ಗ್ಯಾರಂಟಿ ಯೋಜನೆಗಳ ಫಲಶ್ರುತಿಯೇನು?
ಯಾವುದೇ ಸರಕಾರ ಜನರ ವೆಚ್ಚ ಸಾಮರ್ಥ್ಯವನ್ನು ಹೆಚ್ಚಿಸಲು ಉಳ್ಳವರ ಮೇಲಿನ ತೆರಿಗೆ ಪ್ರಮಾಣವನ್ನು ಹೆಚ್ಚಿಸಿ, ಬಡ, ಮಧ್ಯಮ ವರ್ಗದ ಮೇಲಿನ ತೆರಿಗೆ ಪ್ರಮಾಣವನ್ನು ಕಡಿತಗೊಳಿಸಿದರೆ ಆರ್ಥಿಕ ಚಲನಶೀಲತೆ ಆರೋಗ್ಯಕರವಾಗಿರುತ್ತದೆ ಎಂದು. ಆದರೆ, ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಇದರ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿರುವುದರಿಂದಲೇ ಭಾರತವು ಆರ್ಥಿಕ ಬಿಕ್ಕಟ್ಟಿನತ್ತ ಹೆಜ್ಜೆ ಹಾಕುತ್ತಿದೆ.
‘‘ಜನಸಾಮಾನ್ಯರ ವೆಚ್ಚ ಸಾಮರ್ಥ್ಯ ಹೆಚ್ಚಿದಷ್ಟೂ ಜಿಡಿಪಿ ಬೆಳವಣಿಗೆ ಆರೋಗ್ಯಕರವಾಗಿರುತ್ತದೆ’’ ಇದು ಅರ್ಥಶಾಸ್ತ್ರದ ಮೂಲ ಪಾಠ. ಆದರೆ ಹಣದುಬ್ಬರ, ಬೆಲೆಯೇರಿಕೆ, ನಿರುದ್ಯೋಗ ಪ್ರಮಾಣ ಹೆಚ್ಚಾದಾಗ ಜನರ ವೆಚ್ಚ ಸಾಮರ್ಥ್ಯ ಕುಗ್ಗುತ್ತದೆ - ಒಂದು ಆದಾಯ ಕೊರತೆಯಿಂದ; ಮತ್ತೊಂದು ಭವಿಷ್ಯದ ಭೀತಿಯಿಂದ. ಸದ್ಯ ಭಾರತದಲ್ಲಿನ ಜಿಡಿಪಿ ಕುಸಿತಕ್ಕೆ ಕಾರಣವಾಗಿರುವುದು ಈ ಮೂರು ಅಂಶಗಳೇ. ಒಂದು ಕಡೆ ಬೆಲೆಯೇರಿಕೆ ಮತ್ತು ಹಣದುಬ್ಬರದಿಂದ ಜನರ ವೆಚ್ಚ ಸಾಮರ್ಥ್ಯ ಆತಂಕಕಾರಿ ಪ್ರಮಾಣದಲ್ಲಿ ಕುಸಿತಗೊಂಡಿದ್ದರೆ, ಮತ್ತೊಂದೆಡೆ ನಿರುದ್ಯೋಗ ಸಮಸ್ಯೆ ಕಳೆದ ಅರ್ಧ ಶತಮಾನದಲ್ಲೇ ದಾಖಲೆಯ ಪ್ರಮಾಣದಲ್ಲಿ ಏರಿಕೆಯಾಗಿರುವುದರಿಂದಲೂ ಕುಗ್ಗಿದೆ. ಒಟ್ಟಾರೆಯಾಗಿ ಬೇಡಿಕೆ ಮತ್ತು ವೆಚ್ಚದ ಪ್ರಮಾಣ ಗಣನೀಯವಾಗಿ ಕುಸಿದಿರುವುದರಿಂದ, ಮಾರುಕಟ್ಟೆಯಲ್ಲಿನ ಆರ್ಥಿಕ ಚಲನೆಯೂ ಹಿಂಜರಿತಕ್ಕೆ ತುತ್ತಾಗಿದೆ. ಹೀಗಾಗಿ ಭಾರತದ ಜಿಡಿಪಿ ಈಗ ನಕಾರಾತ್ಮಕ ಬೆಳವಣಿಗೆಯತ್ತ ಸಾಗುತ್ತಿದೆ.
