ಕಾಲಂ ಬಂಧನದ ಕಷ್ಟ ಸುಖ!
ನನ್ನದಿದು ಹದಿನೈದು ದಿನಕ್ಕೊಮ್ಮೆ ಪ್ರಕಟವಾಗುವ ‘ಮನೋ ಭೂಮಿಕೆ!’ ಪರಿಸರ-ಪ್ರಕೃತಿ, ಸಾಹಿತ್ಯ-ಸಂಸ್ಕೃತಿ, ಹಳ್ಳಿ ವೈವಿಧ್ಯ-ಗ್ರಾಮ ಸಂಬಂಧ, ಮನುಷ್ಯ ಪ್ರೀತಿ ಇತ್ಯಾದಿಗಳನ್ನು ಎತ್ತಿಕೊಂಡು ಬರೆಯಲು ನಿರ್ಧರಿಸಿದ್ದೇನೆ. ಇಲ್ಲಿ ಭೂಮಿಯೂ ಇದೆ, ಭೂಮಿಯ ಮೇಲೆ ಬದುಕುವ ಮನುಷ್ಯನ ಮನಸ್ಸೂ ಇದೆ. ನಾನು ಭಾರತದ ಆತ್ಮ ಭಾಗವಾದ ಹಳ್ಳಿಯಲ್ಲಿ ಬದುಕುವವ. ಅಲ್ಲಿಂದಲೇ ಈ ದೇಶವನ್ನು ನೋಡುವ, ಗಮನಿಸುವ, ಅವಲೋಕಿಸುವ ಒಂದು ಪುಟ್ಟ ಪ್ರಯತ್ನವಿದು. ಪ್ರಯತ್ನಿಸುವೆ. ದಯವಿಟ್ಟು ಸ್ವೀಕರಿಸಿ.
ಐ.ಕೆ ಜಾಗೀರ್‌ದಾರ್ ನಿಮಗೆ ಗೊತ್ತಿರಬೇಕು. ಮೂರು ನಾಲ್ಕು ದಶಕಗಳ ಹಿಂದೆ ಅವರ ‘ಹಕೀಖತ್’ ಜನಪ್ರಿಯ ಕನ್ನಡದ ಅಂಕಣ. ಅದು ಯಾವುದೇ ನವಮಾಧ್ಯಮಗಳಿಲ್ಲದ ಕಾಲ. ಪತ್ರಿಕೆಯಲ್ಲಿ ನಿಯತ ಅಂಕಣ ಪ್ರಕಟವಾಗಬೇಕಾದರೆ ವಾರಮುಂಚೆ ಅದನ್ನು ಬರೆದು ಅಂಚೆಯ ಮೂಲಕ ಪತ್ರಿಕೆಗೆ ಕಳಿಸಬೇಕಿತ್ತು. ಎಷ್ಟೇ ಸಕಾಲಿಕ ವಿಷಯಗಳನ್ನು ಆಯ್ದುಕೊಂಡರೂ ಐದಾರು ದಿನಗಳ ಅಂತರದಲ್ಲಿ ಆ ವಿಷಯ ಅಪ್ರಸ್ತುತವಾಗುವ ಸಾಧ್ಯತೆಯೇ ಹೆಚ್ಚು. ಏನಾದರೂ ತಿದ್ದಿ ವಿಷಯ ಬದಲಾಯಿಸ ಬೇಕಾಗಿದ್ದರೆ ಅಂಕಣಕಾರ ಲ್ಯಾಂಡ್ ಫೋನ್‌ಗೆ ಕಾಲ್ ಮಾಡಿ ತಿದ್ದುಪಡಿ ಸೂಚಿಸಬೇಕಾಗಿತ್ತು.
ಹಕೀಖತ್ ಕಾಲಂ ಅಂಚೆಯಲ್ಲಿ ಇಂದು ಕೈ ಸೇರಿ ನಾಳೆ ಅದು ಪ್ರಕಟವಾಗಬೇಕಾದ ಸಂದರ್ಭ. ಅಂಕಣಕ್ಕೆ ತಲೆ ಬರಹ ಕೊಡಬೇಕು, ಅಕ್ಷರ ತಿದ್ದಬೇಕು, ಟೈಪ್ ಮಾಡಿಸಬೇಕು, ಕರಡು ತಿದ್ದಬೇಕು; ಮಾಮೂಲಿ 10 ಗಂಟೆಯ ಅಂಚೆಯಲ್ಲಿ ತಲುಪಬೇಕಾಗಿದ್ದ ಅಂಕಣ ಅಂದು ಬಂದಿರಲೇ ಇಲ್ಲ.
