲ್ ಪರಿಸರಗಳಲ್ಲಿ ಸುರಕ್ಷಾ ವ್ಯವಸ್ಥೆ ಗಟ್ಟಿಗೊಳಿಸುವುದಕ್ಕೆ ಅನೇಕ ಸವಾಲುಗಳಿರುವುದು ನಿಜ ಎಂದು ಕಾಂಗ್ರೆಸ್‌ನ ತ್ರ್ಯಂಬಕ್ ರಾವ್ ಭೀಸೆ ಅವರ ಪ್ರಶ್ನೆಗೆ ಮುಖ್ಯಮಂತ್ರಿಯವರು ಉತ್ತರಿಸಿದ್ದಾರೆ.
ಜೈಲ್ ಪರಿಸರದಲ್ಲಿ ಅಳವಡಿಸಲಾದ ಜಾಮರ್ ಪ್ರಭಾವಿ ರೀತಿಯಲ್ಲಿ ಕೆಲಸ ಮಾಡುತ್ತಿಲ್ಲ. ಯಾಕೆಂದರೆ ಜೈಲ್‌ಗಳು ಹೆಚ್ಚಾಗಿ ಜನವಸತಿ ಇರುವ ಪರಿಸರಗಳಲ್ಲೇ ಇವೆ. ಹಾಗಾಗಿ ಅಕ್ಕಪಕ್ಕಗಳಲ್ಲಿ ಮೊಬೈಲ್ ಟವರ್‌ಗಳೂ ಇರುತ್ತವೆ. ಈ ವರ್ಷ ಜೈಲುಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಹೊಸ ಭರ್ತಿ ಆಗಿಲ್ಲವಂತೆ. ಇನ್ನು ಮುಂದೆ ಜೈಲ್ ಸುರಕ್ಷಾ ಕರ್ಮಿಗಳನ್ನು ರಾಜ್ಯ ಪೊಲೀಸರ ಸಮಾನವೆಂದೂ ತಿಳಿಯಲಾಗುವುದು ಎಂದೂ ಮುಖ್ಯಮಂತ್ರಿ ಹೇಳಿಕೆ ನೀಡಿದ್ದಾರೆ.
ಪ್ರತಿಪಕ್ಷ ನಾಯಕ ರಾಧಾಕೃಷ್ಣ ವಿಖೆ ಪಾಟೀಲ್ ಅವರು ಇತ್ತೀಚೆಗೆ ವಿಧಾನ ಸಭೆಯಲ್ಲಿ ನಾಸಿಕ್ ರೋಡ್ ಕಾರಾಗೃಹ ಸಹಿತ ರಾಜ್ಯದ ವಿಭಿನ್ನ ಜೈಲುಗಳಲ್ಲಿ ಕೈದಿಗಳು ಪರಾರಿಯಾಗುತ್ತಿರುವ ಘಟನೆಗಳು ಹೆಚ್ಚುತ್ತಿವೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಖಾಲಿ ಇರುವ ಸ್ಥಾನಗಳಿಗೆ ತಕ್ಷಣ ಭರ್ತಿಗೊಳಿಸಬೇಕು ಎಂದು ಆಗ್ರಹಿಸಿದ್ದರು. ಅನಂತರ ಮುಖ್ಯಮಂತ್ರಿಯವರು ಸುರಕ್ಷಾ ವಿಷಯಕ್ಕೆ ಸಂಬಂಧಿಸಿ 8 ಸಾವಿರ ಹುದ್ದೆಗಳನ್ನು ಶೀಘ್ರವೇ ಭರ್ತಿಗೊಳಿಸುವ ಘೋಷಣೆ ಮಾಡಿದರು.