ಇಂತಹ ಹೊತ್ತಿನಲ್ಲಿ ರಾಜ್ಯದಲ್ಲಿನ ಕಾಂಗ್ರೆಸ್ ಸರಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳು ಹೊಸ ಆರ್ಥಿಕ ಸಂಚಲನವನ್ನೇ ಸೃಷ್ಟಿಸಿರುವುದು ಸರಕಾರಿ ದತ್ತಾಂಶಗಳಿಂದಲೇ ವ್ಯಕ್ತವಾಗಿದೆ. ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯದ ಜಿಎಸ್‌ಡಿಪಿ ಇಡೀ ದೇಶದಲ್ಲೇ ಅಗ್ರ ಸ್ಥಾನಕ್ಕೆ ಏರಿಕೆಯಾಗಿದ್ದರೆ, ಜಿಎಸ್‌ಟಿ ಸಂಗ್ರಹ ಪ್ರಮಾಣದಲ್ಲಿ ಎರಡನೇ ಸ್ಥಾನಕ್ಕೆ ಜಿಗಿದಿದೆ. ಇದರೊಂದಿಗೆ ರಾಜ್ಯದ ಹಲವಾರು ಜಿಲ್ಲೆಗಳಿಂದ ಗ್ಯಾರಂಟಿ ಫಲಾನುಭವಿಗಳು ಸ್ವ ಉದ್ಯೋಗ, ಕೃಷಿ ಚಟುವಟಿಕೆಗಳಲ್ಲಿ ಹೂಡಿಕೆ ಮಾಡುವ ಮೂಲಕ ತಮ್ಮ ಬದುಕು ಕಟ್ಟಿಕೊಳ್ಳುತ್ತಿರುವ ನಿದರ್ಶನಗಳು ಒಂದರ ನಂತರ ಒಂದು ಬೆಳಕಿಗೆ ಬರುತ್ತಿವೆ. ಇತ್ತೀಚಿನ ವರದಿಯ ಪ್ರಕಾರ, ರಾಜ್ಯ ಕಾಂಗ್ರೆಸ್ ಸರಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳಿಂದ 2024-25ನೇ ಸಾಲಿನಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಗಮನಾರ್ಹ ಪ್ರಮಾಣದಲ್ಲಿ ಇಳಿಕೆಯಾಗಿರುವ ಚೇತೋಹಾರಿ ಸಂಗತಿಯೂ ಬಯಲಾಗಿದೆ.
1990ರ ದಶಕದಲ್ಲಿ ಮಾಜಿ ಪ್ರಧಾನಿ ಪಿ.ವಿ. ನರಸಿಂಹ ರಾವ್ ನೇತೃತ್ವದ ಕಾಂಗ್ರೆಸ್ ಸರಕಾರ ಜಾರಿಗೊಳಿಸಿದ ಆರ್ಥಿಕ ಉದಾರೀಕರಣ ನೀತಿಗಳಿಂದ ಹೆಚ್ಚು ಸಂತ್ರಸ್ತಗೊಂಡಿದ್ದು ರೈತ ಸಮುದಾಯ. ಆರ್ಥಿಕ ಉದಾರೀಕರಣ ನೀತಿಗಳು ಜಾರಿಯಾದಂದಿನಿಂದ ಇಲ್ಲಿಯವರೆಗೆ ಸುಮಾರು ಆರು ಲಕ್ಷ ರೈತರು ಸಾಲಬಾಧೆಯಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಪೈಕಿ ಮಹಾರಾಷ್ಟ್ರದಲ್ಲಿ ಅತ್ಯಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಕರ್ನಾಟಕ ರಾಜ್ಯವೂ ರೈತರ ಆತ್ಮಹತ್ಯೆ ಪ್ರಮಾಣದಲ್ಲಿ ಹಿಂದೆ ಬಿದ್ದಿಲ್ಲ.
