ಅಸ್ಸಾದಿ ಅವರಿಗೆ ಶ್ರದ್ದಾಂಜಲಿ ಅರ್ಪಿಸುವುದೆಂದರೆ ಅವರ ವರದಿಯನ್ನು ಜಾರಿಗೊಳಿಸುವುದು
ಇಂದು ಬೆಳಗಿನಜಾವ ಎಚ್‌ಡಿ ಕೋಟೆ ಜೇನು ಕುರುಬರ ಹಾಡಿಯಲ್ಲಿ ಮಲಗಿದ್ದ ಆದಿವಾಸಿ ಚಿಕ್ಕಣ್ಣನನ್ನು ಎಬ್ಬಿಸಿ ಮುಝಫರ್ ಅಸ್ಸಾದಿಯವರ ಸಾವಿನ ಬಗ್ಗೆ ಹೇಳಿದೆ. ಒಂದು ಕ್ಷಣ ಗಾಬರಿಯಾದ ಚಿಕ್ಕಣ್ಣನ ಬಾಯಲ್ಲಿ ಮಾತುಗಳೇ ಹೊರಡಲಿಲ್ಲ. ಆತನಿಗೆ ಯಾವ ರೀತಿ ಪ್ರತಿಕ್ರಿಯಿಸಬೇಕು ಎಂಬುದೇ ತೋಚಲಿಲ್ಲ. "ಯಾಕೆ ಹೀಗಾಯಿತು ಸರ್.." ಅಂತ ಹೇಳಿ ಮೌನವಾದ.
ಮುಝಫರ್ ಅಸ್ಸಾದಿಯವರ ವರದಿಯನ್ನು 'ಹೋಲಿ ಬೈಬಲ್' ನಂತೆ ಅಪ್ಪಿಕೊಂಡು ನಮ್ಮ "ಅಲೆಮಾರಿ ಬುಡಕಟ್ಟು ಮಹಾಸಭಾ" ವತಿಯಿಂದ ಸರ್ಕಾರಿ ಕಚೇರಿಗಳಿಗೆ ಓಡಾಡುತ್ತಿದ್ದವನೇ ಈ ಚಿಕ್ಕಣ್ಣ. "ನೀವು ಸರ್ಕಾರಕ್ಕೆ ಹತ್ತಿರವಿದ್ದೀರ. ಹೇಗಾದರೂ ಮಾಡಿ ಮುಝಫರ್ ಅಸ್ಸಾದಿಯವರ ವರದಿಯನ್ನು ಜಾರಿಗೆ ಮಾಡಿಸಿಬಿಡಿ ಸರ್" ಎನ್ನುತಿದ್ದವನು, ಒಮ್ಮೆ ನಾನು ಜೇನುಕುರುಬರ ಹಾಡಿಯಲ್ಲಿದ್ದಾಗಲೇ ನನ್ನ ಮೇಲೆ influence ಮಾಡಿಸಲು ಅಸ್ಸಾದಿಯವರಿಂದಲೇ ಫೋನ್ ಮಾಡಿಸಿದ್ದ.!
"ನೀವು ಮನಸ್ಸು ಮಾಡಿದರೆ ಸರ್ಕಾರದಲ್ಲಿ ಸಾದ್ಯವಾಗುತ್ತೆ ಸರ್.." ಎಂದು ಅಸ್ಸಾದಿ ಹೇಳಿದ್ದರು. ನಾನು ಸರ್ಕಾರದ ಗಮನಕ್ಕೆ ತಂದು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೆ. ಪ್ರತಿ ಆದಿವಾಸಿಯ ಬಾಯಲ್ಲೂ "ಮುಝಫರ್ ಆದಿವಾಸಿ ವರದಿ" ಬಾಯಿಪಾಠವಾಗಿತ್ತು.
ಮುಝಫರ್ ಅಸಾದಿ ನನಗೆ ಹತ್ತಿರವಾಗಿದ್ದೇ ಆದಿವಾಸಿ ಸಮುದಾಯಗಳ ಹಕ್ಕುಗಳ ವಿಷಯದಲ್ಲಿ. 1970 ರಲ್ಲಿ ನಾಗರಹೊಳೆ ಅರಣ್ಯದಿಂದ ಆದಿವಾಸಿ ಕುಟುಂಬಗಳನ್ನು ಒಕ್ಕಲೆಬ್ಬಿಸಿದ್ದನ್ನು ಪ್ರಶ್ನಿಸಿ ಡೀಡ್ (DEED) ಎಂಬ ಸಂಸ್ಥೆ ಹೈಕೋರ್ಟಿಗೆ ಹೋದಾಗ ಹೈಕೋರ್ಟಿನ ಆದೇಶದ ಮೇಲೆ ಮುಝಫರ್ ಅಸ್ಸಾದಿ ಅವರ ನೇತೃತ್ವದಲ್ಲಿ ಮೂರು ಜನರ ತಂಡವನ್ನು ನೇಮಿಸಿ "ಆದಿವಾಸಿಗಳ ಎತ್ತಂಗಡಿ ಮತ್ತು ಅದಕ್ಕೆ ಪರಿಹಾರಗಳ ಕುರಿತು ವರದಿ ನೀಡುವಂತೆ" ಆದೇಶಿಸಿತ್ತು. ಅಸ್ಸಾದಿ ನೇತೃತ್ವದ ತಂಡ ಇಡೀ ಅರಣ್ಯವಾಸಿಗಳ ಸ್ಥಿತಿಗತಿಗಳನ್ನು ಪರಿಶೀಲಿಸಿ 2014 ರಲ್ಲಿ ವಿಸ್ತೃತವಾದ ಒಂದು ವರದಿಯನ್ನು ನೀಡಿತು. ನಾಗರಹೊಳೆ ಅರಣ್ಯದಿಂದ 3418 ಕುಟುಂಬಗಳನ್ನು ಒಕ್ಕಲೆಬ್ಬಿಸಿದ್ದನ್ನು ಸ್ಪಷ್ಟವಾಗಿ ಗುರುತಿಸಿದ ಅಸ್ಸಾದಿಯವರು ಸದರಿ ಆದಿವಾಸಿಗಳಿಗೆ ತಕ್ಷಣ ಪುನರ್ವಸತಿ ಕಲ್ಪಿಸಬೇಕು. ಕೃಷಿಯೋಗ್ಯ ಭೂಮಿ ನೀಡಬೇಕು ಮತ್ತು ಆದಿವಾಸಿಗಳಿಗೆ ಮೂಲಭೂತ ಸೌಕರ್ಯ ನೀಡಬೇಕೆಂದು ವಿವರವಾದ ವರದಿ ನೀಡಿದ್ದರು.