* * *
ಹಿಂಸೆಯ ವಿರುದ್ಧ ಡಾಕ್ಟರ್‌ಗಳ ಬೈಕ್ ರ್ಯಾಲಿ
 ಮುಂಬೈಯ ನೂರ ಐವತ್ತಕ್ಕೂ ಹೆಚ್ಚು ರೆಸಿಡೆಂಟ್ ಡಾಕ್ಟರ್‌ಗಳು ಆಸ್ಪತ್ರೆಗಳಲ್ಲಿ ರೋಗಿಗಳ ಕುಟುಂಬದವರಿಂದ ತಮ್ಮ ಮೇಲಾಗುತ್ತಿರುವ ಹಲ್ಲೆಯನ್ನು ವಿರೋಧಿಸಿ ಇತ್ತೀಚೆಗೆ ಬೈಕ್ ರ್ಯಾಲಿ ಹಮ್ಮಿಕೊಳ್ಳುವುದರ ಮೂಲಕ ಪ್ರತಿಭಟನೆ ನಡೆಸಿದರು. ಮಹಾರಾಷ್ಟ್ರ ಅಸೋಸಿಯೇಶನ್ ಆಫ್ ರೆಸಿಡೆಂಟ್ ಡಾಕ್ಟರ್ (ಎಂ.ಎ.ಆರ್.ಡಿ.) ಆಯೋಜಿಸಿದ ಈ ರ್ಯಾಲಿ, ರಾಜ್ಯ ಸರಕಾರ ಸಂಚಾಲಿತ ಜೆ.ಜೆ. ಆಸ್ಪತ್ರೆಯಿಂದ ಅಂದು ಬೆಳಗ್ಗೆ 10 ಗಂಟೆಗೆ ಶುರುವಾಗಿ ಮಹಾನಗರ ಪಾಲಿಕೆಯ ಮುಂಬೈ ಸೆಂಟ್ರಲ್‌ನ ನಾಯರ್ ಆಸ್ಪತ್ರೆ, ಪರೇಲ್‌ನ ಕೆ.ಇ.ಎಂ. ಆಸ್ಪತ್ರೆ ಆಗಿ ಸಯನ್‌ನ ಲೋಕಮಾನ್ಯ ತಿಲಕ್ ಮುನ್ಸಿಪಲ್ ಜನರಲ್ ಆಸ್ಪತ್ರೆಯತ್ತ ಮುಂದುವರಿದು ಸಮಾಪ್ತಿಗೊಂಡಿತು.
ಆಸ್ಪತ್ರೆಗಳಲ್ಲಿ ಡಾಕ್ಟರ್‌ಗಳು ತಮ್ಮ ಕರ್ತವ್ಯ ಅವಧಿಗಿಂತ ಹೆಚ್ಚು ಕಾಲ ಕೆಲಸ ಮಾಡುತ್ತಾರೆ. ಆದರೆ ಯಾರಾದರೂ ರೋಗಿ ಸತ್ತರೆ ಅವರ ಕುಟುಂಬದವರು ಡಾಕ್ಟರ್ ಮೇಲೆ ಹಲ್ಲೆ ನಡೆಸುತ್ತಾರೆ. ಇದನ್ನು ವಿರೋಧಿಸಿ ಬೈಕ್ ರ್ಯಾಲಿ ನಡೆಸಲಾಗಿದೆ ಎಂದು ಎಂ.ಎ.ಆರ್.ಡಿ. ಅಧ್ಯಕ್ಷ ಡಾ. ಸಾಗರ್ ಮುಂದ್ರಾ ಹೇಳಿದ್ದಾರೆ.
* * *
ಮಹಿಳೆಯರು ಮಕ್ಕಳ ಸುರಕ್ಷೆಗಾಗಿ
ಮುಂಬೈ ಪೊಲೀಸರಿಗೆ ಹೈಟೆಕ್ ಉಪಕರಣಗಳ ಕಾರು
ಮಹಿಳೆಯರು ಮತ್ತು ಮಕ್ಕಳ ಸುರಕ್ಷೆಗಾಗಿ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಮುಂಬೈ ಪೊಲೀಸರಿಗೆ 94 ನೂತನ ವಾಹನಗಳನ್ನು ಪ್ರದಾನಿಸಿದರು. ಅತ್ಯಾಧುನಿಕ ಉಪಕರಣಗಳಿಂದ ಈ ವಾಹನಗಳು ಸುಸಜ್ಜಿತಗೊಂಡಿದ್ದು ಮಕ್ಕಳಿಗೆ -ಮಹಿಳೆಯರಿಗೆ ಹೆಚ್ಚಿನ ಸಹಾಯ ಸಿಗಲಿದೆ.