2021-22ನೇ ಸಾಲಿನಲ್ಲಿ ರಾಜ್ಯದಲ್ಲಿ 1,044 ರೈತರು ವಿವಿಧ ಕಾರಣಗಳಿಂದ ಆತ್ಮಹತ್ಯೆಗೆ ಶರಣಾಗಿದ್ದರು. ಈ ಪೈಕಿ ಹಾವೇರಿ ಜಿಲ್ಲೆಯೊಂದರಲ್ಲೇ 101 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ನಂತರದ ಸ್ಥಾನಗಳಲ್ಲಿದ್ದ ಬೆಳಗಾವಿ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಕ್ರಮವಾಗಿ 100 ಮತ್ತು 98 ರೈತರು ಆತ್ಮಹತ್ಯೆಗೆ ಕೊರಳೊಡ್ಡಿದ್ದರು. 2022-23ನೇ ಸಾಲಿನಲ್ಲಿ ಈ ಪ್ರಮಾಣ ಮತ್ತಷ್ಟು ಏರಿಕೆಯಾಗಿ 1,049 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬಾರಿ ಹಾವೇರಿಯಲ್ಲಿನ ರೈತರ ಆತ್ಮಹತ್ಯೆ ಪ್ರಮಾಣ 128ಕ್ಕೆ ಏರಿಕೆಯಾಗಿದ್ದರೆ, ಬೆಳಗಾವಿ ಮತ್ತು ಕಲಬುರಗಿಯಲ್ಲಿ ಕ್ರಮವಾಗಿ 87 ಮತ್ತು 60 ರೈತರ ಆತ್ಮಹತ್ಯೆ ವರದಿಯಾಗಿತ್ತು.
2023-24ನೇ ಸಾಲಿನಲ್ಲಿ ಮತ್ತೆ ಏರುಮುಖವಾಗಿದ್ದ ರೈತರ ಆತ್ಮಹತ್ಯೆ ಪ್ರಮಾಣವು 1,220ಕ್ಕೆ ತಲುಪಿತ್ತು. ಈ ಪೈಕಿ ಹಾವೇರಿಯಲ್ಲಿ 118 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಬೆಳಗಾವಿ ಮತ್ತು ಕಲಬುರಗಿಯಲ್ಲಿ ಕ್ರಮವಾಗಿ 117 ಮತ್ತು 88 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಆದರೆ, 2024-25ನೇ ಸಾಲಿನಲ್ಲಿ ರೈತರ ಆತ್ಮಹತ್ಯೆ ಪ್ರಮಾಣ ಗಣನೀಯವಾಗಿ ಕುಸಿತ ದಾಖಲಿಸಿದ್ದು, 422 ರೈತರು ಮಾತ್ರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪೈಕಿ, ಹಾವೇರಿಯಲ್ಲಿ ರೈತರ ಆತ್ಮಹತ್ಯೆ ಪ್ರಮಾಣ 54ಕ್ಕೆ ಕುಸಿದಿದ್ದರೆ, ಬೆಳಗಾವಿ ಮತ್ತು ಕಲಬುರಗಿಯಲ್ಲಿ ಕ್ರಮವಾಗಿ 38 ಹಾಗೂ 27ಕ್ಕೆ ಕುಸಿದಿದೆ. ಅರ್ಥಾತ್, ಬೆಲೆಯೇರಿಕೆ ಮತ್ತು ಹಣದುಬ್ಬರದಿಂದ ಹಣದ ಮುಗ್ಗಟ್ಟಿಗೆ ಗುರಿಯಾಗಿದ್ದ ರೈತರಿಗೆ ರಾಜ್ಯ ಸರಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳಿಂದ ಒಂದಿಷ್ಟು ಆರ್ಥಿಕ ಹೊರೆ ತಗ್ಗಿದೆ ಎಂದು.