ಈ ಕುರಿತು ನಾನು ಮತ್ತು ಅಸ್ಸಾದಿಯವರು ಅನೇಕ ಸಲ ಮಾತನಾಡಿದ್ದೆವು ಮತ್ತು ಸರ್ಕಾರದ ಗಮನಕ್ಕೆ ತರುತ್ತಲೇ ಇದ್ದೆವು. ದುರಂತವೆಂದರೆ ಯಾವುದೇ ಸರ್ಕಾರ ಈ ವರದಿ ಬಗ್ಗೆ ಕಣ್ಣೆತ್ತಿಯೂ ನೋಡಿರಲಿಲ್ಲ..!?
ನಂತರ ನನ್ನೊಂದಿಗೆ "ಲಿಂಗಾಯತ ಧರ್ಮ" ದ ಸಮಿತಿಯಲ್ಲಿದ್ದ ಅಸ್ಸಾದಿಯವರು ವರದಿ ರಚಿಸುವಾಗ ಅನೇಕ ಮಾಹಿತಿಗಳನ್ನು ನೀಡುತ್ತಿದ್ದರು. ಈ ಬಗ್ಗೆ ಸುದೀರ್ಘವಾಗಿ ಚರ್ಚಿಸುತಿದ್ದರು. ಆಗಲೂ ತಮ್ಮ ಆದಿವಾಸಿ ಕುರಿತ ವರದಿಯ ಬಗ್ಗೆ ಮಾತಾನಾಡುತ್ತಲೇ ಇದ್ದರು.
ತಳಸಮುದಾಯಗಳ ಬಗ್ಗೆ ಅಪಾರ ಕಾಳಜಿ ಮತ್ತು ಪಾಂಡಿತ್ಯವಿದ್ದ ಅಸ್ಸಾದಿಯವರು ಈ ನಾಡು ಕಂಡ ಅತ್ಯಂತ ದಕ್ಷ 'ಅಕಾಡೆಮಿಷಿಯನ್' (ಶಿಕ್ಷಣ ತಜ್ಞ). ಇಂಥವರು ಮಂಗಳೂರು ವಿ.ವಿ. ಅಥವಾ ಕುವೆಂಪು ವಿ.ವಿ.ಗೆ ವೈಸ್ ಚಾನ್ಸಲರ್ ಆಗುತ್ತಾರೆಂದು ನಾವೆಲ್ಲ ನಂಬಿದ್ದೆವು ಮತ್ತು ಆಶಿಸಿದ್ದೆವು ಕೂಡ. ಎಷ್ಟೇ ಪ್ರಯತ್ನಿಸಿದರೂ ಯಾಕೋ ಆಗಲಿಲ್ಲ..!? ಈ ಬಗ್ಗೆ ಅಸ್ಸಾದಿ ಅವರು ಕೊಂಚ ಬೇಸರಪಟ್ಟುಕೊಂಡಿದ್ದರು.
ಇದೀಗ ಮುಖ್ಯಮಂತ್ರಿಗಳು ಅಸ್ಸಾದಿ ಅವರ ಸಾವಿಗೆ ವಿಷಾದ ವ್ಯಕ್ತಪಡಿಸಬಹುದು. ಈ ಸಂಧರ್ಭದಲ್ಲಾದರೂ "ಮುಝಫರ್ ಅಸ್ಸಾದಿ ಅವರ ವರದಿಯನ್ನು ಅನುಷ್ಠಾನಕ್ಕೆ ತರುತ್ತೇನೆಂದು" ಹೇಳಿ, ಅದನ್ನು ಆದಷ್ಟೂ ಬೇಗ ಜಾರಿಗೊಳಿಸಿದರೆ ಅಸ್ಸಾದಿಯವರ ಆತ್ಮಕ್ಕೆ ಶಾಂತಿ ಸಿಗಬಹುದೇನೋ.