ಹೈಟೆಕ್ ಉಪಕರಣಗಳಿಂದ ಸುಸಜ್ಜಿತ ಈ ಸುರಕ್ಷಾ ಕಾರುಗಳ ಪ್ರಯೋಗ ಮುಂಬೈಯಲ್ಲಿ ಮೊದಲ ಬಾರಿಗೆ ಆಗಿದೆ. ಈ ತನಕ ಪೊಲೀಸರಿಗೆ ಕಂಟ್ರೋಲ್ ರೂಮಿನಿಂದ ಕರೆ ಬರುತ್ತಿತ್ತು. ಹಾಗೂ ಪೊಲೀಸ್ ಠಾಣೆಗಳಿಗೆ ಸೂಚನೆ ನೀಡಲಾಗುತ್ತಿತ್ತು. ಇದರಿಂದ ಘಟನಾ ಸ್ಥಳವನ್ನು ತಲುಪಲು ಪೊಲೀಸರಿಗೆ ತಡವಾಗುತ್ತಿತ್ತು. ಅನೇಕ ಪ್ರಕರಣಗಳಲ್ಲಿ ಆರೋಪಿಗಳು ಘಟನೆ ಸೃಷ್ಟಿಸಿ ಪರಾರಿಯಾಗುತ್ತಿದ್ದರು. ಇದೀಗ ಸುಸಜ್ಜಿತ ಕಾರುಗಳು ಬಂದನಂತರ ಅಪರಾಧ ಘಟನೆಯ ಕರೆ ಬರುತ್ತಲೇ ಸಮಯ ವ್ಯರ್ಥ ಮಾಡದೆ ಘಟನಾ ಸ್ಥಳಕ್ಕೆ ತಲುಪುತ್ತವೆ. ಅಮೆರಿಕದಂತಹ ದೇಶಗಳಲ್ಲಿನ ಪೊಲೀಸರು ಇದೇ ಮಾದರಿಯಲ್ಲಿ ಕೆಲಸ ಮಾಡುತ್ತಾರೆ. ಪ್ರತೀ ಕಾರ್‌ನಲ್ಲಿರುವ 4 ಪೊಲೀಸರು ನಿರಂತರ ಕಂಟ್ರೋಲ್ ರೂಮ್ ಮತ್ತು ಪೊಲೀಸ್ ಠಾಣೆಗಳ ಸಂಪರ್ಕದಲ್ಲಿರುತ್ತಾರೆ.
* * *
ಮಹಾರಾಷ್ಟ್ರದ ಫಿಂಗರ್ ಪ್ರಿಂಟ್ಸ್ ಬ್ಯೂರೋಗೆ ದುರ್ಗತಿ!

1985ರಲ್ಲಿ ಆರಂಭಿಸಲಾದ ಮಹಾರಾಷ್ಟ್ರ ಫಿಂಗರ್ ಪ್ರಿಂಟ್ಸ್ ಬ್ಯೂರೋ ಇಂದು ಹೀನ ಸ್ಥಿತಿಯಲ್ಲಿ ಒದ್ದಾಡುತ್ತಿದೆ. ಇದಕ್ಕೆ ಕಾರಣ ಪೊಲೀಸ್ ವಿಭಾಗದ ನಿರ್ಲಕ್ಷ್ಯ. ಅಪರಾಧ ಪ್ರಕರಣಗಳನ್ನು ಬಗೆಹರಿಸುವಲ್ಲಿ ಫಿಂಗರ್ ಪ್ರಿಂಟ್ಸ್‌ನ ಮಹತ್ವ ಪೂರ್ಣ ಪಾತ್ರವಿರುತ್ತದೆ. ಆದರೆ ಮಹಾರಾಷ್ಟ್ರ ಪೊಲೀಸರ ಈ ವಿಭಾಗವನ್ನು ಇಂದು ನಿರ್ಲಕ್ಷಿಸಲಾಗಿದೆಯೇ? 