ವರ್ಷವಿಡೀ ಕರಾರುವಕ್ಕಾಗಿ ಮಂಗಳವಾರವೇ ಬರೆದು ಅಂಚೆಗೆ ಹಾಕುತ್ತಿದ್ದ ಜಾಗೀರ್‌ದಾರ್ ಈ ಸಲ ಯಾಕೆ ಕೈ ಕೊಟ್ಟರೆಂದು ಪೇಚಾಡುತ್ತಿದ್ದಾಗ ಒಂದು ವೇಳೆ ಬರದಿದ್ದರೆ ಆ ಪುಟವನ್ನು ಭರ್ತಿ ಮಾಡುವುದಾದರೂ ಹೇಗೆ? ಹಳೆಯ ಅಂಕಣವನ್ನು ಮತ್ತೆ ಬಳಸುವ ಹಾಗಿಲ್ಲ, ಯಾಕೆ ಹೀಗಾಯ್ತು ಎಂದೆಲ್ಲ ಯೋಚಿಸುವ ಹೊತ್ತಿಗೆ ಸ್ವತ: ಅಂಕಣಕಾರ ಜಾಗೀರ್‌ದಾರ್ ಪತ್ರಿಕಾಲಯದಲ್ಲಿ ಪ್ರತ್ಯಕ್ಷವಾಗಬೇಕೆ?
ಉಪಸಂಪಾದಕರೊಬ್ಬರರ ಟೇಬಲ್ ಪಕ್ಕಕ್ಕೆಳೆದು ಅಲ್ಲೇ ಮೇಲಿದ್ದ ನ್ಯೂಸ್ ಫ್ರೆಂಟ್ ರದ್ದಿ ಭಾಗದಲ್ಲಿ ನೆಟ್ಟಗೆ ಬರೆಯಲಾರಂಭಿಸಿದ ಜಾಗೀರ್‌ದಾರ್ ಬರೀ 20 ನಿಮಿಷದಲ್ಲಿ ಅಂಕಣ ಬರೆದಿಟ್ಟು ಸಂಪಾದಕರ ಚೇಂಬರಿಗೆ ನಡೆದು ಹೋದರು. ವಾರದ ಅಂಕಣ ಸರಿಯಾದ ಸಮಯಕ್ಕೆ ಸಿಕ್ಕಿತೆಂಬ ಖುಷಿ ನಮಗೆ.
’’ಏನ್ ಸರ್, ನಮ್ಮನ್ನು ಆತಂಕಕ್ಕೆ ದೂಡಿದಿರಲ್ಲ?’’ ಎಂದಾಗ ಆ ಕಾಲದ ಪ್ರಸಿದ್ಧ ಅಂಕಣಕಾರ ಕೊಟ್ಟ ಉತ್ತರ: ’’ಈ ವಾರದ ರಾಜಕೀಯ ಬೆಳವಣಿಗೆಯನ್ನು ಈ ಕ್ಷಣದವರೆಗೆ ಕಾಯುತ್ತಿದ್ದೆ. ಐದಾರು ದಿವಸದ ಹಿಂದೆಯೇ ಈ ಅಂಕಣ ಬರೆಯುತ್ತಿದ್ದರೆ ಇಷ್ಟೊಂದು ಪ್ರಸ್ತುತವಾಗುತ್ತಿರಲಿಲ್ಲ. ಈ ಕ್ಷಣದವರೆಗಿನ ರಾಜಕೀಯ ಬೆಳವಣಿಗೆಯನ್ನು ಸೇರಿಸಿ ವಿಶ್ಲೇಷಿಸಿದ್ದೇನೆ. ಇದು ತಾಜಾ ಬಿಸಿ ಬಿಸಿ ಅಂಕಣ’’ ಎಂದರು ಜಾಗೀರ್ದಾರರು!