ಸರಕಾರಿ ದತ್ತಾಂಶಗಳ ಪ್ರಕಾರ, 2021-22ನೇ ಸಾಲಿನಿಂದ 2024-25ನೇ ಸಾಲಿನವರೆಗೆ ಉತ್ತರ ಕರ್ನಾಟಕ ಭಾಗದಲ್ಲೇ ಅತಿ ಹೆಚ್ಚು ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ. ಇಡೀ ರಾಜ್ಯದಲ್ಲಿ ಅತ್ಯಂತ ಹಿಂದುಳಿದ ಭಾಗ ಕೂಡಾ ಉತ್ತರ ಕರ್ನಾಟಕವೇ ಆಗಿರುವುದನ್ನು ನಾವಿಲ್ಲಿ ಗಮನಿಸಬೇಕು. ಇಂತಹ ಆರ್ಥಿಕವಾಗಿ ಹಿಂದುಳಿದಿರುವ ಭಾಗದ ರೈತರಿಗೆ ರಾಜ್ಯ ಸರಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳು ವರದಾನವಾಗಿ ಬದಲಾಗಿವೆ ಎಂಬುದನ್ನು ಸರಕಾರಿ ದತ್ತಾಂಶಗಳು ಸಾರಿ ಹೇಳುತ್ತಿವೆ.
2023ರ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ಪಂಚ ಗ್ಯಾರಂಟಿಗಳ ಆಶ್ವಾಸನೆಯನ್ನು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಕಟಿಸಿದಾಗ, ಭಾರತದ ಜಿಡಿಪಿ ಮಂದಗತಿಯ ಪ್ರಗತಿ ಸಾಧಿಸುತ್ತಿತ್ತು. ಕೈಗಾರಿಕಾ ಬೆಳವಣಿಗೆ ನಕಾರಾತ್ಮಕವಾಗಿತ್ತು. ನಿರುದ್ಯೋಗ ಸಾರ್ವಕಾಲಿಕ ಗರಿಷ್ಠ ಪ್ರಮಾಣಕ್ಕೆ ಏರಿಕೆಯಾಗಿತ್ತು. ಇಂತಹ ಹೊತ್ತಿನಲ್ಲಿ, ಜನರ ಆರ್ಥಿಕ ವೆಚ್ಚ ಸಾಮರ್ಥ್ಯವನ್ನು ಹೆಚ್ಚಿಸಿದರೆ, ಭಾರತದ ಆರ್ಥಿಕತೆ ಮತ್ತೆ ಚೇತರಿಸಿಕೊಳ್ಳಬಹುದು ಎಂಬುದು ಈ ಗ್ಯಾರಂಟಿ ಯೋಜನೆಗಳ ಹಿಂದಿನ ಸರಳ ತರ್ಕವಾಗಿತ್ತು. ಈ ತರ್ಕ ಎಷ್ಟು ನಿಖರವಾಗಿತ್ತು ಎಂಬುದಕ್ಕೆ ರಾಜ್ಯದ ಜಿಎಸ್‌ಡಿಪಿ ಬೆಳವಣಿಗೆ, ಜಿಎಸ್‌ಟಿ ಸಂಗ್ರಹದಲ್ಲಿನ ಏರಿಕೆ ಹಾಗೂ ರೈತರ ಆತ್ಮಹತ್ಯೆ ಪ್ರಮಾಣದಲ್ಲಿನ ಗಣನೀಯ ಇಳಿಕೆ ಸಾಕ್ಷಿ ನುಡಿಯುತ್ತಿವೆ.