1985 ರಿಂದ 2012ರ ತನಕ ಫಿಂಗರ್ ಪ್ರಿಂಟ್ಸ್ ವಿಭಾಗದಿಂದ 3 ಲಕ್ಷ 60 ಸಾವಿರ ಅಪರಾಧಿಗಳ ಫಿಂಗರ್ ಪ್ರಿಂಟ್ ದಾಖಲೆ ಇರಿಸಲಾಗಿದೆ. ಅಪರಾಧಿಗಳ ಡಾಟಾಬೇಸ್ ಪುಣೆಯ ಫಿಂಗರ್ ಪ್ರಿಂಟ್ಸ್ ಬ್ಯೂರೋದ ಮುಖ್ಯ ಸರ್ವರ್ ಸ್ಟೋರ್ ಮಾಡಿಟ್ಟಿದೆ. 41 ಸ್ಥಳಗಳಲ್ಲಿ ಈ ಸರ್ವರ್ ಜೋಡಿಸಲ್ಪಟ್ಟಿದೆ. ಇದಕ್ಕಾಗಿ 4 ಬ್ಯೂರೋ ರಚಿಸಲಾಗಿದೆ. 200ಕ್ಕೂ ಹೆಚ್ಚು ಅಧಿಕಾರಿಗಳಿದ್ದಾರೆ. ಆದರೂ ಸರಿಯಾದ ಮೇಲ್ವಿಚಾರಣೆಯ ಅಭಾವದಲ್ಲಿ 2012ರಿಂದ ಈ ವ್ಯವಸ್ಥೆ ಎಲ್ಲ ರೀತಿಯಲ್ಲೂ ನಿಂತು ಹೋಗಿವೆ.
ಆಗಿನ ಡಿಜಿ ಸಂಜೀವ್ ದಯಾಳ್‌ರು ಫ್ಯಾಕ್ಟ್ಸ್-5 ಸಿಸ್ಟಮ್‌ನ ಮಹತ್ವವನ್ನು ತಿಳಿಯಲಿಲ್ಲವಂತೆ! ಈಗ ಈ ವಿಭಾಗವನ್ನು ಗಟ್ಟಿಗೊಳಿಸಲು ಹೊಸ ಸಾಫ್ಟ್‌ವೇರ್ ಖರೀದಿಸಲಾಗಿದೆ. ಇಎಫ್‌ಐಎಸ್ ಹೆಸರಿನ ಈ ಸಾಫ್ಟ್‌ವೇರ್‌ನ ಬೆಲೆ 40 ಕೋಟಿ ರೂಪಾಯಿ. ಈ ಸಾಫ್ಟ್‌ವೇರ್ ಈ ತನಕ ಭಾರತದ ಯಾವುದೇ ಸುರಕ್ಷಾ ವಿಭಾಗದ ಬಳಿ ಇಲ್ಲ. ಈ ಸಾಫ್ಟ್ ವೇರ್ ಬಂದ ನಂತರ ಮತ್ತೆ ಈ ವಿಭಾಗ ಚುರುಕುಗೊಳ್ಳಲಿದೆ ಎನ್ನುತ್ತಾರೆ.
ಮಹಾರಾಷ್ಟ್ರದ ಫಿಂಗರ್ ಪ್ರಿಂಟ್ಸ್ ಬ್ಯೂರೋದ ವಿಭಾಗಗಳನ್ನು ರಾಜ್ಯಾದ್ಯಂತ ಸ್ಥಾಪಿಸಲಾಗಿದೆ. ಇವುಗಳಲ್ಲಿ ಮುಂಬೈ, ಪುಣೆ, ಔರಂಗಾಬಾದ್ ಮತ್ತು ನಾಗ್‌ಪುರ ಪ್ರಮುಖವಾಗಿವೆ. ಈ ವಿಭಾಗದಲ್ಲಿ 100 ವರ್ಷಗಳ ಅಪರಾಧ ಪ್ರಕರಣಗಳಲ್ಲಿ ಆರೋಪಿಗಳ ಫಿಂಗರ್ ಪ್ರಿಂಟ್ಸ್ ಇರಿಸಲಾಗಿದೆ. ಅಧಿಕಾಂಶ ಪ್ರಕರಣಗಳಲ್ಲಿ ಪೊಲೀಸರಿಗೆ ಯಶಸ್ಸು ಸಿಗುವುದು ಈ ಫಿಂಗರ್ ಪ್ರಿಂಟ್ಸ್ ವಿಭಾಗದಿಂದಲೇ. ಆದರೆ ಇಂದು ಈ ವಿಭಾಗದ ಸ್ಥಿತಿ ಉತ್ತಮವಾಗಿಲ್ಲ.