ಅಂಕಣಕ್ಕೊಂದು ಕಾಲಮಿತಿ ಇದೆ. ಅದು ವರ್ತಮಾನ ಪತ್ರಿಕೆಗೆ ಭೂಷಣವಾಗುವುದೇ ಇಂಥ ಮಿತಿಯಿಂದ. ಅದು ಸಾಹಿತ್ಯವೇ ಇರಲಿ, ರಾಜಕೀಯ, ಸಂಸ್ಕೃತಿ, ಸಮಾಜ, ಧರ್ಮ ಹೀಗೆ ಯಾವುದೇ ವಿಷಯಗಳಲ್ಲಿ ಬರೆಯುವ ಲೇಖನ, ಮೌಲ್ಯಮಾಪನ, ಸಾಂದರ್ಭಿಕ ಅವಲೋಕನ, ವಿಶ್ಲೇಷಣೆ ಇಂತಹ ಕಾಲಮಿತಿಯಲ್ಲಿರಬೇಕಾಗುತ್ತದೆ. ಅದರಲ್ಲೂ ಇವತ್ತಿನ ನವ ಮಾಧ್ಯಮದ ಕಾಲಘಟ್ಟದಲ್ಲಿ ದಿನದ ಸುದ್ದಿ ಬಿಡಿ, ಗಂಟೆಯ ಹಿಂದಿನ ಸುದ್ದಿಯೇ ಈ ಕ್ಷಣಕ್ಕೆ ಹಳೆಯದಾಗುತ್ತದೆ.
ಗುಜರಾತಿನ ಯಾವುದೋ ಹಳ್ಳಿ ಮೂಲೆಯಲ್ಲಿದ್ದ ಅಂಬೇಡ್ಕರ್‌ರ ಪ್ರತಿಮೆಯ ಬೆರಳನ್ನು ಯಾರೋ ಕಿಡಿಗೇಡಿಗಳು ಮುರಿದರೆ, ರಾಜಸ್ಥಾನದಲ್ಲಿ ನಿಲ್ಲಿಸಿದ ಗಾಂಧಿ ಪ್ರತಿಮೆಯ ಕನ್ನಡಕನ್ನು ಇನ್ಯಾರೋ ಹಾರಿಸಿದರೆ ಪುತ್ತೂರಿನ ಯಾವುದೋ ಹಳ್ಳಿಯಲ್ಲಿ ಸಂಬಂಧಿಸಿದ ಅಭಿಮಾನಿಗಳು, ಸಮುದಾಯದವರು ತಕ್ಷಣ ಪ್ರತಿಭಟಿಸುವುದಿದೆಯಲ್ಲ ಅದು ಇಂಥ ನವ ಮಾಧ್ಯಮದ ವೇಗದ ದಾರಿಯಲ್ಲಿ ಮಾತ್ರ ಸಾಧ್ಯ. ಆದರೆ 20-30 ವರ್ಷಗಳ ಹಿಂದೆ ಇಂತಹ ವಿಕೃತಿ ವಿಸಂಗತಿಗಳು ನಿಧಾನಗತಿಯಲ್ಲಿ ಲೋಕ ತಲುಪುತ್ತಿತ್ತು. ಆಗ ಅಂಕಣಕಾರನಿಗೆ ವಿಶ್ಲೇಷಣೆಗೆ ಕಾಲಾವಕಾಶ ಜಾಸ್ತಿ ಸಿಗುತ್ತಿತ್ತು. ಇವತ್ತು ಹಾಗಲ್ಲ ಬರಹಗಾರನ ಚತುರಮತಿ ಗರಿಷ್ಠ ವೇಗದಲ್ಲಿ ಮಿಡಿಯಬೇಕಾಗುತ್ತದೆ.
ಬರೆಯುವಾತನ ಮಾಧ್ಯಮ ಪರಿಕರದಾರಿಯೂ ಬದಲಾಗಿದೆ. ಕಾಗದ, ಪೆನ್ನು, ಕವರು, ಸ್ಟ್ಯಾಂಪು, ಅಂಚೆ ಇವು ಯಾವುವೂ ಇಲ್ಲದೆ ಬಾಯಲ್ಲಿ ಬರೆಯುವ ಕಾಲವಿದು. ಇವತ್ತಿನ ಅಂಕಣವನ್ನು ಇವತ್ತೇ ಬರೆದು, ಈಗಲೇ ಬರೆದು ಈ ಕ್ಷಣದಲ್ಲಿ ಮಾಧ್ಯಮದಲ್ಲಿ ಪ್ರಕಟಿಸಿಬಿಡಬಹುದು. ಅಂಚೆ ತಲುಪಿದ ಮೇಲೆ ಕವರ್ ಒಡೆದು, ಅಕ್ಷರ ತಿದ್ದಿ, ತಲೆಬರಹ ಕೊಟ್ಟು, ಪ್ಯಾರಾ ಬದಲಾಯಿಸಿ, ಅಕ್ಷರ ಛಾಪಿಸಿ, ಕರಡು ತಿದ್ದಿ ವಿನ್ಯಾಸಗೊಳಿಸುವ ಯಾವ ತುರ್ತೂ ಈಗ ಸಂಪಾದಕರಿಗೆ ಇಲ್ಲ. ಬರೆದು ಕಳಿಸಿದ್ದ ಅಂಕಣ ಸರಿ ಇಲ್ಲ ಅನಿಸಿದರೆ ಮತ್ತೆ ತತ್‌ಕ್ಷಣಕ್ಕೆ ಇನ್ನೊಂದು ಅಂಕಣವನ್ನು ಬರೆಯುವ ತಿದ್ದುವ ಸೇರಿಸುವ ಬದಲಾಯಿಸುವ ಎಲ್ಲಾ ಅವಕಾಶಗಳು ಅಂಕಣಕಾರನಿಗೆ ಮುಕ್ತವಾಗಿದೆ.