ಭಾರತವಿಂದು ಇಡೀ ವಿಶ್ವದಲ್ಲೇ ಐದನೆಯ ಬಲಿಷ್ಠ ಆರ್ಥಿಕತೆಯಾಗಿದ್ದರೂ, ನಿರುದ್ಯೋಗ, ಹಣದುಬ್ಬರ ಹಾಗೂ ಬೆಲೆಯೇರಿಕೆ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ. ಇಡೀ ದೇಶದ ಅರ್ಧದಷ್ಟು ಸಂಪತ್ತು ಬೆರಳೆಣಿಕೆಯ ಕುಬೇರ ಉದ್ಯಮಿಗಳ ಬಳಿ ಶೇಖರಣೆಗೊಂಡಿದೆ. ಈ ಅಸಮಾನತೆಯ ಕಾರಣದಿಂದಲೇ ಜನಸಾಮಾನ್ಯರ ಆರ್ಥಿಕ ವೆಚ್ಚ ಸಾಮರ್ಥ್ಯ ಕುಸಿದಿದ್ದು, ಇದರೊಂದಿಗೆ ದೇಶದ ಜಿಡಿಪಿ ಬೆಳವಣಿಗೆಯೂ ನಕಾರಾತ್ಮಕ ಬೆಳವಣಿಗೆ ಸಾಧಿಸತೊಡಗಿದೆ. ಇಂತಹ ಹೊತ್ತಿನಲ್ಲಿ ಯಾವುದೇ ಜವಾಬ್ದಾರಿಯುತ ಸರಕಾರದ ಕರ್ತವ್ಯ ಜನರ ಆರ್ಥಿಕ ವೆಚ್ಚ ಸಾಮರ್ಥ್ಯವನ್ನು ಹೆಚ್ಚಿಸಿ, ಮಾರುಕಟ್ಟೆಯಲ್ಲಿ ನಗದು ಚಲಾವಣೆ ಏರಿಕೆಯಾಗುವಂತೆ, ಆ ಮೂಲಕ ಜಿಡಿಪಿ ಬೆಳವಣಿಗೆ ವೇಗ ಪಡೆಯುವಂತೆ ಮಾಡುವುದು. ಅಂತಹ ಕೆಲಸವನ್ನು ರಾಜ್ಯ ಕಾಂಗ್ರೆಸ್ ಸರಕಾರ ಜಾರಿಗೊಳಿಸಿರುವ ಪಂಚ ಗ್ಯಾರಂಟಿ ಯೋಜನೆಗಳು ಸಮರ್ಥವಾಗಿ ಮಾಡಿವೆ ಎಂಬುದಕ್ಕೆ ಈ ಸರಕಾರಿ ದತ್ತಾಂಶಗಳೇ ಆಧಾರವಾಗಿವೆ.
ಇದಕ್ಕೂ ಮುನ್ನ, ಕಾಂಗ್ರೆಸ್ ಸರಕಾರದ ಜನ ಕಲ್ಯಾಣ ಕಾರ್ಯಕ್ರಮಗಳನ್ನು ರೇವ್ಡಿ ಸಂಸ್ಕೃತಿ ಎಂದು ಹಂಗಿಸುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ನೇತೃತ್ವದ ಬಿಜೆಪಿ, ರಾಜ್ಯ ಕಾಂಗ್ರೆಸ್ ಸರಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳು ಸಾಧಿಸಿರುವ ಯಶಸ್ಸಿನಿಂದ, ಅನಿವಾರ್ಯವಾಗಿ ತಾನು ಆಡಳಿತಾರೂಢವಾಗಿರುವ ಮಧ್ಯಪ್ರದೇಶ, ಹರ್ಯಾಣ, ಮಹಾರಾಷ್ಟ್ರದಂಥ ರಾಜ್ಯಗಳಲ್ಲೂ ಗ್ಯಾರಂಟಿ ಯೋಜನೆಗಳ ನಕಲು ಯೋಜನೆಗಳನ್ನು ಜಾರಿಗೊಳಿಸಿದೆ.