* * *
ಪೊಲೀಸ್ ಕಂಟ್ರೋಲ್ ರೂಮ್ ಇದೀಗ ಹೈಟೆಕ್
ಮುಂಬೈ ಪೊಲೀಸ್ ಡಿಸೆಂಬರ್ ಕೊನೆಯ ವಾರದಿಂದ ಹೈಟೆಕ್ ಆಗಿದೆ. ಮುಂಬಯಿ ಪೊಲೀಸ್ (ಕಮಿಷನರ್) ಮುಖ್ಯಾಲಯದಲ್ಲಿ ಹೊಸ ಕಟ್ಟಡದ ಉದ್ಘಾಟನೆ ಆಗಿದೆ. ಇದರೊಳಗೆ ಮುಂಬೈ ಪೊಲೀಸರ ಕಂಟ್ರೋಲ್ ರೂಮನ್ನು ಶಿಫ್ಟ್ ಮಾಡಲಾಗಿದೆ. ಇದರಲ್ಲೇ ಕಮಾನ್ ಸೆಂಟರ್ ಕೂಡಾ ನಿರ್ಮಿಸಲಾಗಿದೆ. ಇಲ್ಲಿಂದ ಸಿಸಿಟಿವಿಯ ಮೂಲಕ ಪೂರ್ತಿ ಮುಂಬೈಯನ್ನು ನಿಗಾ ಇರಿಸಲಾಗುತ್ತದೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಈ ಸಂದರ್ಭದಲ್ಲಿ ಪ್ರತಿಕ್ರಿಯಿಸುತ್ತಾ ‘‘ಕಮಾನ್ ಸೆಂಟರ್ ಅತ್ಯಾಧುನಿಕ ಸೌಲಭ್ಯಗಳಿಂದ ಕೂಡಿರುತ್ತದೆ. ಅನೇಕ ಪ್ರಕರಣಗಳಲ್ಲಿ ಇದು ಲಂಡನ್ ಮತ್ತು ಇಸ್ರೇಲ್ ಪೊಲೀಸ್‌ಗಿಂತಲೂ ಉತ್ತಮವಾಗಿರುವುದು’’ ಎಂದಿದ್ದಾರೆ. ಅದೇ ದಿನ ಮುಂಬೈ ಪೊಲೀಸರ ವೆಬ್‌ಸೈಟ್‌ನ್ನೂ ಕೂಡಾ ರೀಲಾಂಚ್ ಮಾಡಲಾಗಿದೆ. ಮತ್ತು ಮುಂಬೈ ಪೊಲೀಸ್ ಕಮಿಷನರ್‌ರ ಟ್ವಿಟರ್ ಹ್ಯಾಂಡ್ಲ್ ಕೂಡಾ ಆರಂಭ ಮಾಡಲಾಗಿದೆ.
ಡಿಸೆಂಬರ್ 28ರಿಂದ ಃ್ಚಋ್ಠಿಞಚಿಜಿ ಟ್ಝಜ್ಚಿಛಿ   ಮತ್ತು ಃಋ್ಠಿಞಚಿಜಿಟ್ಝಜ್ಚಿಛಿ ಹೆಸರಲ್ಲಿ ಎರಡು ಟ್ವಿಟರ್ ಹ್ಯಾಂಡ್ಲ್ ಆರಂಭಿಸಲಾಗಿದೆ. ಆರಂಭ ಮಾಡಲಾದ ಮೊದಲ ದಿನವೇ ಮುಂಬೈ ಪೊಲೀಸರಿಗೆ 6,235 ಫಾಲೋಅರ್ಸ್ ಸಿಕ್ಕಿದ್ದಾರೆ. ಮುಂಬೈ ಪೊಲೀಸ್ ಟ್ವಿಟರ್‌ಗೆ ಬರುತ್ತಲೇ ದಿಲ್ಲಿ ಪೊಲೀಸರಿಗಿಂತ ಮುಂದೆ ಹೋಗಿದ್ದಾರೆ. ದಿಲ್ಲಿ ಪೊಲೀಸರಿಗೆ ಈ ತನಕ 3,283 ಫಾಲೋವರ್ಸ್ ಇದ್ದಾರೆ. ಆದರೆ ಈ ತನಕ ಅತಿಹೆಚ್ಚು 1,31,000 ಫಾಲೋವರ್ಸ್ ಬೆಂಗಳೂರು ಪೊಲೀಸರಿಗೆ ಇದ್ದಾರೆ.