ಡಾ. ಹಾ.ಮಾ. ನಾಯಕರು ಯಾರಿಗೆ ಗೊತ್ತಿಲ್ಲ ಹೇಳಿ? ಅವರು ವಿಶ್ವವಿದ್ಯಾನಿಲಯದ ಕುಲಪತಿ, ಖ್ಯಾತ ಸಂಶೋಧಕ ವಿಮರ್ಶಕರೆನ್ನುವುದಕ್ಕಿಂತ ಅಂಕಣಕಾರರೆಂದೇ ಕನ್ನಡ ಓದುಗ ಪ್ರಪಂಚಕ್ಕೆ ಹೆಚ್ಚು ಪರಿಚಿತರು. ಅವರ ಅಂಕಣದ ಬೌದ್ಧಿಕ ಸೊಗಸು ಒಂದು ಬಗೆಯಾದರೆ ಅದರ ಭೌತಿಕ ಸ್ವರೂಪ ಮತ್ತೊಂದು ಬಗೆಯದ್ದು. ಅವರು ಯಾವೆಲ್ಲ ಪತ್ರಿಕೆಗೆ ಅಂಕಣಗಳನ್ನು ಬರೆದಿದ್ದರೂ ಆ ಎಲ್ಲ ಪತ್ರಿಕೆಗಳಲ್ಲಿ ಆ ಅಂಕಣವನ್ನು ನಿರ್ವಹಿಸುತ್ತಿದ್ದ ಸಂಪಾದಕೀಯ ಸದಸ್ಯರಿಗೆ ಅದೊಂದು ಅನನ್ಯ ನೆನಪಾಗಿ ಇವತ್ತಿಗೂ ಉಳಿದಿರಬಹುದು. ತರಂಗದಲ್ಲಿ ಅವರು ‘ಸ್ವಗತ’ ಅಂಕಣವನ್ನು ಬರೆಯುತ್ತಿದ್ದಾಗ ಅದನ್ನು ಹೊತ್ತು ತಂದ ವಿಳಾಸದ ಕವರನ್ನು ತೆರೆದು, ಅಂಕಣವನ್ನು ಸ್ಪರ್ಶಿಸುವುದೇ ಒಂದು ಖುಷಿ. ಒಂದೇ ಒಂದು ಅಕ್ಷರ ತಿದ್ದುವ ಪ್ರಮೇಯವೇ ಬರದಷ್ಟು ವಿಚಾರ, ಅಕ್ಷರ ಸ್ಪಷ್ಟತೆ ಸ್ವಗತದಾಗಿತ್ತು. ಪ್ರವಾಸ, ಊರು ಬಿಡುವ ಸಂದರ್ಭದಲ್ಲಿ ವಾರದ ಮುಂಚೆಯೇ ಸಾಹಿತ್ಯ, ಸಂಸ್ಕೃತಿ, ಪುಸ್ತಕ ಪರಿಚಯದ ಹಿನ್ನೆಲೆಯಲ್ಲಿ ಕಾಲಾತೀತ ಅಂಕಣ ಒಂದನ್ನು ಮುಂಚೆಯೇ ಬರೆದು ಕಳಿಸಿ ಪತ್ರಿಕೆಗೆ ಆಗಬಹುದಾದ ಧರ್ಮ ಸಂಕಟವನ್ನು ನಾಯಕರು ತಪ್ಪಿಸುತ್ತಿದ್ದರು. ಇವತ್ತು ಕಂಪ್ಯೂಟರ್‌ನಲ್ಲಾಗಲೀ, ಮೊಬೈಲ್ ನಲ್ಲಾಗಲಿ ಅಕ್ಷರ ಮುದ್ರಿಸುವಾಗಲೇ ಶಬ್ದಗಳ ಲೆಕ್ಕ ಸಿಗುತ್ತದೆ. ಆದರೆ ಹಿಂದೆ ಹಾಗಲ್ಲ. ಇಷ್ಟು ಪುಟ, ಇಷ್ಟು ಗೆರೆ, ಇಷ್ಟು ಶಬ್ದ ಎಂದೆಲ್ಲ ಲೆಕ್ಕ ಹೇಳಬೇಕಾಗಿತ್ತು. ಡಾ. ಹಾಮಾನಾ ಅವುಗಳನ್ನು ಸೊಗಸಾಗಿ ನಿರ್ವಹಿಸುತ್ತಿದ್ದರು.