ಇಷ್ಟಕ್ಕೂ, ಈ ಕೆಲಸವನ್ನು ಮಾಡಬೇಕಾದ ಹೊಣೆಗಾರಿಕೆ ಇದ್ದದ್ದು ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಮೇಲೆಯೇ. ಯಾಕೆಂದರೆ, ಹಣದುಬ್ಬರ, ಬೆಲೆಯೇರಿಕೆ ಹಾಗೂ ನಿರುದ್ಯೋಗಗಳಿಂದ ಜನರ ಆರ್ಥಿಕ ವೆಚ್ಚ ತಗ್ಗುವಂತೆ ಆಗಿರುವುದೇ ಕೇಂದ್ರ ಬಿಜೆಪಿ ಸರಕಾರದ ಕುಬೇರ ಉದ್ಯಮಿಗಳ ಪರವಾದ ಆರ್ಥಿಕ ನೀತಿಗಳಿಂದ. ಬಿಜೆಪಿ ಸರಕಾರದ ಕಾರ್ಪೊರೇಟ್ ತೆರಿಗೆ ಕಡಿತ, ಬ್ಯಾಂಕ್ ಸಾಲ ಮನ್ನಾ ಅಥವಾ ರೈಟ್ ಆಫ್‌ನಿಂದ ಸರಕಾರದ ಬೊಕ್ಕಸಕ್ಕೆ ಆಗಿರುವ ನಷ್ಟವನ್ನು ತೆರಿಗೆ ಏರಿಕೆಯ ಮೂಲಕ ಸರಿದೂಗಿಸಿಕೊಳ್ಳಲು ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಮುಂದಾಗಿರುವುದರಿಂದಲೇ ಹಣದುಬ್ಬರ, ಬೆಲೆಯೇರಿಕೆ ಹಾಗೂ ನಿರುದ್ಯೋಗ ದಾಖಲೆಯ ಪ್ರಮಾಣದಲ್ಲಿ ಏರಿಕೆಯಾಗಿರುವುದು. ಇಂತಹ ಹೊತ್ತಿನಲ್ಲಿ ಜನರ ಆರ್ಥಿಕ ಹೊರೆಯನ್ನು ಗ್ಯಾರಂಟಿ ಯೋಜನೆಯಂತಹ ಜನ ಕಲ್ಯಾಣ ಕಾರ್ಯಕ್ರಮಗಳ ಮೂಲಕ ತಗ್ಗಿಸಬೇಕಾದ ಹೊಣೆಗಾರಿಕೆ ಕೇಂದ್ರ ಸರಕಾರದ್ದೇ ಆಗಿತ್ತು. ಆದರೆ, ಆ ಕೆಲಸವನ್ನು ವಿಪಕ್ಷ ರಾಜ್ಯ ಸರಕಾರಗಳು ಹಾಗೂ ಬಿಜೆಪಿಯದ್ದೇ ಕೆಲವು ರಾಜ್ಯ ಸರಕಾರಗಳು ಅನಿವಾರ್ಯವಾಗಿ ಮಾಡುತ್ತಿವೆ.
ಇದರಿಂದ ವ್ಯಕ್ತವಾಗುತ್ತಿರುವ ಸಂಗತಿಯೆಂದರೆ, ಯಾವುದೇ ಸರಕಾರ ಜನರ ವೆಚ್ಚ ಸಾಮರ್ಥ್ಯವನ್ನು ಹೆಚ್ಚಿಸಲು ಉಳ್ಳವರ ಮೇಲಿನ ತೆರಿಗೆ ಪ್ರಮಾಣವನ್ನು ಹೆಚ್ಚಿಸಿ, ಬಡ, ಮಧ್ಯಮ ವರ್ಗದ ಮೇಲಿನ ತೆರಿಗೆ ಪ್ರಮಾಣವನ್ನು ಕಡಿತಗೊಳಿಸಿದರೆ ಆರ್ಥಿಕ ಚಲನಶೀಲತೆ ಆರೋಗ್ಯಕರವಾಗಿರುತ್ತದೆ ಎಂದು. ಆದರೆ, ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಇದರ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿರುವುದರಿಂದಲೇ ಭಾರತವು ಆರ್ಥಿಕ ಬಿಕ್ಕಟ್ಟಿನತ್ತ ಹೆಜ್ಜೆ ಹಾಕುತ್ತಿದೆ. ಭಾರತವು ಆರ್ಥಿಕ ಬಿಕ್ಕಟ್ಟಿನಿಂದ ಪಾರಾಗಬೇಕಾದರೆ, ಗ್ಯಾರಂಟಿ ಯೋಜನೆಯಂತಹ ಜನ ಕಲ್ಯಾಣ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನ ಈ ಹೊತ್ತಿನ ತುರ್ತು ಎಂಬುದೇ ಈ ಸರಕಾರಿ ದತ್ತಾಂಶಗಳು ಹೇಳುತ್ತಿರುವ ವಾಸ್ತವವಾಗಿದೆ.