 ಹೊಸ ಕಟ್ಟಡದ ಭೂಮಿಪೂಜೆ ಎಂ.ಎನ್. ಸಿಂಗ್ ಅವರ ಕಾರ್ಯಾವಧಿಯಲ್ಲಿ 2003ರಲ್ಲೇ ಆಗಿತ್ತು. 5 ವರ್ಷಗಳ ಕಾಲ ಈ ಬಿಲ್ಡಿಂಗ್‌ನ ಆರಂಭ ಆಗಲಿಲ್ಲ. 26/11 ರ (2008) ಮುಂಬೈ ಹಲ್ಲೆಯ ನಂತರ ಡಿ.ಶಿವಾನಂದನ್ ಪೊಲೀಸ್ ಕಮಿಶನರ್ ಅವರು ಈ ಬಿಲ್ಡಿಂಗ್ ನಿರ್ಮಾಣದ ಬಗ್ಗೆ ಸರಕಾರಕ್ಕೆ ಫೈಲ್ ಕಳುಹಿಸಿದರು. ಈ ಬಿಲ್ಡಿಂಗ್ ನ್ಯೂಕ್ಲಿಯರ್ ಪ್ರೂಫ್ ಮತ್ತು ರೇಡಿಯೇಶನ್ ಪ್ರೂಫ್ ಆಗಿರಬೇಕೆಂದು ಅವರ ಇಚ್ಛೆಯಾಗಿತ್ತು. ಆದರೆ ಇದಕ್ಕೆ ನೂರು ಕೋಟಿ ರೂಪಾಯಿಗೂ ಹೆಚ್ಚಿನ ಬಜೆಟ್ ಬೇಕಾಗಿತ್ತು. ಇಷ್ಟೊಂದು ಖರ್ಚು ಮಾಡಲು ಆಗಿನ ಕಾಂಗ್ರೆಸ್-ಎನ್.ಸಿ.ಪಿ. ಸರಕಾರ ಹಿಂದೆ ಸರಿದಿತ್ತು. ನಂತರ 2010ರಲ್ಲಿ ಅರುಪ್ ಪಟ್ನಾಯಕ್ ಕಮಿಶನರ್ ಆದಾಗ 2010ರಲ್ಲಿ ಇದರ ಹೊಸ ಫೈಲ್ ತಯಾರಿಸಿದರು. ಅವರು 33 ಕೋಟಿ ರೂಪಾಯಿಯ ಬಜೆಟ್ ಇರಿಸಿದ್ದರು. ಹಾಗೂ ನ್ಯೂಕ್ಲಿಯರ್ ಪ್ರೂಫ್, ರೇಡಿಯೇಶನ್ ಪ್ರೂಫ್ ನಿರ್ಮಾಣ ಅಗತ್ಯವಿಲ್ಲ ಎಂದರು. ಪಟ್ನಾಯಕ್ 17 ಆಗಸ್ಟ್, 2011ರಲ್ಲಿ ತನ್ನ ವರ್ಗಾವಣೆಯ ಮೊದಲು ಬಿಲ್ಡಿಂಗ್ ಪಂಚಾಂಗ ಹಾಕಿಸಿದ್ದರು. ನಾಲ್ಕು ವರ್ಷಗಳಲ್ಲಿ ಇದು ತಯಾರಾದರೂ ಬಜೆಟ್ ಮಾತ್ರ ದುಪ್ಪಟ್ಟು ಆಗಿದೆಯಂತೆ.
* * *

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News