ಪಾಟೀಲ ಪುಟ್ಟಪ್ಪರ ಅಂಕಣದ ಭೌತಿಕ ಸ್ವರೂಪ ಬೇರೆ ರೀತಿಯದ್ದು. ನಾಲ್ಕುವರೆ ಇಂಚು ಸಪೂರದ ಉದ್ದದ ಕಾಗದದಲ್ಲಿ ಅವರು ಅಂಕಣ ಬರೆಯುತ್ತಿದ್ದರು. ಮರೆತು ಹೋದ ಸೇರಿಸಬೇಕಾದ ಶಬ್ದಗಳನ್ನು ಅಲ್ಲಲ್ಲಿ ಸ್ಟಾರ್ ಹಾಕಿ ಪುಟದ ಬದಿಗೆ ಬರೆಯುತ್ತಿದ್ದರು. ಮೊದಲೇ ಮಾರ್ಜಿನ್ ಇಲ್ಲದ ಕೋಲು ಕಾಗದ. ಯಾವುದನ್ನು ಎಲ್ಲಿಗೆ ಸೇರಿಸಬೇಕು ಎಂಬುದೇ ಸಂಪಾದಕೀಯದವರಿಗೆ ದೊಡ್ಡ ಸಮಸ್ಯೆ. ಮಿಂಚುಗೊಂಚಲು ಎಂಬ ಸಂಸ್ಕೃತಿ ಚಿಂತನೆಯ ಅಂಕಣ ಬರೆಯುತ್ತಿದ್ದ ಗೌರೀಶ್ ಕಾಯ್ಕಿಣಿಯವರದ್ದು ಒಂದು ಪೋಸ್ಟ್ ಕಾರ್ಡ್‌ನಲ್ಲಿ ಇಡೀ ಅಂಕಣವನ್ನು ತುಂಬಿಸುವ ಸಾಮರ್ಥ್ಯ!
ಇರಲಿ, ನನ್ನದಿದು ಹದಿನೈದು ದಿನಕ್ಕೊಮ್ಮೆ ಪ್ರಕಟವಾಗುವ ‘ಮನೋ ಭೂಮಿಕೆ!’ ಪರಿಸರ-ಪ್ರಕೃತಿ, ಸಾಹಿತ್ಯ-ಸಂಸ್ಕೃತಿ, ಹಳ್ಳಿ ವೈವಿಧ್ಯ-ಗ್ರಾಮ ಸಂಬಂಧ, ಮನುಷ್ಯ ಪ್ರೀತಿ ಇತ್ಯಾದಿಗಳನ್ನು ಎತ್ತಿಕೊಂಡು ಬರೆಯಲು ನಿರ್ಧರಿಸಿದ್ದೇನೆ. ಇಲ್ಲಿ ಭೂಮಿಯೂ ಇದೆ, ಭೂಮಿಯ ಮೇಲೆ ಬದುಕುವ ಮನುಷ್ಯನ ಮನಸ್ಸೂ ಇದೆ. ನಾನು ಭಾರತದ ಆತ್ಮ ಭಾಗವಾದ ಹಳ್ಳಿಯಲ್ಲಿ ಬದುಕುವವ. ಅಲ್ಲಿಂದಲೇ ಈ ದೇಶವನ್ನು ನೋಡುವ, ಗಮನಿಸುವ, ಅವಲೋಕಿಸುವ ಒಂದು ಪುಟ್ಟ ಪ್ರಯತ್ನವಿದು. ಪ್ರಯತ್ನಿಸುವೆ. ದಯವಿಟ್ಟು ಸ್ವೀಕರಿಸಿ.